ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ರಸಗೊಬ್ಬರ ಕೊರತೆಯ ವದಂತಿಗಳನ್ನು ತಳ್ಳಿಹಾಕಿದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ. ಮನ್ಸುಖ್ ಮಾಂಡವಿಯಾ
ರಸಗೊಬ್ಬರಗಳ ದಾಸ್ತಾನು ಮಾಡದಂತೆ ಎಲ್ಲಾ ರೈತರಿಗೆ ಮನವಿ
ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
प्रविष्टि तिथि:
01 NOV 2021 4:42PM by PIB Bengaluru
ದೇಶದಲ್ಲಿ ರಸಗೊಬ್ಬರ ಕೊರತೆಯ ವದಂತಿಗಳನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರು ಇಂದು ತಳ್ಳಿಹಾಕಿದ್ದಾರೆ.
ರಸಗೊಬ್ಬರ ಕೊರತೆಯ ವದಂತಿಗಳನ್ನು ಸ್ಪಷ್ಟವಾಗಿ ಅಲ್ಲಗಳೆದ ಕೇಂದ್ರ ಸಚಿವರು, ನವೆಂಬರ್ ತಿಂಗಳ ರಸಗೊಬ್ಬರಗಳ ಉತ್ಪಾದನಾ ಗುರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ್ದೇನೆ ಎಂದರು. ಉತ್ಪಾದನೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿರುವ ಬೇಡಿಕೆಯನ್ನು ಮೀರಿಸುತ್ತದೆ. ಯೂರಿಯಾ ಬೇಡಿಕೆ 41 ಲಕ್ಷ ಮೆ.ಟನ್ ಇದ್ದರೆ, 76 ಲಕ್ಷ ಮೆ.ಟನ್ ಯೂರಿಯಾ ಉತ್ಪಾದನೆಯಾಗಲಿದೆ. ಅದೇ ರೀತಿ, ಡಿಎಪಿ ಗೆ 17 ಲಕ್ಷ ಮೆ.ಟನ್ ಬೇಡಿಕೆಯಿದ್ದರೆ 18 ಲಕ್ಷ ಮೆ.ಟನ್ ಡಿಎಪಿ ಉತ್ಪಾದಿಸಲಾಗುತ್ತದೆ. ಎನ್ ಪಿ ಕೆ ಗೆ 15 ಲಕ್ಷ ಮೆ.ಟನ್ ಬೇಡಿಕೆ ಇದೆ. ಆದರೆ ಉತ್ಪಾದನೆ 30 ಲಕ್ಷ ಮೆ.ಟನ್ ಆಗಲಿದೆ ಎಂದು ಸಚಿವರು ಹೇಳಿದರು.
ರಸಗೊಬ್ಬರ ದಾಸ್ತಾನು ಮಾಡದಂತೆ ಎಲ್ಲ ರೈತರಲ್ಲಿ ಕೇಂದ್ರ ಸಚಿವರು ಮನವಿ ಮಾಡಿದರು. ವದಂತಿಗಳಿಗೆ ಕಿವಿಗೊಡಬೇಡಿ ಎಂದೂ ಅವರು ಮನವಿ ಮಾಡಿದರು. ವದಂತಿಯನ್ನು ಗುರಾಣಿಯಾಗಿಟ್ಟುಕೊಂಡು ರಸಗೊಬ್ಬರಗಳ ಕಾಳಸಂತೆಯ ಮಾರಾಟಕ್ಕೆ ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.
ದೇಶದಲ್ಲಿ ರಸಗೊಬ್ಬರ ಉತ್ಪಾದನೆ ಮತ್ತು ಅದರ ಚಲನೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ರೈತರು ಅಗತ್ಯ ಪ್ರಮಾಣದ ರಸಗೊಬ್ಬರವನ್ನು ಪಡೆಯಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಭರವಸೆ ನೀಡಿದರು.
***
(रिलीज़ आईडी: 1768668)
आगंतुक पटल : 242