ಹಣಕಾಸು ಸಚಿವಾಲಯ
ಕೇಂದ್ರ ಬಜೆಟ್ 2022-23 - ಯುವ ಶಕ್ತಿಯನ್ನು ಉತ್ತೇಜಿಸುತ್ತದೆ: ಶ್ರೀಮತಿ ನಿರ್ಮಲಾ ಸೀತಾರಾಮನ್
Posted On:
08 MAR 2022 4:17PM by PIB Bengaluru
ಕೇಂದ್ರ ಬಜೆಟ್ 2022-23 ಯುವ ಜನಾಂಗದಲ್ಲಿನ ಸಾಮರ್ಥ್ಯವನ್ನು, ಅವರ ತಾಂತ್ರಿಕ ಕೌಶಲ್ಯ ಮತ್ತು ಉದ್ಯಮಶೀಲ ಸ್ಫೂರ್ತಿಯನ್ನು ಗುರುತಿಸುತ್ತದೆ ಮತ್ತು ಉತ್ತೇಜಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
“ಸ್ವಾತಂತ್ರ್ಯೋತ್ಸವದ 75 ವರ್ಷ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತದ ಅಭಿವೃದ್ಧಿ ದೃಷ್ಟಿಯಿಂದ ಮುಂದಿನ 25 ವರ್ಷಗಳ ಕಾಲ ಅತ್ಯಂತ ನಿರ್ಣಾಯಕವಾದುದು. ಆದ್ದರಿಂದ ಈ ವರ್ಷದ ಬಜೆಟ್ ನಲ್ಲಿ ನಾವು ಯುವಜನರ ಶಕ್ತಿಯನ್ನು ಹಾಗೂ ಅವರಲ್ಲಿನ ಉದ್ಯಮಶೀಲತೆಯನ್ನು ಉತ್ತೇಜಿಸಲು ಬಯಸಿದ್ದೇವೆ” ಎಂದು ಅವರು ಹೇಳಿದರು.
“ಲಾಕ್ ಡೌನ್ ನಡುವೆಯೂ ನಾವು ಎರಡು ವರ್ಷಗಳಲ್ಲಿ 45 ಯುನಿಕಾರ್ನ್ ಗಳನ್ನು ನಿರ್ವಹಿಸಿದ್ದೇವೆ. ಅದು ವಾಸ್ತವವಾಗಿ ಯುವಜನತೆಯ ಶಕ್ತಿ ಮತ್ತು ಅವರ ಚಿಂತನೆಗಳ ಸಾಮರ್ಥ್ಯವಾಗಿದೆ” ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿಂದು ಇಂಡಿಯನ್ ಗ್ಲೋಬಲ್ ಫೋರಂ ವೇದಿಕೆಯಲ್ಲಿ “ಭಾರತದ ಜಾಗತಿಕ ಭವಿಷ್ಯಕ್ಕೆ ಆರ್ಥಿಕ ನೆರವು” ಕುರಿತಂತೆ ಅವರು ಮಾತನಾಡಿದರು.
ಕ್ರಿಪ್ಟೋ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ರಿಪ್ಟೋ ವಲಯಕ್ಕೆ ಸಂಬಂಧಿಸಿದಂತೆ ಸಮಾಲೋಚನೆಗಳು ಪ್ರಗತಿಯಲ್ಲಿವೆ ಮತ್ತು ಇದರಲ್ಲಿ ಉದ್ಯಮವೂ ಪಾಲ್ಗೊಳ್ಳಬೇಕು ಎಂದು ಆಹ್ವಾನಿಸಿದರು.
ಕೇಂದ್ರ ಬಜೆಟ್ 2022-23ರ ಹಿಂದಿನ ಆಶಯವನ್ನು ವಿಸ್ತೃತವಾಗಿ ವಿವರಿಸಿದ ಅವರು, ಜನಸಾಮಾನ್ಯರಿಗೆ ಲಭ್ಯವಿರುವ ಸವಲತ್ತುಗಳು ತಂತ್ರಜ್ಞಾನ ಆಧಾರಿತವಾಗಿರುತ್ತವೆ ಮತ್ತು ಅವಕಾಶಗಳನ್ನು ಒದಗಿಸುತ್ತವೆ ಹಾಗೂ ದೇಶದಲ್ಲಿ ಉದ್ಯೋಗಗಳನ್ನು ಉತ್ತೇಜಿಸುವುದು ಬಜೆಟ್ ಗುರಿ ಖಾತ್ರಿಪಡಿಸುತ್ತದೆ ಎಂದು ಅವರು ಹೇಳಿದರು.
ದೇಶದ ಸಾಮಾನ್ಯ ಜನರೂ ಕೂಡ ತಮ್ಮನ್ನು ತಾವು ಡಿಜಿಟಲೀಕೃತ ಬ್ಯಾಂಕಿಂಗ್ ವ್ಯವಸ್ಥೆಗೆ ಒಗ್ಗುತ್ತಿದ್ದಾರೆ, ಇದು ಆರ್ಥಿಕತೆಯ ಡಿಜಿಟಲೀಕರಣ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
“ಈ ದೇಶದ ಸಾಮಾನ್ಯ ಜನರೂ ಸಹ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ, ಕ್ಯೂಆರ್ ಕೋಡ್ ಇತ್ಯಾದಿಗಳನ್ನು ತಮ್ಮಷ್ಟಕ್ಕೇ ತಾವೇ ಅಳವಡಿಸಿಕೊಳ್ಳುತ್ತಿರುವುದು ಸಂತೋಷದ ವಿಚಾರ. ಲಾಕ್ ಡೌನ್ ವೇಳೆ ನೇರವಾಗಿ ಹಣ ವರ್ಗಾವಣೆಗೆ ಡಿಜಿಟಲ್ ಬ್ಯಾಂಕಿಂಗ್ ಸಹಕಾರಿಯಾಯಿತು” ಎಂದು ಅವರು ಹೇಳಿದರು.
***
(Release ID: 1803976)
Visitor Counter : 218