ಕೃಷಿ ಸಚಿವಾಲಯ
ʻಎಕ್ಸ್‌ಪೋ 2020 ದುಬೈʼನಲ್ಲಿ ತನ್ನ ಕೃಷಿ ಮತ್ತು ಆಹಾರ ಸಂಸ್ಕರಣಾ ಸಾಮರ್ಥ್ಯವನ್ನು ಪ್ರದರ್ಶಿಸಲಿರುವ ಭಾರತ
ವಿಶ್ವದಾದ್ಯಂತ ಹೂಡಿಕೆದಾರರಿಗೆ ಸಿರಿಧಾನ್ಯಗಳು, ಸಾವಯವ ಕೃಷಿ, ತೋಟಗಾರಿಕೆ ಮತ್ತು ಡೈರಿಯಲ್ಲಿ ಹೂಡಿಕೆ ಅವಕಾಶಗಳನ್ನು ಭಾರತ ಪ್ರದರ್ಶಿಸಲಿದೆ
ʻದುಬೈ ಎಕ್ಸ್‌ಪೋʼ ಭಾಗವಾಗಿ ಸಾವಯವ ಆಹಾರ ಮೇಳವನ್ನೂ ಆಯೋಜಿಸಲಾಗುವುದು
Posted On:
16 FEB 2022 6:10PM by PIB Bengaluru
ಜಾಗತಿಕ ಆಹಾರ ಸಂಸ್ಕರಣಾ ಉದ್ಯಮಕ್ಕೆ ಆದ್ಯತೆಯ ಪೂರೈಕೆ ಪಾಲುದಾರನಾಗಲು ಭಾರತವು ʻಎಕ್ಸ್‌ಪೋ 2020 ದುಬೈʼನಲ್ಲಿ ಹದಿನೈದು ದಿನಗಳ ಕಾಲ ವಿಶೇಷ ಪ್ರಯತ್ನಗಳನ್ನು ನಡೆಸಲಿದೆ. ಜೊತೆಗೆ, ಅಂತರರಾಷ್ಟ್ರೀಯ ಸಹಯೋಗಗಳನ್ನು ಅನ್ವೇಷಿಸಲು ಮತ್ತು ಅದರ ರಫ್ತು ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ವಿವಿಧ ವಿಚಾರ ಸಂಕಿರಣಗಳು ಮತ್ತು ಸಮಾವೇಶಗಳನ್ನು ಆಯೋಜಿಸಲಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಅಭಿಲಕ್ಷ್ ಲಿಖಿ ಅವರು ಫೆಬ್ರವರಿ 17, 2022 ರಂದು ʻಎಕ್ಸ್‌ಪೋ2020 ದುಬೈʼನ ಇಂಡಿಯಾ ಪೆವಿಲಿಯನ್ ನಲ್ಲಿ 'ಆಹಾರ, ಕೃಷಿ ಮತ್ತು ಜೀವನೋಪಾಯ' ಪಾಕ್ಷಿಕ ಅಭಿಯಾನವನ್ನು ಉದ್ಘಾಟಿಸಲಿದ್ದಾರೆ. ಆಹಾರ ಸಂಸ್ಕರಣೆ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಸಾವಯವ ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಸಾಧನೆಯನ್ನು ಹಾಗೂ ಈ ಕ್ಷೇತ್ರಗಳಲ್ಲಿ ಅದು ಒದಗಿಸುವ ಅಗಾಧ ಹೂಡಿಕೆ ಅವಕಾಶಗಳನ್ನು ಈ ಹದಿನೈದು ದಿನಗಳ ಕಾಲ ಪ್ರದರ್ಶಿಸಲಾಗುವುದು.
ಭಾರತದ ಪ್ರದರ್ಶನದಲ್ಲಿ 'ಸಿರಿಧಾನ್ಯʼವು ಪ್ರಮುಖ ವಿಷಯವಾಗಿದೆ. ಇದರ ಭಾಗವಾಗಿ ಸಿರಿಧಾನ್ಯಗಳ ಆಹಾರ ಉತ್ಸವ, ಸಿರಿಧಾನ್ಯ ಪುಸ್ತಕದ ಲೋಕಾರ್ಪಣೆ ಮತ್ತು ಸಿರಿಧಾನದ್ಯದ ಆರೋಗ್ಯ ಮತ್ತು ಪೌಷ್ಠಿಕಾಂಶದ ಪ್ರಯೋಜನಗಳ ಮೇಲೆ ಗಮನ ಕೇಂದ್ರೀಕರಿಸುವ ವಿವಿಧ ವಿಚಾರ ಸಂಕಿರಣಗಳಿಗೆ ಈ ಹದಿನೈದು ದಿನಗಳು ಸಾಕ್ಷಿಯಾಗಲಿವೆ. 2023 ಅನ್ನು 'ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ'ವಾಗಿ ಘೋಷಿಸಬೇಕೆಂದು ಭಾರತ ಮುಂದಿಟ್ಟ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಇತ್ತೀಚೆಗೆ ಅಂಗೀಕರಿಸಿದ್ದು, ಇದನ್ನು 70ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿವೆ.
ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳು ದೇಶದ ಅತಿದೊಡ್ಡ ಜೀವನೋಪಾಯವಾಗಿವೆ. ಈ ವಲಯವು ಒಟ್ಟಾರೆ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ (ಜಿಡಿಪಿ) ಸುಮಾರು 21% ನಷ್ಟು ಗಮನಾರ್ಹ ಪಾಲನ್ನು ನೀಡುತ್ತದೆ. 2021ನೇ ಆರ್ಥಿಕ ವರ್ಷದಲ್ಲಿ ಕೃಷಿ ಮತ್ತು ಸಂಬಂಧಿತ ಉತ್ಪನ್ನಗಳ ಒಟ್ಟು ರಫ್ತು 21.25 ಶತಕೋಟಿ ಅಮೆರಿಕನ್ ಡಾಲರ್‌ಗೆ ತಲುಪಿದ್ದು, ಭಾರತವು ವಿಶ್ವದ 15 ಪ್ರಮುಖ ಕೃಷಿ ಉತ್ಪನ್ನಗಳ ರಫ್ತುದಾರರಲ್ಲಿ ಒಂದೆನಿಸಿದೆ.
ಈ ವಲಯದ ಬಳಕೆಯಾಗದ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ, ಸರಕಾರವು ಸ್ವಯಂಚಾಲಿತ ಮಾರ್ಗದಲ್ಲಿ ಆಹಾರ ಉತ್ಪನ್ನಗಳು ಮತ್ತು ಆಹಾರ ಉತ್ಪನ್ನ ಇ-ಕಾಮರ್ಸ್ ಮಾರಾಟದಲ್ಲಿ 100% ವಿದೇಶಿ ನೇರ ಬಂಡವಾಳ ಹೂಡಿಕೆಗೆ(ಎಫ್‌ಡಿಐ) ಅವಕಾಶ ನೀಡಿದೆ. ʻಪಿಎಲ್‌ಐʼ ಯೋಜನೆಯಡಿ ಆಹಾರ ಸಂಸ್ಕರಣಾ ವಲಯಕ್ಕೆ 10,900 ಕೋಟಿ ರೂ.ಗಳ (1.484 ದಶಲಕ್ಷ ಅಮೆರಿಕನ್ ಡಾಲರ್) ಪ್ರೋತ್ಸಾಹ ಧನಕ್ಕೂ ಅನುಮೋದನೆ ನೀಡಲಾಗಿದೆ. ಇದಲ್ಲದೆ, 2021-22ರ ವೇಳೆಗೆ ಭಾರತದ ಕೃಷಿ ರಫ್ತನ್ನು 60 ಶತಕೋಟಿ ಅಮೆರಿಕನ್ ಡಾಲರ್‌ಗೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ 100 ಶತಕೋಟಿ ಅಮೆರಿಕನ್ ಡಾಲರ್‌ಗೆ ಹೆಚ್ಚಿಸಲು ಸಮಗ್ರ ಕೃಷಿ ರಫ್ತು ನೀತಿಯನ್ನು ಜಾರಿಗೊಳಿಸಲಾಗಿದೆ.
ಜಾಗತಿಕ ಬಳಕೆಯು ಸಾಂಕ್ರಾಮಿಕ ಪೂರ್ವ ಮಟ್ಟವನ್ನು ತಲುಪುತ್ತಿರುವ ಹಿನ್ನೆಲೆಯಲ್ಲಿ ಈ ವಲಯವು ನೀರಾವರಿ ಸೌಲಭ್ಯಗಳು, ಉಗ್ರಾಣ ಮತ್ತು ಕೋಲ್ಡ್ ಸ್ಟೋರೇಜ್‌ನಂತಹ ಕೃಷಿ ಮೂಲಸೌಕರ್ಯಗಳಲ್ಲಿ ಹೆಚ್ಚಿನ ಹೂಡಿಕೆಗೆ ಸಾಕ್ಷಿಯಾಗಿದೆ.
ಈ ಹದಿನೈದು ದಿನಗಳ ಕಾರ್ಯಕ್ರಮದಲ್ಲಿ ಭಾರತದ ಹಲವು ಹಿರಿಯ ಸರಕಾರಿ ಅಧಿಕಾರಿಗಳು ಭಾಗವಹಿಸಲಿದ್ದು, ವಿವಿಧ ಅಧಿವೇಶನಗಳಲ್ಲಿ ಅವರು ಉಪಸ್ಥಿತರಿರುವರು.
'ಆಹಾರ, ಕೃಷಿ ಮತ್ತು ಜೀವನೋಪಾಯ' ಪಾಕ್ಷಿಕವು ಮಾರ್ಚ್ 2ರಂದು ಸಂಪನ್ನವಾಗಲಿದೆ.
***
(Release ID: 1798913)
Visitor Counter : 250