ಪ್ರಧಾನ ಮಂತ್ರಿಯವರ ಕಛೇರಿ

ಅಹಿಂಸಾ ಯಾತ್ರಾ ಸಂಪನ್ನತಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಕನ್ನಡ ರೂಪಾಂತರ

Posted On: 27 MAR 2022 3:54PM by PIB Bengaluru

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಆಚಾರ್ಯ ಶ್ರೀ ಮಹಾಶ್ರಮಣ್ ಜೀ ಅವರೇ, ಪೂಜ್ಯ ಸಂತರು ಮತ್ತು ಸನ್ಯಾಸಿಗಳೇ ಹಾಗೂ ಉಪಸ್ಥಿತರಿರುವ ಎಲ್ಲಾ ಭಕ್ತರೇ ನಿಮಗೆಲ್ಲರಿಗೂ ಶುಭಾಶಯಗಳು. ನಮ್ಮ ದೇಶ ಭಾರತ ಸಾವಿರಾರು ವರ್ಷಗಳಿಂದ ಮುನಿಗಳು, ಸಂತರು, ಋಷಿಗಳು, ಆಚಾರ್ಯರ ಮಹಾನ್ ಪರಂಪರೆಯ ನಾಡಾಗಿದೆ. ಕಾಲಘಟ್ಟದ ದ್ವೇಷದಿಂದ ಉಂಟಾದ ಅನೇಕ ಸವಾಲುಗಳ ನಡುವೆಯೂ ಈ ಸಂಪ್ರದಾಯವು ಪ್ರವರ್ಧಮಾನಕ್ಕೆ ಬಂದಿದೆ. ಇಲ್ಲಿ, ಆಚಾರ್ಯರು ನಮಗೆ '‘चरैवेति-चरैवेति’ (ಸದಾ ಚಲಿಸುತ್ತಲೇ ಇರಿ, ಚಲಿಸುತ್ತಲೇ ಇರಿ) ಎಂಬ ಮಂತ್ರವನ್ನು ನಮಗೆ ನೀಡಿದ್ದಾರೆ; ಶ್ವೇತಾಂಬರ-ತೇರಾಪಂಥದವರು '‘चरैवेति-चरैवेति’ ಮತ್ತು ಶಾಶ್ವತ ಚಲನಶೀಲತೆಯ ಮಹಾನ್ ಪರಂಪರೆಗೆ ಹೊಸ ಔನ್ನತ್ಯ ನೀಡಿದ್ದಾರೆ. ಆಚಾರ್ಯ ಭಿಕ್ಕು 'ಆಲಸ್ಯವನ್ನು ನಿವಾರಿಸು' ವುದನ್ನು ತನ್ನ ಆಧ್ಯಾತ್ಮಿಕ ಸಂಕಲ್ಪವಾಗಿ ಮಾಡಿಕೊಂಡಿದ್ದರು.
 ಆಧುನಿಕ ಕಾಲಘಟ್ಟದಲ್ಲಿ, ಆಚಾರ್ಯ ತುಳಸಿ ಮತ್ತು ಆಚಾರ್ಯ ಮಹಾಪ್ರಜ್ಞಾಜೀ ಅವರೊಂದಿಗೆ ಪ್ರಾರಂಭವಾದ ಮಹಾನ್ ಸಂಪ್ರದಾಯವು ಇಂದು ನಮ್ಮೆಲ್ಲರ ಮುಂದೆ ಆಚಾರ್ಯ ಮಹಾಶ್ರಮ ಜೀ ರೂಪದಲ್ಲಿ ಜೀವಂತವಾಗಿದೆ. ಆಚಾರ್ಯ ಮಹಾಶ್ರಮಣ್ ಅವರು 18 ಸಾವಿರ ಕಿಲೋಮೀಟರ್ ಉದ್ದದ ಈ ಪಾದಯಾತ್ರೆಯನ್ನು 7 ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಈ ಪಾದಯಾತ್ರೆಯು ವಿಶ್ವದ ಮೂರು ದೇಶಗಳ ಭೇಟಿಯಾಗಿತ್ತು. ಈ ಮೂಲಕ ಆಚಾರ್ಯ ಶ್ರೀಗಳು 'ವಸುಧೈವ ಕುಟುಂಬಕಂ' ಎಂಬ  ಭಾರತೀಯ ಸಿದ್ಧಾಂತವನ್ನು ಪ್ರಚುರಪಡಿಸಿದ್ದಾರೆ. ಈ 'ಪಾದಯಾತ್ರೆ' ದೇಶದ 20 ರಾಜ್ಯಗಳನ್ನು ಒಂದು ಚಿಂತನೆ, ಒಂದು ಸ್ಫೂರ್ತಿಯೊಂದಿಗೆ ಬೆಸೆದಿದೆ. ಎಲ್ಲಿ ಅಹಿಂಸೆ ಇರುತ್ತದೆಯೋ ಅಲ್ಲಿ ಏಕತೆ ಇರುತ್ತದೆ; ಎಲ್ಲಿ ಏಕತೆ ಇರುತ್ತದೆಯೋ ಅಲ್ಲಿ ಸಮಗ್ರತೆ ಇರುತ್ತದೆ; ಎಲ್ಲಿ ಸಮಗ್ರತೆ ಇರುತ್ತದೆಯೋ ಅಲ್ಲಿ ಉತ್ಕೃಷ್ಟತೆ ಇರುತ್ತದೆ. ನೀವು 'ಏಕ ಭಾರತ, ಶ್ರೇಷ್ಠ ಭಾರತ' ಮಂತ್ರವನ್ನು ಆಧ್ಯಾತ್ಮಿಕ ಸಂಕಲ್ಪದ ರೂಪದಲ್ಲಿ ಪಸರಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಈ ಯಾತ್ರೆಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ, ನಾನು ಆಚಾರ್ಯ ಮಹಾಶ್ರಮಣ್ ಜೀ ಮತ್ತು ಎಲ್ಲಾ ಅನುಯಾಯಿಗಳಿಗೆ ಅತ್ಯಂತ ಗೌರವದಿಂದ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ, 
ಶ್ವೇತಾಂಬರ ತೇರಾ ಪಂಥದ ಆಚಾರ್ಯರಿಂದ ನಾನು ಸದಾ ವಿಶೇಷ ಪ್ರೀತಿಯನ್ನು ಪಡೆದಿದ್ದೇನೆ. ನಾನು ಆಚಾರ್ಯ ತುಳಸಿ ಜೀ, ಅವರ ಪಟ್ಟಧಾರ ಆಚಾರ್ಯ ಮಹಾಪ್ರಜ್ಞಾ ಜೀ ಮತ್ತು ಈಗ ಆಚಾರ್ಯ ಮಹಾಶ್ರಮಣ್ ಜೀ ಅವರ ಪ್ರೀತಿಗೆ ಪಾತ್ರರಾಗಿದ್ದೇನೆ. ಈ ಪ್ರೀತಿಯ ಕಾರಣದಿಂದಾಗಿ, ತೇರಾ ಪಂಥಕ್ಕೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದುವ ಅವಕಾಶವನ್ನು ನಾನು ಪಡೆಯುತ್ತಲೇ ಇದ್ದೇನೆ. ಈ ವಾತ್ಸಲ್ಯದಿಂದಾಗಿಯೇ, ನಾನು ಆಚಾರ್ಯರಿಗೆ ಹೇಳಿದೆ - ಈ ತೇರಾ ಪಂಥ ನನ್ನ ಪಂಥ.
ಸಹೋದರ ಮತ್ತು ಸಹೋದರಿಯರೇ
ಆಚಾರ್ಯ ಮಹಾಶ್ರಮಣ್ ಅವರ ಈ 'ಪಾದಯಾತ್ರೆ'ಗೆ ಸಂಬಂಧಿಸಿದ ವಿವರಗಳನ್ನು ನಾನು ನೋಡುತ್ತಿದ್ದಾಗ, ಒಂದು ಅನೂಹ್ಯವಾದ ಕಾಕತಾಳೀಯತೆಯನ್ನು ನಾನು ಗಮನಿಸಿದೆ. ನೀವು 2014 ರಲ್ಲಿ ದೆಹಲಿಯ ಕೆಂಪು ಕೋಟೆಯಿಂದ ಈ ಯಾತ್ರೆಯನ್ನು ಪ್ರಾರಂಭಿಸಿದಿರಿ. ಆ ವರ್ಷ ದೇಶವು ಹೊಸ ಪಯಣವನ್ನು ಪ್ರಾರಂಭಿಸಿತ್ತು ಮತ್ತು ನಾನು ಕೆಂಪು ಕೋಟೆಯ ಮೇಲಿಂದ ಹೇಳಿದ್ದೆ - "ಇದು ನವ ಭಾರತದ ಹೊಸ ಪಯಣ". ಈ ಯಾತ್ರೆಯಲ್ಲಿ, ದೇಶದ ಸಂಕಲ್ಪಗಳು ಸಹ  - ಸಾರ್ವಜನಿಕ ಸೇವೆ, ಸಾರ್ವಜನಿಕ ಕಲ್ಯಾಣ! ಎಂಬುದೇ ಆಗಿತ್ತು, ಇಂದು, ಪರಿವರ್ತನೆಯ ಈ ಮಹಾನ್ ಪಯಣದಲ್ಲಿ ಭಾಗವಹಿಸಲು ನಮ್ಮ ಕೋಟ್ಯಂತರ ದೇಶವಾಸಿಗಳಿಗೆ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ನೀವು ದೆಹಲಿಗೆ ಬಂದಿದ್ದೀರಿ. ನನಗೆ ಖಾತ್ರಿ ಇದೆ; ನವ ಭಾರತದ ಈ ಹೊಸ ಪಯಣದ ಸ್ಫೂರ್ತಿಯನ್ನು ನೀವು ದೇಶದ ಮೂಲೆ ಮೂಲೆಗಳಲ್ಲಿಯೂ ನೋಡಿರಬಹುದು ಮತ್ತು ಅನುಭವಿಸಿರಬಹುದು. ನನ್ನ ಒಂದು ಮನವಿ ಇದೆ. ಬದಲಾಗುತ್ತಿರುವ ಭಾರತದ ಈ ಅನುಭವವನ್ನು ನೀವು ದೇಶವಾಸಿಗಳೊಂದಿಗೆ ಎಷ್ಟು ಹೆಚ್ಚು ಹಂಚಿಕೊಳ್ಳುತ್ತೀರೋ, ಅಷ್ಟು ಹೆಚ್ಚು ದೇಶದ ಜನರು ಪ್ರೇರೇಪಿತರಾಗುತ್ತಾರೆ! 
ಸ್ನೇಹಿತರೆ,
ಆಚಾರ್ಯ ಶ್ರೀಗಳು ತಮ್ಮ ಪಾದಯಾತ್ರೆಯ ಸಮಯದಲ್ಲಿ ಸಮಾಜದ ಮುಂದೆ 'ಸದ್ಭಾವನೆ, ನೈತಿಕತೆ' ಮತ್ತು 'ವ್ಯಸನ ಮುಕ್ತ' ಬದುಕನ್ನು ಸಂಕಲ್ಪದ ರೂಪದಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ಅವಧಿಯಲ್ಲಿ, ಲಕ್ಷಾಂತರ ಜನರು ವ್ಯಸನ ಮುಕ್ತವಾಗುವ ಸಂಕಲ್ಪಗಳನ್ನು ಕೈಗೊಂಡಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಇದು ಸ್ವತಃ ಒಂದು ದೊಡ್ಡ ಅಭಿಯಾನವಾಗಿದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ, ನಾವು ವ್ಯಸನ ಮುಕ್ತರಾದಾಗ ಮಾತ್ರ ನಾವು ನಮ್ಮ ಅಂತರಾತ್ಮಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ವ್ಯಸನವು ದುರಾಸೆ ಮತ್ತು ಸ್ವಾರ್ಥದಿಂದ ಕೂಡಿರುತ್ತದೆ. ನಾವು ನಮ್ಮ ಅಂತರಾತ್ಮವನ್ನು ತಿಳಿದಾಗ ಮಾತ್ರ ನಾವು 'ಸರ್ವಂ' ಅಥವಾ 'ಎಲ್ಲವೂ' ಎಂಬ ನಿಜವಾದ ಅರ್ಥವನ್ನು ಅರಿಯುತ್ತೇವೆ. ಆಗ ಮಾತ್ರ, 'ಸ್ವಾರ್ಥ'ದಿಂದ ಮೇಲೇರುವ ಮೂಲಕ ಇತರರ ಸಲುವಾಗಿ ನಮ್ಮ 'ಕರ್ತವ್ಯಗಳ' 'ಸಾಕ್ಷಾತ್ಕಾರ'ವನ್ನು ನಾವು ಪಡೆಯುತ್ತೇವೆ.
ಸ್ನೇಹಿತರೆ,
ಇಂದು, ನಾವು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿದ್ದೇವೆ; ದೇಶವು ಸ್ವಾರ್ಥಕ್ಕಿಂತ ಮೀರಿದ್ದಾಗಿರುತ್ತಿದೆ ಮತ್ತು ಸಮಾಜ ಮತ್ತು ರಾಷ್ಟ್ರದ ಕರ್ತವ್ಯಗಳನ್ನು ಘೋಷಿಸುತ್ತಿದೆ. ಇಂದು, ದೇಶವು 'ಎಲ್ಲರೊಂದಿಗೆ ಎಲ್ಲರ ವಿಶ್ವಾಸ, ಎಲ್ಲರ ವಿಕಾಸ ಮತ್ತು ಎಲ್ಲರ ಪ್ರಯತ್ನ' ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಸರ್ಕಾರಗಳು ಮಾತ್ರ ಎಲ್ಲವನ್ನೂ ಮಾಡಬೇಕು ಅಥವಾ ಆಳುವ ಅಧಿಕಾರ ಎಲ್ಲವನ್ನೂ ಆಳುತ್ತದೆ ಎಂದು ಭಾರತ ಎಂದಿಗೂ ನಂಬಿಲ್ಲ. ಇದು ಭಾರತದ ಸ್ವಭಾವವಲ್ಲ. ನಮ್ಮ ದೇಶದಲ್ಲಿ, ಆಳುವ ಶಕ್ತಿ, ಪ್ರಜಾಸತ್ತಾತ್ಮಕ ಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯಲ್ಲಿ, ಎಲ್ಲವೂ ಸಮಾನ ಪಾತ್ರವನ್ನು ವಹಿಸುತ್ತವೆ. ನಮಗೆ ಕರ್ತವ್ಯವೇ ನಮ್ಮ ಧರ್ಮ. ಆಚಾರ್ಯ ತುಳಸಿ ಜೀ ಅವರ ಮಾತುಗಳು ನನಗೆ ನೆನಪಾಗುತ್ತವೆ. ಅವರು ಹೇಳುತ್ತಿದ್ದರು- "ನಾನು ಮೊದಲು ಮನುಷ್ಯನಾಗಿದ್ದೇನೆ; ನಂತರ ನಾನೊಬ್ಬ ಧಾರ್ಮಿಕ ವ್ಯಕ್ತಿ; ನಂತರ ನಾನು ಧ್ಯಾನದಲ್ಲಿ ತೊಡಗಿರುವ ಜೈನ ಮುನಿ. ಅದರ ನಂತರ, ನಾನು ತೇರಾ ಪಂಥದ ಆಚಾರ್ಯ". ಕರ್ತವ್ಯದ ಹಾದಿಯಲ್ಲಿ ನಡೆಯುವಾಗ, ಇಂದು, ದೇಶವು ತನ್ನ ಸಂಕಲ್ಪಗಳಲ್ಲಿ ಈ ಮನೋಭಾವವನ್ನು ಮರು ಪೂರಣ ಮಾಡುತ್ತಿದೆ.
ಸ್ನೇಹಿತರೆ,
ಇಂದು ನವ ಭಾರತದ ಕನಸಿನೊಂದಿಗೆ, ನಮ್ಮ ದೇಶವು ಏಕತೆ ಮತ್ತು ಸಾಮೂಹಿಕತೆಯ ಶಕ್ತಿಯನ್ನು ಮುಂದೆ ತೆಗೆದುಕೊಂಡು ಹೋಗುತ್ತಿದೆ ಎಂಬುದು ನನಗೆ ಸಂತಸವಾಗಿದೆ. ಇಂದು, ನಮ್ಮ ಆಧ್ಯಾತ್ಮಿಕ ಶಕ್ತಿ, ನಮ್ಮ ಆಚಾರ್ಯರು, ನಮ್ಮ ಸಂತರು ಒಟ್ಟಾಗಿ ಭಾರತದ ಭವಿಷ್ಯಕ್ಕೆ ಹೊಸ ದಿಕ್ಕು ನೀಡುತ್ತಿದ್ದಾರೆ. ದೇಶದ ಈ ಆಕಾಂಕ್ಷೆಗಳನ್ನು ಮತ್ತು ದೇಶದ ಪ್ರಯತ್ನಗಳನ್ನು ಜನರ ಬಳಿಗೆ ಕೊಂಡೊಯ್ಯಲು ನೀವು ಸಕ್ರಿಯ ಮಾಧ್ಯಮವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. 'ಆಜಾದಿ ಕಾ ಅಮೃತ್ ಕಾಲ'ದಲ್ಲಿ ದೇಶವು ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ, - ಅದು 'ಪರಿಸರ ಕಾಳಜಿ'ಯಾಗಿರಲಿ ಅಥವಾ ಪೌಷ್ಟಿಕತೆ, ಅಥವಾ ಬಡವರ ಕಲ್ಯಾಣದ ಪ್ರಯತ್ನಗಳಾಗಿರಲಿ ಈ ಎಲ್ಲಾ ನಿರ್ಣಯಗಳನ್ನು ಸಾಧಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸುತ್ತೀರಿ. ನೀವು ದೇಶದ ಈ ಪ್ರಯತ್ನಗಳನ್ನು ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಯಶಸ್ವಿಗೊಳಿಸುತ್ತೀರಿ ಎಂಬ ಖಾತ್ರಿ ನನಗಿದೆ. ಅದೇ ಸ್ಫೂರ್ತಿಯೊಂದಿಗೆ, ನಾನು ಹೃತ್ಪೂರ್ವಕವಾಗಿ ಎಲ್ಲಾ ಸಂತರ ಪಾದಗಳಿಗೆ ನಮಸ್ಕರಿಸುತ್ತೇನೆ! ನನ್ನ ಹೃದಯಾಂತರಾಳದಿಂದ ನಿಮಗೆ ತುಂಬಾ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.


***



(Release ID: 1810319) Visitor Counter : 176