ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼ(ಕೆಐಯುಜಿ) ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡಲು ಸಹಾಯ ಮಾಡುತ್ತದೆ: ಶ್ರೀ ಅನುರಾಗ್ ಠಾಕೂರ್
ʻಕೆಐಯುಜಿʼ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಹೊಂದಿದ್ದು, ಇದು ಆಟದಲ್ಲಿ ಶೂನ್ಯ ತ್ಯಾಜ್ಯವನ್ನು ಖಾತರಿಪಡಿಸುತ್ತದೆ: ಕ್ರೀಡಾ ಸಚಿವ
ಏಪ್ರಿಲ್ 24ರಿಂದ ಮೇ 3, 2022 ರವರೆಗೆ ʻಕೆಐಯುಜಿʼ ನಡೆಯಲಿದ್ದು, ಶ್ರೀಹರಿ ನಟರಾಜ್ ಮತ್ತು ದ್ಯುತಿ ಚಂದ್ ಸೇರಿದಂತೆ ಹಲವಾರು ಒಲಿಂಪಿಯನ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ
Posted On:
20 APR 2022 8:38PM by PIB Bengaluru
`ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼವು(ಕೆಯುಜಿ) ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಹೇಳಿದ್ದಾರೆ. ಕರ್ನಾಟಕದಲ್ಲಿ ನಡೆಯಲಿರುವ `ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼದ ಬಗ್ಗೆ ನವದೆಹಲಿಯಲ್ಲಿ ಇಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಸಂವಾದದ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ, ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಮಹಾ ನಿರ್ದೇಶಕ ಶ್ರೀ ಸಂದೀಪ್ ಪ್ರಧಾನ್ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ವಿಶ್ವವಿದ್ಯಾಲಯ ಕ್ರೀಡಾಕೂಟವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯವಾಗಿದೆ. ಅವರು ಕ್ರೀಡಾಕೂಟದ ಮೊದಲ ಆವೃತ್ತಿಯಲ್ಲಿ ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಒಲಿಂಪಿಕ್ ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಅಡಿಪಾಯವಾಗಿ ವಿಶ್ವವಿದ್ಯಾಲಯ ಕ್ರೀಡಾಕೂಟದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.
ʻಕೆಯುಜಿ-2021ʼ - ಇದು ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼದ ಎರಡನೇ ಆವೃತ್ತಿಯಾಗಿದ್ದು, ಇದನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಜೈನ್ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯವು ಕ್ರೀಡಾಕೂಟದ ಆತಿಥ್ಯ ವಿಶ್ವವಿದ್ಯಾಲಯವಾಗಿದೆ ಎಂದು ಶ್ರೀ ಠಾಕೂರ್ ಮಾಹಿತಿ ನೀಡಿದರು. ಭಾರತ ಸರಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದೊಂದಿಗೆ ಕರ್ನಾಟಕ ಸರಕಾರವು ಆಯೋಜಿಸುತ್ತಿರುವ ಈ ಕ್ರೀಡಾಕೂಟವು 2022ರ ಏಪ್ರಿಲ್ 24 ರಿಂದ ಮೇ 3 ರವರೆಗೆ ನಡೆಯಲಿದೆ ಎಂದರು. "ಕೆಯುಜಿ-2021 ಕ್ರೀಡಾಕೂಟದಲ್ಲಿ ಸುಮಾರು 190 ವಿಶ್ವವಿದ್ಯಾಲಯಗಳ 3879ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಮಲ್ಲಕಂಬ ಮತ್ತು ಯೋಗಾಸನದಂತಹ ದೇಶೀಯ ಕ್ರೀಡೆಗಳು ಸೇರಿದಂತೆ 20 ವಿಭಾಗಗಳಲ್ಲಿ 257 ಚಿನ್ನದ ಪದಕಗಳಿಗಾಗಿ ಕ್ರೀಡಾಪಟುಗಳು ಸೆಣಸಾಡಲಿದ್ದಾರೆ," ಎಂದು ಅವರು ಹೇಳಿದರು.
ʻಖೇಲೋ ಇಂಡಿಯಾ ಗ್ರೀನ್ ಗೇಮ್ಸ್ʼ ಸೇರಿದಂತೆ ಈ ಬಾರಿಯ ಕ್ರೀಡಾಕೂಟವು ಹಲವಾರು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಬಾರಿಯ ಆಟಗಳಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಲಾಗುತ್ತಿದ್ದು, ಇದು ಶೂನ್ಯ ತ್ಯಾಜ್ಯವನ್ನು ಖಾತರಿಪಡಿಸುತ್ತದೆ. ಇದಲ್ಲದೆ, ಕ್ರೀಡಾಕೂಟಕ್ಕಾಗಿ ಮೊದಲ ಬಾರಿಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಇದು ಆಟಗಳ ಕುರಿತು ಕ್ರೀಡಾಪಟುಗಳು ಕ್ರೀಡಾಕೂಟಕ್ಕೆ ಮೊದಲು ಮತ್ತು ಕ್ರೀಡಾಕೂಟದ ಸಮಯದಲ್ಲಿ ಬಳಸಬಹುದಾದ ಎಲ್ಲಾ ಅಗತ್ಯ ಮಾಹಿತಿಯನ್ನು ಹೊಂದಿರುತ್ತದೆ. ಆ ಮೂಲಕ ʻಡಿಜಿಟಲ್ ಇಂಡಿಯಾʼ ವಿಧಾನದೊಂದಿಗೆ ಸ್ಪರ್ಧಿಗಳಿಗೆ ಅನುಕೂಲ ಮಾಡಿಕೊಡುತ್ತದೆ ಎಂದರು.
ಶ್ರೀಹರಿ ನಟರಾಜ್ ಮತ್ತು ದ್ಯುತಿ ಚಂದ್ ಸೇರಿದಂತೆ ಹಲವಾರು ಒಲಿಂಪಿಯನ್‌ಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ, ಹಾಗೆಯೇ 2028ರ ಒಲಿಂಪಿಕ್ಸ್‌ಗಾಗಿ ತರಬೇತಿ ಪಡೆಯುತ್ತಿರುವ ಅನೇಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ʻಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟʼವು ವಿಶ್ವವಿದ್ಯಾಲಯ ಮಟ್ಟದ ಆಟಗಾರರ ಅತಿದೊಡ್ಡ ವೇದಿಕೆಯಾಗಿದೆ. ಇದು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ವಿವಿಧ ಕ್ರೀಡೆಗಳ ರಾಷ್ಟ್ರೀಯ ತಂಡದ ಆಯ್ಕೆಗಾರರ ಗಮನ ಸೆಳೆಯಲು ರಾಷ್ಟ್ರಮಟ್ಟದ ʻಲಾಂಚ್ ಪ್ಯಾಡ್ʼ ಒದಗಿಸುವ ಗುರಿಯನ್ನು ಹೊಂದಿದೆ.
ʻಸೋನಿ 6ʼ ಮತ್ತು ದೂರದರ್ಶನದ (ಡಿಸಿ) ಜೊತೆಗೆ ʻಸೋನಿʼ ಸಂಸ್ಥೆಯ ಒಟಿಟಿ ವೇದಿಕೆಯಾದ ʻಸೋನಿ ಲಿವ್ʼ ಮೂಲಕ ಈ ಕ್ರೀಡಾಕೂಟವನ್ನು ನೇರಪ್ರಸಾರ ಮಾಡಲಾಗುವುದು. ಜೊತೆಗೆ ಆಕಾಶವಾಣಿ (ಎಐಆರ್), ಪ್ರಸಾರ ಭಾರತಿ, ಖೇಲೋ ಇಂಡಿಯಾ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕವೂ ಇದನ್ನು ಪ್ರಸಾರ ಮಾಡಲಾಗುವುದು.
ಇದೇ ಮೊದಲ ಬಾರಿಗೆ ಭಾಗವಹಿಸುವ ಕ್ರೀಡಾಪಟುಗಳಿಗೆ ಮಾಹಿತಿ, ಶಿಕ್ಷಣ ನೀಡಲು ಮತ್ತು ಅವರೊಂದಿಗೆ ಸಂವಹನಕ್ಕೆ ʻರಾಷ್ಟ್ರೀಯ ಆಂಟಿ ಡೋಪಿಂಗ್ ಏಜೆನ್ಸಿʼಯು(ಎನ್‌ಎಡಿಎ) ಆ್ಯಪ್ ಅನ್ನು ಬಳಸಲಿದೆ. ಇದರಿಂದ ಅವರು ಡೋಪಿಂಗ್ ಪಿಡುಗಿನ ಬಗ್ಗೆ ಸ್ಪರ್ಧಿಗಳು ಸಾಕಷ್ಟು ಅರಿವು ಪಡೆಯಲು ನೆರವಾಗಲಿದೆ.
***
(Release ID: 1818671)
Visitor Counter : 160