ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವ ಶ್ರೀ ಭಗವಂತ್ ಖೂಬಾ ಅವರು "ಉತ್ಕೃಷ್ಟತಾ ಕೇಂದ್ರದೊಂದಿಗೆ ಉದ್ಯಮ ಸಂಪರ್ಕ ಸಮಾವೇಶ"ವನ್ನು ಉದ್ಘಾಟಿಸಿದರು


ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳು ಒಟ್ಟಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಒಟ್ಟಿಗೆ ಬೆಳೆಯುವುದು ನಿರ್ಣಾಯಕವಾಗಿದೆ

ಜ್ಞಾನ ಸೃಷ್ಟಿ ಮತ್ತು ಅದರ ವಾಣಿಜ್ಯೀಕರಣವು ನದಿಯ ಎರಡು ದಡಗಳಿದ್ದಂತೆ, ನಿಯಮಿತ ಸಂವಹನಗಳ ಮೂಲಕ ಅವುಗಳ ನಡುವೆ ಸೇತುಬಂಧ ಏರ್ಪಡಿಸಬೇಕು: ಶ್ರೀ ಭಗವಂತ ಖೂಬಾ

Posted On: 18 MAY 2022 11:50AM by PIB Bengaluru

ಭಾರತ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ; ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಹಾಯಕ ಸಚಿವರಾದ ಶ್ರೀ ಭಗವಂತ್ ಖೂಬಾ ಅವರು ನವದೆಹಲಿಯ ʻಇಂಡಿಯಾ ಹ್ಯಾಬಿಟೇಟ್ ಸೆಂಟರ್ʼನಲ್ಲಿರುವ ʻಹ್ಯಾಬಿಟೇಟ್ ವರ್ಲ್ಡ್ʼನಲ್ಲಿ “ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆ (ಡಿಸಿಪಿಸಿ) ಅಡಿಯಲ್ಲಿ ಉತ್ಕೃಷ್ಟತಾ ಕೇಂದ್ರದೊಂದಿಗೆ ಉದ್ಯಮ ಸಂಪರ್ಕ ಸಮಾವೇಶ”ವನ್ನು ಇಂದು ಉದ್ಘಾಟಿಸಿದರು. ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ (ಡಿಸಿಪಿಸಿ) ಇಲಾಖೆ ಅಡಿಯಲ್ಲಿ ಬರುವ ʻಸೆಂಟ್ರಲ್ ಇನ್ಸ್‌ಟಿಟ್ಯೂಟ್‌ ಆಫ್ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿʼ (ಸಿಪೆಟ್‌-CIPET) ಈ ಕಾರ್ಯಕ್ರಮವನ್ನು ಆಯೋಜಿಸಿದೆ.

https://static.pib.gov.in/WriteReadData/userfiles/image/image0025M28.jpg

ಗೌರವಾನ್ವಿತ ಪ್ರಧಾನಮಂತ್ರಿಯವರ ʻಆತ್ಮ ನಿರ್ಭರ ಭಾರತʼದ ಆಶಯವನ್ನು ಪೂರೈಸಲು ದೇಶೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಉತ್ಕೃಷ್ಟತಾ ಕೇಂದ್ರಗಳು (ಸಿಒಇ) ನಡೆಸಿದ ಪ್ರಯತ್ನಗಳನ್ನು ಕೇಂದ್ರ ಸಚಿವರು ಶ್ಲಾಘಿಸಿದರು.   ಆವಿಷ್ಕಾರಗಳನ್ನು ಪ್ರದರ್ಶಿಸಲು, ಸೂಕ್ತ ಕೈಗಾರಿಕಾ ಪಾಲುದಾರರನ್ನು ಗುರುತಿಸಲು ಮತ್ತು ಉದ್ಯಮದ ಭವಿಷ್ಯದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಕಾರ್ಯಕ್ರಮವನ್ನು ಆಯೋಜಿಸುವಲ್ಲಿ  ʻಡಿಸಿಪಿಸಿʼ ಮತ್ತು ʻಸಿಪೆಟ್‌ʼ(CIPET)  ನಡೆಸಿದ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ಇಂಧನ ದಕ್ಷ ಸಾಧನಗಳು, ಪರಿಸರ ಸ್ನೇಹಿ ಪಾಲಿಮರಿಕ್ ಉತ್ಪನ್ನಗಳು, ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ, ಸ್ಮಾರ್ಟ್ ಪಾಲಿಮರ್‌ಗಳು, ಆರೋಗ್ಯ ರಕ್ಷಣೆಯಲ್ಲಿ ಪಾಲಿಮರ್‌ಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳು(ಸಿಒಇ) ಕೆಲಸ ಮಾಡುತ್ತಿವೆ. ಆ ಮೂಲಕ ತಂತ್ರಜ್ಞಾನ ಸ್ವದೇಶಿಕರಣ ಸುಗಮಗೊಳಿಸುತ್ತಿವೆ ಮತ್ತು ನವೋದ್ಯಮಗಳಿಗೆ ಉತ್ತೇಜನ ನೀಡುತ್ತಿವೆ ಎಂದು ಹೇಳಿದರು.  ಮುಂದಿನ ದಿನಗಳಲ್ಲಿ ಈ ಯೋಜನೆಗಳ ಸಂಶೋಧನಾ ಫಲಿತಾಂಶಗಳು ಭಾರತವನ್ನು ದೇಶೀಯ ತಂತ್ರಜ್ಞಾನಗಳ ಪ್ರಮುಖ ಕೇಂದ್ರವನ್ನಾಗಿಸುತ್ತವೆ. ಜೈವಿಕ ವೈದ್ಯಕೀಯ ಸಾಧನಗಳು ಮತ್ತು ಆಟಿಕೆಗಳಂತಹ ಯೋಜನೆಗಳು ಭಾರತದ ಆಮದು ಅವಲಂಬನೆಯನ್ನು ಕಡಿಮೆ ಮಾಡಿ, ಆ ಮೂಲಕ ನಮಗೆ ವಿದೇಶಿ ವಿನಿಮಯವನ್ನು ಉಳಿಸುತ್ತವೆ ಎಂದು ಅವರು ಹೇಳಿದರು.

https://static.pib.gov.in/WriteReadData/userfiles/image/image00365FX.jpg

ಮಧ್ಯಸ್ಥಗಾರರ ನಡುವಿನ ಸಹಕಾರದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ಭಗವಂತ್ ಖೂಬಾ ಅವರು, "ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳು ಒಟ್ಟಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ಒಟ್ಟಿಗೆ ಬೆಳೆಯುವುದು ನಿರ್ಣಾಯಕವಾಗಿದೆ. ಜ್ಞಾನ ಸೃಷ್ಟಿ ಮತ್ತು ಅದರ ವಾಣಿಜ್ಯೀಕರಣವು ಒಂದೇ ನದಿಯ ಎರಡು ದಡಗಳಿದ್ದಂತೆ, ಎಲ್ಲಾ ಮಧ್ಯಸ್ಥಗಾರರ ನಡುವೆ ನಿಯಮಿತ ಸಂವಹನಗಳ ಮೂಲಕ ಅವೆರಡೂ ದಡಗಳ ನಡುವೆ ಸೇತುಬಂಧ ಏರ್ಪಡಿಸಬೇಕು," ಎಂದರು. ಜಪಾನಿನ ʻಕೈಜೆನ್ʼ ಪರಿಕಲ್ಪನೆಯನ್ನು ಅನ್ವಯಿಸುವಂತೆ ಮತ್ತು ದೇಶದಲ್ಲಿ ಸಂಶೋಧನೆ ಮತ್ತು ನಾವಿನ್ಯತೆಯ ಸಮಗ್ರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಸೈಲೋಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಅವರು ಎಲ್ಲಾ ಮಧ್ಯಸ್ಥಗಾರರನ್ನು ಒತ್ತಾಯಿಸಿದರು.

ಸಂಶೋಧನೆ ಮತ್ತು ನಾವಿನ್ಯತೆ ಪ್ರಕ್ರಿಯೆಯನ್ನು ಉತ್ತೇಜಿಸಲು ಸರಕಾರವು ʻಸಿಪೆಟ್ʼ ಮತ್ತು ದೇಶಾದ್ಯಂತದ ಇತರ ಶೈಕ್ಷಣಿಕ ಸಂಸ್ಥೆಗಳಲ್ಲಿ ʻಉತ್ಕೃಷ್ಟತಾ ಕೇಂದ್ರʼವನ್ನು ಸ್ಥಾಪಿಸಿದೆ ಎಂದು ಅವರು ಮಾಹಿತಿ ನೀಡಿದರು. ಸಂಕೀರ್ಣ ಕೈಗಾರಿಕಾ ಸಮಸ್ಯೆಗಳಿಗೆ ಸುಸ್ಥಿರ ಮತ್ತು ಪರ್ಯಾಯ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಕೋನದೊಂದಿಗೆ ಸಂಶೋಧನೆ ನಡೆಸುವಂತೆ ಅವರು ಕರೆ ನೀಡಿದರು. ಇದೇ ವೇಳೆ, ತಂತ್ರಜ್ಞಾನ ಮತ್ತು ನೀತಿ ಸಂಶೋಧನೆ ವಿಚಾರದಲ್ಲಿ ಪರಸ್ಪರ ಸಹಯೋಗದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಪ್ರಯತ್ನಗಳ ಮೂಲಕ ಅಂತಹ ಪರಿಹಾರಗಳನ್ನು ಬೆಂಬಲಿಸುವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಜ್ಞಾನಿಗಳನ್ನು ಅವರು ವಿನಂತಿಸಿದರು. ಈ ಸಂಶೋಧನೆಯ ವಾಣಿಜ್ಯೀಕರಣಕ್ಕಾಗಿ ಉದ್ಯಮ ಉತ್ತೇಜನದ ಮುಂದಿನ ಹಂತವನ್ನು ಸಕ್ರಿಯಗೊಳಿಸಲು ಇದು ಸಕಾಲ. ಈ ನಿಟ್ಟಿನಲ್ಲಿ, ಉದ್ಯಮದ ಅಗತ್ಯಗಳನ್ನು ತಿಳಿದುಕೊಳ್ಳಲು ಇಂತಹ ಸಮಾವೇಶಗಳು ಮತ್ತು ಸಂವಾದಗಳು ಉಪಯುಕ್ತವಾಗುತ್ತವೆ ಎಂದರು.

https://static.pib.gov.in/WriteReadData/userfiles/image/image004NAI9.jpg

ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಆತ್ಮನಿರ್ಭರ ಭಾರತದ ಕರೆಯನ್ನು ಪುನರುಚ್ಚರಿಸಿದ ಸಚಿವರು,  "ಭಾರತದಲ್ಲಿ ನುರಿತ ಮಾನವಶಕ್ತಿಯ ಕೊರತೆಯಿಲ್ಲ. ಕೈಗಾರಿಕೆಗಳನ್ನು ಆಕರ್ಷಿಸಲು ಮತ್ತು ನಮ್ಮ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಲು ಸರಕಾರವು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತ ಸರಕಾರವು ಕೈಗಾರಿಕೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಸಂವೇದನಾಶೀಲವಾಗಿದ್ದು ಪ್ರೋತ್ಸಾಹ, ಧನಸಹಾಯ ಹಾಗೂ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳ ಸ್ಥಾಪನೆಯ ಮೂಲಕ ಅವುಗಳನ್ನು ಬೆಂಬಲಿಸಲು ಬಯಸುತ್ತದೆ. ಇದು ನಮ್ಮ ದೇಶವನ್ನು ಆರ್ಥಿಕ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ," ಎಂದು ಹೇಳಿದರು.

(ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಆರತಿ ಅಹುಜಾ ಅವರು ಮಾತನಾಡಿ, ಸಚಿವಾಲಯವು ಕೈಗೊಂಡ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯು ʻಉತ್ಕೃಷ್ಟತಾ ಕೇಂದ್ರʼಗಳನ್ನು (ಸಿಒಇ) ಸ್ಥಾಪಿಸುವ ಯೋಜನೆಯನ್ನು ಜಾರಿಗೆ ತರುತ್ತಿದೆ. 2011 ರಿಂದ ವಿವಿಧ ಪ್ರತಿಷ್ಠಿತ ಸರಕಾರಿ ಸಂಸ್ಥೆಗಳಲ್ಲಿ ಈಗಾಗಲೇ 13 ಇಂತಹ ಕೇಂದ್ರಗಳನ್ನು ಸ್ಥಾಪಿಸಿದೆ. ಸರಕಾರವು ಧನಸಹಾಯ ನೀಡುವ ಉತ್ಕೃಷ್ಟತಾ ಕೇಂದ್ರಗಳು ಮಾತ್ರವಲ್ಲದೆ, ಉದ್ಯಮದ ಅಗತ್ಯಕ್ಕಾಗಿ ದೇಶದ ಇತರ ಪ್ರಯೋಗಾಲಯಗಳು ಮತ್ತು ಸಂಸ್ಥೆಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಹ ಸರಕಾರ ಕಾತುರವಾಗಿದೆ ಎಂದರು.

ಶ್ರೀ ಭಗವಂತ್ ಖೂಬಾ  ಅವರು ಇಂದು ಕಾರ್ಯಕ್ರಮದಲ್ಲಿ ʻಉತ್ಕೃಷ್ಟತಾ ಕೇಂದ್ರ(ಸಿಒಇ) ಮತ್ತು ಉದ್ಯಮ ಸಂಪರ್ಕ ಪೋರ್ಟಲ್ ಜೊತೆಗೆ  ʻಸಿಪೆಟ್ʼನ ಇ-ನ್ಯೂಸ್ ಲೆಟರ್ ಅನ್ನು ಸಹ ಉದ್ಘಾಟಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ, ಈ ಕೆಳಗಿನ ವಿಷಯಗಳ ಮೇಲೆ ತಾಂತ್ರಿಕ ಅಧಿವೇಶನವನ್ನು ನಡೆಸಲಾಯಿತು: ಬಯೋ-ಎಂಜಿನಿಯರ್ಡ್ ಪಾಲಿಮರಿಕ್ ಸಿಸ್ಟಮ್ಸ್, ಪಾಲಿಮರ್ಸ್ ಆಧಾರಿತ ಬಯೋ-ಮೆಡಿಕಲ್ ಸಾಧನಗಳು, ಪಾಲಿಮರ್-ಆಧಾರಿತ ಆಟಿಕೆಗಳು ಮತ್ತು ಸುಧಾರಿತ ಪಾಲಿಮರ್ಸ್ ಮತ್ತು ಕಾಂಪೋಸಿಟ್ಸ್. ವಿವಿಧ ʻಸಿಒಇʼಗಳ ವಿಜ್ಞಾನಿಗಳು ತಮ್ಮ ಆವಿಷ್ಕಾರಗಳ ಫಲಿತಾಂಶದ ಬಗ್ಗೆ ಕೈಗಾರಿಕೋದ್ಯಮಿಗಳಿಗೆ ಪ್ರಸ್ತುತಿ ನೀಡಿದರು. ʻಸಿಪೆಟ್ʼನ ಮಹಾನಿರ್ದೇಶಕರಾದ ಪ್ರೊ. (ಡಾ.) ಶಿಶಿರ್ ಸಿನ್ಹಾ ವಂದನಾರ್ಪಣೆ ಮಾಡಿದರು.

ಪ್ರಾಧ್ಯಾಪಕರು, ವಿಜ್ಞಾನಿಗಳು, ಸಂಶೋಧನಾ ವಿದ್ವಾಂಸರು, ʻಸಿಪೆಟ್ʼ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಕೈಗಾರಿಕೆಗಳು ಮತ್ತು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭೌತಿಕವಾಗಿ ಮತ್ತು ವರ್ಚ್ಯುವಲ್‌ ಆಗಿ ಭಾಗವಹಿಸಿದರು.

***



(Release ID: 1826392) Visitor Counter : 314