ರಕ್ಷಣಾ ಸಚಿವಾಲಯ
azadi ka amrit mahotsav

ಪಿನಾಕಾ ಎಂಕೆ-1 (ವರ್ಧಿತ) ರ‍್ಯಾಕೆಟ್ ವ್ಯವಸ್ಥೆ ಮತ್ತು ಪಿನಾಕಾ ಪ್ರದೇಶ ಆಕ್ರಮಣ ನಿಗ್ರಹ ರಾಕೆಟ್ ವ್ಯವಸ್ಥೆಗಳ ಯಶಸ್ವಿ ಹಾರಾಟ ಪರೀಕ್ಷಾರ್ಥ ಪ್ರಯೋಗ ನಡೆಸಿದ ಡಿ.ಆರ್.ಡಿ.ಓ ಮತ್ತು ಭಾರತೀಯ ಸೇನೆ

Posted On: 09 APR 2022 5:35PM by PIB Bengaluru

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ಮತ್ತು ಭಾರತೀಯ ಸೇನೆಯು ಪೋಖ್ರಾನ್ ಪರೀಕ್ಷಾ ತಾಣದಲ್ಲಿ ಪಿನಾಕಾ ಎಂಕೆ-1 (ವರ್ಧಿತ) ರ‍್ಯಾಕೆಟ್ ವ್ಯವಸ್ಥೆ (ಇಪಿಆರ್.ಎಸ್) ಮತ್ತು ಪಿನಾಕಾ ಪ್ರದೇಶ ಆಕ್ರಮಣ ನಿಗ್ರಹ (ಎಡಿಎಂ) ರ‍್ಯಾಕೆಟ್ ವ್ಯವಸ್ಥೆಗಳ ಹಾರಾಟದ ಯಶಸ್ವಿ ಪರೀಕ್ಷೆ ನಡೆಸಿವೆ. ಕಳೆದ ಹದಿನೈದು ದಿನಗಳಲ್ಲಿ ಒಟ್ಟು 24 ಇ.ಪಿ.ಆರ್.ಎಸ್ ರ‍್ಯಾಕೆಟ್ ಗಳನ್ನು ವಿವಿಧ ಶ್ರೇಣಿಗಳಿಗೆ ಹಾರಿಸಲಾಗಿದೆ. ರ‍್ಯಾಕೆಟ್ ಗಳು ಎಲ್ಲಾ ಪ್ರಾಯೋಗಿಕ ಉದ್ದೇಶಗಳನ್ನು ತೃಪ್ತಿಕರವಾಗಿ ಪೂರೈಸುವ ಮೂಲಕ ಅಗತ್ಯವಾದ ನಿಖರತೆ ಮತ್ತು ಸ್ಥಿರತೆಯನ್ನು ಸಾಧಿಸಿವೆ. ಈ ಪರೀಕ್ಷೆಗಳೊಂದಿಗೆ, ಉದ್ಯಮದಿಂದ ಇ.ಪಿ.ಆರ್.ಎಸ್ ನ ತಂತ್ರಜ್ಞಾನ ಅಳವಡಿಸಿಕೊಳ್ಳುವಿಕೆಯ ಆರಂಭಿಕ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಮತ್ತು ರ‍್ಯಾಕೆಟ್ ವ್ಯವಸ್ಥೆಯ ಬಳಕೆದಾರ ಪ್ರಯೋಗಗಳು / ಸರಣಿ ಉತ್ಪಾದನೆಗೆ ಉದ್ಯಮದ ಪಾಲುದಾರರು ಸಿದ್ಧರಾಗಿದ್ದಾರೆ.
ಪಿನಾಕಾ ರ‍್ಯಾಕೆಟ್ ವ್ಯವಸ್ಥೆಯನ್ನು ಡಿಆರ್.ಡಿ.ಒ.ದ ಮತ್ತೊಂದು ಪುಣೆ ಮೂಲದ ಪ್ರಯೋಗಾಲಯವಾದ ಹೈ ಎನರ್ಜಿ ಮೆಟೀರಿಯಲ್ಸ್ ಸಂಶೋಧನಾ ಪ್ರಯೋಗಾಲಯದ ಬೆಂಬಲದೊಂದಿಗೆ ಪುಣೆಯ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.
ಇಪಿಆರ್.ಎಸ್ ಪಿನಾಕಾ ರೂಪಾಂತರವಾಗಿ ಮೇಲ್ದರ್ಜೆಗೇರಿದ ಆವೃತ್ತಿಯಾಗಿದ್ದು, ಇದು ಕಳೆದ ಒಂದು ದಶಕದಿಂದ ಭಾರತೀಯ ಸೇನೆಯೊಂದಿಗೆ ಸೇವೆ ಒದಗಿಸುತ್ತಿದೆ. ಉದಯೋನ್ಮುಖ ಅವಶ್ಯಕತೆಗಳನ್ನು ಪೂರೈಸಲು ಶ್ರೇಣಿಯನ್ನು ಹೆಚ್ಚಿಸುವ ಸುಧಾರಿತ ತಂತ್ರಜ್ಞಾನಗಳೊಂದಿಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಪಿನಾಕಾದ ವರ್ಧಿತ ಶ್ರೇಣಿಯ ಆವೃತ್ತಿಯ ಕಾರ್ಯಕ್ಷಮತೆಯ ಪರಿಣಾಮಕಾರಿತ್ವ ಸಾಬೀತಾದ ನಂತರ, ಈ ತಂತ್ರಜ್ಞಾನವನ್ನು ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್ (ಎಂಐಎಲ್) ಮತ್ತು ನಾಗ್ಪುರ ಎಕನಾಮಿಕ್ ಎಎಕ್ಸ್ ಪ್ಲೋಸಿವ್ಸ್ ಲಿಮಿಟೆಡ್ ನಂತಹ ಕೈಗಾರಿಕೆಗಳಿಗೆ ವರ್ಗಾಯಿಸಲಾಗಿತ್ತು. ಈ ಅಭಿಯಾನದ ಸಮಯದಲ್ಲಿ ಡಿಆರ್.ಡಿ.ಓದಿಂದ ತಂತ್ರಜ್ಞಾನದ ವರ್ಗಾವಣೆಯ ಅಡಿಯಲ್ಲಿ ಎಂಐಎಲ್ ತಯಾರಿಸಿದ ರ‍್ಯಾಕೆಟ್ ಗಳ ಹಾರಾಟದ ಪರೀಕ್ಷೆ ನಡೆಸಲಾಯಿತು. ಪಿನಾಕಾ ರ‍್ಯಾಕೆಟ್ ವ್ಯವಸ್ಥೆಯಲ್ಲಿ ಬಳಸಬಹುದಾದ ಶಸ್ತ್ರಾಸ್ತ್ರಗಳು ಮತ್ತು ಫ್ಯೂಜ್ ಗಳ ವಿವಿಧ ರೂಪಾಂತರಗಳನ್ನು ಪೋಖ್ರಾನ್ ಕ್ಷೇತ್ರ ಉಡಾವಣೆ ಶ್ರೇಣಿಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿ.ಆರ್.ಡಿ.ಒ ಅಧ್ಯಕ್ಷ ಡಾ. ಜಿ.ಸತೀಶ್ ರೆಡ್ಡಿ ಅವರು ಸುಧಾರಿತ ತಂತ್ರಜ್ಞಾನಗಳ ಆಧಾರದ ಮೇಲೆ ಹೊಸ ವಿನ್ಯಾಸದ ರ‍್ಯಾಕೆಟ್ ಗಳ ಹಾರಾಟದ ಪ್ರಯೋಗಗಳನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ತಂಡವನ್ನು ಅಭಿನಂದಿಸಿದ್ದಾರೆ.

***


(Release ID: 1815436) Visitor Counter : 255