ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ನನ್ನ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪ್ರತಿ ಬಡವರ ಮನೆಗೂ ಪ್ರತಿ ತಿಂಗಳು ಉಚಿತ ಪಡಿತರವನ್ನು ಒದಗಿಸುತ್ತಿದೆ: ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್
ಎರಡು ಲಕ್ಷದ ಅರವತ್ತು ಸಾವಿರ ಕೋಟಿ ರೂ. ವೆಚ್ಚದ, ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮ ಇದಾಗಿದ್ದು, 19 ತಿಂಗಳ ಕಾಲ 80 ಕೋಟಿ ಫಲಾನುಭವಿಗಳಿಗೆ ತಲುಪಿಸುತ್ತಿದೆ
ದಾಖಲೆ ಉತ್ಪಾದನೆಗೆ ಸರಿಹೊಂದುವಂತೆ ಸರ್ಕಾರವು ದಾಖಲೆ ಖರೀದಿಯನ್ನೂ ಮಾಡಿದೆ: ರಾಷ್ಟ್ರಪತಿ
Posted On:
31 JAN 2022 3:50PM by PIB Bengaluru
ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಇಂದು ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಬಡವರ ಮನೆಗಳಿಗೆ ಉಚಿತ ಪಡಿತರ ನೀಡುವಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೆ, ಆಹಾರ ಧಾನ್ಯಗಳ ದಾಖಲೆ ಉತ್ಪಾದನೆಯ ಪರಿಣಾಮವಾಗಿ ನಡೆದ ದಾಖಲೆ ಪ್ರಮಾಣದ ಖರೀದಿಯ ಬಗ್ಗೆಯೂ ಅವರು ಒತ್ತಿ ಹೇಳಿದರು.
“ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಹಲವು ಪ್ರಮುಖ ದೇಶಗಳು ಆಹಾರ ಧಾನ್ಯಗಳ ಕೊರತೆಯನ್ನು ಅನುಭವಿಸಿದವು ಮತ್ತು ಹಸಿವಿನಿಂದ ಬಳಲಿದವು. ಆದರೆ ನನ್ನ ಸಂವೇದನಾಶೀಲ ಸರ್ಕಾರವು 100 ವರ್ಷಗಳಲ್ಲಿ ಕಂಡ ಅತ್ಯಂತ ಕೆಟ್ಟ ಸಾಂಕ್ರಾಮಿಕ ರೋಗದ ಸಮಯದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಂಡಿದೆ. ನನ್ನ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪ್ರತಿ ಬಡವರ ಮನೆಗೆ ಪ್ರತಿ ತಿಂಗಳು ಉಚಿತ ಪಡಿತರವನ್ನು ನೀಡುತ್ತಿದೆ. ಇದು ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದ್ದು, ಎರಡು ಲಕ್ಷದ ಅರವತ್ತು ಸಾವಿರ ಕೋಟಿ ರೂ ವೆಚ್ಚದಲ್ಲಿ 19 ತಿಂಗಳ ಕಾಲ 80 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಿಸುತ್ತಿದೆ. ಪ್ರಸ್ತುತ ಸನ್ನಿವೇಶವನ್ನು ಸಂಪೂರ್ಣವಾಗಿ ಅರಿತಿರುವ ಸರ್ಕಾರವು ಈ ಯೋಜನೆಯನ್ನು ಮಾರ್ಚ್ 2022 ರವರೆಗೆ ವಿಸ್ತರಿಸಿದೆ” ಎಂದು ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ತಿಳಿಸಿದರು.
“ರೈತರು ಮತ್ತು ದೇಶದ ಗ್ರಾಮೀಣ ಆರ್ಥಿಕತೆಯನ್ನು ಸಶಕ್ತಗೊಳಿಸಲು ನನ್ನ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಸಾಂಕ್ರಾಮಿಕ ರೋಗದ ಹೊರತಾಗಿಯೂ, ನಮ್ಮ ರೈತರು 2020-21ರಲ್ಲಿ 30 ಕೋಟಿ ಟನ್‌ಗೂ ಹೆಚ್ಚು ಆಹಾರ ಧಾನ್ಯಗಳನ್ನು ಮತ್ತು 33 ಕೋಟಿ ಟನ್‌ಗಳಷ್ಟು ತೋಟಗಾರಿಕೆ ಉತ್ಪನ್ನಗಳನ್ನು ಬೆಳೆದಿದ್ದಾರೆ. ದಾಖಲೆಯ ಉತ್ಪಾದನೆಗೆ ಸರಿಹೊಂದುವಂತೆ ಸರ್ಕಾರವು ದಾಖಲೆಯ ಪ್ರಮಾಣದಲ್ಲಿ ಖರೀದಿಯನ್ನೂ ಮಾಡಿದೆ. ಹಿಂಗಾರು ಹಂಗಾಮಿನಲ್ಲಿ ಸರ್ಕಾರವು 433 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿದ್ದು ಇದರಿಂದ ಸುಮಾರು 50 ಲಕ್ಷ ರೈತರಿಗೆ ಪ್ರಯೋಜನವಾಗಿದೆ. ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದ ಸುಮಾರು 900 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಲಾಗಿದ್ದು, 1 ಕೋಟಿ 30 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಿದೆ ಎಂದು ಅವರು ಹೇಳಿದರು.
***
(Release ID: 1794006)
Visitor Counter : 172