ಪ್ರಧಾನ ಮಂತ್ರಿಯವರ ಕಛೇರಿ
ಆರ್‌ಬಿಐನ ಎರಡು ನವೀನ ಗ್ರಾಹಕ ಕೇಂದ್ರಿತ ಉಪಕ್ರಮಗಳಿಗೆ ಪ್ರಧಾನಿ ಚಾಲನೆ
"ಪ್ರಜಾಪ್ರಭುತ್ವದ ಅತಿದೊಡ್ಡ ಶ್ರೇಷ್ಠತೆ ಎಂದರೆ ಅದು ಹೊಂದಿರುವ ಕುಂದುಕೊರತೆ ಪರಿಹಾರ ವ್ಯವಸ್ಥೆಯ ಶಕ್ತಿ. ʻಸಮಗ್ರ ಒಂಬುಡ್ಸ್‌ಮನ್ ಯೋಜನೆʼಯು ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ"
"ಮಧ್ಯಮ ವರ್ಗ, ಉದ್ಯೋಗಿಗಳು, ಸಣ್ಣ ಉದ್ಯಮಿಗಳು ಹಾಗೂ ಹಿರಿಯ ನಾಗರಿಕರು ನೇರವಾಗಿ ಮತ್ತು ಸುರಕ್ಷಿತವಾಗಿ ಸರಕಾರಿ ಭದ್ರತಾ ಪತ್ರಗಳಲ್ಲಿ ತಮ್ಮ ಸಣ್ಣ ಉಳಿತಾಯಗಳನ್ನು ತೊಡಗಿಸಲು ಅವಕಾಶ ದೊರೆಯುವುದರಿಂದ ಆರ್ಥಿಕತೆಯಲ್ಲಿ ಪ್ರತಿಯೊಬ್ಬರ ಸೇರ್ಪಡೆಗೆ ʻರೀಟೇಲ್ ಡೈರೆಕ್ಟ್ ಸ್ಕೀಮ್ʼ ಬಲ ನೀಡುತ್ತದೆ"
"ಸರಕಾರದ ಕ್ರಮಗಳಿಂದಾಗಿ, ಬ್ಯಾಂಕುಗಳ ಆಡಳಿತಸುಧಾರಿಸುತ್ತಿದೆ ಮತ್ತು ಠೇವಣಿದಾರರಲ್ಲಿ ಈ ವ್ಯವಸ್ಥೆಯ ಮೇಲಿನ ವಿಶ್ವಾಸ ಹೆಚ್ಚುತ್ತಿದೆ"
"ಆರ್‌ಬಿಐನ ನಿರ್ಧಾರಗಳು ಇತ್ತೀಚಿನ ದಿನಗಳಲ್ಲಿ ಸರಕಾರ ಕೈಗೊಂಡ ದೊಡ್ಡ ನಿರ್ಧಾರಗಳ ಪರಿಣಾಮವನ್ನು ಹೆಚ್ಚಿಸಲು ಸಹಾಯ ಮಾಡಿವೆ"
"6-7 ವರ್ಷಗಳ ಹಿಂದಿನವರೆಗೆ, ಬ್ಯಾಂಕಿಂಗ್, ಪಿಂಚಣಿ ಮತ್ತು ವಿಮೆ, ಭಾರತದಲ್ಲಿ ಕೆಲವರಿಗಷ್ಟೇ ಮೀಸಲಾದ ಸೌಲಭ್ಯವಾಗಿತ್ತು"
"ಕೇವಲ 7 ವರ್ಷಗಳಲ್ಲಿ, ಡಿಜಿಟಲ್ ವಹಿವಾಟಿನ ವಿಚಾರದಲ್ಲಿ ಭಾರತವು 19 ಪಟ್ಟು ಹೆಚ್ಚಳ ಕಂಡಿದೆ. ಇಂದು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ದೇಶದ ಯಾವುದೇ ಸ್ಥಳದಲ್ಲಿ ವಾರದ 7 ದಿನಗಳು ದಿನದ 24 ಗಂಟೆ, ಮತ್ತು ವರ್ಷದ 12 ತಿಂಗಳೂ ಕಾರ್ಯನಿರ್ವಹಿಸುತ್ತಿದೆ"
"ನ
Posted On:
12 NOV 2021 11:56AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ(ಆರ್‌ಬಿಐ) ಎರಡು ನವೀನ ಗ್ರಾಹಕ ಕೇಂದ್ರಿತ ಉಪಕ್ರಮಗಳಾದ ʻರೀಟೇಲ್ ಡೈರೆಕ್ಟ್ ಸ್ಕೀಮ್ʼ ಮತ್ತು ʻರಿಸರ್ವ್ ಬ್ಯಾಂಕ್ – ಸಮಗ್ರ ಒಂಬುಡ್ಸ್‌ಮನ್ ಸ್ಕೀಮ್ʼಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಇಲ್ಲಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾಂಕ್ರಾಮಿಕ ರೋಗದ ಸಮಯದಲ್ಲಿ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐನಂತಹ ಸಂಸ್ಥೆಗಳು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು. "ಅಮೃತ ಮಹೋತ್ಸವದ ಈ ಸಮಯದಲ್ಲಿ, 21ನೇ ಶತಮಾನದ ಈ ದಶಕವು ದೇಶದ ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್‌ಬಿಐ ಪಾತ್ರವೂ ಬಹಳ ದೊಡ್ಡದು. ಆರ್‌ಬಿಐ ತಂಡವು ದೇಶದ ನಿರೀಕ್ಷೆಗಳಿಗೆ ತಕ್ಕಂತೆ ನಡೆಯಲಿದೆ ಎಂಬ ವಿಶ್ವಾಸ ನನಗಿದೆ", ಎಂದು ಪ್ರಧಾನಿ ಹೇಳಿದರು.
ಇಂದು ಚಾಲನೆ ನೀಡಲಾದ ಎರಡು ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ ಮತ್ತು ಬಂಡವಾಳ ಮಾರುಕಟ್ಟೆಗಳ ಪ್ರವೇಶವನ್ನು ಸುಲಭಗೊಳಿಸುತ್ತವೆ, ಜೊತೆಗೆ ಇವು ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತವಾಗಿವೆ ಎಂದು ಹೇಳಿದರು. ʻರೀಟೇಲ್ ಡೈರೆಕ್ಟ್ ಸ್ಕೀಮ್ʼ ದೇಶದ ಸಣ್ಣ ಹೂಡಿಕೆದಾರರಿಗೆ ಸರಕಾರಿ ಭದ್ರತಾಪತ್ರಗಳಲ್ಲಿ ಸರಳ ಮತ್ತು ಸುರಕ್ಷಿತ ಹೂಡಿಕೆಯ ಮಾಧ್ಯಮವನ್ನು ಒದಗಿಸುತ್ತದೆ. ಅದೇ ರೀತಿ, ಇಂದು ʻಸಮಗ್ರ ಒಂಬುಡ್ಸ್‌ಮನ್ ಯೋಜನೆʼಯೊಂದಿಗೆ ಬ್ಯಾಂಕಿಂಗ್ ವಲಯದಲ್ಲಿ ʻಒಂದು ರಾಷ್ಟ್ರ, ಒಂದು ಒಂಬುಡ್ಸ್‌ಮನ್ ವ್ಯವಸ್ಥೆʼ ರೂಪುಗೊಂಡಿದೆ ಎಂದು ಅವರು ಹೇಳಿದರು.
ಈ ಯೋಜನೆಗಳ ನಾಗರಿಕ ಕೇಂದ್ರಿತ ಸ್ವರೂಪವನ್ನು ಪ್ರಧಾನಿ ಒತ್ತಿ ಹೇಳಿದರು. ಕುಂದುಕೊರತೆ ಪರಿಹಾರ ವ್ಯವಸ್ಥೆ ಶಕ್ತಿಯು ಯಾವುದೇ ಪ್ರಜಾಪ್ರಭುತ್ವದ ಅತಿದೊಡ್ಡ ಶ್ರೇಷ್ಠತೆಯಾಗಿದೆ ಎಂದು ಅವರು ಹೇಳಿದರು. ʻಸಮಗ್ರ ಒಂಬುಡ್ಸ್‌ಮನ್ ಯೋಜನೆʼಯು ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ. ಅದೇ ರೀತಿ, ʻರೀಟೇಲ್ ಡೈರೆಕ್ಟ್ ಸ್ಕೀಮ್ʼ ಯೋಜನೆಯು ಮಧ್ಯಮ ವರ್ಗ, ಉದ್ಯೋಗಿಗಳು, ಸಣ್ಣ ಉದ್ಯಮಿಗಳು ಮತ್ತು ಹಿರಿಯ ನಾಗರಿಕರನ್ನು ನೇರವಾಗಿ ಮತ್ತು ಸುರಕ್ಷಿತವಾಗಿ ಸರಕಾರಿ ಭದ್ರತೆಗಳಲ್ಲಿ ತಮ್ಮ ಸಣ್ಣ ಉಳಿತಾಯಗಳನ್ನು ತೊಡಗಿಸಲು ಅವಕಾಶ ನೀಡುತ್ತದೆ. ಆ ಮೂಲಕ ಆರ್ಥಿಕತೆಯಲ್ಲಿ ಪ್ರತಿಯೊಬ್ಬರ ಸೇರ್ಪಡೆಯನ್ನು ಕಾಯ್ದುಕೊಳ್ಳುತ್ತದೆ. ಸರಕಾರಿ ಭದ್ರತಾ ಪತ್ರಗಳು ಖಾತರಿ ಒಪ್ಪಂದದ ನಿಬಂಧನೆಯನ್ನು ಹೊಂದಿರುವುದರಿಂದ, ಇದು ಸಣ್ಣ ಹೂಡಿಕೆದಾರರಿಗೆ ಸುರಕ್ಷತೆಯ ಭರವಸೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ಕಳೆದ 7 ವರ್ಷಗಳಲ್ಲಿ ವಸೂಲಾಗದ ಸಾಲಗಳನ್ನು (ಎನ್‌ಪಿಎ) ಪಾರದರ್ಶಕತೆಯಿಂದ ಗುರುತಿಸಲಾಗಿದ್ದು, ಪರಿಹಾರ ಮತ್ತು ಚೇತರಿಕೆಯತ್ತ ಹೆಚ್ಚು ಗಮನ ಹರಿಸಲಾಯಿತು. ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳವನ್ನು ಮರುಪೂರಣಗೊಳಿಸಲಾಗಿದೆ. ಹಣಕಾಸು ವ್ಯವಸ್ಥೆ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದರ ನಂತರ ಮತ್ತೊಂದರಂತೆ ಹಲವು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಬ್ಯಾಂಕಿಂಗ್ ವಲಯವನ್ನು ಮತ್ತಷ್ಟು ಬಲಪಡಿಸಲು ಸಹಕಾರಿ ಬ್ಯಾಂಕುಗಳನ್ನು ಸಹ ಆರ್‌ಬಿಐ ವ್ಯಾಪ್ತಿಗೆ ತರಲಾಗಿದೆ ಎಂದು ಅವರು ಹೇಳಿದರು. ಈ ಕಾರಣದಿಂದಾಗಿ ಈ ಬ್ಯಾಂಕುಗಳ ಆಡಳಿತವೂ ಸುಧಾರಿಸುತ್ತಿದೆ ಮತ್ತು ಠೇವಣಿದಾರರಲ್ಲಿ ಈ ವ್ಯವಸ್ಥೆಯ ಮೇಲಿನ ನಂಬಿಕೆ ಬಲಗೊಳ್ಳುತ್ತಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಹಣಕಾಸು ವಲಯದಲ್ಲಿ ಜನರ ಸೇರ್ಪಡೆ ಹೆಚ್ಚಳದಿಂದ ತಾಂತ್ರಿಕ ಸಂಯೋಜನೆವರೆಗೆ ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹತ್ತಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. "ಕೋವಿಡ್ ಸಂಕಷ್ಟದ ಸಮಯದಲ್ಲಿ ನಾವು ಈ ಸುಧಾರಣೆಗಳ ಶಕ್ತಿಯನ್ನು ನೋಡಿದ್ದೇವೆ. ಆರ್‌ಬಿಐನ ಕ್ರಮಗಳು ಇತ್ತೀಚಿನ ದಿನಗಳಲ್ಲಿ ಸರಕಾರ ಕೈಗೊಂಡ ದೊಡ್ಡ ನಿರ್ಧಾರಗಳ ಪರಿಣಾಮವನ್ನು ಹೆಚ್ಚಿಸಲು ಸಹಾಯ ಮಾಡಿವೆ", ಎಂದು ಅವರು ಹೇಳಿದರು.
6-7 ವರ್ಷಗಳ ಹಿಂದಿನವರೆಗೆ ಬ್ಯಾಂಕಿಂಗ್, ಪಿಂಚಣಿ ಮತ್ತು ವಿಮೆ ಎಂಬುವು ಭಾರತದಲ್ಲಿ ಕೆಲವರಿಗಷ್ಟೇ ಮೀಸಲಾಗಿದ್ದವು. ಈ ಎಲ್ಲ ಸೌಲಭ್ಯಗಳು ದೇಶದ ಸಾಮಾನ್ಯ ನಾಗರಿಕರಿಗೆ, ಬಡ ಕುಟುಂಬಗಳಿಗೆ, ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ-ಉದ್ಯಮಿಗಳಿಗೆ, ಮಹಿಳೆಯರಿಗೆ, ದಲಿತರು-ಅವಕಾಶ ವಂಚಿತರು-ಹಿಂದುಳಿದವರು ಮುಂತಾದವರಿಗೆ ಲಭ್ಯವಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಈ ಹಿಂದಿನ ವ್ಯವಸ್ಥೆಯನ್ನು ಟೀಕಿಸಿದ ಪ್ರಧಾನಿ, ಈ ಸೌಲಭ್ಯಗಳನ್ನು ಬಡವರ ಬಳಿಗೆ ಕೊಂಡೊಯ್ಯುವ ಜವಾಬ್ದಾರಿ ಹೊಂದಿರುವವರು ಎಂದಿಗೂ ಅದರ ಬಗ್ಗೆ ಗಮನ ಹರಿಸಲಿಲ್ಲ. ಅಷ್ಟೇ ಅಲ್ಲ, ಇಂತಹ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡದಿರಲು ನೆಪಗಳನ್ನು ಮುಂದಿಡಲಾಯಿತು. ಬ್ಯಾಂಕ್ ಶಾಖೆ ಇಲ್ಲದಿರುವುದು, ಸಿಬ್ಬಂದಿ ಕೊರತೆ, ಇಂಟರ್ನೆಟ್ ಸಂಪರ್ಕ ಸಿಗದಿರುವುದು, ಜಾಗೃತಿ ಕೊರತೆ...ಹೀಗೆ ಹತ್ತಾರು ವಾದಗಳನ್ನು ಮಾಡಲಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಡಿಜಿಟಲ್ ವಹಿವಾಟಿನ ವಿಷಯದಲ್ಲಿ ʻಯುಪಿಐʼ ಭಾರತವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ವಿಶ್ವದ ಅಗ್ರಗಣ್ಯ ದೇಶವನ್ನಾಗಿ ಮಾಡಿದೆ ಎಂದು ಪ್ರಧಾನಿ ಹೇಳಿದರು. ಕೇವಲ 7 ವರ್ಷಗಳಲ್ಲಿ, ಡಿಜಿಟಲ್ ವಹಿವಾಟಿನ ವಿಷಯದಲ್ಲಿ ಭಾರತವು 19 ಪಟ್ಟು ಜಿಗಿತ ಕಂಡಿದೆ. ಇಂದು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ದೇಶದ ಯಾವುದೇ ಸ್ಥಳದಲ್ಲಿ ದಿನದ 24 ಗಂಟೆ, ವಾರದ 7 ದಿನ ಮತ್ತು ವರ್ಷದ 12 ತಿಂಗಳು ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ನಾವು ದೇಶದ ನಾಗರಿಕರ ಅಗತ್ಯಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ಹೂಡಿಕೆದಾರರ ನಂಬಿಕೆಯನ್ನು ಬಲಪಡಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. "ಸೂಕ್ಷ್ಮ ಮತ್ತು ಹೂಡಿಕೆದಾರ-ಸ್ನೇಹಿ ತಾಣವಾಗಿ ಭಾರತದ ಹೊಸ ಹೆಗ್ಗುರುತನ್ನು ಬಲಪಡಿಸುವುದನ್ನು ಆರ್‌ಬಿಐ ಮುಂದುವರಿಸುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ವಿಶ್ವಾಸ ವ್ಯಕ್ತಪಡಿಸುತ್ತಾ ಪ್ರಧಾನಿಯವರು ಮಾತು ಮುಗಿಸಿದರು.
***
(Release ID: 1771161)
Visitor Counter : 317
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam