ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಾರ್ವಜನಿಕ ವೀಕ್ಷಣೆಗಾಗಿ ಮತ್ತೆ ಮುಕ್ತವಾದ ಮುಂಬೈನ ʻನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾʼ


ಮ್ಯೂಸಿಯಂಗೆ ಭೇಟಿ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ. ಎಲ್. ಮುರುಗನ್

Posted On: 26 FEB 2022 4:41PM by PIB Bengaluru

ಮುಂಬೈನ ಸಿನಿಪ್ರಿಯರಿಗೆ ಮತ್ತು ನಗರಕ್ಕೆ ಭೇಟಿ ನೀಡುವವರಿಗೆ ಒಂದು ಒಳ್ಳೆಯ ಸುದ್ದಿ ಇಲ್ಲಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮುಚ್ಚಲಾಗಿದ್ದ ಭಾರತೀಯ ಚಲನಚಿತ್ರದ ರಾಷ್ಟ್ರೀಯ ವಸ್ತು ಸಂಗ್ರಹಾಲಯʼವನ್ನು (ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನೆಮಾ-ಎನ್‌ಎಂಐಸಿ) ಮತ್ತೆ ಸಾರ್ವಜನಿಕರ ವೀಕ್ಷಣೆಗೆ  ತೆರೆಯಲಾಗಿದೆ.

ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರು ಇಂದು ಮ್ಯೂಸಿಯಂಗೆ ಭೇಟಿ ನೀಡಿ ಅದರ ಪುನರಾರಂಭಕ್ಕೆ ಮುನ್ನುಡಿ ಬರೆದರು. ದಕ್ಷಿಣ ಮುಂಬೈನ ಪೆದ್ದರ್‌ ರಸ್ತೆಯಲ್ಲಿನ - ʻಗುಲ್ಷನ್ ಮಹಲ್ʼ ಪಾರಂಪರಿಕ ಕಟ್ಟಡ ಮತ್ತು ಆಧುನಿಕ ಹೊಸ ಕಟ್ಟಡದಲ್ಲಿ ವ್ಯಾಪಿಸಿರುವ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾದ ವಸ್ತುಗಳನ್ನು ಅವರು ಸೂಕ್ಷ್ಮವಾಗಿ ಗಮನಿಸಿದರು.

ಡಾ. ಮುರುಗನ್‌ ಅವರಿಗೆ ಚಲನಚಿತ್ರವಿಭಾಗದ ಮಹಾನಿರ್ದೇಶಕ ರವೀಂದ್ರ ಭಾಕರ್ ಅವರು ವಸ್ತುಸಂಗ್ರಹಾಲಯದ ಅವಲೋಕನವನ್ನು ನೀಡಿದರು. ವಸ್ತು ಸಂಗ್ರಹಾಲಯವನ್ನು ಅನ್ನು ದೀರ್ಘಕಾಲದವರೆಗೆ ಮುಚ್ಚಿದ ಕಾರಣ ಕೈಗೊಳ್ಳಬೇಕಾದ ಸಮಗ್ರ ಪುನಶ್ಚೇತನ ಕಾರ್ಯದ ಬಗ್ಗೆಯೂ ಅವರು ವಿವರಿಸಿದರು.

ಭಾರತದಲ್ಲಿರುವ ವಿಶಿಷ್ಟ ವಸ್ತುಸಂಗ್ರಹಾಲಯಗಳಲ್ಲಿ ಒಂದಾದ ʻಎನ್‌ಎಂಐಸಿʼಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 2019ರಲ್ಲಿ ಉದ್ಘಾಟಿಸಿದರು.

ಗುಲ್ಷನ್ ಮಹಲ್ ಪಾರಂಪರಿಕ ಕಟ್ಟಡದಲ್ಲಿ ಪ್ರದರ್ಶನಗಳು ವಿವಿಧ ಗಾತ್ರದ ಎಂಟು ವಿಭಿನ್ನ ಸಭಾಂಗಣಗಳಲ್ಲಿ ಹರಡಿದ್ದು, ಮೂಕಿ ಯುಗದಿಂದ ಹೊಸ ಅಲೆಯವರೆಗೆ ಭಾರತೀಯ ಸಿನಿಮಾದ ಇತಿಹಾಸವನ್ನು ಅನಾವರಣಗೊಳಿಸುತ್ತದೆ. ಹೊಸ ಮ್ಯೂಸಿಯಂ ಕಟ್ಟಡವು ಹೆಚ್ಚಾಗಿ ಸಂವಾದಾತ್ಮಕ ಪ್ರದರ್ಶನಗಳನ್ನು ಹೊಂದಿದೆ.

"ವೀರ ಪಾಂಡ್ಯ ಕಟ್ಟಬೊಮ್ಮನ್" ಚಿತ್ರದಲ್ಲಿ ಶಿವಾಜಿ ಗಣೇಶನ್ ಧರಿಸಿದ್ದ ರಕ್ಷಾಕವಚ ಮತ್ತು "ಆದಿಮೈ ಪೆನ್" ಚಿತ್ರದಲ್ಲಿ ಎಂ.ಜಿ. ರಾಮಚಂದ್ರನ್ ಧರಿಸಿದ್ದ ಕೆಂಪು ಕೋಟ್ ಸೇರಿದಂತೆ  ಕಲಾಕೃತಿಗಳ ದೊಡ್ಡ ಸಂಗ್ರಹವನ್ನು ʻಎನ್‌ಎಂಐಸಿʼ ಹೊಂದಿದೆ.

ಚಲನಚಿತ್ರ ಸಲಕರಣೆಗಳು, ವಿಂಟೇಜ್ ಉಪಕರಣಗಳು, ಪೋಸ್ಟರ್‌ಗಳು, ಪ್ರಮುಖ ಚಲನಚಿತ್ರಗಳ ಪ್ರತಿಗಳು, ಪ್ರಚಾರದ ಕರಪತ್ರಗಳು, ಧ್ವನಿ ಟ್ರ್ಯಾಕ್‌ಗಳು, ಟ್ರೇಲರ್‌ಗಳು, ಟ್ರಾನ್ಸ್‌ಪರೆನ್ಸಿಗಳು, ಹಳೆಯ ಸಿನಿಮಾ ನಿಯತಕಾಲಿಕೆಗಳು, ಚಲನಚಿತ್ರ ನಿರ್ಮಾಣ ಮತ್ತು ವಿತರಣೆಯನ್ನು ಒಳಗೊಂಡ ಅಂಕಿ-ಅಂಶಗಳು ಇತ್ಯಾದಿಗಳನ್ನು ಭಾರತೀಯ ಸಿನಿಮಾದ ಇತಿಹಾಸವನ್ನು ಕಾಲಾನುಕ್ರಮದಲ್ಲಿ ಚಿತ್ರಿಸುವಂತೆ ವ್ಯವಸ್ಥಿತ ರೀತಿಯಲ್ಲಿ ಇಲ್ಲಿ ಪ್ರದರ್ಶಿಸಲಾಗಿದೆ.

ʻಕಿಡ್ಸ್ ಫಿಲ್ಮ್ ಸ್ಟುಡಿಯೋʼ ಮತ್ತು ʻಗಾಂಧಿ ಮತ್ತು ಸಿನಿಮಾʼ ಇಲ್ಲಿನ ಇತರ ಪ್ರಮುಖ ಆಕರ್ಷಣೆಗಳಾಗಿವೆ.

   

ಮೇ ತಿಂಗಳಲ್ಲಿ, ಅತ್ಯಾಧುನಿಕ ಸಭಾಂಗಣಗಳನ್ನು ಒಳಗೊಂಡ ʻಎನ್‌ಎಂಐಸಿ ಸಮುಚ್ಚಯʼವು 17ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (ಎಂಐಎಫ್ಎಫ್) ಆತಿಥ್ಯ ವಹಿಸಲಿದ್ದು, ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು.

***


(Release ID: 1801708) Visitor Counter : 212