ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಪಂಚಾಯತ್ ರಾಜ್ ದಿವಸ"ದಂದು 2022ರ ಏಪ್ರಿಲ್ 24 ರಂದು ಜಮ್ಮುವಿಗೆ ಭೇಟಿ ನೀಡುವ ಮುಂಚಿತವಾಗಿ ನಡೆದ ಜಂಟಿ ಪೂರ್ವಭಾವಿ ಸಭೆ


ನವದೆಹಲಿಯ ಪೃಥ್ವಿ ಭವನದಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದಿಂದ 6 ವಿಜ್ಞಾನ ಇಲಾಖೆಗಳೊಂದಿಗೆ ನಡೆದ ಪೂರ್ವಸಿದ್ಧತಾ ಸಭೆ.  

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನ ವಿಷಯದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ನಾವೀನ್ಯತೆಯನ್ನು ಏಕೀಕರಿಸುವ ವಿವಿಧ ಅಂಶಗಳು ಮತ್ತು ಸಾಧ್ಯತೆಗಳ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರೊಂದಿಗೆ ಚರ್ಚಿಸಿದ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ 

ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಮಳಿಗೆಗಳನ್ನು ಹೊಂದುವ ಬದಲು, ನಾವು ರೈತರ ಆದಾಯಕ್ಕೆ ಮೌಲ್ಯವನ್ನು ಹೆಚ್ಚಿಸುವ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಪಂಚಾಯತ್ ರಾಜ್ ವೈಶಿಷ್ಟ್ಯಗಳೊಂದಿಗೆ ವಿಜ್ಞಾನ ಆಧಾರಿತ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಬೇಕು ಎಂದು ಪ್ರಸ್ತಾಪಿಸಿದ ಡಾ. ಜಿತೇಂದ್ರ ಸಿಂಗ್

Posted On: 28 MAR 2022 5:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಏಪ್ರಿಲ್ 24ರಂದು ರಾಷ್ಟ್ರವ್ಯಾಪಿ "ಪಂಚಾಯತ್ ರಾಜ್ ದಿವಸ್" ಆಚರಣೆಯ ಸಂದರ್ಭದಲ್ಲಿ ಜಮ್ಮುವಿಗೆ ಭೇಟಿ ನೀಡುವ ಮುನ್ನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಆರು ವಿಜ್ಞಾನ ಇಲಾಖೆಗಳು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಜೈವಿಕ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ,  ಬಾಹ್ಯಾಕಾಶ ಇಲಾಖೆ ಮತ್ತು ಅಣು ಇಂಧನ ಮತ್ತು ಭೂ ವಿಜ್ಞಾನಗಳ ಸಚಿವಾಲಯದೊಂದಿಗೆ ಪೂರ್ವಸಿದ್ಧತಾ ಜಂಟಿ ಸಭೆಯನ್ನಿಂದು ನವದೆಹಲಿಯ ಪೃಥ್ವಿ ಭವನದಲ್ಲಿ ನಡೆಸಿತು. ಗ್ರಾಮೀಣ ಪ್ರದೇಶಗಳು ಮತ್ತು ಕೃಷಿಗೆ ಪ್ರಯೋಜನಕಾರಿಯಾದ ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳನ್ನು ಪ್ರದರ್ಶಿಸುವುದು ಸಭೆಯ ಉದ್ದೇಶವಾಗಿತ್ತು. 
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ,  ಭೂ ವಿಜ್ಞಾನ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ; ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಶ್ರೀ ಗಿರಿರಾಜ್ ಸಿಂಗ್ ಅವರು ಪ್ರಧಾನಮಂತ್ರಿಯವರು ಜಮ್ಮುವಿಗೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಗಳೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಏಕೀಕರಣ ಕುರಿತ ವಿವಿಧ ಅಂಶಗಳು ಮತ್ತು ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಮಳಿಗೆಗಳನ್ನು ಹೊಂದುವ ಬದಲು, ನಾವು ರೈತರ ಆದಾಯಕ್ಕೆ ಮೌಲ್ಯವನ್ನು ಹೆಚ್ಚಿಸುವ ಇತ್ತೀಚಿನ ತಂತ್ರಜ್ಞಾನವನ್ನು ಪ್ರದರ್ಶಿಸಬೇಕು ಮತ್ತು ಪಂಚಾಯತ್ ರಾಜ್ ವೈಶಿಷ್ಟ್ಯಗಳೊಂದಿಗೆ ವಿಜ್ಞಾನ ಆಧಾರಿತ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಬೇಕು ಎಂದು ಡಾ. ಜಿತೇಂದ್ರ ಸಿಂಗ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅವರು, ಈ ಕಾರ್ಯಕ್ರಮದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಇಂತಹ ಅನೇಕ ವಿಜ್ಞಾನ ಮತ್ತು ತಂತ್ರಜ್ಞಾನ ನಾವೀನ್ಯತೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಈ ವರ್ಷದ ಪಂಚಾಯತ್ ರಾಜ್ ದಿವಸ ಕಾರ್ಯಕ್ರಮಕ್ಕೆ ಜಮ್ಮುವಿನ ಪಂಚಾಯತ್ ಪಲ್ಲಿಯನ್ನು ಆಯ್ಕೆ ಮಾಡಲಾಗಿದೆ ಮತ್ತು ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸುವ ವಸ್ತು ಪ್ರದರ್ಶನವನ್ನು ಆಯೋಜಿಸಲಾಗುವುದು, ಇದು ರೈತರು, ಸರಪಂಚರು ಮತ್ತು ಗ್ರಾಮದ ಮುಖ್ಯಸ್ಥರಿಗೆ ತಮ್ಮ ಆದಾಯ ಮತ್ತು ಉತ್ಪನ್ನಗಳನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ಈ ಮಹತ್ವದ ನಾವೀನ್ಯತೆಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ರೈತರಿಗಾಗಿ ಭೂ ಪ್ರಾದೇಶಿಕ ತಂತ್ರಜ್ಞಾನ, ಐದು ದಿನಗಳ ಕಾಲ ಹವಾಮಾನ ಮುನ್ಸೂಚನೆಗಾಗಿ ರೈತರು ಬಳಸಬಹುದಾದ ಆನ್ವಯಿಕಗಳು, ನೇರಳೆ ಕ್ರಾಂತಿ ಎಂದು ಪ್ರಸಿದ್ಧವಾದ ಲ್ಯಾವೆಂಡರ್ ಕೃಷಿ, ರೈತರ ಆದಾಯವನ್ನು ಹೆಚ್ಚಿಸಲು ಅದೇ ಭೂಮಿಯಲ್ಲಿ ಸೇಬಿನ ಉತ್ಪಾದನೆಯನ್ನು ಹೆಚ್ಚಿಸಲು ಜೈವಿಕ ತಂತ್ರಜ್ಞಾನ ಆವಿಷ್ಕಾರ, ಕೀಟನಾಶಕ ಸಿಂಪಡಣೆಗೆ ಡ್ರೋನ್ ಬಳಕೆ ಮತ್ತು ತ್ಯಾಜ್ಯ ಸಂಸ್ಕರಣೆ,  ಪರಮಾಣು ವಿಕಿರಣ ಇತ್ಯಾದಿಗಳ ಮೂಲಕ ಹಣ್ಣುಗಳ ಪ್ರದರ್ಶನ ಜೀವಿತಾವಧಿಯನ್ನು ಹೆಚ್ಚಿಸುವುದು ಇತ್ಯಾದಿ ಸೇರಿವೆ.
2022 ರ ಏಪ್ರಿಲ್ 24 ರಂದು ನಡೆಯಲಿರುವ ಕಾರ್ಯಕ್ರಮದ ವಿವರಗಳನ್ನು ಅಂತಿಮಗೊಳಿಸಲು ಇನ್ನೂ ಎರಡು ಸಭೆಗಳ ನಂತರ ದೊಡ್ಡ ಸಭೆಯನ್ನು ನಡೆಸಲು ನಿರ್ಧರಿಸಲಾಯಿತು. ಜಮ್ಮುವಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದರೂ, ಲಕ್ಷಾಂತರ ಗ್ರಾಮ ಪಂಚಾಯಿತಿಗಳು ಈ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಸಂಪರ್ಕಿತವಾಗಲು ಮತ್ತು ವೀಕ್ಷಿಸಲು ಸಾಧ್ಯವಾಗುತ್ತದೆ.
ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ನಾಗೇಂದ್ರನಾಥ್ ಸಿನ್ಹಾ, ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುನಿಲ್ ಕುಮಾರ್, ಡಿಎಸ್ಟಿ ಕಾರ್ಯದರ್ಶಿ ಡಾ. ಶ್ರೀವಾರಿ ಚಂದ್ರಶೇಖರ್, ಸಿ.ಎಸ್.ಐ.ಆರ್.ನ ಡಿಜಿ ಡಾ. ಶೇಖರ್ ಸಿ. ಮಾಂಡೆ, ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಎಸ್. ಗೋಖಲೆ, ಭೂ ವಿಜ್ಞಾನಗಳ ಕಾರ್ಯದರ್ಶಿ ಡಾ.ಎಂ ರವಿಚಂದ್ರನ್ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಶ್ರೀ ಎಸ್. ಸೋಮನಾಥ್ ಉಪಸ್ಥಿತರಿದ್ದರು. ಜಮ್ಮು-ಕಾಶ್ಮೀರ ಸರ್ಕಾರದ ಗ್ರಾಮೀಣ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಮಂದೀಪ್ ಕೌರ್ ಅವರು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

***


(Release ID: 1810845) Visitor Counter : 312