ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

2013-14ರಿಂದ ಭಾರತದ ಬಾಸ್ಮತಿಯೇತರ ಅಕ್ಕಿ ರಫ್ತು 109% ರಷ್ಟು ಹೆಚ್ಚಾಗಿದ್ದು, 6115 ದಶಲಕ್ಷ ಡಾಲರ್‌ಗೆ ತಲುಪಿದೆ


ಮೋದಿ ಸರಕಾರದ ನೀತಿಗಳು ರೈತರಿಗೆ ಜಾಗತಿಕ ಮಾರುಕಟ್ಟೆಯ ಪ್ರವೇಶವನ್ನು ಪಡೆಯಲು ಮತ್ತು ಆಹಾರ ಭದ್ರತೆಯನ್ನು ಖಾತರಿಪಡಿಸಲು ಸಹಾಯ ಮಾಡುತ್ತಿವೆ - ಶ್ರೀ ಪಿಯೂಷ್ ಗೋಯಲ್

2021-22ರಲ್ಲಿ ಬಾಸ್ಮತಿಯೇತರ ಅಕ್ಕಿಯ ರಫ್ತಿನಿಂದ ವಿದೇಶಿ ವಿನಿಮಯ ಗಳಿಕೆಯು ಇತರೆ ಇತರೆ ಎಲ್ಲಾ ಕೃಷಿ-ಸರಕುಗಳ ವಿದೇಶಿ ವಿನಿಮಯ ಗಳಿಕೆಗಿಂತಲೂ ಅತ್ಯಧಿಕ

ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಅತಿದೊಡ್ಡ ಪಾಲನ್ನು ಹೊಂದಿರುವ ಭಾರತವು ಆಫ್ರಿಕಾ, ಏಷ್ಯಾ ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ತನ್ನ ಅಕ್ಕಿ ರಫ್ತು ಹೆಜ್ಜೆಗುರುತು ವಿಸ್ತರಣೆಯನ್ನು ಮುಂದುವರಿಸಿದೆ

Posted On: 20 APR 2022 12:55PM by PIB Bengaluru

2013-14ನೇ ಹಣಕಾಸು ವರ್ಷದಲ್ಲಿ 2925 ದಶಲಕ್ಷ ಡಾಲರ್‌ನಷ್ಟಿದ್ದ ಭಾರತದ ಬಾಸ್ಮತಿಯೇತರ ಅಕ್ಕಿ ರಫ್ತು, 2021-22ನೇ ಹಣಕಾಸು ವರ್ಷದ ವೇಳೆಗೆ 6115 ದಶಲಕ್ಷ ಡಾಲರ್‌ಗೆ ತಲುಪಿದ್ದು, ಅಚ್ಚರಿಯ ಮಟ್ಟದಲ್ಲಿ ಶೇ. 109ರಷ್ಟು ಬೆಳವಣಿಗೆ  ಕಂಡಿದೆ.

ʻಡಿಜಿಸಿಐಎಸ್ʼ ದತ್ತಾಂಶದ ಪ್ರಕಾರ, ಭಾರತವು 2021-22ರಲ್ಲಿ ವಿಶ್ವದಾದ್ಯಂತ 150ಕ್ಕೂ ಹೆಚ್ಚು ದೇಶಗಳಿಗೆ ಅಕ್ಕಿಯನ್ನು ರಫ್ತು ಮಾಡಿದೆ. 2021-22ರಲ್ಲಿ ವರದಿಯಾದ 150 ದೇಶಗಳ ಪೈಕಿ, 76 ದೇಶಗಳಿಗೆ ಭಾರತವು ಒಂದು ದಶಲಕ್ಷ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಅಕ್ಕಿ ರಫ್ತು ಮಾಡಿದೆ, ಇದು ಹಲವು ವರ್ಷಗಳಲ್ಲಿ ಭಾರತದ ಅಕ್ಕಿ ರಫ್ತಿನ ವೈವಿಧ್ಯವನ್ನು ಸೂಚಿಸುತ್ತದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ; ಗ್ರಾಹಕ ವ್ಯವಹಾರಗಳು; ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಜವಳಿ ಖಾತೆ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಟ್ವೀಟ್ ಮೂಲಕ ಐತಿಹಾಸಿಕ ಸಾಧನೆಯನ್ನು ಎತ್ತಿ ತೋರಿದ್ದಾರೆ. ಮೋದಿ ಸರಕಾರದ ನೀತಿಗಳು ರೈತರಿಗೆ ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತಿವೆ ಎಂದು ಹೇಳಿದ್ದಾರೆ.

 

ʻಡಿಜಿಸಿಐಎಸ್ʼ ದತ್ತಾಂಶದ ಪ್ರಕಾರ, ಭಾರತವು 2019-20ರಲ್ಲಿ 2015 ದಶಲಕ್ಷ ಡಾಲರ್ ಮೌಲ್ಯದ ಬಾಸ್ಮತಿಯೇತರ ಅಕ್ಕಿಯನ್ನು ರಫ್ತು ಮಾಡಿದೆ, ಈ ಪ್ರಮಾಣ 2020-21ರಲ್ಲಿ 4799 ದಶಲಕ್ಷ ಡಾಲರ್ ಮತ್ತು 2021-22 ರಲ್ಲಿ 6115 ದಶಲಕ್ಷ ಡಾಲರ್‌ಗೆ ಏರಿಕೆಯಾಗಿದೆ.

2021-22ರಲ್ಲಿ 27% ಬೆಳವಣಿಗೆಯೊಂದಿಗೆ ಬಾಸ್ಮತಿಯೇತರ ಅಕ್ಕಿಯ ರಫ್ತಿನಿಂದ  6115 ದಶಲಕ್ಷ ಡಾಲರ್‌ನಷ್ಟು ವಿದೇಶಿ ವಿನಿಮಯವನ್ನು ಗಳಿಕೆಯಾಗಿದ್ದು, ಇದು ಎಲ್ಲಾ ಕೃಷಿ ಸರಕುಗಳ ಪೈಕಿ ಅಗ್ರಮಾನ್ಯವೆನಿಸಿದೆ.

"ನಮ್ಮ ವಿದೇಶಿ ರಾಯಭಾರ ಕಚೇರಿಗಳ ಸಹಯೋಗದೊಂದಿಗೆ, ನಾವು ಸಾಗಣೆ ವ್ಯವಸ್ಥೆ ಮತ್ತು ಗುಣಮಟ್ಟದ ಉತ್ಪನ್ನಗಳ ಉತ್ಪಾದನೆಯ ಮೇಲೆ ಗಮನ ಹರಿಸಿದ್ದೇವೆ, ಇದು ಭಾರತದ ಅಕ್ಕಿ ರಫ್ತು ಭವಿಷ್ಯವನ್ನು ಹೆಚ್ಚಿಸಿದೆ,ʼʼ ಎಂದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಅಧ್ಯಕ್ಷ ಡಾ.ಎಂ.ಅಂಗಮುತ್ತು ಹೇಳಿದರು.

ಪಶ್ಚಿಮ ಆಫ್ರಿಕಾದ ಬೆನಿನ್ ಭಾರತದಿಂದ ಬಾಸ್ಮತಿಯೇತರ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಭಾರತದ ಅಕ್ಕಿ ರಫ್ತಾಗುವ ಇತರ ದೇಶಗಳಲ್ಲಿ ನೇಪಾಳ, ಬಾಂಗ್ಲಾದೇಶ, ಚೀನಾ, ಕೋಟ್ ಡಿ'ಐವೊರ್, ಟೊಗೊ, ಸೆನೆಗಲ್, ಗಿನಿಯಾ, ವಿಯೆಟ್ನಾಂ, ಜಿಬೌಟಿ, ಮಡಗಾಸ್ಕರ್, ಕ್ಯಾಮರೂನ್ ಸೊಮಾಲಿಯಾ, ಮಲೇಷ್ಯಾ, ಲೈಬೀರಿಯಾ ಯು.ಎ.ಇ.  ಇತ್ಯಾದಿ ಸೇರಿವೆ.

2020-21ರಲ್ಲಿ, ಭಾರತವು ಒಂಬತ್ತು ರಾಷ್ಟ್ರಗಳಾದ ತಿಮೊರ್-ಲೆಸ್ಟೆ, ಪೋರ್ಟೊ ರಿಕೊ, ಬ್ರೆಜಿಲ್, ಪಪುವಾ ನ್ಯೂ ಗಿನಿಯಾ, ಜಿಂಬಾಬ್ವೆ, ಬುರುಂಡಿ, ಎಸ್ವಾಟಿನಿ, ಮ್ಯಾನ್ಮಾರ್ ಮತ್ತು ನಿಕರಾಗುವಾಗಳಿಗೆ ಬಾಸ್ಮತಿಯೇತರ ಅಕ್ಕಿಯನ್ನು ರವಾನಿಸಿದೆ. ಈ ದೇಶಗಳಿಗೆ ಮೊದಲ ಬಾರಿಗೆ ಅಕ್ಕಿಯನ್ನು ರವಾನಿಸಲಾಗಿದೆ. ಅದರಲ್ಲೂ ಸಾಗಿಸಬೇಕಾದ ಸರಕಿನ ಪ್ರಮಾಣ ಕಡಿಮೆ ಇರುವೆಡೆ ಮೊದಲು ರವಾನಿಸಲಾಗಿದೆ.

ಬಂದರು ನಿರ್ವಹಣೆ ಮೂಲಸೌಕರ್ಯವನ್ನು ವಿಸ್ತರಿಸಲು ಭಾರತದ ನೀಡಿದ ಒತ್ತು, ಪ್ರಮುಖ ಮಧ್ಯಸ್ಥಗಾರರನ್ನು ಒಳಗೊಂಡ ಮೌಲ್ಯ ಸರಪಳಿಯ ಅಭಿವೃದ್ಧಿ ಹಾಗೂ ಕಳೆದ ಕೆಲವು ವರ್ಷಗಳಲ್ಲಿ ಅಕ್ಕಿ ರಫ್ತಿಗಾಗಿ ದೇಶಗಳು ಅಥವಾ ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ಹುಡುಕುವ ಪ್ರಯತ್ನಗಳು ಅಕ್ಕಿ ರಫ್ತಿನಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿವೆ.

ಕೋವಿಡ್-19 ಸಾಂಕ್ರಾಮಿಕ ಒಡ್ಡಿದ ಸಾಗಣೆ ಸವಾಲುಗಳ ಹೊರತಾಗಿಯೂ, ಭಾರತವು ಆಫ್ರಿಕನ್, ಏಷ್ಯನ್ ಮತ್ತು ಯುರೋಪಿಯನ್ ಯೂನಿಯನ್ ಮಾರುಕಟ್ಟೆಗಳಲ್ಲಿ ತನ್ನ ಅಕ್ಕಿ ರಫ್ತು ಹೆಜ್ಜೆಗುರುತಿನ ವಿಸ್ತರಣೆಯನ್ನು ಮುಂದುವರಿಸಿದೆ, ಇದರಿಂದಾಗಿ ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತವು ಹೆಚ್ಚಿನ ಪಾಲನ್ನು ಹೊಂದಿದೆ. ದೃಢವಾದ ಜಾಗತಿಕ ಬೇಡಿಕೆಯು ಅಕ್ಕಿ ರಫ್ತಿನಲ್ಲಿ ಭಾರತದ ಬೆಳವಣಿಗೆಗೆ ಸಹಾಯ ಮಾಡಿದೆ.

ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಒಡಿಶಾ, ಅಸ್ಸಾಂ ಮತ್ತು ಹರಿಯಾಣ ಪ್ರಮುಖ ಭತ್ತ ಉತ್ಪಾದಿಸುವ ರಾಜ್ಯಗಳಾಗಿವೆ.

2021-22ರ ಎರಡನೇ ಮುಂಗಡ ಅಂದಾಜಿನ ಪ್ರಕಾರ, 2021-22ರಲ್ಲಿ ಅಕ್ಕಿಯ ಒಟ್ಟು ಉತ್ಪಾದನೆಯನ್ನು ದಾಖಲೆಯ 127.93 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ಐದು ವರ್ಷಗಳ ಸರಾಸರಿ ಉತ್ಪಾದನೆಯಾದ 116.44 ದಶಲಕ್ಷ ಟನ್‌ಳಿಗಿಂತಲೂ 11.49 ದಶಲಕ್ಷ ಟನ್ ಅಧಿಕವೆನಿಸಿದೆ.

ಆದಾಗ್ಯೂ, 2021-22ರ ಎರಡನೇ ಮುಂಗಡ ಅಂದಾಜಿನ ಪ್ರಕಾರ, ದೇಶದಲ್ಲಿ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯನ್ನು ದಾಖಲೆಯ 316.06 ದಶಲಕ್ಷ ಟನ್ ಎಂದು ಅಂದಾಜಿಸಲಾಗಿದೆ, ಇದು 2020-21ರಲ್ಲಿ ಆಹಾರ ಧಾನ್ಯಗಳ ಉತ್ಪಾದನೆಗಿಂತ 5.32 ದಶಲಕ್ಷ ಟನ್ ಅಧಿಕವೆನಿಸಿದೆ. ಇದಲ್ಲದೆ, 2021-22ರಲ್ಲಿ ಉತ್ಪಾದನೆಯು ಹಿಂದಿನ ಐದು ವರ್ಷಗಳ (2016-17ರಿಂದ 2020-21) ಸರಾಸರಿ ಆಹಾರ ಧಾನ್ಯಗಳ ಉತ್ಪಾದನೆಗಿಂತ 25.35 ದಶಲಕ್ಷ ಟನ್ ಹೆಚ್ಚಾಗಿದೆ.

ಗಮನಾರ್ಹ ವಿಷಯವೆಂದರೆ, ಭಾರತವು ಚೀನಾದ ನಂತರ ವಿಶ್ವದ ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ. ದಾಖಲೆಯ ರಫ್ತಿನಿಂದಾಗಿ ಅಕ್ಕಿ ಉತ್ಪಾದಕರಿಗೆ ತಮ್ಮ ದಾಸ್ತಾನುಗಳನ್ನು ಕಡಿಮೆ ಮಾಡಲು ಅನುವಾಗುತ್ತದೆ. ಭಾರತೀಯ ಅಕ್ಕಿಗೆ ಬೇಡಿಕೆ ಹೆಚ್ಚಿದಷ್ಟೂ ಆದಾಯ ಹೆಚ್ಚುವುದರಿಂದ ಕೃಷಿಕರಿಗೆ ಇದರಿಂದ ಪ್ರಯೋಜನವಾಗುತ್ತದೆ.  ದೇಶದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತನ್ನು ಹೆಚ್ಚಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಸರಕಾರದ ಬದ್ಧತೆಗೆ ಕೃಷಿ-ರಫ್ತುಗಳಲ್ಲಿನ ಗಮನಾರ್ಹ ಹೆಚ್ಚಳವು ಸಾಕ್ಷಿಯಾಗಿದೆ.

                                                     ಕೋಷ್ಟಕ: ಬಾಸ್ಮತಿಯೇತರ ಅಕ್ಕಿ ರಫ್ತು

                                   ದಶಲಕ್ಷ ಅಮೆರಿಕನ್ ಡಾಲರ್

ಉತ್ಪನ್ನ

2019-20

 

2020-21

 

2021-22

 

ಬಾಸ್ಮತಿಯೇತರ ಅಕ್ಕಿ

2015

4811

6115

 

********


(Release ID: 1818412) Visitor Counter : 314