ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
ಕಲ್ಲಿದ್ದಲು ಉತ್ಪಾದನೆ ಹೆಚ್ಚಳಕ್ಕೆ ಕ್ರಮಗಳ ಬಗ್ಗೆ ಚಿಂತಿಸುವಂತೆ ಕಲ್ಲಿದ್ದಲು ಸಚಿವಾಲಯ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ಶ್ರೀ ಪ್ರಹ್ಲಾದ ಜೋಷಿ ಮನವಿ
ನಾರ್ಥರ್ನ್ ಕೋಲ್ಫೀಲ್ಡ್ ಲಿಮಿಟೆಡ್ ನಲ್ಲಿ ನಾಲ್ಕು ಯೋಜನೆಗಳಿಗೆ ಶಿಲಾನ್ಯಾಸ
ಉತ್ಪಾದನೆಯಲ್ಲಿ ಗುರಿ ಮೀರಿದ ಸಾಧನೆ ಮಾಡಿದ ನಾರ್ಥರ್ನ್ ಕೋಲ್ಫೀಲ್ಡ್ ಲಿಮಿಟೆಡ್
Posted On:
22 MAR 2022 6:27PM by PIB Bengaluru
ಒಟ್ಟು ಕಲ್ಲಿದ್ದಲು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು ಅನುಕೂಲವಾಗುವಂತೆ ಕೆಲವು ಮಾನದಂಡಗಳ ಸಡಿಲಿಕೆಗಾಗಿ ಕಲ್ಲಿದ್ದಲು ಸಚಿವಾಲಯವು ಪರಿಸರ, ಅರಣ್ಯ ಮತ್ತು ವಾತಾವರಣ ಬದಲಾವಣೆ ಸಚಿವಾಲಯವನ್ನು ಸಂಪರ್ಕಿಸುವ ಸಾಧ್ಯತೆ ಇದೆ ಎಂದು ಕಲ್ಲಿದ್ದಲು, ಗಣಿಗಳು ಮತ್ತು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಅವರು ಹೇಳಿದ್ದಾರೆ. ನಾರ್ಥರ್ನ್ ಕೋಲ್ಫೀಲ್ಡ್ ಲಿಮಿಟೆಡ್ (ಎನ್.ಸಿ.ಎಲ್.) ನ ನಾಲ್ಕು ಯೋಜನೆಗಳಿಗೆ ಶಿಲಾನ್ಯಾಸದ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶ್ರೀ ಜೋಶಿ ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಅದರ ಅಂಗಸಂಸ್ಥೆಗಳು ಕಲ್ಲಿದ್ದಲು ಉತ್ಪಾದನೆಯ ನಿಗದಿತ ಗುರಿಗಳನ್ನು ಸಾಧಿಸಲು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಅಂತಾರಾಷ್ಟ್ರೀಯ ದರಗಳಲ್ಲಿ ಭಾರೀ ಏರಿಕೆಯಾಗಿರುವುದರಿಂದ ಕಲ್ಲಿದ್ದಲಿಗೆ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂಬ ಅಂಶದತ್ತ ಅವರು ಗಮನ ಸೆಳೆದರು.
ವಿದ್ಯುತ್ ವಲಯಕ್ಕೆ ಸುಸ್ಥಿರವಾದ ರೀತಿಯಲ್ಲಿ ಕಲ್ಲಿದ್ದಲು ಪೂರೈಕೆಯಾಗಬೇಕಾಗಿರುವುದು ಬಹಳ ಮುಖ್ಯ ಎಂಬುದನ್ನು ಒತ್ತಿ ಹೇಳಿದ ಸಚಿವರು ಸಿ.ಐ.ಎಲ್. ಮತ್ತು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ಕಲ್ಲಿದಲ್ಲು ಉತ್ಪಾದನೆಯನ್ನು ಹೆಚ್ಚಿಸಲು ಅವಶ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಮನವಿ ಮಾಡಿದರು. ನಿಗದಿತ ಕಾಲಮಿತಿಯನ್ವಯ ಕೋಲ್ ಇಂಡಿಯಾವು 35 ಫಸ್ಟ್ ಮೈಲ್ ಸಂಪರ್ಕದ ಯೋಜನೆಗಳನ್ನು ಪೂರ್ಣಗೊಳಿಸುವಂತಾಗಬೇಕು ಎಂದೂ ಸಚಿವರು ಹೇಳಿದರಲ್ಲದೆ ನಾರ್ಥರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (ಎನ್.ಸಿ.ಎಲ್.) ಕಲ್ಲಿದ್ದಲು ಉತ್ಪಾದನೆಯಲ್ಲಿ ಗುರಿ ಮೀರಿದ ಸಾಧನೆ ಮಾಡಿರುವುದಕ್ಕಾಗಿ ಸಂಸ್ಥೆಯನ್ನು ಪ್ರಶಂಸಿಸಿದರು.
ನಿಗಾಹಿ ಕಲ್ಲಿದ್ದಲು ನಿರ್ವಹಣಾ ಸ್ಥಾವರ (ವಾರ್ಷಿಕ 10 ಮಿಲಿಯನ್ ಟನ್) , ಬಿನಾ-ಕಾಕ್ರಿ ಕಲ್ಲಿದ್ದಲು ನಿರ್ವಹಣಾ ಸ್ಥಾವರ (ವಾರ್ಷಿಕ 9.5 ಮಿಲಿಯನ್ ಟನ್ ), ಜಯಂತ್ ನಿಂದ ಸಿಂಗ್ರೌಲಿವರೆಗೆ 3.1 ಕಿ.ಮೀ. ಐದು ಪಥಗಳ ಕಾಂಕ್ರೀಟ್ ರಸ್ತೆ ಮತ್ತು ಎನ್.ಸಿ.ಎಲ್. ಯೋಜನೆಗಳಲ್ಲಿ ಕಲ್ಲಿದ್ದಲು ಸಾಗಾಣಿಕೆಗಾಗಿ 49.6 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಕಲ್ಲಿದ್ದಲು, ಗಣಿಗಳು ಮತ್ತು ರೈಲ್ವೇ ಖಾತೆ ಸಹಾಯಕ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ 2025ರ ವೇಳೆಗೆ ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿಯನ್ನು ಸಾಧಿಸುವಲ್ಲಿ ಎನ್.ಸಿ.ಎಲ್. ಮಹತ್ವದ ಪಾತ್ರ ವಹಿಸಲಿದೆ ಎಂದರು. ಉತ್ಪಾದನೆ ಹೆಚ್ಚಳದ ಜೊತೆ ಪರಿಸರದ ಬಗ್ಗೆಯೂ ಕಾಳಜಿ ವಹಿಸಬೇಕು. ಜನಪರ ಉಪಕ್ರಮಗಳು ಕೂಡಾ ಅಷ್ಟೇ ಮಹತ್ವದವು ಎಂದು ಸಚಿವರು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ಜೈನ್ ಕಲ್ಲಿದ್ದಲಿನ ಯಾಂತ್ರೀಕೃತ ಸಾಗಾಟಕ್ಕೆ ಹೆಚ್ಚಿನ ವೇಗ ನೀಡಲು ನಿಗದಿತ ಕಾಲಾವಧಿಯಲ್ಲಿ ಹೂಡಿಕೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಅವಶ್ಯಕತೆಗೆ ಅನುಗುಣವಾಗಿ ರೇಕ್ ಗಳ ಲಭ್ಯತೆಯನ್ನು ಹೆಚ್ಚಿಸುವಂತೆ ಭಾರತೀಯ ರೈಲ್ವೇಯನ್ನು ಕೋರಲಾಗುವುದು ಎಂದವರು ಹೇಳಿದರು.
ಸುಸ್ಥಿರ ಅಭಿವೃದ್ಧಿ ಕೋಶ (ಎಸ್.ಡಿ.ಸಿ.) ಅಡಿಯಲ್ಲಿ ರೂಪಿಸಲಾದ ಇ-ಪುಸ್ತಕ “ಹಸಿರಿನ ಮರುವ್ಯಾಖ್ಯಾನ” ಅನಾವರಣ ಈ ಕಾರ್ಯಕ್ರಮದ ಇನ್ನೊಂದು ಮುಖ್ಯಾಂಶವಾಗಿತ್ತು. ಕೋಲ್ ಇಂಡಿಯಾ ಲಿಮಿಟೆಡ್ ಸಿ.ಎಂ.ಡಿ. ಶ್ರೀ ಪ್ರಮೋದ್ ಅಗರವಾಲ್, ಕಲ್ಲಿದ್ದಲು ಸಚಿವಾಲಯ, ಸಿ.ಐ.ಎಲ್. ಮತ್ತು ಎನ್.ಸಿ.ಎಲ್. ನ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.
ಮೊದಲಿಗೆ, ಎನ್.ಸಿ.ಎಲ್.ನ ಸಿ.ಎಂ.ಡಿ. ಶ್ರೀ ಭೋಲಾ ಸಿಂಗ್ ಅವರ ಸ್ವಾಗತ ಭಾಷಣದ ಬಳಿಕ ತಾಂತ್ರಿಕ ವಿಭಾಗದ ನಿರ್ದೇಶಕರು ತಯಾರಿಸಿದ ಫಸ್ಟ್ ಮೈಲ್ ಕನೆಕ್ಟಿವಿಟಿ (ಎಫ್.ಎಂ.ಸಿ.) ಯೋಜನೆಗಳಿಗೆ ಸಂಬಂಧಿಸಿದ ಮತ್ತು ಎನ್.ಸಿ.ಎಲ್.ನಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಪ್ರದರ್ಶಿಕೆಯನ್ನು ಪ್ರದರ್ಶಿಸಲಾಯಿತು.
****
(Release ID: 1808728)
Visitor Counter : 167