ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನೇಪಾಳದಲ್ಲಿ 2566 ನೇ ಬುದ್ಧ ಜಯಂತಿ ಮತ್ತು ಲುಂಬಿನಿ ದಿನ 2022 ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಭಾಷಾಂತರ.

Posted On: 16 MAY 2022 9:45PM by PIB Bengaluru

ನಮೋ ಬುದ್ಧಾಯ!

ನೇಪಾಳದ ಪ್ರಧಾನ ಮಂತ್ರಿಯವರಾದ ಗೌರವಾನ್ವಿತ ಶ್ರೀ ಶೇರ್ ಬಹಾದುರ್ ದೇವೋಬಾ ಜೀ, ಗೌರವಾನ್ವಿತ ಶ್ರೀಮತಿ ಅರ್ಜೂ ದೆವೋಬಾ ಜೀ, ಸಭೆಯಲ್ಲಿರುವ ನೇಪಾಳ ಸರಕಾರದ ಸಚಿವರೇ, ಭೌದ್ಧ ಸನ್ಯಾಸಿಗಳೇ ಮತ್ತು ಬಹುಸಂಖ್ಯೆಯಲ್ಲಿ ಭಾಗವಹಿಸಿರುವ ಬೌದ್ಧ ಮತಾನುಯಾಯಿಗಳೇ, ವಿವಿಧ ದೇಶಗಳ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!.

ಬುದ್ಧ ಜಯಂತಿಯ ಈ ಪವಿತ್ರ ಸಂದರ್ಭದಲ್ಲಿ, ಲುಂಬಿನಿಯ ಈ ಪವಿತ್ರ ಭೂಮಿಯಿಂದ ಸಭೆಯಲ್ಲಿ ಹಾಜರಿರುವ ಎಲ್ಲರಿಗೂ, ಸರ್ವ ನೇಪಾಳಿ ಜನತೆಗೂ ಮತ್ತು ಜಗತ್ತಿನ ಎಲ್ಲ ಭಕ್ತರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು.

 

ಈ ಹಿಂದಿನಂತೆ ವೈಶಾಖ ಪೂರ್ಣಿಮೆಯ ದಿನದಂದು ನನಗೆ ಭಗವಾನ್ ಬುದ್ಧ ಅವರಿಗೆ ಸಂಬಂಧಪಟ್ಟ ಸ್ಥಳಗಳಿಗೆ ಭೇಟಿ ನೀಡಲು ಮತ್ತು ಅವರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳು ಲಭಿಸುತ್ತಿವೆ. ಮತ್ತು ಇಂದು ನನಗೆ ಭಾರತದ ಮಿತ್ರ ರಾಷ್ಟ್ರವಾದ ನೇಪಾಳದಲ್ಲಿರುವ ಭಗವಾನ್ ಬುದ್ಧನ ಜನ್ಮಸ್ಥಳ ಲುಂಬಿನಿಗೆ ಭೇಟಿ ನೀಡುವ ಸದವಕಾಶ ದೊರಕಿದೆ. ಕೆಲ ಸಮಯದ ಹಿಂದೆ ಮಾಯಾದೇವಿ ದೇವಾಲಯಕ್ಕೆ ಭೇಟಿ ನೀಡುವ ಅವಕಾಶ ದೊರಕಿರುವುದು ನನಗೆ ಮರೆಯಲಾಗದ ಸಂಗತಿ. ಭಗವಾನ್ ಬುದ್ಧ ಹುಟ್ಟಿದ ಸ್ಥಳದಲ್ಲಿರುವ ಶಕ್ತಿ, ಅಲ್ಲಿರುವ ಜಾಗೃತ ಪ್ರಜ್ಞೆ, ಮನಃಶಾಂತಿ ಒಂದು ವಿಭಿನ್ನ ಆನುಭವ. ಈ ಸ್ಥಳದಲ್ಲಿ 2014 ರಲ್ಲಿ ನನಗೆ ನೀಡಲಾದ ಮಹಬೋಧಿ ವೃಕ್ಷದ ಸಸಿ ಈಗ ಮರವಾಗಿ ಬೆಳೆಯುತ್ತಿರುವುದನ್ನು ನೋಡುವುದಕ್ಕೆ ನನಗೆ ಅಪಾರ ಸಂತೋಷವಾಗುತ್ತಿದೆ. .

 

 

ಸ್ನೇಹಿತರೇ,

ಪಶುಪತಿನಾಥಜೀ ಇರಲಿ, ಮುಕ್ತಿನಾಥ ಜೀ, ಜನಕಪುರಧಾಮ ಅಥವಾ ಲುಂಬಿನಿ ಇರಲಿ, ನಾನು ನೇಪಾಳಕ್ಕೆ ಬಂದಾಗಲೆಲ್ಲ, ನೇಪಾಳವು ಅದರ ಆಧ್ಯಾತ್ಮಿಕ ಆಶೀರ್ವಾದಗಳೊಂದಿಗೆ ನನ್ನನ್ನು ತೃಪ್ತಿಪಡಿಸುತ್ತದೆ. .

ಸ್ನೇಹಿತರೇ,

ಜನಕಪುರದಲ್ಲಿ ನಾನು ಹೇಳಿದ್ದೆ “ನಮ್ಮ ರಾಮ ಕೂಡಾ ನೇಪಾಳವಿಲ್ಲದಿದ್ದರೆ ಅಪೂರ್ಣ” ಎಂಬುದಾಗಿ. ಭಾರತದಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಆಗುತ್ತಿರುವಾಗ ನೇಪಾಳದ ಜನತೆ ಕೂಡಾ ಅಷ್ಟೇ ಸಂತೋಷ ಅನುಭವಿಸುತ್ತಾರೆ ಎಂಬುದು ನನಗೆ ತಿಳಿದಿದೆ.

 

ಸ್ನೇಹಿತರೇ,

ನೇಪಾಳ ಎಂದರೆ ಜಗತ್ತಿನ ಅತ್ಯಂತ ಎತ್ತರದ ಪರ್ವತ ಪ್ರದೇಶ-ಸಾಗರಮಾತಾ ಇರುವ ದೇಶ. ನೇಪಾಳ ಎಂದರೆ ಹಲವು ಪವಿತ್ರ ಯಾತ್ರಾ ಸ್ಥಳಗಳು, ದೇವಾಲಯಗಳು ಮತ್ತು ವಿಶ್ವದ ಬೌದ್ಧ ವಿಹಾರಗಳು ಇರುವ ದೇಶ!.ನೇಪಾಳಎಂದರೆ ಜಗತ್ತಿನ ಪ್ರಾಚೀನ ನಾಗರಿಕತೆಯ ಸಂಸ್ಕೃತಿಯನ್ನು ಕಾಪಿಟ್ಟಿರುವ ದೇಶ!. ನಾನು ನೇಪಾಳಕ್ಕೆ ಬಂದಾಗ, ನನಗೆ ಯಾವುದೇ ಇತರ ರಾಜಕೀಯ ಭೇಟಿಗಿಂತ ಬೇರೆಯದೇ ಆದ ಆಧ್ಯಾತ್ಮಿಕ ಅನುಭವಗಳು ಆಗುತ್ತವೆ.

 

ಭಾರತ ಮತ್ತು ಭಾರತದ ಜನತೆ ಸಾವಿರಾರು ವರ್ಷಗಳಿಂದ ಈ ಚಿಂತನೆ ಮತ್ತು ನಂಬಿಕೆಯೊಂದಿಗೆ ನೇಪಾಳದತ್ತ ನೋಡುತ್ತಿದ್ದಾರೆ. ಕೆಲ ಸಮಯದ ಹಿಂದೆ ಶೇರ್ ಬಹಾದುರ್ ದೇವೋಬಾ ಜೀ ಮತ್ತು ಶ್ರೀಮತಿ ಅರ್ಜೂ ದೇವೋಬಾ ಜೀ ಅವರು ಭಾರತಕ್ಕೆ ಬಂದಾಗ ಮತ್ತು ಕಾಶಿ ವಿಶ್ವನಾಥ ಧಾಮ, ಬನಾರಸ್ ಗಳಿಗೆ ಭೇಟಿ ಕೊಟ್ಟಾಗ ದೇವೋಬಾ ಜೀ ಅವರು ಹೇಳಿದಂತೆ ಅವರಿಗೆ ಭಾರತದ ಬಗ್ಗೆಯೂ ಇಂತಹದೇ ಅಭಿಪ್ರಾಯ, ಭಾವನೆ ಬಂದಿದ್ದು ಸಹಜವೇ ಆಗಿತ್ತು ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,

ಈ ಸಮಾನ ಮತ್ತು ಸಾಮಾನ್ಯ ಪರಂಪರೆ, ಸಮಾನ ಸಂಸ್ಕೃತಿ, ಸಮಾನ ನಂಬಿಕೆ ಮತ್ತು ಸಮಾನ ಪ್ರೀತಿಗಳು ನಮ್ಮ ಬಹು ದೊಡ್ಡ ಮತ್ತು ಅಮೂಲ್ಯ ಆಸ್ತಿಗಳು. ಮತ್ತು ಈ ಆಸ್ತಿಯ ಶ್ರೀಮಂತಿಕೆ ಎಂದರೆ ನಾವು ಜೊತೆಗೂಡಿ ಬಹಳ ಕ್ರಿಯಾಶೀಲವಾಗಿ ಭಗವಾನ್ ಬುದ್ಧ ಅವರ ಸಂದೇಶಗಳನ್ನು ಜಗತ್ತಿಗೆ ಹರಡಿ ಅದಕ್ಕೊಂದು ದಿಕ್ಕನ್ನು ತೋರಿಸಬಹುದು. ಇಂದು ನಿರ್ಮಾಣಗೊಳ್ಳುತ್ತಿರುವ ಜಾಗತಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಭಾರತ ಮತ್ತು ನೇಪಾಳ ನಡುವಣ ಬಾಂಧವ್ಯ ಇನ್ನಷ್ಟು ಬಲಿಷ್ಟಗೊಳ್ಳುತ್ತಿರುವಂತೆ ನೇಪಾಳ ಮತ್ತು ನಮ್ಮ ಸಾಮೀಪ್ಯ ಇಡೀ ಮಾನವತೆಗೆ ಪ್ರಯೋಜನಕಾರಿಯಾಗಬಲ್ಲದು. ಉಭಯ ದೇಶಗಳ ನಡುವಣ ಬುದ್ಧನ ಮೇಲಿನ ನಂಬಿಕೆ, ಬುದ್ಧ ಅವರನ್ನು ಕುರಿತಾದಂತಹ ಎಣೆಯಿಲ್ಲದಂತಹ ಪೂಜ್ಯತೆ, ಭಕ್ತಿ ನಮ್ಮನ್ನು ಏಕ ಸೂತ್ರದಲ್ಲಿ ಬಂಧಿಸಿದೆ ಮತ್ತು ನಮ್ಮನ್ನು ಕುಟುಂಬದ ಸದಸ್ಯರನ್ನಾಗಿಸಿದೆ.

ಸಹೋದರರೇ ಮತ್ತು ಸಹೋದರಿಯರೇ,

  • ಎಂದರೆ ಮಾನವತೆಯ ಸಾಮೂಹಿಕ ಭಾವನೆಯ ಅವತಾರ.ಅಲ್ಲಿ ಬುದ್ಧ ಅವರನ್ನು ಕುರಿತಾದ ಗ್ರಹಿಕೆಗಳಿವೆ. ಮತ್ತು ಆದರಿಂದ ಸಂಶೋಧನೆಗಳಾಗಿವೆ. ಅಲ್ಲಿ ಬುದ್ಧ ಚಿಂತನೆಗಳು, ಬೋಧನೆಗಳು ಇವೆ ಮತ್ತು ಅದರಿಂದಾಗಿ ಸಂಸ್ಕಾರಗಳಿವೆ. ಬುದ್ಧ ಬರೇ ಬೋಧನೆ ಮಾಡಿದ್ದು ಮಾತ್ರವಲ್ಲ,ಅವರು ಮಾನವತೆಯು ಜ್ಞಾನದ ಅನುಭವ ಪಡೆಯುವಂತೆ ಮಾಡಿದ್ದರಿಂದ ಅವರೊಂದು ವಿಶೇಷ. ಅವರು ಬಹಳ ದೊಡ್ಡ, ಭವ್ಯ ರಾಜ್ಯವನ್ನು ಮತ್ತು ಸಕಲ ಐಹಿಕ ಸುಖಬೋಗಗಳನ್ನು ತೊರೆಯುವ ಧೈರ್ಯ ಮಾಡಿದರು. ಖಂಡಿತವಾಗಿಯೂ ಅವರು ಸಾಮಾನ್ಯ ಮಗುವಾಗಿ ಜನಿಸಿರಲಿಲ್ಲ. ಅವರು ಹೊಂದುವುದಕ್ಕಿಂತ ತ್ಯಾಗ ಬಹಳ ಮುಖ್ಯ ಎಂಬುದನ್ನು ನಮಗೆ ತಿಳಿಯಪಡಿಸಿದರು. ಪರಿತ್ಯಾಗದಿಂದ ಮಾತ್ರ ಜ್ಞಾನ ಸಾಕ್ಷಾತ್ಕಾರವಾಗುತ್ತದೆ ಎಂದರು. ಅದಕ್ಕಾಗಿಯೇ ಅವರು ಅರಣ್ಯಗಳಲ್ಲಿ ಅಲೆದಾಡಿದರು. ತಪಸ್ಸು ಮಾಡಿದರು, ಸಂಶೋಧನೆ ಮಾಡಿದರು. ಆ ಬಳಿಕ ಆತ್ಮಶೋಧನೆ ಮಾಡಿಕೊಂಡರು. ಜ್ಞಾನದ ತುತ್ತತುದಿಗೇರಿದಾಗ ಅವರು ಜನರ ಕಲ್ಯಾಣಕ್ಕಾಗಿ ಯಾವುದೇ ಪವಾಡ ಮಾಡುವುದಾಗಿ ಹೇಳಲಿಲ್ಲ. ಬದಲು ಭಗವಾನರು ನಮಗೆ ತಾವು ಬದುಕಿದ ರೀತಿಯಿಂದ ದಾರಿಯನ್ನು ತೋರಿಸಿಕೊಟ್ಟರು. ಅವರು ನಮಗೆ “ ಆಪ್ ದೀಪೋ ಭಾವ ಭಿಕ್ವೇ” ಪರೀಕ್ಷಾಯ ಭಿಕ್ಷವೋ, ಗೃಹ್ಯಂ ಮಡ್ಡಾಚ್ಚೋ, ನ ತು ಗೌರವಾತ್” ಎಂಬ ಮಂತ್ರವನ್ನು ನೀಡಿದರು. ಅಂದರೆ ನಿಮ್ಮದೇ ದೀಪವಿರಲಿ, ನನ್ನ ಮಾತುಗಳನ್ನು ಗೌರವದಿಂದಲಷ್ಟೇ ಪರಿಗಣಿಸಬೇಡಿ ಬದಲು ಅವುಗಳನ್ನು ಪರೀಕ್ಷಿಸಿ ಮತ್ತು ಬಳಿಕ ಅನುಸರಿಸಿ” ಎಂದರು. . .

 

ಸ್ನೇಹಿತರೇ,

ಭಗವಾನ್ ಬುದ್ಧರಿಗೆ ಸೇರಿದಂತಹ ಇನ್ನೊಂದು ವಿಷಯವಿದೆ. ಅದನ್ನು ನಾನಿಂದು ಪ್ರಸ್ತಾಪಿಸಲೇಬೇಕು. ಬುದ್ಧ ವೈಶಾಖ ಪೂರ್ಣಿಮೆಯಂದು ಲುಂಬಿನಿಯಲ್ಲಿ ಸಿದ್ಧಾರ್ಥನಾಗಿ ಜನಿಸಿದರು. ಈ ದಿನದಂದು ಬೋಧ ಗಯಾದಲ್ಲಿ ಜ್ಞಾನೋದಯ ಪಡೆದರು. ಮತ್ತು ಭಗವಾನ್ ಬುದ್ಧರಾದರು. ಈ ದಿನದಂದು ಕುಶಿನಗರದಲ್ಲಿ ಅವರ ಮಹಾಪರಿನಿರ್ವಾಣವಾಯಿತು. ಅದೇ ದಿನ, ಅದೇ ವೈಶಾಖ ಪೂರ್ಣಿಮೆಯಂದು ಭಗವಾನ್ ಬುದ್ಧ ಅವರ ಜೀವನಯಾನದ ಈ ಹಂತಗಳು ಬರೇ ಕಾಕತಾಳೀಯವಾದಂತಹವುಗಳಲ್ಲ. ಇದು ಬುದ್ಧತ್ವದ ತಾತ್ವಿಕ ಸಂದೇಶವನ್ನು ಒಳಗೊಂಡಿದೆ. ಇದರಲ್ಲಿ ಜೀವನ, ಜ್ಞಾನ ಮತ್ತು ನಿರ್ವಾಣ ಎಲ್ಲವೂ ಜೊತೆಗೂಡಿದೆ. ಮೂರೂ ಪರಸ್ಪರ ಜೋಡಿಸಿಕೊಂಡಿವೆ. ಇದು ಮಾನವ ಜೀವಿತದ ಪರಿಪೂರ್ಣತೆ. ಮತ್ತು ಬಹುಷಃ ಅದರಿಂದಾಗಿಯೇ ಬುದ್ಧ ಅವರು ಪೂರ್ಣಿಮೆಯ ಈ ಪವಿತ್ರ ದಿನವನ್ನು ಆರಿಸಿಕೊಂಡಿರಬಹುದು. ನಾವು ಮಾನವ ಜೀವಿತವನ್ನು ಈ ಪೂರ್ಣತೆಯಲ್ಲಿ ನೋಡಿದಾಗ ಅಲ್ಲಿ ತಾರತಮ್ಯಕ್ಕೆ ಮತ್ತು ವಿಭಜಕವಾದಿತ್ವಕ್ಕೆ ಯಾವುದೇ ಅವಕಾಶ ಇಲ್ಲ. ಆಗ ನಾವು “ವಸುದೈವ ಕುಟುಂಬಕಂ” ಸ್ಪೂರ್ತಿಯ ನೆಲೆಯಲ್ಲಿ ಬದುಕಲಾರಂಭಿಸುತ್ತೇವೆ. ಇದು “ಸರ್ವೇ ಭವಂತು ಸುಖಿನೋ” ದಿಂದ ಬುದ್ಧ ವಾಣಿಯಾದ “ಭವತು ಸಬ್ ಮಂಗಲಂ”ನ್ನು ಪ್ರತಿಫಲಿಸುತ್ತದೆ. ಆದುದರಿಂದಾಗಿಯೇ ಭೌಗೋಳಿಕ ಮಿತಿಗಳನ್ನು ಮೀರಿ ಬುದ್ಧ ಪ್ರತಿಯೊಬ್ಬರಿಗೂ, ಪ್ರತಿಯೊಬ್ಬರಿಗೂ ಸೇರುತ್ತಾರೆ.

 

ಸ್ನೇಹಿತರೇ,

ಭಗವಾನ್ ಬುದ್ಧ ಅವರ ಜೊತೆ ನಾನು ಇನ್ನೊಂದು ಬಾಂಧವ್ಯವನ್ನೂ ಹೊಂದಿದ್ದೇನೆ. ಅದು ಕೂಡಾ ಅದ್ಭುತ ಕಾಕತಾಳೀಯ ಮತ್ತು ಬಹಳ ಆಹ್ಲಾದಕರ. ನಾನು ಹುಟ್ಟಿದ ಸ್ಥಳ ಗುಜರಾತಿನ ವಾಡನಗರ, ಅದು ಶತಮಾನಗಳ ಹಿಂದೆ ಬೌದ್ಧರ ಬಹಳ ದೊಡ್ಡ ಅಧ್ಯಯನ ಕೇಂದ್ರವಾಗಿತ್ತು. ಇಂದು ಕೂಡಾ ಅಲ್ಲಿ ಪ್ರಾಚೀನ ಅವಶೇಷಗಳನ್ನು ಶೋಧಿಸಲಾಗುತ್ತಿದೆ. ಮತ್ತು ಹೀಗೆ ಉತ್ಖನನಗೊಂಡವುಗಳನ್ನು ಕಾಪಿಡಲಾಗುತ್ತಿದೆ. ಇಂತಹ ಹಲವು ನಗರಗಳು ಭಾರತದಲ್ಲಿವೆ ಎಂಬುದು ನಮಗೆ ತಿಳಿದಿದೆ. ಇಂತಹ ಹಲವು ನಗರಗಳು, ಹಲವು ಸ್ಥಳಗಳನ್ನು ಜನರು ಆ ರಾಜ್ಯದ ಕಾಶಿಗಳು ಎಂದು ಭಾವಿಸುತ್ತಾರೆ. ಇದು ಭಾರತದ ವಿಶೇಷತೆ. ಕಾಶಿ ಬಳಿಯ ಸಾರಾನಾಥದ ಜೊತೆ ನನ್ನ ಬಾಂಧವ್ಯ ಕೂಡಾ ನಿಮಗೆ ತಿಳಿದಿದೆ. ಭಾರತದ ಸಾರಾನಾಥ, ಬೋಧ ಗಯಾ ಮತ್ತು ಕುಶಿನಗರದಿಂದ ನೇಪಾಳದ ಲುಂಬಿನಿವರೆಗೆ ಈ ಪವಿತ್ರ ಸ್ಥಳಗಳು ನಮ್ಮ ಪರಸ್ಪರ ಹಂಚಿಕೊಂಡ ಪರಂಪರೆ ಮತ್ತು ಮೌಲ್ಯಗಳನ್ನು ಸಂಕೇತಿಸುತ್ತವೆ. ನಾವು ಈ ಪರಂಪರೆಯನ್ನು ಜೊತೆಗೂಡಿ ಅಭಿವೃದ್ಧಿ ಮಾಡಬೇಕು ಮತ್ತು ಇನ್ನಷ್ಟು ಶ್ರೀಮಂತಗೊಳಿಸಬೇಕು. ಈಗ ಉಭಯ ದೇಶಗಳ ಪ್ರಧಾನ ಮಂತ್ರಿಗಳು ಇಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಗಾಗಿರುವ ಭಾರತ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದ್ದೇವೆ. ಇದನ್ನು ಭಾರತದ ಅಂತಾರಾಷ್ಟ್ರೀಯ ಬೌದ್ಧರ ಮಹಾಒಕ್ಕೂಟ ನಿರ್ಮಾಣ ಮಾಡಲಿದೆ. ಪ್ರಧಾನ ಮಂತ್ರಿ ದೇವೂಬಾ ಜೀ ಅವರು ದಶಕಗಳಷ್ಟು ಹಳೆಯದಾದ ನಮ್ಮ ಸಹಕಾರದ ಈ ಕನಸನ್ನು ನನಸು ಮಾಡುವಲ್ಲಿ ಬಹಳ ಮುಖ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಲುಂಬಿನಿ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರಾಗಿ ಅವರು ಅಂತಾರಾಷ್ಟ್ರೀಯ ಬೌದ್ಧ ಮಹಾಒಕ್ಕೂಟಕ್ಕೆ ಭೂಮಿಯನ್ನು ನೀಡಲು ನಿರ್ಧಾರ ಮಾಡಿದರು. ಮತ್ತು ಈಗ ಈ ಯೋಜನೆಯನ್ನು ಪೂರ್ಣಗೊಳಿಸಲು ಅವರ ಕಡೆಯಿಂದ ಪೂರ್ಣ ಸಹಕಾರ ದೊರೆಯುತ್ತಿದೆ. ಇದಕ್ಕಾಗಿ ನಾವೆಲ್ಲರೂ ಅವರಿಗೆ ಬಹಳ ಋಣಿಯಾಗಿದ್ದೇವೆ. ಅಭಿವೃದ್ಧಿಯ ಎಲ್ಲಾ ಸಾಧ್ಯತೆಗಳನ್ನು ಮನಗಂಡು ಬೌದ್ಧ ಸರ್ಕಿಟ್ ಮತ್ತು ಲುಂಬಿನಿ ಅಭಿವೃದ್ಧಿಯ ಎಲ್ಲಾ ಪ್ರಯತ್ನಗಳಿಗೆ ನೇಪಾಳ ಸರಕಾರ ಬೆಂಬಲ ನೀಡುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ನೇಪಾಳದಲ್ಲಿ ಲುಂಬಿನಿ ವಸ್ತುಸಂಗ್ರಹಾಲಯ ನಿರ್ಮಾಣ ಕೂಡಾ ಉಭಯ ದೇಶಗಳ ನಡುವಣ ಜಂಟಿ ಸಹಕಾರಕ್ಕೆ ಒಂದು ಉದಾಹರಣೆಯಾಗಿದೆ. ಮತ್ತು ಇಂದು ನಾವು ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನಕ್ಕಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪೀಠವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ.

 

ಸ್ನೇಹಿತರೇ,

ಭಾರತ ಮತ್ತು ನೇಪಾಳದ ಹಲವು ಯಾತ್ರೆಗಳು ಶತಮಾನಗಳಿಂದ ಬಹಳ ವಿಸ್ತಾರವಾದ ನಾಗರಿಕತೆ, ಸಂಸ್ಕೃತಿ ಮತ್ತು ಜ್ಞಾನದ ಸಂಪ್ರದಾಯಗಳಿಗೆ ಚಲನೆಯನ್ನು ನೀಡಿವೆ. ಇಂದು ಕೂಡಾ ಪ್ರತೀ ವರ್ಷ ಜಗತ್ತಿನ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಈ ದೇವಾಲಯಗಳಿಗೆ ಭೇಟಿ ಕೊಡುತ್ತಾರೆ. ಭವಿಷ್ಯದಲ್ಲಿ ನಮ್ಮ ಪ್ರಯತ್ನಗಳಿಗೆ ನಾವು ಹೆಚ್ಚಿನ ವೇಗವನ್ನು ಕೊಡಬೇಕು. ಭೈರಹಾವ ಮತ್ತು ಸೋನೌಲಿಗಳಲ್ಲಿ ಸಮಗ್ರ ಚೆಕ್ ಪೋಸ್ಟ್ ಗಳನ್ನು ರೂಪಿಸುವ ನಿರ್ಧಾರಗಳನ್ನು ನಮ್ಮ ಸರಕಾರಗಳು ತೆಗೆದುಕೊಂಡಿವೆ. ಇದರ ಕೆಲಸ ಕೂಡಾ ಆರಂಭವಾಗಿದೆ. ಈ ತಪಾಸಣಾ ಕೇಂದ್ರಗಳು ಪೂರ್ಣಗೊಂಡ ಬಳಿಕ ಗಡಿಯಲ್ಲಿ ಜನರ ಸಂಚಾರಕ್ಕೆ ಸೌಲಭ್ಯಗಳು ಹೆಚ್ಚಲಿವೆ. ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರವಾಸಿಗರು ನೇಪಾಳಕ್ಕೆ ಬರುವುದು ಸುಲಭವಾಗಲಿದೆ. ಜೊತೆಗೆ ಇದರಿಂದ ವ್ಯಾಪಾರ ಮತ್ತು ಅವಶ್ಯಕ ಸಾಮಗ್ರಿಗಳ ಸಾಗಾಟ ಕೂಡಾ ಹೆಚ್ಚಲಿದೆ. ಇಲ್ಲಿ ಭಾರತ ಮತ್ತು ನೇಪಾಳಗಳಿಗೆ ಉಭಯ ದೇಶಗಳ ನಡುವೆ ಒಗ್ಗೂಡಿ ಕೆಲಸ ಮಾಡಲು ಭಾರೀ ಅವಕಾಶಗಳಿವೆ. ಉಭಯ ದೇಶಗಳ ನಾಗರಿಕರಿಗೆ ಇಂತಹ ಪ್ರಯತ್ನಗಳಿಂದ ಲಾಭವಾಗಲಿದೆ.

ಸ್ನೇಹಿತರೇ,

ಭಾರತ ಮತ್ತು ನೇಪಾಳದ ನಡುವಣ ಬಾಂಧವ್ಯ ಪರ್ವತಗಳಷ್ಟು ಸ್ಥಿರ ಮತ್ತು ಪರ್ವತಗಳಷ್ಟು ಹಳೆಯದು. ನಾವು ನಮ್ಮ ಸಹಜ ಬಾಂಧವ್ಯಗಳಿಗೆ ಹಿಮಾಲಯದಷ್ಟು ಹೊಸ ಎತ್ತರಗಳನ್ನು ನೀಡಬೇಕಾಗಿದೆ. ಸಾವಿರಾರು ವರ್ಷಗಳಿಂದ ಆಹಾರ, ಸಂಗೀತ, ಹಬ್ಬಗಳು ಮತ್ತು ಕುಟುಂಬ ಬಾಂಧವ್ಯದ ಸಂಪ್ರದಾಯಗಳೊಂದಿಗೆ ನಾವು ಬದುಕುತ್ತಿರುವ ಬಾಂಧವ್ಯಗಳು ಈಗ ಹೊಸ ಕ್ಷೇತ್ರಗಳಾದ ವಿಜ್ಞಾನ, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಿಗೆ ಜೋಡಿಸಲ್ಪಟ್ಟಿವೆ. ಈ ನಿಟ್ಟಿನಲ್ಲಿ ಭಾರತವು ನೇಪಾಳದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವುದು ನನಗೆ ತೃಪ್ತಿಯ ಸಂಗತಿಯಾಗಿದೆ. ಲುಂಬಿನಿ ಬೌದ್ಧ ವಿಶ್ವವಿದ್ಯಾಲಯ, ಕಾಠ್ಮಂಡು ವಿಶ್ವವಿದ್ಯಾಲಯ, ಮತ್ತು ತ್ರಿಭುವನ್ ವಿಶ್ವವಿದ್ಯಾಲಯಗಳು ಭಾರತದ ಪ್ರಯತ್ನಗಳು ಮತ್ತು ಸಹಕಾರಕ್ಕೆ ಬಹಳ ದೊಡ್ಡ ಉದಾಹರಣೆಯಾಗಿವೆ. ಈ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವಿಸ್ತರಣೆಗೆ ಇನ್ನಷ್ಟು ಅವಕಾಶಗಳಿವೆ ಎಂಬುದು ನನ್ನ ಭಾವನೆಯಾಗಿದೆ. ಈ ಸಾಧ್ಯತೆಗಳನ್ನು ಮತ್ತು ಭಾರತದ ಹಾಗು ನೇಪಾಳದ ಕನಸುಗಳನ್ನು ನಾವು ಜೊತೆಗೂಡಿ ಸಾಕಾರಗೊಳಿಸೋಣ. ನಮ್ಮ ಸಮರ್ಥ ಯುವಜನತೆ ಯಶಸ್ಸಿನ ತುತ್ತತುದಿಗೆ ಏರಬಲ್ಲರು ಮತ್ತು ಅವರು ಜಗತ್ತಿನಾದ್ಯಂತ ಬುದ್ಧ ದೇವರ ಬೋಧನೆಗಳನ್ನು ಪ್ರಸಾರಿಸುವ ಸಂದೇಶವಾಹಕರಾಗುವರು.

ಸ್ನೇಹಿತರೇ,

ಭಗವಾನ್ ಬುದ್ಧ ಹೇಳುತ್ತಾರೆ:- सुप्पबुद्धं पबुज्झन्ति, सदा गोतम-सावका। येसं दिवा च रत्तो च, भावनाये रतो मनो॥, ಅಂದರೆ ಉತ್ತಮ ಅಭಿಪ್ರಾಯಗಳೊಂದಿಗೆ ಸದಾ ಗೆಳೆತನದಲ್ಲಿ ತೊಡಗಿರುವವರು, ಗೌತಮನ ಅನುಯಾಯಿಯಾಗಿರುವವರು ಸದಾ ಜಾಗೃತರಾಗಿರುತ್ತಾರೆ. ಅಂದರೆ ಅವರು ಬುದ್ಧ ದೇವರ ನೈಜ ಅನುಯಾಯಿಗಳು. ಇಂದು ನಾವು ಇಡೀ ಮಾನವತೆಗಾಗಿ ಕೆಲಸ ಮಾಡಬೇಕಾಗಿದೆ. ಈ ಸ್ಪೂರ್ತಿ, ಉತ್ಸಾಹದೊಂದಿಗೆ ನಾವು ಜಗತ್ತಿನಲ್ಲಿ ಗೆಳೆತನದ ಸ್ಪೂರ್ತಿಯನ್ನು ಬಲಿಷ್ಟಗೊಳಿಸಬೇಕಾಗಿದೆ. ಭಾರತ –ನೇಪಾಳ ಬಾಂಧವ್ಯ ಈ ಮಾನವತೆಯ ನಿರ್ಧಾರವನ್ನು ಈಡೇರಿಸುವ ನಿಟ್ಟಿನಲ್ಲಿ ಒಗ್ಗೂಡಿ ಕಾರ್ಯಾಚರಿಸುವಂತೆ ಮುಂದುವರೆಯುತ್ತದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ.

ಈ ಉತ್ಸಾಹ, ಸ್ಪೂರ್ತಿಯೊಂದಿಗೆ ನಿಮ್ಮೆಲ್ಲರಿಗೂ ಮತ್ತೊಮ್ಮೆ ವೈಶಾಖ ಪೂರ್ಣಿಮೆಯ ಸಂದರ್ಭದ ಶುಭಾಶಯಗಳು.

ನಮೋ ಬುದ್ಧಾಯ!

ನಮೋ ಬುದ್ಧಾಯ!

ನಮೋ ಬುದ್ಧಾಯ!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಹೇಳಿಕೆಯ ಸರಿಸುಮಾರಾದ ಭಾಷಾಂತರ. ಮೂಲ ಹೇಳಿಕೆಯನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1825946) Visitor Counter : 234