ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಭಾರತದ 75ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಮೊಟ್ಟ ಮೊದಲ ʻನವೋದ್ಯಮಿಗಳಿಗೆ ಮಾರ್ಗದರ್ಶಕʼ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ʻಸ್ಟಾರ್ ಕಾಲೇಜು ಮಾರ್ಗದರ್ಶಕʼ ಕಾರ್ಯಕ್ರಮವು ಭವಿಷ್ಯದ ಸವಾಲುಗಳಿಗೆ ಆವಿಷ್ಕಾರ ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಯುವ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಿಗೆ ಸಮಾನ ಮನಸ್ಕ ಕಲಿಕೆ ಮತ್ತು ಬೆಂಬಲದ ಮೂಲಕ ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು
Posted On:
08 NOV 2021 4:52PM by PIB Bengaluru
ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಖಾತೆ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ); ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವರು; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಹಾಯಕ ಸಚಿವರು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರೂ ಆಗಿರುವ ಡಾ. ಜಿತೇಂದ್ರ ಸಿಂಗ್ ಅವರು ಇಂದು ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಯುವ ನವೋದ್ಯಮಿಗಳಿಗೆ ಮೊದಲ ಬಾರಿಗೆ ಮಾರ್ಗದರ್ಶಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ದೇಶದಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರ ಪ್ರಯತ್ನಗಳನ್ನು ಬಲಪಡಿಸುವ ಮೂಲಕ ಜನಸಾಮಾನ್ಯರಲ್ಲಿ, ವಿಶೇಷವಾಗಿ ಯುವಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಇದು ಅಖಿಲ ಭಾರತ ಮಟ್ಟದ ಯೋಜನೆಯಾಗಿದ್ದು, ಜೈವಿಕ ತಂತ್ರಜ್ಞಾನ ಇಲಾಖೆಯ ಬೆಂಬಲವಿರುವ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಸ್ಟಾರ್ ಕಾಲೇಜನ್ನು ಇದು ಒಳಗೊಂಡಿದೆ ಎಂದು ಅವರು ಹೇಳಿದರು.
ʻಡಿಬಿಟಿ-ಸ್ಟಾರ್ ಕಾಲೇಜು ಮಾರ್ಗದರ್ಶಕ ಕಾರ್ಯಕ್ರಮʼವು ನೆಟ್‌ವರ್ಕಿಂಗ್, ಬೆಂಬಲ ಮತ್ತು ತಲುಪುವಿಕೆ ವಿಸ್ತರಣೆ ಪರಿಕಲ್ಪನೆಗಳಿಗೆ ಸಹಾಯ ಮಾಡುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಅಭಿಪ್ರಾಯಪಟ್ಟರು. ಕಾರ್ಯಾಗಾರಗಳು ಮತ್ತು ಮಾಸಿಕ ಸಭೆಗಳ ಆಯೋಜನೆಯನ್ನು ಈ ಯೋಜನೆಯು ಒಳಗೊಂಡಿದೆ; ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಅಥವಾ ಕಡಿಮೆ ಸೌಲಭ್ಯವಿರುವ ಪ್ರದೇಶಗಳಲ್ಲಿರುವ ಕಾಲೇಜುಗಳಲ್ಲಿ ಇವುಗಳನ್ನು ಆಯೋಜಿಸಲಾಗುವುದು. ಜೊತೆಗೆ ಇದರ ಮೂಲಕ ಶಾಲೆಗಳೊಂದಿಗೆ ಸಂಪರ್ಕ ಚಟುವಟಿಕೆಗಳನ್ನು ನಡೆಸಲಾಗುವುದು. ಈ ಚಟುವಟಿಕೆಗಳು ಯೋಜನೆಯಡಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ ಹೊಸ ಕಾಲೇಜುಗಳಿಗೆ ʻಸ್ಟಾರ್ ಕಾಲೇಜು ಯೋಜನೆಯʼ ಧ್ಯೇಯೋದ್ದೇಶದ ಅನುಸಾರ ಮಾಡಿಕೊಡುತ್ತವೆ ಎಂದು ಅವರು ಹೇಳಿದರು. ಈ ʻಸ್ಟಾರ್ ಸ್ಟೇಟಸ್ʼ ಕಾಲೇಜುಗಳು ಪರಸ್ಪರ ಬೆಂಬಲ ಮತ್ತು ಸಮಾನ ಮನಸ್ಕ ಕಲಿಕೆಯ ಮೂಲಕ ಹೊಸ ಕಾಲೇಜುಗಳಿಗೆ ಮಾರ್ಗದರ್ಶನ ನೀಡುವ ಮೂಲಕ ದೇಶಾದ್ಯಂತ ಪದವಿಪೂರ್ವ ವಿಜ್ಞಾನ ಕೋರ್ಸ್‌ಗಳನ್ನು ಬಲಪಡಿಸಲು ನೆರವಾಗುತ್ತವೆ. ಆ ಮೂಲಕ ʻಡಿಬಿಟಿʼಯ ದೃಷ್ಟಿಕೋನವನ್ನು ಬೆಂಬಲಿಸುತ್ತವೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು, ಸ್ಟಾರ್ ಕಾಲೇಜು ಯೋಜನೆಯಡಿ ಸ್ಟಾರ್ ಸ್ಟೇಟಸ್ ಕಾಲೇಜುಗಳ ಮಾರ್ಗದರ್ಶಕ ಕಾರ್ಯಕ್ರಮವು ಪ್ರಧಾನ ಮಂತ್ರಿಯವರ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಅನುಗುಣವಾಗಿದೆ ಎಂದರು. ಎಲ್ಲಾ ಕ್ಷೇತ್ರಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳು ಮುಂದಿನ 25 ವರ್ಷಗಳ ಮಾರ್ಗಸೂಚಿಯನ್ನು ನಿರ್ಧರಿಸಲಿವೆ ಎಂದು ಅಂದು ಪ್ರಧಾನಿ ಭಾಷಣದಲ್ಲಿ ಹೇಳಿದ್ದರು ಮತ್ತು ಯುವ ವಿಜ್ಞಾನಿಗಳಿಗೆ ಈ ನಿಟ್ಟಿನಲ್ಲಿ ನುಡಿದಂತೆ ನಡೆಯಲು ಕರೆ ನೀಡಿದ್ದರು. ಉತ್ತಮ ವ್ಯಾಖ್ಯಾನಿತ ಕಾರ್ಯತಂತ್ರಗಳು ಮತ್ತು ಸ್ಪಷ್ಟ ಅನುಷ್ಠಾನ ಕ್ರಿಯಾಯೋಜನೆ, ಸುಸ್ಪಷ್ಟವಾದ ದೂರದೃಷ್ಟಿ, ಯೋಜನೆ ಮತ್ತು ಗುರಿಗಳ ಮೂಲಕ ಮಾತ್ರ ಇದು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು.
ಪ್ರಸ್ತುತ ʻಡಿಬಿಟಿʼ ಸ್ಟಾರ್ ಕಾಲೇಜು ಯೋಜನೆಯಡಿ ದೇಶಾದ್ಯಂತ ಒಟ್ಟು 278 ಪದವಿಪೂರ್ವ ಕಾಲೇಜುಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. 2018-19ನೇ ಸಾಲಿನಲ್ಲಿ ಯೋಜನೆಯನ್ನು ನಗರ ಮತ್ತು ಗ್ರಾಮೀಣ ವಿಭಾಗಗಳಾಗಿ ವರ್ಗೀಕರಿಸಿದ್ದರಿಂದ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅರ್ಜಿದಾರರಿಗೆ ಉತ್ತಮ ಅವಕಾಶಗಳನ್ನು ಖಾತ್ರಿಗೊಳಿಸಿದೆ ಎಂದು ಅವರು ಹೇಳಿದರು. ಪ್ರಸ್ತುತ ಗ್ರಾಮೀಣ ಪ್ರದೇಶಗಳಿಂದ 55 ಕಾಲೇಜುಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳ 15 ಕಾಲೇಜುಗಳಿಗೆ ಎರಡು ವರ್ಷಗಳ ಅಲ್ಪಾವಧಿಯಲ್ಲಿ ಈ ಯೋಜನೆಯಡಿ ಬೆಂಬಲ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕಳೆದ ಐದು ವರ್ಷಗಳಲ್ಲಿ 1.5 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲಾಗಿದೆ ಮತ್ತು ಸ್ಟಾರ್ ಕಾಲೇಜು ಯೋಜನೆಯಲ್ಲಿ ಭಾಗವಹಿಸುವ ಕಾಲೇಜುಗಳಿಗೆ ಸಮಗ್ರ ನೆರವನ್ನು ನೀಡಲಾಗಿದೆ ಎಂದು ಸಚಿವರು ಹೇಳಿದರು. ಈ ಬೆಂಬಲವು ಉಪಕರಣಗಳ ಖರೀದಿಗೆ ಮಾತ್ರ ಸೀಮಿತವಾಗಿಲ್ಲ. ಬೋಧಕ ಮತ್ತು ಪ್ರಯೋಗಾಲಯ ಸಿಬ್ಬಂದಿಗೆ ತರಬೇತಿ, ಪ್ರಸಿದ್ಧ ವಿಜ್ಞಾನಿಗಳ ಉಪನ್ಯಾಸಗಳು, ಸಂಶೋಧನಾ ಸಂಸ್ಥೆಗಳು ಮತ್ತು ಉದ್ಯಮಕ್ಕೆ ಭೇಟಿ ಇತ್ಯಾದಿಗಳನ್ನು ಈ ಯೋಜನೆಯು ಬೆಂಬಲಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಈ ರೀತಿಯ ಸಮಗ್ರ ಬೆಂಬಲದಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ಹೊಂದಲು ಮತ್ತು ವಿಜ್ಞಾನ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.
ಸ್ಟಾರ್ ಕಾಲೇಜು ಯೋಜನೆ, ಜೈವಿಕ ತಂತ್ರಜ್ಞಾನದಲ್ಲಿ ಕೌಶಲ್ಯ ವಿಜ್ಞಾನ ಕಾರ್ಯಕ್ರಮ (ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ), ಜೈವಿಕ ತಂತ್ರಜ್ಞಾನ ಕೈಗಾರಿಕಾ ತರಬೇತಿ ಕಾರ್ಯಕ್ರಮ, ಡಾಕ್ಟರಲ್ ಮತ್ತು ಪೋಸ್ಟ್ ಡಾಕ್ಟರಲ್ ಹಗೂ ಮರು ಪ್ರವೇಶ ಯೋಜನೆಗಳು ಇತ್ಯಾದಿ ಮಾನವ ಸಂಪನ್ಮೂಲ ಸಂಬಂಧಿತ ಯೋಜನೆಗಳಲ್ಲಿ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲು ಗಮನ ಹರಿಸುವ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದರು.
***
(Release ID: 1770112)
Visitor Counter : 271