ಪ್ರಧಾನ ಮಂತ್ರಿಯವರ ಕಛೇರಿ
ಕೇದಾರನಾಥದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ
Posted On:
05 NOV 2021 5:42PM by PIB Bengaluru
ಜೈ ಬಾಬಾ ಕೇದಾರ್!
ಜೈ ಬಾಬಾ ಕೇದಾರ್!
ವೇದಿಕೆಯ ಮೇಲೆ ಹಾಜರಿರುವ ಎಲ್ಲಾ ಗಣ್ಯರಿಗೆ ನನ್ನ ಗೌರವಪೂರ್ವಕವಾದ ನಮಸ್ಕಾರಗಳು ಮತ್ತು ಈ ಪವಿತ್ರ ಭೂಮಿಗೆ ಈ ದಿವ್ಯ ತೇಜಸ್ಸಿನ ಕಾರ್ಯಕ್ರಮಕ್ಕಾಗಿ ನಂಬಿಕೆ, ವಿಶ್ವಾಸಗಳಿಂದ ಇಲ್ಲಿಗೆ ತಲುಪಿ ಕಾರ್ಯಕ್ರಮವನ್ನು ಶ್ರೀಮಂತಗೊಳಿಸಿರುವ ವಿಶ್ವಾಸಿಗಳಿಗೂ ನಮಸ್ಕಾರಗಳು!.
ಇಂದು ಪ್ರಮುಖ ವ್ಯಕ್ತಿಗಳು, ಪರಮಪೂಜ್ಯ ಶಂಕರಾಚಾರ್ಯ ಸಂಪ್ರದಾಯಕ್ಕೆ ಸೇರಿದ ಪೂಜ್ಯ ಸಂತರು, ಹಿರಿಯ ಯತಿಗಳು ಮತ್ತು ಎಲ್ಲ ಮಠಗಳಿಂದ, 12 ಜ್ಯೋತಿಲಿಂಗಗಳಿಂದ, ಹಲವು ಪಗೋಡಾಗಳಿಂದ, ದೇಶಾದ್ಯಂತದಿಂದ ಶಕ್ತಿಯ ದೈವಿಕ ನೆಲೆಗಳಿಂದ ಬಂದಿರುವ ಅನೇಕ ಭಕ್ತರು ಭೌತಿಕವಾಗಿ ಮತ್ತು ಆಧ್ಯಾತ್ಮಿಕ ರೀತಿಯಲ್ಲಿ ಕೇಂದಾರನಾಥದ ಪವಿತ್ರ ಭೂಮಿಯಲ್ಲಿ ವರ್ಚುವಲ್ ರೀತಿಯಲ್ಲಿ ನಮ್ಮನ್ನು ಹರಸುತ್ತಿರುವಿರಿ. ಆದಿ ಶಂಕರಾಚಾರ್ಯರ ಸಮಾಧಿಯ ಮರುಸ್ಥಾಪನೆಗೂ ನೀವು ಸಾಕ್ಷಿಯಾಗುತ್ತಿರುವಿರಿ. ಭಾರತೀಯ ಅಧ್ಯಾತ್ಮಿಕ ಸಮೃದ್ಧಿಯ ಮತ್ತು ವಿಸ್ತರಣೆಯ ಬಹಳ ಅಲೌಕಿಕವಾದಂತಹ ನೋಟ ಇದು. ನಮ್ಮ ದೇಶ ಎಷ್ಟು ವಿಸ್ತಾರವಾದುದೆಂದರೆ ಇಲ್ಲಿ ಬಹಳ ಗಮನಾರ್ಹವಾದ ಸಂತ ಪರಂಪರೆ ಇದೆ, ಇಂದಿಗೂ ಕೂಡಾ ಬಹಳ ದೊಡ್ಡ ತಪಸ್ವಿಗಳು ಭಾರತದ ಪ್ರತೀ ಮೂಲೆಗಳಲ್ಲಿಯೂ ಆಧ್ಯಾತ್ಮಿಕ ಜಾಗೃತಿಯನ್ನು, ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ. ಅಂತಹ ಅನೇಕ ಸಂತರು ಇಲ್ಲಿದ್ದಾರೆ ಮತ್ತು ದೇಶದ ಪ್ರತೀ ಭಾಗಗಳಿಂದಲೂ ಇದರ ಜೊತೆ ಸೇರಿಕೊಂಡಿದ್ದಾರೆ, ಅವರನ್ನು ಹೆಸರು ಹಿಡಿದು ಕರೆದರೆ ಒಂದು ವಾರದ ಕಾಲಾವಧಿ ಕೂಡಾ ಸಾಲದು. ಮತ್ತು ನಾನು ಯಾರದಾದರೂ ಹೆಸರು ಹೇಳಲು ಮರೆತರೆ, ನಾನು ನನ್ನ ಉಳಿದ ಜೀವನದುದ್ದಕ್ಕೂ ಪಾಪದ ಹೊರೆಯನ್ನು ಹೊತ್ತುಕೊಳ್ಳಬೇಕಾದೀತು. ನನಗೆ ಅಶಯ ಇದ್ದರೂ ಈಗ ನಾನಿಲ್ಲಿ ಎಲ್ಲರ ಹೆಸರನ್ನು ಹೇಳಲು ಸಮರ್ಥನಾಗಿಲ್ಲ. ಆದರೆ ನಾನವರನ್ನು ಗೌರವಯುತವಾಗಿ ಸ್ವಾಗತಿಸುತ್ತೇನೆ. ಈ ಕಾರ್ಯಕ್ರಮಕ್ಕೆ ಅವರು ಎಲ್ಲೆಲ್ಲಿಂದ ಸೇರಿದ್ದಾರೋ ಅವರ ಆಶೀರ್ವಾದ ನಮ್ಮ ಅತಿ ದೊಡ್ಡ ಶಕ್ತಿ. ಆವರ ಆಶೀರ್ವಾದಗಳು ನಮಗೆ ಹಲವು ಪವಿತ್ರ ಕೆಲಸಗಳನ್ನು ಮಾಡಲು ಶಕ್ತಿ ನೀಡುತ್ತವೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ನಮ್ಮ ದೇಶದಲ್ಲಿ ಹೀಗೆ ಹೇಳಲಾಗುತ್ತದೆ:
आवाहनम न जानामि
न जानामि विसर्जनम,
पूजाम चैव ना
जानामि क्षमस्व परमेश्वर:!
ಅಂದರೆ “ಓ ದೇವನೇ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಾನೇನಾದರೂ ತಪ್ಪು ಮಾಡಿದ್ದರೆ ನನ್ನನ್ನು ಕ್ಷಮಿಸು”
ಆದುದರಿಂದ, ನಾನು ವಿನೀತನಾಗಿ ಇಂತಹ ಎಲ್ಲಾ ವ್ಯಕ್ತಿತ್ವಗಳಲ್ಲಿ ಕ್ಷಮೆ ಕೇಳುತ್ತೇನೆ ಮತ್ತು ಅವರಿಗೆ ನಮಸ್ಕರಿಸುತ್ತೇನೆ ಮತ್ತು ಈ ಪುಣ್ಯಕರ ಸಂದರ್ಭದಲ್ಲಿ.. ಶಂಕರಾಚಾರ್ಯದಿಂದ, ಸಂತರಿಂದ ಮತ್ತು ದೇಶಾದ್ಯಂತದ ಶ್ರೇಷ್ಟ ಸಂತ ಪರಂಪರೆಯ ಎಲ್ಲಾ ಅನುಯಾಯಿಗಳಿಂದ ಆಶೀರ್ವಾದಗಳನ್ನು ಕೋರುತ್ತೇನೆ.
ಸ್ನೇಹಿತರೇ,
ನಮ್ಮ ಉಪನಿಷದ್ ಗಳಲ್ಲಿ ಆದಿ ಶಂಕರಾಚಾರ್ಯರ ರಚನೆಗಳು “ಇದಲ್ಲ, ಅದೂ ಅಲ್ಲ” ‘नेति-नेति’ ಎಂಬುದರ ಬಗ್ಗೆ ವಿವರವಾದ ವಿವರಣೆಯನ್ನು ಒಳಗೊಂಡಿವೆ. ರಾಮಚರಿತಮಾನಸದಲ್ಲಿ ಕೂಡಾ ವಿವಿಧ ರೀತಿಯಲ್ಲಿ ಇದನ್ನು ಪುನರುಚ್ಚರಿಸಲಾಗಿದೆ. ರಾಮಚರಿತಮಾನಸದಲ್ಲಿ ಇದನ್ನು ಹೀಗೆ ಹೇಳಲಾಗಿದೆ:
‘अबिगत अकथ अपार, अबिगत अकथ अपार,
नेति-नेति नित निगम कह’ नेति-नेति नित निगम कह’
ಕೆಲವು ಅಭಿವ್ಯಕ್ತಿಗಳು ಎಷ್ಟೊಂದು ಅಲೌಕಿಕವಾಗಿವೆ ಎಂದರೆ ಅವುಗಳು ಶಬ್ದಗಳಲ್ಲಿ ವಿವರಿಸಲಾಗದಷ್ಟು ಅನಂತವಾಗಿವೆ. ನಾನು ಬಾಬಾ ಕೇದಾರನಾಥ ದೇವರ ಆಶ್ರಯಕ್ಕೆ ಬಂದಾಗ ನಾನು ಇಲ್ಲಿಯ ಅಣು ಅಣುವಿನೊಂದಿಗೂ ಸೇರಿಕೊಳ್ಳುತ್ತೇನೆ. ಗಾಳಿ, ಈ ಹಿಮಾಲಯದ ಶಿಖರಗಳು,ಬಾಬಾ ಕೇದಾರನ ಸಂಗ ವಿವರಿಸಲಾಗದಂತಹ ರೀತಿಯ ತರಂಗಗಳತ್ತ ಕಂಪನಗಳತ್ತ ಸೆಳೆದುಕೊಳ್ಳುತ್ತದೆ. ನಿನ್ನೆ ನಾನು ಪವಿತ್ರ ಹಬ್ಬ ದೀಪಾವಳಿಯ ಅಂಗವಾಗಿ ಗಡಿ ಭಾಗದಲ್ಲಿ ಸೈನಿಕರೊಂದಿಗೆ ಇದ್ದೆ. ಇಂದು ನಾನು ಸೈನಿಕರ ಭೂಮಿಯಲ್ಲಿದ್ದೇನೆ. ನಾನು ನನ್ನ ದೇಶದ ವೀರ ಸೈನಿಕರ ಜೊತೆ ಹಬ್ಬಗಳ ಸಂತೋಷವನ್ನು ಹಂಚಿಕೊಂಡಿದ್ದೇನೆ.ನಿನ್ನೆ ನಾನು ಸೇನಾ ಸಿಬ್ಬಂದಿಗಳ ಜೊತೆ ಪ್ರೀತಿ, ಗೌರವ ಮತ್ತು 130 ಕೋಟಿ ದೇಶವಾಸಿಗಳ ಆಶೀರ್ವಾದದ ಸಂದೇಶವನ್ನು ಕೊಂಡೊಯ್ದಿದ್ದೆ. ಮತ್ತು ಇಂದು ಗೋವರ್ಧನ ಪೂಜಾ ಹಾಗು ಗುಜರಾತಿನ ಜನತೆಯ ಹೊಸ ವರ್ಷದ ಸಂದರ್ಭದಲ್ಲಿ ನನಗೆ ಕೇದಾರನಾಥಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ಬಾಬಾ ಕೇದಾರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ನಾನು ಕೆಲಕಾಲವನ್ನು ಆದಿ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಕಳೆದೆ. ಆ ಸಂದರ್ಭ ದೈವಿಕ ಅನುಭವದ ಸಂದರ್ಭವಾಗಿತ್ತು. ಪ್ರತಿಮೆಯ ಎದುರು ಕುಳಿತಾಗ ಆದಿ ಶಂಕರರ ಕಣ್ಣಿನಿಂದ ಬೆಳಕಿನ ಕಿರಣ ತೋರಿ ಬರುತ್ತಿತ್ತು, ಅದು ಬೃಹತ್ ಭಾರತದ ನಂಬಿಕೆಯನ್ನು ಜಾಗೃತಗೊಳಿಸುವಂತಿತ್ತು. ಶಂಕರಾಚಾರ್ಯರ ಸಮಾಧಿ ಮತ್ತೊಮ್ಮೆ ಹೆಚ್ಚು ದೈವಿಕ ರೂಪದಲ್ಲಿ ನಮ್ಮೊಂದಿಗೆ ಇದೆ. ಇದರೊಂದಿಗೆ ಸರಸ್ವತಿ ನದಿ ದಂಡೆಯಲ್ಲಿ ಘಾಟ್ ಕೂಡಾ ನಿರ್ಮಾಣವಾಗುತ್ತಿದೆ. ಮತ್ತು ಮಂದಾಕಿನಿ ನದಿ ಮೇಲಿನ ಸೇತುವೆ ಗರುನ್ಚಟ್ಟಿಯನ್ನು ರಸ್ತೆ ಮೂಲಕ ಸಂಪರ್ಕಿಸಲು ಸಾಧ್ಯ ಮಾಡಿದೆ. ಗರುನ್ಚಟ್ಟಿಯ ಜೊತೆ ನನಗೆ ವಿಶೇಷ ಸಂಬಂಧವಿದೆ. ನಾನು ಒಂದಿಬ್ಬರು ಹಳೆಯ ಜನರನ್ನು ಗುರುತಿಸಬಲ್ಲೆ ಮತ್ತು ನಿಮ್ಮನ್ನು ಭೇಟಿಯಾಗುತ್ತಿರುವುದು ನನಗೆ ಸಂತೋಷ ತಂದಿದೆ. ಹಳೆಯ ಜನರು ಈಗ ಇಲ್ಲ. ಕೆಲವರು ಈ ಸ್ಥಳ ಬಿಟ್ಟು ಹೋಗಿದ್ದಾರೆ, ಇನ್ನು ಕೆಲವರು ಈ ಲೋಕ ಬಿಟ್ಟು ಹೋಗಿದ್ದಾರೆ. ನೆರೆ ಹಾವಳಿಯಿಂದ ರಕ್ಷಣೆ ಪಡೆಯಲು ಮಂದಾಕಿನಿ ನದಿದಂಡೆಗೆ ನಿರ್ಮಾಣ ಮಾಡಲಾಗಿರುವ ಗೋಡೆ ಭಕ್ತಾದಿಗಳ ಪ್ರಯಾಣವನ್ನು ಹೆಚ್ಚು ಸುರಕ್ಷಿತವಾಗಿ ಮಾಡಲಿದೆ. ಯಾತ್ರಾರ್ಥಿಗಳಿಗಾಗಿ ಮತ್ತು ಅರ್ಚಕರಿಗಾಗಿ ನಿರ್ಮಾಣ ಮಾಡಲಾದ ಹೊಸ ಮನೆಗಳು ಎಲ್ಲಾ ಋತುಗಳಲ್ಲೂ ಅವರಿಗೆ ಅನುಕೂಲತೆಗಳನ್ನು ಮತ್ತು ಭಗವಾನ್ ಕೇದಾರನಾಥ ದೇವರಿಗೆ ಸೇವೆ ಸಲ್ಲಿಸುವುದನ್ನು ಸುಲಭ ಮಾಡಲಿವೆ. ಈ ಮೊದಲು ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪ್ರವಾಸಿಗರು ಇಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದುದನ್ನು ನಾನು ನೋಡಿದ್ದೇನೆ. ಹಲವಾರು ಜನರು ಇಲ್ಲಿ ಅರ್ಚಕರ ಒಂದು ಕೋಣೆಯೊಳಗೆ ಕಾಲಹರಣ ಮಾಡಬೇಕಾಗುತ್ತಿತ್ತು. ನಮ್ಮ ಅರ್ಚಕರು ಶೀತದಿಂದ, ಚಳಿಯಿಂದ ನಡುಗುತ್ತಿರುವ ಪರಿಸ್ಥಿತಿಯೂ ಇತ್ತು. ಆದರೆ ಅವರು ಅತಿಥಿಗಳ ಬಗ್ಗೆ ಕಳವಳಪಡುತ್ತಿದ್ದರು ಮತ್ತು ಕಾಳಜಿ ವಹಿಸುತ್ತಿದ್ದರು. ನಾನಿದನ್ನೆಲ್ಲ ನೋಡಿದ್ದೇನೆ. ಅವರ ಭಕ್ತಿಯನ್ನು, ಅರ್ಪಣಾಭಾವವನ್ನು ನಾನು ನೋಡಿದ್ದೇನೆ. ಈಗ ಅವರು ಈ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.
ಸ್ನೇಹಿತರೇ,
ಇಂದು ಪ್ರಯಾಣಿಕ ಸವಲತ್ತುಗಳು ಮತ್ತು ಸೇವೆಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳಿಗೆ ಇಲ್ಲಿ ಶಿಲಾನ್ಯಾಸವನ್ನು ಮಾಡಲಾಗಿದೆ. ಪ್ರಯಾಣಿಕ ಸವಲತ್ತುಗಳ ಕೇಂದ್ರ, ಪ್ರವಾಸಿಗರಿಗಾಗಿ ಮತ್ತು ಸ್ಥಳೀಯರಿಗಾಗಿ ಆಧುನಿಕ ಆಸ್ಪತ್ರೆ, ಮಳೆಯಿಂದ ರಕ್ಷಣೆ ಪಡೆಯುವ ತಂಗುದಾಣಗಳು ಇತ್ಯಾದಿ ಸೌಲಭ್ಯಗಳು ಭಕ್ತಾದಿಗಳಿಗೆ ಸೇವಾ ಮಾಧ್ಯಮವಾಗಿ ಲಭ್ಯವಾಗಲಿವೆ ಮತ್ತು ಅವರ ಯಾತ್ರೆಯು ಇನ್ನು ಯಾವುದೇ ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ. ಪ್ರವಾಸಿಗರು ಜೈ ಭೋಲೆಯ ಪಾದಗಳ ಬಳಿ ಅಹ್ಲಾದಕರ ಅನುಭವವನ್ನು ಪಡೆಯಬಹುದು.
ಸ್ನೇಹಿತರೇ,
ವರ್ಷಗಳ ಹಿಂದೆ ಇಲ್ಲಿ ಸಂಭವಿಸಿದ ಅಪಾರ ಪ್ರಮಾಣದ ಹಾನಿ ಊಹೆಗೆ ನಿಲುಕದ್ದು. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ. ಆದರೆ ನಾನು ನನ್ನನ್ನು ನಿಯಂತ್ರಿಸಿಕೊಳ್ಳದಾದೆ. ನಾನಿಲ್ಲಿಗೆ ತಕ್ಷಣವೇ ಧಾವಿಸಿ ಬಂದೆ. ಹಾನಿಯನ್ನು ಮತ್ತು ನೋವನ್ನು ನಾನು ನನ್ನ ಕಣ್ಣಿನಿಂದ ನೋಡಿದೆ. ಇಲ್ಲಿಗೆ ಬರುತ್ತಿದ್ದ ಜನರಿಗೆ ಕೇದಾರಧಾಮವನ್ನು, ಈ ಕೇದಾರಪುರಿಯನ್ನು ಮರುನಿರ್ಮಾಣ ಮಾಡಲಾಗುವುದೇ ಎಂಬ ಬಗ್ಗೆ ಸಂಶಯವಿತ್ತು. ನನ್ನ ಅಂತರಾತ್ಮ ಸದಾ ಹೇಳುತ್ತಿತ್ತು ಇದು ಹಿಂದೆಂದಿಗಿಂತಲೂ ಹೆಚ್ಚು ಹೆಮ್ಮೆಯೊಂದಿಗೆ ಎದ್ದು ನಿಲ್ಲುತ್ತದೆ ಎಂಬುದಾಗಿ. ಬಾಬಾ ಕೇದಾರ್, ಆದಿ ಶಂಕರರ “ಸಾಧನಾ” ಮತ್ತು ಸಂತರ ತಪಸ್ಸು ಇದಕ್ಕೆ ಕಾರಣ ಎಂಬುದು ನನ್ನ ನಂಬಿಕೆ. ಇದೇ ವೇಳೆ ನನಗೆ ಭೂಕಂಪದ ಬಳಿಕ ಕಚ್ ಪ್ರದೇಶವನ್ನು ಮರು ನಿರ್ಮಾಣ ಮಾಡಿದ ಅನುಭವ ಇತ್ತು. ಆದುದರಿಂದ ನನಗೆ ವಿಶ್ವಾಸವಿತ್ತು, ಮತ್ತು ಆ ನಂಬಿಕೆ, ವಿಶ್ವಾಸ ನಿಜವಾಗುವುದನ್ನು ನನ್ನ ಕಣ್ಣುಗಳಿಂದಲೇ ನೋಡುವ ಭಾಗ್ಯ ನನ್ನ ಬದುಕಿನಲ್ಲಿ ಲಭಿಸಿರುವುದಕ್ಕಿಂತ ದೊಡ್ಡ ತೃಪ್ತಿ ಬೇರಾವುದು ಇದ್ದೀತು. ಇದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಬಾಬಾ ಕೇದಾರ್, ಸಂತರ ಆಶೀರ್ವಾದಗಳು, ಈ ಪವಿತ್ರ ಭೂಮಿ, ಒಂದೊಮ್ಮೆ ನನ್ನನ್ನು ಪೋಷಿಸಿದ ಮಣ್ಣಿನ ಗಾಳಿ, ಮತ್ತು ಸೇವೆ ಮಾಡುವ ಅವಕಾಶ ದೊರೆಯುವುದಕ್ಕಿಂತ ದೊಡ್ಡದಾದ ಪುಣ್ಯ ಜೀವನದಲ್ಲಿ ಬೇರಾವುದು ಇದ್ದೀತು. ಈ ಪ್ರಾಚೀನ ನೆಲದಲ್ಲಿ ಆಧುನಿಕತೆ ಮತ್ತು ಅಲೌಕಿಕತೆಯ ಸಂಯೋಗ ಮತ್ತು ಈ ಅಭಿವೃದ್ಧಿ ಕಾರ್ಯಗಳು ಭಗವಾನ್ ಶಂಕರರ ಸಹಜ ಕೃಪೆಯ ಫಲ. ದೇವರಾಗಲೀ ಅಥವಾ ಮಾನವರಾಗಲೀ ಇದರ ಇದಕ್ಕೆ ಕಾರಣಕರ್ತರು ತಾವೆಂದು ಹೇಳಲಾಗದು. ಬರೇ ದೈವಕೃಪೆಯಿಂದಷ್ಟೇ ಇದು ಸಾಧ್ಯ. ನಾನು ಉತ್ತರಾಖಂಡ ಸರಕಾರ, ನಮ್ಮ ಉತ್ಸಾಹಿ ಮತು ಯುವ ಮುಖ್ಯಮಂತ್ರಿ ಧಾಮೀ ಜೀ ಮತ್ತು ಈ ಕನಸನ್ನು ಈಡೇರಿಸುವಲ್ಲಿ ತಮ್ಮ ಕಠಿಣ ಶ್ರಮವನ್ನು ವಿನಿಯೋಗಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಿಮಪಾತದ ನಡುವೆ ಇಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ. ಮತ್ತು ಇಲ್ಲಿ ಕಾಲಾವಕಾಶವೂ ಬಹಳ ಕಡಿಮೆ ಇತ್ತು. ಈ ಪರ್ವತ ಪ್ರದೇಶಗಳಿಗೆ ಸೇರಿದವರಲ್ಲದ ಮತ್ತು ಹೊರಗಿನಿಂದ ಬಂದ ನಮ್ಮ ಕಾರ್ಮಿಕ ಸಹೋದರರು ಮತ್ತು ಸಹೋದರಿಯರು ಹಿಮಪಾತ ಮತ್ತು ಮಳೆಯ ನಡುವೆ ಕೆಲಸವನ್ನು ಕೈಬಿಡದೆ ಶೂನ್ಯಕ್ಕಿಂತಲೂ ಕೆಳಗಿನ ತಾಪಮಾನದಲ್ಲಿ ಇದೊಂದು ದೇವರ ಪವಿತ್ರ ಕೆಲಸ ಎಂದು ಮಾಡಿದ್ದಾರೆ. ಅದರಿಂದಾಗಿ ಮಾತ್ರ ಇದು ಸಾಧ್ಯವಾಗಿದೆ. ನನ್ನ ಮನಸ್ಸು ಸದಾ ಇಲ್ಲಿತ್ತು. ತಂತ್ರಜ್ಞಾನದ ಸಹಾಯದಿಂದ ಮತ್ತು ಡ್ರೋನ್ ಗಳ ಸಹಾಯದಿಂದ ನಾನು ನನ್ನ ಕಚೇರಿಯಿಂದ ತಿಂಗಳಿಗೊಂದಾವರ್ತಿ ನಿರ್ಮಾಣ ಕಾಮಗಾರಿಯನ್ನು ಬಹಳ ನಿಕಟವಾಗಿ ಗಮನಿಸುತ್ತಿದ್ದೆ. ನಾನು ರಾವಲರಿಗೆ ಮತ್ತು ಕೇದಾರನಾಥದ ಎಲ್ಲಾ ಪೂಜಾರಿ, ಅರ್ಚಕರಿಗೆ ಇಂದು ವಿಶೇಷ ಕೃತಜ್ಞತೆಗಳ್ನ್ನು ಸಲ್ಲಿಸುತ್ತೇನೆ, ಅವರು ಅವರ ಧನಾತ್ಮಕ ಧೋರಣೆಯ ಮೂಲಕ, ಸಂಪ್ರದಾಯಗಳು ಮತ್ತು ಪ್ರಯತ್ನಗಳ ಮೂಲಕ ನಮಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದರು.ಇದರ ಪರಿಣಾಮವಾಗಿ ಈ ಹಳೆಯ ಪರಂಪರೆಯನು ರಕ್ಷಿಸಲು ಮತ್ತು ಆಧುನಿಕತೆಯನ್ನು ಅಳವಡಿಸಲು ನಮಗೆ ಸಾಧ್ಯವಾಗಿದೆ. ರಾವಲರ ಕುಟುಂಬಗಳಿಗೆ ಮತ್ತು ಈ ಅರ್ಚಕರಿಗೆ ನಾನು ಹೃದಯಸ್ಪರ್ಶೀ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಮ್ಮ ವಿದ್ವಾಂಸರು ಆದಿ ಶಂಕರಾಚಾರ್ಯ ಜೀ ಅವರನ್ನು ವಿವರಿಸಿದ್ದಾರೆ: “शंकरो शंकरः साक्षात्” ಅಂದರೆ ಆಚಾರ್ಯ ಶಂಕರರು ಭಗವಾನ್ ಶಂಕರರ ಅವತಾರ ಎಂಬುದಾಗಿ. ನಾವು ಈ ವೈಭವವನ್ನು ಮತ್ತು ಪಾವಿತ್ರ್ಯ, ದೈವಿಕತೆಯನ್ನು ಅವರ ಜೀವನದ ಪ್ರತೀ ಸಂದರ್ಭದಲ್ಲಿಯೂ ಕಾಣಬಹುದು. ಅವರನ್ನು ಒಮ್ಮೆ ನೋಡಿದರೆ ಎಲ್ಲ ನೆನಪುಗಳೂ ಮುನ್ನೆಲೆಗೆ ಬರುತ್ತವೆ. ಅಂತಹ ಸಣ್ಣ ಪ್ರಾಯದಲ್ಲಿ ಅದ್ಭುತವಾದ ಜ್ಞಾನ! ಬಾಲ್ಯದಿಂದಲೇ ಧರ್ಮಗ್ರಂಥಗಳ ಅಧ್ಯಯನ, ಜ್ಞಾನ ಮತ್ತು ವಿಜ್ಞಾನ ಅಧ್ಯಯನ! ಸಾಮಾನ್ಯ ಮನುಷ್ಯ ಜಗತ್ತಿನ ಲೌಕಿಕ ವಿಷಯಗಳನ್ನು ಅತ್ಯಲ್ಪವಾಗಿ ತಿಳಿಯಲು ಆರಂಭಿಸುವ ವಯಸ್ಸಿನಲ್ಲಿ, ಅವರು ವೇದಾಂತವನ್ನು ವಿಶ್ಲೇಷಿಸಲು ಆರಂಭ ಮಾಡಿದರು. ಇದು ಅವರಲ್ಲಿ ಭಗವಾನ್ ಶಂಕರರು ಉಂಟು ಮಾಡಿದ ಜಾಗೃತಿ ಹೊರತು ಬೇರೇನಲ್ಲ.
ಸ್ನೇಹಿತರೇ,
ಸಂಸ್ಕೃತದ ಮತ್ತು ವೇದಗಳ ಶ್ರೇಷ್ಟ ಪಂಡಿತರು ಇಲ್ಲಿದ್ದಾರೆ ಮತ್ತು ವರ್ಚುವಲ್ ಮೂಲಕವೂ ಸೇರಿಕೊಂಡಿದ್ದಾರೆ. ಶಂಕರ ಎಂದರೆ ಸಂಸ್ಕೃತದಲ್ಲಿ ಅದರ ಅರ್ಥ ನಿಮಗೆ ಗೊತ್ತೇ, ಬಹಳ ಸರಳ-“शं करोति सः शंकरः” ಅಂದರೆ ಯಾರು ಕಲ್ಯಾಣವನ್ನು ಮಾಡುತ್ತಾರೋ ಅವರೇ ಶಂಕರ. ಈ ಕಲ್ಯಾಣವನ್ನು ಸ್ಥಾಪಿಸಿದವರು ಕೂಡಾ ಆಚಾರ್ಯ ಶಂಕರರೇ. ಅವರ ಬದುಕೇ ಅಸಾಧಾರಣವಾದುದು, ಆದರೆ ಅವರು ಸಾಮಾನ್ಯ ಮಾನವನ ಕಲ್ಯಾಣಕ್ಕೆ ಅರ್ಪಿಸಿಕೊಂಡರು. ಅವರು ಸದಾ ಭಾರತ ಮತ್ತು ಜಗತ್ತಿನ ಕಲ್ಯಾಣಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟರು. ಕ್ರೋಧ ಮತ್ತು ದ್ವೇಷದ ಸುಳಿಗಾಳಿಯಲ್ಲಿ ಸಿಲುಕಿ ಭಾರತದ ಏಕತೆ ನಾಶವಾಗುತ್ತಿದ್ದಾಗ ಶಂಕರಾಚಾರ್ಯರು ಹೇಳಿದರು: : “न मे द्वेष रागौ, न मे लोभ मोहौ, मदो नैव, मे नैव, मात्सर्य भावः” ಅಂದರೆ ದುರಾಸೆ, ಅತ್ಯಾಸೆ, ಅಸೂಯೆ ಮತ್ತು ಅಹಂಕಾರಗಳು ನಮ್ಮ ಸ್ವಭಾವ ಅಲ್ಲ ಎಂದು. ಭಾರತವನ್ನು ಜಾತಿ ಮತ್ತು ಪಂಥಗಳ ಗಡಿಯಾಚೆ ನಿಂತು ಅರ್ಥೈಸಿಕೊಳ್ಳುವ ಅವಶ್ಯಕತೆ ಮಾನವ ಕುಲಕ್ಕೆ ಬಂದಾಗ ಮತ್ತು ಕಳವಳಗಳು, ಸಂಶಯಗಳಿಂದ ಮೇಲೆದ್ದು ನಿಲ್ಲಬೇಕಾದ ಅಗತ್ಯ ಬಂದಾಗ ಅವರು ಸಮಾಜದಲ್ಲಿ ಪ್ರಜ್ಞೆಯನ್ನು ಮೂಡಿಸಿದರು. ಆದಿ ಶಂಕರರು ಹೇಳಿದರು : “न मे मृत्यु-शंका, न मे जातिभेदः” ಅಂದರೆ ನಾಶವಾಗುವ ಸಂಶಯ ಅಂದರೆ ಮೃತ್ಯುಭಯ, ಜಾತಿ ಬೇಧಗಳು ನಮ್ಮ ಸಂಪ್ರದಾಯಕ್ಕೆ ಏನೂ ಮಾಡಲಾರವು ಎಂದರು. ನಾವೇನು, ನಮ್ಮ ತತ್ವಜ್ಞಾನ ಮತ್ತು ಚಿಂತನೆಗಳು ಏನು ಎಂಬುದನ್ನು ವಿವರಿಸಲು ಆದಿ ಶಂಕರರು ಹೇಳಿದರು “चिदानन्द रूपः शिवोऽहम् शिवोऽहम” ಅಂದರೆ, ನಾನು ಪ್ರಜ್ಞೆ ಎಂಬ ಪ್ರಕೃತಿಯ ಮತ್ತು ಆನಂದದ ಶಿವ ಎಂದು. “ಶಿವ ಆತ್ಮದಲ್ಲಿಯೇ ಇದ್ದಾನೆ. ಕೆಲವೊಮ್ಮೆ ’ಅದ್ವೈತ” ದ ತತ್ವಗಳನ್ನು ವಿವರಿಸಲು ಬೃಹತ್ ಪ್ರಮಾಣದ ಪಠ್ಯಗಳು ಬೇಕಾಗುತ್ತವೆ. ನಾನು ಪಂಡಿತ ಅಲ್ಲ. ನಾನದನ್ನು ಸರಳ ಭಾಷೆಯಲ್ಲಿ ಅರ್ಥೈಸಿಕೊಂಡಿದ್ದೇನೆ. ನಾನು ಹೇಳುವುದೇನೆಂದರೆ ಎಲ್ಲಿ ದ್ವಂದ್ವಾರ್ಥ ಇಲ್ಲವೋ ಅಲ್ಲಿ ಪ್ರಾಮಾಣಿಕತೆ ಇರುತ್ತದೆ. ಶಂಕರಾಚಾರ್ಯ ಜೀ ಭಾರತದ ಸುಪ್ತಪ್ರಜ್ಞೆಯಲ್ಲಿ ಮತ್ತೂ ಬದುಕಿದ್ದಾರೆ ಹಾಗು ಅವರು ನಮಗೆ ನಮ್ಮ ಆರ್ಥಿಕ ಅತೀಂದ್ರಿಯ ಪ್ರಗತಿಗೆ ಮಂತ್ರವನ್ನೂ ಕೊಟ್ಟಿದ್ದಾರೆ. ಅವರು ಹೇಳಿದ್ದರು: “ज्ञान विहीनः सर्व मतेन्, मुक्तिम् न भजति जन्म शतेन” ದುಃಖದಿಂದ, ನೋವುಗಳಿಂದ ಮತ್ತು ಕಷ್ಟಗಳಿಂದ ಪಾರಾಗಲು ನಮಗೆ ಒಂದೇ ಒಂದು ದಾರಿ ಇದೆ, ಅದೆಂದರೆ ಜ್ಞಾನ. ಆದಿ ಶಂಕರಾಚಾರ್ಯರು ಭಾರತದ ಜ್ಞಾನ ವಿಜ್ಞಾನ ಮತ್ತು ತತ್ವ ಶಾಸ್ತ್ರದ ಕಾಲಾತೀತವಾದ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದರು.
ಸ್ನೇಹಿತರೇ,
ಆಧ್ಯಾತ್ಮ ಮತ್ತು ಧರ್ಮವನ್ನು ತಪ್ಪಾಗಿ ವಿಶ್ಲೇಶಿಸುವ ಕಾಲವೊಂದಿತ್ತು. ಆದರೆ ಭಾರತದ ತತ್ವಜ್ಞಾನ ಮಾನವ ಕಲ್ಯಾಣವನ್ನು ಪ್ರಸ್ತಾಪಿಸುತ್ತದೆ, ಜೀವನವನ್ನು ಸಂಪೂರ್ಣ ದೃಷ್ಟಿಯಿಂದ ನೋಡುತ್ತದೆ ಮತ್ತು ಸಮಗ್ರ ಧೋರಣೆಯನ್ನು ಅನುಸರಿಸುತ್ತದೆ. ಆದಿ ಶಂಕರಾಚಾರ್ಯರು ಈ ಸತ್ಯವನ್ನು ಸಮಾಜ ಅರಿತುಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದವರು. ಅವರು ಪವಿತ್ರ ಮಠಗಳನ್ನು ಸ್ಥಾಪಿಸಿದರು. ನಾಲ್ಕು ಧಾಮಗಳನ್ನು ಸ್ಥಾಪಿಸಿದರು ಮತ್ತು 12 ಜ್ಯೋತಿರ್ಲಿಂಗಗಳನ್ನು ಪುನರುಜ್ಜೀವನಗೊಳಿಸಿದರು. ಅವರು ಎಲ್ಲವನ್ನೂ ತ್ಯಾಗ ಮಾಡಿದರು ಮತ್ತು ದೇಶಕ್ಕಾಗಿ, ಸಮಾಜಕ್ಕಾಗಿ ಮತ್ತು ಮಾನವತೆಗಾಗಿ ಬದುಕುವವರಿಗಾಗಿ ಬಲಿಷ್ಟವಾದ ಸಂಪ್ರದಾಯವನ್ನು ನಿರ್ಮಾಣ ಮಾಡಿದರು. ಇಂದು ಈ ಸಂಸ್ಥೆಗಳು ಭಾರತದ ಬಲಿಷ್ಟ ಗುರುತಾಗಿ ಪರಿಗಣಿತವಾಗಿವೆ ಮತ್ತು ಭಾರತೀಯತೆಯ ಪ್ರತೀಕವಾಗಿವೆ. ನಮಗೆ ಧರ್ಮ ಎಂದರೇನು? ಜ್ಞಾನ ಮತ್ತು ಧರ್ಮದ ನಡುವಿನ ಸಂಬಂಧ ಏನು? ಅದನ್ನೇಕೆ ‘अथातो ब्रह्म जिज्ञासा’ ಎನ್ನುತ್ತಾರೆ, ಅಂದರೆ ಬ್ರಹ್ಮ –ದರ್ಶನದ ಕುತೂಹಲ ಬಲಿಷ್ಟವಾಗಿದ್ದಷ್ಟೂ ನಾರಾಯಣನನ್ನು ಬಹಳ ಬೇಗ ಕಾಣಲು ಸಾಧ್ಯವಾಗುತ್ತದೆ. ಪ್ರತೀ ಸಂದರ್ಭದಲ್ಲಿಯೂ ಪ್ರಶ್ನೆಗಳನ್ನು ಕೇಳುವಂತಹದನ್ನು ಕಲಿಸುವ ಈ ಮಂತ್ರವನ್ನು ನೀಡುವ ಉಪನಿಷದ್ ಸಂಪ್ರದಾಯ ಏನು ಮತ್ತು ಕೆಲವೊಮ್ಮೆ ಬಾಲಕ ನಚಿಕೇತ ಯಮನ ಆಸ್ಥಾನಕ್ಕೆ ಹೋಗಿ ಆತನನ್ನು ಕೇಳುತ್ತಾನೆ “ಸಾವು ಎಂದರೆ ಏನು” ?. ನಮ್ಮ ಮಠಗಳು ಈ ಪ್ರಶ್ನೆಗಳನ್ನು ಕೇಳುವ ಪರಂಪರೆಯನ್ನು ಮತ್ತು ಜ್ಞಾನವನ್ನು ಗಳಿಸುವ ಪರಂಪರೆಯನ್ನು ಸಾವಿರಾರು ವರ್ಷಗಳಿಂದ ಜೀವಂತವಾಗಿರಿಸಿವೆ. ಮತ್ತು ಅದನ್ನು ಶ್ರೀಮಂತಗೊಳಿಸುತ್ತಿವೆ. ತಲೆಮಾರುಗಳಿಂದ ಈ ಮಠಗಳು ಶಂಕರಾಚಾರ್ಯರ ಸಂಪ್ರದಾಯಗಳನ್ನು ರಕ್ಷಿಸಿಕೊಂಡು ಬಂದಿವೆ ಮತ್ತು ಪರಂಪರೆಯ ಪಥವನ್ನು ತೋರಿಸುತ್ತಿವೆ. ಅದು ಸಂಸ್ಕೃತವಾಗಿರಲಿ, ಅಥವಾ ಸಂಸ್ಕೃತ ಭಾಷೆಯಲ್ಲಿರುವ ವೇದ ಗಣಿತದಂತಹ ವಿಜ್ಞಾನವೇ ಇರಲಿ ಅಲ್ಲಿ ಸುರಕ್ಷಿತವಾಗಿದೆ. ಅದಿ ಶಂಕರಾಚಾರ್ಯರ ತತ್ವಗಳು ಇಂದಿನ ಕಾಲಘಟ್ಟದಲ್ಲಿ ಬಹಳ ಪ್ರಸ್ತುತವಾಗಿವೆ ಎಂದು ನನ್ನ ಭಾವನೆ.
ಸ್ನೇಹಿತರೇ,
ಚಾರ್ ಧಾಮ ಯಾತ್ರಾದ ಮಹತ್ವ ಶತಮಾನಗಳಿಂದ ಇಲ್ಲಿದೆ, ದ್ವಾದಶ ಜ್ಯೋತಿರ್ಲಿಂಗಗಳಿಗೆ ಮತ್ತು ಶಕ್ತಿ ಪೀಠಗಳಿಗೆ ಅಥವಾ ಅಷ್ಟವಿನಾಯಕ ಜೀ ದೇವರಿಗೆ ಯಾತ್ರೆ ಕೈಗೊಳ್ಳುವುದು ಸಂಪ್ರದಾಯವಾಗಿದೆ. ಈ ಯಾತ್ರೆಯನ್ನು ನಮ್ಮ ಬದುಕಿನ ಜೀವಮಾನದ ಭಾಗ ಎಂದು ಪರಿಗಣಿಸಲಾಗುತ್ತದೆ. ಈ ಯಾತ್ರೆ ನಮಗೆ ಬರೇ ಸ್ಥಳ ವೀಕ್ಷಣೆಯ ಪ್ರವಾಸವಲ್ಲ. ಭಾರತವನ್ನು ಜೋಡಿಸುವ ಜೀವಂತ ಸಂಪ್ರದಾಯ ಇದು. ಇದು ಭಾರತದ ಬಗ್ಗೆ ಒಂದು ಸ್ಥೂಲ ನೋಟವನ್ನು ಒದಗಿಸುತ್ತದೆ.ಇಲ್ಲಿರುವ ಪ್ರತಿಯೊಬ್ಬರೂ ಜೀವಮಾನದಲ್ಲೊಮ್ಮೆ ಚಾರ್ ಧಾಮ, ದ್ವಾದಶ ಜ್ಯೋತಿರ್ಲಿಂಗಗಳಿಗೆ ಭೇಟಿ ನೀಡಿ ಪವಿತ್ರ ಗಂಗಾ ಸ್ನಾನ ಮಾಡಲು ಇಚ್ಛಿಸುತ್ತಾರೆ. ಮೊದಲೆಲ್ಲಾ ಈ ಸಂಪ್ರದಾಯವನ್ನು ಮಕ್ಕಳಿಗೆ ಮನೆಯಲ್ಲಿಯೇ ತಿಳಿಸಿಕೊಡುವುದಿತ್ತು. “सौराष्ट्रे सोमनाथम् च, श्रीशैले मल्लि-कार्जुनम्”. ದ್ವಾದಶ ಜ್ಯೋತಿರ್ಲಿಂಗಗಳ ಈ ಮಂತ್ರ ಮನೆಯಲ್ಲಿ ಕುಳಿತೇ ನಮ್ಮನ್ನು ಇಡೀ ದೇಶ ಪರ್ಯಟನೆ ಮಾಡಿಸುತಿತ್ತು. ಬಾಲ್ಯದಿಂದಲೇ ದೇಶದ ವಿವಿಧ ಭಾಗಗಳ ಜೊತೆ ಸಂಪರ್ಕ ಸಾಧಿಸುವುದು ಬಹಳ ಸುಲಭದ ವಿಧಿ ವಿಧಾನವಾಗಿತ್ತಿದು. ಈ ನಂಬಿಕೆಗಳು ಭಾರತವನ್ನು ಪೂರ್ವದಿಂದ ಪಶ್ಚಿಮದವರೆಗೆ, ಉತ್ತರದಿಂದ ದಕ್ಷಿಣದವರೆಗೆ ಜೀವಂತ ಆತ್ಮವನ್ನಾಗಿಸಿವೆ, ರಾಷ್ಟ್ರೀಯ ಏಕತೆಯ ಬಲವನ್ನು ಹೆಚ್ಚಿಸಿವೆ, ’ಏಕ ಭಾರತ್-ಶ್ರೇಷ್ಟ ಭಾರತ್” ಎಂಬ ಅದ್ದೂರಿಯ ತತ್ವಶಾಸ್ತ್ರಕ್ಕೆ ಶಕ್ತಿಯನ್ನು ನೀಡಿವೆ. ಬಾಬಾ ಕೇದಾರನಾಥಕ್ಕೆ ಭೇಟಿ ನೀಡಿದ ಬಳಿಕ ಪ್ರತಿಯೊಬ್ಬ ಭಕ್ತನೂ ತನ್ನೊಂದಿಗೆ ಹೊಸ ಶಕ್ತಿಯನ್ನು ಕೊಂಡೊಯ್ಯುತ್ತಾನೆ.
ಸ್ನೇಹಿತರೇ,
ದೇಶವು ಇಂದು ಆದಿ ಶಂಕರಾಚಾರ್ಯರ ಪರಂಪರೆಯನ್ನು ತನ್ನೊಳಗಿನ ಪ್ರೇರಣೆಯಾಗಿ ಕಾಣುತ್ತಿದೆ. ಈಗ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ನಂಬಿಕೆಯ ಕೇಂದ್ರಗಳನ್ನು ಅವುಗಳಿಗೆ ನೀಡಬೇಕಾದ ಹೆಮ್ಮೆಯಿಂದ ನೋಡಲಾಗುತ್ತಿದೆ. ಇಂದು ಅಯೋಧ್ಯೆಯಲ್ಲಿ ಅದ್ದೂರಿಯ ಭಗವಾನ್ ಶ್ರೀ ರಾಮ ಮಂದಿರವನ್ನು ಪೂರ್ಣ ವೈಭವದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಅಯೋಧ್ಯೆಯು ಶತಮಾನಗಳ ಬಳಿಕ ತನ್ನ ವೈಭವವನ್ನು ಮರಳಿ ಪಡೆಯುತ್ತಿದೆ. ಬರೇ ಎರಡು ದಿನಗಳ ಹಿಂದೆ ಅಯೋಧ್ಯೆಯಲ್ಲಿ ನಡೆದ ಅದ್ದೂರಿಯ ದೀಪೋತ್ಸವವನ್ನು ಇಡೀ ಜಗತ್ತು ನೋಡಿದೆ. ಇಂದು ನಾವು ಭಾರತದ ಪ್ರಾಚೀನ ಸಾಂಸ್ಕೃತಿಕ ಮಾದರಿಯು ಹೇಗಿತ್ತು ಎಂಬುದನ್ನು ಕಲ್ಪಿಸಿಕೊಳ್ಳಬಹುದಾಗಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಕಾಶಿಯನ್ನು ಪುನರುಜ್ಜೀವನ ಮಾಡಲಾಗುತ್ತಿದೆ. ಮತ್ತು ವಿಶ್ವನಾಥ ಧಾಮದ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಬನಾರಸ್ಸಿನ ಸಾರಾನಾಥ ಬಳಿಯ ಕುಶಿನಗರ್ ನಲ್ಲಿ ಮತ್ತು ಬೋಧ ಗಯಾದಲ್ಲಿ ಅವುಗಳನ್ನು ಬುದ್ಧ ಧರ್ಮದ ಸರ್ಕ್ಯೂಟ್ ಗಳನ್ನಾಗಿ ಅಭಿವೃದ್ಧಿ ಮಾಡಲು ಕಾಮಗಾರಿಗಳು ತ್ವರಿತಗತಿಯಿಂದ ಸಾಗುತ್ತಿವೆ. ಇವುಗಳನ್ನು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ಜಗತ್ತಿನ ವಿವಿಧೆಡೆಗಳಿಂದ ಬುದ್ಧ ಧರ್ಮೀಯ ಭಕ್ತರನ್ನು ಆಕರ್ಷಿಸಲು ಅನುಕೂಲವಾಗುವಂತೆ ಅಭಿವೃದ್ಧಿ ಮಾಡಲಾಗುತ್ತಿದೆ. ಭಗವಾನ್ ರಾಮನಿಗೆ ಸಂಬಂಧಪಟ್ಟಂತಹ ಎಲ್ಲಾ ಯಾತ್ರಾ ಸ್ಥಳಗಳನ್ನು ಜೋಡಿಸಿ ಸಂಪೂರ್ಣ ಸರ್ಕ್ಯೂಟ್ ಮಾಡುವಂತಹ ಕಾಮಗಾರಿ ಪ್ರಗತಿಯಲ್ಲಿದೆ. ಮಥುರಾ-ವೃಂದಾವನದಲ್ಲಿ ಅಭಿವೃದ್ಧಿ ಸಹಿತ ಪಾವಿತ್ರ್ಯವನ್ನೂ ಕಾಪಾಡಿಕೊಳ್ಳಲಾಗುತ್ತಿದೆ. ಸಂತರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದೆಲ್ಲಾ ಆಗುತ್ತಿರುವುದಕ್ಕೆ ಕಾರಣ ಇಂದಿನ ಭಾರತ ನಮ್ಮ ಆದಿ ಶಂಕರಾಚಾರ್ಯರಂತಹ ಸಂತರ ಬೋಧನೆಯಲ್ಲಿ ಹೆಮ್ಮೆ ಮತ್ತು ಗೌರವಗಳನ್ನು ಹೊಂದಿ ಮುನ್ನಡೆಯುತ್ತಿರುವುದು.
ಸ್ನೇಹಿತರೇ,
ಪ್ರಸ್ತುತ ನಮ್ಮ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ತನ್ನ ಭವಿಷ್ಯಕ್ಕಾಗಿ ಮತ್ತು ಮರುನಿರ್ಮಾಣಕ್ಕಾಗಿ ದೇಶವು ಹೊಸ ದೃಢ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಅಮೃತ ಮಹೋತ್ಸವಕ್ಕೆ ಸಂಬಂಧಿಸಿ ಕೈಗೊಳ್ಳುವ ನಿರ್ಧಾರಗಳಿಗೆ ಆದಿ ಶಂಕರಾಚಾರ್ಯರು ಬಹಳ ದೊಡ್ಡ ಪ್ರೇರಣೆಯಾಗಿ ನನಗೆ ಗೋಚರಿಸುತ್ತಾರೆ.
ದೇಶವು ತನಗೆ ತಾನೇ ದೊಡ್ಡ ಗುರಿಗಳನ್ನು ನಿಗದಿ ಮಾಡಿದಾಗ ಮತ್ತು ಸಮಯದ ಮಿತಿ ನಿಗದಿ ಮಾಡಿದಾಗ ಕೆಲವು ಜನರು ಇಷ್ಟೊಂದು ಕಡಿಮೆ ಸಮಯದಲ್ಲಿ ಇದು ಹೇಗೆ ಸಾಧ್ಯ ಎಂದು ಆಶ್ಚರ್ಯಚಕಿತರಾಗುತ್ತಾರೆ!. ಇದು ಸಾಧ್ಯವಾಗುತ್ತದೋ ಅಥವಾ ಇಲ್ಲವೋ!. ಆಗ ನನ್ನೊಳಗಿನ ಒಂದು ಧ್ವನಿ ಬರುತ್ತದೆ. ನಾನು 130 ಕೋಟಿ ದೇಶವಾಸಿಗಳ ಧ್ವನಿಯನ್ನು ಕೇಳುತ್ತೇನೆ. ಸಮಯದ ನಿರ್ಬಂಧಗಳಿಂದ ಭಾರತವನ್ನು ಬೆದರಿಸುವುದನ್ನು ಇನ್ನು ಮುಂದೆ ಒಪ್ಪಲಾಗುವುದಿಲ್ಲ ಎಂದು ನಾನು ಹೇಳುತ್ತೇನೆ.ಆದಿ ಶಂಕರಾಚಾರ್ಯ ಜೀ ಅವರತ್ತ ನೋಡಿ. ಸಣ್ಣ ವಯಸ್ಸಿನಲ್ಲಿ ಅವರು ಮನೆಯನ್ನು ತೊರೆದರು ಮತ್ತು ಸನ್ಯಾಸಿಯಾದರು. ಕೇರಳದ ಕಾಲಡಿಯಿಂದ ಅವರು ಕೇದಾರಕ್ಕೆ ಬಂದರು. ಬಹಳ ಸಣ್ಣ ವಯಸ್ಸಿನಲ್ಲಿ ಈ ಲೋಕವನ್ನು ತೊರೆದರು ಆದರೆ ಭಾರತಕ್ಕೆ ಜ್ಞಾನವನ್ನು ನೀಡಿದರು. ಮತ್ತು ಭಾರತಕ್ಕೆ ಹೊಸ ಭವಿಷ್ಯವನ್ನು ಬಹಳ ಸಣ್ಣ ಅವಧಿಯಲ್ಲಿ ನಿರ್ಮಾಣ ಮಾಡಿದರು. ಅವರು ರೂಪಿಸಿದ ಶಕ್ತಿ ಭಾರತವು ಚಲಿಸುತ್ತಿರುವಂತೆ ಮಾಡಿದೆ. ಮತ್ತು ಅದು ಬರಲಿರುವ ಸಾವಿರಾರು ವರ್ಷಗಳ ಕಾಲವೂ ಮುಂದೆ ಸಾಗುವಂತೆ ಮಾಡುತ್ತದೆ. ಅದೇ ರೀತಿ ಸ್ವಾಮಿ ವಿವೇಕಾನಂದ ಜೀ ಅವರತ್ತ ಮತ್ತು ಹಲವು ಸ್ವಾತಂತ್ರ್ಯ ಹೋರಾಟಗಾರರತ್ತ ನೋಡಿ. ಇಲ್ಲಿ ಜನಿಸಿದ ಅಸಂಖ್ಯಾತ ಶ್ರೇಷ್ಟ ವ್ಯಕ್ತಿತ್ವಗಳಿವೆ ಮತ್ತು ಬಹಳ ಸಣ್ಣ ಅವಧಿಯಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಭಾರತವು ಈ ಶ್ರೇಷ್ಟ ವ್ಯಕ್ತಿತ್ವಗಳ ಪ್ರೇರಣೆಗಳನ್ನು ಅನುಸರಿಸುತ್ತಿದೆ. ಆಧ್ಯಾತ್ಮಿಕವಾಗಿ ಮತ್ತು ಚಿರಂತನತೆಯ ರೀತಿಯಲ್ಲಿ ನಾವು ಕಾರ್ಯದಲ್ಲಿ, ಕರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ವಿಶ್ವಾಸದೊಂದಿಗೆ, ದೇಶವು ಈ “ಅಮೃತ ಕಾಲ”ದಲ್ಲಿ ಮುನ್ನಡೆಯುತ್ತಿದೆ. ಮತ್ತು ಇಂತಹ ಸಮಯದಲ್ಲಿ ದೇಶವಾಸಿಗಳಲ್ಲಿ ನಾನು ಇನ್ನೊಂದು ಕೋರಿಕೆಯನ್ನು ಮಂಡಿಸಲು ಬಯಸುತ್ತೇನೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ಚಾರಿತ್ರಿಕ ಸ್ಥಳಗಳನ್ನು ನೋಡುವುದರ ಜೊತೆಗೆ ಹೊಸ ತಲೆಮಾರಿಗೆ ಪರಿಚಯ ಮಾಡಿಕೊಡುವುದಕ್ಕಾಗಿ ಇಂತಹ ಪವಿತ್ರ ಸ್ಥಳಗಳಿಗೆ ಸಾಧ್ಯವಾದಷ್ಟು ಬಾರಿ ಭೇಟಿ ಕೊಡಿ. ಭಾರತ ಮಾತೆಯ ಅನುಭವ ಪಡೆದುಕೊಳ್ಳಿ. ಸಾವಿರಾರು ವರ್ಷಗಳ ಶ್ರೇಷ್ಟ ಸಂಪ್ರದಾಯದ ಪ್ರಜ್ಞೆಯನ್ನು ಮೂಡಿಸಿಕೊಳ್ಳಿ. ಸ್ವಾತಂತ್ರ್ಯದ ಪುಣ್ಯಕರವಾದ ಸಂದರ್ಭದಲ್ಲಿ ಇದೂ ಸ್ವಾತಂತ್ರ್ಯದ ವೈಭವದ ಹಬ್ಬವಾಗಬಲ್ಲದು. ಶಂಕರರ ಸ್ಪೂರ್ತಿ ಯನ್ನು ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಜಾಗೃತಗೊಳಿಸಬಹುದು. ಭಾರತದ ಪ್ರತೀ ಮೂಲೆ ಮೂಲೆಗೂ ಅದನ್ನು ಹರಡಬಹುದು. ಮತ್ತು ಈ ನಿಟ್ಟಿನಲ್ಲಿ ಮುಂದುವರೆಯಲು ಇದು ಸಕಾಲ. ನೂರಾರು ವರ್ಷಗಳ ನಮ್ಮ ದಾಸ್ಯದ ಸಂಕೋಲೆಯಲ್ಲಿದ್ದಾಗಲೂ ನಮ್ಮ ನಂಬಿಕೆಯನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿರುವುದು ಮತ್ತು ಅದಕ್ಕೆ ಯಾವ ಹಾನಿಯೂ ಆಗದಂತೆ ನೋಡಿಕೊಂಡಿರುವುದು ಬಹಳ ಸಣ್ಣ ಸೇವೆಯೇನಲ್ಲ. ಸ್ವಾತಂತ್ರ್ಯದ ಈ ಅವಧಿಯಲ್ಲಿ ಈ ದೊಡ್ಡ ಸೇವೆಯನ್ನು ಪೂಜಿಸುವುದು, ಆರಾಧಿಸುವುದು ಭಾರತದ ನಾಗರಿಕರ ಕರ್ತವ್ಯವಲ್ಲವೇ?. ಮತ್ತು ಅದರಿಂದಾಗಿ ನಾನೊಬ್ಬ ನಾಗರಿಕನಾಗಿ ಹೇಳುತ್ತೇನೆ ನಾವು ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡಬೇಕು ಮತ್ತು ಅವುಗಳ ವೈಭವವನ್ನು, ಮಹತ್ವವನ್ನು ತಿಳಿದುಕೊಳ್ಳಬೇಕು.
ಸ್ನೇಹಿತರೇ,
ದೇವಭೂಮಿ ಮತ್ತು ನಂಬಿಕೆಗಳಿಗೆ ಇಲ್ಲಿ ಮಿತಿ ಇಲ್ಲದಷ್ಟು ಸಾಧ್ಯತೆಗಳಿವೆ. ಉತ್ತರಾಖಂಡ ಸರಕಾರ ಇಂದು ಅಭಿವೃದ್ಧಿಯ “ಮಹಾಯಾಗ” ದಲ್ಲಿ ಪೂರ್ಣ ಶಕ್ತಿಯೊಂದಿಗೆ ತೊಡಗಿಸಿಕೊಂಡಿದೆ. ಚಾರ್ ಧಾಮ್ ರಸ್ತೆ ಯೋಜನೆಯ ಕೆಲಸ ಬಹಳ ತ್ವರಿತಗತಿಯಿಂದ ಸಾಗುತ್ತಿದೆ. ಮತ್ತು ಎಲ್ಲಾ ನಾಲ್ಕು ಧಾಮಗಳನ್ನೂ ಹೆದ್ದಾರಿಯೊಂದಿಗೆ ಜೋಡಿಸಲಾಗುತ್ತಿದೆ. ಆಸ್ತಿಕರು ಕೇಬಲ್ ಕಾರ್ ಮೂಲಕ ಕೇದಾರನಾಥ್ ಜೀ ಗೆ ಬರಲು ಅನುಕೂಲವಾಗುವಂತೆ ಮಾಡಲು ಯೋಜನೆಯನ್ನು ಆರಂಭ ಮಾಡಲಾಗಿದೆ. ಇಲ್ಲಿಗೆ ಹತ್ತಿರದಲ್ಲಿ ಪವಿತ್ರ ಹೇಮಕುಂಡ ಸಾಹೀಬ್ ಇದೆ. ಹೇಮಕುಂಡ ಸಾಹೀಬ್ ಜೀ ಗೆ ಭೇಟಿ ನೀಡಲು ಅನುಕೂಲವಾಗುವಂತೆ ರೋಪ್ ವೇ ನಿರ್ಮಾಣ ಮಾಡುವ ತಯಾರಿಗಳು ಸಾಗುತ್ತಿವೆ. ಇದಲ್ಲದೆ ಋಷಿಕೇಶ ಮತ್ತು ಕರ್ಣಪ್ರಯಾಗ್ ಗಳನ್ನು ರೈಲಿನ ಮೂಲಕ ಜೋಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಮುಖ್ಯಮಂತ್ರಿಗಳು ಹೇಳುತ್ತಿದ್ದರು ಪರ್ವತವಾಸಿಗಳಿಗೆ ರೈಲು ನೋಡುವುದು ಕಷ್ಟ ಎಂದು. ಈಗ ರೈಲು ಇಲ್ಲಿಗೆ ತಲುಪುತ್ತಿದೆ. ಒಮ್ಮೆ ದಿಲ್ಲಿ-ಡೆಹ್ರಾಡೂನ್ ಹೆದ್ದಾರಿ ನಿರ್ಮಾಣಗೊಂಡರೆ ಜನರು ಪ್ರಯಾಣಕ್ಕಾಗಿ ವಿನಿಯೋಗಿಸುವ ಕಾಲಾವಧಿ ಕಡಿಮೆಯಾಗುತ್ತದೆ. ಈ ಎಲ್ಲಾ ಯೋಜನೆಗಳೂ ಉತ್ತರಾಖಂಡ ಮತ್ತು ಅದರ ಪ್ರವಾಸೋದ್ಯಮಕ್ಕೆ ಬಹಳ ದೊಡ್ದ ಸಹಾಯ ಮಾಡಲಿವೆ. ಉತ್ತರಾಖಂಡದ ಜನತೆ ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಲಿ. ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವ ವೇಗದಿಂದ ಮುಂದಿನ ಹತ್ತು ವರ್ಷಗಳಲ್ಲಿ ಇಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಳೆದ ನೂರು ವರ್ಷಗಳ ಅವಧಿಗಿಂತ ಹೆಚ್ಚಾಗಲಿದೆ. ಇಲ್ಲಿಯ ಆರ್ಥಿಕತೆಗೆ ಅದು ನೀಡುವ ಬಲವನ್ನು ನೀವು ಕಲ್ಪಿಸಿಕೊಳ್ಳಬಹುದು. 21 ನೇ ಶತಮಾನದ ಮೂರನೇ ದಶಕ ಉತ್ತರಾಖಂಡದ್ದಾಗಲಿದೆ. ನನ್ನ ಮಾತುಗಳನ್ನು ಗುರುತಿಸಿಟ್ಟುಕೊಳ್ಳಿ. ನಾನು ಪವಿತ್ರ ಭೂಮಿಯಿಂದ ಮಾತನಾಡುತ್ತಿದ್ದೇನೆ. ಇತ್ತೀಚಿನ ಕಾಲಘಟ್ಟದಲ್ಲಿ ಚಾರ್-ಧಾಮ ಯಾತ್ರೆಗೆ ಬರುತ್ತಿರುವ ಭಕ್ತರ ಸಂಖ್ಯೆ ನಿರಂತರವಾಗಿ ದಾಖಲೆಗಳನ್ನು ಹೇಗೆ ಮುರಿಯುತ್ತಿದೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಅಲ್ಲಿ ಕೋವಿಡ್ ಇರದಿದ್ದರೆ, ಆ ಸಂಖ್ಯೆ ಎಷ್ಟು ಆಗುತ್ತಿತ್ತೋ ನನಗೆ ಗೊತ್ತಿಲ್ಲ?. ಉತ್ತರಾಖಂಡದ ಬಗ್ಗೆ ನನಗೆ ಸಂತೋಷವೆನಿಸುತ್ತಿದೆ. ಅದರಲ್ಲೂ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಮತ್ತು ಪರ್ವತ ಪ್ರದೇಶಗಳಲ್ಲಿ ಅವರ ಶಕ್ತಿ ಬೇರೆ ಬೇರೆ ಸಾಮರ್ಥ್ಯವುಳ್ಳದ್ದಾಗಿರುತ್ತದೆ. ಉತ್ತರಾಖಂಡಕ್ಕೆ ಬರುತ್ತಿರುವ ಪ್ರವಾಸಿಗರು ಸಣ್ಣ ಪ್ರದೇಶಗಳಲ್ಲಿರುವ ಹೋಂ ಸ್ಟೇಗಳ ಜಾಲವನ್ನು ಮತ್ತು ಪ್ರಕೃತಿ ಸೌಂದರ್ಯವನ್ನು ಬಹಳ ಮೆಚ್ಚುತ್ತಾರೆ. ಅಲ್ಲಿ ಉದ್ಯೋಗಾವಕಾಶಗಳಿರುತ್ತವೆ ಮತ್ತು ಅಲ್ಲಿ ಆತ್ಮ ಗೌರವದೊಂದಿಗೆ ಬದುಕುವ ಅವಕಾಶವೂ ಇರುತ್ತದೆ. ಇಲ್ಲಿಯ ಸರಕಾರ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ರೀತಿಯಿಂದಾಗಿ ಇಲ್ಲಿ ಮತ್ತೊಂದು ಪ್ರಯೋಜನವೂ ಇದೆ. ಈ ಸ್ಥಳದ ಬಗ್ಗೆ ಹೇಳಲಾಗುತ್ತದೆ ಏನೆಂದರೆ, ಪರ್ವತ ಪ್ರದೇಶಗಳ ನೀರು ಮತ್ತು ಪರ್ವತ ಪ್ರದೇಶದ ಯುವ ಜನತೆ ಪರ್ವತಗಳಿಗೆ ಪ್ರಯೋಜನಕ್ಕಿಲ್ಲ ಎಂದು. ನಾನೀಗ ಇದನ್ನು ಬದಲಿಸಿದ್ದೇನೆ. ಈಗ ನೀರು ಕೂಡಾ ಪರ್ವತಗಳಿಗೆ ಉಪಯುಕ್ತವಾಗುತ್ತದೆ ಮತ್ತು ಯುವಜನತೆ ಕೂಡಾ ಉಪಯುಕ್ತ ಎಂದು. ವಲಸೆಯನ್ನು ಈಗ ನಿಲ್ಲಿಸಬೇಕಾಗಿದೆ. ಆದುದರಿಂದ ನನ್ನ ಯುವ ಸ್ನೇಹಿತರೇ, ಈ ದಶಕ ನಿಮ್ಮದು, ಇದು ಉತ್ತರಾಖಂಡಕ್ಕೆ ಸೇರಿದ್ದು, ಇದಕ್ಕೆ ಉತ್ತಮ ಭವಿಷ್ಯ ಇದೆ ಮತ್ತು ಬಾಬಾ ಕೇದಾರ ಅವರ ಆಶೀರ್ವಾದ ನಮ್ಮ ಮೇಲಿದೆ.
ಈ ದೇವ ಭೂಮಿಯು ತಾಯ್ನಾಡನ್ನು ರಕ್ಷಿಸಿದ ಅನೇಕ ವೀರ ಪುತ್ರರು ಮತ್ತು ಹೆಣ್ಣು ಮಕ್ಕಳ ಜನ್ಮಭೂಮಿ ಕೂಡಾ. ಇಲ್ಲಿ ವೀರತ್ವದ ಕಥೆ ಇಲ್ಲದೇ ಇರುವ ಯಾವುದೇ ಮನೆ, ಗ್ರಾಮಗಳು ಇಲ್ಲ. ಇಂದು ದೇಶವು ತನ್ನ ಪಡೆಗಳನ್ನು ಆಧುನೀಕರಿಸುತ್ತಿರುವ ರೀತಿ, ಅವುಗಳನ್ನು ಸ್ವಾವಲಂಬಿಯಾಗಿಸುವ ರೀತಿಯಿಂದಾಗಿ ನಮ್ಮ ಧೀರ ಸೈನಿಕರ ಶಕ್ತಿ ವರ್ಧಿಸುತ್ತಿದೆ. ಇಂದು ಅವರ ಮತ್ತು ಅವರ ಕುಟುಂಬದವರ ಅವಶ್ಯಕತೆಗಳಿಗೆ ಮತ್ತು ನಿರೀಕ್ಷೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಾಲ್ಕು ದಶಕಗಳ ಬೇಡಿಕೆಯಾದ ಒಂದು ದರ್ಜೆ, ಒಂದು ಪೆನ್ಷನ್ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಿದೆ. ಕಳೆದ ಶತಮಾನದ ಬೇಡಿಕೆ ಈ ಶತಮಾನದಲ್ಲಿ ಈಡೇರಿದೆ. ನನ್ನ ದೇಶದ ಸೈನಿಕರಿಗೆ ಸೇವೆ ಮಾಡುವ ಅವಕಾಶ ನನಗೆ ದೊರೆತುದಕ್ಕಾಗಿ ನನಗೆ ತೃಪ್ತಿ ಇದೆ. ಇದರಿಂದ ಉತ್ತರಾಖಂಡದ ಸಾವಿರಾರು ಕುಟುಂಬಗಳಿಗೆ ಪ್ರಯೋಜನವಾಗಿದೆ.
ಸ್ನೇಹಿತರೇ,
ಕೊರೊನಾ ವಿರುದ್ಧದ ಹೋರಾಟದಲ್ಲಿ ಉತ್ತರಾಖಂಡ ತೋರಿದ ಶಿಸ್ತು ಬಹಳ ಶ್ಲಾಘನೀಯವಾದುದು. ಭೌಗೋಳಿಕ ಸಂಕಷ್ಟಗಳ ನಡುವೆಯೂ ಅದನ್ನು ಮೀರಿ, ಇಂದು ಉತ್ತರಾಖಂಡದ ಜನತೆ 100% ಸಿಂಗಲ್ ಡೋಸ್ ಗುರಿಯನ್ನು ಸಾಧಿಸಿದ್ದಾರೆ. ಇದು ಉತ್ತರಾಖಂಡದ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ. ಪರ್ವತಗಳ ಬಗ್ಗೆ ಹೆಚ್ಚು ಪರಿಚಯ ಇರುವವರು ಈ ಕೆಲಸ ಸುಲಭ ಅಲ್ಲ ಎಂಬುದನ್ನು ತಿಳಿದಿರುತ್ತಾರೆ. ಬರೇ ಎರಡು ಅಥವಾ ಐದು ಕುಟುಂಬಗಳನ್ನು ಲಸಿಕಾಕರಣಕ್ಕೆ ಒಳಪಡಿಸಲು ಗಂಟೆಗಟ್ಟಲೆ ನಡೆದು ಪರ್ವತ ಶಿಖರಗಳನ್ನು ಹತ್ತಿ ಮತ್ತು ರಾತ್ರಿ ಇಡೀ ನಡೆದು ಮನೆಗೆ ಮರಳುವುದು ಎಷ್ಟೊಂದು ಕಷ್ಟಕರ ಎಂಬುದು ನನಗೆ ಗೊತ್ತಿದೆ. ಹಾಗಿದ್ದರೂ ಉತ್ತರಾಖಂಡ ಪ್ರತಿಯೊಬ್ಬರ ಜೀವವನ್ನು ಉಳಿಸುವುದಕ್ಕಾಗಿ ಇದನ್ನು ಮುಂದುವರೆಸಿತು. ನಾನು ಮುಖ್ಯಮಂತ್ರಿ ಮತ್ತವರ ತಂಡವನ್ನು ಅಭಿನಂದಿಸುತ್ತೇನೆ. ಎತ್ತರದಲ್ಲಿರುವ ಉತ್ತರಾಖಂಡವು ಇನ್ನೂ ದೊಡ್ಡ ಸಾಧನೆ ಮಾಡುತ್ತದೆ ಎಂಬ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ಈ ಪವಿತ್ರ ಭೂಮಿಯಿಂದ ನಮ್ಮ ಅನೇಕ ದೃಢ ನಿರ್ಧಾರಗಳನ್ನು ಕಾರ್ಯಗತ ಮಾಡುವತ್ತ ಮುನ್ನಡೆಯೋಣ, ಬಾಬಾ ಕೇದಾರನ ಭೂಮಿಯಿಂದ ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಮತ್ತು ಸಂತರ, ಮಹಂತರ, ಯತಿಗಳ, ಮತ್ತು ದೇಶದ ಪ್ರತೀ ಮೂಲೆಗಳಲ್ಲಿರುವ ಆಚಾರ್ಯರ ಆಶೀರ್ವಾದಗಳೊಂದಿಗೆ ಮುಂದಡಿ ಇಡೋಣ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿರ್ಧಾರವನ್ನು ಪ್ರತಿಯೊಬ್ಬರೂ ಮಾಡುವಂತಾಗಲಿ. ಹೊಸ ಹುರುಪು, ಹೊಸ ಬೆಳಕು, ಮತ್ತು ಹೊಸ ಶಕ್ತಿಯು ದೀಪಾವಳಿಯ ಬಳಿಕ ನಮಗೆ ಹೊಸದೇನನ್ನಾದರೂ ಮಾಡುವ ಬಲವನ್ನು ನೀಡಲಿ. ಭಗವಾನ್ ಕೇದಾರನಾಥನ ಪಾದಗಳಿಗೆ ಮತ್ತು ಆದಿ ಶಂಕರಾಚಾರ್ಯರಿಗೆ ಶಿರಬಾಗಿ ನಮಿಸುತ್ತ ದೀಪಾವಳಿ ಮತ್ತು ಛಾತ್ ಪೂಜಾದ ನಡುವೆ ಬರುವ ಹಲವಾರು ಹಬ್ಬಗಳಿಗಾಗಿ ನಾನು ನಿಮಗೆ ಮತ್ತೊಮ್ಮೆ ಶುಭಾಶಯಗಳನ್ನು ಹಾರೈಸುತ್ತೇನೆ. ಪ್ರೀತಿ, ಭಕ್ತಿ, ಮತ್ತು ಪೂರ್ಣಹೃದಯದೊಂದಿಗೆ ನನ್ನೊಂದಿಗೆ ಹೇಳಿ
ಜೈ ಕೇದಾರ್!
ಜೈ ಕೇದಾರ್!
ಜೈ ಕೇದಾರ್!
ಧನ್ಯವಾದಗಳು.
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
***
(Release ID: 1770240)
Visitor Counter : 258
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam