ಆಯುಷ್
ಭಾರತದಲ್ಲಿ ಸಾಂಪ್ರದಾಯಿಕ ವೈದ್ಯಕ್ಕಾಗಿ ಡಬ್ಲ್ಯು.ಎಚ್.ಓ. ಜಾಗತಿಕ ಕೇಂದ್ರ ಸ್ಥಾಪನೆಗೆ ಸಂಪುಟದ ಅನುಮೋದನೆ
Posted On:
09 MAR 2022 1:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಓ.) ನಡುವೆ ಆತಿಥ್ಯ ರಾಷ್ಟ್ರ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಗುಜರಾತ್ ನ ಜಾಮ್ ನಗರದಲ್ಲಿ ಸಾಂಪ್ರದಾಯಿಕ ವೈದ್ಯ ಕುರಿತ ಡಬ್ಲ್ಯು.ಎಚ್.ಓ. ಜಾಗತಿಕ ಕೇಂದ್ರ (ಡಬ್ಲ್ಯು.ಎಚ್.ಓ. ಜಿಸಿಟಿಎಂ) ಸ್ಥಾಪನೆಗೆ ಅನುಮೋದನೆ ನೀಡಿದೆ.
ಡಬ್ಲ್ಯು.ಎಚ್.ಓ. ಜಿಸಿಟಿಎಂ ಅನ್ನು ಆಯುಷ್ ಸಚಿವಾಲಯದ ಅಡಿಯಲ್ಲಿ ಜಾಮ್ ನಗರದಲ್ಲಿ ಸ್ಥಾಪಿಸಲಾಗುವುದು. ಪ್ರಪಂಚದಾದ್ಯಂತ ಸಾಂಪ್ರದಾಯಿಕ ವೈದ್ಯಕೀಯಕ್ಕೆ ಇದು ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವಾಗಿರುತ್ತದೆ (ಕಚೇರಿ).
ಪ್ರಯೋಜನಗಳು:
- ಜಗತ್ತಿನಾದ್ಯಂತ ಆಯುಷ್ ವ್ಯವಸ್ಥೆಗಳನ್ನು ನೆಲೆಗೊಳಿಸಲು
- ಸಾಂಪ್ರದಾಯಿಕ ವೈದ್ಯಕ್ಕೆ ಸಂಬಂಧಿಸಿದ ಜಾಗತಿಕ ಆರೋಗ್ಯ ವಿಷಯಗಳಲ್ಲಿ ನಾಯಕತ್ವವನ್ನು ಒದಗಿಸಲು.
- ಸಾಂಪ್ರದಾಯಿಕ ವೈದ್ಯದ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ, ಲಭ್ಯತೆ ಮತ್ತು ತರ್ಕಬದ್ಧ ಬಳಕೆಯನ್ನು ಖಚಿತಪಡಿಸಿಕೊಳ್ಳಲು.
- ಸಂಬಂಧಿತ ತಾಂತ್ರಿಕ ಕ್ಷೇತ್ರಗಳಲ್ಲಿ, ಸಲಕರಣೆಗಳು ಮತ್ತು ವಿಧಾನಗಳಲ್ಲಿ ಮಾನದಂಡಗಳು, ಗುಣಮಟ್ಟ ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲು, ದತ್ತಾಂಶ ಸಂಗ್ರಹಿಸಿ ವಿಶ್ಲೇಷಣೆಯನ್ನು ಕೈಗೊಳ್ಳಲು ಹಾಗು ಪ್ರಭಾವದ ಮೌಲ್ಯ ಮಾಪನ ಮಾಡಲು. ಅಸ್ತಿತ್ವದಲ್ಲಿರುವ ಟಿಎಂ. ದತ್ತಾಂಶ ಬ್ಯಾಂಕ್ ಗಳು, ವರ್ಚುವಲ್ ಲೈಬ್ರರಿಗಳು ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಸಹಯೋಗವನ್ನು ರೂಪಿಸುವ ಡಬ್ಲ್ಯು.ಎಚ್.ಓ. ಟಿ.ಎಂ. ಇನ್ಫ್ ರ್ಮ್ಯಾಟಿಕ್ಸ್ ಕೇಂದ್ರವನ್ನು ರಚಿಸಲು.
- ಉದ್ದೇಶಗಳಿಗೆ ಪ್ರಸ್ತುತವಾಗಿರುವ ಕ್ಷೇತ್ರಗಳಲ್ಲಿ ನಿರ್ದಿಷ್ಟ ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಮತ್ತು ಡಬ್ಲ್ಯು.ಎಚ್.ಓ. ಅಕಾಡೆಮಿ ಮತ್ತು ಇತರ ಕಾರ್ಯತಂತ್ರದ ಪಾಲುದಾರರೊಂದಿಗೆ ಸಹಭಾಗಿತ್ವದ ಮೂಲಕ ಕ್ಯಾಂಪಸ್, ವಸತಿಗಳಲ್ಲಿ ಅಥವಾ ವೆಬ್ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಗೇಬ್ರಿಯಾಸಸ್ ಅವರು 2020ರ ನವೆಂಬರ್ 13 ರಂದು 5ನೇ ಆಯುರ್ವೇದ ದಿನದಂದು ಭಾರತದ ಗೌರವಾನ್ವಿತ ಪ್ರಧಾನಮಂತ್ರಿಯವರ ಘನ ಉಪಸ್ಥಿತಿಯಲ್ಲಿ ಭಾರತದಲ್ಲಿ ಡಬ್ಲ್ಯು.ಎಚ್.ಓ. ಜಿಸಿಟಿಎಂ ಸ್ಥಾಪಿಸುವುದಾಗಿ ಘೋಷಿಸಿದರು. ಮಾನ್ಯ ಪ್ರಧಾನಮಂತ್ರಿಯವರು ಡಬ್ಲ್ಯು.ಎಚ್.ಓ. ಈ ಉಪಕ್ರಮವನ್ನು ಶ್ಲಾಘಿಸಿದರು ಮತ್ತು ಡಬ್ಲ್ಯು.ಎಚ್.ಓ. ಜಿಸಿಟಿಎಂ ಜಾಗತಿಕ ಸ್ವಾಸ್ಥ್ಯ ಕೇಂದ್ರವಾಗಿ ಹೊರಹೊಮ್ಮುತ್ತದೆ, ಪುರಾವೆ-ಆಧಾರಿತ ಸಂಶೋಧನೆ, ತರಬೇತಿ ಮತ್ತು ಸಾಂಪ್ರದಾಯಿಕ ವೈದ್ಯದ ಜಾಗೃತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದರು.
ಈ ಕೇಂದ್ರದ ಸ್ಥಾಪನೆಗಾಗಿ ಚಟುವಟಿಕೆಗಳ ಸಮನ್ವಯ, ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆಗಾಗಿ ಜಂಟಿ ಕಾರ್ಯಪಡೆ (ಜೆಟಿಎಫ್) ಅನ್ನು ರಚಿಸಲಾಗಿದೆ. ಜೆಟಿಎಫ್ ಭಾರತ ಸರ್ಕಾರ, ಭಾರತದ ಶಾಶ್ವತ ಅಭಿಯಾನ, ಜಿನೀವಾ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡಿದೆ. ಇದರ ವ್ಯಾಪ್ತಿಯಲ್ಲಿ, ಗುರುತಿಸಲಾದ ತಾಂತ್ರಿಕ ಚಟುವಟಿಕೆಗಳು ಮತ್ತು ಸಂಪೂರ್ಣ ಕ್ರಿಯಾತ್ಮಕ ಡಬ್ಲ್ಯು.ಎಚ್.ಓ. ಜಿಸಿಟಿಎಂ ಯೋಜನೆಯನ್ನು ಕಾರ್ಯಗತಗೊಳಿಸಲು ಗುಜರಾತ್ ನ ಜಾಮ್ ನಗರದ ಐಟಿಆರ್.ಎ. ನಲ್ಲಿ ಮಧ್ಯಂತರ ಕಚೇರಿಯನ್ನು ಸ್ಥಾಪಿಸಲಾಗುತ್ತಿದೆ.
ಮಧ್ಯಂತರ ಕಚೇರಿಯು ಪುರಾವೆಗಳ ಉತ್ಪಾದನೆ ಮತ್ತು ನಾವೀನ್ಯತೆ, ಸಾಂಪ್ರದಾಯಿಕ ವೈದ್ಯಕ್ಕಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಆಧಾರಿತ ಪರಿಹಾರಗಳು, ಕೊಕ್ರೇನ್ ಸಹಯೋಗದೊಂದಿಗೆ ವ್ಯವಸ್ಥಿತ ವಿಮರ್ಶೆಗಳು, ಡಬ್ಲ್ಯು.ಎಚ್.ಓ. ಜಿಪಿಡಬ್ಲ್ಯು 13 (2019-2023ರ ಹದಿಮೂರನೇ ಸಾಮಾನ್ಯ ಕಾರ್ಯಕ್ರಮದಾದ್ಯಂತ ಸಾಂಪ್ರದಾಯಿಕ ವೈದ್ಯದ ದತ್ತಾಂಶಗಳ ಜಾಗತಿಕ ಸಮೀಕ್ಷೆಯನ್ನು ವ್ಯಾಪಕವಾಗಿ ನೀಡಲು, ಸುಸ್ಥಿರ ಅಭಿವೃದ್ಧಿ ಗುರಿಗಳು, ಸಾಂಪ್ರದಾಯಿಕ ವೈದ್ಯಕೀಯ ಸಾಮಾಜಿಕ-ಸಾಂಸ್ಕೃತಿಕ ಮತ್ತು ಜೀವವೈವಿಧ್ಯ ಪರಂಪರೆಯ ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆ ಮತ್ತು ಮಹತ್ವದ ಕಾರ್ಯಗಳು, ವ್ಯಾಪಾರ ಕಾರ್ಯಾಚರಣೆಗಳು ಮತ್ತು ಡಬ್ಲ್ಯು.ಎಚ್.ಓ. ಜಿಸಿಟಿಎಂನ ಮುಖ್ಯ ಕಚೇರಿಯ ಸ್ಥಾಪನೆಗೆ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಮುನ್ನೋಟದ ವಿಧಾನ ಒದಗಿಸುವ ಉದ್ದೇಶ ಹೊಂದಿದೆ.
ಡಬ್ಲ್ಯು.ಎಚ್.ಓ. ಜಿಸಿಟಿಎಂ ಸಾಂಪ್ರದಾಯಿಕ ವೈದ್ಯಕ್ಕೆ ಸಂಬಂಧಿಸಿದ ಎಲ್ಲಾ ಜಾಗತಿಕ ಆರೋಗ್ಯ ವಿಷಯಗಳ ಮೇಲೆ ನಾಯಕತ್ವವನ್ನು ಒದಗಿಸುತ್ತದೆ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಸಂಶೋಧನೆ, ರೂಢಿಗಳು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ನೀತಿಗಳನ್ನು ರೂಪಿಸುವಲ್ಲಿ ಸದಸ್ಯ ರಾಷ್ಟ್ರಗಳಿಗೆ ಬೆಂಬಲವನ್ನು ನೀಡುತ್ತದೆ.
ಆಯುಷ್ ಸಚಿವಾಲಯವು ಆಯುರ್ವೇದ ಮತ್ತು ಯುನಾನಿ ಪದ್ಧತಿಯ ತರಬೇತಿ ಮತ್ತು ರೂಢಿಗಳ ಕುರಿತು ಮಾನದಂಡಗಳ ದಾಖಲೆಗಳನ್ನು ಅಭಿವೃದ್ಧಿಪಡಿಸುವುದು, ರೋಗಗಳ ಅಂತಾರಾಷ್ಟ್ರೀಯ ವರ್ಗೀಕರಣ -11ರ ಸಾಂಪ್ರದಾಯಿಕ ವೈದ್ಯದ ಅಧ್ಯಾಯದಲ್ಲಿ ಎರಡನೇ ಮಾದರಿಯನ್ನು ಪರಿಚಯಿಸುವುದು, ಎಂ-ಯೋಗದಂತಹ ಆನ್ವಯಿಕಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಅನೇಕ ರಂಗಗಳಲ್ಲಿ ಡಬ್ಲ್ಯು.ಎಚ್.ಓ.ನೊಂದಿಗೆ ಸಹಯೋಗ ಹೊಂದಿದೆ. ಅಂತಾರಾಷ್ಟ್ರೀಯ ಗಿಡಮೂಲಿಕೆ ಚಿಕಿತ್ಸೆಯ ಫಾರ್ಮಾಕೋಪಿಯಾ (ಐಪಿಎಚ್.ಎಂ.) ಮತ್ತು ಇತರ ಸಂಶೋಧನಾ ಅಧ್ಯಯನಗಳು ಇತ್ಯಾದಿಗಳ ಕಾರ್ಯವನ್ನು ಬೆಂಬಲಿಸುತ್ತದೆ.
ಸಾಂಪ್ರದಾಯಿಕ ವೈದ್ಯಕೀಯ ಆರೋಗ್ಯ ರಕ್ಷಣೆಯ ವಿತರಣಾ ವ್ಯವಸ್ಥೆಗಳ ಪ್ರಮುಖ ಆಧಾರವಾಗಿದೆ ಮತ್ತು ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. 2030ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ ಜಗತ್ತು ಹತ್ತು ವರ್ಷಗಳ ಮೈಲಿಗಲ್ಲನ್ನು ಸಮೀಪಿಸುತ್ತಿರುವಾಗ ಎಲ್ಲಾ ಜನರಿಗೆ ಗುಣಮಟ್ಟದ ಅಗತ್ಯ ಆರೋಗ್ಯ ಸೇವೆಗಳು ಮತ್ತು ಸುರಕ್ಷಿತ, ಪರಿಣಾಮಕಾರಿ ಮತ್ತು ಕೈಗೆಟುಕುವ ಅಗತ್ಯ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಸುರಕ್ಷಿತ ಮತ್ತು ಪರಿಣಾಮಕಾರಿ ಸಾಂಪ್ರದಾಯಿಕ ಔಷಧವು ಮಹತ್ವದ ಪಾತ್ರವನ್ನು ವಹಿಸುತ್ತದೆ. ಡಬ್ಲ್ಯು.ಎಚ್.ಓ. ಜಿಸಿಟಿಎಂ ಆಯಾ ದೇಶಗಳಲ್ಲಿ ಸಾಂಪ್ರದಾಯಿಕ ವೈದ್ಯವನ್ನು ನಿಯಂತ್ರಿಸುವಲ್ಲಿ, ಏಕೀಕರಿಸುವಲ್ಲಿ ಮತ್ತು ಮತ್ತಷ್ಟು ಸ್ಥಾನಮಾನದಲ್ಲಿ ಆಯಾ ದೇಶಗಳು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಗುರುತಿಸುತ್ತದೆ.
ಮುಂಬರುವ ಡಬ್ಲ್ಯು.ಎಚ್.ಓ. - ಜಿಸಿಟಿಎಂ ಮತ್ತು ಡಬ್ಲ್ಯು.ಎಚ್.ಓ. ಸಹಯೋಗದೊಂದಿಗೆ ಹಲವಾರು ಇತರ ಉಪಕ್ರಮಗಳು ಪ್ರಪಂಚದಾದ್ಯಂತ ಸಾಂಪ್ರದಾಯಿಕ ವೈದ್ಯವನ್ನು ನೆಲೆಗೊಳಿಸುವಲ್ಲಿ ಭಾರತಕ್ಕೆ ಸಹಾಯ ಮಾಡುತ್ತವೆ.
***
(Release ID: 1804378)
Visitor Counter : 208
Read this release in:
Urdu
,
English
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam