ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021ರ ಲಾಂಛನ, ಮಸ್ಕಾಟ್ ಜರ್ಸಿ ಮತ್ತು ಗೀತೆಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ ಕರ್ನಾಟಕದ ರಾಜ್ಯಪಾಲ ಶ್ರೀ ಟಿ.ಸಿ.ಗೆಹ್ಲೋಟ್ ಮತ್ತು ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ 


ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಯುವಕರು ಪೂರ್ಣ ಉತ್ಸಾಹದಿಂದ ಭಾಗವಹಿಸಬೇಕು: ಶ್ರೀ ಟಿ.ಸಿ.ಗೆಹ್ಲೋಟ್

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಒಲಿಂಪಿಕ್ ಗಾಗಿ ಪ್ರತಿಭೆಗಳನ್ನು ಗುರುತಿಸಲು ಒಂದು ವೇದಿಕೆಯಾಗಿದೆ: ಶ್ರೀ ಅನುರಾಗ್ ಠಾಕೂರ್.

Posted On: 01 APR 2022 6:10PM by PIB Bengaluru

ಕರ್ನಾಟಕದ ರಾಜ್ಯಪಾಲ ಶ್ರೀ ಟಿ.ಸಿ. ಗೆಹ್ಲೋಟ್, ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹಾಗೂ ಹಲವಾರು ಗಣ್ಯರು ಇಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ 2021 (ಕೆಐಯುಜಿ 2021)ರ ಲಾಂಛನ, ಜರ್ಸಿ, ಮಸ್ಕಾಟ್ ಮತ್ತು ಗೀತೆಯನ್ನು ಬಿಡುಗಡೆ ಮಾಡಿದರು. 2020 ರಲ್ಲಿ ಒಡಿಶಾ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟವನ್ನು ಆಯೋಜಿಸಿದ ನಂತರ, ಕಳೆದ ವರ್ಷ ಕೋವಿಡ್ ಬಿಕ್ಕಟ್ಟಿನಿಂದಾಗಿ ಮುಂದೂಡಲಾಗಿದ್ದ ಈ ಸ್ಪರ್ಧೆ ಕೆಐಯುಜಿಯ ಎರಡನೇ ಆವೃತ್ತಿಯಾಗಿದೆ. 
ಕ್ರೀಡಾಕೂಟದ ಲೈವ್ ಅಪ್ ಡೇಟ್ ಗಳಿಗಾಗಿ ಖೇಲೋ ಇಂಡಿಯಾ ಆಪ್ ಅನ್ನು ಆತಿಥೇಯ ರಾಜ್ಯವಾದ ಕರ್ನಾಟಕವು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿತು. ಶ್ರೀ ಗೆಹ್ಲೋಟ್ ಅವರು ಕ್ರೀಡಾಕೂಟದ ಲಾಂಛನ ಮತ್ತು ಅಧಿಕೃತ ಮಸ್ಕಾಟ್ - ವೀರಾ ಬಿಡುಗಡೆ ಮಾಡಿದರೆ, ಶ್ರೀ ಠಾಕೂರ್ ಅವರು ಕ್ರೀಡಾಕೂಟದ ಅಧಿಕೃತ ಜರ್ಸಿ ಹಾಗೂ ಚಂದನ್ ಶೆಟ್ಟಿ ಮತ್ತು ನಿಖಿಲ್ ಜೋಶಿ ಅವರು ಹಾಡಿರುವ ಗೀತೆಯನ್ನು ಬಿಡುಗಡೆ ಮಾಡಿದರು. ಕರ್ನಾಟಕ ಸರ್ಕಾರದ ರೇಷ್ಮೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಮ್ಮ ಭಾಷಣದಲ್ಲಿ, ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ (ಕೆ.ಐ.ಯು.ಜಿ)ಯ ಎರಡನೇ ಆವೃತ್ತಿಯ ಆತಿಥ್ಯಕ್ಕೆ ಕರ್ನಾಟಕವನ್ನು ಆಯ್ಕೆ ಮಾಡಿದ್ದಕ್ಕಾಗಿ ಕರ್ನಾಟಕ ರಾಜ್ಯಪಾಲ ಶ್ರೀ ಟಿ.ಸಿ. ಗೆಹ್ಲೋಟ್ ಅವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಕೆಐಯುಜಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಖೇಲೋ ಇಂಡಿಯಾದ ಕನಸಿನ ಕಾರ್ಯಕ್ರಮದ ಭಾಗವಾಗಿದೆ ಎಂದು ಶ್ರೀ ಗೆಹ್ಲೋಟ್ ಹೇಳಿದರು. ಟೋಕಿಯೋ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾಪಟುಗಳು ಎಷ್ಟು ಉತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಕೆಐಯುಜಿ ದೇಶದ ಕ್ರೀಡಾ ಪರಾಕ್ರಮವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ಅವರು ಎತ್ತಿ ತೋರಿಸಿದರು. ಕೆಐಯುಜಿಯಲ್ಲಿ ಪೂರ್ಣ ಉತ್ಸಾಹದಿಂದ ಭಾಗವಹಿಸುವಂತೆ ಶ್ರೀ ಗೆಹ್ಲೋಟ್ ಯುವಕರಿಗೆ ಮನವಿ ಮಾಡಿದರು ಮತ್ತು ನಾವು ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, "ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟ ಒಂದು ವೇದಿಕೆಯಾಗಿದ್ದು, ಇದರ ಮೂಲಕ ಏಷ್ಯನ್ ಗೇಮ್ಸ್, ಸಿಡಬ್ಲ್ಯೂಜಿ ಮತ್ತು ಒಲಿಂಪಿಕ್ ಗಾಗಿ ಪ್ರತಿಭೆಗಳನ್ನು ಗುರುತಿಸಲು ನಾವು ಉದ್ದೇಶಿಸಿದ್ದೇವೆ ಎಂದರು. ಈ ವರ್ಷ ಭಾರತದಾದ್ಯಂತದ 20 ಕ್ರೀಡೆಗಳನ್ನು ಪ್ರತಿನಿಧಿಸುವ ಸುಮಾರು 4500 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಮತ್ತು ಮುಂಬರುವ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕನಿಷ್ಠ ಕೆಲವು ಆಟಗಾರರನ್ನು ಇಲ್ಲಿ ನಾವು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.
ಕೆಐಯುಜಿಯನ್ನು ಹಸಿರು ಕ್ರೀಡಾಕೂಟವೆಂದು ಘೋಷಿಸಿದ್ದಕ್ಕಾಗಿ ಶ್ರೀ ಠಾಕೂರ್ ಅವರು ರಾಜ್ಯವನ್ನು ಅಭಿನಂದಿಸಿದರು. "ಕೆಐಯುಜಿ ಬೆಂಗಳೂರು ಹಸಿರು ಕ್ರೀಡಾಕೂಟ ದಿಕ್ಕನ್ನೇ ಬದಲಿಸುವಷ್ಟು ಮಹತ್ವದ್ದಾಗಿದೆ, ಏಕೆಂದರೆ ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪರಿಸರ ವಿಷಯಗಳಲ್ಲಿ ಭಾರತವನ್ನು ನಾಯಕತ್ವದ ಪಾತ್ರದ ಕಡೆಗೆ ಮುನ್ನಡೆಸುತ್ತಿರುವ ಸಮಯದಲ್ಲಿ ನೀವು ಕ್ರೀಡೆಯನ್ನು ಉತ್ತೇಜಿಸಲು ಬದ್ಧರಾಗಿರುವುದು ಮಾತ್ರವಲ್ಲ, ಪರಿಸರವನ್ನು ರಕ್ಷಿಸಲೂ ನೀವು ಬದ್ಧರಾಗಿದ್ದೀರಿ. ಕ್ರೀಡಾಕೂಟದ ಭಾಗವಾಗಿ ಬಳಸುವ, ಆಟದ ಮೈದಾನದ ಹೊರಗೆ ಕ್ರೀಡಾಕೂಟದಲ್ಲಿ ಬಳಸಲಾಗುವ ಎಲ್ಲವೂ ಮರುಬಳಕೆ ಮಾಡಬಹುದಾದ ವಸ್ತುಗಳಿಂದ ತಯಾರಿಸಲು ನಿರ್ಧರಿಸಲಾಗಿದೆ, ಇದಲ್ಲದೆ ಎಲೆಕ್ಟ್ರಿಕ್ ವಾಹನಗಳನ್ನು ಸಾಗಾಟಕ್ಕೆ ಬಳಸಲಾಗುತ್ತದೆ ಮತ್ತು ಎಲ್ಲಾ ತ್ಯಾಜ್ಯವನ್ನು ಪ್ರತಿ ಸ್ಥಳದ ಮೂಲದಲ್ಲಿಯೇ ಹಸಿ ಮತ್ತು ಒಣ ಕಸ ಎಂದು ವಿಂಗಡಿಸಲಾಗುವುದು. ಆದ್ದರಿಂದ ಇದು ಶೂನ್ಯ-ತ್ಯಾಜ್ಯ, ಶೂನ್ಯ-ಪ್ಲಾಸ್ಟಿಕ್ ಕ್ರೀಡಾಕೂಟವಾಗಿರುತ್ತದೆ ಎಂದರು.
ಕೆಐಯುಜಿ 2021 ನಿಜವಾಗಿಯೂ ಅನೇಕ ಪ್ರಥಮಗಳಿಂದ ಕೂಡಿದೆ, ಅವುಗಳಲ್ಲಿ 20 ಕ್ರೀಡಾ ಶಿಸ್ತಿನ ವಿಭಾಗಗಳಲ್ಲಿ ಯೋಗಾಸನ ಮತ್ತು ಮಲ್ಲಕಂಬವನ್ನು ಸ್ಪರ್ಧೆಯ ವಿಭಾಗವಾಗಿ ಪರಿಚಯಿಸಲಾಗಿದೆ. ಈ ನಿರ್ಧಾರದ ಬಗ್ಗೆ ಮಾತನಾಡಿದ ಶ್ರೀ ಠಾಕೂರ್, "ಭಾರತವು ಸಾವಿರಾರು ವರ್ಷಗಳ ಕ್ರೀಡಾ ಇತಿಹಾಸವನ್ನು ಹೊಂದಿದೆ ಮತ್ತು ನಮ್ಮ ಪ್ರಾಚೀನ ಕ್ರೀಡಾ ವಿಭಾಗಗಳನ್ನು ಉತ್ತೇಜಿಸುವುದು ಕೇಂದ್ರ ಕ್ರೀಡಾ ಸಚಿವಾಲಯದ ಪ್ರಯತ್ನವಾಗಿದೆ. ನಮ್ಮ ಪ್ರಧಾನಮಂತ್ರಿಯವರ ಪ್ರಯತ್ನದಿಂದಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲು ಕಾರಣವಾಯಿತು, ಮತ್ತು ಈ ವರ್ಷ ನಮ್ಮ ಸಚಿವಾಲಯವು ಯೋಗಾಸನವನ್ನು ಒಂದು ಕ್ರೀಡೆಯಾಗಿ ಗುರುತಿಸಿದೆ. ಈ ವರ್ಷದ ಕೆಐಯುಜಿಯಲ್ಲಿ ನಾವು ಎರಡು ಸಾಂಪ್ರದಾಯಿಕ ಕ್ರೀಡೆಗಳನ್ನು ಹೊಂದಲಿದ್ದೇವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ ಮತ್ತು ವರ್ಷವಿಡೀ ಗ್ರಾಮೀಣ ಮತ್ತು ದೇಶೀಯ ಕ್ರೀಡೆಗಳಿಗೆ ಧನಸಹಾಯ ಮಾಡಲು ನಿಶ್ಚಿತ ಯೋಜನಯೂ ಇದೆ" ಎಂದು ಅವರು ಹೇಳಿದರು.
ಪಠ್ಯದೊಂದಿಗೆ ಕ್ರೀಡೆಯನ್ನು ಉತ್ತೇಜಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಕ್ಕಾಗಿ ಕೆ.ಐ.ಯು.ಜಿ ಆತಿಥ್ಯವಹಿಸಿರುವ ವಿಶ್ವವಿದ್ಯಾಲಯವಾದ ಜೈನ್ ವಿಶ್ವವಿದ್ಯಾಲಯವನ್ನು ಶ್ರೀ ಠಾಕೂರ್ ಅಭಿನಂದಿಸಿದರು ಮತ್ತು ಭಾರತದ ಹೆಚ್ಚಿನ ವಿಶ್ವವಿದ್ಯಾಲಯಗಳು ತಮ್ಮ ಕ್ಯಾಂಪಸ್ ನಲ್ಲಿ ಕ್ರೀಡೆಯನ್ನು ಉತ್ತೇಜಿಸಬೇಕು ಎಂದು ಹೇಳಿದರು. ವಿಶ್ವವಿದ್ಯಾಲಯ ಮಟ್ಟದ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘಟನೆ ನೀಡಿದ ಕೊಡುಗೆಗಾಗಿ ಅದನ್ನು ಅವರು ಅಭಿನಂದಿಸಿದರು.
ಉದ್ಘಾಟನೆಗೆ ಸಾಕ್ಷಿಯಾಗಲು ಆಗಮಿಸಿದ್ದ 3000ದಷ್ಟು ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಠಾಕೂರ್ "ಕ್ರೀಡೆ, ಶಿಕ್ಷಣ ಮತ್ತು ಪರಿಸರದ ವಿಷಯಕ್ಕೆ ಬಂದಾಗ ಯುವಕರು ಅತಿದೊಡ್ಡ ಪಾಲುದಾರರಾಗಿದ್ದಾರೆ. ಅವರು ದೇಶದ ವರ್ತಮಾನ ಮತ್ತು ಭವಿಷ್ಯವಾಗಿರುವುದರಿಂದ, ಈ ವಿಷಯಗಳಲ್ಲಿ ನೀವು ಪ್ರಮುಖ ಪಾತ್ರ ವಹಿಸಬೇಕು" ಎಂದು ಹೇಳಿದರು.


*******



(Release ID: 1812512) Visitor Counter : 204