ಚುನಾವಣಾ ಆಯೋಗ
azadi ka amrit mahotsav

ಭಾರತದ 25ನೇ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಅಧಿಕಾರ ವಹಿಸಿಕೊಂಡ ಶ್ರೀ ರಾಜೀವ್ ಕುಮಾರ್

Posted On: 15 MAY 2022 2:07PM by PIB Bengaluru

ಭಾರತ ಸರಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದ ಮೇ 12, 2022ರ ಗೆಜೆಟ್ ಅಧಿಸೂಚನೆಯ ಅನುಸಾರ ಶ್ರೀ ರಾಜೀವ್ ಕುಮಾರ್ ಅವರು ಇಂದು ನವದೆಹಲಿಯ ʻನಿರ್ವಾಚನ್ ಸದನʼದಲ್ಲಿರುವ ಭಾರತೀಯ ಚುನಾವಣಾ ಆಯೋಗದ ಕಚೇರಿಯಲ್ಲಿ ಭಾರತದ 25ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. 

 


ಶ್ರೀ ರಾಜೀವ್ ಕುಮಾರ್ ಅವರು ಸೆಪ್ಟೆಂಬರ್ 1, 2020ರಿಂದ ಚುನಾವಣಾ ಆಯುಕ್ತರಾಗಿ ಚುನಾವಣಾ ಆಯೋಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಚುನಾವಣಾ ಆಯುಕ್ತರಾಗಿದ್ದಾಗ 2020ರಲ್ಲಿ ಬಿಹಾರದ ವಿಧಾನಸಭೆಗೆ; 2021ರ ಮಾರ್ಚ್-ಏಪ್ರಿಲ್ನಲ್ಲಿ ಕೋವಿಡ್‌ ಆತಂಕದ ನಡುವೆ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆಗಳಿಗೆ ಹಾಗೂ ಇತ್ತೀಚೆಗೆ 2022ರ ಆರಂಭದಲ್ಲಿ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ್, ಉತ್ತರ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ನಡೆದಿವೆ. 

ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಶ್ರೀ ರಾಜೀವ್ ಕುಮಾರ್ ಅವರು ಭಾರತೀಯ ಸಂವಿಧಾನವು ಉಡುಗೊರೆಯಾಗಿ ನೀಡಿದ ಅತ್ಯುತ್ತಮ ಸಂಸ್ಥೆಗಳಲ್ಲಿ ನಮ್ಮ ಪ್ರಜಾಪ್ರಭುತ್ವವು ಒಂದಾಗಿದೆ. ಅದನ್ನು ಬಲಪಡಿಸುವ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಮಗೆ ನೀಡಿರುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಕಳೆದ ಎಪ್ಪತ್ತು ವರ್ಷಗಳಲ್ಲಿ ಚುನಾವಣಾ ಆಯೋಗವು ನಮ್ಮ ನಾಗರಿಕರಿಗೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು, ಮತದಾರರ ಪಟ್ಟಿಯ ಕ್ರಮಬದ್ಧತೆಯನ್ನು ಖಾತರಿಪಡಿಸಲು, ದುಷ್ಕೃತ್ಯಗಳನ್ನು ತಡೆಗಟ್ಟಲು ಮತ್ತು ನಮ್ಮ ಚುನಾವಣೆಯ ಗುಣಮಟ್ಟವನ್ನು ಹೆಚ್ಚಿಸಲು ಸಾಕಷ್ಟು ಕೆಲಸ ಮಾಡಿದೆ ಎಂದು ಅವರು ಹೇಳಿದರು. "ಬದಲಾಗುತ್ತಿರುವ ಸಂದರ್ಭಗಳಿಗೆ ತಕ್ಕಂತೆ ಕ್ರಿಯಾತ್ಮಕವಾಗಿ ವಿಕಸನಗೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಮುಖ ಸುಧಾರಣೆಗಳನ್ನು ತರಲು ಪ್ರಜಾಸತ್ತಾತ್ಮಕ ಸಮಾಲೋಚನೆ ಮತ್ತು ಒಮ್ಮತದ ಕಾರ್ಯವಿಧಾನಗಳನ್ನು ಆಯೋಗವು ಅನುಸರಿಸುತ್ತದೆ. ಸಂವಿಧಾನದ ಅಡಿಯಲ್ಲಿ ತಾನು ಜವಾಬ್ದಾರರಾಗಿರುವ ವಿಚಾರಗಳಿಗೆ ಸಂಬಂಧಿಸಿದಂತೆ, ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಆಯೋಗವು ಹಿಂದೆ ಸರಿಯುವುದಿಲ್ಲ," ಎಂದು ಅವರು ಹೇಳಿದರು.  

ಚುನಾವಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಪಾರದರ್ಶಕತೆ ತರುವ ಮತ್ತು ಮತದಾರರ ಸೇವೆಗಳಲ್ಲಿ ಸುಗಮತೆಗೆ ತರುವ ನಿಟ್ಟಿನಲ್ಲಿ ಕಾರ್ಯವಿಧಾನ ಮತ್ತು ಅಭ್ಯಾಸಗಳ ಸರಳೀಕರಣಕ್ಕೆ ತಂತ್ರಜ್ಞಾನವನ್ನು ಮತ್ತಷ್ಟು ಪ್ರಮುಖ ಸಾಧನವನ್ನಾಗಿ ಬಳಸಿಕೊಳ್ಳಲಾಗುವುದು ಎಂದು ಶ್ರೀ ಕುಮಾರ್ ಹೇಳಿದರು. 

***


(Release ID: 1825678) Visitor Counter : 481