ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅಧ್ಯಕ್ಷತೆಯಲ್ಲಿ ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ಇಲಾಖೆಗಳ ಉನ್ನತ ಮಟ್ಟದ ಜಂಟಿ ಸಭೆ


ರಾಜ್ಯದ ನಿರ್ದಿಷ್ಟ ಸಮಸ್ಯೆಗಳು ಮತ್ತು ಅವಶ್ಯಕತೆಗಳಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಒದಗಿಸಲು ಕೇಂದ್ರ-ರಾಜ್ಯಗಳ ವಿಜ್ಞಾನ ಸಮನ್ವಯಕ್ಕೆ ಕರೆ

ಗುರುತಿಸಲಾದ ವಿಜ್ಞಾನ ಮತ್ತು ತಾಂತ್ರಿಕ ಸಮಸ್ಯೆಗಳಿಗೆ 'ಪರಿಹಾರ ಆಧಾರಿತ' ವಿಧಾನಕ್ಕಾಗಿ ಕೇಂದ್ರ-ರಾಜ್ಯ ಸಹಯೋಗಕ್ಕಾಗಿ ಮುಂದಿನ ವಾರ ರಾಜ್ಯ ಸರ್ಕಾರಗಳೊಂದಿಗೆ ಸರಣಿ ಸಭೆಗಳು ಪ್ರಾರಂಭವಾಗುತ್ತವೆ: ಡಾ ಜಿತೇಂದ್ರ ಸಿಂಗ್

ವಿವಿಧ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾಂತ್ರಿಕ ಮಧ್ಯಸ್ಥಿಕೆಗಳು ಸಹಾಯ ಮಾಡುವ ಪ್ರದೇಶಗಳನ್ನು ಗುರುತಿಸಲು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರತ್ಯೇಕವಾಗಿ ವ್ಯಾಪಕವಾದ ಚರ್ಚೆ ಕೈಗೊಳ್ಳಲಾಗುತ್ತಿದೆ.

Posted On: 10 JAN 2022 5:16PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಹಾಗೂ ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ  ಡಾ ಜಿತೇಂದ್ರ ಸಿಂಗ್ ಅವರು ಇಂದು ರಾಜ್ಯ ಅಥವಾ ಕೇಂದ್ಋಆಡಳಿತ ನಿರ್ದಿಷ್ಟ ಸಮಸ್ಯೆಗಳು ಮತ್ತು ಅವಶ್ಯಕತೆಗಳಿಗೆ ತಾಂತ್ರಿಕ ಮತ್ತು ವಿಜ್ಞಾನ ಆಧಾರಿತ ಪರಿಹಾರಗಳಿಗಾಗಿ ಕೇಂದ್ರ-ರಾಜ್ಯಗಳ ನಿಕಟ ಸಮನ್ವಯಕ್ಕೆ ಕರೆ ನೀಡಿದರು.

ನವದೆಹಲಿಯ ಪೃಥ್ವಿ ಭವನದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆದ ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ಇಲಾಖೆಗಳ ಉನ್ನತ ಮಟ್ಟದ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಸಭೆಯಲ್ಲಿ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ ವಿಜಯರಾಘವನ್, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ರವಿಚಂದ್ರನ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ್, ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ರಾಜೇಶ್ ಗೋಖಲೆ, ಕಾರ್ಯದರ್ಶಿ ಬಾಹ್ಯಾಕಾಶ ಮತ್ತು ಇಸ್ರೋ ಅಧ್ಯಕ್ಷ ಡಾ ಕೆ. ಶಿವನ್,  ಪರಮಾಣು ಶಕ್ತಿ ಕಾರ್ಯದರ್ಶಿ ಡಾ ಕೆಎನ್ ವ್ಯಾಸ್,  ಸಿಎಸ್ಐಆರ್ ಕಾರ್ಯದರ್ಶಿ ಡಾ ಶೇಖರ್ ಮಾಂಡೆ, ಸಾಮರ್ಥ್ಯ ನಿರ್ಮಾಣ ಆಯೋಗ ಕಾರ್ಯದರ್ಶಿ ಹೇಮಂಗ್ ಜಾನಿ ಮತ್ತಿತರ  ಹಿರಿಯ ಅಧಿಕಾರಿಗಳು ಪಾಲ್ಗೊಂಡರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಾಮಾನ್ಯ ಜನರು ಸುಲಭವಾಗಿ ಬದುಕಲು ವಿವಿಧ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನದ ಮಧ್ಯಸ್ಥಿಕೆಗಳು ಸಹಾಯ ಮಾಡುವ ಪ್ರದೇಶಗಳನ್ನು ಗುರುತಿಸಲು ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರತ್ಯೇಕವಾಗಿ ವ್ಯಾಪಕವಾದ ಚರ್ಚೆ ಕೈಗೊಳ್ಳಲಾಗುತ್ತಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸರ್ಕಾರಕ್ಕೆ ಇತ್ತೀಚಿನ ಹಿಮ ತೆರವು ತಂತ್ರಜ್ಞಾನದ ಮೂಲಕ ಸಹಾಯ ಮಾಡಲಾಗುವುದು. ಹಾಗೆಯೇ  ಪುದುಚೇರಿ ಮತ್ತು ತಮಿಳುನಾಡುಗಳಿಗೆ ಕಡಲ ತೀರದ ಮರುಸ್ಥಾಪನೆ ಮತ್ತು ನವೀಕರಣದಲ್ಲಿ ಸಹಾಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಗುರುತಿಸಲಾದ ವಿಜ್ಞಾನ ಮತ್ತು ತಾಂತ್ರಿಕ ಸಮಸ್ಯೆಗಳಿಗೆ 'ಪರಿಹಾರ ಆಧಾರಿತ' ವಿಧಾನಕ್ಕಾಗಿ ಮತ್ತು ರಾಜ್ಯಗಳು ಮತ್ತು ಸ್ಥಳೀಯರಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸ್‌ಟಿಐ) ಬಳಕೆಯನ್ನು ಸುಧಾರಿಸಲು ಕೇಂದ್ರ-ರಾಜ್ಯ ಸಹಯೋಗಕ್ಕಾಗಿ ಮುಂದಿನ ವಾರದಿಂದ ರಾಜ್ಯ ಸರ್ಕಾರಗಳೊಂದಿಗೆ ಸರಣಿ ಸಭೆಗಳನ್ನು ಯೋಜಿಸಲಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ರಾಜ್ಯ ಸರ್ಕಾರಗಳ ನಿರ್ದಿಷ್ಟ ಪ್ರಸ್ತಾವನೆಗಳು ಅಥವಾ ಅವಶ್ಯಕತೆಗಳಿಗಾಗಿ ಮತ್ತು ಸುಗಮ ಸಮನ್ವಯಕ್ಕಾಗಿ ನೋಡಲ್ ಅಧಿಕಾರಿಯನ್ನು ನೇಮಿಸಲು ಸಚಿವಾಲಯವು ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಶೀಘ್ರದಲ್ಲೇ ಪತ್ರ ಬರೆಯಲಿದೆ ಎಂದು ಅವರು ಹೇಳಿದರು.

ಭಾರತ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಪರಿಣಾಮಕಾರಿ ಪರಿಹಾರಗಳ ಕುರಿತು ಚರ್ಚಿಸಲು ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಳಗೊಂಡ ದುಂಡುಮೇಜಿನ ಸಭೆಗಳನ್ನು ಪೂರ್ಣಗೊಳಿಸಿದ ನಂತರ ರಾಷ್ಟ್ರೀಯ ವಿಜ್ಞಾನ ಸಮಾವೇಶವನ್ನು ನಡೆಸಲು ಯೋಜಿಸುತ್ತಿರುವುದಾಗಿ ಸಚಿವರು ಹೇಳಿದರು.
ಬಾಹ್ಯಾಕಾಶ ಮತ್ತು ಪರಮಾಣು ಇಲಾಖೆ ಸೇರಿದಂತೆ ಎಲ್ಲಾ ಆರು ಎಸ್ & ಟಿ ಇಲಾಖೆಗಳು ತಾಂತ್ರಿಕ ಬೆಂಬಲ ಮತ್ತು ಪರಿಹಾರಗಳನ್ನು ಒದಗಿಸಲು 33 ಸಚಿವಾಲಯಗಳಿಂದ 168 ಪ್ರಸ್ತಾವನೆಗಳನ್ನು ಸ್ವೀಕರಿಸಿದ ಕೇಂದ್ರದ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗಿನ ಇಂತಹ ಪ್ರಯೋಗದ ಯಶಸ್ಸಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಶಕ್ತಿ. ಕೃಷಿ, ಹೈನುಗಾರಿಕೆ, ಆಹಾರ, ಶಿಕ್ಷಣ, ಕೌಶಲ್ಯ, ರೈಲ್ವೆ, ರಸ್ತೆಗಳು, ಜಲಶಕ್ತಿ, ವಿದ್ಯುತ್ ಮತ್ತು ಕಲ್ಲಿದ್ದಲು ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳು ವಿವಿಧ ವೈಜ್ಞಾನಿಕ ಅನ್ವಯಿಕೆಗಳನ್ನು ಪ್ರಾರಂಭಿಸಿವೆ ಎಂದು ಅವರು ಹೇಳಿದರು. ಸಾಮರ್ಥ್ಯ ನಿರ್ಮಾಣ ಆಯೋಗದ ಸಹಾಯದಿಂದ, ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಸ್ಥಳ ನಿರ್ದಿಷ್ಟ ವಿಷಯವಾರು ಚರ್ಚೆಗಳನ್ನು ಕೈಗೊಳ್ಳಲು ರೂಪುರೇಷೆಯನ್ನು ಸಹ ಸಿದ್ಧಪಡಿಸಲಾಗುತ್ತಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು.
ಈ ವಿಶಿಷ್ಟ ಉಪಕ್ರಮವನ್ನು ಡಾ ಜಿತೇಂದ್ರ ಸಿಂಗ್ ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ/ಇಸ್ರೋ, ಸಿಎಸ್ಐಆರ್ ಮತ್ತು ಜೈವಿಕ ತಂತ್ರಜ್ಞಾನ ಸೇರಿದಂತೆ ಎಲ್ಲಾ ವಿಜ್ಞಾನ ಸಚಿವಾಲಯಗಳ ಪ್ರತಿನಿಧಿಗಳು ಪ್ರತ್ಯೇಕವಾಗಿ ಯಾವ ವಲಯದಲ್ಲಿ ಯಾವ ವೈಜ್ಞಾನಿಕ ಅನ್ವಯಿಕೆಗಳನ್ನು ಬಳಸಿಕೊಳ್ಳಬಹುದು ಎಂಬ ಬಗ್ಗೆ ಕೆಲಸ ಮಾಡಲು ಭಾರತ ಸರ್ಕಾರದ ವಿವಿಧ ಸಚಿವಾಲಯಗಳೊಂದಿಗೆ ವ್ಯಾಪಕವಾದ ಪರ್ಯಾಲೋಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ದಿಷ್ಟ ಸಚಿವಾಲಯ ಆಧಾರಿತ ಅಥವಾ ನಿರ್ದಿಷ್ಟ ಇಲಾಖೆ ಆಧಾರಿತ ಯೋಜನೆಗಳ ಬದಲಿಗೆ ಸಮಗ್ರ ಥೀಮ್ ಆಧಾರಿತ ಯೋಜನೆಗಳ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು.
ಆರು ವರ್ಷಗಳ ಹಿಂದೆ, ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಯ ಮೇಲೆ, ದೆಹಲಿಯಲ್ಲಿ ವ್ಯಾಪಕವಾದ ಚರ್ಚೆ ನಡೆಸಲಾಗಿದ್ದನ್ನು ಇಲ್ಲಿ ಉಲ್ಲೇಖಿಸಬೇಕಾದ ಸಂಗತಿಯಾಗಿದೆ. ಅಲ್ಲಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಪ್ರತಿನಿಧಿಗಳು ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿವಿಧ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಪೂರಕವಾಗಿ, ಯೋಜನೆಗಳ ಸುಧಾರಣೆ ಮತ್ತು ಅವುಗಳನ್ನು ತ್ವರಿತಗೊಳಿಸಲು ಬಾಹ್ಯಾಕಾಶ ತಂತ್ರಜ್ಞಾನವನ್ನು ಆಧುನಿಕ ಸಾಧನವಾಗಿ ಎಷ್ಟು ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಇಸ್ರೋ ಮತ್ತು ಬಾಹ್ಯಾಕಾಶ ಇಲಾಖೆಯ ವಿಜ್ಞಾನಿಗಳೊಂದಿಗೆ ತೀವ್ರ ಸಂವಾದ ನಡೆಸಿದರು. 
ಸಿಎಸ್‌ಐಆರ್‌ನ ಪರಿಹಾರ ವಿಧಾನದಲ್ಲಿ ಉದ್ಯಮದ ವ್ಯಾಪಕವಾದ ಭಾಗವಹಿಸುವಿಕೆ ಇರಬೇಕು ಮತ್ತು ಡಿಬಿಟಿ, ಡಿಎಸ್‌ಟಿ, ನೀತಿ ಆಯೋಗ ಮತ್ತು ಇತರ ಇಲಾಖೆಗಳು, ಸ್ಟಾರ್ಟ್-ಅಪ್‌ಗಳು ಮತ್ತು ಬಿ ಐ ಆರ್ ಎ ಸಿ, ಎಐಎಂ, ಎನ್ ಆರ್ ಡಿ ಸಿ ಮತ್ತಿತರ ವಿಜ್ಞಾನ ನಿರ್ವಹಣಾ ಸಂಸ್ಥೆಗಳ ಅಸ್ತಿತ್ವದಲ್ಲಿರುವ ಇನ್‌ಕ್ಯುಬೇಟರ್‌ಗಳ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ನಾವು ಉದ್ಯಮದ ಎಲ್ಲರನ್ನೂ ಒಟ್ಟುಗೂಡಿಸುವವರೆಗೆ ಮತ್ತು ಪ್ರಮುಖ ಸಿಬ್ಬಂದಿ ಮತ್ತು ಪ್ರಮುಖ ಏಜೆನ್ಸಿಗಳನ್ನು ಗುರುತಿಸದ ಹೊರತು, ಭಾರತದ ವಿಜ್ಞಾನ ಮತ್ತು ತಾಂತ್ರಿಕ ಸಮಸ್ಯೆಗಳಿಗೆ ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಸಚಿವರು ಹೇಳಿದರು.

***



(Release ID: 1788992) Visitor Counter : 206