ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಆರ್ಚರಿ ವಿಶ್ವಕಪ್‌ ತಂಡಗಳನ್ನು ಸನ್ಮಾನಿಸಿದ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌; 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳನ್ನು ಗೆಲ್ಲಲು ಕ್ರೀಡಾಪಟುಗಳಿಗೆ ಮನವಿ ಮಾಡಿದರು


Posted On: 24 MAY 2022 9:29PM by PIB Bengaluru

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಕೊರಿಯಾದಲ್ಲಿ ನಡೆದ ವಿಶ್ವಕಪ್‌ ಮತ್ತು ಟರ್ಕಿಯಲ್ಲಿ ನಡೆದ ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನಿಂದ ಹಿಂದಿರುಗಿದ ಭಾರತದ ಬಿಲ್ಲುಗಾರಿಕೆ (ಆರ್ಚರಿ) ಮತ್ತು ಬಾಕ್ಸಿಂಗ್‌ ತಂಡಗಳನ್ನು ಮಂಗಳವಾರ ಸನ್ಮಾನಿಸಿದ್ದರಿಂದ ಇದು ಭಾರತೀಯ ಕ್ರೀಡೆಗೆ ಡಬಲ್‌ ಸಂಭ್ರಮಾಚರಣೆ ಆಗಿತ್ತು.

ಭಾರತದ ಗಣ್ಯ ಬಾಕ್ಸರ್‌ಗಳಿಗೆ ತರಬೇತಿ ನೀಡುವ ಸ್ಥಳವಾದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಭಾರತ ಕ್ರೀಡಾ ಪ್ರಾಧಿಕಾರ -ಸಾಯ್‌ ನ ರಾಷ್ಟ್ರೀಯ ಉತ್ಕೃಷ್ಠತಾ ಕೇಂದ್ರದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ಕೆಲವು ದಿನಗಳಲ್ಲಿ ಭಾರತವು ಆರ್ಚರಿ ವಿಶ್ವಕಪ್‌ನಲ್ಲಿ 5 ಮತ್ತು ಮಹಿಳಾ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 3 ಪದಕಗಳನ್ನು ಗೆದ್ದಿದೆ. ಪುರುಷರ ಕಾಂಪೌಂಡ್‌ ಬಿಲ್ಲುಗಾರಿಕೆಯಲ್ಲಿ 16 ಭಾರತೀಯ ಬಿಲ್ಲುಗಾರರ ತಂಡ ಒಂದು ಚಿನ್ನ, 1 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನು ಗೆದ್ದರೆ, ಮಹಿಳಾ ಬಾಕ್ಸರ್‌ಗಳು ವಿಶ್ವ ಚಾಂಪಿಯನಿಷಿಪ್‌ನಲ್ಲಿ ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತನ್ನ ತೂಕ ವಿಭಾಗದಲ್ಲಿ ಚಿನ್ನ ಗೆದ್ದ ಹಾಗೂ ಈ ಸಾಧನೆ ಮಾಡಿದ ಐದನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾಕ್ಸರ್‌ ನಿಖತ್‌ ಜರೀನ್‌, ‘‘ ನಾನು ಇಂದು ಇಲ್ಲಿ ವಿಶ್ವ ಚಾಂಪಿಯನ್‌ ಆಗಿ ನಿಂತಿದ್ದೇನೆ ಮತ್ತು ನಾನು ಇಲ್ಲಿ ಒಲಿಂಪಿಕ್‌ ಪದಕ ವಿಜೇತೆಯಾಗಿ ಮತ್ತೆ ನಿಲ್ಲುತ್ತೇನೆ,’’ ಎಂದು ಉತ್ಸಾಹದಿಂದ ನುಡಿದರು. ಪದಕ ವಿಜೇತ ಬಾಕ್ಸರ್‌ಗಳಾದ ಮನೀಷಾ ಮೌನ್‌ ಮತ್ತು ಪವೀರ್‍ನ್‌ ಕಂಚಿನ ಪದಕಗಳನ್ನು ಗೆದ್ದರು.

ನಿಖತ್‌ ಅವರ ಉತ್ಸಾಹವನ್ನು ಶ್ಲಾಘಿಸಿದ ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌, ‘‘ನಮ್ಮ ಬೇಟಿಗಳು (ಹೆಣ್ಣುಮಕ್ಕಳು) ನಮಗೆ ಹೆಮ್ಮೆ ತಂದಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಢಾವೋ ಬಗ್ಗೆ ಮಾತನಾಡುತ್ತಿದ್ದ ಕಾಲವೊಂದಿತ್ತು ಮತ್ತು ಈಗ ಅದು ಫಲ ನೀಡುತ್ತಿದೆ. ನಿಖತ್‌ ಅವರು ಇಷ್ಟಕ್ಕೆ ತೃಪ್ತರಾಗುವುದನ್ನು ಬಯಸುವುದಿಲ್ಲ ಎಂದು ಹೇಳಿದರು; ಅವರು ಹೆಚ್ಚು ಪದಕಗಳನ್ನು ಗೆಲ್ಲಲು ಬಯಸುತ್ತಾರೆ. ನಿಮ್ಮೆಲ್ಲರಿಂದ ಈ ಉತ್ಸಾಹ ಮತ್ತು ಸಮರ್ಪಣೆ ನಮಗೆ ಬೇಕು. ನಾವು ಮುಂದುವರಿಯುತ್ತಲೇ ಇರಬೇಕು. ನೀವು ತಳಮಟ್ಟದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದೀರಿ. ಟಾಫ್ಸ್‌ ಯೋಜನೆಯು ಪ್ರತಿಯೊಬ್ಬರೂ ಸೌಲಭ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿದೆ. ನಾವು ಇಂದು ಏನನ್ನು ಸಾಧಿಸಿದ್ದೇವೆ ಎಂಬುದನ್ನು ನಾವು ಆಚರಿಸಬೇಕು ಆದರೆ ಯಾವಾಗಲೂ ಮುಂದಿನ ದೊಡ್ಡ ಚಾಂಪಿಯನ್‌ಷಿಪ್‌ ಗಳ ಗುರಿಯನ್ನು ಹೊಂದಿರಬೇಕು. 2024 ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳನ್ನು ತರೋಣ,’’ ಎಂದು ಆಶಯ ವ್ಯಕ್ತಪಡಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಪದಕ ವಿಜೇತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಮನವಿ ಮಾಡಿದ ಶ್ರೀ ಠಾಕೂರ್‌, ‘‘ ಅವರು ಈ ಪದಕಗಳನ್ನು ಗೆಲ್ಲಲು ತುಂಬಾ ಶ್ರಮಿಸಿದ್ದಾರೆ, ಈ ಗೆಲುವು ದೇಶಕ್ಕೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸಲು ನಾವು ಅವರಿಗೆ ಚಪ್ಪಾಳೆ ತಟ್ಟಬಹುದು ಎಂದು ನನಗೆ ಖಾತ್ರಿಯಿದೆ. ನಮ್ಮ ಕ್ರೀಡಾಪಟುಗಳ ಬಗ್ಗೆ ನಮ್ಮ ಮೆಚ್ಚುಗೆಯನ್ನು ತೋರಿಸುವುದನ್ನು ನಾವು ರೂಢಿಸಿಕೊಳ್ಳಬೇಕು, ಏಕೆಂದರೆ ಅವರು ದೇಶಕ್ಕಾಗಿ ಅದನ್ನು ಮಾಡುತ್ತಿದ್ದಾರೆ,’’ ಎಂದು  ಹೇಳಿದರು. ಕ್ರೀಡಾಪಟುಗಳ ಕಠಿಣ ಪರಿಶ್ರಮವನ್ನು ಶ್ಲಾಘಿಸುವ ವಿಶಿಷ್ಟ ಹಾವಭಾವದಲ್ಲಿ ದೀರ್ಘಕಾಲದವರೆಗೆ ಚಪ್ಪಾಳೆ ತಟ್ಟಿದರು.

ಪುರುಷರ ಕಾಂಪೌಂಡ್‌ ಬಿಲ್ಲುಗಾರಿಕೆ ತಂಡ ಮತ್ತು ವೈಯಕ್ತಿಕ ಪದಕಗಳು, ಮಹಿಳಾ ಕಾಂಪೌಂಡ್‌ ತಂಡ, ಮಿಶ್ರ ಕಾಂಪೌಂಡ್‌ ತಂಡ ಮತ್ತು ಮಹಿಳೆಯರ ರಿಕರ್ವ್‌ ತಂಡಗಳು ವಿಜೇತ ಬಿಲ್ಲುಗಾರಿಕೆ ವಿಭಾಗಗಳಲ್ಲಿ ಸೇರಿವೆ. ಅಭಿಷೇಕ್‌ ವರ್ಮಾ, ರಜತ್‌ ಚೌಹಾಣ್‌ ಮತ್ತು ಅಮನ್‌ ಸಾನಿ ಅವರ ಪುರುಷರ ಕಾಂಪೌಂಡ್‌ ತಂಡವು ಚಿನ್ನ ಗೆದ್ದರೆ, ಪುರುಷರ ಕಾಂಪೌಂಡ್‌ ಬಿಲ್ಲುಗಾರಿಕೆಯಲ್ಲಿ ಮೋಹನ್‌ ಭಾರದ್ವಾಜ್‌ ಅವರು ವೈಯಕ್ತಿಕ ಬೆಳ್ಳಿ ಪದಕವನ್ನು ಗೆದ್ದರು. ಮುಸ್ಕಾನ್‌ ಕಿರಾರ್‌, ಅವ್ನೀತ್‌ ಕೌರ್‌, ಮಹಿಳಾ ಕಾಂಪೌಂಡ್‌ ತಂಡದ ಪ್ರಿಯಾ ಗುರ್ಜರ್‌, ಅಭಿಷೇಕ್‌ ವರ್ಮಾ, ಮಿಶ್ರ ಕಾಂಪೌಂಡ್‌ ತಂಡದ ಎ.ವಿನೀತ್‌ ಕೌರ್‌ ಮತ್ತು ಮಹಿಳಾ ರಿಕರ್ವ್‌ ತಂಡದ ರಿಧಿ, ಕೊಮೋಲಿಕಾ ಬಾರಿ ಮತ್ತು ಅಂಕಿತಾ ಭಕತ್‌ ಮೂರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಪಂದ್ಯಾವಳಿಯ ತಮ್ಮ ಅನುಭವವನ್ನು ಹಂಚಿಕೊಂಡ ಅಭಿಷೇಕ್‌ ವರ್ಮಾ, ‘‘ನಾವು ಏಷ್ಯನ್‌ ಗೇಮ್ಸ್‌ಗೆ ತಯಾರಿ ನಡೆಸುತ್ತಿದ್ದೆವು, ಆದ್ದರಿಂದ ತಂಡವು ಈಗ ಉತ್ತಮ ಲಯದಲ್ಲಿದೆ. ನಿಖರತೆ ಮತ್ತು ತಾಂತ್ರಿಕ ಅಂಶಗಳ ವಿಷಯದಲ್ಲಿ ಭಾರತದಲ್ಲಿಗಮನಾರ್ಹ ಸುಧಾರಣೆ ಕಂಡುಬಂದಿದೆ. ಮೂಲಸೌಕರ್ಯ, ತರಬೇತಿ, ಉತ್ತೇಜನ, ಒಕ್ಕೂಟ ಮತ್ತು ಸರ್ಕಾರದಿಂದ ಶಿಬಿರಗಳ ವಿಷಯದಲ್ಲಿ ಸರ್ವತೋಮುಖ ಬೆಂಬಲದೊಂದಿಗೆ, ನಾವು ಬಹಳಷ್ಟು ಸಾಧಿಸಲು ಸಾಧ್ಯವಾಗುತ್ತಿದೆ. ಈ ಆವೇಗವು ಮುಂದುವರಿಯುತ್ತದೆ ಮತ್ತು ಜೂನ್‌ನಲ್ಲಿ, ನಾವು ವಿಶ್ವಕಪ್‌ ನ ಮುಂದಿನ ಹಂತಕ್ಕೆ ಹೋಗುತ್ತಿದ್ದಂತೆ. ನಾವು ಹೆಚ್ಚಿನ ಪದಕಗಳೊಂದಿಗೆ ಹಿಂತಿರುಗುತ್ತೇವೆ,’’ ಎಂದು ಹೇಳಿದರು.

ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಬಿಎಫ್‌ಐ ಅಧ್ಯಕ್ಷ  ಅಜಯ್‌ ಸಿಂಗ್‌, ಪ್ರಧಾನ ಕಾರ್ಯದರ್ಶಿ ಹೇಮಂತ ಕಲಿತಾ, ಬಿಲ್ಲುಗಾರಿಕೆ ಕಾರ್ಯಕ್ರಮದಲ್ಲಿಭಾರತೀಯ ಆರ್ಚರಿ ಸಂಸ್ಥೆಯ ಕೋರ್‌ ಕಮಿಟಿ ಸದಸ್ಯ ವೀರೇಂದ್ರ ಸಚ್ದೇವ ಭಾಗವಹಿಸಿದ್ದರು. ಸಾಯ್‌ ನ ಮಹಾನಿರ್ದೇಶಕ ಸಂದೀಪ್‌ ಪ್ರಧಾನ್‌, ಯುವ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಲ್‌.ಎಸ್‌.ಸಿಂಗ್‌ ಮತ್ತು ಟಾಫ್ಸ್‌ನ ಸಿಇಒ ಕೊಮೊರ್ಡೋ ಗರ್ಗ್‌ ಉಪಸ್ಥಿತರಿದ್ದರು.

***



(Release ID: 1828201) Visitor Counter : 154