ಇಂಧನ ಸಚಿವಾಲಯ

ಮಹತ್ವಾಕಾಂಕ್ಷಿ ʻಗ್ರಾಮ ಉಜಾಲಾʼ ಯೋಜನೆ ಅಡಿಯಲ್ಲಿ 50 ಲಕ್ಷ ಎಲ್‌ಇಡಿ ಬಲ್ಬ್ ವಿತರಣಾ ಮೈಲುಗಲ್ಲನ್ನು ಸಾಧಿಸಿದ ʻಸಿಇಎಸ್ಎಲ್ʼ


ʻಪ್ರಾಜೆಕ್ಟ್ ಕ್ರೋರ್‌ʼ ಅಡಿಯಲ್ಲಿ ಮಾರ್ಚ್ 31, 2022 ರವೇಳೆಗೆ 2 ದಶಲಕ್ಷ ಕುಟುಂಬಗಳಿಗೆ 10 ದಶಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ

Posted On: 28 DEC 2021 12:20PM by PIB Bengaluru

ʻಇಂಧನ ದಕ್ಷತೆ ಸೇವಾ ನಿಯಮಿತʼ (ಇಇಎಸ್‌ಎಲ್‌) ಸಂಸ್ಥೆಯ ಸಂಪೂರ್ಣ ಒಡೆತನದ ಅಂಗಸಂಸ್ಥೆ- ʻಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್‌ ಲಿಮಿಟೆಡ್‌ʼ(ಇಇಎಸ್‌ಎಲ್) ತನ್ನ ʻಗ್ರಾಮ್ ಉಜಾಲಾ ಕಾರ್ಯಕ್ರಮʼದ ಅಂಗವಾಗಿ, ʻಪ್ರಾಜೆಕ್ಟ್‌ ಕ್ರೋರ್‌ʼ(ಕೋಟಿ ಯೋಜನೆ) ಅಡಿಯಲ್ಲಿ 50 ಲಕ್ಷ ಎಲ್‌ಇಡಿ ಬಲ್ಬ್‌ಗಳನ್ನು ವಿತರಿಸುವ ಮೂಲಕ ಗಮನಾರ್ಹ ಮೈಲುಗಲ್ಲನ್ನು ಸಾಧಿಸಿದೆ.

ಬಿಹಾರ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದ ಗ್ರಾಮೀಣ ಕುಟುಂಬಗಳಲ್ಲಿ ಗ್ರಾಮ ಉಜಾಲಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಕೇಂದ್ರ ವಿದ್ಯುತ್ ಮತ್ತು ಹೊಸ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಅವರ ಸಮರ್ಥ ನಾಯಕತ್ವದಲ್ಲಿ ʻಸಿಇಎಸ್ಎಲ್ʼ ಈ ವರ್ಷದ ಮಾರ್ಚ್‌ನಲ್ಲಿ ಹಳ್ಳಿಗಳನ್ನು ಬೆಳಗುವ ತನ್ನ  ಪ್ರಯಾಣವನ್ನು ಪ್ರಾರಂಭಿಸಿತು. ಈ ತಿಂಗಳಲ್ಲಿ ಆಚರಿಸಲಾದ ʻರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ-2021ʼದಂದು, ಒಂದೇ ದಿನದಲ್ಲಿ 10 ಲಕ್ಷ ಬಲ್ಬ್‌ಗಳನ್ನು ವಿತರಿಸುವ ಸಾಧನೆಯನ್ನು ʻಸಿಇಎಸ್ಎಲ್ʼ  ಮಾಡಿದೆ.

ʻಸಿಇಎಸ್ಎಲ್‌ʼ, ಉತ್ತಮ ಗುಣಮಟ್ಟದ 7-ವ್ಯಾಟ್ ಮತ್ತು 12-ವ್ಯಾಟ್ ಎಲ್ಇಡಿ ಬಲ್ಬ್‌ಗಳನ್ನು ಒದಗಿಸುತ್ತಿದೆ. ಬೆಳಗುವ ಸ್ಥಿತಿಯಲ್ಲಿರುವ ʻಇನ್‌ಕ್ಯಾಂಡೆಸೆಂಟ್ʼ(ಹೆಚ್ಚು ವಿದ್ಯತ್ ಬಳಸುವ ಟಂಗ್‌ಸ್ಟನ್‌ ಆಧರಿತ ಬಲ್ಬ್‌) ಬಲ್ಬ್‌ಗಳನ್ನು ಕೊಟ್ಟು, ಪ್ರತಿ ಬಲ್ಬ್‌ಗೆ 10 ರೂ. ವೆಚ್ಚದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಪಡೆಯಬಹುದಾಗಿದೆ. ಈ ಎಲ್‌ಇಡಿ ಬಲ್ಬ್‌ಗಳು 3 ವರ್ಷಗಳ ಖಾತರಿಯನ್ನು ಹೊಂದಿವೆ. ಪ್ರತಿಯೊಂದು ಮನೆಯು ಗರಿಷ್ಠ 5 ಬಲ್ಬ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಈ ವಿತರಣೆಯಿಂದಾಗಿ ಮೇಲೆ ಹೇಳಿದ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ವರ್ಷಕ್ಕೆ 250 ಕೋಟಿ ವೆಚ್ಚ ಉಳಿತಾಯವಾಗಲಿದೆ. ಜೊತೆಗೆ, ವರ್ಷಕ್ಕೆ 71,99,68,373.28 ಯೂನಿಟ್ ಇಂಧನ ಉಳಿತಾಯಕ್ಕೂ ಈ ಅಭಿಯಾನ ಕಾರಣವಾಗಿದೆ. ಈ ಕಾರ್ಯಕ್ರಮವು ಮಾರ್ಚ್‌ 31, 2022ರವರೆಗೆ ಚಾಲನೆಯಲ್ಲಿರಲಿದೆ.

ಈ ಸಾಧನೆಯ ಬಗ್ಗೆ ಮಾತನಾಡಿದ ʻಸಿಇಎಸ್‌ಎಲ್‌ʼನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಶ್ರೀಮತಿ ಮಹುವಾ ಆಚಾರ್ಯ ಅವರು, ಗ್ರಾಮೀಣ ಪರಿಸರ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯನ್ನು ಖಾತರಿಪಡಿಸುವುದು ಈ ಕಾರ್ಯಕ್ರಮದ ಆಶಯ ಹೇಳಿದರು.  ಶ್ರೀ ಆರ್.ಕೆ. ಸಿಂಗ್ ಅವರ ನಾಯಕತ್ವದಲ್ಲಿ, ಐದು ರಾಜ್ಯಗಳ ಗ್ರಾಮೀಣ ಭಾಗಗಳಲ್ಲಿ ಉತ್ತಮ ಪ್ರಕಾಶವನ್ನು ಒದಗಿಸುವ ನಿಟ್ಟಿನಲ್ಲಿ ʻಸಿಇಎಸ್ಎಲ್ʼ ನಿರಂತರವಾಗಿ ಕೆಲಸ ಮಾಡುತ್ತಿದೆ. ಕಾರ್ಬನ್ ಕ್ರೆಡಿಟ್‌ಗಳ ಹಣಕಾಸು ಮಾದರಿಯಲ್ಲಿ ಸಂಸ್ಥೆಯು ಕೆಲಸ ಮಾಡಲಿದ್ದು, ʻಪ್ರಾಜೆಕ್ಟ್ ಕ್ರೋರ್‌ʼ ಪೂರ್ಣಗೊಳಿಸಿದ ನಂತರ ಇತರ ರಾಜ್ಯಗಳ ಗ್ರಾಮೀಣ ಭಾಗಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುತ್ತೇವೆ ಎಂದರು.

ʻಶೈನ್ʼ(SHINE) ಕಾರ್ಯಕ್ರಮದ ಅಡಿಯಲ್ಲಿ ಈ ಸಂಪೂರ್ಣ ವಿತರಣಾ ಪ್ರಕ್ರಿಯೆಯಲ್ಲಿ ʻಸಿಇಎಸ್ಎಲ್ʼಗೆ ʻಸಿ-ಕ್ವೆಸ್ಟ್ ಕ್ಯಾಪಿಟಲ್ʼ ಸಂಸ್ಥೆಯು ಬೆಂಬಲ ನೀಡಿದೆ.

ʻಸಿಇಎಸ್‌ಎಲ್‌ʼ ಜೊತೆ ಈ ಪಾಲುದಾರಿಕೆಯನ್ನು ಶ್ಲಾಘಿಸಿದ ʻಸಿ-ಕ್ವೆಸ್ಟ್ ಕ್ಯಾಪಿಟಲ್ʼನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕೆನ್ ನ್ಯೂಕೊಂಬೆ ಅವರು, ಗ್ರಾಮೀಣ ಭಾರತದಲ್ಲಿ ಇಂಧನ ದಕ್ಷತೆಯನ್ನು ಸಾಧಿಸುವ ಸಾಧನವಾಗಿ ಕಾರ್ಬನ್‌ ಫೈನಾನ್ಸ್‌ ಬಳಕೆಯು ಇಂಗಾಲದ ಮಾರುಕಟ್ಟೆಗಳ ಪ್ರಬಲ ಬಳಕೆಗೆ ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.  ಇದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಮಾಡುವುದು ಅದ್ಭುತವಾಗಿದೆ. ಇಂದಿನ 50 ಲಕ್ಷ ಮೈಲುಗಲ್ಲು ಸಾಧನೆಯು, ಭಾರತ ಸರಕಾರದ ಈ ಪ್ರಶಂಸನೀಯ ಕಾರ್ಯಕ್ರಮದಲ್ಲಿ ಒಂದು ಪ್ರಮುಖ ಹೆಜ್ಜೆಗುರುತಾಗಿದೆ. ಇದಕ್ಕೆ ಹಣಕಾಸು ಸಚಿವಾಲಯ ಪಾಲುದಾರರಾಗಿರುವುಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದರು.

ಸಿಇಎಸ್ಎಲ್ ಬಗ್ಗೆ:

ʻಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ʼ(ಸಿಇಎಸ್ಎಲ್) ಎಂಬುದು ಸರಕಾರಿ ಸ್ವಾಮ್ಯದ ʻಇಂಧನ ದಕ್ಷತೆ ಸೇವೆಗಳ ನಿಯಮಿತʼ ಸಂಸ್ಥೆಯ ಅಂಗಸಂಸ್ಥೆಯಾಗಿದೆ.  ಭಾರತ ಸರಕಾರದ ವಿದ್ಯುತ್ ಸಚಿವಾಲಯದ ಅಡಿಯಲ್ಲಿರುವ ಸಾರ್ವಜನಿಕ ವಲಯದ ಕಂಪನಿಗಳ ಜಂಟಿ ಉದ್ಯಮವಾಗಿದೆ. ಶುದ್ಧ, ಕೈಗೆಟುಕುವ ದರದ ಮತ್ತು ವಿಶ್ವಾಸಾರ್ಹ ವಿದ್ಯುಚ್ಛಕ್ತಿಯನ್ನು ತಲುಪಿಸುವತ್ತ ʻಸಿಇಎಸ್ಎಲ್ʼ ಗಮನ ಹರಿಸಿದೆ.

ನವೀಕರಿಸಬಹುದಾದ ಇಂಧನ, ವಿದ್ಯುತ್ ಚಾಲಿತ ವಾಹನ ಮತ್ತು ಹವಾಮಾನ ಬದಲಾವಣೆಯ  - ಇವುಗಳ ಸಂಯೋಜನೆ ಮೂಲಕ ದೊರೆಯಬಹುದಾದ ಇಂಧನ ಪರಿಹಾರಗತ್ತ ʻಕನ್ವರ್ಜೆನ್ಸ್‌ʼ ಗಮನ ಗಮನ ಕೇಂದ್ರೀಕರಿಸುತ್ತದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳು ಮತ್ತು ಅದಕ್ಕೆ ಸಂಬಂಧಿಸಿದ ಮೂಲಸೌಕರ್ಯ ವೃದ್ಧಿ ಹಾಗೂ ವಿನ್ಯಾಸ ವ್ಯವಹಾರ ಮಾದರಿಗಳನ್ನು ಸಕ್ರಿಯಗೊಳಿಸುವ ಕೆಲಸದಲ್ಲಿ ʻಸಿಇಎಸ್ಎಲ್ʼ ಕಾರ್ಯಪ್ರವೃತ್ತವಾಗಿದೆ. ಈ ಪರಿಹಾರಗಳನ್ನು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯೀಕರಣಗೊಳಿಸುವ ನಿಟ್ಟಿನಲ್ಲಿ ವಿಶಿಷ್ಟ ವ್ಯಾಪಾರ ಮಾದರಿಗಳನ್ನು ಬಳಸುವ ಮೂಲಕ ರಿಯಾಯಿತಿ ಮತ್ತು ವಾಣಿಜ್ಯ ಬಂಡವಾಳ, ಇಂಗಾಲದ ಹಣಕಾಸು ಮತ್ತು ಅನುದಾನಗಳ ಮಿಶ್ರಣವನ್ನು ಕನ್ವರ್ಜೆನ್ಸ್ ಸೂಕ್ತವಾಗಿ ಬಳಸಿಕೊಳ್ಳುತ್ತಿದೆ.

***



(Release ID: 1785801) Visitor Counter : 254