ಹಣಕಾಸು ಸಚಿವಾಲಯ

4 ಕೋಟಿ ದಾಟಿದ ಅಟಲ್ ಪಿಂಚಣಿ ಯೋಜನೆಯ ಒಟ್ಟು ದಾಖಲಾತಿಗಳು


2021-22 ನೇ ಆರ್ಥಿಕ ವರ್ಷದಲ್ಲಿ 99 ಲಕ್ಷಕ್ಕೂ ಹೆಚ್ಚು ಎಪಿವೈಖಾತೆಗಳನ್ನು ತೆರೆಯಲಾಗಿದೆ

Posted On: 21 APR 2022 4:24PM by PIB Bengaluru

ಎಪಿವೈ ಯೋಜನೆಯಡಿಯಲ್ಲಿ ಒಟ್ಟು ದಾಖಲಾತಿಗಳು ಮಾರ್ಚ್ 2022 ಕ್ಕೆ 4.01 ಕೋಟಿ ದಾಟಿದೆ ಅದರಲ್ಲಿ 99 ಲಕ್ಷಕ್ಕೂ ಹೆಚ್ಚು ಎಪಿವೈ ಖಾತೆಗಳನ್ನು 2021-22 ನೇ ಆರ್ಥಿಕ ವರ್ಷದಲ್ಲಿ ತೆರೆಯಲಾಗಿದೆ. ಎಲ್ಲಾ ವರ್ಗದ ಬ್ಯಾಂಕ್‌ಗಳ ಸಕ್ರಿಯ ಭಾಗವಹಿಸುವಿಕೆಯಿಂದಾಗಿ ಈ ಯೋಜನೆಯು ಅದ್ಭುತ ಯಶಸ್ಸನ್ನು ಕಂಡಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ ಶೇ.71, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಶೇ.19, ಖಾಸಗಿ ವಲಯದ ಬ್ಯಾಂಕ್‌ಗಳು ಶೇ.6, ಪಾವತಿ ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳಿಂದ ಶೇ.3 ರಷ್ಟು ದಾಖಲಾತಿಗಳು ಆಗಿವೆ.
ಸಾರ್ವಜನಿಕ ವಲಯದ ಬ್ಯಾಂಕ್ ವಿಭಾಗದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕ ಗುರಿಯನ್ನು ಸಾಧಿಸಿವೆ.
ವಿದರ್ಭ ಕೊಂಕಣ ಬ್ಯಾಂಕ್, ತ್ರಿಪುರಾ ಗ್ರಾಮೀಣ ಬ್ಯಾಂಕ್, ಜಾರ್ಖಂಡ್ ರಾಜ್ಯ ಗ್ರಾಮೀಣ ಬ್ಯಾಂಕ್, ಪಶ್ಚಿಮ ಬಂಗಾ ಗ್ರಾಮೀಣ ಬ್ಯಾಂಕ್, ಬರೋಡಾ ಯುಪಿ ಬ್ಯಾಂಕ್, ಉತ್ತರಬಂಗಾ ಕ್ಷೇರಿಯಾ ಗ್ರಾಮೀಣ ಬ್ಯಾಂಕ್, ಆರ್ಯವರರ್ತ್ ಬ್ಯಾಂಕ್, ಬರೋಡಾ ಗುಜರಾತ್ ಗ್ರಾಮೀಣ ಬ್ಯಾಂಕ್, ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್, ಮಹಾರಾಷ್ಟ್ರ ಗ್ರಾಮೀಣ ಬ್ಯಾಂಕ್, ಒಡಿಶಾ ಗ್ರಾಮ್ಯ ಬ್ಯಾಂಕ್, ಮಧ್ಯ ಪ್ರದೇಶ ಗ್ರಾಮೀಣ ಬ್ಯಾಂಕ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ತೆಲಂಗಾಣ ಗ್ರಾಮೀಣ ಬ್ಯಾಂಕ್, ಆಂಧ್ರಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್, ಬರೋಡಾ ರಾಜಸ್ಥಾನ ಕ್ಷೇತ್ರೀಯ ಗ್ರಾಮೀಣ ಬ್ಯಾಂಕ್, ರಾಜಸ್ಥಾನ ಮರುಧರ ಗ್ರಾಮೀಣ ಬ್ಯಾಂಕ್, ದಕ್ಷಿಣ ಬಿಹಾರ ಗ್ರಾಮೀಣ ಬ್ಯಾಂಕ್, ಪ್ರಥಮ ಯುಪಿ ಗ್ರಾಮೀಣ ಬ್ಯಾಂಕ್, ಪಂಜಾಬ್ ಗ್ರಾಮೀಣ ಬ್ಯಾಂಕ್, ಪುದುವಾಯಿ ಭಾರತೀಯಾರ್‌ ಗ್ರಾಮೀಣ ಬ್ಯಾಂಕ್ ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಮಣಿಪುರ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರಾಖಂಡ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ವಿಭಾಗದಲ್ಲಿ ವಾರ್ಷಿಕ ಗುರಿ ಸಾಧಿಸಿವೆ.
ಅಲ್ಲದೆ, ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ಶ್ರೀ ಮಹಿಳಾ ಸೇವಾ ಸಹಕಾರಿ ಬ್ಯಾಂಕ್, ದಿ ಕಲುಪುರ್ ಕಮರ್ಷಿಯಲ್ ಕೋ-ಆಪರೇಟಿವ್ ಬ್ಯಾಂಕ್, ದಿ ಸಬರ್ಕಾಂತ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ರಾಜ್‌ಕೋಟ್ ನಾಗರಿಕ್ ಸಹಕಾರಿ ಬ್ಯಾಂಕ್ ಇತರ ಬ್ಯಾಂಕ್ ವಿಭಾಗಗಳಲ್ಲಿ ವಾರ್ಷಿಕ ಗುರಿಯನ್ನು ಸಾಧಿಸಿವೆ.
ಬ್ಯಾಂಕ್‌ಗಳ ಹೊರತಾಗಿ, 9 ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗಳಾದ ಬಿಹಾರ, ಜಾರ್ಖಂಡ್, ಅಸ್ಸಾಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ಮತ್ತು ತ್ರಿಪುರಾಗಳು ಎಪಿವೈ ಅಡಿಯಲ್ಲಿ ವಾರ್ಷಿಕ ಗುರಿಗಳನ್ನು ಸಾಧಿಸಿವೆ.
31 ಮಾರ್ಚ್ 2022 ರವರೆಗೆ ಎಪಿವೈ ಅಡಿಯಲ್ಲಿ ಒಟ್ಟು ದಾಖಲಾತಿಗಳಲ್ಲಿ, ಸುಮಾರು ಶೇ.80 ರಷ್ಟು ಚಂದಾದಾರರು ರೂ. 1000 ಪಿಂಚಣಿ ಯೋಜನೆಯನ್ನು ಮತ್ತು ಶೇ.13 ರಷ್ಟು ಮಂದಿ ರೂ 5000 ಪಿಂಚಣಿ ಯೋಜನೆಯನ್ನು ಆರಿಸಿಕೊಂಡಿದ್ದಾರೆ. ಒಟ್ಟು ಎಪಿವೈ ಚಂದಾದಾರರಲ್ಲಿ ಶೇ.44 ರಷ್ಟು ಮಹಿಳಾ ಚಂದಾದಾರರಾಗಿದ್ದರೆ, ಶೇ. 56 ರಷ್ಟು ಪುರುಷ ಚಂದಾದಾರರಾಗಿದ್ದಾರೆ. ಇದಲ್ಲದೆ, ಒಟ್ಟು ಎಪಿವೈ ಚಂದಾದಾರರಲ್ಲಿ, ಶೇ.45 ರಷ್ಟು ಮಂದಿ 18 ರಿಂದ 25 ವರ್ಷ ವಯಸ್ಸಿನವರಾಗಿದ್ದಾರೆ.
2021 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸುವ ಬಗ್ಗೆ ಒತ್ತಿ ಹೇಳಿದರು. ಪಿ ಎಫ್‌ ಆರ್‌ ಡಿ ಎ, ಸರ್ಕಾರದ ಮಿಷನ್‌ಗೆ ಅನುಗುಣವಾಗಿ ದೇಶಾದ್ಯಂತ ಎಲ್ಲಾ ಎಸ್‌ಎಲ್‌ಬಿಸಿ ಮತ್ತು ಆರ್‌ಆರ್‌ಬಿಗಳೊಂದಿಗೆ ಸಮನ್ವಯತೆಯಲ್ಲಿ ಔಟ್‌ ರೀಚ್‌ ಕಾರ್ಯಕ್ರಮಗಳನ್ನು ನಡೆಸುತ್ತಿದೆ. 2021-22 ರಲ್ಲಿ, ಅಂತಹ 13 ಭೌತಿಕ ಔಟ್‌ ರೀಚ್‌  ಕಾರ್ಯಕ್ರಮಗಳನ್ನು ನಡೆಸಲಾಗಿದೆ ಮತ್ತು ಉಳಿದ ಕಾರ್ಯಕ್ರಮಗಳನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ನಡೆಸಲಾಗುವುದು.
ಜನ್ ಧನ್ ಖಾತೆದಾರರನ್ನು ಗುರಿಯಾಗಿಸಿಕೊಂಡು ಪಿ ಎಫ್‌ ಆರ್‌ ಡಿ ಎ ಕಾರ್ಯತಂತ್ರವನ್ನು ರೂಪಿಸಿದೆ, ಯುವ ಜನಸಂಖ್ಯೆಯನ್ನು ಗುರಿಯಾಗಿಸಲು ಡಿಜಿಟಲ್ ಮೋಡ್ ದಾಖಲಾತಿಯನ್ನು ಉತ್ತೇಜಿಸಲಾಗುತ್ತಿದೆ, ಇತರ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ಎನ್‌ ಆರ್‌ ಎಲ್‌ ಎಂ/ ಎಸ್‌ ಆರ್‌ ಎಲ್‌ ಎಂ ನಂತಹ ಏಜೆನ್ಸಿಗಳನ್ನು ವೆಬಿನಾರ್‌ಗಳು ಮತ್ತು ಟೌನ್‌ಹಾಲ್ ಸಭೆಗಳ ಮೂಲಕ ಎಪಿವೈ ಔಟ್ರೀಚ್ ಕಾರ್ಯಕ್ರಮಗಳಿಗಾಗಿ ತೊಡಗಿಸಿಕೊಳ್ಳಲಾಗಿದೆ.
ಅಟಲ್ ಪಿಂಚಣಿ ಯೋಜನೆಯು ಪಿ ಎಫ್‌ ಆರ್‌ ಡಿ ಎ ಯಿಂದ ನಿರ್ವಹಿಸಲಾಗುತ್ತಿರುವ ಭಾರತ ಸರ್ಕಾರದ ಖಾತರಿಯ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಗೆ 18-40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಮೂಲಕ ಸೇರಬಹುದು. ಯೋಜನೆಯಡಿಯಲ್ಲಿ, ಚಂದಾದಾರರು 60 ವರ್ಷ ವಯಸ್ಸಿನಿಂದ ಅವರ ಕೊಡುಗೆಗೆ ಅನುಸಾರವಾಗಿ ತಿಂಗಳಿಗೆ ಕನಿಷ್ಠ 1000 ದಿಂದದ 5000 ರೂ. ಪಿಂಚಣಿಯನ್ನು ಪಡೆಯುತ್ತಾರೆ. ಚಂದಾದಾರರ ಮರಣದ ನಂತರ ಅದೇ ಪಿಂಚಣಿಯನ್ನು ಚಂದಾದಾರರ ಗಂಡ/ಹೆಂಡತಿಗೆ ಪಾವತಿಸಲಾಗುವುದು ಮತ್ತು ಚಂದಾದಾರರು ಮತ್ತು ಗಂಡ/ಹೆಂಡತಿ ಇಬ್ಬರೂ ನಿಧನರಾದ ನಂತರ, ಚಂದಾದಾರರ 60 ವರ್ಷದವರೆಗೆ ಸಂಗ್ರಹವಾದ ಪಿಂಚಣಿ ಸಂಪತ್ತನ್ನು ನಾಮನಿರ್ದೇಶಿತರಿಗೆ ಹಿಂತಿರುಗಿಸಲಾಗುತ್ತದೆ.
ಎಪಿವೈ ಅಡಿಯಲ್ಲಿ ಒಟ್ಟು ದಾಖಲಾತಿಗಳನ್ನು ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಭಾರತವನ್ನು ಪಿಂಚಣಿ ಸಮಾಜವನ್ನಾಗಿ ಮಾಡಲು ಪಿ ಎಫ್‌ ಆರ್‌ ಡಿ ಎ ಬದ್ಧವಾಗಿದೆ.

***



(Release ID: 1818882) Visitor Counter : 170