ಗಣಿ ಸಚಿವಾಲಯ

ಗಣಿಗಾರಿಕೆ ವಲಯದ ಬೆಳವಣಿಗೆಯು ಭಾರತದ ಆರ್ಥಿಕತೆಗೆ ಸೂಕ್ತ ಬೆಂಬಲ ಒದಗಿಸುತ್ತದೆ: ಶ್ರೀ ಪ್ರಹ್ಲಾದ್ ಜೋಶಿ


ನವದೆಹಲಿಯಲ್ಲಿ ಉದ್ಘಾಟನೆಯಾದ 36 ನೇ ಅಂತರರಾಷ್ಟ್ರೀಯ ಭೂವೈಜ್ಞಾನಿಕ ಕಾಂಗ್ರೆಸ್ (ಐಜಿಸಿ)

58 ವರ್ಷಗಳ ನಂತರ ಐಜಿಸಿಯನ್ನು ಆಯೋಜಿಸಿರುವ ಭಾರತ

ಐಜಿಸಿಯು "ಭೂವಿಜ್ಞಾನಗಳು: ಸುಸ್ಥಿರ ಭವಿಷ್ಯಕ್ಕಾಗಿ ಮೂಲ ವಿಜ್ಞಾನ" ಎಂಬ ವಿಷಯವನ್ನು ಆಧರಿಸಿದೆ

Posted On: 20 MAR 2022 5:23PM by PIB Bengaluru

ಕಳೆದ ಕೆಲವು ವರ್ಷಗಳಿಂದ ಭಾರತದ ಒಟ್ಟು ಗಣಿಗಾರಿಕೆ ಪ್ರದೇಶವು ಗಣನೀಯವಾಗಿ ಹೆಚ್ಚಾಗಿದೆ ಮತ್ತು ಈ ಕ್ಷೇತ್ರವು ದೇಶಾದ್ಯಂತ 12 ಮಿಲಿಯನ್ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳನ್ನು ನೀಡಿದೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಅವರು ಇಂದು 36ನೇ ಅಂತಾರಾಷ್ಟ್ರೀಯ ಭೂವೈಜ್ಞಾನಿಕ ಕಾಂಗ್ರೆಸ್ ನ ವರ್ಚುವಲ್ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಪ್ರಸ್ತುತ ಸರ್ಕಾರದ ಅಡಿಯಲ್ಲಿ ಖನಿಜ ಪರಿಶೋಧನೆಯ ವೇಗವು ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಗಣಿಗಾರಿಕೆ ವಲಯದಲ್ಲಿ ಇತ್ತೀಚೆಗೆ ಕೈಗೊಂಡ ಸುಧಾರಣೆಗಳು ಭಾರತದ ಆರ್ಥಿಕತೆಗೆ ಸೂಕ್ತ ಬೆಂಬಲವನ್ನು ಒದಗಿಸಿವೆ ಎಂದ ಅವರು, ಶ್ರೇಷ್ಠತೆಯನ್ನು ಸಾಧಿಸಲು ಇತ್ತೀಚಿನ ತಂತ್ರಜ್ಞಾನಗಳ ಅತ್ಯುತ್ತಮ ಬಳಕೆಯಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ (ಜಿಎಸ್ಐ) ಯು ಮಾಡಿದ ಗಮನಾರ್ಹ ಪ್ರಗತಿಯನ್ನು ಶ್ಲಾಘಿಸಿದರು. 36 ನೇ ಅಂತರರಾಷ್ಟ್ರೀಯ ಭೂವೈಜ್ಞಾನಿಕ ಕಾಂಗ್ರೆಸ್‌ನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಸಚಿವರು, 58 ವರ್ಷಗಳ ನಂತರ ಭಾರತವು ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮವು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿ ಸಾಧನಗಳನ್ನು ರೂಪಿಸಲು ಜಗತ್ತಿನಾದ್ಯಂತದ ಭೂವಿಜ್ಞಾನಿಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.

ಕಲ್ಲಿದ್ದಲು, ಗಣಿ ಮತ್ತು ರೈಲ್ವೇ ಖಾತೆ ರಾಜ್ಯ ಸಚಿವ ಶ್ರೀ ರಾವ್ ಸಾಹೇಬ್ ಪಾಟೀಲ್ ದಾನ್ವೆ, ಸಂವಹನ ರಾಜ್ಯ ಸಚಿವ ಶ್ರೀ ದೇವುಸಿನ್ಹ್ ಚೌಹಾಣ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ);  ಭೂ ವಿಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ),; ಪ್ರಧಾನಿ ಕಾರ್ಯಾಲಯ ರಾಜ್ಯ ಸಚಿವರು’ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಕಾರ್ಯಕ್ರಮವನ್ನು ವರ್ಚುವಲ್ ಆಗಿ  ಉದ್ದೇಶಿಸಿ ಮಾತನಾಡಿದರು. ಗಣಿ ಸಚಿವಾಲಯದ ಕಾರ್ಯದರ್ಶಿ ಡಾ. ಅಲೋಕ್ ಟಂಡನ್, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಂ ರವಿಚಂದ್ರನ್, ಜಿಎಸ್ಐ ಮಹಾನಿರ್ದೇಶಕ ಶ್ರೀ ರಾಜೇಂದ್ರ ಸಿಂಗ್ ಗರ್ಖಾಲ್ ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

36 ನೇ ಅಂತರರಾಷ್ಟ್ರೀಯ ಭೂವೈಜ್ಞಾನಿಕ ಕಾಂಗ್ರೆಸ್ "ಭೂವಿಜ್ಞಾನಗಳು: ಸುಸ್ಥಿರ ಭವಿಷ್ಯಕ್ಕಾಗಿ ಮೂಲ ವಿಜ್ಞಾನ" ಎಂಬ ವಿಷಯವನ್ನು ಆಧರಿಸಿದೆ. ಐಜಿಸಿಯು ಗಣಿ ಸಚಿವಾಲಯ, ಭೂ ವಿಜ್ಞಾನ ಸಚಿವಾಲಯ, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದ ವಿಜ್ಞಾನ ಅಕಾಡೆಮಿಗಳ ಜಂಟಿ ಪ್ರಯತ್ನವಾಗಿದೆ. ಭೂವಿಜ್ಞಾನಗಳ ಒಲಿಂಪಿಕ್ಸ್ ಎಂದು ಹೇಳಲಾಗುವ ಐಜಿಸಿಗಳನ್ನು, ವೈಜ್ಞಾನಿಕ ಪ್ರಾಯೋಜಕರಾದ ಇಂಟರ್‌ನ್ಯಾಶನಲ್ ಯೂನಿಯನ್ ಆಫ್ ಜಿಯೋಲಾಜಿಕಲ್ ಕಾಂಗ್ರೆಸ್ (ಐಯುಜಿಎಸ್) ಆಶ್ರಯದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತದ 5000 ದಿಂದ 7000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಭೂವಿಜ್ಞಾನ ಮತ್ತು ವೃತ್ತಿಪರ ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಜ್ಞಾನ ಮತ್ತು ಅನುಭವ ಹಂಚಿಕೆಗೆ ಅನನ್ಯ ವೇದಿಕೆಯನ್ನು ಒದಗಿಸುತ್ತದೆ. ಇದು ಗಣಿಗಾರಿಕೆ, ಖನಿಜ ಪರಿಶೋಧನೆ ಮತ್ತು ನೀರು, ಖನಿಜ ಸಂಪನ್ಮೂಲ ಮತ್ತು ಪರಿಸರದ ನಿರ್ವಹಣೆಯಲ್ಲಿನ ಇತ್ತೀಚಿನ ತಂತ್ರಜ್ಞಾನಗಳ ಕುರಿತು ಮೊದಲ ಮಾಹಿತಿ ನೀಡುತ್ತದೆ. ಐಜಿಸಿಯ ಉದ್ಘಾಟನಾ ದಿನದಂದು, ಜಿಯೋ ಪ್ರವಾಸೋದ್ಯಮ ಹಾಟ್‌ಸ್ಪಾಟ್‌ಕುರಿತ ಅಂಚೆ ಚೀಟಿಗಳು, ಮೊದಲ ದಿನದ ಕವರ್ ಮತ್ತು ಬಹು ವರ್ಣದ ಕಾಫಿ ಟೇಬಲ್ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಪ್ರಾದೇಶಿಕ ಪಾಲುದಾರರರಲ್ಲಿ ಮುಂದಾಳಾಗಿರುವ ಭಾರತವು, 2020 ರಲ್ಲಿ 36 ನೇ ಐಜಿಸಿಯನ್ನು ಆಯೋಜಿಸಲು 2012 ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ 34 ನೇ ಅಂತರರಾಷ್ಟ್ರೀಯ ಭೂವೈಜ್ಞಾನಿಕ ಕಾಂಗ್ರೆಸ್‌ನಲ್ಲಿ ಬಿಡ್ ಮಾಡಿತ್ತು. ಪ್ರಸ್ತುತ ಕಾಂಗ್ರೆಸ್, ಮೂಲತಃ 2-8 ಮಾರ್ಚ್, 2020 ರ ಅವಧಿಯಲ್ಲಿ ನಡೆಯಬೇಕಾಗಿತ್ತು. ಕೋವಿಡ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. 58 ವರ್ಷಗಳ ಹಿಂದೆ ಭಾರತವು ಐಜಿಸಿ ಯ 22 ನೇ ಅಧಿವೇಶನವನ್ನು ಆಯೋಜಿಸಿತ್ತು, ಇದು ಏಷ್ಯಾದಲ್ಲಿ ಮೊದಲ ಐಜಿಸಿ ಆಗಿತ್ತು.

***



(Release ID: 1807476) Visitor Counter : 169