ವಾರ್ತಾ ಮತ್ತು ಪ್ರಸಾರ ಸಚಿವಾಲಯ

67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿದ ಉಪ ರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು


ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾದ ಶ್ರೀ ರಜನೀಕಾಂತ್

ಸಮಾಜದ ಎಲ್ಲ ವರ್ಗಗಳಿಗೂ ಮನರಂಜನೆಗೆ ಸಮಾನ ಪ್ರವೇಶ ಇರಬೇಕು: ಶ್ರೀ ಅನುರಾಗ್ ಠಾಕೂರ್

Posted On: 25 OCT 2021 4:54PM by PIB Bengaluru

ಭಾರತದ ಉಪ ರಾಷ್ಟ್ರಪತಿ ಶ್ರೀ ಎಂ ವೆಂಕಯ್ಯನಾಯ್ಡು ಅವರಿಂದು ವಿವಿಧ ಪ್ರವರ್ಗಗಳಲ್ಲಿ 67ನೇ ಆವೃತ್ತಿಯ 2019ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ತೀರ್ಪುಗಾರರ ಮಂಡಳಿಯ ಅಧ್ಯಕ್ಷರು ಮತ್ತು ಇತರ ಗಣ್ಯರು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಉಪಸ್ಥಿತರಿದ್ದರು.

  

 

ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಜನಪ್ರಿಯ ನಟ ಶ್ರೀ ರಜನಿಕಾಂತ್ ಅವರಿಗೆ ಮತ್ತು ವಿವಿಧ ಭಾಷೆಗಳ ನಟರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದ ತರುವಾಯ ಮಾತನಾಡಿದ ಉಪ ರಾಷ್ಟ್ರಪತಿಯವರು, ಚಲನಚಿತ್ರಗಳು ಉನ್ನತ ಉದ್ದೇಶವನ್ನು ಹೊಂದಿರುವ ವಾಹಕವಾಗಿರಬೇಕು-ಸಾಮಾಜಿಕ, ನೀತಿ ಮತ್ತು ನೈತಿಕ ಸಂದೇಶದ ವಾಹಕವಾಗಿರಬೇಕು ಎಂದರು. "ಅಲ್ಲದೆ, ಚಲನಚಿತ್ರಗಳು ಹಿಂಸೆಯನ್ನು ಪ್ರತಿಪಾದಿಸುವುದನ್ನು ತಗ್ಗಿಸಬೇಕು ಮತ್ತು ಸಾಮಾಜಿಕ ಪಿಡುಗುಗಳ ಬಗ್ಗೆ ಸಮಾಜದ ಅಸಮ್ಮತಿಗೆ ಧ್ವನಿಗೂಡಿಸಬೇಕು" ಎಂದೂ ಅವರು ಹೇಳಿದರು.

ಉತ್ತಮ ಚಲನಚಿತ್ರಕ್ಕೆ ಮನಸ್ಸು ಮತ್ತು ಹೃದಯವನ್ನು ತಟ್ಟುವ ಶಕ್ತಿ ಇರುತ್ತದೆ ಎಂದ ಶ್ರೀ ವೆಂಕಯ್ಯನಾಯ್ಡು, ಸಿನಿಮಾ ವಿಶ್ವದಲ್ಲೇ ಅತ್ಯಂತ ಅಗ್ಗದ ಮನರಂಜನೆಯಾಗಿದೆ ಎಂದರು. ಇದನ್ನು ರಾಷ್ಟ್ರ ಮತ್ತು ಸಮಾಜದ ಜನರ ಒಳಿತಿಗಾಗಿ ಬಳಸುವಂತೆ ಚಿತ್ರ ನಿರ್ಮಾಪಕರು ಮತ್ತು ಕಲಾವಿದರಿಗೆ ಅವರು ಆಗ್ರಹಿಸಿದರು.

ಧನಾತ್ಮಕತೆ ಮತ್ತು ಸಂತಸವನ್ನು ಹೊರಹೊಮ್ಮಿಸಲು ಸಿನಿಮಾದ ಅಗತ್ಯ ಪ್ರತಿಪಾದಿಸಿದ ಅವರು, "ಸಂದೇಶವುಳ್ಳ ಚಲನಚಿತ್ರವು ಶಾಶ್ವತವಾದ ಆಕರ್ಷಣೆಯನ್ನು ಹೊಂದಿರುತ್ತದೆ ಎಂದು ಅನುಭವವು ನಮಗೆ ಹೇಳುತ್ತದೆ". ಸಿನಿಮಾಕ್ಕೆ ಮನರಂಜನೆಯ ಜೊತೆಗೆ ಜ್ಞಾನೋದಯ ಮಾಡಿಸುವ ಶಕ್ತಿಯೂ ಇದೆ ಎಂದರು.

ಶ್ರೀ ಅನುರಾಗ್ ಠಾಕೂರ್ ಮಾತನಾಡಿ, ಸಮಾಜದ ಎಲ್ಲ ವರ್ಗದವರಿಗೆ ಮನರಂಜನೆ ಸಮಾನವಾಗಿ ಸಿಗುವಂತಾಗಬೇಕು ಎಂದರು. ಕೇಂದ್ರ ಸರ್ಕಾರ ಕೋವಿಡ್ 19 ಲಸಿಕೆ ಬಡವರು ಮತ್ತು ಶ್ರೀಮಂತರಿಬ್ಬರಿಗೂ ಲಭ್ಯವಾಗುವಂತೆ ಮಾಡಿದೆ ಅದೇ ರೀತಿ, ಬಡವರು ಮತ್ತು ಶ್ರೀಮಂತರು ಇಬ್ಬರಿಗೂ ಮನರಂಜನೆಯ ಸಮಾನ ಹಕ್ಕು ಇರಬೇಕು ಎಂದು ತಿಳಿಸಿದರು. ಗ್ರಾಮೀಣ ಮತ್ತು ದೂರದ ಪ್ರದೇಶದ ಪ್ರೇಕ್ಷಕರಿಗೆ ಏಕಕಾಲದಲ್ಲಿ ಸಿನಿಮಾ ತೆಗೆದುಕೊಂಡು ಹೋಗಲು ಮಾರ್ಗೋಪಾಯಗಳನ್ನು ಹುಡುಕುವಂತೆ ಸಚಿವರು ಚಲನಚಿತ್ರೋದ್ಯಮಕ್ಕೆ ತಾಕೀತು ಮಾಡಿದರು.

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಾವು ಭಾರತದ 75 ಯುವ ಸೃಜನಶೀಲ ಮನಸ್ಸುಗಳಿಗೆ ವೇದಿಕೆಯನ್ನು ಮುಕ್ತವಾಗಿಟ್ಟಿದ್ದೇವೆ ಎಂದು ಸಚಿವರು ತಿಳಿಸಿದರು. 52 ನೇ ಇಪ್ಫಿ 75 ಪ್ರತಿಭಾನ್ವಿತ ಯುವಕರಿಗೆ ವಿಶ್ವ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತಿದೆ. ಚಲನಚಿತ್ರೋತ್ಸವ ನಿರ್ದೇಶನಾಲಯ ದೇಶಾದ್ಯಂತದ ಹವ್ಯಾಸಿ ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಮಾ ಪ್ರೇಮಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಸ್ಪರ್ಧೆಯಲ್ಲಿ 75 ಅತ್ಯುತ್ತಮ ಪ್ರವೇಶಗಳನ್ನು ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರೋತ್ಸವ,ಇಫ್ಪಿಗೆ ಪ್ರತಿನಿಧಿಗಳಾಗಿ ಆಹ್ವಾನಿಸಲಾಗುತ್ತದೆ ಎಂದರು.

2019ನೇ ಸಾಲಿನ ಅತ್ಯುತ್ತಮ ಫೀಚರ್ ಫಿಲ್ಮೇತರ (ಸಾಕ್ಷ್ಯಚಿತ್ರ) ಪ್ರಶಸ್ತಿಯನ್ನು ಶ್ರೀ ಹೇಮಂತ್ ಗಬಾ ನಿರ್ಮಿಸಿ ನಿರ್ದೇಶಿಸಿದ ಎಂಜಿನಿಯರ್ಡ್ ಡ್ರೀಮ್ (ಹಿಂದಿ)ಗೆ ನೀಡಲಾಯಿತು, ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಶ್ರೀ ಪ್ರಿಯದರ್ಶನ್ ನಿರ್ದೇಶನದ ಮರಕ್ಕರ್-ಅರಬಿಕ್ಕದಲಿಂತೆ-ಸಿಂಹಮ್ (ಮಲಯಾಳಂ) ಪಡೆಯಿತು.

ರಾಷ್ಟ್ರೀಯ ಏಕತೆಯ ಕುರಿತಂತೆ ಅತ್ಯುತ್ತಮ ಚಲನಚಿತ್ರವಾಗಿ ತಾಜ್ ಮಹಲ್ (ಮರಾಠಿ) ನರ್ಗಿಸ್ ದತ್ ಪ್ರಶಸ್ತಿ ಪಡೆಯಿತು. ಶ್ರೀ ಧನುಷ್ ಮತ್ತು ಶ್ರೀ ಮನೋಜ್ ಬಾಜಪೇಯಿ ಅವರಿಬ್ಬರಿಗೂ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾದರೆ, ಕುಮಾರಿ ಕಂಗನಾ ರಣಾವತ್ ಅವರಿಗೆ ಮಣಿ ಕರ್ಣಿಕಾಜಾನ್ಸಿಯ ರಾಣಿ (ಹಿಂದಿ) ಮತ್ತು ಪಂಗಾ (ಹಿಂದಿ) ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾರೆಯರಿಂದ ಕೂಡಿದ ಪ್ರಶಸ್ತಿ ಪ್ರದಾನ ಸಮಾರಂಭವು ಶ್ರೀ ವಿಜಯಾ ಸೇತುಪಥಿ, ಶ್ರೀಮತಿ ಪಲ್ಲವಿ ಜೋಶಿ, ಶ್ರೀ ಬಿ ಪ್ರಾಕ್ ಮತ್ತಿತರರ ಅದ್ಭುತ ಪ್ರದರ್ಶನಕ್ಕೂ ಸಾಕ್ಷಿಯಾಯಿತು.

ಪ್ರಶಸ್ತಿಗಳ ವಿವರವಾದ ಪಟ್ಟಿ ಮತ್ತು ಆಯ್ಕೆದಾರರ ಸಮಿತಿಯ ಸದಸ್ಯರ ವಿವರಗಳು ಇಲ್ಲಿ  ಲಭ್ಯ

***



(Release ID: 1766893) Visitor Counter : 205