ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿಮಾಚಲ ಪ್ರದೇಶದ ಎರಡನೇ ಜಾಗತಿಕ ಹೂಡಿಕೆದಾರರ ಸಮಾವೇಶದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಧಾನಿ

ಹಿಮಾಚಲ ಪ್ರದೇಶದ ಮಂಡಿಯಲ್ಲಿ 11,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ

"ಇಂದು ಆರಂಭಿಸಲಾದ ಜಲ ವಿದ್ಯುತ್ ಯೋಜನೆಗಳು ಪರಿಸರ ಸ್ನೇಹಿ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ"

"2030ರ ವೇಳೆಗೆ ಭಾರತವು ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 40 ಪ್ರತಿಶತವನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಪೂರೈಸುವ ಗುರಿಯನ್ನು ಹೊಂದಿತ್ತು. ಈ ವರ್ಷ ನವೆಂಬರ್‌ನಲ್ಲಿಯೇ ಭಾರತ ಈ ಗುರಿಯನ್ನು ಸಾಧಿಸಿದೆ"

"ಪ್ಲಾಸ್ಟಿಕ್ ಎಲ್ಲೆಡೆ ವ್ಯಾಪಿಸುತ್ತಿದೆ, ಪ್ಲಾಸ್ಟಿಕ್ ನದಿಗಳಿಗೆ ಸೇರುತ್ತಿದೆ, ಇದರಿಂದ ಹಿಮಾಚಲಕ್ಕೆ ಉಂಟುಮಾಡುತ್ತಿರುವ ಹಾನಿಯನ್ನು ತಡೆಯಲು ನಾವು ಒಟ್ಟಾಗಿ ಪ್ರಯತ್ನಗಳನ್ನು ಮಾಡಬೇಕಾಗಿದೆ"

"ಭಾರತವನ್ನು ಇಂದು ವಿಶ್ವದ ಔಷಧಾಲಯ ಎಂದು ಕರೆಯುವುದರ ಹಿಂದಿನ ಶಕ್ತಿಯೇ ಹಿಮಾಚಲ"

"ಕೊರೊನಾ ಜಾಗತಿಕ ಸಾಂಕ್ರಾಮಿಕದ ಸಮಯದಲ್ಲಿ ಹಿಮಾಚಲ ಪ್ರದೇಶವು ಇತರ ರಾಜ್ಯಗಳಿಗೆ ಮಾತ್ರವಲ್ಲದೆ ಇತರ ದೇಶಗಳಿಗೂ ಸಹಾಯ ಮಾಡಿದೆ"

"ವಿಳಂಬ ಸಿದ್ಧಾಂತಗಳಿಂದಾಗಿ ಹಿಮಾಚಲದ ಜನರು ದಶಕಗಳಕಾಲ ಕಾಯುವಂತಾಯಿತು. ಈ ಕಾರಣದಿಂದಾಗಿ, ಇಲ್ಲಿನ ಯೋಜನೆಗಳಲ್ಲಿ ಅನೇಕ ವರ್ಷಗಳ ವಿಳಂಬವಾಯಿತು"

15-18 ವಯಸ್ಸಿನ ಮಕ್ಕಳಿಗೆ ಲಸಿಕೆ ಅಭಿಯಾನ, ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ಆರೋಗ್ಯ ಸಮಸ್ಯೆ ಹೊಂದಿರುವ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕೆ ಡೋಸ್ ನೀಡಿಕೆ ಬಗ್ಗೆ ಮಾಹಿತಿ ನೀಡಿದರು

"ಹೆಣ್ಣುಮಕ್ಕಳಿಗೆ ಮದುವೆಯ ವಯಸ್ಸನ್ನು 21 ವರ್ಷಗಳಿಗೆ ಏರಿಸುವುದರಿಂದ ಅವರಿಗೆ ಅಧ್ಯಯನ ಮುಂದುವರಿಸಲು ಪೂರ್ಣ ಸಮಯವನ್ನು ನೀಡುತ್ತದೆ ಮತ್ತು ಇದರಿಂದ ಅವರಿಗೆ ವೃತ್ತಿಜೀವನಕ್ಕೂ ಅನುಕೂಲವಾಗುತ್ತದೆ"

"ಕಳೆದ ಏಳು ವರ್ಷಗಳಲ್ಲಿ ದೇಶದ ಭದ್ರತೆಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಮಾಡಿದ ಕೆಲಸ; ಸೈನಿಕರು, ಮಾಜಿ ಸೈನಿಕರಿಗಾಗಿ ಕೈಗೊಂಡ ನಿರ್ಧಾರಗಳು ಹಿಮಾಚಲದ ಜನರಿಗೂ ಅಪಾರ ಪ್ರಯೋಜನವನ್ನು ನೀಡಿವೆ"

Posted On: 27 DEC 2021 2:39PM by PIB Bengaluru

ಹಿಮಾಚಲ ಪ್ರದೇಶದ ಮಂಡಿಯಲ್ಲಿ ಇಂದು ನಡೆದ ಹಿಮಾಚಲ ಪ್ರದೇಶ ಎರಡನೇ ಜಾಗತಿಕ ಹೂಡಿಕೆದಾರರ ಸಮಾವೇಶದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಹಿಸಿದ್ದರು. ಸಭೆಯು ಸುಮಾರು 28,000 ಕೋಟಿ ರೂ.ಗಳ ಯೋಜನೆಗಳ ಮೂಲಕ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಪ್ರಧಾನಿ ಅವರು 11,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಜಲವಿದ್ಯುತ್ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಅಂತಹ ಕೆಲವು ಜಲವಿದ್ಯುತ್ ಯೋಜನೆಗಳೆಂದರೆ ರೇಣುಕಾಜಿ ಅಣೆಕಟ್ಟು ಯೋಜನೆ, ಲುಹ್ರಿ 1ನೇ ಹಂತದ ಜಲ ವಿದ್ಯುತ್ ಯೋಜನೆ ಮತ್ತು ಧೌಲಸಿದ್ ಜಲ ವಿದ್ಯುತ್ ಯೋಜನೆ. ಸಾವ್ರಾ-ಕುಡ್ಡು ಜಲ ವಿದ್ಯುತ್ ಯೋಜನೆಯನ್ನು ಅವರು ಉದ್ಘಾಟಿಸಿದರು. ಹಿಮಾಚಲ ಪ್ರದೇಶದ ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ ಅರ್ಲೇಕರ್ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಮ್ ಠಾಕೂರ್, ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಹಿಮಾಚಲ ಪ್ರದೇಶದೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧವನ್ನು ನೆನಪಿಸಿಕೊಂಡರು. ರಾಜ್ಯ ಮತ್ತು ಇಲ್ಲಿನ ಪರ್ವತಗಳು ತಮ್ಮ ಜೀವನದಲ್ಲಿ ದೊಡ್ಡ ಪಾತ್ರ ವಹಿಸಿವೆ ಎಂದು ಹೇಳಿದರು. ರಾಜ್ಯದ ಅವಳಿ ಎಂಜಿನ್ ಸರಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಜನರನ್ನು ಪ್ರಧಾನಿ ಅಭಿನಂದಿಸಿದರು. ನಾಲ್ಕು ವರ್ಷಗಳಲ್ಲಿ, ರಾಜ್ಯವು ಸಾಂಕ್ರಾಮಿಕ ಸವಾಲನ್ನು ಎದುರಿಸಿದೆ. ಇದರ ನಡುವೆಯೂ ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪಿದೆ ಎಂದು ಪ್ರಧಾನಿ ಹೇಳಿದರು. "ಜೈ ರಾಮ್ ಠಾಕೂರ್‌ ಮತ್ತು ಅವರ ನಿಷ್ಠಾವಂತ ತಂಡವು ಹಿಮಾಚಲ ಪ್ರದೇಶದ ಜನರ ಕನಸುಗಳನ್ನು ನನಸು ಮಾಡಲು ಯಾವೊಂದು ಅವಕಾಶವನ್ನು ಬಿಟ್ಟಿಲ್ಲ", ಎಂದು ಪ್ರಧಾನಿ ಒತ್ತಿ ಹೇಳಿದರು.

ದೇಶದ ಜನರ 'ಸುಗಮ ಜೀವನ'ವು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದ್ದು, ನಿಟ್ಟಿನಲ್ಲಿ ವಿದ್ಯುತ್ ದೊಡ್ಡ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇಂದು ಆರಂಭಿಸಲಾದ ಜಲ ವಿದ್ಯುತ್ ಯೋಜನೆಗಳು ಪರಿಸರ ಸ್ನೇಹಿ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. "ಗಿರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಶ್ರೀ ರೇಣುಕಾಜಿ ಅಣೆಕಟ್ಟು ಯೋಜನೆಯು ಪೂರ್ಣಗೊಂಡಾಗ, ವಿಶಾಲ ಪ್ರದೇಶಕ್ಕೆ ಅದರಿಂದ ನೇರವಾಗಿ ಪ್ರಯೋಜನವಾಗಲಿದೆ. ಯೋಜನೆಯಿಂದ ಯಾವುದೇ ಆದಾಯ ಬಂದರೂ, ಅದರ ಹೆಚ್ಚಿನ ಭಾಗವನ್ನು ಇಲ್ಲಿನ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು", ಎಂದು ಪ್ರಧಾನಿ ಹೇಳಿದರು.

ಹೊಸ ಭಾರತದ ಬದಲಾದ ಕಾರ್ಯಶೈಲಿಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಭಾರತವು ತನ್ನ ಪರಿಸರ ಸಂಬಂಧಿತ ಗುರಿಗಳನ್ನು ಪೂರೈಸುತ್ತಿರುವ ವೇಗದ ಬಗ್ಗೆ ಅವರು ಮಾತನಾಡಿದರು. "2030 ವೇಳೆಗೆ ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ 40 ಪ್ರತಿಶತವನ್ನು ಪೂರೈಸುವ ಗುರಿಯನ್ನು 2016ರಲ್ಲಿ ಭಾರತ ಹೊಂದಿತ್ತು. ಆದರೆ ವರ್ಷ ನವೆಂಬರ್‌ನಲ್ಲಿಯೇ ಭಾರತ ಗುರಿಯನ್ನು ಸಾಧಿಸಿದೆ. ಇದು ಪ್ರತಿಯೊಬ್ಬ ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರ,ʼʼಎಂದರು. "ನಮ್ಮ ದೇಶವು ಒಂದು ಕಡೆ ಪರಿಸರವನ್ನು ಉಳಿಸುತ್ತಲೇ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದೆ. ಇದಕ್ಕಾಗಿ ಇಡೀ ಜಗತ್ತು ಭಾರತವನ್ನು ಶ್ಲಾಘಿಸುತ್ತಿದೆ" ಎಂದು ಪ್ರಧಾನಿ ಹೇಳಿದರು. ಸೌರ ಶಕ್ತಿಯಿಂದ ಜಲ ವಿದ್ಯುತ್ ವರೆಗೆ, ಪವನ ಶಕ್ತಿಯಿಂದ ಹಸಿರು ಹೈಡ್ರೋಜನ್‌ವರೆಗೆ, ನವೀಕರಿಸಬಹುದಾದ ಇಂಧನದ ಪ್ರತಿಯೊಂದು ಸಂಪನ್ಮೂಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ದೇಶ ನಿರಂತರವಾಗಿ ಕೆಲಸ ಮಾಡುತ್ತಿದೆ", ಎಂದು ಪ್ರಧಾನಿ ಮಾಹಿತಿ ನೀಡಿದರು.

ಪ್ರಧಾನಮಂತ್ರಿಯವರು ಏಕ ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆಯ ವಿಷಯವನ್ನೂ ಪ್ರಸ್ತಾಪಿಸಿದರು. ಪ್ಲಾಸ್ಟಿಕ್‌ನಿಂದ ಪರ್ವತಗಳಿಗೆ ಉಂಟಾಗುವ ಹಾನಿಯ ಬಗ್ಗೆ ಸರಕಾರ ಜಾಗರೂಕವಾಗಿದೆ ಎಂದು ಅವರು ಹೇಳಿದರು. ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನದ ಜೊತೆಗೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ವಿಚಾರದಲ್ಲೂ ಸರಕಾರವು ಕೆಲಸ ಮಾಡುತ್ತಿದೆ ಎಂದರು. ಜನರ ನಡವಳಿಕೆಯಲ್ಲಿ ಬದಲಾವಣೆಯ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಮೋದಿ ಅವರು, "ಹಿಮಾಚಲವನ್ನು ಸ್ವಚ್ಛವಾಗಿರಿಸುವಲ್ಲಿ, ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯಗಳಿಂದ  ಮುಕ್ತವಾಗಿರಿಸುವಲ್ಲಿ ಪ್ರವಾಸಿಗರಿಗೂ ದೊಡ್ಡ ಜವಾಬ್ದಾರಿ ಇದೆ. ಪ್ಲಾಸ್ಟಿಕ್ ಎಲ್ಲೆಡೆ ಹರಡಿದೆ, ನದಿಗಳಿಗೂ ಪ್ಲಾಸ್ಟಿಕ್ ಸೇರುತ್ತಿದೆ, ಇದರಿಂದ ಹಿಮಾಚಲಕ್ಕೆ ಉಂಟಾಗುತ್ತಿರುವ ಹಾನಿಯನ್ನು ತಡೆಯಲು ನಾವು ಒಟ್ಟಾಗಿ ಪ್ರಯತ್ನಗಳನ್ನು ಮಾಡಬೇಕಾಗಿದೆ," ಎಂದು ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಔಷಧ ಕ್ಷೇತ್ರದ ಬೆಳವಣಿಗೆಯನ್ನು ಪ್ರಧಾನಿ ಶ್ಲಾಘಿಸಿದರು. "ಭಾರತವನ್ನು ಇಂದು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತದೆ. ಹೆಗ್ಗಳಿಕೆಯ ಹಿಂದಿನ ಶಕ್ತಿಯೇ ಹಿಮಾಚಲ. ಕೊರೊನಾ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಹಿಮಾಚಲ ಪ್ರದೇಶವು ಇತರ ರಾಜ್ಯಗಳಿಗೆ ಮಾತ್ರವಲ್ಲದೆ ಇತರ ದೇಶಗಳಿಗೂ ಸಹಾಯ ಮಾಡಿದೆ," ಎಂದು ಶ್ಲಾಘಿಸಿದರು.

ರಾಜ್ಯದ ಅದ್ಭುತ ಕಾರ್ಯಕ್ಷಮತೆಯನ್ನು ಉಲ್ಲೇಖಿಸಿದ ಪ್ರಧಾನಿ, "ಹಿಮಾಚಲವು ತನ್ನ ಇಡೀ ವಯಸ್ಕ ಜನಸಂಖ್ಯೆಗೆ ಕೋವಿಡ್‌ ಲಸಿಕೆಯನ್ನು ಒದಗಿಸುವಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದೆ. ಇಲ್ಲಿನ ಸರಕಾರದಲ್ಲಿರುವವರು ರಾಜಕೀಯ ಸ್ವಾರ್ಥದಲ್ಲಿ ಮುಳುಗಿಲ್ಲ. ಹಿಮಾಚಲದ ಪ್ರತಿಯೊಬ್ಬ ನಾಗರಿಕರೂ ಲಸಿಕೆಯನ್ನು ಪಡೆಯುವಂತೆ ಮಾಡುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಗಮನವನ್ನು ಮೀಸಲಿಟ್ಟಿದ್ದಾರೆ." ಎಂದರು.

ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಬದಲಾಯಿಸುವ ಸರಕಾರದ ಇತ್ತೀಚಿನ ನಿರ್ಧಾರವನ್ನು ಪ್ರಧಾನಿ ಪುನರುಚ್ಚರಿಸಿದರು. "ಹೆಣ್ಣುಮಕ್ಕಳ ಮದುವೆಯ ವಯಸ್ಸು ಸಹ ಗಂಡು ಮಕ್ಕಳನ್ನು ಮದುವೆಯಾಗಲು ಅನುಮತಿಸುವ ವಯಸ್ಸಿನಷ್ಟೇ ಇರಬೇಕು ಎಂದು ನಾವು ನಿರ್ಧರಿಸಿದ್ದೇವೆ. ಹೆಣ್ಣುಮಕ್ಕಳಿಗೆ ವಿವಾಹ ವಯಸ್ಸನ್ನು 21 ವರ್ಷಗಳಿಗೆ ಏರಿಸುವುದರಿಂದ ಅವರಿಗೆ ಶಿಕ್ಷಣ ಅಥವಾ ಅಧ್ಯಯನವನ್ನು ಪೂರ್ಣಗೊಳಿಸಲು ಸಮಾಯವಕಾಶ ದೊರೆಯುತ್ತದೆ ಮತ್ತು ಇದರಿಂದ ಅವರ ವೃತ್ತಿಜೀವನಕ್ಕೂ ಸಹಾಯಕವಾಗುತ್ತದೆ,ʼʼ ಎಂದು ಪ್ರಧಾನಿ ಹೇಳಿದರು.

ಲಸಿಕೆ ಅಭಿಯಾನಕ್ಕೆ ಹೊಸ ವರ್ಗದ ಸೇರ್ಪಡೆ ಕುರಿತಾಗಿ ಇತ್ತೀಚಿನ ಘೋಷಣೆಗಳ ಬಗ್ಗೆಯೂ ಪ್ರಧಾನಿ ಮಾತನಾಡಿದರು. ಪ್ರತಿಯೊಂದು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಅತ್ಯಂತ ಸೂಕ್ಷ್ಮತೆ ಮತ್ತು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಈಗ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೂ ಜನವರಿ 3 ರಿಂದ ಲಸಿಕೆ ಹಾಕಿಸಲಾಗುವುದು ಎಂದು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ನಮ್ಮ ಆರೋಗ್ಯ ವಲಯದ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ದೇಶದ ಶಕ್ತಿಯಾಗಿ ಉಳಿದಿದ್ದಾರೆ ಎಂದು ಪ್ರಧಾನಿ ಹೇಳಿದರು. ಅವರಿಗೆ ಮುನ್ನೆಚ್ಚರಿಕೆ ಡೋಸ್ ನೀಡುವ ಕೆಲಸವೂ ಜನವರಿ 10ರಿಂದ ಪ್ರಾರಂಭವಾಗಲಿದೆ. ಈಗಾಗಲೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ವೈದ್ಯರ ಸಲಹೆಯ ಮೇರೆಗೆ ಮುನ್ನೆಚ್ಚರಿಕೆ ಡೋಸ್‌ ಆಯ್ಕೆಯನ್ನು ನೀಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್‌ʼ ಮಂತ್ರದೊಂದಿಗೆ ಕೆಲಸ ಮಾಡಲು ಸರಕಾರ ಬದ್ಧವಾಗಿದೆ ಎಂದು ಪ್ರಧಾನಿ ಉಲ್ಲೇಖಿಸಿದರು.  "ಪ್ರತಿಯೊಂದು ದೇಶವೂ ವಿಭಿನ್ನ ಸಿದ್ಧಾಂತಗಳನ್ನು ಹೊಂದಿದೆ, ಆದರೆ ಇಂದು ನಮ್ಮ ದೇಶದ ಜನರು ಸ್ಪಷ್ಟವಾಗಿ ಎರಡು ಸಿದ್ಧಾಂತಗಳನ್ನು ನೋಡುತ್ತಿದ್ದಾರೆ. ಒಂದು ಸಿದ್ಧಾಂತವು ವಿಳಂಬದ ಸಿದ್ಧಾಂತವಾದರೆ ಮತ್ತೊಂದು ಅಭಿವೃದ್ಧಿಯ ಸಿದ್ಧಾಂತ. ವಿಳಂಬದ ಸಿದ್ಧಾಂತ ಹೊಂದಿರುವವರು ಗುಡ್ಡಗಾಡು ಜನರ ಬಗ್ಗೆ ಎಂದಿಗೂ ಕಾಳಜಿ ವಹಿಸಲಿಲ್ಲ", ಎಂದು ಅವರು ಟೀಕಿಸಿದರು. ವಿಳಂಬ ಸಿದ್ಧಾಂತಗಳು ಹಿಮಾಚಲದ ಜನರನ್ನು ದಶಕಗಳ ಕಾಲ ಕಾಯುವಂತೆ ಮಾಡಿವೆ. ಕಾರಣದಿಂದಾಗಿಯೇ ಅಟಲ್ ಸುರಂಗದ ಕಾಮಗಾರಿಯಲ್ಲಿ ಹಲವು ವರ್ಷಗಳ ವಿಳಂಬವಾಯಿತು. ರೇಣುಕಾ ಯೋಜನೆಯೂ ಮೂರು ದಶಕಗಳಷ್ಟು ವಿಳಂಬವಾಯಿತು ಎಂದು ಪ್ರಧಾನಿ ಹೇಳಿದರು. ಹಾಲಿ ಸರಕಾರದ ಬದ್ಧತೆ ಏನಿದ್ದರೂ ಅದು ಕೇವಲ ಅಭಿವೃದ್ಧಿಗಾಗಿ ಮಾತ್ರ ಎಂದು ಅವರು ಒತ್ತಿ ಹೇಳಿದರು. ಅಟಲ್ ಸುರಂಗದ ಕಾಮಗಾರಿ ಪೂರ್ಣಗೊಂಡಿದೆ ಮತ್ತು ಚಂಡೀಗಢದಿಂದ ಮನಾಲಿ ಮತ್ತು ಶಿಮ್ಲಾಗೆ ಸಂಪರ್ಕಿಸುವ ರಸ್ತೆಯನ್ನು ಅಗಲಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹಿಮಾಚಲವು ಅತ್ಯಧಿಕ ರಕ್ಷಣಾ ಸಿಬ್ಬಂದಿಗೆ ನೆಲೆಯಾಗಿದೆ ಎಂದ ಪ್ರಧಾನಿಯವರು ರಕ್ಷಣಾ ಸಿಬ್ಬಂದಿ ಮತ್ತು ನಿವೃತ್ತ ಯೋಧರ ಕಲ್ಯಾಣಕ್ಕಾಗಿ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.  "ಹಿಮಾಚಲ ಪ್ರದೇಶದ ಪ್ರತಿಯೊಂದು ಮನೆಯಲ್ಲೂ ದೇಶವನ್ನು ರಕ್ಷಿಸುವ ಧೈರ್ಯಶಾಲಿ ಪುತ್ರರು ಮತ್ತು ಹೆಣ್ಣುಮಕ್ಕಳಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ದೇಶದ ಭದ್ರತೆಯನ್ನು ಹೆಚ್ಚಿಸಲು ನಮ್ಮ ಸರಕಾರ ಮಾಡಿದ ಕೆಲಸಗಳು, ಸೈನಿಕರು ಹಾಗೂ ಮಾಜಿ ಸೈನಿಕರಿಗಾಗಿ ತೆಗೆದುಕೊಂಡ ನಿರ್ಧಾರಗಳು ಹಿಮಾಚಲದ ಜನರಿಗೆ ಅಪಾರ ಪ್ರಯೋಜನವನ್ನು ತಂದಿವೆ", ಎಂದು ಅವರು ಮಾತು ಮುಗಿಸಿದರು.

***

DS/AK(Release ID: 1785533) Visitor Counter : 137