ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ
azadi ka amrit mahotsav

ಧಾರವಾಡ ಐಐಟಿಯಲ್ಲಿ ಕೈಗೆಟುಕುವ ಮತ್ತು ಶುದ್ಧ ಇಂಧನದ ಜಾಗತಿಕ ಶ್ರೇಷ್ಠತಾ ಕೇಂದ್ರ (ಜಿಸಿಒಇ-ಎಸಿಇ) ಆರಂಭ

Posted On: 31 JAN 2022 12:38PM by PIB Bengaluru

ಕರ್ನಾಟಕದ ಧಾರವಾಡದ ಭಾರತೀಯ ತಾಂತ್ರಿಕ ಸಂಸ್ಥೆ- ಐಐಟಿ (ಐಐಟಿಡಿಎಚ್ )ಯಲ್ಲಿ 2022ರ ಜನವರಿ 28ರಂದು ಶುಕ್ರವಾರದಂದು ಅಗ್ಗಬೆಲೆಯ ಮತ್ತು ಶುದ್ಧ ಇಂಧನದ ಜಾಗತಿಕ ಶ್ರೇಷ್ಠತಾ ಕೇಂದ್ರ  (ಜಿಸಿಒಇ-ಎಸಿಇ)ದ ಉದ್ಘಾಟನಾ ಸಮಾರಂಭ ವರ್ಚುವಲ್ ರೂಪದಲ್ಲಿ ನಡೆಯಿತು. ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾದ ಪ್ರೊ. ಕೆ.ವಿಜಯರಾಘವನ್ ಅವರ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆಯಿತು.

ಕೇಂದ್ರಕ್ಕೆ ಎಚ್ ಎಚ್ ಎಸ್ ಐಎಫ್ ನಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ ಆರ್) ದೇಣಿಗೆಯ ನೆರವು ದೊರೆತಿದೆ. ಎಚ್ ಎಚ್ ಎಸ್ ಐಎಫ್ ನೊಂದಿಗೆ ಸಿಎಸ್ ಆರ್  ಯೋಜನೆಯ ಮೊದಲ ಹಂತದಲ್ಲಿ ಜಿಸಿಒಇ-ಎಸಿಇಗಾಗಿ ಮುಖ್ಯವಾಗಿ ಕೌಶಲ್ಯ ಅಭಿವೃದ್ಧಿ, ತಯಾರಿಕೆ ಮತ್ತು ಸಂಶೋಧನಾ ಮತ್ತು ಅಭಿವೃದ್ಧಿ ಘಟಕಗಳನ್ನು ಸ್ಥಾಪಿಸಲಾಗಿದೆ. ನಂತರದ ಹಂತಗಳನ್ನು ಹೊಸತನದ ಶೋಧದ ಉತ್ತೇಜನಕ್ಕೆ ಮತ್ತು ಕೈಗೆಟುಕುವ ಮತ್ತು ಶುದ್ಧ ಇಂಧನ ವಲಯದಲ್ಲಿ ತಳಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಸಂಪೋಷಣೆಯ (ಇನ್ ಕ್ಯೂಬೇಷನ್ ) ಬೆಂಬಲವನ್ನು ಒದಗಿಸಲಾಗುವುದು.

ಐಐಟಿ ಧಾರವಾಡದ ಡೀನ್ (ಆರ್&ಡಿ) ಪ್ರೊ.ಎಸ್‌.ಆರ್‌.ಎಂ.ಪ್ರಸನ್ನ ಅವರು ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಕೇಂದ್ರದ ಸಂಕ್ಷಿಪ್ತ ಪರಿಚಯವನ್ನು ನೀಡಿದರು. ಭಾರತವು ಸೌರ, ಪವನ, ಜೀವ ರಾಶಿಗಳಂತಹ ಅನೇಕ ನವೀಕರಿಸಬಹುದಾದ ಇಂಧನ ಮೂಲಗಳಿಂದ ತುಂಬಿದೆ ಮತ್ತು ಶುದ್ಧ ಇಂಧನ ಪಡೆಯಲು ಕೈಗೆಟುಕುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ಅವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬಹುದು, ಈ ಕಾರ್ಯ ನಿರ್ದಿಷ್ಠವಾಗಿ ಈ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತದೆ ಎಂದರು.

ಪ್ರೊ. ಕೆ. ವಿಜಯರಾಘವನ್ ಅವರು ಹವಾಮಾನ ಬದಲಾವಣೆಯ ನಿಯಂತ್ರಣವನ್ನು ಒಂದು ನಿರ್ಣಾಯಕ ಭಾಗವಾಗಿ ಇಂಧನ ಮತ್ತು ಇಂಧನ ಪರಿಹಾರಗಳನ್ನು ಉಲ್ಲೇಖಿಸಿದರು. ಕಳೆದ ಎರಡು ದಶಕಗಳಲ್ಲಿ ಸೌರ, ಪವನ, ಪರಮಾಣು ಮತ್ತು ಇತರ ರೀತಿಯ ಶಕ್ತಿಯ ಸಂಶೋಧನೆಯಲ್ಲಿ ಅಗಾಧವಾದ ಹೆಚ್ಚಳವಾಗಿದೆ ಮತ್ತು ಅಂತಹ ಸಂಶೋಧನೆಗಳ ಫಲಿತಾಂಶಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾರುಕಟ್ಟೆಗೆ ಬರಬೇಕಾಗಿದೆ ಎಂದು ಅವರು ಹೇಳಿದರು.  ಐಐಟಿ ಧಾರವಾಡವು ದೇಶದ ಕೆಲವೇ ಕೆಲವು ಸಂಸ್ಥೆಗಳಲ್ಲಿ ಒಂದಾಗಿದ್ದು, ಇದು ಹನಿವೆಲ್‌ನಂತಹ ಉದ್ಯಮ ಪಾಲುದಾರರೊಂದಿಗೆ ಕೈಜೋಡಿಸುವುದರ ಮೂಲಕ ಯುವ ಪೀಳಿಗೆಗೆ ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಮತ್ತು ಹೊಂದಿಕೊಳ್ಳುವ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ತರಬೇತಿ ನೀಡುತ್ತದೆ. ಜಾಗತಿಕ ತಾಪಮಾನವು ಹೆಚ್ಚಾಗುತ್ತಿದ್ದಂತೆ, ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ಆರ್ದ್ರತೆಯ ಪ್ರದೇಶಗಳಲ್ಲಿ ಜನರನ್ನು ನಿಷ್ಕ್ರಿಯಗೊಳಿಸುವ ದೊಡ್ಡ ಸವಾಲುಗಳಿವೆ. ಎರಡನೆಯದಾಗಿ, ಕೃಷಿಗೆ ಇಂಧನ ಲಭ್ಯತೆಯು ಮತ್ತೊಂದು ಬೃಹತ್  ಸವಾಲಾಗಿದೆ, ಆರೋಗ್ಯ ಕ್ಷೇತ್ರಕ್ಕೆ ಮತ್ತಷ್ಟು ಇಂಧನ ದೊರೆಯುವಿಕೆ, ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರಿಗೂ 24x7 ಶಿಕ್ಷಣದ ಸಿಗುವಂತೆ ಮಾಡುವುದು  ಈ ಜಿಸಿಒಇ ಪರಿಹರಿಸಬಹುದಾದ ಕೆಲವು ಪ್ರಮುಖ ಸವಾಲುಗಳಾಗಿವೆ. ಅಂತಿಮವಾಗಿ, ಸರ್ಕಾರವು ಹೈಡ್ರೋಜನ್ ಮಿಷನ್ ಅನ್ನು ಪ್ರಾರಂಭಿಸಿದೆ ಮತ್ತು ಸೌರ ಮತ್ತು ಪವನ ಶಕ್ತಿಯಂತಹ ಶುದ್ಧ ಇಂಧನ ಮೂಲಗಳಿಂದ ಅದರ ಉತ್ಪಾದನೆಗೆ ಅಗತ್ಯವಾದ ಇಂಧನವನ್ನು ಬಳಸುವುದು ಉದ್ದೇಶವಾಗಿದೆ, ಆದ್ದರಿಂದ ಅದನ್ನು ಹಸಿರು ಹೈಡ್ರೋಜನ್ ಇಂಧನವೆಂದು ಕರೆಯಲಾಗುತ್ತದೆ.  ಕೇಂದ್ರದ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯತ್ನಗಳು ಆ ನಿಟ್ಟಿನಲ್ಲಿ ಸಾಗಿವೆ. ಈ ಅಂಶಗಳೊಂದಿಗೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರು ಕೈಗೆಟಕಬಹುದಾದ ಮತ್ತು ಶುದ್ಧ ಇಂಧನದ ಜಾಗತಿಕ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಿರುವುದಕ್ಕಾಗಿ ಎಲ್ಲಾ ಪಾಲುದಾರರಾದ ಐಐಟಿ ಧಾರವಾಡ, ಹನಿವೆಲ್ ಮತ್ತು ಸೆಲ್ಕೋ ಫೌಂಡೇಷನ್ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಐಐಟಿ ಧಾರವಾಡದ ಬೋರ್ಡ್ ಆಫ್ ಗವರ್ನರ್ ಅಧ್ಯಕ್ಷ ಶ್ರೀ ವಿನಾಯಕ ಚಟರ್ಜಿ, ಐಐಟಿ ಧಾರವಾಡದಲ್ಲಿ ಕೈಗೆಟಕಬಹುದಾದ ಮತ್ತು ಶುದ್ಧ ಇಂಧನ ಕುರಿತಾದ ಜಾಗತಿಕ ಶ್ರೇಷ್ಠತಾ ಕೇಂದ್ರ ಆರಂಭಿಸಿರುವುದು ಐತಿಹಾಸಿಕ ಮೈಲುಗಲ್ಲು ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿನ ಕ್ಷೇತ್ರ ಪರೀಕ್ಷೆಗಳಿಗಾಗಿ ಪ್ರಯೋಗಾಲಯದಲ್ಲಿ ಶೈಕ್ಷಣಿಕ ಒಳಗೊಳ್ಳುವಿಕೆಗಳು, ಸಂಶೋಧನೆ ಮತ್ತು ಬೆಳವಣಿಗೆಗಳನ್ನು ಒಗ್ಗೂಡಿಸಲು ಕೇಂದ್ರವು ಮುಂದಾಗಿದೆ. ಕೇಂದ್ರದಲ್ಲಿನ ಕೆಲಸವು ನಮ್ಮ ದೇಶದ ದೈನಂದಿನ ಜೀವನದ ಮೇಲೆ ದೀರ್ಘಾವಧಿಯ ಪರಿಣಾಮವನ್ನು ಬೀರುತ್ತದೆ ಎಂದರು.  “ಇಂಧನ, ಜಲ ಮತ್ತು ವಾಯು ಕುರಿತಂತೆ ಸವಾಲುಗಳನ್ನು ಎದುರಿಸಲು ಸಮುದಾಯಗಳಿಗೆ ಪರಿಹಾರಗಳನ್ನು ಒದಗಿಸಲು ಹನಿವೆಲ್ ಬದ್ಧವಾಗಿದೆ. ಐಐಟಿ ಧಾರವಾಡದ ಜತೆಗಿನ ನಮ್ಮ ಪಾಲುದಾರಿಕೆ  ನಮ್ಮ ಗ್ರಾಮೀಣ ಸಮುದಾಯಗಳ ಸುಧಾರಣೆಗಾಗಿ ಶುದ್ಧ ಇಂಧನದಲ್ಲಿ ಕೈಗೆಟುಕುವ ಮತ್ತು ಸುಸ್ಥಿರ ತಂತ್ರಜ್ಞಾನ ಚಾಲಿತ ಪರಿಹಾರಗಳನ್ನು ಹುಡುಕಲು ಪ್ರಯತ್ನಿಸುತ್ತಿದೆ, ಇದು 2030ರ ವೇಳೆಗೆ ದೇಶದ ಇಂಧನ ಅಗತ್ಯದ ಶೇಕಡಾ 50ರಷ್ಟನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯಬೇಕೆಂಬ ಸರ್ಕಾರದ ಗುರಿ ಸಾಧನೆಗೆ ನೆರವಾಗಲಿದೆ” ಎಂದು ಹನಿವೆಲ್ ಇಂಡಿಯಾ ಅಧ್ಯಕ್ಷ ಮತ್ತು ಎಚ್ಎಚ್ಎಸ್ಐಎಫ್ ನ ನಿರ್ದೇಶಕ ಆಶಿಷ್ ಗಾಯಕವಾಡ್ ತಿಳಿಸಿದರು.

ಐಐಟಿ ಧಾರವಾಡ ನಿರ್ದೇಶಕ ಪ್ರೊ. ಪಿ. ಶೇಷು, ಐಐಟಿಗಳು ಭಾರತದ ಪರಿವರ್ತನೆಯ ಸಾಧನಗಳಾಗಬೇಕು ಎಂಬ ಗೌರವಾನ್ವಿತ ಪ್ರಧಾನಮಂತ್ರಿಗಳ ಸಂದೇಶವನ್ನು ಪುನರುಚ್ಛರಿಸಿದರು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ – 7, ಕೈಗೆಟುಕಬಹುದಾದ ಶುದ್ಧ ಇಂಧನ ಗುರಿ ಸಾಧನೆ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ ಮತ್ತು ಗೌರವಾನ್ವಿತ ಪ್ರಧಾನಮಂತ್ರಿ ಅವರು ನಿಗದಿಪಡಿಸಿರುವ ಶೂನ್ಯ ಇಂಗಾಲ ಹೊರಸೂಸುವ ಗುರಿ ಸಾಧನೆಗೆ ಕೊಡುಗೆ ನೀಡಲಿದೆ ಎಂದು ಅವರು ಭರವಸೆ ನೀಡಿದರು. ಕೈಗೆಟಕಬಹುದಾದ ಶುದ್ಧ ಇಂಧನ ವಲಯ ಹಲವು ಆಯಾಮಗಳಲ್ಲಿ ಬಹು ವಿಧದ ಪರಿಣಾಮಗಳನ್ನು ಉಂಟುಮಾಡುತ್ತದೆ. ತಂತ್ರಜ್ಞಾನ ಅಭಿವೃದ್ಧಿ ಮಾತ್ರವಲ್ಲದೆ, ಪ್ರಾಯೋಗಿಕ ನಿಯೋಜನೆ, ನಿರ್ಣಾಯಕ ವಲಯಗಳಲ್ಲಿ ಸಾಮರ್ಥ್ಯವೃದ್ಧಿಗೆ ಕೊಡುಗೆ ನೀಡಲು ತಂಡಗಳನ್ನು ನಿಯೋಜಿಸಬೇಕಾಗಿದೆ ಎಂದರು. ಈ ಉಪಕ್ರಮದಡಿ ಒಟ್ಟಾರೆ ಯಶಸ್ಸುಗಳಿಸಲಾಗುವುದು ಎಂದು ಅವರು ಆಶಿಸಿದರು. 

ಸೆಲ್ಕೋ ಫೌಂಡೇಷನ್, ಈ ಕೇಂದ್ರಕ್ಕೆ ತಳಮಟ್ಟದಲ್ಲಿ ಸಮಸ್ಯೆ ಗುರುತಿಸುವುದು/ಜಾರಿಗೊಳಿಸುವ ಪಾಲುದಾರ ಸಂಸ್ಥೆಯಾಗಿದೆ. ಸೆಲ್ಕೋ ಫೌಂಡೇಷನ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಹರೀಶ್ ಹಂದೆ, ಕಡಿಮೆ ಆದಾಯದ ಸಮುದಾಯಗಳ ಮೇಲೆ ಕೇಂದ್ರೀಕರಿಸುವ ಆರೋಗ್ಯ ಮತ್ತು ಜೀವನೋಪಾಯಕ್ಕಾಗಿ ಅಗತ್ಯ ಆಧಾರಿತ ಪ್ರಭಾವ-ಚಾಲಿತ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ಬೆಂಬಲ ವ್ಯವಸ್ಥೆಯನ್ನು ತೆರೆಯುವ ಮೂಲಕ ಕೇಂದ್ರವು ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಪ್ರತಿಪಾದಿಸಿದರು. ಐಐಟಿಯೇತರ ಹಿನ್ನೆಲೆಯ ನವೋದ್ಯಮಿಗಳು ಮತ್ತು ಉದ್ಯಮಿಗಳಿಗೆ ಐಐಟಿಯ ಬಾಗಿಲು ತೆರೆಯಲು ಐಐಟಿ ಧಾರವಾಡದ ನಾಯಕತ್ವವು ತೆಗೆದುಕೊಂಡ ದಿಟ್ಟ ಹೆಜ್ಜೆಯು ಇತರ ಐಐಟಿಗಳಿಗೆ ದಿಕ್ಕ ಬದಲಿಸುವ ನಿರ್ಣಾಯಕ ಕ್ರಮವಾಗಲಿದೆ ಎಂದರು.

ಹನಿವೆಲ್ ಟೆಕ್ನಾಲಜಿ ಸೆಲ್ಯೂಷನ್ಸ್ ಲ್ಯಾಬ್ ನ ಅಧ್ಯಕ್ಷ ಶ್ರೀ ಪ್ರತಾಪ್ ಸ್ಯಾಮುಯಲ್, ಹನಿವೆಲ್ ಇಂಡಿಯಾ ಮತ್ತು ಎಚ್ಎಚ್ಎಸ್ಐಎಫ್ ನ ಕಾರ್ಪೊರೇಟ್ ಕಮ್ಯುನಿಕೇಶನ್ಸ್ ಮತ್ತು ಸಿಎಸ್ಆರ್ ನ ಹಿರಿಯ ನಿರ್ದೇಶಕಿ ಪೂಜಾ ಥಾಕ್ರನ್, ಸೆಲ್ಕೋ ಫೌಂಡೇಷನ್ ನ ನಿರ್ದೇಶಕಿ ಹುದಾ ಜಾಫ್ಫರ್, ಐಐಟಿ ಧಾರವಾಡದ ಆಡಳಿತ ಮಂಡಳಿ ಹಾಗೂ ಬೋಧಕ ಸಿಬ್ಬಂದಿ, ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

***


(Release ID: 1794009) Visitor Counter : 234