ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಖಾದ್ಯ ತೈಲ ದರ ಪ್ರಮುಖ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ 5ರೂ. ಮತ್ತು 20 ರೂ. ಶ್ರೇಣಿಯಲ್ಲಿ ಗಣನೀಯ ಇಳಿಕೆ


ಪ್ರತಿ ಲೀಟರ್ ಗೆ 15-20ರೂ. ದರ ಕಡಿತ ಮಾಡಿದ ಪ್ರಮುಖ ಖಾದ್ಯ ತೈಲ ತಯಾರಕರಾದ ಅದಾನಿ ವಿಲ್ಮರ್ ಮತ್ತು ರುಚಿ ಕೈಗಾರಿಕೆಗಳು

ಇತರ ತಯಾರಕರಾದ ಹೈದ್ರಾಬಾದ್  ನ ಜೆಮಿನಿ ಎಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ, ದೆಹಲಿಯ ಮೋದಿ ನ್ಯಾಚುರಲ್ಸ್,  ಗೋಕುಲ್ ರಿ-ಫಾಯಿಲ್ಸ್ ಮತ್ತು ಸಾಲ್ವೆಂಟ್, ವಿಜಯ್ ಸಾಲ್ವ್ಯಾಕ್ಸ್, ಗೋಕುಲ್ ಆಗ್ರೋ ರಿಸೋರ್ಸಸ್ ಮತ್ತು ಎನ್.ಕೆ. ಪ್ರೋಟೀನ್ಸ್ ನಿಂದಲೂ ಖಾದ್ಯ ತೈಲ ದರ ಇಳಿಕೆ

ಈ ಕೆಳಗಿನ ವಿವಿಧ ಕ್ರಮಗಳು, ಕಚ್ಚಾ ತಾಳೆ ಎಣ್ಣೆಗೆ ಶೇ.7.5 ಮತ್ತು ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ ಶೇ.5  ಸುಂಕ

ಆರ್.ಬಿ.ಡಿ. ಪಾಮೊಲಿನ್ ಎಣ್ಣೆಯ ಮೂಲ ಸುಂಕ ಇತ್ತೀಚೆಗೆ ಶೇ.17.5ರಿಂದ ಶೇ.12.5ಕ್ಕೆ ಇಳಿಕೆ

ರೀಫೈನ್ಡ್ ಸೋಯಾಬೀನ್ ಮತ್ತು ರೀಫೈನ್ಡ್ ಸೂರ್ಯಕಾಂತಿ ಎಣ್ಣೆಯ ಮೂಲ ಸುಂಕ ಪ್ರಸಕ್ತ ಇದ್ದ ಶೇ.32.5ರಿಂದ ಶೇ.17.5ಕ್ಕೆ ಕಡಿತ

Posted On: 11 JAN 2022 6:39PM by PIB Bengaluru

ಭಾರತದ ದೇಶೀಯ ಉತ್ಪಾದನೆಯು ದೇಶೀಯ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ಭಾರತ ಖಾದ್ಯ ತೈಲದ ಅತಿ ದೊಡ್ಡ ಆಮದುದಾರನಾಗಿದೆ. ದೇಶ ಬೇಡಿಕೆ ಮತ್ತು ಪೂರೈಕೆ ನಡುವಿನ ಕಂದಕವನ್ನು ಸರಿದೂಗಿಸಲು ಭಾರೀ ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಬೇಕಾಗಿದೆ. ದೇಶದಲ್ಲಿ ಬಳಸಲಾಗುವ ಖಾದ್ಯ ತೈಲದ ಸುಮಾರು ಶೇಕಡ 56-60ರಷ್ಟನ್ನು ಆಮದಿನ ಮೂಲಕ ಸರಿದೂಗಿಸಲಾಗುತ್ತಿದೆ. ಜಾಗತಿಕ ಉತ್ಪಾದನೆಯಲ್ಲಿನ ಕೊರತೆ ಮತ್ತು ರಫ್ತು ರಾಷ್ಟ್ರಗಳು ಮಾಡಿರುವ ರಫ್ತು ಸುಂಕ/ತೆರಿಗೆಯ ಹೆಚ್ಚಳದಿಂದಾಗಿ ಅಂತಾರಾಷ್ಟ್ರೀಯ ಖಾದ್ಯತೈಲ ದರ ಒತ್ತಡಕ್ಕೆ ಸಿಲುಕಿವೆ. ಹೀಗಾಗಿ ದೇಶೀಯವಾಗಿ ಖಾದ್ಯ ತೈಲ ದರವನ್ನೂ ಆಮದು ತೈಲದ ದರ ನಿಯಂತ್ರಿಸುತ್ತದೆ.

ದೇಶೀಯ ದರಗಳು ಅಂತಾರಾಷ್ಟ್ರೀಯ ದರದ ಪ್ರವೃತ್ತಿಯಿಂದ ನಿರ್ದೇಶಿತವಾಗಿದ್ದು, ದೇಶದ ಖಾದ್ಯ ತೈಲ ದರಗಳು ಕಳೆದ ಒಂದು ವರ್ಷದಿಂದ ಹೆಚ್ಚಳವಾಗಿದ್ದವು. ಇದು ಸರ್ಕಾರಕ್ಕೆ ಪ್ರಮುಖ ಕಾಳಜಿಯ ವಿಚಾರವಾಗಿತ್ತು. ಬೆಲೆಗಳನ್ನು ನಿಯಂತ್ರಿಸಲು ಮತ್ತು ಅಭೂತಪೂರ್ವ ಹಣದುಬ್ಬರದ ಪರಿಸ್ಥಿತಿಯಲ್ಲಿ ತತ್ತರಿಸುತ್ತಿರುವ ಗ್ರಾಹಕರಿಗೆ ನಿರಾಳ ಒದಗಿಸಲು, ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕಳೆದ ಒಂದು ವರ್ಷದಿಂದ ಖಾದ್ಯ ತೈಲದ ಬೆಲೆಯಲ್ಲಿ ನಿರಂತರ ಏರಿಕೆಯನ್ನು ತಡೆಯುವ ಪ್ರಯತ್ನದಲ್ಲಿ, ಕಚ್ಚಾ ಪಾಮ್ ಆಯಿಲ್, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಶೇ.2.5 ರಿಂದ ಶೂನ್ಯಕ್ಕೆ ಕಡಿತಗೊಳಿಸಲಾಗಿದೆ. ಈ ತೈಲಗಳ ಮೇಲಿನ ಕೃಷಿ-ಉಪಕರವನ್ನು ಕಚ್ಚಾ ಪಾಮ್ ಎಣ್ಣೆಗೆ ಶೇ.20 ರಿಂದ ಶೇ.7.5 ಕ್ಕೆ ಮತ್ತು ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ ಶೇ.5 ಕ್ಕೆ ಇಳಿಸಲಾಗಿದೆ.

ಮೇಲಿನ ಕಡಿತದ ಪರಿಣಾಮವಾಗಿ, ಒಟ್ಟು ಸುಂಕವು ಈಗ ಕಚ್ಚಾ ಪಾಮ್ ಎಣ್ಣೆಗೆ ಶೇ.7.5 ಮತ್ತು ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಗೆ ಶೇ.5 ಆಗಿದೆ. ಆರ್.ಬಿ.ಡಿ. ಪಾಮೊಲಿನ್ ತೈಲದ ಮೂಲ ಸುಂಕವನ್ನು ಇತ್ತೀಚೆಗೆ ಶೇ. 17.5 ರಿಂದ ಶೇ. 12.5ಕ್ಕೆ ಇಳಿಸಲಾಗಿದೆ. ಸಂಸ್ಕರಿಸಿದ ಸೋಯಾಬೀನ್ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಪ್ರಸ್ತುತ ಶೇ.32.5 ರಿಂದ ಶೇ.17.5 ಕ್ಕೆ ಇಳಿಸಲಾಗಿದೆ. ಕಡಿತಗೊಳಿಸುವ ಮೊದಲು, ಎಲ್ಲಾ ರೀತಿಯ ಕಚ್ಚಾ ಖಾದ್ಯ ತೈಲಗಳ ಮೇಲಿನ ಕೃಷಿ ಮೂಲಸೌಕರ್ಯ ಉಪಕರವು ಶೇ.20 ಆಗಿತ್ತು. ಕಡಿತದ ನಂತರ, ಕಚ್ಚಾ ಪಾಮ್ ಎಣ್ಣೆ ಮೇಲಿನ ಪರಿಣಾಮಕಾರಿ ಸುಂಕವು ಶೇ.8.25 ಆಗಿದ್ದರೆ, ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಸುಂಕ ತಲಾ ಶೇ.5.5 ಆಗಿರುತ್ತದೆ.

ತಾಳೆ ಎಣ್ಣೆ, ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯ ಮೇಲಿನ ಆಮದು ಸುಂಕಗಳನ್ನು ತರ್ಕಬದ್ಧಗೊಳಿಸುವುದರ ಜೊತೆಗೆ, ಎನ್.ಸಿ.ಡಿ.ಇ.ಎಕ್ಸ್.ನಲ್ಲಿ ಸಾಸಿವೆ ಎಣ್ಣೆಯ ಭವಿಷ್ಯದ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ತೈಲಗಳು ಮತ್ತು ಎಣ್ಣೆಕಾಳುಗಳ ಮೇಲೆ ದಾಸ್ತಾನು ಮಿತಿಗಳನ್ನು ವಿಧಿಸಲಾಗಿದೆ. ಅಂತಾರಾಷ್ಟ್ರೀಯ ಸರಕುಗಳ ದರಗಳು ಅಧಿಕವಾಗಿದ್ದರೂ, ರಾಜ್ಯ ಸರ್ಕಾರಗಳ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕೇಂದ್ರ ಸರ್ಕಾರದ  ಮಾಡಿದ ಮಧ್ಯಸ್ಥಿಕೆಗಳು ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಿವೆ. ಖಾದ್ಯ ತೈಲ ದರ ಒಂದು ವರ್ಷದ ಹಿಂದಿನ ಅವಧಿಗಿಂತ ಹೆಚ್ಚಾಗಿದೆ ಆದರೆ ಅಕ್ಟೋಬರ್‌ ನಿಂದ ಇಳಿಕೆಯ ಪ್ರವೃತ್ತಿ ಕಾಣುತ್ತಿದೆ. ಇದಲ್ಲದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಪರ್ಯಾಯ ಖಾದ್ಯ ತೈಲಗಳ ಉತ್ಪಾದನೆ ವಿಶೇಷವಾಗಿ ಅಕ್ಕಿ ಹೊಟ್ಟು ಎಣ್ಣೆ ಉತ್ಪಾದನೆ ಸುಧಾರಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಇಲಾಖೆಯು ತೈಲ ಉದ್ಯಮದ ಸಂಘಗಳು ಮತ್ತು ಪ್ರಮುಖ ಮಾರುಕಟ್ಟೆ ವಹಿವಾಟುದಾರರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದೆ ಮತ್ತು ಎಂ.ಆರ್.ಪಿಯನ್ನು ಕಡಿಮೆ ಮಾಡಲು ಅವರಿಗೆ ಮನವರಿಕೆ ಮಾಡಿದೆ, ಇದು ಅಂತಿಮ ಗ್ರಾಹಕರಿಗೆ ಸುಂಕ ಕಡಿತದ ಪ್ರಯೋಜನವನ್ನು ವರ್ಗಾಯಿಸುತ್ತದೆ. 167 ಬೆಲೆ ಸಂಗ್ರಹ ಕೇಂದ್ರಗಳ ಪ್ರವೃತ್ತಿಯ ಪ್ರಕಾರ, ದೇಶಾದ್ಯಂತದ ಪ್ರಮುಖ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯ ತೈಲ ಬೆಲೆಗಳು ಕೆಜಿಗೆ 5 ಮತ್ತು 20 ರ ಶ್ರೇಣಿಯಲ್ಲಿ ಸಾಕಷ್ಟು ಗಣನೀಯವಾಗಿ ಕುಸಿದಿದೆ. ಅದಾನಿ ವಿಲ್ಮಾರ್ ಮತ್ತು ರುಚಿ ಇಂಡಸ್ಟ್ರೀಸ್ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು  ಪ್ರತಿ ಲೀಟರ್ ಗೆ 15 -20 ರೂ. ಕಡಿತ ಮಾಡಿವೆ. ಖಾದ್ಯ ತೈಲಗಳ ಬೆಲೆಯನ್ನು ಕಡಿಮೆ ಮಾಡಿದ ಇತರ ತಯಾರಕರೆಂದರೆ ಹೈದ್ರಾಬಾದ್ ನ ಜೆಮಿನಿ ಎಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ, ದೆಹಲಿಯ ಮೋದಿ ನ್ಯಾಚುರಲ್ಸ್,  ಗೋಕುಲ್ ರೀ-ಫಾಯಿಲ್ಸ್ ಮತ್ತು ಸಾಲ್ವೆಂಟ್, ವಿಜಯ್ ಸಾಲ್ವೆಕ್ಸ್, ಗೋಕುಲ್ ಆಗ್ರೋ ರಿಸೋರ್ಸಸ್ ಮತ್ತು ಎನ್.ಕೆ. ಪ್ರೋಟೀನ್ ಗಳಾಗಿವೆ.

ವಿವಿಧ ತೈಲಗಳ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ತೆಗೆದುಕೊಂಡ ಇತ್ತೀಚಿನ ಕ್ರಮವೆಂದರೆ ಸೋಯಾ ಮೀಲ್ ಗೆ ಸಂಬಂಧಿಸಿದ್ದಾಗಿದೆ. ಪ್ರೋಟೀನ್‌ ನ ಪ್ರಮುಖ ಮೂಲವಾಗಿರುವ ಮತ್ತು ಜಾನುವಾರುಗಳ ಆಹಾರದಲ್ಲಿ ಸುಮಾರು ಶೇ.30ರಷ್ಟಿರುವ ಸೋಯಾ ಮೀಲ್‌ ನ ದಾಸ್ತಾನು ಮಿತಿಯನ್ನು 23ನೇ ಡಿಸೆಂಬರ್, 2021 ರಿಂದ ಜೂನ್ 2022 ರವರೆಗೆ ಅತ್ಯಾವಶ್ಯಕ ಸರಕುಗಳ ಕಾಯಿದೆ, 1955 ರ ಪರಿಶಿಷ್ಟದಲ್ಲಿ ಸೇರಿಸುವ ಮೂಲಕ ಜಾರಿಗೆ ತರಲಾಗಿದೆ. ಇದು ಬೆಲೆಗಳು ಇಳಿಯುವಂತೆ ಮಾಡಿ, ಪೂರೈಕೆಯನ್ನು ಸುಧಾರಿಸುತ್ತದೆ. ಸರ್ಕಾರವು ಡಿಸೆಂಬರ್ 2022 ರವರೆಗೆ ಒಂದು ವರ್ಷದ ಅವಧಿಗೆ ಎಲ್ಲಾ ಅಗತ್ಯ ವಸ್ತುಗಳ ಭವಿಷ್ಯದ ವ್ಯಾಪಾರವನ್ನು ಸ್ಥಗಿತಗೊಳಿಸಿದೆ.

ಸರ್ಕಾರ ಖಾದ್ಯ ತೈಲಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಕೆಲವು ದೀರ್ಘಾವಧಿ ಮತ್ತು ಮಧ್ಯಮ ಅವಧಿಯ ಯೋಜನೆಗಳನ್ನು ಸಹ ಪ್ರಾರಂಭಿಸಿದೆ. ಇತ್ತೀಚೆಗೆ, ಖಾದ್ಯ ತೈಲಗಳ ರಾಷ್ಟ್ರೀಯ ಅಭಿಯಾನ - ಆಯಿಲ್ ಪಾಮ್ (ಎನ್.ಎಂ.ಇ.ಓ.-ಓಪಿ) ಈಶಾನ್ಯ ವಲಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ವಿಶೇಷ ಗಮನವನ್ನು ಹೊಂದಿರುವ ಹೊಸ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಖಾದ್ಯ ತೈಲಗಳ ಆಮದಿನ ಮೇಲೆ ಹೆಚ್ಚಿನ ಅವಲಂಬನೆಯಿಂದಾಗಿ, ಖಾದ್ಯ ತೈಲಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡುವುದು ಮುಖ್ಯವಾಗಿತ್ತು, ಇದರಲ್ಲಿ ತೈಲ ಪಾಮ್ ನ ಪ್ರದೇಶ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಒಟ್ಟಾರೆಯಾಗಿ, ಆಮದು ಸುಂಕದಲ್ಲಿನ ಕಡಿತ ಮತ್ತು ಸಂಗ್ರಹಣೆಯನ್ನು ನಿಗ್ರಹಿಸಲು ದಾಸ್ತಾನು ಮಿತಿಗಳನ್ನು ವಿಧಿಸುವಂತಹ ಇನ್ನಿತರ ಕ್ರಮಗಳಾಗಿವೆ. ಎಲ್ಲಾ ಖಾದ್ಯ ತೈಲಗಳ ದೇಶೀಯ ಬೆಲೆಗಳನ್ನು ತಗ್ಗಿಸಲು ಇದು ಸಹಾಯ ಮಾಡಿದ್ದು, ಗ್ರಾಹಕರಿಗೆ ಅಗತ್ಯವಾದ ಪರಿಹಾರವನ್ನೂ ನೀಡಿದೆ.

***

DJN/NS



(Release ID: 1789247) Visitor Counter : 236