ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಇಂಧನ ಮತ್ತು ರಕ್ಷಣಾ ವಲಯಗಳಲ್ಲಿ ಭಾರತ ಸ್ವಾವಲಂಬಿಯಾಗಲು ಸಹಕರಿಸುವಂತೆ ನವೋದ್ಯಮಗಳಿಗೆ ಶ್ರೀ ಪಿಯೂಷ್ ಗೋಯಲ್ ಕರೆ


“ಕೋವಿಡ್-19 ಶತಮಾನದ ಅತಿ ದೊಡ್ಡ ಬಿಕ್ಕಟ್ಟು, ಅದನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲಾಯಿತು, ಆಗ ನಮ್ಮ ಯುವಕ, ಯುವತಿಯರು ಹಲವು ನವೀನ ಪರಿಹಾರಗಳನ್ನು ಕಂಡುಕೊಂಡರು” : ಶ್ರೀ ಪಿಯೂಷ್ ಗೋಯಲ್

“8 ವರ್ಷಗಳ ಹಿಂದೆ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಆರಂಭ- ಆತ್ಮನಿರ್ಭರ್ ಭಾರತ್ ಉಪಕ್ರಮ ಮತ್ತು ಕೋವಿಡ್-19 ಪರಿಣಾಮ ಎಲ್ಲವೂ ಒಟ್ಟಾಗಿ ಭಾರತದ ಪ್ರಗತಿಗಾಥೆ ಸಹಕಾರಿ’’ ಎಂದ ಶ್ರೀ ಪಿಯೂಷ್ ಗೋಯಲ್

ನವೋದ್ಯಮಗಳಿಗೆ ಸರ್ಕಾರದ ಬಾಗಿಲು ದಿನದ 24 ಗಂಟೆಯೂ ತೆರೆದಿರುತ್ತದೆ - ಶ್ರೀ ಪಿಯೂಷ್ ಗೋಯಲ್

Posted On: 13 MAR 2022 11:23AM by PIB Bengaluru

ಕೋವಿಡ್-19ನಂತೆ ಪ್ರತಿಯೊಂದು ಬಿಕ್ಕಟ್ಟನ್ನೂ ಸಹ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬಹುದು. ಕೋವಿಡ್-19 ಅತಿದೊಡ್ಡ ಬಿಕ್ಕಟ್ಟು ಮತ್ತು ಶತಮಾನದ ಬಹುದೊಡ್ಡ ಬಿಕ್ಕಟ್ಟನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಲಾಯಿತು. ಆಗ ನಮ್ಮ ಹಲವು ಯುವಕ, ಯುವತಿಯರು ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಕಂಡುಕೊಂಡರು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣೆ ಹಾಗೂ ಜವಳಿ ಸಚಿವ ಶ್ರೀ ಪಿಯೂಷ್ ಗೋಯಲ್ ಬೆಂಗಳೂರಿನಲ್ಲಿ ಎಕನಾಮಿಕ್ ಟೈಮ್ಸ್ ನವೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೇಳಿದರು.

ಸದ್ಯದ ಯುದ್ಧದ ಬಿಕ್ಕಟ್ಟು ಸೇರಿದಂತೆ ಹಲವು ಸಂದರ್ಭಗಳು ನಮಗೆ ಅವಕಾಶಗಳನ್ನು ಒದಗಿಸುತ್ತವೆ ಎಂದು ಶ್ರೀ ಗೋಯಲ್ ಹೇಳಿದರು. ಸದ್ಯದ ಉಕ್ರೇನ್-ರಷ್ಯಾ ಬಿಕ್ಕಟ್ಟು ನಮ್ಮೆಲ್ಲರಿಗೂ ಕಚ್ಚಾತೈಲ ಮತ್ತು ರಕ್ಷಣಾ ಸಾಮಗ್ರಿಗಳ ಮೇಲೆ ಅವಲಂಬನೆಯಾಗಬಾರದು ಎಂಬುದಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದರು. ಇಂಧನ ಅಗತ್ಯಗಳಲ್ಲಿ ಭಾರತ ಸ್ವಾವಲಂಬಿಯಾಗಲು ಸಹಕರಿಸಬೇಕು ಎಂದು ಅವರು ನವೋದ್ಯಮಗಳಿಗೆ ಕರೆ ನೀಡಿದರು. ಕೆಲವೊಂದು ನವೋದ್ಯಮಗಳು ರಕ್ಷಣಾ ಸಾಮಗ್ರಿಗಳ ಸ್ವದೇಶಿಕರಣದಲ್ಲಿ ನವೀನ ವಿಧಾನಗಳತ್ತ ಎದುರು ನೋಡುತ್ತಿವೆ. 8 ವರ್ಷಗಳ ಹಿಂದೆ ಆರಂಭವಾದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಸದ್ಯದ ಪರಿಸ್ಥಿತಿಗೆ ಅತ್ಯಂತ ಸೂಕ್ತವಾಗಿ ಹೊಂದುತ್ತದೆ ಮತ್ತು ಆತ್ಮನಿರ್ಭರ ಭಾರತ ಉಪಕ್ರಮ- ಕೋವಿಡ್-19 ಪರಿಣಾಮವಾಗಿ ಎಲ್ಲವೂ ಒಗ್ಗೂಡಿ ಭಾರತದ ಪ್ರಗತಿಗಾಥೆಗೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು. ಎಕನಾಮಿಕ್ಸ್ ಟೈಮ್ಸ್ ನ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಬೋಧಿಸತ್ವ ಗಂಗೂಲಿ ಅವರ ಜೊತೆಗಿನ ಸಂವಾದದಲ್ಲಿ ಶ್ರೀ ಗೋಯಲ್ ಅವರು ನವೋದ್ಯಮಗಳು ಸಮಸ್ಯೆಗಳಿಗೆ ಹೇಗೆ ಪರಿಹಾರಗಳನ್ನು ದೊರಕಿಸಿಕೊಡಬಲ್ಲವು ಎಂಬ ಕುರಿತು ಹಲವು ಉದಾಹರಣೆಗಳನ್ನು ನೀಡಿದರು.

ಸರ್ಕಾರ ನವೋದ್ಯಮಗಳ ಅಗತ್ಯಗಳ ಬಗ್ಗೆ ಆಲಿಸುತ್ತಿದೆ ಮತ್ತು ದಿನದ 24 ಗಂಟೆಯೂ ಸರ್ಕಾರದ ಬಾಗಿಲುಗಳು ತೆರೆದಿರುತ್ತವೆ ಎಂದು ಸಚಿವರು ಭರವಸೆ ನೀಡಿದರು.

ಬೆಂಗಳೂರಿನ ಸಂಚಾರದಟ್ಟಣೆ ಸಮಸ್ಯೆಯನ್ನು ಉಲ್ಲೇಖಿಸಿದ ಶ್ರೀ ಪಿಯೂಷ್ ಗೋಯಲ್, ಈ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಪರಿಹಾರ ಕಂಡುಕೊಳ್ಳುವಂತೆ ನವೋದ್ಯಮಗಳಿಗೆ ಸೂಚಿಸಿದರು.

ಸಂವಾದ ಗೋಷ್ಠಿಗೂ ಮುನ್ನ ಕಳೆದ ರಾತ್ರಿ ನಡೆದ ಸಮಾರಂಭದಲ್ಲಿ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಙವ್, ಪ್ರಶಸ್ತಿಗಳನ್ನು ಪ್ರದಾನ ಮಾಡಿದರು ಮತ್ತು ಗಣ್ಯರನ್ನುದ್ದೇಶಿಸಿ ಮಾತನಾಡಿದರು. ಅವರು ಸೆಮಿಕಂಡೆಕ್ಟರ್ ನೀತಿ ನವೋದ್ಯಮಗಳಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿದರು.

ಎಕನಾಮಿಕ್ ಟೈಮ್ಸ್ ನ ನವೋದ್ಯಮ ಪ್ರಶಸ್ತಿಗಳನ್ನು 9 ವಿಭಾಗಗಳಲ್ಲಿ ನೀಡಲಾಯಿತು. ಅವುಗಳೆಂದರೆ – ವರ್ಷದ ನವೋದ್ಯಮ, ಮಿಡಾಸ್ ಟಚ್, ವುಮೆನ್ ಅಹೆಡ್, ಕಂಬ್ಯಾಕ್ ಕಿಡ್, ಬೆಸ್ಟ್ ಆನ್ ಕ್ಯಾಂಪಸ್, ಸಾಮಾಜಿಕ ಉದ್ಯಮ, ಅಗ್ರ ಆವಿಷ್ಕಾರಿ, ಬೂಟ್ಸ್ ಟ್ರ್ಯಾಪ್ ಚಾಂಪ್ ಮತ್ತು ಕೋವಿಡ್ ನೇತೃತ್ವದ ವ್ಯಾಪಾರ ಪರಿವರ್ತನೆ.

***



(Release ID: 1805517) Visitor Counter : 203