ಪರಿಸರ ಮತ್ತು ಅರಣ್ಯ ಸಚಿವಾಲಯ

ಬ್ರಿಕ್ಸ್‌ನ 8ನೇ ಪರಿಸರ ಸಚಿವರ ಸಭೆಯನ್ನುದ್ದೇಶಿಸಿ ಕೇಂದ್ರ ಸಚಿವ ಭೂಪೇಂದರ್‌ ಯಾದವ್‌ ಭಾಷಣ


ಬ್ರಿಕ್ಸ್‌ ನೇತೃತ್ವದ ಉಪಕ್ರಮಗಳು ದೇಶ ಹಿತಾಸಕ್ತಿಗನುಗುಣವಾಗಿ ಹಾಗು ಸ್ವಯಂಪ್ರೇರಿತವಾಗಿರಬೇಕು: ಶ್ರೀ ಭೂಪೇಂದರ್‌ ಯಾದವ್‌

ಬ್ರಿಕ್ಸ್‌ ರಾಷ್ಟ್ರಗಳು ಸೌರಶಕ್ತಿ, ಕೈಗಾರಿಕೆ ಪರಿವರ್ತನೆ, ಮೂಲಸೌಕರ್ಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದಲ್ಲಿ ಸಹಕಾರವನ್ನು ಅನ್ವೇಷಿಸಬಹುದು: ಶ್ರೀ ಭೂಪೇಂದರ್‌ ಯಾದವ್‌

Posted On: 20 MAY 2022 8:00PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ ಭೂಪೇಂದರ್‌ ಯಾದವ್‌ ಅವರು ಇಂದು ನಡೆದ 8ನೇ ಬ್ರಿಕ್ಸ್‌ ಪರಿಸರ ಸಚಿವರ ಸಭೆಯಲ್ಲಿಭಾಗವಹಿಸಿದ್ದರು. ಪೀಪಲ್ಸ್‌ ರಿಪಬ್ಲಿಕ್‌ ಆಫ್‌ ಚೈನಾದ ಅಧ್ಯಕ್ಷತೆಯಲ್ಲಿ ಈ ಸಭೆ ವರ್ಚುವಲ್‌ ಆಗಿ ನಡೆಯಿತು. ‘‘ಉತ್ತಮ ಗುಣಮಟ್ಟದ ಬ್ರಿಕ್ಸ್‌ ಸಹಭಾಗಿತ್ವವನ್ನು ಪ್ರೋತ್ಸಾಹಿಸಿ, ಜಾಗತಿಕ ಅಭಿವೃದ್ಧಿಗಾಗಿ ಹೊಸ ಶಕೆಗೆ ನಾಂದಿ ಹಾಡಿ,’’ ಎಂಬುದು ಈ ಸಭೆಯ ಧ್ಯೇಯವಾಕ್ಯವಾಗಿತ್ತು. ಸಭೆಯಲ್ಲಿ ಬ್ರೆಜಿಲ್‌, ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ಸಚಿವರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಜಾಗತಿಕ ಪರಿಸರ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸುವಾಗ ಬ್ರಿಕ್ಸ್‌ ರಾಷ್ಟ್ರಗಳ ಮಹತ್ವ ಮತ್ತು ಪ್ರಮುಖ ಪಾತ್ರದ ಬಗ್ಗೆ ಪ್ರಸ್ತಾಪಿಸಿದರು. ಶ್ರೀ ಯಾದವ್‌ ಅವರು ಇಂಗಾಲದ ಆಯವ್ಯಯವನ್ನು ಬಳಸುವಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಚಾರಿತ್ರಿಕ ಜವಾಬ್ದಾರಿ ಕುರಿತು ಬೆಳಕು ಚೆಲ್ಲಿದರು; ಹವಾಮಾನ ಕ್ರಮ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಎಲ್ಲಾ ಹಂತಗಳಲ್ಲಿ ಸಮಾನತೆ; ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಜೀವನ ಶೈಲಿ ಮತ್ತು ಸುಸ್ಥಿರವಲ್ಲದ ಬಳಕೆಯನ್ನು ನಿಗ್ರಹಿಸುವುದು; ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಸಂಬಂಧಿತ ಸಾಮರ್ಥ್ಯ‌ಗಳು (ಸಿಬಿಡಿಆರ್‌-ಆರ್‌ಸಿ); ರಾಷ್ಟ್ರೀಯ ಸನ್ನಿವೇಶಗಳು ಮತ್ತು ಆದ್ಯತೆಗಳು; ಹವಾಮಾನ ನ್ಯಾಯ; ಮತ್ತು ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನದ ವರ್ಗಾವಣೆಗೆ ಸಂಬಂಧಿಸಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬದ್ಧತೆಗಳನ್ನು ಪೂರೈಸುವುದು.
ಭಾರತದ ಹವಾಮಾನ ಕ್ರಮಗಳ ಬಗ್ಗೆ ಬೆಳಕು ಚೆಲ್ಲಿದ ಕೇಂದ್ರ ಪರಿಸರ ಸಚಿವರು, ಬ್ರಿಕ್ಸ್‌ ನೇತೃತ್ವದ ಉಪಕ್ರಮಗಳು ದೇಶದ ಹಿತಾಸಕ್ತಿಗನುಗುಣವಾಗಿ ಮತ್ತು ಸ್ವಯಂಪ್ರೇರಿತವಾಗಿರಬೇಕು ಎಂದು ಹೇಳಿದರು. ಅಂತಾರಾಷ್ಟ್ರೀಯ ಸಹಕಾರ ಮತ್ತು ಬಹುಪಕ್ಷೀಯತೆಯ ಅಗತ್ಯವನ್ನು ಪ್ರತಿಪಾದಿಸಿದರು.
ಹಸಿರು ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿಗೆ ಅನುಕೂಲವಾಗುವಂತೆ ಕೈಜೋಡಿಸಿ ಎಂಬ ಚರ್ಚೆಯ ವೇಳೆ ಮಾತನಾಡಿದ ಸಚಿವರು, ಅಸ್ತಿತ್ವದಲ್ಲಿರುವ ಬ್ರಿಕ್ಸ್‌ ಉಪಕ್ರಮಗಳು ಸುಸ್ಥಿರ ಮತ್ತು ಕಡಿಮೆ ಇಂಗಾಲದ ಅಭಿವೃದ್ಧಿಯನ್ನು ಉತ್ತೇಜಿಸಲು ಸಹ ಕೊಡುಗೆ ನೀಡಬಹುದು ಎಂದು ಹೇಳಿದರು. ಸೌರಶಕ್ತಿ, ಕೈಗಾರಿಕಾ ಪರಿವರ್ತನೆ, ಮೂಲಸೌಕರ್ಯ ಮತ್ತು ಹವಾಮಾನ ವೈಪರೀತ್ಯಕ್ಕೆ ಕಾರಣವಾಗದಂತಹ ಕ್ರಮಗಳ ಅನುಷ್ಠಾನ ಇವು ಬ್ರಿಕ್ಸ್‌ ರಾಷ್ಟ್ರಗಳು ಸಹಕಾರವನ್ನು ಅನ್ವೇಷಿಸುವ ಕ್ಷೇತ್ರಗಳಾಗಿವೆ.


 

ಬ್ರಿಕ್ಸ್‌ ರಾಷ್ಟ್ರಗಳ ನಡುವೆ ತೀವ್ರ ಚರ್ಚೆಯ ನಂತರ 8ನೇ ಬ್ರಿಕ್ಸ್‌ ಪರಿಸರ ಸಚಿವರ ಸಭೆಯ ಜಂಟಿ ಹೇಳಿಕೆಯನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

***



(Release ID: 1827135) Visitor Counter : 151


Read this release in: English , Urdu , Hindi , Odia