ರಕ್ಷಣಾ ಸಚಿವಾಲಯ
ಬೆಂಗಳೂರಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆಂತರಿಕವಾಗಿ ದಾಖಲೆಯ 45 ದಿನಗಳಲ್ಲಿ ಡಿ.ಆರ್.ಡಿ.ಓ ನಿರ್ಮಿಸಿರುವ ವೈಮಾನಿಕ ನಿಯಂತ್ರಣ ಸಂಸ್ಥೆಯ ಸಮಗ್ರ ಕೇಂದ್ರವನ್ನು ಉದ್ಘಾಟಿಸಿದ ರಕ್ಷಣಾ ಮಂತ್ರಿ
ಸುಧಾರಿತ ಮಧ್ಯಮ ಯುದ್ಧ ವಿಮಾನದ ಅಭಿವೃದ್ಧಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆ ನಡೆಸಲು ಕಟ್ಟಡದ ಬಳಕೆ ರಾಷ್ಟ್ರೀಯ ಭದ್ರತೆ ಬಲಪಡಿಸುವಲ್ಲಿ ಈ ಸಂಕೀರ್ಣ ಬಹುದೂರ ಸಾಗುತ್ತದೆ: ಶ್ರೀ ರಾಜನಾಥ್ ಸಿಂಗ್
ಸಶಸ್ತ್ರ ಪಡೆಗಳನ್ನು ಸದಾ ಕಾಲ ಸನ್ನದ್ಧವಾಗಿರಿಸುವುದು ನಮ್ಮ ಪರಮೋಚ್ಚ ಆದ್ಯತೆ
ನಮ್ಮ ಕಾರ್ಯತಂತ್ರಗಳನ್ನು ಹೆಚ್ಚಿಸಲು ನಿರಂತರ ಕಾರ್ಯನಿರ್ವಹಣೆ : ರಕ್ಷಣಾ ಮಂತ್ರಿ
Posted On:
17 MAR 2022 3:35PM by PIB Bengaluru
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ [ಡಿ.ಆರ್.ಡಿ.ಒ]ಯ ಪ್ರಯೋಗಾಲಯವಾದ ವೈಮಾನಿಕ ಅಭಿವೃದ್ಧಿ ಸಂಸ್ಥೆ [ಎಡಿಇ] ಯಲ್ಲಿ ಏಳು ಅಂತಸ್ತಿನ ವಿಮಾನ ನಿಯಂತ್ರಣ ವ್ಯವಸ್ಥೆ [ಎಫ್.ಸಿ.ಎಸ್] ಏಕೀಕರಣ ಸೌಲಭ್ಯವಿರುವ ಕೇಂದ್ರವನ್ನು ರಕ್ಷಣಾ ಸಚಿವ ಶ್ರೀ ರಾಜ್ ನಾಥ್ ಸಿಂಗ್ ಮಾರ್ಚ್, 17, 2022 ರಂದು ಉದ್ಘಾಟಿಸಿದರು. ಈ ಅತ್ಯಾಧುನಿಕ ಸಂಕೀರ್ಣವನ್ನು ದಾಖಲೆಯ 45 ದಿನಗಳಲ್ಲಿ ನಿರ್ಮಿಸಲಾಗಿದೆ. ಇದು ಪೂರ್ವ ಇಂಜಿನಿಯರಿಂಗ್ ಮತ್ತು ಪೂರ್ವಭಾವಿ ವಿಧಾನವನ್ನು ಒಳಗೊಂಡಿರುವ ಆಂತರಿಕವಾಗಿ ಹೈಬ್ರಿಡ್ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ತಂತ್ರಜ್ಞಾನವನ್ನು ಮೆಸಸ್ ಲಾರ್ಸನ್ ಅಂಡ್ ಟೂಬ್ರೋ [ಎಲ್ ಅಂಡ್ ಟಿ] ನೆರವಿನೊಂದಿಗೆ ಡಿ.ಆರ್.ಡಿ.ಒ ಅಭಿವೃದ್ಧಿಪಡಿಸಿದೆ.
ಬೆಂಗಳೂರಿನಲ್ಲಿ ಎಡಿಇ ನಿಂದ ಸುಧಾರಿತ ಮಧ್ಯಮ ಯುದ್ಧ ವಿಮಾನ ನಿರ್ಮಾಣ ಮತ್ತು ಈ ಎಫ್.ಸಿ.ಎಸ್ ಸೌಲಭ್ಯದಿಂದ ಯುದ್ಧ ವಿಮಾನದ ಏವಿಯಾನಿಕ್ಸ್ ನಿರ್ಮಾಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ [ಆರ್ ಅಂಡ್ ಡಿ] ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ರಕ್ಷಣಾ ಸಚಿವರು ಮಾತನಾಡಿ, ಈ ಯೋಜನೆ ಕೇವಲ ಭಾರತಕ್ಕಾಗಿ ಮಾತ್ರ ವಿಶೇಷವಲ್ಲ. ಇಡೀ ಜಗತ್ತಿಗೆ ವಿನೂತನವಾದದ್ದು ಮತ್ತು ನವ ಭಾರತದ ನವ ಶಕ್ತಿಯಾಗಿ ಇದು ಸಾಕಾರಗೊಂಡಿದೆ. “ಈ ಶಕ್ತಿಯು ತಂತ್ರಜ್ಞಾನ, ಬದ್ಧತೆ, ಸಾರ್ವಜನಿಕ ವಲಯ, ಖಾಸಗಿ ಕ್ಷೇತ್ರ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಾಂಸ್ಥಿಕ ಸಹಯೋಗ ಹಾಗೂ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವಲ್ಲಿ ನೆರವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯದಂತೆ “ಆತ್ಮ ನಿರ್ಭರ ಭಾರತ” ದ ಆಶಯದೊಂದಿಗೆ ಇದು ಬಹುದೂರ ಸಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂಕೀರ್ಣ ಯುದ್ಧ ವಿಮಾನದ ಪೈಲೆಟ್ ಗಳಿಗೆ ಸಿಮ್ಯುಲೇಟರ್ ತರಬೇತಿಯನ್ನು ನೀಡುತ್ತದೆ. ಇದು ಅತ್ಯಂತ ಪ್ರಮುಖ ಸಂಕೀರ್ಣವಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ವಿಶ್ಲೇಷಿಸಿದರು. ಈ ಸಿಮ್ಯುಲೇಟರ್ ಯಾವುದೇ ನಷ್ಟವಾಗದಂತೆ, ತಪ್ಪುಗಳನ್ನು ಮಾಡಿ ಕಲಿತು ನಿಪುಣತೆ ಬೆಳೆಸಿಕೊಳ್ಳಲು ಪೈಲೆಟ್ ಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಡಿ.ಆರ್.ಡಿ.ಒ ಮತ್ತು ಎಲ್ ಅಂಡ್ ಟಿ ಅಭಿವೃದ್ಧಿಪಡಿಸಿರುವ ಆಧುನಿಕ ತಂತ್ರಜ್ಞಾನ ಕುರಿತು ಮಾತನಾಡಿದ ರಕ್ಷಣಾ ಸಚಿವರು, ಇದು ನಿರ್ಮಾಣ ವಲಯದಲ್ಲಿ ತನ್ನ ಉತ್ಪಾದನೆಯನ್ನು ಹೆಚ್ಚಿಸಲಿದೆ: ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಉತ್ತೇಜಿಸುತ್ತದೆ, ನಷ್ಟವನ್ನು ಕಡಿಮೆ ಮಾಡಿ ಮತ್ತು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಕರಿಸುತ್ತದೆ ಎಂದು ಹೇಳಿದರು. ಆಧುನಿಕ ತಂತ್ರಜ್ಞಾನ ಈ ವಲಯದ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಮುಂಬರುವ ದಿನಗಳಲ್ಲಿ ಭಾರತ ನಿರ್ಮಾಣ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ರಾಷ್ಟ್ರಗಳ ಸಾಲಿಗೆ ಸೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಶಸ್ತ್ರ ಪಡೆಗಳು, ವಿಜ್ಞಾನಿಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ರೈತರು ಮತ್ತು ಜನರನ್ನು ತಮ್ಮ ಶ್ರೇಷ್ಠತೆ ಹಾಗೂ ಸಂತಸ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಹೆಚ್ಚುವರಿ ದೂರ ಸಾಗುವ ಸರ್ಕಾರದ ಸಂಕಲ್ಪನವನ್ನು ಶ್ರೀ ರಾಜನಾಥ್ ಸಿಂಗ್ ಪುನರುಚ್ಚಿಸಿದರು. “ಆರ್ಥಿಕತೆ, ರಾಜತಾಂತ್ರಿಕತೆ ಮತ್ತು ಕಾರ್ಯತಂತ್ರದ ಸಮೀಕರಣಗಳು ಜಗತ್ತಿನಾದ್ಯಂತ ಬದಲಾಗುತ್ತಿವೆ ಮತ್ತು ಪ್ರಮುಖ ಶಕ್ತಿಶಾಲಿ ದೇಶಗಳು ಸಂಘರ್ಷದಲ್ಲಿ ನಿರತವಾಗಿವೆ. ಹೀಗಾಗಿ ನಮ್ಮ ರಕ್ಷಣಾ ಅಗತ್ಯಗಳು ಹೆಚ್ಚಾಗಿವೆ ಮತ್ತು ಸಶಸ್ತ್ರಪಡೆಗಳು ನಿರಂತರವಾಗಿ ಆಧುನೀಕರಣಗೊಳ್ಳುವುದು ಇಂದಿನ ಅಗತ್ಯವಾಗಿದೆ. ನಾವು ಸನ್ನದ್ಧವಾಗಿರುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ನಮ್ಮ ಕಾರ್ಯತಂತ್ರದ ಸಾಮರ್ಥ್ಯ ಹೆಚ್ಚಿಸಲು ನಿರಂತರವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಅದು ತಂತ್ರಜ್ಞಾನ ಅಥವಾ ಉತ್ಪಾದನೆಯಾಗಿರಬಹುದು, ಸೇವೆಗಳು ಇಲ್ಲವೆ ಸೌಲಭ್ಯಗಳಾಗಿರಬಹುದು, ಈ ವಲಯಗಳಲ್ಲಿ ಆಧುನಿಕತೆ ಮತ್ತು ತ್ವರಿತ ಅಭಿವೃದ್ಧಿ ಈಗಿನ ಅಗತ್ಯವಾಗಿದೆ”. ರಾಷ್ಟ್ರೀಯ ಭದ್ರತೆಯನ್ನು ಬಲಗೊಳಿಸಲು ಡಿ.ಆರ್.ಡಿ.ಒ ನಿರ್ಣಾಯಕ ಪಾತ್ರವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭವಿಷ್ಯದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಡಿ.ಆರ್.ಡಿ.ಒ ಗುರಿಯಾಗಿದ್ದು, ಅದರ ಎಲ್ಲಾ ಹಂತದ ಪ್ರಯೋಜನಗಳು ನಾಗರಿಕ ವಲಯಕ್ಕೂ ಲಭ್ಯವಾಗಲಿದೆ ಎಂದು ರಕ್ಷಣಾ ಸಚಿವರು ಭರವಸೆ ನೀಡಿದರು. “ನಮ್ಮ ಸಾಂಪ್ರದಾಯಿಕ ನಿರ್ಮಾಣ ಉದ್ಯಮವನ್ನು ಸಾಮಾನ್ಯವಾಗಿ ಕಾರ್ಮಿಕ ತೀವ್ರತೆ, ಹೆಚ್ಚಿನ ಅಪಾಯ ಮತ್ತು ಕಡಿಮೆ ಉತ್ಪಾದಕತೆ ಎಂದು ಪರಿಗಣಿಸಲಾಗುತ್ತದೆ. ಆದರೆ ಡಿ.ಆರ್.ಡಿ.ಒ ಆಧುನಿಕ ತಂತ್ರಜ್ಞಾನದ ಮೂಲಕ ಎಫ್.ಸಿ.ಎಸ್ ಸಂಕೀರ್ಣವನ್ನು ನಿರ್ಮಿಸಿದ ಮಾದರಿಯಲ್ಲಿ ನಮ್ಮ ಮೂಲ ಸೌಕರ್ಯ ಯೋಜನೆಗಳನ್ನು ಕಡಿಮೆ ವೆಚ್ಚದಲ್ಲಿ ಮತ್ತು ಕಾಲಮಿತಿಯಲ್ಲಿ ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು. ಡಿ.ಆರ್.ಡಿ.ಒ ನಿರಂತರವಾಗಿ ಹೊಸ ಸಾಧ್ಯತೆಯ ನಿರ್ಮಾಣ ತಂತ್ರಜ್ಞಾನವನ್ನು ಅನ್ವೇಷಿಸುತ್ತಿದೆ ಮತ್ತು ಹೊಸ ನಾವಿನ್ಯತೆಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.
ಎಫ್.ಸಿ.ಎಸ್ ಸೌಲಭ್ಯ 1.3 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಕಟ್ಟಡವಾಗಿದ್ದು, 45 ದಿನಗಳಲ್ಲಿ ಇದನ್ನು ನಿರ್ಮಿಸಲಾಗಿದೆ. ದೇಶದ ನಿರ್ಮಾಣ ಉದ್ಯಮದ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಏಳು ಅಂತಸ್ತಿನ ಶಾಶ್ವತ ಕಟ್ಟಡವನ್ನು ನಿರ್ಮಿಸಿ ವಿಶಿಷ್ಟ ದಾಖಲೆ ನಿರ್ಮಿಸಲಾಗಿದೆ. ಇದು ಆಧುನಿಕ ತಂತ್ರಜ್ಞಾನದ ನಿರ್ಮಾಣವಾಗಿದ್ದು, ಕಾಲಮ್ ಮತ್ತು ಬೀಮ್ ಗಳನ್ನು ಉಕ್ಕಿನ ಪ್ಲೇಟ್ ಗಳನ್ನು ಬಳಸಿ ನಿರ್ಮಾಣದ ಚೌಕಟ್ಟು ರೂಪಿಸಲಾಗಿದೆ. ಕಾಲಮ್ ಗಳು ಟೊಳ್ಳಾದ ಉಕ್ಕಿನ ಕೊಳವೆಯಾಕಾರದ ಭಾಗವಾಗಿವೆ. ಈ ಕಾಲಮ್ ಗಳಲ್ಲಿ ಕಾಂಕ್ರಿಟ್ ತುಂಬಿದ ಉಕ್ಕಿನ ಟೊಳ್ಳಾದ ಅಡ್ಡವಾಗಿರುವ ವಿಭಾಗಗಳಿವೆ. ಸ್ಲ್ಯಾಬ್ ಗಳು ಭಾಗಶಃ ಮೊದಲೇ ಕಾಂಕ್ರಿಟ್ ರಚನೆಯನ್ನು ಸಿದ್ಧಪಡಿಸಲಾಗಿದೆ ಮತ್ತು ನಿವೇಶನದಲ್ಲಿ ಎಲ್ಲವನ್ನೂ ಜೋಡಿಸಲಾಗಿದೆ. ಏಕ ಕಾಲದಲ್ಲಿ ಇಲ್ಲಿನ ರಚನೆಯನ್ನು ಏಕ ಶಿಲೆಯಾಗಿ ಎರಕ ಹೊಯ್ದು ಕಾಂಕ್ರೀಟಿಂಗ್ ಮಾಡಲಾಗಿದೆ. ಹೀಗಾಗಿ ಪೂರ್ವಭಾವಿ ನಿರ್ಮಾಣದ ರಚನೆಗಳನ್ನು ಬಳಸಲಾಗಿದೆ. ಕಾಂಕ್ರಿಟ್ ತುಂಬಿದ ಟೊಳ್ಳಾದ ವಿಭಾಗಗಳಲ್ಲಿ ಶಾಶ್ವತವಾಗಿ ಉಕ್ಕಿನ ಚೌಕಟ್ಟನ್ನು ಒದಗಿಸಲಾಗಿದೆ. ಇದು ಸಾಂಪ್ರದಾಯಿಕ ನಿರ್ಮಾಣಕ್ಕೆ ಹೋಲಿಸಿದರೆ ಸಮಯ ಮತ್ತು ಶ್ರಮವನ್ನು ತೀವ್ರವಾಗಿ ಕಡಿಮೆ ಮಾಡಲಿದೆ. ರಾಷ್ಟ್ರೀಯ ಗುಣಮಟ್ಟದ ಕಟ್ಟಡ ಸಂಹಿತೆ ಪ್ರಕಾರ ವಿದ್ಯುತ್ ವ್ಯವಸ್ಥೆ ಮತ್ತು ಅಗ್ನಿಶಾಮಕ ರಕ್ಷಣೆಯೊಂದಿಗೆ ವಿ.ಆರ್. ಎಫ್ ಹವಾನಿಯಂತ್ರಿತ ವ್ಯವಸ್ಥೆಯನ್ನು ಸಹ ಕಟ್ಟಡದಲ್ಲಿ ಒದಗಿಸಲಾಗಿದೆ. ಎಲ್ಲಾ ರಚನಾತ್ಮಕ ವಿನ್ಯಾಸದ ಮಾನದಂಡಗಳನ್ನು ಇಲ್ಲಿ ಅನುಸರಿಸಲಾಗಿದೆ.
ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ರಕ್ಷಣಾ ಇಲಾಖೆ ಕಾರ್ಯದರ್ಶಿ ಮತ್ತು ಡಿ.ಆರ್.ಡಿ.ಒ ಅಧ್ಯಕ್ಷ ಡಾ. ಜಿ. ಸತೀಶ್ ರೆಡ್ಡಿ ಮತ್ತು ಡಿ.ಆರ್.ಡಿ.ಒ ಹಾಗೂ ರಾಜ್ಯ ಸರ್ಕಾರದ ಇತರೆ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
****
(Release ID: 1807036)
Visitor Counter : 357