ಜಲ ಶಕ್ತಿ ಸಚಿವಾಲಯ
azadi ka amrit mahotsav

ನಾಳೆ ಬೆಂಗಳೂರಿನಲ್ಲಿ ದಕ್ಷಿಣದ 6 ರಾಜ್ಯಗಳ ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಸಚಿವರ ಪ್ರಾದೇಶಿಕ ಸಮಾವೇಶದ ಅಧ್ಯಕ್ಷತೆ ವಹಿಸಲಿರುವ ಕೇಂದ್ರ ಜಲಶಕ್ತಿ ಸಚಿವ

Posted On: 04 MAR 2022 1:27PM by PIB Bengaluru


ಸಮಾವೇಶದಲ್ಲಿ `ಜೆಜೆಎಂ’ ಮತ್ತು `ಎಸ್‌ಬಿಎಂ-ಜಿ’ ಅಡಿಯಲ್ಲಿ ಆಗಿರುವ ಪ್ರಗತಿಯ  ಪರಿಶೀಲನೆ ಮಾಡುವುದರ ಜೊತೆಗೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ನಿರ್ದಿಷ್ಟ ವಿಷಯಗಳು ಹಾಗೂ ಮುಂದಿನ ಹಾದಿ ಬಗ್ಗೆ ಚರ್ಚೆ ನಡೆಸಲಾಗುವುದು

ಪ್ರಧಾನಮಂತ್ರಿಯವರು ಮಹಿಳಾ ಸಬಲೀಕರಣ ಮತ್ತು ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ನೀರು ಮತ್ತು ನೈರ್ಮಲ್ಯ ಕುರಿತ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಮೂಲಕ ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರಿಗೆ 'ಸುಗಮ ಜೀವನ'ದ ಖಾತ್ರಿ ಒದಗಿಸಿದ್ದಾರೆ: ಶ್ರೀ ಗಜೇಂದ್ರ ಸಿಂಗ್ ಶೇಖಾವತ್

ಭಾಗವಹಿಸುವ ರಾಜ್ಯಗಳು 2024ರ ವೇಳೆಗೆ ತಮ್ಮ ಗ್ರಾಮಗಳನ್ನು ʻಒಡಿಎಫ್ ಪ್ಲಸ್ʼ ಮಾಡಲು ಯೋಜಿಸಿವೆ

ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ʻಜಲ ಜೀವನ ಯೋಜನೆʼ (ಜಲ್‌ ಜೀವನ್‌ ಮಿಷನ್‌-ಜೆಜೆಎಂ) ಮತ್ತು ʻಸ್ವಚ್ಛ ಭಾರತ ಯೋಜನೆ-ಗ್ರಾಮೀಣʼ(ಎಸ್‌ಬಿಎಂ-ಜಿ) ಅಡಿಯಲ್ಲಿ ಸಾಧಿಸಲಾದ ಪ್ರಗತಿಯನ್ನು ಪರಿಶೀಲಿಸಲು 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಸಚಿವರ ಪ್ರಾದೇಶಿಕ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. 2022ರ ಮಾರ್ಚ್ 5ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರಾಜ್ಯಗಳ ಸಚಿವರು ಖುದ್ದಾಗಿ ಭಾಗವಹಿಸಲಿದ್ದಾರೆ. ಈ ಲಿಂಕ್‌ ಮೂಲಕ ಸಭೆಯನ್ನು ವೀಕ್ಷಿಸಬಹುದು: https://youtu.be/xDySoG1lnic

ಈ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ನಿರ್ದಿಷ್ಟ ವಿಚಾರಗಳು ಮತ್ತು ಸವಾಲುಗಳ ಬಗ್ಗೆ ಸಮಾವೇಶದಲ್ಲಿ ಕೇಂದ್ರ ಸಚಿವರು ಚರ್ಚಿಸಲಿದ್ದಾರೆ. ಸಚಿವಾಲಯದಿಂದ ಮಾಡುತ್ತಿರುವ ನಿರೀಕ್ಷೆಗಳನ್ನು ಮಂಡಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸಮಾವೇಶದ ಸಮಯದಲ್ಲಿ ಅವಕಾಶ ನೀಡಲಾಗುವುದು.  ಇದರಿಂದ ಕಾರ್ಯಕ್ರಮ ಅನುಷ್ಠಾನವನ್ನು ತ್ವರಿತಗೊಳಿಸಲು ಸಕಾಲದಲ್ಲಿ ಬೆಂಬಲವನ್ನು ಒದಗಿಸಲು ಅನುವಾಗಲಿದೆ.

ಸಮಾವೇಶದ ಬಗ್ಗೆ ಮಾತನಾಡಿದ ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು, "ಗೌರವಾನ್ವಿತ  ಪ್ರಧಾನಮಂತ್ರಿಯವರು ಮಹಿಳಾ ಸಬಲೀಕರಣ ಮತ್ತು ಆರೋಗ್ಯ  ರಕ್ಷಣೆಗಾಗಿ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ನೀರು ಮತ್ತು ನೈರ್ಮಲ್ಯದ ಮೇಲೆ ಗಮನ ಕೇಂದ್ರೀಕರಿಸುವ ಎರಡು ಪ್ರಮುಖ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಆ ಮೂಲಕ ವಿಶೇಷವಾಗಿ ಮಹಿಳೆಯರು ಮತ್ತು ಯುವತಿಯರಿಗೆ 'ಜೀವನ ಸುಗಮ' ಖಾತ್ರಿಗೆ ನೆರವಾಗಿದ್ದಾರೆ,ʼʼ ಎಂದು ಹೇಳಿದರು.   ಪ್ರತಿ ಗ್ರಾಮೀಣ ಕುಟುಂಬಕ್ಕೆ 100 ಪ್ರತಿಶತ ಕೊಳಾಯಿ/ನಲ್ಲಿ ನೀರಿನ ಸಂಪರ್ಕ ಮತ್ತು ಸುರಕ್ಷಿತ ನೈರ್ಮಲ್ಯ ಸೌಲಭ್ಯ  ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು  ಕಳೆದ 7 ವರ್ಷಗಳಿಂದ  ಭಾರತ ಸರ್ಕಾರವು 'ವೇಗ  ಮತ್ತು ಅಗಾಧತೆಯೊಂದಿಗೆʼ ಕೆಲಸ ಮಾಡುತ್ತಿದೆ. ಈ ಕುಟುಂಬಗಳು ಯಾವುದೇ ಸಾಮಾಜಿಕ-ಆರ್ಥಿಕ ಸ್ತರಗಳಿಗೆ ಸೇರಿದ್ದರೂ 'ಯಾರೂ ಇದರಿಂದ ಹೊರಗುಳಿಯದಂತೆʼ ಖಾತರಿಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದರು.

'ಹರ್ ಘರ್ ಜಲ್' – ಇದು ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಜಲ ಶಕ್ತಿ ಸಚಿವಾಲಯದ ಅಡಿಯಲ್ಲಿ ʻಜಲ ಜೀವನ್ ಮಿಷನ್ʼ (ಜೆಜೆಎಂ) ಇದನ್ನು ಜಾರಿಗೆ ತಂದಿದೆ. ʻ2024ರ ವೇಳೆಗೆ ದೇಶದ ಪ್ರತಿಯೊಂದು ಗ್ರಾಮೀಣ ಮನೆಗಳಿಗೆ ಕೊಳಾಯಿ/ನಲ್ಲಿ ನೀರಿನ ಸಂಪರ್ಕವನ್ನು ಒದಗಿಸುವ ಗುರಿಯನ್ನು ʻಜೆಜೆಎಂʼ ಹೊಂದಿದೆ. ತೆಲಂಗಾಣ ಮತ್ತು ಪುದುಚೇರಿ ರಾಜ್ಯಗಳು 2021ರಲ್ಲಿ ಈ ಯೋಜನೆಯ ಶೇ.100ರಷ್ಟು ಅನುಷ್ಠಾನ ಸಾಧಿಸಿವೆ. ಮಧ್ಯಪ್ರದೇಶವು 2023ರ ವೇಳೆಗೆ ಎಲ್ಲಾ ಗ್ರಾಮೀಣ ಮನೆಗಳಿಗೆ ಕೊಳಾಯಿ/ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲು ಯೋಜಿಸಿದರೆ,  ಆಂಧ್ರಪ್ರದೇಶ, ಕರ್ನಾಟಕ, ಕೇರಳ ಮತ್ತು ತಮಿಳುನಾಡು 2023ರಲ್ಲಿ ಯೋಜನೆಯ ವ್ಯಾಪ್ತಿಯನ್ನು ಪೂರ್ಣಗೊಳಿಸಲು ಉದ್ದೇಶಿಸಿವೆ.

ʻಸ್ವಚ್ಛ ಭಾರತ ಯೋಜನೆ-ಗ್ರಾಮೀಣʼ(ಎಸ್‌ಬಿಎಂ-ಜಿ) – ಇದು ಜಲ ಶಕ್ತಿ ಸಚಿವಾಲಯವು ಜಾರಿಗೆ ತರುತ್ತಿರುವ ಮತ್ತೊಂದು ಪ್ರಮುಖ ಉಪಕ್ರಮವಾಗಿದೆ. ಎಲ್ಲಾ ಗ್ರಾಮ ಪಂಚಾಯಿತಿಗಳು ಅಕ್ಟೋಬರ್ 2, 2019 ರಂದು ತಮ್ಮನ್ನು ʻಬಯಲು ಶೌಚ ಮುಕ್ತʼ(ಒಡಿಎಫ್‌) ಎಂದು  ಘೋಷಿಸಿಕೊಂಡವು. ಎಸ್‌ಬಿಎಂ-ಜಿ 2ನೇ ಹಂತದ ಅಡಿಯಲ್ಲಿ, `ಒಡಿಎಫ್’ ಸ್ಥಾನಮಾನವನ್ನು ಕಾಯ್ದುಕೊಳ್ಳಲು ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯತ್ತ ಕೆಲಸ ಮಾಡಲು ಗಮನ ಹರಿಸಲಾಗುತ್ತದೆ, ಇದರಿಂದ ಹಳ್ಳಿಗಳು ʻಒಡಿಎಫ್ʼನಿಂದ ʻಒಡಿಎಫ್ ಪ್ಲಸ್ʼಗೆ ಬಡ್ತಿ ಪಡೆಯಲಿವೆ.

ಭಾರತ ಸರ್ಕಾರದ ಜಿಒಐನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ವಿನಿ ಮಹಾಜನ್ ಅವರು ಎರಡೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಮೇಲೆ ಗಮನ ಹರಿಸುವ ಸಮಾವೇಶದ ಕಾರ್ಯಸೂಚಿಯನ್ನು ನಿಗದಿಪಡಿಸಲಿದ್ದಾರೆ. ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಂತರ್ಜಲ ಮಟ್ಟವು ವೇಗವಾಗಿ ಕ್ಷೀಣಿಸುತ್ತಿರುವ ಅನೇಕ ಪ್ರದೇಶಗಳಿವೆ. ಅಲ್ಲಿ ಕೇವಲ ಕುಡಿಯಲು ಮತ್ತು ಮನೆಯ ಅಗತ್ಯಗಳಿಗಾಗಿ ಮಾತ್ರವಲ್ಲದೆ ನೀರಾವರಿ, ನಿರ್ಮಾಣ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಅತಿಯಾಗಿ ಅಂತರ್ಜಲ ಬಳಕೆಯು ಈ ಸ್ಥಿತಿಗೆ ಕಾರಣವಾಗಿದೆ. ಅದೇ ರೀತಿ ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಪ್ರತಿ ಗ್ರಾಮೀಣ ಮನೆಗೂ ಶುದ್ಧ ನಲ್ಲಿ ನೀರನ್ನು ಒದಗಿಸುವ ಸವಾಲು ಸಹ ಇದೆ.

ಹೆಚ್ಚುವರಿ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕ (ಜೆಜೆಎಂ ಮತ್ತು ಎಸ್‌ಬಿಎಂ-ಜಿ) ಶ್ರೀ ಅರುಣ್ ಬರೋಕಾ ಅವರು ಈ ಯೋಜನೆಗಳ ನಿಟ್ಟಿನಲ್ಲಿ ಮಾಡಲಾದ ಸಾಧನೆಗಳು, ಎದುರಿಸಿದ ಸವಾಲುಗಳು ಮತ್ತು ಮುಂದಿನ ಹಾದಿಯ ಬಗ್ಗೆ ವಿವರವಾದ ಪ್ರಸ್ತುತಿಯನ್ನು ನೀಡಲಿದ್ದಾರೆ. ಸಚಿವಾಲಯದ ಕಾಳಜಿಗಳನ್ನು ಹಂಚಿಕೊಳ್ಳಲಿರುವ ಅವರು, ಸಂಭಾವ್ಯ ಪರಿಹಾರಗಳನ್ನು ಪ್ರಸ್ತಾಪಿಸಲಿದ್ದರೆ. 

ಪ್ರಾದೇಶಿಕ ಸಮಾವೇಶದಲ್ಲಿ ಬಯಲು ಶೌಚ ಮುಕ್ತ ಸ್ಥಿತಿಯನ್ನು ಕಾಯ್ದುಕೊಳ್ಳುವುದು, ಜೈವಿಕ ವಿಘಟನೆ ಸಾಧ್ಯವಾಗುವ ಪದಾರ್ಥ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಕೈತೊಳೆದ ನೀರು,ಮುಂತಾದ ತಿಳಿ ನೀರು- ಬೂದುನೀರಿನ ನಿರ್ವಹಣೆ, ಚರಂಡಿ, ಕೆಸರು ನಿರ್ವಹಣೆ  ಕುರಿತು ಚರ್ಚೆ ನಡೆಸಲಾಗುವುದು.  ಜೊತೆಗೆ ಎರಡನೇ ಹಂತದ ʻಎಸ್‌ಬಿಎಂ-ಜಿʼ ಅಡಿಯಲ್ಲಿ ʻಬಯಲು ಶೌಚ ಮುಕ್ತ-ಓಡಿಎಫ್ ʼ ಕುರಿತಾದ ಅಂಶಗಳ ಅನುಷ್ಠಾನವರ್ಧನೆಗೆ ಕ್ರಮಗಳು, ಪ್ರಯತ್ನಗಳ ಒಗ್ಗೂಡಿಸುವಿಕೆ ಬಲಪಡಿಸಲು ಕಾರ್ಯವಿಧಾನಗಳ ಬಗ್ಗೆಯೂ ಚರ್ಚೆಗಳನ್ನು ನಡೆಸಲಾಗುವುದು. ವಿಷಯ ತಜ್ಞರು ಮತ್ತು ಹಿರಿಯ ಸರಕಾರಿ ಅಧಿಕಾರಿಗಳು, ಗ್ರಾಮೀಣ ಪ್ರದೇಶಗಳಲ್ಲಿ ʻಎಸ್‌ಎಲ್‌ಡಬ್ಲ್ಯೂಎಂ- ದ್ರವ ಹಾಗು ಘನತ್ಯಾಜ್ಯವನ್ನುʼ ಪರಿಣಾಮಕಾರಿಯಾಗಿ ನಿರ್ವಹಿಸಲು   ನೆರವಾದ ವಿವಿಧ ವಿಧಾನಗಳ ಬಗ್ಗೆ ಪ್ರಸ್ತುತಿಗಳನ್ನು ನೀಡಲಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ರಾಜ್ಯಗಳು ಹಳ್ಳಿಗಳಲ್ಲಿ ನೈರ್ಮಲ್ಯ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಗಮನಾರ್ಹ ಕೆಲಸ ಮಾಡಿವೆ.   ರಾಜ್ಯಗಳು 2023ರ ವೇಳೆಗೆ ತಮ್ಮ ಗ್ರಾಮಗಳನ್ನು `ಒಡಿಎಫ್ ಪ್ಲಸ್’ ಆಗಿ ಮಾಡಲು ಯೋಜಿಸಿವೆ.

ಕೇಂದ್ರ ಬಜೆಟ್- 2022, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಸಾರ್ವಜನಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದು, ʻಜೆಜೆಎಂ – ಜಲ ಜೀವನ ಮಿಷನ್‌ʼಗಾಗಿ ಅನುದಾನ ಹಂಚಿಕೆಯನ್ನು 2021-22ರಲ್ಲಿ 45,000 ಕೋಟಿ ರೂ.ಗಳಿಂದ 2022-23ರಲ್ಲಿ 60,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.  ʻಎಸ್‌ಬಿಎಂ-ಜಿʼಗೆ 2022-23ನೇ ವರ್ಷಕ್ಕೆ 7,192 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ, ಈ 6 ರಾಜ್ಯಗಳು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಕ್ಕೆ  ʻಜೆಜೆಎಂʼ ಅಡಿಯಲ್ಲಿ  20,487.58 ಕೋಟಿ ರೂ.ಗಳನ್ನು ಕೇಂದ್ರವು ಹಂಚಿಕೆ ಮಾಡಿದೆ.  (ಆಂಧ್ರಪ್ರದೇಶ –3,182.88 ಕೋಟಿ ರೂ., ಕರ್ನಾಟಕ –5,008.80 ಕೋಟಿ ರೂ, ಕೇರಳ –1,804.59 ಕೋಟಿ ರೂ., ಮಧ್ಯಪ್ರದೇಶ –5,116.79 ಕೋಟಿ ರೂ. ತಮಿಳುನಾಡು –3,691.21 ಕೋಟಿ ರೂ., ತೆಲಂಗಾಣ –1,653.09 ಕೋಟಿ ರೂ. ಮತ್ತು ಪುದುಚೇರಿ –30.22 ಕೋಟಿ ರೂ.).   ʻಎಸ್ ಬಿಎಂ-ಜಿʼ, ಅಡಿಯಲ್ಲಿ ಸದರಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ 1,355.13 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.   (ಆಂಧ್ರಪ್ರದೇಶ – 437.64 ಕೋಟಿ ರೂ.  ಕರ್ನಾಟಕ – ಇಲ್ಲ;  ಕೇರಳ – 34.68 ಕೋಟಿ ರೂ.,  ಮಧ್ಯಪ್ರದೇಶ – 668.96 ಕೋಟಿ ರೂ.,  ತಮಿಳುನಾಡು – 26.29 ಕೋಟಿ ರೂ.,  ತೆಲಂಗಾಣ –180.67 ಕೋಟಿ ರೂ, ಮತ್ತು ಪುದುಚೇರಿ – 6.89 ಕೋಟಿ ರೂ.)

ʻಒಡಿಎಫ್ʼ ಸುಸ್ಥಿರತೆ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಸುಸ್ಥಿರತೆಗೆ ಗಮನ ಹರಿಸಲು ಒಟ್ಟು 1,40,881 ಕೋಟಿ ರೂ. ಅನುದಾನದೊಂದಿಗೆ ʻಎಸ್‌ಬಿಎಂ-ಜಿʼ  ಹಂತ-2ಕ್ಕೆ 2020ರ  ಫೆಬ್ರವರಿಯಲ್ಲಿ ಅನುಮೋದನೆ ನೀಡಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ, ವಿವಿಧ ಉದ್ದೇಶಗಳಿಗೆ ಹಣಕಾಸು ಒದಗಿಸುವಿಕೆಯನ್ನು ಒಗ್ಗೂಡಿಸುವಲ್ಲಿ ಒಂದು ವಿನೂತನ ಮಾದರಿಯಾಗಿ ʻಎಸ್‌ಬಿಎಂ-ಜಿʼ  ಎರಡನೇ ಹಂತವು ಹೊರಹೊಮ್ಮಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ  ಆಯವ್ಯಯ ಅನುದಾನ ಮತ್ತು ಆಯಾ ರಾಜ್ಯಕ್ಕೆ ಸಂಬಂಧಿಸಿದ ಪಾಲಿನ ಹಂಚಿಕೆ ಜೊತೆಗೆ ಉಳಿದ ಹಣವನ್ನು 15ನೇ ಹಣಕಾಸು ಆಯೋಗದಿಂದ ನಿಧಿಯನ್ನು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಎಂಜಿಎನ್‌ಆರ್‌ಇಜಿಎಸ್, ಸಿಎಸ್ಆರ್‌ ನಿಧಿಗಳು ಮತ್ತು ಆದಾಯ ಉತ್ಪಾದನಾ ಮಾದರಿಗಳು ಇತ್ಯಾದಿಗಳಿಗೆ, ವಿಶೇಷವಾಗಿ ಎಸ್‌ಎಲ್‌ಡಬ್ಲ್ಯೂಎಂಗೆ ನಂಟು ಮಾಇಡ ಒದಗಿಸಲಾಗಿದೆ.  2020-21ರಿಂದ ʻಎಸ್‌ಬಿಎಂ-ಜಿʼ 2ನೇ ಹಂತವನ್ನು ಕ್ಷಿಪ್ರಗತಿಯಲ್ಲಿ ಜಾರಿಗೆ ತರಲಾಗುತ್ತಿದ್ದು, 2024-25ರವರೆಗೆ ಇದು ಮುಂದುವರಿಯಲಿದೆ.

ʻಎಸ್‌ಬಿಎಂ-ಜಿʼ ಎರಡನೇ  ಹಂತವು  ಭರ್ಜರಿ ಆರಂಭ ಕಂಡಿದ್ದು, ವೈಯಕ್ತಿಕ ಮನೆಯ ಶೌಚಾಲಯದಿಂದ ಸುಮಾರು 65 ಲಕ್ಷ ಕುಟುಂಬಗಳು ಪ್ರಯೋಜನ ಪಡೆದಿವೆ. 1.18 ಲಕ್ಷ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು  ದೇಶದಲ್ಲಿ 43,000 ಕ್ಕೂ ಹೆಚ್ಚು ಗ್ರಾಮಗಳು  ತಮ್ಮನ್ನು ʻಒಡಿಎಫ್ ಪ್ಲಸ್ʼ ಎಂದು ಘೋಷಿಸಿಕೊಂಡಿವೆ.  ಸಮಾವೇಶದಲ್ಲಿ ಭಾಗವಹಿಸುವ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿಯೇ ಸುಮಾರು 5.5 ಲಕ್ಷ ಶೌಚಾಲಯಗಳು ಮತ್ತು ಸುಮಾರು 12,000 ಸಮುದಾಯ ನೈರ್ಮಲ್ಯ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ.  ಈಗಾಗಲೇ 50,000ಕ್ಕೂ ಹೆಚ್ಚು ಗ್ರಾಮಗಳು ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿವೆ ಮತ್ತು 25,000 ಕ್ಕೂ ಹೆಚ್ಚು ಹಳ್ಳಿಗಳು  ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಸಾಧಿಸಿವೆ.

2019ರ ಆಗಸ್ಟ್ 15ರಂದು ʻಜಲ ಜೀವನ್ ಯೋಜನೆʼ ಘೋಷಣೆಯಾದಾಗಿನಿಂದ ದೇಶಾದ್ಯಂತ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ, ಅಡಚಣೆಗಳು ಮತ್ತು ಲಾಕ್‌ಡೌನ್ ಹೊರತಾಗಿಯೂ 5.88 ಕೋಟಿಗೂ ಹೆಚ್ಚು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಇಂದು, 9.12 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ.

ಈ ಯೋಜನೆಯಡಿ ಈವರೆಗೆ 4.71 ಲಕ್ಷ ʻಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿʼಗಳನ್ನು ರಚಿಸಲಾಗಿದೆ ಮತ್ತು 3.87 ʻಗ್ರಾಮ ಕ್ರಿಯಾ ಯೋಜನೆʼಗಳನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಪಂಚಾಯಿತಿಗಳು ಮತ್ತು/ ಅಥವಾ ಅದರ ಉಪ ಸಮಿತಿಗಳಿಗೆ ಕಾರ್ಯಕ್ರಮ ಅನುಷ್ಠಾನದಲ್ಲಿ ಬೆಂಬಲ ನೀಡುವ ನೀಡಲು, ಜಾಗೃತಿ ಮೂಡಿಸಲು ಹಾಗೂ ಸಮುದಾಯ ಜಮಾವಣೆ ಕಾರ್ಯಗಳಿಗಾಗಿ 13,787 ಅನುಷ್ಠಾನ ಬೆಂಬಲ ಏಜೆನ್ಸಿಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ನಿಯೋಜಿಸಿವೆ.ಈ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ9.26 ಲಕ್ಷ ಮಹಿಳೆಯರು ʻಕ್ಷೇತ್ರ ಪರೀಕ್ಷಾ ಕಿಟ್ʼಗಳನ್ನು (ಎಫ್‌ಟಿಕೆಗಳು) ಹೇಗೆ ಬಳಸಬೇಕು ಎಂಬುದರ ಬಗ್ಗೆ ತರಬೇತಿ ಪಡೆದಿದ್ದಾರೆ. ಈ ಮಹಿಳೆಯರು ಪ್ರತಿ ಹಳ್ಳಿಯಲ್ಲಿ ಸ್ಥಾಪಿಸಲಾದ 5 ಸದಸ್ಯರ ಕಣ್ಗಾವಲು ಸಮಿತಿಯ ಭಾಗವಾಗಿದ್ದಾರೆ.

ಸಮಾವೇಶದಲ್ಲಿ ಭಾಗವಹಿಸುತ್ತಿರುವ 6 ರಾಜ್ಯಗಳು ಮತ್ತು ಪುದುಚೇರಿಯಲ್ಲಿ ಒಟ್ಟು 1.24 ಲಕ್ಷ ಗ್ರಾಮಗಳಿದ್ದು, ಈ ಪೈಕಿ 21,959 ಹಳ್ಳಿಗಳಲ್ಲಿ 'ಹರ್ ಘರ್ ಜಲ್' (100% ನಲ್ಲಿ ನೀರಿನ ಸೌಲಭ್ಯ) ಅನುಷ್ಠಾನಗೊಂಡಿದೆ.

ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್‌ ಅವರು  2020ರ ಅಕ್ಟೋಬರ್ 2ರಂದು ಪ್ರತಿ ಶಾಲೆ, ಅಂಗನವಾಡಿ ಕೇಂದ್ರಗಳು ಮತ್ತು ಆಶ್ರಮಶಾಲೆಗೆ  (ಹಳ್ಳಿಗಳಲ್ಲಿ ಸ್ಥಾಪಿಸಲಾದ ಎಸ್ಸಿ/ ಎಸ್ಟಿ ಹಾಸ್ಟೆಲ್‌ಗಳು) ನಲ್ಲಿ ನೀರಿನ ಸಂಪರ್ಕ ಒದಗಿಸುವ ಉದ್ದೇಶದಿಂದ 100 ದಿನಗಳ ಅಭಿಯಾನವನ್ನು ಪ್ರಾರಂಭಿಸಿದರು. ಎಲ್ಲಾ ಕಲಿಕಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರನ್ನು ಖಾತರಿಪಡಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅವಿರತವಾಗಿ ಕೆಲಸ  ಮಾಡಿವೆ. ಇಲ್ಲಿಯವರೆಗೆ 2.25 ಲಕ್ಷ ಶಾಲೆಗಳು ಮತ್ತು 2.31 ಲಕ್ಷ ಅಂಗನವಾಡಿ ಕೇಂದ್ರಗಳಿಗೆ ಕುಡಿಯಲು, ಮಧ್ಯಾಹ್ನದ ಊಟ ಬೇಯಿಸಲು, ಕೈತೊಳೆಯಲು ಮತ್ತು ಶೌಚಾಲಯಗಳಲ್ಲಿ ಬಳಕೆಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ.  ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ತೆಲಂಗಾಣ ತನ್ನ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ನಲ್ಲಿ ನೀರನ್ನು ಖಾತರಿಪಡಿಸಿವೆ. ಮಧ್ಯಪ್ರದೇಶವು ಶೇ.74ರಷ್ಟು ಶಾಲೆಗಳು ಮತ್ತು 60 ಪ್ರತಿಶತ ಅಂಗನವಾಡಿ ಕೇಂದ್ರಗಳಲ್ಲಿ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಿದೆ.

ಗೌರವಾನ್ವಿತ ಪ್ರಧಾನಮಂತ್ರಿಯವರ ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್‌ ಔರ್ ಸಬ್ ಕಾ ಪ್ರಯಾಸ್‌ʼ ದೂರದೃಷ್ಟಿಗೆ ಅನುಸಾರವಾಗಿ 101 ಜಿಲ್ಲೆಗಳು, 1,159 ಬ್ಲಾಕ್‌ಗಳು, 67,473 ಗ್ರಾಮ ಪಾಂಚಾಯತ್‌ಗಳು ಮತ್ತು 1,39,366 ಗ್ರಾಮಗಳು 'ಹರ್ ಘರ್ ಜಲ್' ಆಗಿ ಮಾರ್ಪಟ್ಟಿವೆ.  ಗೋವಾ, ತೆಲಂಗಾಣ ಮತ್ತು ಹರಿಯಾಣ – ಈ ಮೂರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ - ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ದಾದರ್‌ ಮತ್ತು ನಾಗರ್‌ ಹವೇಲಿ, ಡಿಯು ಮತ್ತು ಡಮನ್‌ ಹಾಗೂ ಪುದುಚೇರಿ ಶೇ.100ರಷ್ಟು ನಲ್ಲಿ ನೀರಿನ ಸೌಲಭ್ಯವನ್ನು ವಿಸ್ತರಿಸಿವೆ.

***


(Release ID: 1802995) Visitor Counter : 237