ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

“ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರ ಭಾರತ-ಕಾರ್ಯಾನುಷ್ಟಾನಕ್ಕೆ ಕರೆ” ಕುರಿತಂತೆ ಬಜೆಟ್ ಬಳಿಕದ ವೆಬಿನಾರಿನಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 25 FEB 2022 2:02PM by PIB Bengaluru

ನಮಸ್ಕಾರ!

ಇಂದಿನ ವೆಬಿನಾರಿನ ವಿಷಯ ಶೀರ್ಷಿಕೆರಕ್ಷಣಾ ವಲಯದಲ್ಲಿ ಆತ್ಮನಿರ್ಭರ-ಕಾರ್ಯಾನುಷ್ಠಾನಕ್ಕೆ ಕರೆಯು ರಾಷ್ಟ್ರದ ಉದ್ದೇಶಗಳನ್ನು ವಿವರಿಸುತ್ತದೆ. ಕಳೆದ ಕೆಲವು ವರ್ಷಗಳಿಂದ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದ್ದು, ಬದ್ಧತೆಯನ್ನು ವರ್ಷದ ಬಜೆಟ್‌ ನಲ್ಲಿಯೂ ನೀವು ಕಾಣಬಹುದಾಗಿದೆ.

ಸ್ನೇಹಿತರೇ,

ಗುಲಾಮಗಿರಿಯ ಅವಧಿಯಲ್ಲಿಯೂ ನಮ್ಮ ರಕ್ಷಣಾ ಉತ್ಪಾದನಾ ರಂಗ ಬಹಳ ಶಕ್ತಿಶಾಲಿಯಾಗಿತ್ತು ಮತ್ತು ಸ್ವಾತಂತ್ರ್ಯ ಸಿಕ್ಕ ಬಳಿಕವೂ ಅದು ಶಕ್ತಿಶಾಲಿಯಾಗಿ ಉಳಿದಿತ್ತು. ಭಾರತದಲ್ಲಿ ತಯಾರಾದ ಶಸ್ತ್ರಾಸ್ತ್ರಗಳು ಎರಡನೇ ಮಹಾಯುದ್ಧದಲ್ಲಿ ಬಹಳ ದೊಡ್ಡ ಪಾತ್ರವನ್ನು ನಿಭಾಯಿಸಿವೆ. ನಮ್ಮ ಶಕ್ತಿ ಬಳಿಕದ ವರ್ಷಗಳಲ್ಲಿ ದುರ್ಬಲವಾಗುತ್ತ ಬಂದಿತು. ಇದು ಭಾರತದ ಸಾಮರ್ಥ್ಯದಲ್ಲಿ ಕೊರತೆಯ ಕಾರಣವಲ್ಲ ಮತ್ತು ಈಗಲೂ ಕೊರತೆ ಇಲ್ಲ ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ಭದ್ರತೆಯ ಮೂಲ ತತ್ವ ಎಂದರೆ ನೀವು ನಿಮಗೆ ಬೇಕಾದಂತಹ ನಿಮ್ಮದೇ ಆದ ವಿಶಿಷ್ಟ ವ್ಯವಸ್ಥೆಯನ್ನು ಹೊಂದಿರಬೇಕಾಗುತ್ತದೆ, ಆಗ ಮಾತ್ರ ಅದು ನಿಮಗೆ ಸಹಾಯಕ್ಕೆ ಬರುತ್ತದೆ. ಹತ್ತು ದೇಶಗಳು ಒಂದೇ ಮಾದರಿಯ ರಕ್ಷಣಾ ಸಲಕರಣೆಗಳನ್ನು ಹೊಂದಿದ್ದರೆ, ಆಗ ನಿಮ್ಮ ಸೇನೆಯಲ್ಲಿ ವಿಶಿಷ್ಟತೆ ಇರುವುದಿಲ್ಲ. ನಿಮ್ಮದೇ ದೇಶದಲ್ಲಿ ಸಲಕರಣೆಗಳು ಅಭಿವೃದ್ಧಿಯಾದಾಗ ಮಾತ್ರ ಅಲ್ಲಿ ವಿಶಿಷ್ಟತೆ ಇರುತ್ತದೆ ಮತ್ತು ಅಚ್ಚರಿಯ ವ್ಯವಸ್ಥೆಗಳು ರೂಪುಗೊಳ್ಳುತ್ತವೆ.

ಸ್ನೇಹಿತರೇ,

ವರ್ಷದ ಬಜೆಟ್ ದೇಶದೊಳಗೆ (ರಕ್ಷಣಾ ಸಲಕರಣೆಗಳಉತ್ಪಾದನೆಯಲ್ಲಿ ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಢಿಗೆ ಸಂಬಂಧಿಸಿ ರೋಮಾಂಚಕಾರಿ ಪರಿಸರ ವ್ಯವಸ್ಥೆಯನ್ನು ರೂಪಿಸಲು  ನೀಲನಕಾಶೆಯನ್ನು  ಹೊಂದಿದೆ. ರಕ್ಷಣಾ ಬಜೆಟಿನ ಸುಮಾರು 70 ಪ್ರತಿಶತದಷ್ಟನ್ನು ದೇಶೀಯ ಉದ್ಯಮಕ್ಕಾಗಿಯೇ ಮೀಸಲಿಡಲಾಗಿದೆ. ಇದುವರೆಗೆ ರಕ್ಷಣಾ ಸಚಿವಾಲಯವು ಧನಾತ್ಮಕ ದೇಶೀಕರಣಕ್ಕಾಗಿ 200 ಕ್ಕೂ ಅಧಿಕ ರಕ್ಷಣಾ ವೇದಿಕೆಗಳು ಮತ್ತು ಸಲಕರಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿ ಪ್ರಕಟಣೆಯ ನಂತರ ದೇಶೀಯ ಖರೀದಿಗಾಗಿ 54,000 ಕೋ.ರೂ.ಗಳ ಮೌಲ್ಯದ ಖರೀದಿಗೆ ಅಂಕಿತ ಹಾಕಲಾಗಿದೆ. ಇದರ ಜೊತೆಗೆ 4.5 ಲಕ್ಷ ಕೋ.ರೂ.ಗಳಿಗೂ ಅಧಿಕ ಮೌಲ್ಯದ ಸಲಕರಣೆಗಳ ಖರೀದಿಗೆ ಸಂಬಂಧಿಸಿದ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಬಹಳ ಬೇಗ ಮೂರನೇ ಪಟ್ಟಿಯೂ ಬಿಡುಗಡೆಯಾಗಲಿದೆ. ಇದು ನಾವು ದೇಶದೊಳಗೆ ರಕ್ಷಣಾ ಉತ್ಪಾದನೆಯನ್ನು ಹೇಗೆ ಬೆಂಬಲಿಸುತ್ತಿದ್ದೇವೆ ಎನ್ನುವುದನ್ನು ತೋರಿಸುತ್ತದೆ.

ಸ್ನೇಹಿತರೇ,

ನಾವು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವಾಗ, ಅದರ ಪ್ರಕ್ರಿಯೆ ಎಷ್ಟು ದೀರ್ಘವಾಗಿರುತ್ತದೆ ಎಂದರೆ ಅವುಗಳಲ್ಲಿ ಅನೇಕ ಸಲಕರಣೆಗಳು ನಮ್ಮ ಭದ್ರತಾ ಪಡೆಗಳನ್ನು ತಲುಪುವಾಗ ಹಳೆಯ ಮಾದರಿಯಾಗಿರುತ್ತವೆ. ಇದಕ್ಕೆ ಪರಿಹಾರ ಆತ್ಮ ನಿರ್ಭರ ಭಾರತ ಆಂದೋಲನ ಮತ್ತು ಮೇಕ್ ಇನ್ ಇಂಡಿಯಾದಲ್ಲಿದೆ. ರಕ್ಷಣಾ ವಲಯದಲ್ಲಿ ಭಾರತದ ಸ್ವಾವಲಂಬನೆಯ ಮಹತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಬಹಳ ಪ್ರಮುಖವಾದಂತಹ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದಕ್ಕೆ ನಾನು ಸಶಸ್ತ್ರ ಪಡೆಗಳನ್ನು ಶ್ಲಾಘಿಸುತ್ತೇನೆ. ದೇಶೀಯ ಉಪಕರಣಗಳು ಲಭಿಸಿದಾಗ ನಮ್ಮ ರಕ್ಷಣಾ ಪಡೆಗಳ ಹೆಮ್ಮೆ ಮತ್ತು ವಿಶ್ವಾಸ ಹೆಚ್ಚುತ್ತದೆ. ಗಡಿಯಲ್ಲಿ ನಿಯೋಜನೆಗೊಂಡಿರುವ ನಮ್ಮ ಯೋಧರ ಭಾವನೆಗಳನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ನಾನು ಪಂಜಾಬಿನಲ್ಲಿ ನನ್ನ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾಗ, ನಾನು ಯಾವುದೇ ಅಧಿಕಾರದ ಸ್ಥಾನದಲ್ಲಿ ಇರದಿದ್ದಾಗಲೂ ಒಮ್ಮೆ ವಾಘ್ ಗಡಿಯ ಸೈನಿಕರ ಜೊತೆ ಮಾತನಾಡುವ ಅವಕಾಶ ದೊರಕಿತ್ತು. ಚರ್ಚೆಯಲ್ಲಿ ಅಲ್ಲಿ ನಿಯೋಜಿಸಲ್ಪಟ್ಟಿದ್ದ ಸೈನಿಕರು ಹೇಳಿದ ಒಂದು ಮಾತು ನನ್ನ ಹೃದಯವನ್ನು ತಟ್ಟಿತು. ವಾಘ್ ಗಡಿಯಲ್ಲಿಯ ಇಂಡಿಯಾ ಗೇಟ್ ನಮ್ಮ ವೈರಿಯ ಗೇಟಿಗಿಂತ ಸ್ವಲ್ಪ ಸಣ್ಣದಾಗಿದೆ ಎಂದು ಅವರು ನನಗೆ ಹೇಳಿದರು. ನಮ್ಮ ಗೇಟ್ ಕೂಡಾ ದೊಡ್ದದಾಗಬೇಕು  ಮತ್ತು ನಮ್ಮ ಧ್ವಜ ಅವರಿಗಿಂತ (ನಮ್ಮ ವೈರಿ) ಎತ್ತರದಲ್ಲಿರಬೇಕು ಎಂದವರು ಹೇಳುತ್ತಿದ್ದರು. ಇದು ನಮ್ಮ ಜವಾನರ, ಸೈನಿಕರ ಸ್ಪೂರ್ತಿ ಮತ್ತು ಉತ್ಸಾಹ. ಭಾರತ ನಿರ್ಮಿತ ವಸ್ತುಗಳ ಬಗ್ಗೆ ಅವರು ಹೆಮ್ಮೆಪಡುತ್ತಾರೆ. ಆದುದರಿಂದ ನಮ್ಮ ರಕ್ಷಣಾ ಸಲಕರಣೆಗಳು ನಮ್ಮ ಸೈನಿಕರ ಭಾವನೆಗಳಿಗೆ ಅನುಗುಣವಾಗಿರಬೇಕು. ನಾವು ಸ್ವಾವಲಂಬಿಯಾದಾಗ ಮಾತ್ರ ಇದನ್ನು ಮಾಡಬಹುದು.

ಸ್ನೇಹಿತರೇ,

ಮೊದಲು ಯುದ್ಧಗಳಲ್ಲಿ ಮತ್ತು ಈಗ ಯುದ್ಧಗಳಲ್ಲಿ ಹೋರಾಡುವ ರೀತಿಗಳು ಬೇರೆ ಬೇರೆಯಾಗಿವೆ. ಅದರಲ್ಲಿ ಬದಲಾವಣೆಗಳು ಬಂದಿವೆ. ಮೊದಲು ಯುದ್ಧದ ಸಲಕರಣೆಗಳನ್ನು ಸುಧಾರಿಸಲು ದಶಕಗಳು ತಗಲುತ್ತಿದ್ದವು, ಆದರೆ ಇಂದು ಬಹಳ ಕಡಿಮೆ ಕಾಲದಲ್ಲಿ ಪರಿಷ್ಕರಣೆಗಳು, ಸುಧಾರಣೆಗಳು ನಡೆಯುತ್ತಿವೆ. ಇದರಿಂದಾಗಿ ಸಲಕರಣೆಗಳು ಬಹಳ ಬೇಗ ಹಳೆಯ ಮಾದರಿಯಾಗುತ್ತಿವೆ.ಆದುನಿಕ ತಂತ್ರಜ್ಞಾನ ಆಧಾರಿತ ಶಸ್ತ್ರಾಸ್ತ್ರಗಳು ಈಗ ಬಹಳ ಬೇಗ ಹಳೆಯ ಮಾದರಿಗಳಾಗುತ್ತಿವೆ. ಭಾರತದ .ಟಿ. ಶಕ್ತಿ ನಮ್ಮ ಬಹಳ ದೊಡ್ಡ ಸಾಮರ್ಥ್ಯ. ಶಕ್ತಿಯನ್ನು ನಾವು ರಕ್ಷಣಾ ವಲಯದಲ್ಲಿ ಬಳಸಿದಷ್ಟೂ ನಾವು ನಮ್ಮ ಭದ್ರತೆಯಲ್ಲಿ ಹೆಚ್ಚು ನಿರಾಳವಾಗಿರಬಹುದು. ಉದಾಹರಣೆಗೆ ಸೈಬರ್ ಭದ್ರತೆ!. ಈಗ ಇದು ಕೂಡಾ ಯುದ್ಧದಲ್ಲಿ ಅಸ್ತ್ರವಾಗಿದೆ ಮತ್ತು ಅದು ಬರೇ ಡಿಜಿಟಲ್ ಕಾರ್ಯಚಟುವಟಿಕೆಗೆ ಸೀಮಿತವಾಗಿಲ್ಲ. ಇದೀಗ ರಾಷ್ಟ್ರೀಯ ಭದ್ರತೆಯ ವಿಷಯವಾಗಿದೆ

ಸ್ನೇಹಿತರೇ,

ರಕ್ಷಣಾ ವಲಯದಲ್ಲಿ ಇರುವ ಸ್ಪರ್ಧೆಯ ಬಗ್ಗೆ ನಿಮಗೆಲ್ಲ ತಿಳಿದಿದೆ.ವಿದೇಶೀ ಮೂಲದ ಕಂಪೆನಿಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವಾಗ ವಿವಿಧ ಆಪಾದನೆಗಳನ್ನು ಮಾಡಲಾಗುತ್ತದೆ. ನಾನದರಲ್ಲಿ ಆಳವಾಗಿ ಹೋಗಲು ಬಯಸುವುದಿಲ್ಲ. ಆದರೆ ಪ್ರತೀ ಖರೀದಿಯೂ ವಿವಾದಕ್ಕೀಡಾಗುವುದಂತೂ ಸತ್ಯ. ವಿವಿಧ ಉತ್ಪಾದಕರ ನಡುವಣ ಸ್ಪರ್ಧೆಯಿಂದಾಗಿ ವಿರೋಧಿಗಳ ಉತ್ಪಾದನೆಗಳನ್ನು ಕಳಪೆ ಎಂದು ಸಾರಲು ನಿರಂತರ ಆಂದೋಲನ ಚಾಲ್ತಿಯಲ್ಲಿರುತ್ತದೆ. ಇದರ ಪರಿಣಾಮವಾಗಿ ಗೊಂದಲ ಮತ್ತು ಕಳವಳಗಳು ಮೂಡುತ್ತವೆ ಮತ್ತು ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಒದಗುತ್ತದೆ.ಶಸ್ತ್ರಾಸ್ತ್ರಗಳು ಉತ್ತಮವಾಗಿಯೋ, ಕೆಟ್ಟದಾಗಿವೆಯೋ, ನಮಗೆ ಉಪಯುಕ್ತವೋ ಅಥವಾ ಇಲ್ಲವೋ ಎಂಬ ಬಗ್ಗೆ ಬಹಳಷ್ಟು ಗೊಂದಲ ಉಂಟಾಗುತ್ತದೆ. ಇದನ್ನು ಬಹಳ ಯೋಜಿತ ರೀತಿಯಲ್ಲಿ ಮಾಡಲಾಗುತ್ತದೆ. ಇದು ಸಾಂಸ್ಥಿಕ ಜಗತ್ತಿನ ಯುದ್ಧದ ಒಂದು ಭಾಗ. ಆತ್ಮ ನಿರ್ಭರ ಭಾರತ ಆಂದೋಲನದಿಂದ ಇಂತಹ ಹಲವು ಸಮಸ್ಯೆಗಳಿಗೆ ನಮಗೆ ಪರಿಹಾರ ಸಿಗುತ್ತದೆ.

ಸ್ನೇಹಿತರೇ,

ನಾವು ಪ್ರಾಮಾಣಿಕವಾಗಿ ಮುನ್ನಡೆದರೆ ಫಲಿತಾಂಶಗಳು ಅದನ್ನು ಅನುಸರಿಸಿ ಬರುತ್ತವೆ ಎಂಬುದಕ್ಕೆ ನಮ್ಮ ಫಿರಂಗಿ ಮತ್ತಿತರ ಮದ್ದು ಗುಂಡುಗಳ ಕಾರ್ಖಾನೆಗಳು ಬಹಳ ದೊಡ್ಡ ಉದಾಹರಣೆಗಳು. ನಮ್ಮ ರಕ್ಷಣಾ ಕಾರ್ಯದರ್ಶಿಗಳು ಇದನ್ನು ಉಲ್ಲೇಖಿಸಿದ್ದಾರೆ. ಕಳೆದ ವರ್ಷಕ್ಕಿಂತ ಮೊದಲು ನಾವು ಏಳು ಹೊಸ ರಕ್ಷಣಾ ಸಾರ್ವಜನಿಕ ಉದ್ಯಮಗಳನ್ನು ರೂಪಿಸಿದ್ದೇವೆ. ಇಂದು ಅವುಗಳ ವ್ಯವಹಾರ ಬಹಳ ತ್ವರಿತವಾಗಿ ವಿಸ್ತರಣೆಗೊಂಡಿದೆ. ಹೊಸ ಮಾರುಕಟ್ಟೆಗಳನ್ನು ತಲುಪುತ್ತಿದೆ ಮತ್ತು ರಫ್ತು ಆದೇಶಗಳು ಬರುತ್ತಿವೆ. ಕಳೆದ ಐದು- ಆರು ವರ್ಷಗಳಲ್ಲಿ ರಕ್ಷಣಾ ರಫ್ತು ಆರು ಪಟ್ಟು ಹೆಚ್ಚಾಗಿರುವುದು ಬಹಳ ಸಂತೋಷದ ಸಂಗತಿ. ಇಂದು ನಾವು 75ಕ್ಕೂ  ಅಧಿಕ ರಾಷ್ಟ್ರಗಳಿಗೆ ಭಾರತೀಯ ನಿರ್ಮಿತ ರಕ್ಷಣಾ ಸಲಕರಣೆಗಳು ಮತ್ತು ಸೇವೆಗಳನ್ನು ಒದಗಿಸುತ್ತಿದ್ದೇವೆ. ಮೇಕ್ ಇನ್ ಇಂಡಿಯಾಕ್ಕೆ ಸರಕಾರದ ಉತ್ತೇಜನದ ಫಲವಾಗಿ ಕಳೆದ ಏಳು ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಗಳಿಗಾಗಿ 350 ಕ್ಕೂ ಅಧಿಕ ಹೊಸ ಕೈಗಾರಿಕಾ ಲೈಸೆನ್ಸ್ ಗಳನ್ನು ನೀಡಲಾಗಿದೆ, ಆದರೆ 2001ರಿಂದ 2014 ನಡುವಿನ 14 ವರ್ಷಗಳಲ್ಲಿ ಬರೇ 200 ಲೈಸೆನ್ಸ್ ಗಳನ್ನು ನೀಡಲಾಗಿತ್ತು.

ಸ್ನೇಹಿತರೇ,

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಬಜೆಟಿನಲ್ಲಿ ಇಪ್ಪತ್ತೈದು ಪ್ರತಿಶತ ಬಜೆಟನ್ನು ಉದ್ಯಮ, ನವೋದ್ಯಮ, ಮತ್ತು ಶೈಕ್ಷಣಿಕ ಕ್ಷೇತ್ರಕ್ಕಾಗಿ ತೆಗೆದಿಡಲಾಗಿದೆ, ಇದರಿಂದ ಖಾಸಗಿ ವಲಯ ಕೂಡಾ ಡಿ.ಆರ್.ಡಿ. ಮತ್ತು ರಕ್ಷಣಾ ಪಿ.ಎಸ್.ಯು.ಗಳಿಗೆ ಸಮನಾಗಿ ಬೆಳೆಯಬಲ್ಲದು. ಬಜೆಟಿನಲ್ಲಿ ವಿಶೇಷ ಉದ್ದೇಶಿತ ವ್ಯವಸ್ಥೆ (ಸ್ಪೆಷಲ್ ಪರ್ಪಸ್ ವೆಹಿಕಲ್) ಮಾದರಿಯನ್ನು ಕೂಡಾ ಪ್ರಸ್ತಾಪಿಸಲಾಗಿದೆ. ಇದು ಖಾಸಗಿ ಕೈಗಾರಿಕೋದ್ಯಮವನ್ನು ಬರೇ ಮಾರಾಟಗಾರ ಅಥವಾ ಪೂರೈಕೆದಾರ ಎಂಬ ಮಿತಿಯಿಂದ ಹೊರಗೆ ತಂದು ಪಾಲುದಾರ ಎಂಬ ಪಾತ್ರವನ್ನು ಅದಕ್ಕೆ ಒದಗಿಸಲಿದೆ. ಬಾಹ್ಯಾಕಾಶ ಮತ್ತು ಡ್ರೋನ್ ವಲಯಗಳಲ್ಲಿ ಖಾಸಗಿ ವಲಯಕ್ಕೆ ಹೊಸ ಸಾಧ್ಯತೆಗಳನ್ನು ನಾವು ರೂಪಿಸಿದ್ದೇವೆ. ಉತ್ತರ ಪ್ರದೇಶ ಮತ್ತು ತಮಿಳುನಾಡುಗಳ ರಕ್ಷಣಾ ಕಾರಿಡಾರುಗಳು ಹಾಗು ಪಿ.ಎಂ.ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆಯ ಜೊತೆ ಅವುಗಳ ಸಮಗ್ರೀಕರಣ ದೇಶದ ರಕ್ಷಣಾ ವಲಯಕ್ಕೆ ಬಹಳ ಅಗತ್ಯವಾದ ಶಕ್ತಿಯನ್ನು ಒದಗಿಸಲಿದೆ.

ಸ್ನೇಹಿತರೇ,

ಪಾರದರ್ಶಕ, ಕಾಲಮಿತಿಯಾಧಾರಿತ, ಪ್ರಾಯೋಗಿಕ ಮತ್ತು ನ್ಯಾಯೋಚಿತ ಪ್ರಯೋಗ, ಪರೀಕ್ಷಾ ಮತ್ತು ಪ್ರಮಾಣೀಕರಣ ವ್ಯವಸ್ಥೆ ರೋಮಾಂಚಕ, ದೃಢವಾದ ರಕ್ಷಣಾ ಉದ್ಯಮದ ಬೆಳವಣಿಗೆಯಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದುದರಿಂದ, ಸ್ವತಂತ್ರ ವ್ಯವಸ್ಥೆಯು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಹಳ ಸಹಕಾರಿಯಾಗಬಲ್ಲದು. ಇದು ದೇಶದಲ್ಲಿ ಅವಶ್ಯ ಕೌಶಲ್ಯ ಗುಂಪುಗಳನ್ನು ನಿರ್ಮಾಣ ಮಾಡಲು ಸಹಾಯ ಮಾಡಲಿದೆ.

ಸ್ನೇಹಿತರೇ,

ದೇಶವು ನಿಮ್ಮ ಮೇಲೆ ಭಾರೀ ಭರವಸೆಗಳನ್ನು ಹೊಂದಿದೆ. ಚರ್ಚೆಯು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯ ಹೊಸ ಅವಕಾಶಗಳನ್ನು ತೆರೆಯಲಿದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ಬಹಳ ದೀರ್ಘ ಭಾಷಣ ಕೊಡುವುದಕ್ಕಿಂತ ನಾನು ಇಂದು ಎಲ್ಲಾ ಭಾಗೀದಾರರಿಂದ ಅನಿಸಿಕೆಗಳನ್ನು ಕೇಳಲು ಬಯಸುತ್ತೇನೆ. ದಿನ ನಿಮಗಾಗಿ. ನೀವು ಪ್ರಾಯೋಗಿಕ ಮತ್ತು ಅನುಷ್ಟಾನಿಸಬಹುದಾದ ಪರಿಹಾರಗಳೊಂದಿಗೆ ಬನ್ನಿ ಮತ್ತು ನಮಗೂ ತಿಳಿಸಿ. ಬಜೆಟನ್ನು ನಿರ್ಧರಿಸಲಾಗಿದೆ, ಅದನ್ನು ಏಪ್ರಿಲ್ 1 ರಿಂದ ಅನುಷ್ಟಾನಿಸಲಾಗುತ್ತದೆ. ಮತ್ತು ಆದುದರಿಂದ ನಮಗೆ ಸಿದ್ಧತೆಗಾಗಿ ಇಡೀ ತಿಂಗಳು ಲಭ್ಯವಿದೆ. ಏಪ್ರಿಲ್ 1 ರಿಂದ ಬಜೆಟ್ ಪ್ರಸ್ತಾವನೆಗಳನ್ನು ಅನುಷ್ಟಾನಗೊಳಿಸಲು ನಾವು ತ್ವರಿತವಾಗಿ ಮುನ್ನಡೆಯೋಣ. ಬಜೆಟನ್ನು ಒಂದು ತಿಂಗಳು ಮುಂಚಿತವಾಗಿ ಮಂಡಿಸುವ ಉದ್ದೇಶವೂ ಇದೇ. ಇದರಿಂದಾಗಿ ಬಜೆಟ್ ಅನುಷ್ಟಾನಕ್ಕೆ ಮೊದಲು ಎಲ್ಲಾ ಇಲಾಖೆಗಳು  ಮತ್ತು ಭಾಗೀದಾರರು ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಮಾದರಿಯನ್ನು ರೂಪಿಸಿಕೊಳ್ಳಲು ಪೂರ್ಣ ಅವಕಾಶವನ್ನು ಪಡೆಯುತ್ತಾರೆ. ಹಾಗು ನಮ್ಮ ಸಮಯವೂ ವ್ಯರ್ಥವಾಗುವುದಿಲ್ಲ. ಇದು ದೇಶಪ್ರೇಮದ ಕೆಲಸ ಮತ್ತು ಇದು ದೇಶಕ್ಕಾಗಿ ಸೇವೆ ಸಲ್ಲಿಸುವ ಕೆಲಸ. ಲಾಭದ ಬಗ್ಗೆ ಮತ್ತೆ ಯೋಚಿಸಿ. ದೇಶವನ್ನು ಹೇಗೆ ಬಲಿಷ್ಟವನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಮೊದಲು ಗಮನ ಕೇಂದ್ರೀಕರಿಸಿ. ನಮ್ಮ ಸೇನೆಯ ಮೂರೂ ದಳಗಳೂ ನಿಟ್ಟಿನಲ್ಲಿ ಭಾರೀ ಉತ್ಸಾಹದಿಂದ ಪೂರ್ಣ ಪ್ರಮಾಣದ ಉಪಕ್ರಮವನ್ನು ಕೈಗೊಳ್ಳುತ್ತಿವೆ ಹಾಗು ಉತ್ತೇಜನವನ್ನೂ ನೀಡುತ್ತಿವೆ. ನಮ್ಮ ಖಾಸಗಿ ವಲಯ ಅವಕಾಶವನ್ನು ಕಳೆದುಕೊಳ್ಳಬಾರದು. ನಾನು ಮತ್ತೊಮ್ಮೆ ನಿಮ್ಮನ್ನು ಆಹ್ವಾನಿಸುತ್ತೇನೆ.

ನಿಮಗೆ ನನ್ನ ಶುಭ ಹಾರೈಕೆಗಳು! ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿ ಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***


(Release ID: 1801727) Visitor Counter : 223