ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಪರಿಷ್ಕರಿಸಲಾದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ [ಆರ್.ಜಿ.ಎಸ್.ಎ]ವನ್ನು 01.04.2022 ರಿಂದ 31.03.2026 ರ ವರೆಗೆ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ  


ಒಟ್ಟು 5911 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ 3700 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರದ ಪಾಲು 2211 ಕೋಟಿ ರೂಪಾಯಿ  

2.78 ಲಕ್ಷ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಎಸ್.ಡಿ.ಜಿ - ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಯೋಜನೆ ಸಹಕಾರಿ  

Posted On: 13 APR 2022 3:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಪರಿಷ್ಕರಿಸಲಾದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ[ಆರ್.ಜಿ.ಎಸ್.ಎ] ಕಾರ್ಯಕ್ರಮವನ್ನು 01.04.2022 ದಿಂದ 31.03.2026 ರ ವರೆಗೆ ಮುಂದುವರಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದು, [15 ನೇ ಹಣಕಾಸು ಆಯೋಗದ ಅವಧಿ ವರೆಗೆ] ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ [ಪಿ.ಆರ್.ಐ] ಆಡಳಿತ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.   

ಹಣಕಾಸಿನ ಪರಿಣಾಮಗಳು;

ಒಟ್ಟು 5911 ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಕೇಂದ್ರ ಸರ್ಕಾರ 3700 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರದ ಪಾಲು 2211 ಕೋಟಿ ರೂಪಾಯಿಗಳಾಗಿವೆ.
ಉದ್ಯೋಗ ಸೃಷ್ಟಿ ಸೇರಿದಂತೆ ಸಂಭವನೀಯ ಪ್ರಮುಖ ಪರಿಣಾಮಗಳು:

ಅನುಮೋದನೆ ನೀಡಿರುವ ಆರ್.ಜಿ.ಎಸ್.ಎ ಯೋಜನೆಯಿಂದ ದೇಶಾದ್ಯಂತ ಸಾಂಪ್ರದಾಯಿಕ ಸಂಸ್ಥೆಗಳು ಒಳಗೊಂಡಂತೆ 2.78 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ  ಆಡಳಿತ ಸಾಮರ್ಥ್ಯ ವೃದ್ಧಿಸುವ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಿಸಿಕೊಂಡು ಎಸ್.ಡಿ.ಜಿಗಳ ಮೂಲಕ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಒಳಗೊಳ್ಳುವ ಉದ್ದೇಶ ಹೊಂದಲಾಗಿದೆ. ಎಸ್.ಡಿ.ಜಿಗಳ ಪ್ರಮುಖ ಸಿದ್ಧಾಂತಗಳೆಂದರೆ ಯಾರನ್ನೂ ಹಿಂದೆ ಬಿಡಬಾರದು, ಮತ್ತಷ್ಟು ವೇಗವಾಗಿ ತಲುಪಬೇಕು ಮತ್ತು ಲಿಂಗ ಸಮಾನತೆಯ ಜೊತೆಗೆ ತರಬೇತಿ ಮಾದರಿಗಳು, ವಸ್ತುಗಳು ಸೇರಿದಂತೆ ಎಲ್ಲಾ ರೀತಿಯ ಸಾಮರ್ಥ್ಯ ವೃದ್ಧಿ, ಕಟ್ಟಡಗಳ ವಿನ್ಯಾಸ ವಿಷಯಗಳನ್ನು ಸಹ ಇದು ಒಳಗೊಂಡಿದೆ. ತಾತ್ವಿಕವಾಗಿ ಸಮ್ಮತಿಸಿರುವಂತೆ ರಾಷ್ಟ್ರೀಯ ಮಹತ್ವದ ವಿಷಯಗಳೆಂದರೆ  (i) ಬಡತನ ಮುಕ್ತ ಮತ್ತು ಹಳ್ಳಿಗಳಲ್ಲಿ ಜೀವನೋಪಾಯ ಮೇಲ್ದರ್ಜೆಗೇರಿಸುವುದು (ii) ಆರೋಗ್ಯಪೂರ್ಣ ಹಳ್ಳಿಗಳು (iii) ಮಕ್ಕಳ ಸ್ನೇಹಿ ಹಳ್ಳಿಗಳು, (iv) ಸಾಕಷ್ಟು ನೀರು ಹೊಂದಿರುವ ಹಳ್ಳಿಗಳು, (v) ಶುದ್ಧ ಮತ್ತು ಹಸಿರು ಹಳ್ಳಿಗಳು (vi) ಮೂಲ ಸೌಕರ್ಯದಲ್ಲಿ ಸ್ವಾವಲಂಬನೆಯಾಗಿರುವ ಹಳ್ಳಿಗಳು, (vii) ಸಾಮಾಜಿಕವಾಗಿ ಸುಭದ್ರವಾಗಿರುವ ಹಳ್ಳಿಗಳು, (viii) ಉತ್ತಮ ಆಡಳಿತವಿರುವ ಹಳ್ಳಿಗಳು ಮತ್ತು (ix) ಅಭಿವೃದ್ಧಿ ಹೊಂದಿರುವುದಾಗಿ ಘೋಷಿಸಲಾದ ಹಳ್ಳಿಗಳು.
ಪಂಚಾಯತ್ ಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು. ಈ ಸಂಸ್ಥೆಗಳು ತಳಮಟ್ಟಕ್ಕೆ ಸನಿಹದಲ್ಲಿರುತ್ತವೆ. ಪಂಚಾಯತ್ ಗಳಲ್ಲಿ ಸಮುದಾಯದ ಆರ್ಥಿಕಾಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ, ಎಲ್ಲರನ್ನೊಳಗೊಳ್ಳುವ ವ್ಯವಸ್ಥೆಯನ್ನು ಬಲಗೊಳಿಸುವುದನ್ನು ಉತ್ತೇಜಿಸುತ್ತದೆ.  ಪಿ.ಆರ್.ಐಗಳಲ್ಲಿ ಇ ಆಡಳಿತ ಬಳಕೆಯನ್ನು ಹೆಚ್ಚಿಸಿ ಪಾರದರ್ಶಕತೆ ಮತ್ತು ಸೇವಾ ವಲಯದಲ್ಲಿ ಸುಧಾರಣೆ ತರುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯು ವಿಶೇಷವಾಗಿ ದುರ್ಬಲ ಗುಂಪುಗಳ ಸಾಮಾಜಿಕ ಸೇರ್ಪಡೆ ಮಾಡಿಕೊಂಡು ಪರಿಣಾಮಕಾರಿ ಸಂಸ್ಥೆಗಳಂತೆ ಕಾರ್ಯನಿರ್ವಹಿಸಲು ಗ್ರಾಮ ಸಭೆಗಳನ್ನು ಬಲಪಡಿಸಲಾಗುತ್ತದೆ. ಅಗತ್ಯ ಮಾನವ ಸಂಪನ್ಮೂಲ ಮತ್ತು ಮೂಲ ಸೌಕರ್ಯಗಳೊಂದಿಗೆ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಆರ್.ಪಿ.ಐಗಳನ್ನು ಸಾಂಸ್ಥಿಕ ಚೌಕಟ್ಟಿನೊಳಗೆ ತಂದು ಸಾಮರ್ಥ್ಯ ವೃದ್ಧಿಗೊಳಿಸುವ ಗುರಿ ಹೊಂದಲಾಗಿದೆ.
ಎಸ್.ಡಿ.ಜಿಗಳ ಸಾಧನೆಯಲ್ಲಿ ಪಂಚಾಯತ್ ಗಳ ಪಾತ್ರವನ್ನು ಗುರುತಿಸಲು ಮತ್ತು ಆರೋಗ್ಯಕರ ಸ್ಪರ್ಧೆ ಕುರಿತಾಗಿ ಚೈತನ್ಯ ಮೂಡಿಸಲು ಪಂಚಾಯತ್ ಗಳನ್ನು ಪ್ರಗತಿಪರವಾಗಿ ಬಲಪಡಿಸಬೇಕು.
ಈ ವ್ಯವಸ್ಥೆಯಡಿ ಶಾಶ್ವತ ಹುದ್ದೆಗಳನ್ನು ಸೃಷ್ಟಿ ಮಾಡದೇ ಯೋಜನೆ ಅನುಷ್ಠಾನಕ್ಕಾಗಿ ಗುತ್ತಿಗೆ ಆಧಾರದ ಮೇಲೆ ಮಾನವ ಸಂಪನ್ಮೂಲ ನೇಮಿಸಿಕೊಳ್ಳುವ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೆಯ ಗುರಿ ತಲುಪಲು ತಾಂತ್ರಿಕ ನೆರವು ಕಲ್ಪಿಸಲಾಗುವುದು.    
ಫಲಾನುಭವಿಗಳ ಸಂಖ್ಯೆ ;

ಈ ಯೋಜನೆಯಡಿ ದೇಶಾದ್ಯಂತ ಸಾಂಪ್ರದಾಯಿಕ ಸಂಸ್ಥೆಗಳು ಒಳಗೊಂಡಂತೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸುಮಾರು 60 ಲಕ್ಷ ಜನಪ್ರತಿನಿಧಿಗಳು ಮತ್ತು ಇತರ ಪಾಲುದಾರರು ಫಲಾನುಭವಿಗಳಾಗಿದ್ದಾರೆ.

ವಿವರಗಳು;

(i)                    ಪರಿಷ್ಕೃತ ಆರ್.ಜಿ.ಎಸ್.ಎ ಕೇಂದ್ರ ಮತ್ತು ರಾಜ್ಯ ಘಟಕಗಳನ್ನು ಒಳಗೊಂಡಿದೆ. ಕೇಂದ್ರ ಘಟಕಗಳಿಗೆ ಭಾರತ ಸರ್ಕಾರ ಪೂರ್ಣ ಪ್ರಮಾಣದಲ್ಲಿ ನೆರವು ನೀಡುತ್ತದೆ. ಕೇಂದ್ರ ಹಾಗೂ ರಾಜ್ಯಗಳ ನೆರವು ಪ್ರಮಾಣ ಅನುಕ್ರಮವಾಗಿ  60:40 ರಷ್ಟಿದೆ. ಈಶಾನ್ಯ ರಾಜ್ಯಗಳು, ಗುಡ್ಡಗಾಡು ಪ್ರದೇಶಗಳನ್ನೊಳಗೊಂಡಿರುವ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ [ಯು.ಟಿ] ಜಮ್ಮು ಮತ್ತು ಕಾಶ್ಮೀರಕ್ಕೆ ಕೇಂದ್ರ ಮತ್ತು ರಾಜ್ಯದ ಪಾಲು ಅನುಕ್ರಮವಾಗಿ 90:10 ರಷ್ಟಿದೆ. ಇತರೆ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಕೊಡುಗೆ ಶೇಕಡ 100 ರಷ್ಟಿದೆ.

(ii)                  ಯೋಜನೆಯಡಿ ಕೇಂದ್ರ ಘಟಕ ಮತ್ತು ರಾಷ್ಟ್ರಮಟ್ಟದ ಚಟುವಟಿಕೆಗಳು, ಎರಡೂ ಅಂಶಗಳಿವೆ. ತಾಂತ್ರಿಕ ನೆರವಿಗೆ ರಾಷ್ಟ್ರೀಯ ಯೋಜನೆ, ಇ-ಪಂಚಾಯತ್ ಗೆ ಯಾಂತ್ರಿಕ ಮಾದರಿ ಯೋಜನೆ, ಸಂಶೋಧನೆ ಮತ್ತು ಮಾಧ್ಯಮ, ರಾಜ್ಯ ವಲಯದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ [ಪಿ.ಆರ್.ಐಗಳು] ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ [ಸಿಬಿ ಮತ್ತು ಟಿ], ಸಿಬಿ ಮತ್ತು ಟಿ ಗೆ ಸಾಂಸ್ಥಿಕ ನೆರವು, ದೂರ ಕಲಿಕೆ ಸೌಲಭ್ಯ, ಪಂಚಾಯತ್ ಭವನ [ಜಿ.ಪಿ] ನಿರ್ಮಾಣಕ್ಕೆ ಬೆಂಬಲ, ಗ್ರಾಮ ಪಂಚಾಯತ್ ಭವನಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ [ಸಿ.ಎಸ್.ಸಿಗಳು] ಸಹ ಸ್ಥಳಗಳು ಮತ್ತು ಈಶಾನ್ಯ ರಾಜ್ಯಗಳು, ಪಿ.ಇ.ಎಸ್.ಎ ಪ್ರದೇಶಗಳಲ್ಲಿ ಗ್ರಾಮ ಸಭೆಗಳನ್ನು ಬಲಪಡಿಸಲು ವಿಶೇಷ ನೆರವು, ನಾವಿನ್ಯತೆಗೆ ಬೆಂಬಲ, ಆರ್ಥಿಕಾಭಿವೃದ್ಧಿಗೆ ಸಹಕಾರ, ಆರ್ಥಿಕ ಬೆಳವಣಿಗೆ ಮತ್ತು ಆದಾಯ ಹೆಚ್ಚಿಸಿಕೊಳ್ಳಲು ನೆರವು ನೀಡಲಾಗುತ್ತದೆ.

(iii)               ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ವಿಸ್ತೃತವಾಗಿ ಯೋಜನೆಯ ಅನುಷ್ಠಾನ ಮತ್ತು ನಿಗಾ ಇಡಲು ಕ್ರಮ. ಪಂಚಾಯತ್ ಗಳು ಎಲ್ಲಾ ಚಟುವಟಿಕೆಗಳ ಕೇಂದ್ರ ಬಿಂದುಗಳಾಗಿವೆ ಮತ್ತು ಎಸ್.ಡಿ.ಜಿಗಳ ಗುರಿ ಸಾಧನೆಗೆ ವಿವಿಧ ಸಚಿವಾಲಯಗಳು/ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.    

(iv)                ಸಚಿವಾಲಯದಡಿ ಪರಿಷ್ಕೃತ ಆರ್.ಜಿ.ಎಸ್.ಎ 9 ವಿಷಯಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿ – ಎಸ್.ಡಿ.ಜಿ ಸಾಧಿಸಲು ಸರ್ಕಾರದ ಮೂರನೇ ಶ್ರೇಣಿಯನ್ನು ಅಭಿವೃದ್ಧಿಪಡಿಸಲು ಚುನಾಯಿತ ಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಯತ್ತ ತನ್ನ ಗಮನ ಕೇಂದ್ರೀಕರಿಸುತ್ತದೆ. 9 ವಿಷಯಗಳೆಂದರೆ (i) ಬಡತನ ಮುಕ್ತ ಮತ್ತು ಹಳ್ಳಿಗಳಲ್ಲಿ ಜೀವನೋಪಾಯ ವೃದ್ಧಿ, (ii) ಆರೋಗ್ಯವಂತ ಹಳ್ಳಿಗಳು, (iii) ಮಕ್ಕಳ ಸ್ನೇಹಿ ಹಳ್ಳಿಗಳು, (iv) ಹೆಚ್ಚು ಜಲ ಸಂಪನ್ಮೂಲ ಹೊಂದಿರುವ ಹಳ್ಳಿಗಳು, (v) ಶುದ್ಧ ಮತ್ತು ಹಸಿರು ಹಳ್ಳಿಗಳು, (vi) ಮೂಲ ಸೌಕರ್ಯದಲ್ಲಿ ಹಳ್ಳಿಗಳ ಸ್ವಾವಲಂಬನೆ, (vii) ಸಾಮಾಜಿಕ ಭದ್ರತೆ ಹೊಂದಿರುವ ಹಳ್ಳಿಗಳು, (viii) ಉತ್ತಮ ಆಡಳಿತ ಹೊಂದಿರುವ ಹಳ್ಳಿಗಳು, (ix) ಅಭಿವೃದ್ಧಿ ಹೊಂದಿರುವುದಾಗಿ ಘೋಷಿಸಲಾದ ಹಳ್ಳಿಗಳು.

(v)                  ಸುಸ್ಥಿರ ಅಭಿವೃದ್ಧಿ ಸಾಧಿಸುವ ಹಿನ್ನೆಲೆಯಲ್ಲಿ ಇತರೆ ಸಚಿವಾಲಯಗಳು/ ಇಲಾಖೆಗಳ ಸಾಮರ್ಥ್ಯ ವೃದ್ಧಿ ಕ್ರಮಗಳನ್ನು ತೆಗೆದುಕೊಳ್ಳುವುದು, ಸಾಂಪ್ರದಾಯಿಕ ಸಂಸ್ಥೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡುವವರು ಮತ್ತು ಪ್ರತಿನಿಧಿಗಳ ಇತರೆ ಪಾಲುದಾರರಿಗೆ ವಿವಿಧ ಸಚಿವಾಲಯಗಳು/ ಇಲಾಖೆಗಳಿಂದ ತರಬೇತಿ ಕಾರ್ಯಕ್ರಮಗಳ ಜಾರಿ.

(vi)                ಎಸ್.ಡಿ.ಜಿಗಳ ಸಾಧನೆಯಲ್ಲಿ ಪಂಚಾಯತ್ ಗಳ ಪಾತ್ರವನ್ನು ಗುರುತಿಸುವುದು ಮತ್ತು ಆರೋಗ್ಯಕರ ಸ್ಪರ್ಧೆಯ ಸ್ಫೂರ್ತಿ ಹೆಚ್ಚಿಸುವುದು, ಪಂಚಾಯತ್ ಗಳ ಸಾಮರ್ಥ್ಯದ ಮೌಲ್ಯ ಮಾಪನ ಮತ್ತು ಪ್ರಶಸ್ತಿಗಳನ್ನು ಪ್ರಯೋಜಿಸುವ ನಿಟ್ಟಿನಲ್ಲಿ ನೋಡೆಲ್ ಸಚಿವಾಲಯಗಳ ಪಾತ್ರ,  

(vii)              ಆಳವಾದ ವಿಶ್ಲೇಷಣೆ, ಪುರಾವೆ ಆಧಾರಿತ ಸಂಶೋಧನೆ, ಅಧ್ಯಯನ ಮತ್ತು ಪಿ.ಆರ್.ಐಗಳಿಗೆ ಸಂಬಂಧಿಸಿದ ವಲಯಗಳಲ್ಲಿ ಮೌಲ್ಯಮಾಪನಕ್ಕೆ ವ್ಯವಸ್ಥೆ, ಜಾಗೃತಗೊಂಡ ಪೀಳಿಗೆಗಳಿಗೆ ಸಂಬಂಧಿಸಿದ ಚಟುವಟಿಕೆಗಳು, ಗ್ರಾಮೀಣ ಸಮೂಹವನ್ನು ಸಂವೇದನೆಗೊಳಿಸುವುದು, ವಿದ್ಯುನ್ಮಾನ, ಮುದ್ರಣ, ಸಾಮಾಜಿಕ ಮತ್ತು ಸಾಂಪ್ರದಾಯಿಕ ಮಾಧ್ಯಮಗಳ ಮೂಲಕ ಸರ್ಕಾರದ ನೀತಿಗಳು ಮತ್ತು ಯೋಜನೆಗಳನ್ನು ಪ್ರಚಾರ ಮಾಡಲು ಕ್ರಮ ಕೈಗೊಳ್ಳಲಾಗುವುದು.  

ಕಾರ್ಯತಂತ್ರ ಮತ್ತು ಗುರಿಗಳ ಅನುಷ್ಠಾನ ;

ತಮ್ಮ ಪಾತ್ರಗಳ ನಿರ್ವಹಣೆಗಾಗಿ ಮಂಜೂರು ಮಾಡಲಾದ ಚಟುವಟಿಕೆಗಳನ್ನು ಪೂರ್ಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕಾಗುತ್ತದೆ. ತನ್ನ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿ ಕೇಂದ್ರ ಸರ್ಕಾರದಿಂದ ನೆರವು ಯಾಚಿಸಬೇಕಾಗುತ್ತದೆ. ಬೇಡಿಕೆ ಆಧಾರಿತವಾಗಿ ಯೋಜನೆ ಅನುಷ್ಠಾನಗೊಳಿಸಬೇಕು.

ರಾಜ್ಯಗಳು/ ಜಿಲ್ಲೆಗಳನ್ನು ಒಳಗೊಂಡಿದೆ;

ಯೋಜನೆಯನ್ನು ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಣೆ ಮಾಡಲಾಗುವುದು ಮತ್ತು ಪಂಚಾಯತ್ ಗಳು ಅಸ್ಥಿತ್ವದಲ್ಲಿಲ್ಲದ 11 ಪ್ರದೇಶಗಳಲ್ಲಿ ಸರ್ಕಾರದ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಸಹ ಒಳಗೊಳ್ಳುವಂತೆ ಮಾಡಲಾಗುತ್ತದೆ.

ಹಿನ್ನೆಲೆ:

ಹಿಂದಿನ ಹಣಕಾಸು ಸಚಿವರು, 2016 – 17 ರ ತಮ್ಮ ಬಜೆಟ್ ನಲ್ಲಿ ಪುನರ್ ರಚಿತ ಹೊಸ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್ [ಆರ್.ಜಿ.ಎಸ್.ಎ] ಅನ್ನು ಘೋಷಿಸಿದ್ದರು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು [ಎಸ್.ಡಿ.ಜಿ] ಸಾಧಿಸಲು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಆಡಳಿತ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವುದು ಯೋಜನೆಯ ಉದ್ದೇಶವಾಗಿತ್ತು. ನೀತಿ ಆಯೋಗದ ಉಪಾಧ್ಯಕ್ಷರ ಅಧ್ಯಕ್ಷತೆಯ ಸಮಿತಿ ಶಿಫಾರಸ್ಸಿನಂತೆ ಕೇಂದ್ರ ಸಚಿವ ಸಂಪುಟ ಸಭೆ ಕೇಂದ್ರ ಪುರಸ್ಕೃತ ಆರ್.ಜಿ.ಎಸ್.ಎ ಯೋಜನೆಗೆ 21.04.2018 ರಂದು 2018-19 ರಿಂದ 2021-22 (01.04.2018 ರಿಂದ 31.03.2022) ರ ಅವಧಿಗೆ ಅನುಮೋದನೆ ನೀಡಿತ್ತು.

ಆರ್.ಜಿ.ಎಸ್.ಎ ಯೋಜನೆಯ ಬಗ್ಗೆ 2021 – 22 ರಲ್ಲಿ ಮೂರನೇ ವ್ಯಕ್ತಿಗಳಿಂದ ಮೌಲ್ಯ ಮಾಪನ ನಡೆಸಲಾಯಿತು. ಆರ್.ಜಿ.ಎಸ್.ಎ ಯೋಜನೆಯ ಮೌಲ್ಯಮಾಪನ ವರದಿ ಬಗ್ಗೆ ಮೆಚ್ಚುಗೆ ಸೂಚಿಸಲಾಯಿತು ಮತ್ತು ಪಿ.ಆರ್.ಐಗಳನ್ನು ಬಲಪಡಿಸಲು ಯೋಜನೆ ಮುಂದುವರಿಸುವಂತೆ ಶಿಫಾರಸ್ಸು ಮಾಡಲಾಯಿತು. ಮುಂದುವರಿದಂತೆ ಸಿಬಿ ಮತ್ತು ಟಿ ನಿರಂತರ ಪ್ರಕ್ರಿಯೆಯಾಗಿದ್ದು, ಪ್ರತಿ ಐದು ವರ್ಷಗಳಲ್ಲಿ ಬಹುಪಾಲು ಪಂಚಾಯತ್ ಪ್ರತಿನಿಧಿಗಳು ಹೊಸದಾಗಿ ಚುನಾಯಿತರಾಗುತ್ತಾರೆ. ಇವರಿಗೆ ಸ್ಥಳೀಯ ಆಡಳಿತದಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಲು ಜ್ಞಾನ, ಜಾಗೃತಿ, ವರ್ತನೆ ಮತ್ತು ಕೌಶಲ್ಯಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮೂಲಭೂತ ದೃಷ್ಟಿಕೋನ ಮತ್ತು ಹೊಸದಾಗಿ ತರಬೇತಿಗಳನ್ನು ಅಂದಾಜು ಮಾಡುವುದು, ಅವರ ಕಡ್ಡಾಯ ಕೆಲಸಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವ ಅಗತ್ಯವಿದೆ. ಆದ್ದರಿಂದ ಪರಿಷ್ಕರಿಸಿದ ಆರ್.ಜಿ.ಎಸ್.ಎ ಮುಂದುವರಿಸುವ ಪ್ರಸ್ತಾಪವನ್ನು  01.04.2022 ದಿಂದ 31.03.2026 [ಹದಿನೈದನೇ ಹಣಕಾಸು ಆಯೋಗದ ಅವಧಿಯೊಳಗೆ] ಅನುಷ್ಠಾನಕ್ಕೆ ಸಿದ್ಧಪಡಿಸಲಾಗಿದೆ.   

ಯೋಜನೆಯ ವಿವರಗಳು ಮತ್ತು ಪ್ರಗತಿ ಈಗಾಗಲೇ ಪ್ರಗತಿಯಲ್ಲಿದೆ”

     i.         2018-19 ರಿಂದ 2021-22ರ ಹಣಕಾಸು ವರ್ಷಗಳಿಗೆ ಅನ್ವಯವಾಗುವಂತೆ ಕೇಂದ್ರ ಪುರಸ್ಕೃತ ಆರ್.ಜಿ.ಎಸ್.ಎ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಸಭೆ 21.04.2018 ರಂದು ಅನುಮೋದನೆ ನೀಡಿತ್ತು. ಪಂಚಾಯತ್ ಗಳ ಪ್ರೋತ್ಸಾಹ, ಕೇಂದ್ರ ಮಟ್ಟದಲ್ಲಿ ಇತರೆ ಚಟುವಟಿಕೆಗಳನ್ನು ಒಳಗೊಂಡಂತೆ ಯಾಂತ್ರೀಕೃತವಾಗಿ ಇ-ಪಂಚಾಯತ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಘಟಕ ಪ್ರಾಥಮಿಕವಾಗಿ ಸಿಬಿ ಮತ್ತು ಟಿ ಚಟುವಟಿಕೆಗಳು ಸಿಬಿ ಅಂಡ್ ಟಿ ಗಾಗಿ ಸಾಂಸ್ಥಿಕ ಕಾರ್ಯವಿಧಾನ ಮತ್ತು ಸೀಮಿತ ಪ್ರಮಾಣದಲ್ಲಿ ಇತರೆ ಚಟುವಟಿಕೆಗಳನ್ನು ಇದು ಒಳಗೊಂಡಿದೆ.  

    ii.         ಪಂಚಾಯತ್ ಗಳ ಪ್ರೋತ್ಸಾಹ ಮತ್ತು ಇ ಪಂಚಾಯತ್ ನಲ್ಲಿ ಯಾಂತ್ರೀಕೃತವಾಗಿ ಆರ್.ಜಿ.ಎಸ್.ಎ ಯೋಜನೆಯನ್ನು 2018-19 ದಿಂದ 2021-22 ಜಾರಿ ಮಾಡಲಾಗಿದೆ.  (ಈವರೆಗೆ 31.03.2022 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು, ಪಂಚಾಯತ್ ಗಳು, ಇತರೆ ಅನುಷ್ಠಾನ ಸಂಸ್ಥೆಗಳಿಗೆ  2364.13 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.]  

  iii.         2018-19 ರಿಂದ 2021-22 (31.03.2022ರ ವರೆಗೆ ) ಆರ್.ಪಿ.ಐ ಗಳಡಿ ಬರುವ ಸುಮಾರು 1.36 ಕೋಟಿ ಚುನಾಯಿತ ಪ್ರತಿನಿಧಿಗಳು, ಕಾರ್ಯನಿರ್ವಹಿಸುತ್ತಿರುವವರು ಮತ್ತು ಇತರೆ ಪಾಲುದಾರರು ಯೋಜನೆಯಡಿ ವಿವಿಧ ಮತ್ತು ಬಹುಹಂತದ ತರಬೇತಿಗಳನ್ನು ಪಡೆದುಕೊಂಡಿದ್ದಾರೆ.  

 

*****



(Release ID: 1816558) Visitor Counter : 327