ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಜಮ್ಮು ಮತ್ತು ಕಾಶ್ಮೀರದ ಕ್ಷಿಪ್ರ ಅಭಿವೃದ್ಧಿಗೆ ಪ್ರಧಾನಮಂತ್ರಿಯವರ ಪರಿಕಲ್ಪನೆಯ ಪ್ರಗತಿಯ ಮಾರ್ಗಸೂಚಿ: ಶ್ರೀನಗರದಲ್ಲಿ ಮುರುಗನ್
Posted On:
11 OCT 2021 6:49PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಉತ್ತಮ ಆಡಳಿತ ಹಾಗೂ ಜಮ್ಮು ಮತ್ತು ಕಾಶ್ಮೀರ ಆಡಳಿತವು ಅಳವಡಿಸಿಕೊಂಡಿರುವ ವಿಧಾನಗಳು ಕೇಂದ್ರಾಡಳಿತ ಪ್ರದೇಶವನ್ನು ಬೃಹತ್ ಅಭಿವೃದ್ಧಿಯ ಹಾದಿಗೆ ತಂದಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ ಅವರಿಂದು ತಿಳಿಸಿದ್ದಾರೆ.
ಶ್ರೀನಗರದ ಆಕಾಶವಾಣಿಗೆ ಭೇಟಿ ನೀಡಿ, ಅಲ್ಲಿ ನವೀಕೃತ ಪ್ರಸಾರ ಭಾರತಿ ಸಭಾಂಗಣ ಉದ್ಘಾಟಿಸಿದ ಸಂದರ್ಭದಲ್ಲಿ ಡಾ. ಮುರುಗನ್ ಅವರು ಮಾತನಾಡುತ್ತಿದ್ದರು. 2014ರಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಈ ಸಭಾಂಗಣಕ್ಕೆ ಹಾನಿಯಾಗಿತ್ತು.
ಈ ಸಂದರ್ಭದಲ್ಲಿ ಡಾ. ಮುರುಗನ್ ಅವರು ಶ್ರೀನಗರದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ಪಾತ್ರವನ್ನು ಶ್ಲಾಘಿಸಿದರು. ಈ ಎರಡೂ ಸಂಸ್ಥೆಗಳು ಕಳೆದ ಹಲವು ದಶಕಗಳಿಂದ ವಿವಿಧ ಭಾಷೆಗಳಲ್ಲಿ ಗುಣಮಟ್ಟದ ಕಾರ್ಯಕ್ರಮಗಳನ್ನು ಮಾಡುತ್ತಿವೆ ಎಂದರು. 2014ರಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಶ್ರೀನಗರದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳ ಪಾತ್ರವನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು.
ಗಡಿಯಲ್ಲಿರುವ ಶ್ರೀನಗರದ ಈ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ನೆರೆಯ ರಾಷ್ಟ್ರಗಳ ಪ್ರತೀಕೂಲ ಅಸಹ್ಯಕರ ನಿರೂಪಣೆ ಮತ್ತು ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಪ್ರಸ್ತುತ ಪಡಿಸಲಾಯಿತು. ಇದಕ್ಕೂ ಮುನ್ನ ಆಕಾಶವಾಣಿ ಮತ್ತು ದೂರದರ್ಶನ, ಉತ್ತರ ವಲಯದ ಹೆಚ್ಚುವರಿ ಮಹಾ ನಿರ್ದೇಶಕ ಎಂ.ಎಸ್. ಅನ್ಸಾರಿ ಸ್ವಾಗತ ಭಾಷಣ ಮಾಡಿದಿದರು. ಆಕಾಶವಾಣಿಯ ಯೋಜನೆ ವಿಭಾಗದ ಡಿಡಿಜಿ ಆದಿತ್ಯ ಚತುರ್ವೇದಿ ಅವರು ವಂದನಾರ್ಪಣೆ ಮಾಡಿದರು.
ನಂತರ ಸಚಿವರು ಟ್ರೌಟ್ ಕಲ್ಚರಲ್ ಫಾರ್ಮ್ ಲಾರಿಬಲ್ ದಚಿಗಾಂಗೆ ಭೇಟಿ ನೀಡಿದರು. ಸಚಿವರು ಸಾಕಣೆ ಘಟಕಗಳು, ಯಂತ್ರೋಪಕರಣಗಳು ಮತ್ತು ಜಮೀನಿನಲ್ಲಿ ಲಭ್ಯವಿರುವ ಇತರ ಸೌಲಭ್ಯಗಳನ್ನು ಪರಿಶೀಲಿಸಿದರು ಮತ್ತು ಮೀನುಗಾರಿಕೆ ರೈತರೊಂದಿಗೆ ಸಂವಾದ ನಡೆಸಿದರು. ಅವರು ಪ್ರಧಾನಮಂತ್ರಿ ಮತ್ಯ್ಸ ಸಂಪದ ಯೋಜನೆ (ಪಿಎಂಎಂಎಸ್.ವೈ) ಟ್ರೌಟ್ ಘಟಕ ಹಂಚಿಕೆಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ರೈತರೊಂದಿಗಿನ ಈ ಸಂವಾದದ ವೇಳೆ, ಸಚಿವರು, ಭಾರತ ಸರ್ಕಾರ ರೈತರ ಆದಾಯವನ್ನು ದುಪ್ಪಟ್ಟು ಮಾಡಲು ಬದ್ಧವಾಗಿದೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯುವಜನರು ಮುಂದೆ ಬಂದು ರಾಷ್ಟ್ರ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು. ಟ್ರೌಟ್ ಕೃಷಿ ಮಹತ್ವದ ಆದಾಯದ ಮೂಲವಾಗಿ ಹೊರಹೊಮ್ಮುತ್ತಿದ್ದು, ಜನರು ಇದರ ಎಲ್ಲ ಸಾಧ್ಯ ಪ್ರಯೋಜನ ಪಡೆಯಬೇಕು ಎಂದರು.
ಮೀನುಗಾರಿಕೆ ಇಲಾಖೆಯು ಎಲ್ಲ ಜಿಲ್ಲೆಗಳಲ್ಲಿ ಮೊಟ್ಟೆ ಒಡೆದು ಮರಿ ಮಾಡುವ ಕೇಂದ್ರಗಳನ್ನು ಸ್ಥಾಪಿಸಿದ್ದು, ರೈತರಿಗೆ ತಾಜಾ ಮೀನು ಪೂರೈಸುತ್ತಿದೆ ಎಂಬ ಮಾಹಿತಿಯನ್ನು ಸಚಿವರಿಗೆ ನೀಡಲಾಯಿತು. ಟ್ರೌಟ್ ಲಭ್ಯತೆಯನ್ನು ಹೆಚ್ಚಿಸಲು ವಿವಿಧ ತಾಣಗಳಲ್ಲಿ ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದೂ ಸಚಿವರಿಗೆ ಮಾಹಿತಿ ನೀಡಲಾಯಿತು.
****
(Release ID: 1763159)
Visitor Counter : 228