ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದಲ್ಲಿ ಪಿಎಂಎವೈ-ಜಿ ಯ 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ 'ಗೃಹಪ್ರವೇಶ'ದಲ್ಲಿ ಭಾಗಿಯಾದ ಪ್ರಧಾನಮಂತ್ರಿ.
"ಪ್ರಾಮಾಣಿಕ ಸರ್ಕಾರದ ಪ್ರಯತ್ನಗಳು ಮತ್ತು ಸಬಲೀಕೃತ ಬಡವರ ಪ್ರಯತ್ನಗಳು ಒಗ್ಗೂಡಿದಾಗ, ದಾರಿದ್ರ್ಯ ಮಣಿಯುತ್ತದೆ"
"ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವ ಅಭಿಯಾನವು ಕೇವಲ ಸರ್ಕಾರದ ಯೋಜನೆಯಷ್ಟೇ ಅಲ್ಲ, ಗ್ರಾಮೀಣ ಬಡವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಬದ್ಧತೆಯೂ ಹೌದು".
"ಯೋಜನೆಗಳ ವ್ಯಾಪ್ತಿಯನ್ನು ಪರಿಪೂರ್ಣತೆ ಸಾಧಿಸುವ ಗುರಿ ಹೊಂದುವ ಮೂಲಕ, ಸರ್ಕಾರವು ತಾರತಮ್ಯ ಮತ್ತು ಭ್ರಷ್ಟಾಚಾರದ ಸಾಧ್ಯತೆಗಳನ್ನು ತೊಡೆದುಹಾಕುತ್ತಿದೆ"
ಪ್ರತಿ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್‌ಗಳು ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳಿಗಾಗಿ ಶ್ರಮಿಸಬೇಕು
Posted On:
29 MAR 2022 2:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಮಧ್ಯಪ್ರದೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ವಸತಿ ಯೋಜನೆ- ಗ್ರಾಮೀಣದ ಸುಮಾರು 5.21 ಲಕ್ಷ ಫಲಾನುಭವಿಗಳ 'ಗೃಹಪ್ರವೇಶ'ದಲ್ಲಿ ಪಾಲ್ಗೊಂಡರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಮತ್ತು ರಾಜ್ಯ ಸಚಿವರು, ಸಂಸದರು ಮತ್ತು ರಾಜ್ಯದ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಮುಂಬರುವ ವಿಕ್ರಮ ಸಂವತ್ಸರದ ಹೊಸ ವರ್ಷದ ವೇಳೆಗೆ 'ಗೃಹಪ್ರವೇಶ' ಮಾಡಿದ ಫಲಾನುಭವಿಗಳನ್ನು ಅಭಿನಂದಿಸಿದರು. ಈ ಹಿಂದೆ, ರಾಜಕೀಯ ಪಕ್ಷಗಳು ತಮ್ಮ ಘೋಷಣೆಗಳ ಹೊರತಾಗಿಯೂ ಬಡವರಿಗಾಗಿ ಸಾಕಷ್ಟು ಕೆಲಸ ಮಾಡಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. "ಒಮ್ಮೆ ಬಡವರು ಸಬಲರಾದರೆ, ಅವರು ಬಡತನದ ವಿರುದ್ಧ ಹೋರಾಡುವ ಧೈರ್ಯವನ್ನು ಪಡೆಯುತ್ತಾರೆ. ಪ್ರಾಮಾಣಿಕ ಸರ್ಕಾರದ ಪ್ರಯತ್ನಗಳು ಮತ್ತು ಸಬಲೀಕೃತ ಬಡವರ ಪ್ರಯತ್ನಗಳು ಒಟ್ಟುಗೂಡಿದಾಗ, ದಾರಿದ್ರ್ಯವು ಮಣಿಯುತ್ತದೆ", ಎಂದು ಅವರು ಹೇಳಿದರು.
"ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಹಳ್ಳಿಗಳಲ್ಲಿ ನಿರ್ಮಿಸಲಾದ ಈ 5.25 ಲಕ್ಷ ಮನೆಗಳು ಕೇವಲ ಅಂಕಿ-ಅಂಶಗಳಲ್ಲ, ಈ 5.25 ಲಕ್ಷ ಮನೆಗಳು ದೇಶದಲ್ಲಿ ಸಬಲಗೊಳ್ಳುತ್ತಿರುವ ಬಡವರ ಸಂಕೇತವಾಗಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬಡವರಿಗೆ ಪಕ್ಕಾ ಮನೆಗಳನ್ನು ಒದಗಿಸುವ ಈ ಅಭಿಯಾನವು ಕೇವಲ ಸರ್ಕಾರದ ಯೋಜನೆಯಷ್ಟೇ ಆಗಿರದೆ, ಗ್ರಾಮೀಣ ಬಡವರಲ್ಲಿ ವಿಶ್ವಾಸ ತುಂಬುವ ಬದ್ಧತೆಯಾಗಿದೆ ಎಂದು ಶ್ರೀ ಮೋದಿ ಹೇಳಿದರು. "ಇದು ಬಡವರನ್ನು ಬಡತನದಿಂದ ಹೊರತರುವ ಮೊದಲ ಹೆಜ್ಜೆಯಾಗಿದೆ" ಎಂದು ಅವರು ಹೇಳಿದರು. "ಈ ಮನೆಗಳು ಸೇವಾ ಮನೋಭಾವವನ್ನು ಪ್ರತಿಬಿಂಬಿಸುತ್ತವೆ ಮತ್ತು ಹಳ್ಳಿಗಳ ಮಹಿಳೆಯರನ್ನು 'ಲಕ್ಷಾಧಿಪತಿ'ಗಳನ್ನಾಗಿ ಮಾಡುವ ಅಭಿಯಾನವನ್ನು ಪ್ರತಿಬಿಂಬಿಸುತ್ತವೆ" ಎಂದೂ ಅವರು ಹೇಳಿದರು.
ಈ ಹಿಂದೆ ನಿರ್ಮಿಸಲಾದ ಕೆಲವು ಲಕ್ಷ ಮನೆಗಳಿಗೆ ಪ್ರತಿಯಾಗಿ, ಈ ಸರ್ಕಾರ ಈಗಾಗಲೇ 2.5 ಕೋಟಿ ಪಕ್ಕಾ ಮನೆಗಳನ್ನು ಹಸ್ತಾಂತರಿಸಿದೆ, ಅದರಲ್ಲಿ 2 ಕೋಟಿ ಮನೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಂಕ್ರಾಮಿಕ ರೋಗಕ್ಕೆ ಸಹ ಈ ಅಭಿಯಾನವನ್ನು ನಿಧಾನಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಮಧ್ಯಪ್ರದೇಶದಲ್ಲಿ ಮಂಜೂರಾದ 30 ಲಕ್ಷ ಮನೆಗಳ ಪೈಕಿ 24 ಲಕ್ಷ ಮನೆಗಳು ಈಗಾಗಲೇ ಪೂರ್ಣಗೊಂಡು, ಬೈಗಾ, ಸಹರಿಯಾ ಮತ್ತು ಭರಿಯಾ ಸಮಾಜದ ಜನರೂ ಸೇರಿದಂತೆ ಇತರರಿಗೆ ಪ್ರಯೋಜನಕಾರಿಯಾಗಿದೆ ಎಂದರು.
ಪಿಎಂಎವೈ ಅಡಿಯಲ್ಲಿ ಮನೆಗಳು ಶೌಚಾಲಯ, ಸೌಭಾಗ್ಯ ಯೋಜನೆ ವಿದ್ಯುತ್ ಸಂಪರ್ಕ, ಉಜಾಲಾ ಯೋಜನೆಯ ಎಲ್.ಇ.ಡಿ ಬಲ್ಬ್, ಉಜ್ವಲಾ ಯೋಜನೆಯ ಅನಿಲ ಸಂಪರ್ಕ ಮತ್ತು ಹರ್ ಘರ್ ಜಲ್ ಅಡಿಯಲ್ಲಿ ನೀರಿನ ಸಂಪರ್ಕವನ್ನೂ ಹೊಂದಿದ್ದು, ಫಲಾನುಭವಿಗಳಿಗೆ ಈ ಸೌಲಭ್ಯಕ್ಕಾಗಿ ಅಲೆದಾಡುವ ಕಿರಿಕಿರಿಯಿಂದ ಮುಕ್ತಿ ನೀಡುತ್ತವೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.
ಪಿಎಂಎವೈ ಯೋಜನೆಯಡಿ ನಿರ್ಮಿಸಲಾದ ಮನೆಗಳ ಪೈಕಿ ಸುಮಾರು ಎರಡು ಕೋಟಿ ಮನೆಗಳು ಮಹಿಳೆಯರ ಹೆಸರಿನಲ್ಲಿ ನೋಂದಣಿಯಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಮಾಲೀಕತ್ವವು ಮನೆಯ ಆರ್ಥಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಿದೆ ಎಂದರು. ಮಹಿಳೆಯರ ಘನತೆ ಮತ್ತು ಜೀವನವನ್ನು ಸುಗಮಗೊಳಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಕಳೆದ ಎರಡೂವರೆ ವರ್ಷಗಳಲ್ಲಿ 6 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಕುಡಿಯುವ ನೀರಿಗಾಗಿ ಕೊಳಾಯಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಬಡವರಿಗೆ ಉಚಿತ ಪಡಿತರವನ್ನು ಒದಗಿಸಲು ಸರ್ಕಾರವು 2 ಲಕ್ಷ 60 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಯೋಜನೆಯನ್ನು ಮುಂದಿನ 6 ತಿಂಗಳವರೆಗೆ ವಿಸ್ತರಿಸಿರುವುದರಿಂದ, ಇದಕ್ಕಾಗಿ ಹೆಚ್ಚುವರಿಯಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುವುದು. ಅರ್ಹ ಫಲಾನುಭವಿಗಳಿಗೆ ಸಂಪೂರ್ಣ ಪ್ರಯೋಜನವನ್ನು ಒದಗಿಸುವ ಸರ್ಕಾರದ ಬದ್ಧತೆಗೆ ಅನುಗುಣವಾಗಿ, ಸರ್ಕಾರವು 4 ಕೋಟಿ ನಕಲಿ ಫಲಾನುಭವಿಗಳನ್ನು ದಾಖಲೆಯಿಂದ ತೆಗೆದುಹಾಕಿದೆ. 2014ರ ನಂತರ ಈ ಕ್ರಮ ಕೈಗೊಳ್ಳಲಾಯಿತು, ಇದರಿಂದ ಬಡವರು ತಮ್ಮ ಅರ್ಹ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಮತ್ತು ನಿರ್ಲಜ್ಜ ಶಕ್ತಿಗಳು ಕಬಳಿಸುತ್ತಿದ್ದ ಹಣ ಉಳಿಸಲಾಗುತ್ತಿದೆ. ಇದು ಅಮೃತ ಕಾಲದ ಸಮಯದಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನವಾಗಿದೆ. ಯೋಜನೆಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದುವ ಮೂಲಕ ಸರ್ಕಾರವು ತಾರತಮ್ಯ ಮತ್ತು ಭ್ರಷ್ಟಾಚಾರದ ಸಾಧ್ಯತೆಗಳನ್ನು ತೊಡೆದುಹಾಕುತ್ತಿದೆ ಎಂದು ಅವರು ಹೇಳಿದರು.
ಸ್ವಾಮಿತ್ವ ಯೋಜನೆಯಡಿ ಆಸ್ತಿ ದಾಖಲೆಗಳನ್ನು ವಿಧ್ಯುಕ್ತಗೊಳಿಸುವ ಮೂಲಕ, ಸರ್ಕಾರವು ಹಳ್ಳಿಗಳಲ್ಲಿನ ವ್ಯಾಪಾರ ವಾತಾವರಣವನ್ನು ಸರಾಗಗೊಳಿಸುತ್ತಿದೆ. ಮಧ್ಯಪ್ರದೇಶದಲ್ಲಿ, ಎಲ್ಲಾ ಜಿಲ್ಲೆಗಳ 50 ಸಾವಿರ ಹಳ್ಳಿಗಳನ್ನು ಸಮೀಕ್ಷೆ ಮಾಡಲಾಗುತ್ತಿದೆ.
ದೀರ್ಘಕಾಲದವರೆಗೆ ಗ್ರಾಮೀಣ ಆರ್ಥಿಕತೆಯು ಕೃಷಿಗೆ ಮಾತ್ರ ಸೀಮಿತವಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಡ್ರೋನ್ ಗಳಂತಹ ಆಧುನಿಕ ತಂತ್ರಜ್ಞಾನ ಮತ್ತು ನೈಸರ್ಗಿಕ ಕೃಷಿಯಂತಹ ಪ್ರಾಚೀನ ವ್ಯವಸ್ಥೆಗೆ ಉತ್ತೇಜನ ನೀಡುವುದರ ಜೊತೆಗೆ ಸರ್ಕಾರವು ಹಳ್ಳಿಗಳಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತಿದೆ. ಎಂ.ಎಸ್.ಪಿ. ಸಂಗ್ರಹಣೆಯಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರ ಮತ್ತು ಮುಖ್ಯಮಂತ್ರಿಯವರನ್ನು ಅವರು ಶ್ಲಾಘಿಸಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ಮಧ್ಯಪ್ರದೇಶದ ರೈತರು 13 ಸಾವಿರ ಕೋಟಿ ರೂಪಾಯಿಗಳನ್ನು ಸಹ ಪಡೆದಿದ್ದಾರೆ ಎಂದರು.
ಮುಂಬರುವ ಹೊಸ ವರ್ಷದಲ್ಲಿ (ಪ್ರತಿಪದ) ಪ್ರತಿ ಜಿಲ್ಲೆಗಳಲ್ಲಿ 75 ಅಮೃತ ಸರೋವರಗಳನ್ನು (ಕೊಳಗಳು) ನಿರ್ಮಿಸುವಂತೆ ಪ್ರಧಾನಮಂತ್ರಿಯವರು ಕರೆ ನೀಡಿದರು. ಅವರು ಈ ಸರೋವರಗಳು ಹೊಸದಾಗಿರಬೇಕು ಮತ್ತು ದೊಡ್ಡದಾಗಿರಬೇಕು ಎಂದು ಕೇಳಿದರು. ಎಂ.ಎನ್.ಆರ್.ಇ.ಜಿ.ಎ. ನಿಧಿಯನ್ನು ಇದಕ್ಕಾಗಿ ಬಳಸಬಹುದು ಮತ್ತು ಇದು ಭೂಮಿ, ಪ್ರಕೃತಿ, ಸಣ್ಣ ರೈತರು, ಮಹಿಳೆಯರು ಹಾಗೂ ಪಶು ಪಕ್ಷಿಗಳಿಗೆ ಸಹ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು. ಪ್ರತಿಯೊಂದು ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತಿಗಳು ಈ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಅವರು ಮನವಿ ಮಾಡಿದರು.
*****
(Release ID: 1811015)
Visitor Counter : 219
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam