ಉಕ್ಕು ಸಚಿವಾಲಯ

ಡ್ರೋಣ್ ಆಧಾರಿತ ಖನಿಜ ಶೋಧಕ್ಕೆ  ಐಐಟಿ ಖರಗ್ಪುರ್ ನೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ ಎನ್ ಎಂಡಿಸಿ

Posted On: 19 MAR 2022 11:39AM by PIB Bengaluru

ಉಕ್ಕು ಸಚಿವಾಲಯದಡಿ ಬರುವ ಕೇಂದ್ರದ ಒಡೆತನದ ಸಾರ್ವಜನಿಕ ವಲಯದ ಉದ್ದಿಮೆ, ದೇಶದ ಬಹುದೊಡ್ಡ ಕಬ್ಬಿಣದ ಅದಿರು ಉತ್ಪಾದಕ ಸಂಸ್ಥೆ, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ನಿಯಮಿತ (ಎನ್ ಎಂಡಿಸಿ) ಡ್ರೋಣ್ ಆಧಾರಿತ ಖನಿಜ ಶೋಧ ಕುರಿತಂತೆ ಬುಧವಾರ ಐಐಟಿ ಖರಗ್ಪುರ್ ನೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಎನ್ ಎಂಡಿಸಿ ಕಳೆದ ಆರು ದಶಕಗಳಿಂದ ತಾಮ್ರ, ರಾಕ್ ಫಾಸ್ಪೇಟ್, ಸುಣ್ಣದ ಕಲ್ಲು, ಮ್ಯಾಗ್ನಸೈಟ್, ವಜ್ರ, ಟಂಗ್ ಸ್ಟನ್ ಮತ್ತು ಬೀಚ್ ಸ್ಯಾಂಡ್ ಗಳಂತಹ ವ್ಯಾಪಕ ಶ್ರೇಣಿಯ ಖನಿಜಗಳಿಗಾಗಿ ಯುಎನ್ ಎಫ್ ಸಿಯ ಜಿ1 ಹಂತದಿಂದ ಜಿ4 ಹಂತದವರೆಗೆ  ಶೋಧನೆ ಮತ್ತು ಅನ್ವೇಷಣೆ ನಡೆಸಲಿದೆ. 
ಡ್ರೋಣ್ ಆಧಾರಿತ ಖನಿಜ ಶೋಧ ಕಾರ್ಯದ ಈ ಒಪ್ಪಂದಕ್ಕೆ ವರ್ಚುವಲ್ ವೇದಿಕೆಯಲ್ಲಿ ಸಹಿ ಹಾಕಲಾಗಿದ್ದು, ಈ ಕಾರ್ಯಕ್ರಮದಲ್ಲಿ ಎನ್ ಎಂಡಿಸಿ ವತಿಯಿಂದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸುಮಿತ್ ದೇವ್, ನಿರ್ದೇಶಕರು(ಹಣಕಾಸು) ಶ್ರೀ ಅಮಿತವ್ ಮುಖರ್ಜಿ, ನಿರ್ದೇಶಕರು(ತಾಂತ್ರಿಕ) ಶ್ರೀ ಸೋಮನಾಥ್ ನಂದಿ, ನಿರ್ದೇಶಕರು(ಉತ್ಪಾದನೆ) ಶ್ರೀ ಡಿ.ಕೆ. ಮೊಹಂತಿ ಮತ್ತು ಐಐಟಿ ಖರಗ್ಪುರ್ ನ ಪ್ರೊಫೆಸರ್ ಗಳು ಉಪಸ್ಥಿತರಿದ್ದರು. ಎನ್ ಎಂಡಿಸಿ ಪರವಾಗಿ ನಿರ್ದೇಶಕರಾದ(ಉತ್ಪಾದನೆ) ಶ್ರೀ ಡಿ.ಕೆ. ಮೊಹಂತಿ ಮತ್ತು ಐಐಟಿ ಖರಗ್ಪುರ್ ವತಿಯಿಂದ ಭೂಗರ್ಭಶಾಸ್ತ್ರ ಮತ್ತು ಖಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಎಸ್.ಪಿ. ಶರ್ಮಾ ಮತ್ತು ಖನಿಜ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಸಮೀರ್ ಕೆ. ಪಾಲ್ ಅವರು ಒಡಂಬಡಿಕೆಗೆ ಸಹಿ ಹಾಕಿದರು. 
    ಎನ್ ಎಂಡಿಸಿಯ ಸಿಎಂಡಿ ಶ್ರೀ ಸುಮಿತ್ ದೇಬ್ ಅವರು ಮಾತನಾಡಿ, “ಎನ್ ಎಂಡಿಸಿ ಡ್ರೋಣ್ ಆಧಾರಿತ ಖಭೌತ ಸಮೀಕ್ಷೆ ಕೈಗೊಳ್ಳುತ್ತಿರುವ ಮತ್ತು ದೇಶದಲ್ಲಿ ಖನಿಜ ಅನ್ವೇಷಣೆ ಕುರಿತಂತೆ ಹೈಪರ್ ಸ್ಪೆಕ್ಟ್ರಲ್ ಅಧ್ಯಯನವನ್ನು ಕೈಗೊಳ್ಳುತ್ತಿರುವ ದೇಶದ ಮೊದಲ ಸಿಪಿಎಸ್ಇ ಆಗಿದೆ. ಎನ್ ಎಂಡಿಸಿ, ಐಐಟಿ ಖರಗ್ಪುರ್ ನೊಂದಿಗೆ ಕೈಜೋಡಿಸಿರುವುದರಿಂದ ಹೊಸ ಅಧ್ಯಾಯ ಆರಂಭವಾಗಲಿದೆ ಮತ್ತು ರಾಷ್ಟ್ರದ ಖನಿಜ ಅನ್ವೇಷಣೆ ವಲಯದಲ್ಲಿ ಹೊಸ ಮಾನದಂಡ ನಿಗದಿಯಾಗಲಿದೆ” ಎಂದರು. 
ಮಧ್ಯಪ್ರದೇಶ ರಾಜ್ಯದಲ್ಲಿ ಎನ್ ಎಂಡಿಸಿ, ಹಲವು ಖನಿಜಗಳ ಶೋಧನೆಯಲ್ಲಿ ತೊಡಗಿದೆ ಮತ್ತು ಛತ್ತೀಸ್ ಗಢ್ ನ ಬೆಲೋಡಾ-ಬೆಲ್ಮುಂಡಿ ನಿಕ್ಷೇಪದಲ್ಲಿ ವಜ್ರಗಳ ಶೋಧನೆಯಲ್ಲಿ ತೊಡಗಿದೆ. ಕೇಂದ್ರೀಯ ಭಾರತೀಯ ವಜ್ರ ಪ್ರದೇಶದಲ್ಲಿ ಬಾಹ್ಯಾಕಾಶ ಖಭೌತ ಶಾಸ್ತ್ರವನ್ನು ಬಳಸುತ್ತಿರುವ ಮೊದಲ ಸಿಪಿಎಸ್ಇ ಎನ್ ಎಂಡಿಸಿಯಾಗಿದೆ ಮತ್ತು ಭುವನ್ ವೇದಿಕೆಯಲ್ಲಿ ಖನಿಜಗಳ ಶೋಧನಾ ದತ್ತಾಂಶವನ್ನು ಆನ್ ಲೈನ್ ಮೂಲಕ ನಿಗಾವಹಿಸಲಾಗುತ್ತಿದೆ. ಎನ್ ಎಂಡಿಸಿ ತಾಂತ್ರಿಕ ಆವಿಷ್ಕಾರ ಕೈಗೊಳ್ಳುತ್ತಿದೆ ಮತ್ತು ಗಣಿಗಳು ಮತ್ತು ಶೋಧನೆಗೆ ಸಂಬಂಧಿಸಿದಂತೆ ದತ್ತಾಂಶವನ್ನು ಡಿಜಿಟಲೀಕರಣಗೊಳಿಸುತ್ತಿದೆ.
ಡ್ರೋಣ್ ನೀತಿ ಆರಂಭಿಸುವ ಮೂಲಕ ಸರ್ಕಾರ ಭಾರತದಲ್ಲಿ ಅವುಗಳ ಕಾರ್ಯಾಚರಣೆ ಮತ್ತು ಡ್ರೋಣ್ ಬಳಕೆಯ ಮೇಲೆ ನಿಗಾ ಮತ್ತು ನಿಯಂತ್ರಣ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ ಹಾಗೂ ಸದ್ಯ ಡ್ರೋಣ್ ಅನ್ನು ಕೃಷಿ, ನಗರ ಯೋಜನೆ, ಅರಣ್ಯೀಕರಣ, ಗಣಿಗಾರಿಕೆ, ವಿಪತ್ತು ನಿರ್ವಹಣೆ, ಸರ್ವೇಕ್ಷಣಾ, ಸಾರಿಗೆ ಮತ್ತಿತರ ವಲಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. 
    ಎನ್ ಎಂಡಿಸಿ ಮತ್ತು ಐಐಟಿ ಖರಗ್ಪುರವು ಗಣಿಗಾರಿಕೆಗಾಗಿ ಡ್ರೋಣ್ (ಯುಎವಿ) ಅನ್ನು ಬಳಸಿಕೊಂಡು ಪರಿಶೋಧನೆಗಾಗಿ ಸ್ಪೆಕ್ಟ್ರಲ್ ಉತ್ಪನ್ನಗಳು, ವಿಧಾನಗಳು ಮತ್ತು ಅಲ್ಗಾರಿದಮ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ಎನ್‌ಎಂಡಿಸಿ ಮತ್ತು ಐಐಟಿ ಖರಗ್ಪುರ್ ನಡುವಿನ ಸಹಯೋಗವು ಖನಿಜ ಉತ್ಖನನಕ್ಕಾಗಿ ಸಾಫ್ಟ್‌ವೇರ್ ಸ್ಪೆಕ್ಟ್ರಲ್ ಉಪಕರಣಗಳ ಅಭಿವೃದ್ಧಿಗೆ ಮತ್ತು ಗಣಿಗಾರಿಕೆ ತಂತ್ರಜ್ಞಾನದ ಮೇಲೆ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳಿಗೆ ಕಾರಣವಾಗುತ್ತದೆ. 

 

***



(Release ID: 1807263) Visitor Counter : 217