ಪ್ರಧಾನ ಮಂತ್ರಿಯವರ ಕಛೇರಿ

ಪಶ್ಚಿಮ ಬಂಗಾಳದ ಶ್ರೀಧಾಮ ಠಾಕೂರನಗರದಲ್ಲಿ ಆಯೋಜನೆಯಾಗಿದ್ದ ಮಟುವಾ ಧರ್ಮ ಮಹಾ ಮೇಳವನ್ನುದ್ದೇಶಿಸಿ ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

Posted On: 29 MAR 2022 10:25PM by PIB Bengaluru

ಜೈ ಹರಿ ಬೋಲ್ ! ಜೈ ಹರಿ ಬೋಲ್ !. ಶ್ರೀ ಶ್ರೀ ಹರಿಚಂದ್ ಠಾಕೂರ್ ಅವರ 211 ನೇ ಜನ್ಮವರ್ಷಾಚರಣೆಯ ಸಂದರ್ಭದಲ್ಲಿ ಎಲ್ಲಾ ಭಕ್ತರಿಗೆ, ಸಾಧುಗಳಿಗೆ, ಗೋಸಾಯಿಗಳಿಗೆ, ನಾಯಕರಿಗೆ ಮತ್ತು ಮಟುವಾ ಸಹೋದರರಿಗೆ, ನಮಸ್ಕಾರ!

ನನ್ನ ಸಂಪುಟ ಸಹೋದ್ಯೋಗಿ ಮತ್ತು ಅಖಿಲ ಭಾರತ ಮಟುವಾ ಮಹಾಸಂಘದ ಸಂಘ ಅಧಿಪತಿ ಶ್ರೀ ಶಂತನು ಠಾಕೂರ್ ಜೀ, ಶ್ರೀ ಮಂಜುಲ್ ಕೃಷ್ಣ ಠಾಕೂರ್ ಜೀ, ಶ್ರೀಮತಿ ಛಬ್ಬಿ ರಾಣಿ ಠಾಕೂರ್ ಜೀ, ಶ್ರೀ ಸುಬ್ರತಾ ಠಾಕೂರ್ ಜೀ, ಶ್ರೀ ರಬೀಂದ್ರನಾಥ ಬಿಸ್ವಾಸ್ ಜೀ, ಇತರ ಗಣ್ಯರೇ ಮತ್ತು ಇಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಸೇರಿರುವ ನನ್ನ ಪ್ರೀತಿಯ ಸಹೋದರರೇ ಹಾಗು ಸಹೋದರಿಯರೇ!.

ಶ್ರೀ ಶ್ರೀ ಗುರುಚಂದ್ ಠಾಕೂರ್ ಜೀ ಮತ್ತು ಶ್ರೇಷ್ಠ ಮಟುವಾ ಸಂಪ್ರದಾಯಕ್ಕೆ ಒರಾಕಂಡಿಯಲ್ಲಿ ನನ್ನ ನಮನಗಳನ್ನು ಸಲ್ಲಿಸುವ ಅವಕಾಶ ಪಡೆದ ಅದೃಷ್ಟವಂತನೆಂಬ ಭಾವನೆ ನನ್ನದಾಗಿದೆ. ಇಂದು ಪವಿತ್ರ ಯಾತ್ರಾ ಕೇಂದ್ರವಾದ ಠಾಕೂರ್ ಬಾರಿಯಲ್ಲಿ ನನಗೆ ನಿಮ್ಮೆಲ್ಲರ ಜೊತೆ ಸಂವಾದ ನಡೆಸುವ ಮತ್ತು ತಂತ್ರಜ್ಞಾನದ ಮೂಲಕ ನಿಮ್ಮನ್ನು ನೋಡುವ ಅವಕಾಶ ಲಭಿಸಿದೆ. ನಾನು ಒರಾಕುಂಡಿಗೆ ಭೇಟಿ ನೀಡಿದಾಗ, ನನಗೆ ಬಹಳ ಪ್ರೀತಿ ಮತ್ತು ಆಶೀರ್ವಾದ ಸಿಕ್ಕಿದೆ. ಠಾಕುರ್ ಬರಿ ಸದಾ ಕಾಲವೂ ನನಗೆ ಬಹಳ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದೆ ಎಂಬುದನ್ನು ಪ್ರತ್ಯೇಕ ಹೇಳಬೇಕಾಗಿಲ್ಲ.

ಸ್ನೇಹಿತರೇ,

ಮಟುವಾ ಧರ್ಮ ಮಹಾಮೇಳಕ್ಕೆ ಮತ್ತು ಮಟುವಾ ಸಂಪ್ರದಾಯಕ್ಕೆ ನನ್ನ ಗೌರವ ಮತ್ತು ಭಕ್ತಿಯನ್ನು ಸಲ್ಲಿಸುವ ಸಂದರ್ಭ ಇದು. ಶ್ರೀ ಹರಿಚಂದ ಠಾಕೂರ್ ಜೀ ಅವರು ಸ್ಥಾಪಿಸಿದ ಮೌಲ್ಯಗಳಿಗೆ ನಮ್ಮ ಭಕ್ತಿಯನ್ನು ಸಮರ್ಪಿಸುವ ಸಂದರ್ಭ ಇದು. ಈ ಮೌಲ್ಯಗಳನ್ನು ಗುರುಚಂದ್ ಠಾಕೂರ್ ಜೀ ಮತ್ತು ಬೋರೋ ಮಾ ಅವರು ಇನ್ನಷ್ಟು ಬಲಿಷ್ಟಗೊಳಿಸಿದ್ದಾರೆ. ಮತ್ತು ಇಂದು ಈ ಸಂಪ್ರದಾಯ ಶಂತನು ಜೀ ಅವರ ಸಹಕಾರದಿಂದ ಹೆಚ್ಚು ಹೆಚ್ಚು ವಿಸ್ತರಿಸುತ್ತಿದೆ. ನಾವು ಏಕತೆ, ಭಾರತೀಯತೆ ಮತ್ತು ಆಧುನಿಕತೆಯ ಅಳವಡಿಕೆಗೆ ಸಂಬಂಧಿಸಿದ ಪಾಠಗಳನ್ನು ಶ್ರೇಷ್ಟ ಮಟುವಾ ಸಂಪ್ರದಾಯದ ನಮ್ಮ ನಂಬಿಕೆಗಳಿಂದ ಕಲಿತಿದ್ದೇವೆ. ಇಂದು ನಾವು ಸ್ವಾರ್ಥಯುತವಾದ ಹಿತಾಸಕ್ತಿಗಳಿಗಾಗಿ ರಕ್ತಪಾತ ನಡೆಯುವುದನ್ನು ನೋಡಿದಾಗ, ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಡೆಯುವುದನ್ನು ನೋಡುವಾಗ, ಭಾಷೆ ಮತ್ತು ವಲಯಗಳ ಆಧಾರದ ಮೇಲೆ  ತಾರತಮ್ಯ  ಮಾಡುವುದನ್ನು ನೋಡಿದಾಗ, ಇಂತಹ ಸಂದರ್ಭಗಳಲ್ಲೆಲ್ಲ ಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಅವರ ಜೀವನ ಮತ್ತು ಅವರ ತತ್ವಜ್ಞಾನ ಬಹಳ ಪ್ರಮುಖವಾದುದು ಎಂದೆನಿಸುತ್ತದೆ. ಆದುದರಿಂದ ಈ ಉತ್ಸವ ಏಕ ಭಾರತ್, ಶ್ರೇಷ್ಠ ಭಾರತ್ ಮೌಲ್ಯಗಳನ್ನು ಬಲಪಡಿಸುತ್ತದೆ. 

ಸಹೋದರರೇ ಮತ್ತು ಸಹೋದರಿಯರೇ,

ನಮ್ಮ ಸಂಸ್ಕೃತಿ, ನಮ್ಮ ನಾಗರಿಕತೆ ಬಹಳ ಶ್ರೇಷ್ಠ ಎಂದು ಆಗಾಗ ಹೇಳುತ್ತಿರುತ್ತೇವೆ. ಅದಕ್ಕೆ ನಿರಂತರತೆ ಇರುವುದರಿಂದ ಅದು ಬಹಳ ಶ್ರೇಷ್ಠವಾಗಿದೆ, ಅದಕ್ಕೆ ಹರಿವಿದೆ; ತನ್ನನ್ನು ತಾನು ಸಶಕ್ತವನ್ನಾಗಿಸಿಕೊಳ್ಳುವ ಸಹಜ ಪ್ರವೃತ್ತಿ ಇದೆ. ಅದು ನದಿಯಂತೆ, ಅದು ತನ್ನ ದಾರಿಯನ್ನು ಮಾಡಿಕೊಳ್ಳುತ್ತದೆ ಮತ್ತು ತನ್ನ ದಾರಿಯಲ್ಲಿ ಬರುವ ಯಾವುದೇ ಅಡೆ ತಡೆಗಳಿಗೆ ಹೊಂದಿಕೊಂಡು ಮುಂದೆ ಸಾಗುತ್ತದೆ. ಈ ಶ್ರೇಷ್ಟತೆಯ ಕೀರ್ತಿ ಸಾಮಾಜಿಕ ಸುಧಾರಣೆಯ ಹರಿವು ಸ್ಥಗಿತಗೊಳ್ಳದಂತೆ ನೋಡಿಕೊಂಡ  ಹರಿಚಂದ್ ಠಾಕೂರ್ ಜೀ ಅವರಂತಹ ಸುಧಾರಕರಿಗೆ ಸಲ್ಲುತ್ತದೆ.”ಹೋರಿ-ಲೀಲಾ-ಅಮ್ರಿತೋ” ಹಾಡುವ   ಶ್ರೀ ಶ್ರೀ ಹರಿಚಂದ ಠಾಕೂರ್  ಜೀ ಅವರ ಸಂದೇಶಗಳನ್ನು ಅರ್ಥ ಮಾಡಿಕೊಂಡವರು ತನ್ನಿಂದ ತಾನೇ ಹೇಳುತ್ತಾರೆ -ತಾನು ಶತಮಾನಗಳನ್ನು ಮುಂದಾಗಿಯೇ ಕಂಡಿರುವೆ ಎಂಬುದಾಗಿ. ಇಂದು ಜಗತ್ತು ಮಾತನಾಡುತ್ತಿರುವ ಲಿಂಗ ವ್ಯವಸ್ಥೆಯನ್ನು ಹರಿಚಂದ ಠಾಕೂರ್ ಜೀ ಅವರು 18 ನೇ ಶತಮಾನದಲ್ಲಿಯೇ ಆಂದೋಲನವಾಗಿಸಿದ್ದರು. ಅವರು ಹೆಣ್ಣು ಮಕ್ಕಳ ಶಿಕ್ಷಣ ಹಾಗು ದುಡಿಯುವ ಹಕ್ಕಿನ ಪರವಾಗಿ ತಮ್ಮ ಧ್ವನಿ ಎತ್ತಿದ್ದರು. ಮತ್ತು ಅವರು ತಾಯಂದಿರ, ಸಹೋದರಿಯರ, ಹೆಣ್ಣು ಮಕ್ಕಳ ಘನತೆಯನ್ನು ಸಾಮಾಜಿಕ ಚಿಂತನೆಯಲ್ಲಿ ಮುನ್ನೆಲೆಗೆ ತರಲು ಪ್ರಯತ್ನಿಸಿದ್ದರು. ಆ ಕಾಲಾವಧಿಯಲ್ಲಿ ಮಹಿಳಾ ಕೋರ್ಟುಗಳು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಬಗ್ಗೆ ಕಾರ್ಯನಿರತರಾಗಿದ್ದರು. ಇದು ಅವರ ದೂರದೃಷ್ಟಿ ಏನಾಗಿತ್ತು ಮತ್ತು ಅವರ ಆಂದೋಲನ ಯಾವ ರೀತಿಯದಾಗಿತ್ತು ಎಂಬುದನ್ನು ಸಾರುತ್ತದೆ!. 

ಸಹೋದರರೇ ಮತ್ತು ಸಹೋದರಿಯರೇ,

ಇಂದು,  ಭಾರತವು ಬೇಟಿ ಬಚಾವೋ, ಬೇಟಿ ಪಡಾವೋ ಆಂದೋಲನವನ್ನು ಯಶಸ್ವಿಗೊಳಿಸಿರುವಾಗ, ತಾಯಂದಿರು-ಸಹೋದರಿಯರು-ಹೆಣ್ಣುಮಕ್ಕಳಿಗೆ ಸಂಬಂಧಿಸಿ  ಸ್ವಚ್ಛತೆ, ಆರೋಗ್ಯ ಮತ್ತು ಆತ್ಮಾಭಿಮಾನದಂತಹ ಸಂಗತಿಗಳನ್ನು  ಗೌರವಿಸುತ್ತಿರುವಾಗ ; ಶಾಲೆ ಮತ್ತು ಕಾಲೇಜುಗಳಲಿ ಹೆಣ್ಣು ಮಕ್ಕಳು ತಮ್ಮ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುತ್ತಿರುವಾಗ; ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳು ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಗಂಡು ಮಕ್ಕಳ ಜೊತೆ ಹೆಗಲೆಣೆಯಾಗಿ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡುತ್ತಿರುವುದನ್ನು ನಾವು ಕಾಣುತ್ತಿರುವಾಗ ನಾವು ನಿಜವಾಗಿಯೂ ಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಅವರಂತಹ ಶ್ರೇಷ್ಠ ವ್ಯಕ್ತಿತ್ವಗಳನ್ನು ಗೌರವಿಸುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಸರಕಾರವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಆಧಾರದ ಮೇಲೆ ಸರಕಾರಿ ಯೋಜನೆಗಳನ್ನು ಜನರತ್ತ ಕೊಂಡೊಯ್ಯುತ್ತಿರುವಾಗ, ಪ್ರತಿಯೊಬ್ಬರ ಪ್ರಯತ್ನವೂ ರಾಷ್ಟ್ರದ ಅಭಿವೃದ್ಧಿಯ ಶಕ್ತಿಯಾಗುತ್ತಿರುವಾಗ, ನಾವು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಾಣ ಮಾಡುವತ್ತ ಸಾಗುತ್ತೇವೆ.

ಸ್ನೇಹಿತರೇ,

ಭಾರತದ ಅಭಿವೃದ್ಧಿಯಲ್ಲಿ ಮಟುವಾ ಸಮಾಜದ ಸಹಭಾಗಿತ್ವ ಬಹಳ ನಿರ್ಣಾಯಕವಾದುದು. ಆದುದರಿಂದ ಕೇಂದ್ರ ಸರಕಾರ ಸಮಾಜದೊಳಗಣ ಪ್ರತೀ ಕುಟುಂಬದ ಜೀವನವನ್ನು ಸುಲಭಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಕೇಂದ್ರ ಸರಕಾರದ ಪ್ರತಿಯೊಂದು ಸಾರ್ವಜನಿಕ ಕಲ್ಯಾಣ ಯೋಜನೆಯೂ ಅತ್ಯಂತ ತ್ವರಿತಗತಿಯಲ್ಲಿ ಮಟುವಾ ಕುಟುಂಬಗಳಿಗೆ ತಲುಪುವಂತೆ ಮಾಡಲು ರಾಜ್ಯ ಸರಕಾರವನ್ನು ಉತ್ತೇಜಿಸಲಾಗುತ್ತಿದೆ. ನಾವು ಪಕ್ಕಾ ಮನೆಗಳನ್ನು ಒದಗಿಸಲು, ನಲ್ಲಿ ನೀರು, ಉಚಿತ ಪಡಿತರ, 60 ವರ್ಷ ದಾಟಿದವರಿಗೆ ಪಿಂಚಣಿ ಮತ್ತು ಭಾರತದ ಜನತೆಗೆ ಲಕ್ಷಾಂತರ ರೂಪಾಯಿಗಳ ವಿಮಾ ಸೌಲಭ್ಯಗಳನ್ನು ಒದಗಿಸಲು ಅವಿರತ ಕಾರ್ಯತತ್ಪರರಾಗಿದ್ದೇವೆ. 100% ಮಟುವಾ ಕುಟುಂಬಗಳು ಇಂತಹ ಪ್ರತೀ ಯೋಜನೆಗಳ ಅಡಿಯಲ್ಲಿ ಬರುವುದನ್ನು ಖಾತ್ರಿಪಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

ಸ್ನೇಹಿತರೇ,

ಶ್ರೀ ಶ್ರೀ ಹರಿಚಂದ ಠಾಕೂರ್ ಜೀ ಅವರು ಇನ್ನೊಂದು ಸಂದೇಶ ನೀಡಿದ್ದಾರೆ, ಅದು “ಅಜಾದಿ ಕಾ ಅಮೃತ ಕಾಲ”ದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆಯ ಮೂಲ. ದೈವಿಕ ಭಕ್ತಿ, ಪ್ರೀತಿಯಲ್ಲದೆ ಅವರು ನಮ್ಮ ಕರ್ತವ್ಯಗಳ ಬಗ್ಗೆಯೂ ನಮ್ಮಲ್ಲಿ ಅರಿವು ಮೂಡಿಸಿದ್ದಾರೆ. ಕುಟುಂಬಕ್ಕೆ, ಸಮಾಜಕ್ಕೆ ನಮ್ಮ ಬದ್ಧತೆಗಳನ್ನು, ಕರ್ತವ್ಯಗಳನ್ನು  ಹೇಗೆ ಈಡೇರಿಸಬೇಕು ಎಂಬುದಕ್ಕೆ ಅವರು ಒತ್ತು ನೀಡಿ ಹೇಳಿದ್ದಾರೆ. ಕರ್ತವ್ಯದ ಈ ಭಾವನೆಯನ್ನು ನಾವು ರಾಷ್ಟ್ರದ ಅಭಿವೃದ್ಧಿಯ ನೆಲೆಗಟ್ಟನ್ನಾಗಿ ಮಾಡಿಕೊಳ್ಳಬೇಕು. ನಮ್ಮ ಸಂವಿಧಾನ ನಮಗೆ ವಿವಿಧ ಹಕ್ಕುಗಳನ್ನು ಕೊಡಮಾಡಿದೆ. ನಾವು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ನಾವು ಆ ಹಕ್ಕುಗಳನ್ನು ಕಾಪಿಡಬಹುದು. ಆದುದರಿಂದ, ಇಂದು ನಾನು ಮಟುವಾ ಸಮಾಜದ ಎಲ್ಲಾ ಗೆಳೆಯರಲ್ಲಿ ಒಂದು ಕೋರಿಕೆಯನ್ನು ಮುಂದಿಡಲು ಬಯಸುತ್ತೇನೆ. ವ್ಯವಸ್ಥೆಯಿಂದ ಭ್ರಷ್ಟಾಚಾರವನ್ನು ತೊಡೆಯಲು, ನಾವೆಲ್ಲರೂ ಸಾಮಾಜಿಕ  ಮಟ್ಟದಲ್ಲಿ ಹೆಚ್ಚು ಜಾಗೃತಿಯನ್ನು ಉಂಟು ಮಾಡಬೇಕು. ಯಾರಾದರೊಬ್ಬರಿಗೆ ಎಲ್ಲಿಯಾದರೂ ಕಿರುಕುಳ ಕೊಡಲ್ಪಟ್ಟರೆ, ಆಗ ಖಂಡಿತವಾಗಿಯೂ ನಿಮ್ಮ ಧ್ವನಿಯನ್ನು ಎತ್ತರಿಸಿ. ಇದು ಸಮಾಜಕ್ಕೆ ಸಂಬಂಧಿಸಿ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿ ನಮ್ಮ ಕರ್ತವ್ಯವೂ ಹೌದು. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ನಮ್ಮ ಪ್ರಜಾಸತ್ತಾತ್ಮಕ ಹಕ್ಕು. ಆದರೆ ಯಾರಾದರೊಬ್ಬರು ಹಿಂಸೆಯ ಮೂಲಕ ಅಥವಾ ರಾಜಕೀಯ ವಿರೋಧಕ್ಕಾಗಿ ಬೆದರಿಸುವ ಮೂಲಕ ಅದನ್ನು ತಡೆಯಲು ಪ್ರಯತ್ನಿಸಿದರೆ, ಆಗ ಅದು ಇತರರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆದುದರಿಂದ, ಹಿಂಸಾಚಾರದ ಮನೋಸ್ಥಿತಿ, ಅರಾಜಕತೆ, ಸಮಾಜದ ಯಾವುದೇ ಅಂಗದಲ್ಲಿ ಕಂಡುಬಂದರೆ ಆಗ ಅದನ್ನು ವಿರೋಧಿಸುವುದು ನಮ್ಮ ಕರ್ತವ್ಯ. ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ನಮ್ಮ ಕರ್ತವ್ಯಗಳ ಬಗ್ಗೆ ನಾವು ಸದಾ ನೆನಪಿಟ್ಟುಕೊಂಡಿರಬೇಕು. ನಾವು ಕಸವನ್ನು ನಮ್ಮ ಮನೆ, ನಮ್ಮ ಬೀದಿಗಳಿಂದ ದೂರವಿಡಬೇಕು. ನಾವು ಈ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. “ವೋಕಲ್ ಫಾರ್ ಲೋಕಲ್” –ಇದನ್ನು ನಾವು ನಮ್ಮ ಜೀವನದ ಅಂಗವಾಗಿಸಿಕೊಳ್ಳಬೇಕು. ಪಶ್ಚಿಮ ಬಂಗಾಳದ ಕಾರ್ಮಿಕರ ಬೆವರಿನ ಉತ್ಪನ್ನಗಳನ್ನು, ಭಾರತದ ಕಾರ್ಮಿಕರ ಉತ್ಪನ್ನಗಳನ್ನು ಮತ್ತು ರೈತರ ಉತ್ಪನ್ನಗಳನ್ನು ಖರೀದಿಸುವುದನ್ನು ಖಚಿತ ಮಾಡಿಕೊಳ್ಳಬೇಕು. ಮತ್ತು ರಾಷ್ಟ್ರ ಮೊದಲು ಎಂಬ ನೀತಿ ಅತ್ಯಂತ ದೊಡ್ಡ ಕರ್ತವ್ಯ!. ರಾಷ್ಟ್ರಕ್ಕಿಂತ ಪ್ರಮುಖವಾದುದು ಬೇರೆ ಯಾವುದೂ ಇಲ್ಲ. ನಾವು ಪ್ರತಿಯೊಂದು ಕೆಲಸವನ್ನೂ ರಾಷ್ಟ್ರ ಮೊದಲು ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಯಾವುದೇ ಹೆಜ್ಜೆ ಇಡುವುದಕ್ಕೆ ಮೊದಲು ಅದರಿಂದ ರಾಷ್ಟ್ರಕ್ಕೆ ಪ್ರಯೋಜನವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು.

ಸ್ನೇಹಿತರೇ,

ಮಟುವಾ ಸಮಾಜ ತನ್ನ ಕರ್ತವ್ಯಗಳ ಬಗ್ಗೆ ಸದಾ ಅರಿವನ್ನು ಹೊಂದಿದೆ. “ಅಜಾದಿ ಕಾ ಅಮೃತ ಕಾಲ್” ಸಂದರ್ಭದಲ್ಲಿ ನವ ಭಾರತ ನಿರ್ಮಾಣಕ್ಕೆ ನಿಮ್ಮ ಸಹಕಾರ ಇದೇ ರೀತಿ ಮುಂದುವರಿಯಲಿದೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ. ನಿಮ್ಮೆಲ್ಲರಿಗೂ ಶುಭವಾಗಲಿ!

ನಿಮಗೆ ಬಹಳ ಧನ್ಯವಾದಗಳು!

***



(Release ID: 1812846) Visitor Counter : 177