ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ಬಾಹ್ಯಾಕಾಶ ಸಂಘದ ಪ್ರಾರಂಭೋತ್ಸವ ದಲ್ಲಿ ಪ್ರಧಾನಮಂತ್ರಿಯವರ ಭಾಷಣ
Posted On:
11 OCT 2021 1:45PM by PIB Bengaluru
ನಿಮ್ಮ ಯೋಜನೆಗಳು ಮತ್ತು ದೂರದೃಷ್ಟಿಯನ್ನು ಕೇಳಿ ಮತ್ತು ನಿಮ್ಮ ಉತ್ಸಾಹವನ್ನು ನೋಡುತ್ತಾ, ನನ್ನ ಉತ್ಸಾಹವು ಇನ್ನಷ್ಟು ಹೆಚ್ಚಾಗಿದೆ.
ಸ್ನೇಹಿತರೇ,
ಇಂದು ದೇಶದ ಇಬ್ಬರು ಮಹಾನ್ ಪುತ್ರರಾದ ಭಾರತ ರತ್ನ ಶ್ರೀ ಜಯಪ್ರಕಾಶ್ ನಾರಾಯಣ್ ಜಿ ಮತ್ತು ಭಾರತ ರತ್ನ ಶ್ರೀ ನಾನಾಜಿ ದೇಶಮುಖ್ ಅವರ ಜನ್ಮ ದಿನಾಚರಣೆ. ಈ ಇಬ್ಬರು ಮಹಾನ್ ವ್ಯಕ್ತಿಗಳು ಸ್ವಾತಂತ್ರ್ಯೋತ್ತರ ಭಾರತಕ್ಕೆ ಮಾರ್ಗದರ್ಶನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಜೀವನ ತತ್ವವು ರಾಷ್ಟ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಎಲ್ಲರನ್ನೂ ಜೊತೆಯಲ್ಲಿ ಸೇರಿಸಿಕೊಂಡು ಮತ್ತು ಎಲ್ಲರ ಪ್ರಯತ್ನಗಳು ನಮಗೆ ಸ್ಫೂರ್ತಿ ನೀಡುತ್ತಲೇ ಇವೆ. ನಾನು ಜಯಪ್ರಕಾಶ್ ನಾರಾಯಣ್ ಜೀ ಮತ್ತು ನಾನಾಜಿ ದೇಶಮುಖ್ ಅವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
21 ನೇ ಶತಮಾನದ ಭಾರತವು ಮುಂದುವರಿಯುತ್ತಿದೆ ಮತ್ತು ಸುಧಾರಣೆಗಳನ್ನು ಕೈಗೊಳ್ಳುತ್ತಿದೆ ಎನ್ನುವುದು ಭಾರತದ ಸಾಮರ್ಥ್ಯದ ಮೇಲೆ ಇರುವ ಅಚಲವಾದ ನಂಬಿಕೆಯಾಗಿದೆ. ಭಾರತದ ಶಕ್ತಿ ವಿಶ್ವದ ಪ್ರಮುಖ ದೇಶಗಳಿಗಿಂತ ಕಡಿಮೆಯಿಲ್ಲ. ಈ ಸಾಮರ್ಥ್ಯದ ಮುಂದೆ ಬರುವ ಪ್ರತಿಯೊಂದು ಅಡೆತಡೆಗಳನ್ನು ತೆಗೆದುಹಾಕುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ ಮತ್ತು ಇದಕ್ಕಾಗಿ ಸರ್ಕಾರವು ಯಾವುದೇ ಪ್ರಯತ್ನವನ್ನು ಮಾಡದೇ ಬಿಡುವುದಿಲ್ಲ. ಇಂದಿನಂತೆ ಭಾರತದಲ್ಲಿ ಇಂಥ ದೃಢ ನಿರ್ಧಾರಗಳನ್ನು ಕೈಗೊಳ್ಳುವಂತಹ ಸರ್ಕಾರ ಇರಲಿಲ್ಲ. ಬಾಹ್ಯಾಕಾಶ ವಲಯದಲ್ಲಿನ ಪ್ರಮುಖ ಸುಧಾರಣೆಗಳು ಮತ್ತು ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳು ಇದಕ್ಕೆ ಉದಾಹರಣೆಗಳಾಗಿವೆ. ಭಾರತೀಯ ಬಾಹ್ಯಾಕಾಶ ಸಂಘ (ಐ ಎಸ್ ಪಿ ಎ) ರಚಿಸಿದ್ದಕ್ಕಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೇ,
ನಾವು ಬಾಹ್ಯಾಕಾಶ ಸುಧಾರಣೆಗಳ ಬಗ್ಗೆ ಮಾತನಾಡುವಾಗ, ನಮ್ಮ ವಿಧಾನವು ನಾಲ್ಕು ಸ್ತಂಭಗಳನ್ನು ಆಧರಿಸಿದೆ. ಮೊದಲನೆಯದಾಗಿ, ಖಾಸಗಿ ವಲಯಕ್ಕೆ ಆವಿಷ್ಕಾರ ಮಾಡಲು ಸ್ವಾತಂತ್ರ್ಯ ನೀಡುವುದು.; ಎರಡನೆಯದಾಗಿ, ಸರ್ಕಾರ ಸಕ್ರಿಯವಾಗಿ ಪ್ರಮುಖ ಪಾತ್ರ ವಹಿಸುವುದು; ಮೂರನೆಯದಾಗಿ, ಯುವಶಕ್ತಿಯನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವುದು; ಮತ್ತು ನಾಲ್ಕನೆಯದಾಗಿ, ಬಾಹ್ಯಾಕಾಶ ಕ್ಷೇತ್ರವನ್ನು ಸಾಮಾನ್ಯ ಜನರ ಪ್ರಗತಿಗೆ ಸಂಪನ್ಮೂಲವಾಗಿ ಕಲ್ಪಿಸುವುದು. ಈ ಎಲ್ಲಾ ನಾಲ್ಕು ಸ್ತಂಭಗಳ ಅಡಿಪಾಯವು ಅಸಾಧಾರಣ ಸಾಧ್ಯತೆಗಳಿಗೆ ಬಾಗಿಲು ತೆರೆಯುತ್ತದೆ.
ಸ್ನೇಹಿತರೇ,
ಈ ಮೊದಲು ಬಾಹ್ಯಾಕಾಶ ಕ್ಷೇತ್ರ ಎಂದರೆ ಸರ್ಕಾರ ಎಂದು ನೀವು ಒಪ್ಪಿಕೊಳ್ಳುತ್ತೀರಿ! ಆದರೆ ನಾವು ಮೊದಲು ಈ ಮನಸ್ಥಿತಿಯನ್ನು ಬದಲಾಯಿಸಿದೆವು, ಮತ್ತು ನಂತರ ಬಾಹ್ಯಾಕಾಶ ಕ್ಷೇತ್ರದಲ್ಲಿ ಆವಿಷ್ಕಾರಕ್ಕಾಗಿ ಸರ್ಕಾರ ಮತ್ತು ನವೋದ್ಯಮಗಳ ನಡುವೆ ಸಹಕಾರದ ಮಂತ್ರವನ್ನು ನೀಡಿದ್ದೇವೆ. ಈ ಹೊಸ ವಿಧಾನ ಮತ್ತು ಹೊಸ ಮಂತ್ರ ಅಗತ್ಯವಾಗಿದೆ ಏಕೆಂದರೆ ಭಾರತದಲ್ಲಿ ಈಗ ಲೀನಿಯರ್ ಆವಿಷ್ಕಾರಕ್ಕಾಗಿ ಸಮಯವಿಲ್ಲ. ಘಾತೀಯ (ಎಷಪೊನೆನ್ಷಿಯಲ್) ಆವಿಷ್ಕಾರದ ಸಮಯ ಇದು. ಸರ್ಕಾರವು ನಿರ್ವಹಿಸುವ ಪಾತ್ರವನ್ನು ಮಾಡದೆ ಸಕ್ರಿಯಗೊಳಿಸುವ ಪಾತ್ರವನ್ನು ಮಾಡಿದರೆ ಇದು ಸಾಧ್ಯವಾಗುತ್ತದೆ. ಆದ್ದರಿಂದ, ಸರ್ಕಾರವು ತನ್ನ ಪರಿಣತಿಯನ್ನು ಖಾಸಗಿಯವರಿಗೆ ಲಾಂಚ್ ಪ್ಯಾಡ್ ಗಳನ್ನು ಒದಗಿಸಲು ರಕ್ಷಣಾ ವಲಯದಿಂದ ಬಾಹ್ಯಾಕಾಶ ವಲಯದವರೆಗೆ ಹಂಚಿಕೊಳ್ಳುತ್ತಿದೆ. ಈಗ ಇಸ್ರೋವನ್ನು ಖಾಸಗಿ ವಲಯಕ್ಕಾಗಿ ತೆರೆಯಲಾಗುತ್ತಿದೆ. ಈ ವಲಯದಲ್ಲಿ ಪ್ರಬುದ್ಧವಾಗಿರುವ ತಂತ್ರಜ್ಞಾನವನ್ನು ಖಾಸಗಿಯವರಿಗೆ ವರ್ಗಾಯಿಸುವುದನ್ನು ಖಾತ್ರಿಪಡಿಸಲಾಗುವುದು. ನಮ್ಮ ಯುವ ಸಂಶೋದಕರು ಸಲಕರಣೆಗಳನ್ನು ಖರೀದಿಸಲು ಸಮಯ ಮತ್ತು ಶಕ್ತಿಯನ್ನು ವ್ಯಯಿಸದಂತೆ ಬಾಹ್ಯಾಕಾಶ ವಿಭಾಗದ ಸ್ವತ್ತು ಮತ್ತು ಸೇವೆಗಳಿಗೆ ಸರ್ಕಾರವು ಸಂಗ್ರಾಹಕನ ಪಾತ್ರವನ್ನು ವಹಿಸುತ್ತದೆ.
ಸ್ನೇಹಿತರೇ,
ಖಾಸಗಿ ವಲಯದ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ದೇಶವು ಐಎನ್-ಎಸ್ ಪಿ ಎ ಸಿ ಇ (IN-SPACe) ಅನ್ನು ಸ್ಥಾಪಿಸಿದೆ. ಐಎನ್-ಎಸ್ ಪಿ ಎ ಸಿ ಇ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಏಕ ಗವಾಕ್ಷಿ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಖಾಸಗಿ ವಲಯದ ಭಾಗಸ್ಥರಿಗೆ ಮತ್ತು ಅವರ ಯೋಜನೆಗಳಿಗೆ ಹೆಚ್ಚಿನ ವೇಗವನ್ನು ನೀಡುತ್ತದೆ.
ಸ್ನೇಹಿತರೇ,
ನಮ್ಮ ಬಾಹ್ಯಾಕಾಶ ಕ್ಷೇತ್ರವು 130 ಕೋಟಿ ದೇಶವಾಸಿಗಳ ಪ್ರಗತಿಗೆ ಪ್ರಮುಖ ಮಾಧ್ಯಮವಾಗಿದೆ. ನಮಗೆ, ಬಾಹ್ಯಾಕಾಶ ಕ್ಷೇತ್ರ ಎಂದರೆ ಸಾಮಾನ್ಯ ಜನರಿಗೆ ಉತ್ತಮ ನಕ್ಷೆ, ಇಮೇಜಿಂಗ್ ಮತ್ತು ಸಂಪರ್ಕ ಸೌಲಭ್ಯಗಳು; ಉದ್ಯಮಿಗಳಿಗೆ ಸಾಗಣೆಯಿಂದ ವಿತರಣೆಗೆ ಉತ್ತಮ ವೇಗ; ರೈತರು ಮತ್ತು ಮೀನುಗಾರರಿಗೆ ಉತ್ತಮ ಹವಾಮಾನ ಮುನ್ಸೂಚನೆ, ಭದ್ರತೆ ಮತ್ತು ಆದಾಯ; ಪರಿಸರ ವಿಜ್ಞಾನ ಮತ್ತು ಪರಿಸರದ ಉತ್ತಮ ಮೇಲ್ವಿಚಾರಣೆ; ನೈಸರ್ಗಿಕ ವಿಪತ್ತುಗಳ ನಿಖರವಾದ ಮುನ್ಸೂಚನೆ; ಮತ್ತು ಲಕ್ಷಾಂತರ ಜೀವಗಳ ರಕ್ಷಣೆ. ದೇಶದ ಈ ಗುರಿಗಳು ಈಗ ಭಾರತೀಯ ಬಾಹ್ಯಾಕಾಶ ಸಂಘದ ಸಾಮಾನ್ಯ ಗುರಿಯಾಗಿದೆ.
ಸ್ನೇಹಿತರೇ,
ದೇಶವು ಏಕಕಾಲದಲ್ಲಿ ಅನೇಕ ಸುಧಾರಣೆಗಳನ್ನು ಕಾಣುತ್ತಿದ್ದರೆ ಅದಕ್ಕೆ ಕಾರಣ ದೇಶದ ದೃಷ್ಟಿಕೋನ ಈಗ ಸ್ಪಷ್ಟವಾಗಿದೆ. ಈ ದೃಷ್ಟಿಕೋನವು ಆತ್ಮ ನಿರ್ಭರ ಭಾರತದ್ದು. ಆತ್ಮನಿರ್ಭರ ಭಾರತ ಅಭಿಯಾನವು ಕೇವಲ ದೃಷ್ಟಿಕೋನವಲ್ಲ ಬದಲಾಗಿ ಉತ್ತಮ ಚಿಂತನೆ, ಉತ್ತಮ ಯೋಜನೆ, ಸಮಗ್ರ ಆರ್ಥಿಕ ತಂತ್ರವಾಗಿದೆ. ಇದು ಭಾರತದ ಉದ್ಯಮಿಗಳು ಮತ್ತು ಯುವಕರ ಕೌಶಲ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಕೇಂದ್ರವನ್ನಾಗಿಸುವ ತಂತ್ರವಾಗಿದೆ. ಭಾರತದ ತಾಂತ್ರಿಕ ಪರಿಣತಿಯ ಆಧಾರದ ಮೇಲೆ ಭಾರತವನ್ನು ಜಾಗತಿಕ ಆವಿಷ್ಕಾರಗಳ ಕೇಂದ್ರವನ್ನಾಗಿಸುವ ತಂತ್ರ. ಜಾಗತಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಒಂದು ತಂತ್ರ, ಜಾಗತಿಕ ಮಟ್ಟದಲ್ಲಿ ಭಾರತದ ಮಾನವ ಸಂಪನ್ಮೂಲ ಮತ್ತು ಪ್ರತಿಭೆಯ ಘನತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಿಯಂತ್ರಕ ವಾತಾವರಣವನ್ನು ಸೃಷ್ಟಿಸುವಾಗ, ದೇಶದ ಹಿತಾಸಕ್ತಿ ಮತ್ತು ಪಾಲುದಾರರಿಗೆ ಆದ್ಯತೆ ನೀಡುವುದಕ್ಕೆ ಭಾರತವು ಹೆಚ್ಚಿನ ಕಾಳಜಿ ವಹಿಸುತ್ತಿದೆ. ಭಾರತವು ಈಗಾಗಲೇ ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ರಕ್ಷಣಾ, ಕಲ್ಲಿದ್ದಲು ಮತ್ತು ಗಣಿಗಾರಿಕೆಯಂತಹ ಕ್ಷೇತ್ರಗಳನ್ನು ತೆರೆದಿದೆ. ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿಯೊಂದಿಗೆ ಮುಂದುವರಿಯುತ್ತಿದೆ ಮತ್ತು ಸರ್ಕಾರದ ಪಾತ್ರದ ಅವಶ್ಯಕತೆ ಇಲ್ಲದ ಈ ವಲಯಗಳಲ್ಲಿ ಹೆಚ್ಚಿನವುಗಳನ್ನು ಖಾಸಗಿ ಉದ್ಯಮಗಳಿಗೆ ಮುಕ್ತಗೊಳಿಸಲಾಗಿದೆ. ಏರ್ ಇಂಡಿಯಾ ಕುರಿತ ಇತ್ತೀಚಿನ ನಿರ್ಧಾರವು ನಮ್ಮ ಬದ್ಧತೆ ಮತ್ತು ಗಂಭೀರತೆಯನ್ನು ತೋರಿಸುತ್ತದೆ.
ಸ್ನೇಹಿತರೇ,
ಕಳೆದ ವರ್ಷಗಳಿಂದ, ನಮ್ಮ ಗಮನವು ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ, ಜೊತೆಗೆ ಅವುಗಳನ್ನು ಸಾಮಾನ್ಯ ಜನರಿಗೆ ತಲುಪುವಂತೆ ಮಾಡುವುದರಲ್ಲಿ ಕೇಂದ್ರೀಕರಿಸಿದೆ. ಕಳೆದ 7 ವರ್ಷಗಳಲ್ಲಿ, ನಾವು ಬಾಹ್ಯಾಕಾಶ ತಂತ್ರಜ್ಞಾನವನ್ನು ವಿತರಣೆಯ ಕಟ್ಟಕಡೆಯ ಘಟ್ಟ, ಸೋರಿಕೆ ಮುಕ್ತ ಮತ್ತು ಪಾರದರ್ಶಕ ಆಡಳಿತಕ್ಕೆ ಪ್ರಮುಖ ಸಾಧನವನ್ನಾಗಿ ಮಾಡಿದ್ದೇವೆ. ಬಡವರ ಮನೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯ ಯೋಜನೆಗಳೇ ಇರಲಿ ಜಿಯೋ ಟ್ಯಾಗಿಂಗ್ ಅನ್ನು ಬಳಸುವುದೇ ಇರಲಿ, ಉಪಗ್ರಹ ಚಿತ್ರಣಗಳ ಮೂಲಕ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ, ಬೆಳೆ ವಿಮಾ ಯೋಜನೆಯಡಿ ವೇಗವಾಗಿ ಹಕ್ಕು ಇತ್ಯರ್ಥ, ಎನ್ ಎ ವಿ ಐ ಸಿ (NAVIC) ವ್ಯವಸ್ಥೆಯು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಕೋಟ್ಯಂತರ ಮೀನುಗಾರರಿಗೆ ಸಹಾಯಕವಾಗುವುದಿರಲಿ, ಯೋಜನೆಯ ಪ್ರತಿ ಹಂತದಲ್ಲೂ ಬಾಹ್ಯಾಕಾಶ ತಂತ್ರಜ್ಞಾನವು ಆಡಳಿತವನ್ನು ಸಕ್ರಿಯ ಮತ್ತು ಪಾರದರ್ಶಕವಾಗಿ ಮಾಡಲು ಸಹಾಯ ಮಾಡುತ್ತಿದೆ.
ಸ್ನೇಹಿತರೇ,
ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗಿದ್ದಾಗ ಬದಲಾವಣೆ ಹೇಗೆ ಆಗಬಹುದು ಎನ್ನುವುದಕ್ಕೆ ಡಿಜಿಟಲ್ ತಂತ್ರಜ್ಞಾನ ಮತ್ತೊಂದು ಉದಾಹರಣೆಯಾಗಿದೆ. ಭಾರತವು ಇಂದು ವಿಶ್ವದ ಅಗ್ರ ಡಿಜಿಟಲ್ ಆರ್ಥಿಕತೆಗಳಲ್ಲಿ ಒಂದಾಗಿದ್ದರೆ, ನಾವು ದತ್ತಾಂಶದ ಶಕ್ತಿಯನ್ನು ಅತ್ಯಂತ ಬಡವರಿಗೆ ತಲುಪುವಂತೆ ಮಾಡಿದ್ದೇವೆ. ಆದ್ದರಿಂದ, ನಾವು ಅತ್ಯಾಧುನಿಕ ತಂತ್ರಜ್ಞಾನಕ್ಕಾಗಿ ಬಾಹ್ಯಾಕಾಶವನ್ನು ಅನ್ವೇಷಿಸಿದಾಗ, ನಾವು ಸಮಾಜದ ತಳಮಟ್ಟದಲ್ಲಿರುವ ನಾಗರಿಕರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಾವು ಉತ್ತಮ ಆರೋಗ್ಯ ರಕ್ಷಣೆ, ಉತ್ತಮ ವರ್ಚುವಲ್ ಶಿಕ್ಷಣ, ನೈಸರ್ಗಿಕ ವಿಕೋಪಗಳಿಂದ ಉತ್ತಮ ಮತ್ತು ಪರಿಣಾಮಕಾರಿ ರಕ್ಷಣೆ ಮತ್ತು ದೇಶದ ಪ್ರತಿಯೊಂದು ಭಾಗ ಮತ್ತು ಪ್ರದೇಶಕ್ಕೆ, ದೂರದ ಹಳ್ಳಿಗಳಲ್ಲಿರುವ ಬಡವರಿಗೆ ಇಂತಹ ಅನೇಕ ಪರಿಹಾರಗಳನ್ನು ಒದಗಿಸಬೇಕು ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ವಿಷಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನವು ಬಹಳಷ್ಟು ಕೊಡುಗೆ ನೀಡಬಹುದೆನ್ನುವುದು ನಮಗೆಲ್ಲರಿಗೂ ತಿಳಿದಿದೆ.
ಸ್ನೇಹಿತರೇ,
ಪ್ರಪಂಚದ ಕೆಲವೇ ದೇಶಗಳಲ್ಲಿ ಭಾರತವು ಸಂಪೂರ್ಣ ಅಂತರಿಕ್ಷ ಸಾಮರ್ಥ್ಯವನ್ನು ಹೊಂದಿದೆ. ನಾವು ಉಪಗ್ರಹಗಳು, ಉಡಾವಣಾ ವಾಹನಗಳು, ಅಂತರ್-ಗ್ರಹಗಳ ಕಾರ್ಯಾಚರಣೆಗಳಿಗೆ ಅನ್ವಯಕಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಎಲ್ಲಾ ಅಂಶಗಳನ್ನು ಕರಗತ ಮಾಡಿಕೊಂಡಿದ್ದೇವೆ. ನಾವು ದಕ್ಷತೆಯನ್ನು ನಮ್ಮ ಬ್ರಾಂಡ್‌ನ ಪ್ರಮುಖ ಭಾಗವನ್ನಾಗಿ ಮಾಡಿದ್ದೇವೆ. ಇಂದು, ನಾವು ಮಾಹಿತಿ ಯುಗದಿಂದ ಬಾಹ್ಯಾಕಾಶ ಯುಗಕ್ಕೆ ಚಲಿಸುತ್ತಿರುವಾಗ, ನಾವು ಈ ದಕ್ಷತೆಯ ಬ್ರಾಂಡ್ ಮೌಲ್ಯವನ್ನು ಮತ್ತಷ್ಟು ಬಲಪಡಿಸಬೇಕು. ಬಾಹ್ಯಾಕಾಶ ಪರಿಶೋಧನೆ ಅಥವಾ ಬಾಹ್ಯಾಕಾಶ ತಂತ್ರಜ್ಞಾನದ ಅನ್ವಯವಾಗಲಿ ನಾವು ನಿರಂತರವಾಗಿ ದಕ್ಷತೆ ಮತ್ತು ಮಿತವ್ಯಯವನ್ನು ಉತ್ತೇಜಿಸಬೇಕು. ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ನಮ್ಮ ಪಾಲನ್ನು ನಾವು ನಮ್ಮ ಶಕ್ತಿಯೊಂದಿಗೆ ಮುಂದುವರಿಸಿದಾಗ ಹೆಚ್ಚಾಗುತ್ತದೆ. ಬಾಹ್ಯಾಕಾಶ ಘಟಕಗಳ ಪೂರೈಕೆದಾರರಾಗಿರುವುದರಿಂದ, ನಾವು ಈಗ ಮೊದಲಿನಿಂದ ಕೊನೆಯವರೆಗೆ ಸಂಪೂರ್ಣ ಬಾಹ್ಯಾಕಾಶ ವ್ಯವಸ್ಥೆಗಳ ಪೂರೈಕೆ ಸರಪಳಿಯ ಭಾಗವಾಗಬೇಕು. ಎಲ್ಲಾ ಪಾಲುದಾರರ ಪಾಲುದಾರಿಕೆಯಿಂದ ಮಾತ್ರ ಇದು ಸಾಧ್ಯ. ಪಾಲುದಾರರಾಗಿ, ಸರ್ಕಾರವು ಉದ್ಯಮ, ಯುವ ಸಂಶೋಧಕರು, ನವೋದ್ಯಮಗಳನ್ನು ಪ್ರತಿ ಹಂತದಲ್ಲೂ ಬೆಂಬಲಿಸುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ.
ಸ್ನೇಹಿತರೇ,
ನವೋದ್ಯಮಗಳ ಪ್ರಬಲ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ಲಾಟ್‌ಫಾರ್ಮ್ ವಿಧಾನವು ಬಹಳ ಮುಖ್ಯವಾಗಿದೆ. ಈ ವಿಧಾನವು ಮುಕ್ತ ಪ್ರವೇಶ ಸಾರ್ವಜನಿಕ ನಿಯಂತ್ರಣ ವೇದಿಕೆಯನ್ನು ಸರ್ಕಾರದಿಂದ ತಯಾರಿಸಲಾಗುತ್ತದೆ ಮತ್ತು ನಂತರ ಅದನ್ನು ಕೈಗಾರಿಕೆ ಮತ್ತು ಉದ್ಯಮಗಳಿಗೆ ಲಭ್ಯವಾಗುವಂತೆ ಮಾಡಬೇಕು. ಉದ್ಯಮಿಗಳು ಆ ಮೂಲ ವೇದಿಕೆಯಲ್ಲಿ ಹೊಸ ಪರಿಹಾರಗಳನ್ನು ಸೃಷ್ಟಿಸುತ್ತಾರೆ. ಸರ್ಕಾರವು ಮೊದಲು ಡಿಜಿಟಲ್ ಪಾವತಿಗಾಗಿ ಯುಪಿಐ ವೇದಿಕೆಯನ್ನು ಸೃಷ್ಟಿಸಿತು. ಇಂದು ಈ ವೇದಿಕೆಯಲ್ಲಿ ಫಿನ್‌ಟೆಕ್ ಸ್ಟಾರ್ಟ್ ಅಪ್‌ಗಳ ಜಾಲವು ಬಲಗೊಳ್ಳುತ್ತಿದೆ. ಅಂತಹುದೇ ವೇದಿಕೆ ವಿಧಾನವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಪ್ರೋತ್ಸಾಹಿಸಲಾಗುತ್ತಿದೆ. ಇಸ್ರೋ ಸೌಲಭ್ಯಗಳು, ಐ ಎನ್-ಎಸ್ ಪಿ ಎ ಸಿ ಇ ಅಥವಾ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ಗೆ ಪ್ರವೇಶವಿರಲಿ ಅಂತಹ ಪ್ರತಿಯೊಂದು ವೇದಿಕೆಯಿಂದಲೂ ನವೋದ್ಯಮಗಳು (ಸ್ಟಾರ್ಟ್ ಅಪ್‌ಗಳು) ಮತ್ತು ಖಾಸಗಿ ವಲಯಕ್ಕೆ ಭಾರೀ ಬೆಂಬಲವಿದೆ. ಜಿಯೋ-ಸ್ಪೇಷಿಯಲ್ ಮ್ಯಾಪಿಂಗ್ ವಲಯಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಸರಳೀಕರಿಸಲಾಗಿದೆ ಇದರಿಂದ ನವೋದ್ಯಮಗಳು ಮತ್ತು ಖಾಸಗಿ ಉದ್ಯಮಗಳು ಹೊಸ ಸಾಧ್ಯತೆಗಳನ್ನು ಅನ್ವೇಷಿಸಬಹುದು. ಡ್ರೋನ್‌ಗಳಿಗೆ ಸಂಬಂಧಿಸಿದಂತೆ ಇದೇ ರೀತಿಯ ವೇದಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದರಿಂದ ಡ್ರೋನ್ ತಂತ್ರಜ್ಞಾನವನ್ನು ವಿವಿಧ ವಲಯಗಳಲ್ಲಿ ಬಳಸಬಹುದು.
ಸ್ನೇಹಿತರೇ,
ಇಂದು (ಅಕ್ಟೋಬರ್ 11) ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವಾಗಿದೆ. ಭಾರತದ ಮಹಿಳಾ ವಿಜ್ಞಾನಿಗಳು ಈ ಕಾರ್ಯಾಚರಣೆಯ ಯಶಸ್ಸನ್ನು ಆಚರಿಸುತ್ತಿರುವಾಗ, ಮಂಗಳಯಾನದ ಭಾರತದ ಚಿತ್ರಗಳನ್ನು ನಮ್ಮಲ್ಲಿ ಯಾರು ತಾನೆ ಮರೆಯಲು ಸಾಧ್ಯ? ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಯುತ್ತಿರುವ ಸುಧಾರಣೆಗಳು ಈ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ನನಗೆ ಖಾತ್ರಿಯಿದೆ.
ಸ್ನೇಹಿತರೇ,
ಇಂದು ನೀವೆಲ್ಲರೂ ಇತರ ವಿಷಯಗಳ ಬಗ್ಗೆಯೂ ಸಲಹೆಗಳನ್ನು ನೀಡಿದ್ದೀರಿ. ಸ್ಪೇಸ್‌ಕಾಮ್ ಪಾಲಿಸಿ ಮತ್ತು ರಿಮೋಟ್ ಸೆನ್ಸಿಂಗ್ ಪಾಲಿಸಿ ಅಂತಿಮ ಹಂತದಲ್ಲಿರುವಾಗ ನಿಮ್ಮ ಸಲಹೆಗಳು ಬಂದಿವೆ. ಎಲ್ಲಾ ಪಾಲುದಾರರ ಸಕ್ರಿಯ ತೊಡಗಿಕೊಳ್ಳುವಿಕೆಯೊಂದಿಗೆ ದೇಶವು ಶೀಘ್ರದಲ್ಲೇ ಉತ್ತಮ ನೀತಿಯನ್ನು ಪಡೆಯುತ್ತದೆ ಎಂದು ನನಗೆ ಖಾತ್ರಿಯಿದೆ.
ಸ್ನೇಹಿತರೇ,
ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ನೀತಿ ಸುಧಾರಣೆಗಳು ಮುಂದಿನ 25 ವರ್ಷಗಳ ಭವಿಷ್ಯದ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತವೆ. 20ನೇ ಶತಮಾನದಲ್ಲಿ ಬಾಹ್ಯಾಕಾಶವನ್ನು ಆಳುವ ಪ್ರವೃತ್ತಿಯು ಪ್ರಪಂಚದ ದೇಶಗಳನ್ನು ಹೇಗೆ ವಿಭಜಿಸಿತು ಎಂಬುದನ್ನು ನಾವು ನೋಡಿದ್ದೇವೆ. 21 ನೇ ಶತಮಾನದಲ್ಲಿ ಜಗತ್ತನ್ನು ಒಂದುಗೂಡಿಸುವಲ್ಲಿ ಜಾಗವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಈಗ ಭಾರತ ಖಚಿತಪಡಿಸಿಕೊಳ್ಳಬೇಕು. ಭಾರತವು 100 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ ಹೊಸ ಎತ್ತರವನ್ನು ಏರಿದಾಗ ನಮ್ಮೆಲ್ಲರ ಕೊಡುಗೆ ಮುಖ್ಯವಾಗುತ್ತದೆ. ಈ ಜವಾಬ್ದಾರಿಯ ಪ್ರಜ್ಞೆಯೊಂದಿಗೆ ನಾವು ಮುಂದುವರಿಯಬೇಕು. ಜನರು ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ನಾವು ಬಾಹ್ಯಾಕಾಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಅಪಾರ ಸಾಧ್ಯತೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ನಂಬಿಕೆಯೊಂದಿಗೆ, ನಿಮಗೆ ಶುಭಾಶಯಗಳು!
ಧನ್ಯವಾದಗಳು!
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.
***
(Release ID: 1763515)
Visitor Counter : 336
Read this release in:
Hindi
,
English
,
Urdu
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam