ಪ್ರಧಾನ ಮಂತ್ರಿಯವರ ಕಛೇರಿ

ವ್ಯಾಟಿಕನ್ ಸಿಟಿಗೆ ಪ್ರಧಾನಮಂತ್ರಿಯವರ ಭೇಟಿ

Posted On: 30 OCT 2021 6:04PM by PIB Bengaluru

ಶನಿವಾರ 30 ಅಕ್ಟೋಬರ್ 2021ರಂದು ವ್ಯಾಟಿಕನ್ ನ ಅಪೋಸ್ಟೋಲಿಕ್ ಪ್ಯಾಲೇಸ್ನಲ್ಲಿ  ಪೋಪ್ ಫ್ರಾನ್ಸಿಸ್ ಅವರು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಖಾಸಗಿಯಾಗಿ ಬರಮಾಡಿಕೊಂಡರು.

ಎರಡು ದಶಕಗಳ ನಂತರ ಭಾರತದ ಪ್ರಧಾನಮಂತ್ರಿ ಮತ್ತು ಪೋಪ್ ರವರ ನಡುವಿನ ಮೊದಲ ಭೇಟಿ ಇದಾಗಿದೆ. ಜೂನ್ 2000 ರಲ್ಲಿ, ದಿವಂಗತ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಕೊನೆಯದಾಗಿ ವ್ಯಾಟಿಕನ್ ಗೆ ಭೇಟಿ ನೀಡಿದ್ದರು ಮತ್ತು ಆಗಿನ ಪೋಪ್ 2ನೇ ಜಾನ್ ಪಾಲ್ ಅವರನ್ನು ಭೇಟಿ ಮಾಡಿದ್ದರು. ಭಾರತ ಮತ್ತು ಹೋಲಿ ಸೀ 1948ರಿಂದಲೇ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ ಸ್ನೇಹ ಸಂಬಂಧವನ್ನು ಹೊಂದಿವೆ. ಭಾರತವು ಏಷ್ಯಾದಲ್ಲಿ ಎರಡನೇ ಅತಿದೊಡ್ಡ ಕ್ಯಾಥೋಲಿಕ್ ಜನಸಂಖ್ಯೆ ಹೊಂದಿರುವ ಸ್ಥಳವಾಗಿದೆ.

ಇಂದಿನ ಸಭೆಯಲ್ಲಿ, ಉಭಯ ನಾಯಕರು ಕೋವಿಡ್ -19 ಸಾಂಕ್ರಾಮಿಕ ಮತ್ತು ಪ್ರಪಂಚದಾದ್ಯಂತದ ಜನರಿಗೆ ಅದರಿಂದಾದ ಪರಿಣಾಮಗಳ ಬಗ್ಗೆ ಚರ್ಚಿಸಿದರು. ಹವಾಮಾನ ಬದಲಾವಣೆಯಿಂದ ಎದುರಾಗಿರುವ ಸವಾಲಿನ ಬಗ್ಗೆಯೂ ಚರ್ಚಿಸಿದರು. ಹವಾಮಾನ ಬದಲಾವಣೆಯನ್ನು ಎದುರಿಸುವಲ್ಲಿ ಭಾರತ ಕೈಗೊಂಡ ಮಹತ್ವಾಕಾಂಕ್ಷೆಯ ಉಪಕ್ರಮಗಳ ಬಗ್ಗೆ ಮತ್ತು ಒಂದು ನೂರು ಕೋಟಿ ಕೋವಿಡ್ -19 ಲಸಿಕೆ ಡೋಸ್ಗಳನ್ನು ನೀಡುವಲ್ಲಿ ಭಾರತದ ಯಶಸ್ಸಿನ ಬಗ್ಗೆ ಪ್ರಧಾನಮಂತ್ರಿಯವರು ಪೋಪ್ ಅವರಿಗೆ ವಿವರಿಸಿದರು. ಸಾಂಕ್ರಾಮಿಕ ಸಮಯದಲ್ಲಿ ಅಗತ್ಯವಿರುವ ದೇಶಗಳಿಗೆ ನೀಡುವ ಭಾರತದ ಸಹಾಯವನ್ನು ಪೋಪ್ ರವರು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ಪೋಪ್ ಫ್ರಾನ್ಸಿಸ್ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನವನ್ನು ನೀಡಿದರು, ಅದನ್ನು ಅವರು ಸಂತೋಷದಿಂದ ಸ್ವೀಕರಿಸಿದರು.

ಪ್ರಧಾನಮಂತ್ರಿಯವರು ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಅವರನ್ನು ಕೂಡ ಭೇಟಿ ಮಾಡಿದರು.

***



(Release ID: 1767983) Visitor Counter : 180