ಸಂಸ್ಕೃತಿ ಸಚಿವಾಲಯ

ಡಿಸೆಂಬರ್ 19ರಂದು ನವದೆಹಲಿಯಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾದ ವಂದೇ ಭಾರತಂ-ನೃತ್ಯ ಉತ್ಸವದ ಅಂತಿಮ ಸ್ಪರ್ಧೆ


ಅಂತಿಮ ಸುತ್ತಿನಲ್ಲಿ ಗೆದ್ದಿರುವ ಒಟ್ಟು 36 ತಂಡಗಳು ಗಣರಾಜ್ಯೋತ್ಸವ ಪರೇಡ್ 2022 ರಲ್ಲಿ ಭಾಗವಹಿಸಲಿವೆ

ವಂದೇ ಭಾರತಂ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಭಾರತದ ನಾಗರಿಕ ಸಂಸ್ಕೃತಿಯನ್ನು ಮುನ್ನಡೆಸುವತ್ತ ಒಂದು ಹೆಜ್ಜೆಯಾಗಿದೆ: ಶ್ರೀಮತಿ ಮೀನಾಕ್ಷಿ ಲೇಖಿ

Posted On: 20 DEC 2021 4:26PM by PIB Bengaluru

ಭಾರತ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅಖಿಲ ಭಾರತ ನೃತ್ಯ ಸ್ಪರ್ಧೆಯಾದ 'ವಂದೇ ಭಾರತಂ - ನೃತ್ಯ ಉತ್ಸವ'ದ ಅಂತಿಮ ಸ್ಪರ್ಧೆಯು ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದ ಸಭಾಭವನದಲ್ಲಿ ಡಿಸೆಂಬರ್ 19, 2021 ರ ಭಾನುವಾರ ನಡೆಯಿತು. ದೆಹಲಿಯ ಇಂಟರ್‌ನ್ಯಾಶನಲ್ ಅಕಾಡೆಮಿ ಆಫ್ ಮೋಹಿನಿ ಅಟ್ಟಂ, ಜೈ ಘೋಷ್ ಡ್ಯಾನ್ಸ್ ಗ್ರೂಪ್, ರೇಖಾ ಡ್ಯಾನ್ಸ್ ಗ್ರೂಪ್ ಗೆದ್ದ ಒಟ್ಟು 36 ತಂಡಗಳಲ್ಲಿ ಸೇರಿವೆ. ಇದಲ್ಲದೆ, ಪಂಜಾಬ್‌ನ ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ ಬಾಲಕಿಯರ ಗಿದ್ಧಾ ತಂಡ ಮತ್ತು ಬಾಲಕರ ಭಾಂಗ್ರಾ ತಂಡ; ಸುಪ್ರಿಯಾ ಡ್ಯಾನ್ಸ್ ಗ್ರೂಪ್ ಮತ್ತು ಉತ್ತರ ಪ್ರದೇಶದ ಓಂ ಶ್ರೀ ವಿನಾಯಕ್ ಗ್ರೂಪ್ ಮತ್ತು ಉತ್ತರಾಖಂಡ್‌ನ ಸಂಸ್ಕಾರ ಸಂಸ್ಕೃತಿ ಏವಂ ಪರ್ಯಾವರಣ್ ಸಂರಕ್ಷಣ ಸಮಿತಿ ಅಂತಿಮ ಸ್ಪರ್ಧೆಯಲ್ಲಿ ವಿಜೇತವಾದ ಇತರ ಕೆಲವು ತಂಡಗಳಾಗಿವೆ.

ಗ್ರ್ಯಾಂಡ್ ಫಿನಾಲೆಯಲ್ಲಿ ಸಂಸ್ಕೃತಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶ್ರೀಮತಿ ಮೀನಾಕ್ಷಿ ಲೇಖಿ ಭಾಗವಹಿಸಿದ್ದರು. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದ ಹೆಸರಾಂತ ವ್ಯಕ್ತಿಗಳಾದ ಶ್ರೀಮತಿ ಇಳಾ ಅರುಣ್, ಶ್ರೀಮತಿ ಶಿಬಾನಿ ಕಶ್ಯಪ್, ಶ್ರೀಮತಿ ಪ್ರತಿಭಾ ಪ್ರಹ್ಲಾದ್ ಮತ್ತು ಶ್ರೀಮತಿ ಶೋವನ ನಾರಾಯಣ ಸಹ ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಗ್ರ್ಯಾಂಡ್ ಫಿನಾಲೆಗೆ ಶ್ರೀಮತಿ ಗೀತಾಂಜಲಿ ಲಾಲ್, ಶ್ರೀಮತಿ. ಮೈತ್ರೇಯಿ ಪಹಾರಿ ಮತ್ತು ಶ್ರೀ ಸಂತೋಷ್ ನಾಯರ್ ತೀರ್ಪುಗಾರರಾಗಿದ್ದರು. ಈ ಕಾರ್ಯಕ್ರಮದಲ್ಲಿ ಖ್ಯಾತ ನೃತ್ಯಗಾರ್ತಿ ಶ್ರೀಮತಿ ತನುಶ್ರೀ ಶಂಕರ್ ಮತ್ತು ಅವರ ತಂಡ ಹಾಗೂ ಶ್ರೀಮತಿ ರಾಣಿ ಖಾನುಮ್ ಮತ್ತು ಅವರ ತಂಡದ ಪ್ರದರ್ಶನವಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ. ಮೀನಾಕ್ಷಿ ಲೇಖಿಯವರು, 'ವಂದೇ ಭಾರತಂ ಕಾರ್ಯಕ್ರಮವನ್ನು ಜನರ ಸಹಭಾಗಿತ್ವದೊಂದಿಗೆ ಆಯೋಜಿಸುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಶಯವಾಗಿತ್ತು. ಅದರಂತೆ ಈ ಅಖಿಲ ಭಾರತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ದೇಶದಾದ್ಯಂತದ ನೃತ್ಯಗಾರರು ಉತ್ಸಾಹದಿಂದ ಭಾಗವಹಿಸಿದರು' ಎಂದು ಅವರು ಹೇಳಿದರು. ಈ ಉತ್ಸವವು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತದೆ ಮತ್ತು ಭಾರತದ ನಾಗರಿಕ ಸಂಸ್ಕೃತಿಯನ್ನು ಮುನ್ನಡೆಸುವತ್ತ ಒಂದು ಹೆಜ್ಜೆಯಾಗಿದೆ. ಭಾರತದ ಶ್ರೀಮಂತ ಸಂಸ್ಕೃತಿ ಪ್ರಪಂಚದಾದ್ಯಂತದ ಜನರನ್ನು ಆಕರ್ಷಿಸುತ್ತಿದೆ, ಅದಕ್ಕಾಗಿ ನಾವು ಹೆಮ್ಮೆ ಪಡಬೇಕು ಎಂದರು. ದೇಶದ ವಿವಿಧ ಮೂಲೆಗಳಲ್ಲಿರುವ ಉತ್ತಮ ನೃತ್ಯ ಪ್ರತಿಭೆಯನ್ನು ಹೊರತರಲು ಮತ್ತು ರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಲು ವಂದೇ ಭಾರತಂ ಅನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಕೋಲ್ಕತ್ತಾ, ಮುಂಬೈ, ಬೆಂಗಳೂರು ಮತ್ತು ನವದೆಹಲಿಯಲ್ಲಿ ಡಿಸೆಂಬರ್ 9 ರಿಂದ 12 ರವರೆಗೆ ಆಯೋಜಿಸಲಾದ ವಲಯ ಮಟ್ಟದ ಸ್ಪರ್ಧೆಗಳಿಗಾಗಿ 200 ಕ್ಕೂ ಹೆಚ್ಚು ತಂಡಗಳ 2,400 ಕ್ಕೂ ಹೆಚ್ಚು ಮಂದಿ ಆಯ್ಕೆಯಾದರು. ಅಲ್ಲಿ ತಂಡಗಳು ತೀರ್ಪುಗಾರರ ಮುಂದೆ ತಮ್ಮ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದವು. ಭಾಗವಹಿಸಿದ ಗುಂಪುಗಳು ಸ್ಪರ್ಧೆಗೆ ಆಯ್ದ ನೃತ್ಯ ವಿಭಾಗಗಳಾದ ಶಾಸ್ತ್ರೀಯ, ಜಾನಪದ, ಬುಡಕಟ್ಟು ಮತ್ತು ಫ್ಯೂಷನ್ ನೃತ್ಯಗಳನ್ನು ಪ್ರಸ್ತುತಪಡಿಸಿದವು.

ಗ್ರ್ಯಾಂಡ್ ಫಿನಾಲೆಯ ವಿಜೇತರು ಈಗ 26 ಜನವರಿ 2022 ರಂದು ರಾಜ್‌ಪಥ್ (ನವದೆಹಲಿ) ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಾರೆ. ದೇಶಾದ್ಯಂತ ಆಯ್ಕೆಯಾದ 64 ತಂಡಗಳ 800 ಕ್ಕೂ ಹೆಚ್ಚು ಕಲಾವಿದರು ಅಂತಿಮ ಹಂತದಲ್ಲಿ ತಮ್ಮ ಪ್ರದರ್ಶನ ನೀಡಿದರು.

ಗ್ರ್ಯಾಂಡ್ ಫಿನಾಲೆಯಲ್ಲಿ ಭಾರತದ ಉದ್ದಗಲದ ಪ್ರಮುಖ 36 ತಂಡಗಳನ್ನು ವಿಜೇತ ತಂಡಗಳೆಂದು ಘೋಷಿಸಲಾಯಿತು ಮತ್ತು ಅವುಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

***



(Release ID: 1783532) Visitor Counter : 134


Read this release in: English , Urdu , Urdu , Hindi , Tamil