ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಏಪ್ರಿಲ್ 28 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ
ಪ್ರಧಾನಮಂತ್ರಿಯವರು ದೀಫುವಿನಲ್ಲಿ ‘ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ‍್ಯಾಲಿ’ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ
ಕರ್ಬಿ ಆಂಗ್ಲಾಂಗ್‌ನಲ್ಲಿ 500 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಶಿಕ್ಷಣ ಕ್ಷೇತ್ರದಲ್ಲಿನ ಉಪಕ್ರಮಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ
ಪ್ರಧಾನಮಂತ್ರಿಯವರು ಏಳು ಕ್ಯಾನ್ಸರ್ ಆಸ್ಪತ್ರೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಅಸ್ಸಾಂನಾದ್ಯಂತ ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ
ಅಸ್ಸಾಂನಲ್ಲಿ ಸುಮಾರು ಒಟ್ಟು 1150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 2950 ಕ್ಕೂ ಹೆಚ್ಚು ಅಮೃತ ಸರೋವರ ಯೋಜನೆಗಳ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ
Posted On:
26 APR 2022 6:52PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 28ನೇ ಏಪ್ರಿಲ್ 2022 ರಂದು ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 11:00 ಗಂಟೆಗೆ, ಅವರು ಕರ್ಬಿ ಆಂಗ್ಲಾಂಗ್ ಜಿಲ್ಲೆಯ ದೀಫುದಲ್ಲಿ 'ಶಾಂತಿ, ಏಕತೆ ಮತ್ತು ಅಭಿವೃದ್ಧಿ ರ‍್ಯಾಲಿ'ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ, ಮಧ್ಯಾಹ್ನ ಸುಮಾರು 01:45ಕ್ಕೆ, ಪ್ರಧಾನಮಂತ್ರಿಯವರು ಅಸ್ಸಾಂ ವೈದ್ಯಕೀಯ ಕಾಲೇಜು, ದಿಬ್ರುಗಢವನ್ನು ತಲುಪುತ್ತಾರೆ ಮತ್ತು ದಿಬ್ರುಗಢ್ ಕ್ಯಾನ್ಸರ್ ಆಸ್ಪತ್ರೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ತದನಂತರ, ಮಧ್ಯಾಹ್ನ 3 ಗಂಟೆಗೆ, ಅವರು ದಿಬ್ರುಗಢದ ಖನಿಕರ್ ಮೈದಾನದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ, ಅಲ್ಲಿ ಅವರು ಇನ್ನೂ ಆರು ಕ್ಯಾನ್ಸರ್ ಆಸ್ಪತ್ರೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಮತ್ತು ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.
ದೀಫು, ಕರ್ಬಿ ಆಂಗ್ಲಾಂಗ್‌ನಲ್ಲಿ ಪ್ರಧಾನಮಂತ್ರಿ
ಈ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಪ್ರಧಾನ ಮಂತ್ರಿಯವರ ಅಚಲ ಬದ್ಧತೆಗೆ ಒಂದು ಶ್ರೇಷ್ಠ ಉದಾಹರಣೆಯೆಂದರೆ ಭಾರತ ಸರ್ಕಾರ ಮತ್ತು ಅಸ್ಸಾಂ ಸರ್ಕಾರವು ಆರು ಕರ್ಬಿ ಉಗ್ರಗಾಮಿ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಗಳಿಗೆ (ಎಂಒಎಸ್) ಇತ್ತೀಚೆಗೆ ಸಹಿ ಹಾಕಿದೆ. ಈ ಒಪ್ಪಂದವು ಈ ಪ್ರದೇಶದಲ್ಲಿ ಶಾಂತಿಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ‘ಶಾಂತಿ, ಏಕತಾ ಮತ್ತು ವಿಕಾಸ ರ‍್ಯಾಲಿ’ಯಲ್ಲಿ ಪ್ರಧಾನಮಂತ್ರಿಯವರ ಭಾಷಣವು ಈ ಪ್ರದೇಶದಲ್ಲಿ ಶಾಂತಿ ಉಪಕ್ರಮಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ.
ಪಶುವೈದ್ಯಕೀಯ ಕಾಲೇಜು (ದೀಫು), ಪದವಿ ಕಾಲೇಜು (ಪಶ್ಚಿಮ ಕರ್ಬಿ ಆಂಗ್ಲಾಂಗ್) ಮತ್ತು ಕೃಷಿ ಕಾಲೇಜಿ(ಕೊಲೊಂಗಾ, ವೆಸ್ಟ್ ಕರ್ಬಿ ಆಂಗ್ಲಾಂಗ್) ಗೂ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 500 ಕೋಟಿಗೂ ಹೆಚ್ಚು ಮೌಲ್ಯದ ಈ ಯೋಜನೆಗಳು ಈ ಪ್ರದೇಶದಲ್ಲಿ ಕೌಶಲ್ಯ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ತರಲಿವೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 2950ಕ್ಕೂ ಹೆಚ್ಚು ಅಮೃತ ಸರೋವರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಜ್ಯವು ಈ ಅಮೃತ ಸರೋವರಗಳನ್ನು ಸುಮಾರು ಒಟ್ಟು 1150 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿದೆ.
ದಿಬ್ರುಗಢದಲ್ಲಿ ಪ್ರಧಾನ ಮಂತ್ರಿ
ಅಸ್ಸಾಂ ಕ್ಯಾನ್ಸರ್ ಕೇರ್ ಫೌಂಡೇಶನ್, ಅಸ್ಸಾಂ ಸರ್ಕಾರ ಮತ್ತು ಟಾಟಾ ಟ್ರಸ್ಟ್‌ಗಳ ಜಂಟಿ ಉದ್ಯಮವಾಗಿದ್ದು, ರಾಜ್ಯದಾದ್ಯಂತ ಹರಡಿರುವ 17 ಕ್ಯಾನ್ಸರ್ ಕೇರ್ ಆಸ್ಪತ್ರೆಗಳೊಂದಿಗೆ ದಕ್ಷಿಣ ಏಷ್ಯಾದ ಅತಿದೊಡ್ಡ ಕೈಗೆಟುಕುವ ವೆಚ್ಚದ ಕ್ಯಾನ್ಸರ್ ಆರೈಕೆ ಜಾಲವನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ. ಯೋಜನೆಯ 1ನೇ ಹಂತದ ಅಡಿಯಲ್ಲಿ, 10 ಆಸ್ಪತ್ರೆಗಳಲ್ಲಿ ಏಳು ಆಸ್ಪತ್ರೆಗಳ ನಿರ್ಮಾಣ ಪೂರ್ಣಗೊಂಡಿದ್ದು ಮತ್ತು ಮೂರು ಆಸ್ಪತ್ರೆಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ಯೋಜನೆಯ 2 ನೇ ಹಂತವು ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ.
ಯೋಜನೆಯ 1ನೇ ಹಂತದ ಅಡಿಯಲ್ಲಿ ಪೂರ್ಣಗೊಂಡಿರುವ ಏಳು ಕ್ಯಾನ್ಸರ್ ಆಸ್ಪತ್ರೆಗಳನ್ನು ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಕ್ಯಾನ್ಸರ್ ಆಸ್ಪತ್ರೆಗಳನ್ನು ದಿಬ್ರುಗಢ್, ಕೊಕ್ರಜಾರ್, ಬಾರ್ಪೇಟಾ, ದರ್ರಾಂಗ್, ತೇಜ್‌ಪುರ, ಲಖಿಂಪುರ ಮತ್ತು ಜೋರ್ಹತ್‌ನಲ್ಲಿ ನಿರ್ಮಿಸಲಾಗಿದೆ. ಧುಬ್ರಿ, ನಲ್ಬರಿ, ಗೋಲ್‌ಪಾರಾ, ನಾಗಾಂವ್, ಶಿವಸಾಗರ್, ತಿನ್‌ಸುಕಿಯಾ ಮತ್ತು ಗೋಲಾಘಾಟ್‌ನಲ್ಲಿ ಯೋಜನೆಯ 2 ನೇ ಹಂತದ ಅಡಿಯಲ್ಲಿ ನಿರ್ಮಿಸಲಾಗುವ ಏಳು ಹೊಸ ಕ್ಯಾನ್ಸರ್ ಆಸ್ಪತ್ರೆಗಳ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಲಿದ್ದಾರೆ.
***
(Release ID: 1820413)
Visitor Counter : 146
Read this release in:
Odia
,
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam