ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
07 DEC 2021 5:28PM by PIB Bengaluru
ಭಾರತ್ ಮಾತಾ ಕೀ-ಜೈ, ಭಾರತ್ ಮಾತಾ ಕೀ-ಜೈ! ಧರ್ಮ, ಆಧ್ಯಾತ್ಮಿಕತೆ ಮತ್ತು ಕ್ರಾಂತಿಯ ನಗರವಾದ ಗೋರಖ್‌ಪುರದ ದೈವಿಕ ಜನರನ್ನು ನಾನು ಅಭಿನಂದಿಸುತ್ತೇನೆ. ನಾನು ಪರಮಹಂಸ ಯೋಗಾನಂದ, ಮಹಾಯೋಗಿ ಗೋರಖನಾಥ್ ಜೀ, ಗೌರವಾನ್ವಿತ ಹನುಮಾನ್ ಪ್ರಸಾದ್ ಪೊದ್ದಾರ್ ಜಿ ಮತ್ತು ಧೀಮಂತ ಕ್ರಾಂತಿಕಾರಿ ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಅವರಿಗೆ ಮತ್ತು ಈ ಪುಣ್ಯಭೂಮಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ರಸಗೊಬ್ಬರ ಕಾರ್ಖಾನೆ ಮತ್ತು ಏಮ್ಸ್‌ಗಾಗಿ ನೀವೆಲ್ಲರೂ ಬಹಳ ದಿನಗಳಿಂದ ಕಾಯುತ್ತಿದ್ದ ಆ ಕ್ಷಣ ಇಂದು ಬಂದಿದೆ. ನಿಮ್ಮೆಲ್ಲರಿಗೂ ಅನೇಕಾನೇಕ ಅಭಿನಂದನೆಗಳು.
ನನ್ನೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿರುವ ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್,. ಉತ್ತರ ಪ್ರದೇಶದ ಜನಪ್ರಿಯ ಕರ್ಮಯೋಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಡಾ. ದಿನೇಶ್ ಶರ್ಮಾ, ಭಾರತೀಯ ಜನತಾ ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷರಾದ ಶ್ರೀ ಸ್ವತಂತ್ರದೇವ್ ಸಿಂಗ್ ಜಿ. ಅಪ್ನಾ ದಳದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಪುಟದಲ್ಲಿ ನಮ್ಮ ಸಹೋದ್ಯೋಗಿಯಾದ , ನಿಶಾದ್ ಪಕ್ಷದ ಅಧ್ಯಕ್ಷರಾದ ಅನುಪ್ರಿಯಾ ಪಟೇಲ್ ಜಿ, ಸಂಜಯ್ ನಿಶಾದ್ ಜಿ, ಸಂಪುಟದಲ್ಲಿ ನನ್ನ ಸಹೋದ್ಯೋಗಿ ಶ್ರೀ ಪಂಕಜ್ ಚೌಧರಿ ಜಿ, ಉತ್ತರ ಪ್ರದೇಶ ಸರ್ಕಾರದ ಸಚಿವರುಗಳಾದ ಶ್ರೀ ಜೈಪ್ರತಾಪ್ ಸಿಂಗ್ ಜಿ, ಶ್ರೀ ಸೂರ್ಯ ಪ್ರತಾಪ್ ಶಾಹಿ ಜಿ, ಶ್ರೀ ದಾರಾ ಸಿಂಗ್ ಚೌಹಾಣ್ ಜಿ, ಸ್ವಾಮಿ ಪ್ರಸಾದ್ ಮೌರ್ಯ ಜಿ, ಉಪೇಂದ್ರ ತಿವಾರಿ ಜಿ, ಸತೀಶ್ ದ್ವಿವೇದಿ ಜಿ, ಜೈ ಪ್ರಕಾಶ್ ನಿಶಾದ್ ಜಿ, ರಾಮ್ ಚೌಹಾಣ್ ಜಿ ಮತ್ತು ಆನಂದ್ ಸ್ವರೂಪ್ ಶುಕ್ಲಾ ಜಿ, ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿಗಳು, ಯುಪಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು, ಮತ್ತು ನಮ್ಮನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೇ!
ನಾನು ವೇದಿಕೆಯ ಮೇಲೆ ಬಂದಾಗ, ಅಂತಹ ದೊಡ್ಡ ಗುಂಪನ್ನು ನೋಡಿ ನಾನು ಆಶ್ಚರ್ಯಚಕಿತನಾದೆ ಮತ್ತು ಅವರಲ್ಲಿ ದೂರದಲ್ಲಿರುವ ಅನೇಕರು ಬಹುಶಃ ನನ್ನನ್ನು ಕಾಣದೆಯೇ ಅಥವಾ ಅವರಿಗೆ ನನ್ನ ಮಾತು ಕೇಳದೆಯೂ ಇರಬಹುದು. ದೂರದ ಊರುಗಳಿಂದ ಜನರು ಬಾವುಟಗಳನ್ನು ಬೀಸುತ್ತಿದ್ದಾರೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದಗಳು ಶಕ್ತಿ ಮತ್ತು ಸಾಮರ್ಥ್ಯವನ್ನು ನೀಡುತ್ತವೆ ಮತ್ತು ನಿಮಗಾಗಿ ಕೆಲಸ ಮಾಡಲು ನಮಗೆ ಸ್ಫೂರ್ತಿ ನೀಡುತ್ತವೆ. ಐದು ವರ್ಷಗಳ ಹಿಂದೆ ಏಮ್ಸ್ ಮತ್ತು ರಸಗೊಬ್ಬರ ಕಾರ್ಖಾನೆಯ ಶಂಕುಸ್ಥಾಪನೆಗಾಗಿ ನಾನು ಇಲ್ಲಿಗೆ ಬಂದಿದ್ದೆ. ಇಂದು ಈ ಎರಡು ಯೋಜನೆಗಳನ್ನು ಒಟ್ಟಿಗೆ ಪ್ರಾರಂಭಿಸುವ ಭಾಗ್ಯವನ್ನು ನೀವು ನನಗೆ ನೀಡಿದ್ದೀರಿ. ಐಸಿಎಂಆರ್ನ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರವೂ ಇಂದು ತನ್ನ ಹೊಸ ಕಟ್ಟಡವನ್ನು ಪಡೆದುಕೊಂಡಿದೆ. ನಾನು ಯುಪಿ ಜನರನ್ನು ಬಹಳ ಅಭಿನಂದಿಸುತ್ತೇನೆ.
ಸ್ನೇಹಿತರೇ,
ಗೋರಖ್‌ಪುರದಲ್ಲಿ ರಸಗೊಬ್ಬರ ಘಟಕ ಮತ್ತು ಎಐಐಎಂಎಸ್‌ನ ಆರಂಭವು ಹಲವು ಸಂದೇಶಗಳನ್ನು ರವಾನಿಸುತ್ತಿದೆ. ಡಬಲ್ ಇಂಜಿನ್ ಸರ್ಕಾರ ಇದ್ದಾಗ, ಕೆಲಸವೂ ಡಬಲ್ ವೇಗದಲ್ಲಿ ನಡೆಯುತ್ತದೆ. ಸದುದ್ದೇಶದಿಂದ ಏನನ್ನಾದರೂ ಮಾಡಿದಾಗ, ಕಷ್ಟಗಳು ಸಹ ಅಡ್ಡಿಯೆನಿಸುವುದಿಲ್ಲ. ಬಡವರು, ಶೋಷಿತರು ಮತ್ತು ದೀನದಲಿತರ ಬಗ್ಗೆ ಕಾಳಜಿ ವಹಿಸುವ ಮತ್ತು ಅವರಿಗಾಗಿ ಶ್ರಮಿಸುವ ಸರ್ಕಾರ ಇದ್ದಾಗ, ಅದು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗುತ್ತದೆ. ನವ ಭಾರತವು ಮನಸ್ಸು ಮಾಡಿದಾಗ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇಂದು ಗೋರಖ್‌ಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಸಾಕ್ಷಿಯಾಗಿದೆ.
ಸ್ನೇಹಿತರೇ,
2014ರಲ್ಲಿ ನೀವು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ದೇಶದಲ್ಲಿ ರಸಗೊಬ್ಬರ ಕ್ಷೇತ್ರವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿತ್ತು. ದೇಶದ ಪ್ರಮುಖ ರಸಗೊಬ್ಬರ ಕಾರ್ಖಾನೆಗಳು ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದವು ಮತ್ತು ಆಮದು ನಿರಂತರವಾಗಿ ಹೆಚ್ಚುತ್ತಿತ್ತು. ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ, ಲಭ್ಯವಿರುವ ಗೊಬ್ಬರವನ್ನು ಕೃಷಿಯನ್ನು ಹೊರತುಪಡಿಸಿ ಇತರ ಉದ್ದೇಶಗಳಿಗೆ ರಹಸ್ಯವಾಗಿ ಬಳಸಲಾಗುತ್ತಿತ್ತು. ಹೀಗಾಗಿ ಯೂರಿಯಾ ಕೊರತೆ ತಲೆದೋರಿದ್ದು, ರೈತರು ರಸಗೊಬ್ಬರಕ್ಕಾಗಿ ಲಾಠಿ, ಗುಂಡುಗಳನ್ನು ಎದುರಿಸಬೇಕಾಗಿ ಬಂತು . ಆ ಪರಿಸ್ಥಿತಿಯಿಂದ ದೇಶವನ್ನು ಹೊರತರುವ ಹೊಸ ಸಂಕಲ್ಪದೊಂದಿಗೆ ನಾವು ಮುನ್ನಡೆದಿದ್ದೇವೆ. ನಾವು ಏಕಕಾಲದಲ್ಲಿ ಮೂರು ಮೂಲಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಮೊದಲಿಗೆ, ನಾವು ಯೂರಿಯಾದ ದುರುಪಯೋಗವನ್ನು ನಿಲ್ಲಿಸಿದ್ದೇವೆ ಮತ್ತು 100% ಯೂರಿಯಾದ ಬೇವಿನ ಲೇಪನವನ್ನು ಮಾಡಿದ್ದೇವೆ. ಎರಡನೆಯದಾಗಿ, ನಾವು ಕೋಟಿಗಟ್ಟಲೆ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ನೀಡಿದ್ದೇವೆ, ಇದರಿಂದ ಅವರು ತಮ್ಮ ಹೊಲಗಳಿಗೆ ಅಗತ್ಯವಿರುವ ರಸಗೊಬ್ಬರಗಳನ್ನು ಗುರುತಿಸಬಹುದು ಮತ್ತು ಮೂರನೆಯದಾಗಿ, ಯೂರಿಯಾ ಉತ್ಪಾದನೆಯನ್ನು ಹೆಚ್ಚಿಸಲು ನಾವು ಒತ್ತು ನೀಡಿದ್ದೇವೆ. ಮುಚ್ಚಿದ ರಸಗೊಬ್ಬರ ಘಟಕಗಳನ್ನು ಪುನಃ ತೆರೆಯುವತ್ತ ಗಮನಹರಿಸಿದ್ದೇವೆ. ಈ ಅಭಿಯಾನದ ಅಡಿಯಲ್ಲಿ, ಗೋರಖ್‌ಪುರದ ಈ ರಸಗೊಬ್ಬರ ಘಟಕ ಸೇರಿದಂತೆ ದೇಶದ ನಾಲ್ಕು ಪ್ರಮುಖ ರಸಗೊಬ್ಬರ ಕಾರ್ಖಾನೆಗಳನ್ನು ನಾವು ಆಯ್ಕೆ ಮಾಡಿದ್ದೇವೆ. ಇಂದು ಒಂದು ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ಉಳಿದವುಗಳು ಮುಂದಿನ ಕೆಲವು ವರ್ಷಗಳಲ್ಲಿ ಪುನರಾರಂಭವಾಗುವವು.
ಸ್ನೇಹಿತರೇ,
ಗೋರಖ್‌ಪುರ ರಸಗೊಬ್ಬರ ಘಟಕವನ್ನು ಪ್ರಾರಂಭಿಸಲು ಮತ್ತೊಂದು ಪ್ರಮುಖ ವಿಷಯ ಸಂಭವಿಸಿದೆ. ಭಗೀರಥ ಜೀ ದೇವಲೋಕದಿಂದ ಗಂಗಾ ನದಿಯನ್ನು ಭೂಮಿಗೆ ತಂದಂತೆ, ಈ ರಸಗೊಬ್ಬರ ಸ್ಥಾವರಕ್ಕೆ ಇಂಧನವನ್ನು ತರಲು ಊರ್ಜಾ ಗಂಗೆಯನ್ನು ಬಳಸಲಾಗಿದೆ. ಪ್ರಧಾನಮಂತ್ರಿ ಉರ್ಜಾ ಗಂಗಾ ಗ್ಯಾಸ್ ಪೈಪ್‌ಲೈನ್ ಯೋಜನೆಯಡಿ ಹಲ್ದಿಯಾ-ಜಗದೀಶ್‌ಪುರ ಪೈಪ್‌ಲೈನನ್ನು ಹಾಕಲಾಗಿದೆ. ಈ ಪೈಪ್‌ಲೈನ್‌ನಿಂದಾಗಿ, ಗೋರಖ್‌ಪುರ ರಸಗೊಬ್ಬರ ಘಟಕವು ಪ್ರಾರಂಭಗೊಂಡಿದ್ದೇ ಅಲ್ಲದೆ ಪೂರ್ವ ಭಾರತದ ಹತ್ತಾರು ಜಿಲ್ಲೆಗಳು ಕೈಗೆಟುಕುವ ಪೈಪ್ಡ್ (ಕೊಳವೆ ಮೂಲಕ) ಅನಿಲವನ್ನು ಪಡೆಯಲು ಪ್ರಾರಂಭಿಸಿವೆ.
ಸಹೋದರ ಸಹೋದರಿಯರೇ,
ರಸಗೊಬ್ಬರ ಘಟಕಕ್ಕೆ ಶಂಕುಸ್ಥಾಪನೆ ಮಾಡುವಾಗ, ಈ ಕಾರ್ಖಾನೆಯಿಂದಾಗಿ ಗೋರಖ್‌ಪುರ ಇಡೀ ಪ್ರದೇಶದ ಅಭಿವೃದ್ಧಿಯ ಕೇಂದ್ರವಾಗಿ ಹೊರಹೊಮ್ಮುತ್ತದೆ ಎಂದು ನಾನು ಹೇಳಿದ್ದೆ. ಇಂದು ಅದು ನಿಜವಾಗುವುದನ್ನು ನಾನು ನೋಡುತ್ತಿದ್ದೇನೆ. ಈ ರಸಗೊಬ್ಬರ ಕಾರ್ಖಾನೆಯು ರಾಜ್ಯದ ಅನೇಕ ರೈತರಿಗೆ ಸಾಕಷ್ಟು ಯೂರಿಯಾವನ್ನು ನೀಡುವುದಲ್ಲದೆ, ಪೂರ್ವಾಂಚಲ್‌ನಲ್ಲಿ ಸಾವಿರಾರು ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಈಗ ಆರ್ಥಿಕ ಅಭಿವೃದ್ಧಿಯ ಹೊಸ ಸಾಧ್ಯತೆಯು ಹೊರಹೊಮ್ಮುತ್ತದೆ ಮತ್ತು ಅನೇಕ ಹೊಸ ವ್ಯಾಪಾರ , ವ್ಯವಹಾರಗಳು ಪ್ರಾರಂಭವಾಗುತ್ತವೆ. ರಸಗೊಬ್ಬರ ಕಾರ್ಖಾನೆಗೆ ಸಂಬಂಧಿಸಿದ ಪೂರಕ ಕೈಗಾರಿಕೆಗಳ ಜೊತೆಗೆ ಸಾರಿಗೆ ಮತ್ತು ಸೇವಾ ಕ್ಷೇತ್ರಕ್ಕೂ ಉತ್ತೇಜನ ಸಿಗಲಿದೆ.
ಸ್ನೇಹಿತರೇ,
ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವಲ್ಲಿ ಗೋರಖ್‌ಪುರ ರಸಗೊಬ್ಬರ ಕಾರ್ಖಾನೆ ದೊಡ್ಡ ಪಾತ್ರವನ್ನು ವಹಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ನಿರ್ಮಿಸಲಾಗುತ್ತಿರುವ ಐದು ರಸಗೊಬ್ಬರ ಘಟಕಗಳು ಕಾರ್ಯಾರಂಭ ಮಾಡಿದ ನಂತರ 60 ಲಕ್ಷ ಟನ್ ಹೆಚ್ಚುವರಿ ಯೂರಿಯಾ ಲಭ್ಯವಾಗಲಿದೆ. , ಭಾರತವು ಸಾವಿರಾರು ಕೋಟಿ ರೂಪಾಯಿಗಳನ್ನು ವಿದೇಶಕ್ಕೆ ಕಳುಹಿಸಬೇಕಾಗಿಲ್ಲ; ಭಾರತದ ಹಣ ಭಾರತದಲ್ಲಿಯೇ ಖರ್ಚಾಗುತ್ತದೆ.
ಸ್ನೇಹಿತರೇ,
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ರಸಗೊಬ್ಬರಗಳಲ್ಲಿ ಸ್ವಾವಲಂಬನೆಯ ಮಹತ್ವವನ್ನು ನಾವು ಅರಿತುಕೊಂಡಿದ್ದೇವೆ. ಕೊರೊನಾ ವಿಶ್ವಾದ್ಯಂತ ಲಾಕ್‌ಡೌನ್‌ಗಳಿಗೆ ಕಾರಣವಾಯಿತು, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಚಲನೆಯನ್ನು ನಿರ್ಬಂಧಿಸಿತು ಮತ್ತು ಪೂರೈಕೆ ಸರಪಳಿಗಳು ಕಡಿದುಕೊಂಡವು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣವಾಯಿತು. ಆದರೆ ನಮ್ಮ ಸರ್ಕಾರವು ರೈತರಿಗೆ ಸಮರ್ಪಿತ ಮತ್ತು ಸಂವೇದನಾಶೀಲವಾಗಿದೆ, ವಿಶ್ವದಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯ ಹೊರೆ ರೈತರ ಮೇಲೆ ಬೀಳದಂತೆ ನೋಡಿಕೊಂಡಿತು. ರೈತರಿಗೆ ಸಮಸ್ಯೆಗಳು ಕಡಿಮೆಯಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದೇವೆ. ಜಗತ್ತಿನಲ್ಲಿ ಎನ್.ಪಿ.ಕೆ. (ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್) ಗೊಬ್ಬರದ ಬೆಲೆ ಏರಿಕೆಯಿಂದಾಗಿ ನಾವು ರೈತರಿಗೆ 43,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಬ್ಸಿಡಿಯನ್ನು ಹೆಚ್ಚಿಸಬೇಕಾಗಿದೆ ಮತ್ತು ನಾವು ಅದನ್ನು ಮಾಡಿದ್ದೇವೆ ಎಂದು ತಿಳಿದರೆ ನನ್ನ ಸಹೋದರ ಸಹೋದರಿಯರೇ ನಿಮಗೆ ಆಶ್ಚರ್ಯವಾಗುತ್ತದೆ. ನಮ್ಮ ರೈತರಿಗೆ ರಸಗೊಬ್ಬರದ ಬೆಲೆ ಏರಿಕೆಯ ಹೊರೆಯಾಗಬಾರದೆಂದು ನಮ್ಮ ಸರ್ಕಾರವು ಯೂರಿಯಾಕ್ಕೆ 33,000 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ಹೆಚ್ಚಿಸಿತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯೂರಿಯಾ ಕೆಜಿಗೆ 60-65 ರೂ.ಗೆ ಮಾರಾಟವಾಗುತ್ತಿದ್ದರೆ, ಭಾರತದಲ್ಲಿ ರೈತರಿಗೆ ಯೂರಿಯಾವನ್ನು 10 ರಿಂದ 12 ಪಟ್ಟು ಕಡಿಮೆ ಬೆಲೆಗೆ ನೀಡುವ ಪ್ರಯತ್ನ ನಡೆಯುತ್ತಿದೆ.
ಸಹೋದರ ಸಹೋದರಿಯರೇ,
ಇಂದು ಭಾರತವು ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳಲು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸುವ ಸಲುವಾಗಿ, ದೇಶದಲ್ಲಿಯೇ ಸಾಕಷ್ಟು ಖಾದ್ಯ ತೈಲ ಉತ್ಪಾದನೆಗೆ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಭಾರತವು ಪ್ರತಿ ವರ್ಷ 5-7 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ನಾವು ಎಥೆನಾಲ್ ಮತ್ತು ಜೈವಿಕ ಇಂಧನಕ್ಕೆ ಒತ್ತು ನೀಡುವ ಮೂಲಕ ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಪೂರ್ವಾಂಚಲದ ಈ ಪ್ರದೇಶವು ಕಬ್ಬು ರೈತರ ಭದ್ರಕೋಟೆಯಾಗಿದೆ. ಕಬ್ಬು ಬೆಳೆಯುವ ರೈತರಿಗೆ ಸಕ್ಕರೆಗಿಂತ ಎಥೆನಾಲ್ ಉತ್ತಮ ಆದಾಯದ ಮೂಲವಾಗಿ ಹೊರಹೊಮ್ಮುತ್ತಿದೆ. ಜೈವಿಕ ಇಂಧನವನ್ನು ತಯಾರಿಸಲು ಉತ್ತರ ಪ್ರದೇಶದಲ್ಲಿಯೇ ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತಿದೆ. ನಾವು ಸರ್ಕಾರ ರಚಿಸುವ ಮೊದಲು ಯುಪಿಯಿಂದ ಕೇವಲ 20 ಕೋಟಿ ಲೀಟರ್ ಎಥೆನಾಲ್ ಅನ್ನು ತೈಲ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಇಂದು ಉತ್ತರ ಪ್ರದೇಶದ ರೈತರೇ ಸುಮಾರು 100 ಕೋಟಿ ಲೀಟರ್ ಎಥೆನಾಲ್ ಅನ್ನು ತೈಲ ಕಂಪನಿಗಳಿಗೆ ಪೂರೈಸುತ್ತಿದ್ದಾರೆ. ಮೊದಲು ಗಲ್ಫ್‌ನಿಂದ ತೈಲ ಬರುತ್ತಿತ್ತು ಮತ್ತು ಈಗ (ಕಬ್ಬು) ಬೆಳೆಗಳಿಂದ ತೈಲ ಬರಲಾರಂಭಿಸಿತು. ಕಳೆದ ಕೆಲವು ವರ್ಷಗಳಲ್ಲಿ ಕಬ್ಬು ಬೆಳೆಯುವ ರೈತರಿಗಾಗಿ, ಅಭೂತಪೂರ್ವ ಕೆಲಸಕ್ಕಾಗಿ ನಾನು ಇಂದು ಯೋಗಿ ಜಿ ಸರ್ಕಾರವನ್ನು ಶ್ಲಾಘಿಸುತ್ತೇನೆ. ಇತ್ತೀಚೆಗೆ, ಕಬ್ಬುಬೆಳೆಯುವ ರೈತರಿಗೆ ಲಾಭದಾಯಕ ಬೆಲೆಯನ್ನು 350 ರೂ.ಗೆ (ಕ್ವಿಂಟಲ್‌ಗೆ) ಹೆಚ್ಚಿಸಲಾಗಿದೆ. ಹಿಂದಿನ ಎರಡು ಸರ್ಕಾರಗಳು 10 ವರ್ಷಗಳಲ್ಲಿ ಕಬ್ಬು ಬೆಳೆಗಾರರಿಗೆ ನೀಡಿದ್ದ ಮೊತ್ತವನ್ನು ಯೋಗಿ ಅವರ ಸರ್ಕಾರ ತನ್ನ ನಾಲ್ಕೂವರೆ ವರ್ಷಗಳಲ್ಲಿ ಪಾವತಿಸಿದೆ.
ಸಹೋದರ ಸಹೋದರಿಯರೇ,
ಯಾವುದು ಸಮತೋಲಿತ ಮತ್ತು ಎಲ್ಲರಿಗೂ ಪ್ರಯೋಜನಕಾರಿಯಾಗಿದೆಯೋ ಅದುವೇ ನಿಜವಾದ ಅಭಿವೃದ್ಧಿಯಾಗಿದೆ. ಮತ್ತು ಇದು ಸಂವೇದನಾಶೀಲರು ಮತ್ತು ಬಡವರ ಬಗ್ಗೆ ಕಾಳಜಿ ಇರುವವರು ಮಾತ್ರ ಅರ್ಥಮಾಡಿಕೊಳ್ಳಬಹುದು. ದೀರ್ಘಕಾಲದವರೆಗೆ, ಗೋರಖ್‌ಪುರ ಸೇರಿದಂತೆ ಈ ಬೃಹತ್ ಪ್ರದೇಶವು ಕೇವಲ ಒಂದು ವೈದ್ಯಕೀಯ ಕಾಲೇಜಿನ ಮೇಲೆ ಅವಲಂಬಿತವಾಗಿತ್ತು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಚಿಕಿತ್ಸೆಗಾಗಿ ಬನಾರಸ್ ಅಥವಾ ಲಕ್ನೋಗೆ ಹೋಗಬೇಕಾಗಿತ್ತು. ಐದು ವರ್ಷಗಳ ಹಿಂದಿನವರೆಗೆ ಈ ಪ್ರದೇಶದಲ್ಲಿ ಇದ್ದ ಮೆದುಳು ಜ್ವರದ ಪರಿಸ್ಥಿತಿ ನನಗಿಂತ ಚೆನ್ನಾಗಿ ನಿಮಗೆ ತಿಳಿದಿದೆ. ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ಸಂಶೋಧನಾ ಕೇಂದ್ರಕ್ಕೆ ಸ್ವಂತ ಕಟ್ಟಡವೂ ಇರಲಿಲ್ಲ.
ಸಹೋದರ ಸಹೋದರಿಯರೇ,
ನೀವು ನಮಗೆ ಸೇವೆ ಮಾಡಲು ಅವಕಾಶವನ್ನು ನೀಡಿದಾಗ, ಇಲ್ಲಿ AIIMS (ಏಮ್ಸ್)ಬರುವುದನ್ನು ನೀವು ನೋಡಿದ್ದೀರಿ. ಅಷ್ಟೇ ಅಲ್ಲ ಸಂಶೋಧನಾ ಕೇಂದ್ರದ ಸ್ವಂತ ಕಟ್ಟಡವೂ ಸಿದ್ಧವಾಗಿದೆ. ನಾನು ಏಮ್ಸ್‌ನ ಶಂಕುಸ್ಥಾಪನೆಗೆ ಬಂದಾಗ, ಈ ಪ್ರದೇಶವನ್ನು ಎನ್ಸೆಫಾಲಿಟಿಸ್ ಅನ್ನು ತೊಡೆದುಹಾಕಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದೆ. ಮೆನಿಂಜೈಟಿಸ್ (ಮೆದುಳಿನ ರೋಗ) ಉಲ್ಬಣಗೊಳ್ಳುವ ಕಾರಣಗಳನ್ನು ತೆಗೆದುಹಾಕುವಲ್ಲಿ ಮತ್ತು ಅದರ ಚಿಕಿತ್ಸೆಯಲ್ಲಿ ನಾವು ಕೆಲಸ ಮಾಡಿದ್ದೇವೆ. ಆ ಶ್ರಮ ಇಂದು ಕಾಣುತ್ತಿದೆ. ಇಂದು, ಗೋರಖ್‌ಪುರ ಮತ್ತು ಬಸ್ತಿ ವಿಭಾಗದ ಏಳು ಜಿಲ್ಲೆಗಳಲ್ಲಿ ಎನ್ಸೆಫಾಲಿಟಿಸ್ ಪ್ರಕರಣಗಳು ಸುಮಾರು 90 ಪ್ರತಿಶತದಷ್ಟು ಕಡಿಮೆಯಾಗಿದೆ. ಅನಾರೋಗ್ಯಕ್ಕೆ ಒಳಗಾಗುವ ಮಕ್ಕಳ ಹೆಚ್ಚು ಹೆಚ್ಚು ಜೀವಗಳನ್ನು ಉಳಿಸುವಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಯೋಗಿ ಸರ್ಕಾರ ಮಾಡಿರುವ ಕೆಲಸ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚೆಯಾಗುತ್ತಿದೆ. ಹೊಸ AIIMS ಮತ್ತು ICMR ಸಂಶೋಧನಾ ಕೇಂದ್ರದೊಂದಿಗೆ, ಎನ್ಸೆಫಾಲಿಟಿಸ್ ಅನ್ನು ತೊಡೆದುಹಾಕಲು ಅಭಿಯಾನವು ಮತ್ತಷ್ಟು ಬಲಗೊಳ್ಳುತ್ತದೆ. ಇದು ಇತರ ಅಂಟು ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯುಪಿಗೆ ಸಾಕಷ್ಟು ಸಹಾಯ ಮಾಡುತ್ತದೆ.
ಸಹೋದರ ಸಹೋದರಿಯರೇ,
ಯಾವುದೇ ದೇಶವು ಪ್ರಗತಿ ಹೊಂದಬೇಕಾದರೆ, ಅದರ ಆರೋಗ್ಯ ಸೇವೆಗಳು ಕೈಗೆಟುಕುವಂತೆ ಮತ್ತು ಎಲ್ಲರಿಗೂ ಸಿಗುವಂತಿರಬೇಕು. ಇಲ್ಲವಾದರೆ, ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ, ತಮ್ಮ ಜಮೀನನ್ನು ಅಡಮಾನವಿಟ್ಟು, ಬೇರೆಯವರಿಂದ ಸಾಲ ಮಾಡಿ ಚಿಕಿತ್ಸೆ ಕೊಡಿಸುವವರನ್ನು ನಾನು ಸಾಕಷ್ಟು ನೋಡಿದ್ದೇನೆ. ಪ್ರತಿಯೊಬ್ಬ ಬಡವರು, ದೀನದಲಿತರು, ದಮನಿತರು, ಶೋಷಿತರು, ಅವಕಾಶ ವಂಚಿತರು, ಅವರು ಯಾವುದೇ ವರ್ಗಕ್ಕೆ ಸೇರಿದವರಾಗಿರಲಿ ಮತ್ತು ಅವರು ವಾಸಿಸುವ ಯಾವುದೇ ಪ್ರದೇಶದಲ್ಲಿ ಈ ಅವ್ಯವಸ್ಥೆಯಿಂದ ಹೊರಬರಲು ನಾವು ಶ್ರಮಿಸುತ್ತಿದ್ದೇವೆ. AIIMS ನಂತಹ ವೈದ್ಯಕೀಯ ಸಂಸ್ಥೆಗಳು ದೊಡ್ಡ ನಗರಗಳಿಗೆ ಮಾತ್ರ ಮೀಸಲಾಗಿವೆ ಎಂದು ಮೊದಲು ಭಾವಿಸಲಾಗಿತ್ತು, ಆದರೆ ನಮ್ಮ ಸರ್ಕಾರವು ದೇಶದ ಅತ್ಯಂತ ದೂರದ ಪ್ರದೇಶಗಳಿಗೆ ಉತ್ತಮ ಚಿಕಿತ್ಸೆಯನ್ನು, ಅತಿದೊಡ್ಡ ಆಸ್ಪತ್ರೆಯಿರುವುದನ್ನು ಖಾತ್ರಿಪಡಿಸುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ ಈ ಶತಮಾನದ ಆರಂಭದಿಂದ ಇಲ್ಲಿಯವರೆಗೆ ದೇಶದಲ್ಲಿ ಒಂದೇ ಎಐಐಎಂಎಸ್ ಇತ್ತು ಎಂದು ನೀವು ಊಹಿಸಬಹುದೇ? ಅಟಲ್ ಜಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಇನ್ನೂ ಆರು ಏಮ್ಸ್‌ಗಳನ್ನು ಮಂಜೂರು ಮಾಡಿದ್ದರು. ಕಳೆದ ಏಳು ವರ್ಷಗಳಲ್ಲಿ ದೇಶಾದ್ಯಂತ 16 ಹೊಸ ಏಮ್ಸ್‌ಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ನಮ್ಮ ಗುರಿ. ಯುಪಿಯ ಹಲವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳ ಕೆಲಸವು ವೇಗವಾಗಿ ಪ್ರಗತಿಯಲ್ಲಿರುವುದು ನನಗೆ ಸಂತಸ ತಂದಿದೆ. ಮತ್ತು ಇದೀಗ ಯೋಗಿ ಜಿ ಅವರು ವೈದ್ಯಕೀಯ ಕಾಲೇಜುಗಳ ಪ್ರಗತಿಯನ್ನು ವಿಶದವಾಗಿ ವಿವರಿಸುತ್ತಿದ್ದರು. ಇತ್ತೀಚೆಗೆ, ನೀವು ಯುಪಿಯಲ್ಲಿ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಏಕಕಾಲದಲ್ಲಿ ಉದ್ಘಾಟಿಸಲು ನನಗೆ ಅವಕಾಶ ನೀಡಿದ್ದೀರಿ. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರ ಫಲವಾಗಿ ಯುಪಿ ಸುಮಾರು 17 ಕೋಟಿ ಲಸಿಕೆ ಡೋಸ್‌ಗಳ ಮೈಲಿಗಲ್ಲನ್ನು ತಲುಪುತ್ತಿದೆ.
ಸಹೋದರ ಸಹೋದರಿಯರೇ,
130 ಕೋಟಿಗೂ ಹೆಚ್ಚು ದೇಶವಾಸಿಗಳ ಆರೋಗ್ಯ, ಅನುಕೂಲತೆ ಮತ್ತು ಸಮೃದ್ಧಿಯು ನಮಗೆ ಅತಿಮುಖ್ಯವಾಗಿದೆ, ವಿಶೇಷವಾಗಿ ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆರೋಗ್ಯ ಮತ್ತು ಸೌಲಭ್ಯಗಳು ಬಹಳ ಕಡಿಮೆ ಗಮನವನ್ನು ಕೊಡಲಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಸಹೋದರಿಯರು ಪಕ್ಕಾ ಮನೆಗಳು, ಶೌಚಾಲಯಗಳನ್ನು ಪಡೆದುಕೊಂಡಿದ್ದಾರೆ, ಅದನ್ನು ನೀವು ಜನರು 'ಇಜ್ಜತ್ ಘರ್' ಎಂದು ಕರೆಯುತ್ತೀರಿ, ವಿದ್ಯುತ್, ಅನಿಲ, ನೀರು, ಪೋಷಣೆ, ಲಸಿಕೆ ಇತ್ಯಾದಿ ಮತ್ತು ಅವುಗಳ ಫಲಿತಾಂಶಗಳು ಈಗ ಗೋಚರಿಸುತ್ತಿವೆ. ಇತ್ತೀಚಿನ ಕೌಟುಂಬಿಕ ಆರೋಗ್ಯ ಸಮೀಕ್ಷೆಯೂ ಹಲವು ಸಕಾರಾತ್ಮಕ ಲಕ್ಷಣಗಳನ್ನು ಎತ್ತಿ ತೋರಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಉತ್ತಮ ಆರೋಗ್ಯ ಸೌಲಭ್ಯಗಳೂ ಇದರಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ. ಕಳೆದ 5-6 ವರ್ಷಗಳಲ್ಲಿ ಮಹಿಳೆಯರ ಜಮೀನು ಮತ್ತು ಮನೆಯ ಒಡೆತನ ಹೆಚ್ಚಾಗಿದೆ. ಈ ವಿಷಯದಲ್ಲಿ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿದೆ. ಅದೇ ರೀತಿ ಬ್ಯಾಂಕ್ ಖಾತೆ ಮತ್ತು ಮೊಬೈಲ್ ಫೋನ್ ಬಳಸುವ ಮಹಿಳೆಯರ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ.
ಸ್ನೇಹಿತರೇ,
ಇಂದು ನಿಮ್ಮೊಂದಿಗೆ ಮಾತನಾಡುವಾಗ, ಹಿಂದಿನ ಸರ್ಕಾರಗಳ ದ್ವಂದ್ವ ಧೋರಣೆ ಮತ್ತು ಜನರ ಬಗ್ಗೆ ಇದ್ದ ನಿರಾಸಕ್ತಿ ನನಗೆ ನೆನಪಿದೆ. ನಾನು ಉದ್ದೇಶಪೂರ್ವಕವಾಗಿ ಇದನ್ನು ಉಲ್ಲೇಖಿಸಲು ಬಯಸುತ್ತೇನೆ. ಗೋರಖ್‌ಪುರದ ರಸಗೊಬ್ಬರ ಘಟಕವು ಇಡೀ ಪ್ರದೇಶದ ರೈತರಿಗೆ ಮತ್ತು ಇಲ್ಲಿ ಉದ್ಯೋಗಕ್ಕಾಗಿ ಎಷ್ಟು ಮಹತ್ವದ್ದಾಗಿದೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಹಿಂದಿನ ಸರ್ಕಾರಗಳು ಇದನ್ನು ಪ್ರಾರಂಭಿಸಲು ಯಾವುದೇ ಆಸಕ್ತಿ ತೋರಿಸಲಿಲ್ಲ. ಗೋರಖ್‌ಪುರದಲ್ಲಿ ಎಐಐಎಂಎಸ್‌ಗಾಗಿ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿರುವುದು ಎಲ್ಲರಿಗೂ ತಿಳಿದಿತ್ತು. ಆದರೆ 2017 ರ ಮೊದಲು ಸರ್ಕಾರವನ್ನು ನಡೆಸುತ್ತಿದ್ದವರು ಏಮ್ಸ್‌ಗೆ ಭೂಮಿ ನೀಡುವ ಮುನ್ನ ಎಲ್ಲಾ ರೀತಿಯ ನೆಪಗಳನ್ನು ನೀಡಿದರು. ಗೋರಖ್‌ಪುರ ಏಮ್ಸ್‌ಗೆ ಹಿಂದಿನ ಸರ್ಕಾರವು ಬಹಳ ಇಷ್ಟವಿಲ್ಲದೆ ಮತ್ತು ಬಲವಂತದಿಂದ ಭೂಮಿ ಮಂಜೂರು ಮಾಡಿದ್ದು ನನಗೆ ನೆನಪಿದೆ.
ಸ್ನೇಹಿತರೇ,
ಇಂದಿನ ಕಾರ್ಯಕ್ರಮವೂ ಸಹ ಸಮಯ ಸಂದರ್ಭವನ್ನು ಪ್ರಶ್ನಿಸಲು ಇಷ್ಟಪಡುವ ಜನರಿಗೆ ಸೂಕ್ತವಾದ ಉತ್ತರವಾಗಿದೆ. ಅಂತಹ ಯೋಜನೆಗಳು ಪೂರ್ಣಗೊಂಡಾಗ, ವರ್ಷಗಳ ಕಠಿಣ ಪರಿಶ್ರಮವು ಅದರಲ್ಲಿ ತೊಡಗಿಸಿಕೊಂಡಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಡಬಲ್ ಎಂಜಿನ್ ಸರ್ಕಾರವು ಅಭಿವೃದ್ಧಿಯಲ್ಲಿ ತೊಡಗಿದೆ ಮತ್ತು ಕೆಲಸವು ನಿಲ್ಲಲು ಬಿಡಲಿಲ್ಲ ಎಂದು ಈ ಜನರಿಗೆ ಎಂದಿಗೂ ಅರ್ಥವಾಗುವುದಿಲ್ಲ.
ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ಲೋಹಿಯಾ ಜಿ, ಜೈ ಪ್ರಕಾಶ್ ನಾರಾಯಣ್ ಜೀ ಅವರ ಆದರ್ಶಗಳನ್ನು, ಈ ಮಹಾನ್ ವ್ಯಕ್ತಿಗಳ ಶಿಸ್ತನ್ನು ಬಹಳ ಹಿಂದೆಯೇ ಈ ಜನರು ತ್ಯಜಿಸಿದ್ದಾರೆ. ಕೆಂಪು ಟೋಪಿಗಳನ್ನು ಹೊಂದಿರುವವರು ತಮ್ಮ ಕಾರಿನ ಮೇಲೆ ಕೆಂಪು ಬೀಕನ್‌ಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ನಿಮ್ಮ ಕಷ್ಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಇಂದು ಇಡೀ ಯುಪಿಗೆ ಚೆನ್ನಾಗಿ ತಿಳಿದಿದೆ. ಕೆಂಪು ಟೋಪಿಯ ಜನರು ಹಗರಣಗಳಿಗೆ, ತಮ್ಮ ಖಜಾನೆಯನ್ನು ತುಂಬಲು, ಅಕ್ರಮ ಉದ್ಯೋಗಗಳಿಗೆ ಮತ್ತು ಮಾಫಿಯಾಗೆ ಮುಕ್ತ ನಿಯಂತ್ರಣವನ್ನು ನೀಡಲು ಅಧಿಕಾರವನ್ನು ಬಯಸುತ್ತಾರೆ. ಕೆಂಪು ಟೋಪಿಯ ಜನರು ಭಯೋತ್ಪಾದಕರಿಗೆ ಒಲವು ತೋರಿಸಲು ಮತ್ತು ಅವರನ್ನು ಜೈಲಿನಿಂದ ಹೊರತರಲು ಸರ್ಕಾರವನ್ನು ರಚಿಸಲು ಬಯಸುತ್ತಾರೆ. ಆದ್ದರಿಂದ, ನೆನಪಿಡಿ, ಕೆಂಪು ಟೋಪಿಗಳನ್ನು ಧರಿಸಿರುವವರು ಯುಪಿಗೆ ಎಚ್ಚರಿಕೆಯ ಸಂಕೇತ, ಅಂದರೆ, ಎಚ್ಚರಿಕೆಯ ಗಂಟೆಗಳು!
ಸ್ನೇಹಿತರೇ,
ಯುಪಿಯ ಕಬ್ಬು ಬೆಳೆಯುವ ರೈತರು ತಮ್ಮ ಬಾಕಿಯನ್ನು ಪಡೆಯಲು ಅನುಭವಿಸಿದ್ದ ಕಠಿಣ ಸಮಯಕ್ಕೆ ಕಾರಣವಾದ ಯೋಗಿ ಜಿಗಿಂತ ಮೊದಲು ಇದ್ದ ಹಿಂದಿನ ಸರ್ಕಾರವನ್ನು ಮರೆಯಲು ಸಾಧ್ಯವಿಲ್ಲ. ಹಣವನ್ನು ಕಂತುಗಳಲ್ಲಿ ಪಾವತಿಸಲು ತಿಂಗಳುಗಟ್ಟಲೇ ಬೇಕಾಗುತ್ತಿತ್ತು. ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಯಾವ ಯಾವ ರೀತಿಯ ಆಟಗಳನ್ನು ಆಡಲಾಗುತ್ತಿತ್ತು ಮತ್ತು ಹಗರಣಗಳು ನಡೆದವು ಎನ್ನುವುದು ಪೂರ್ವಾಂಚಲ ಮತ್ತು ಉತ್ತರ ಪ್ರದೇಶದ ಜನರಿಗೆ ಇದು ಚೆನ್ನಾಗಿ ತಿಳಿದಿದೆ.
ಸ್ನೇಹಿತರೇ,
ನಮ್ಮ ಡಬಲ್ ಎಂಜಿನ್ ಸರ್ಕಾರವು ನಿಮಗೆ ಸೇವೆ ಸಲ್ಲಿಸಲು ಮತ್ತು ನಿಮ್ಮ ಜೀವನವನ್ನು ಸುಲಭಗೊಳಿಸಲು ಬದ್ಧವಾಗಿದೆ. ನೀವು ಆನುವಂಶಿಕವಾಗಿ ಪಡೆದ ತೊಂದರೆಗಳನ್ನು ನಿಮ್ಮ ಮಕ್ಕಳಿಗೆ ವರ್ಗಾಯಿಸಲು ನಾವು ಬಯಸುವುದಿಲ್ಲ. ನಾವು ಇದನ್ನು ಬದಲಾಯಿಸಲು ಬಯಸುತ್ತೇವೆ. ಈ ಹಿಂದಿನ ಸರ್ಕಾರಗಳ ಕಾಲದಲ್ಲಿ ಸಾಕಷ್ಟು ಆಹಾರ ಧಾನ್ಯಗಳಿದ್ದರೂ ಬಡವರಿಗೆ ಆಹಾರ ಧಾನ್ಯ ಸಿಗದಂತಹ ದಿನಗಳನ್ನು ದೇಶ ಕಂಡಿದೆ. ಇಂದು ನಮ್ಮ ಸರ್ಕಾರ ಬಡವರಿಗಾಗಿ ಸರ್ಕಾರಿ ಗೋದಾಮುಗಳನ್ನು ತೆರೆದಿದೆ ಮತ್ತು ಯೋಗಿ ಜಿ ಪ್ರತಿ ಮನೆಗೆ ಆಹಾರ ಧಾನ್ಯಗಳನ್ನು ತಲುಪಿಸುವಲ್ಲಿ ನಿರತರಾಗಿದ್ದಾರೆ. ಯುಪಿಯ ಸುಮಾರು 15 ಕೋಟಿ ಜನರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇತ್ತೀಚೆಗೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಹೋಲಿಯವರೆಗೆ ವಿಸ್ತರಿಸಲಾಗಿದೆ.
ಸ್ನೇಹಿತರೇ,
ಹಿಂದೆ, ಯುಪಿಯ ಕೆಲವು ಜಿಲ್ಲೆಗಳು ವಿದ್ಯುತ್ ಪೂರೈಕೆಯ ವಿಷಯದಲ್ಲಿ ವಿಐಪಿ ಜಿಲ್ಲೆಗಳಾಗಿದ್ದವು. ಯೋಗಿ ಜಿ ಯುಪಿಯ ಪ್ರತಿ ಜಿಲ್ಲೆಯನ್ನು ವಿದ್ಯುತ್ ಒದಗಿಸುವ ಮೂಲಕ ವಿಐಪಿ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಇಂದು, ಯೋಗಿ ಜಿ ಅವರ ಸರ್ಕಾರದ ಅಡಿಯಲ್ಲಿ ಪ್ರತಿ ಗ್ರಾಮವು ಸಮಾನ ಮತ್ತು ಸಮೃದ್ಧ ವಿದ್ಯುತ್ ಪಡೆಯುತ್ತಿದೆ. ಹಿಂದಿನ ಸರ್ಕಾರಗಳು ಅಪರಾಧಿಗಳಿಗೆ ರಕ್ಷಣೆ ನೀಡುವ ಮೂಲಕ ಯುಪಿಯನ್ನು ಅಪಖ್ಯಾತಿಗೊಳಿಸಿದ್ದವು. ಇಂದು ಮಾಫಿಯಾಗಳು ಜೈಲಿನಲ್ಲಿದ್ದಾರೆ ಮತ್ತು ಹೂಡಿಕೆದಾರರು ಯುಪಿಯಲ್ಲಿ ಬಹಿರಂಗವಾಗಿ ಹೂಡಿಕೆ ಮಾಡುತ್ತಿದ್ದಾರೆ. ಅದು ಡಬಲ್ ಎಂಜಿನ್‌ನ ಡಬಲ್ ಅಭಿವೃದ್ಧಿಯಾಗಿದೆ. ಆದ್ದರಿಂದ, ಯುಪಿ ಡಬಲ್ ಎಂಜಿನ್ ಸರ್ಕಾರದ ಮೇಲೆ ನಂಬಿಕೆ ಹೊಂದಿದೆ. ನಿಮ್ಮ ಆಶೀರ್ವಾದವನ್ನು ಮುಂದೆಯೂ ನಾವು ಪಡೆಯುತ್ತೇವೆ ಎಂಬ ನಿರೀಕ್ಷೆಯೊಂದಿಗೆ ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದನೆಗಳು! ನನ್ನೊಂದಿಗೆ ಜೋರಾಗಿ ಹೇಳಿ, ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ತುಂಬಾ ಧನ್ಯವಾದಗಳು.
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅನುವಾದವಾಗಿದೆ, ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
***
(Release ID: 1780002)
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam