ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav g20-india-2023

ಬೆಂಗಳೂರಿನ ಪಿಎಂಬಿಜೆಪಿಯಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ದೇಶಿಸಿ ಡಾ. ಮನ್ಸುಖ್ ಮಾಂಡವಿಯಾ ಭಾಷಣ


“ಜನೌಷಧಿ ಕೇಂದ್ರಗಳು ಜನತೆಗೆ ಸೇವೆ ಸಲ್ಲಿಸುವ ಅತ್ಯುತ್ತಮ ಸಾಧನ”: ಡಾ. ಮನ್ಸುಖ್ ಮಾಂಡವಿಯಾ

Posted On: 10 OCT 2021 8:55PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಬೆಂಗಳೂರಿನ ಬಸವನಗುಡಿಯ ಪ್ರಧಾನಮಂತ್ರಿ ಜನೌಷಧಿ ಯೋಜನೆಯ ಕಾರ್ಯಕ್ರಮದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಕುರಿತು ಮಾತನಾಡಿದರು. ಎಲ್ಲ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಜನರಿಕ್ ಔಷಧಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ(ಪಿಎಂಬಿಜೆಪಿ) ಅನ್ನು ಆರಂಭಿಸಲಾಯತು. ಈ ಯೋಜನೆಯಡಿ ಜನೌಷಧಿ ಕೇಂದ್ರಗಳ ಹೆಸರಿನಲ್ಲಿ ನಿರ್ದಿಷ್ಟ ಮಳಿಗೆಗಳನ್ನು ಆರಂಭಿಸಿ, ಜನರಿಕ್ ಔಷಧಗಳನ್ನು ಒದಗಿಸಲಾಗುತ್ತಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದು ಜನೌಷಧಿ ಕೇಂದ್ರ ಸ್ಥಾಪಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.

ಜನೌಷಧಿ ಕೇಂದ್ರಗಳು ಹೇಗೆ ವ್ಯಾಪಾರದ ಅವಕಾಶ ಮತ್ತು ಜನತೆಗೆ ಸೇವೆ ಸಲ್ಲಿಸುವ ಸಾಧನವಾಗಿದೆ ಎಂಬ ಕುರಿತು ವಿವರಿಸಿದ ಡಾ. ಡಾ. ಮನ್ಸುಖ್ ಮಾಂಡವಿಯಾ ಅವರು, “ಜನೌಷಧಿ ಕೇಂದ್ರಗಳನ್ನು ಆರಂಭಿಸುವ ಮೂಲಕ ನಮ್ಮ ದೇಶದ ಜನರಿಗೆ ಸೇವೆ ಸಲ್ಲಿಸುವ ಅವಕಾಶ ದೊರಕಲಿದೆ. ಕೇಂದ್ರ ಸರ್ಕಾರ 3 ಲಕ್ಷ ರೂಪಾಯಿ ಸಹಾಯಧನ ನೀಡುವ ಜತೆಗೆ ಹೆಚ್ಚುವರಿಯಾಗಿ ಶೇ.20ರಷ್ಟು ಕಮಿಷನ್ ನೀಡುವ ಮೂಲಕ ಹೂಡಿಕೆದಾರರಿಗೆ ಕಾರ್ಯಸಾಧುವಾದ ವ್ಯಾಪಾರ ಅವಕಾಶವನ್ನು ಒದಗಿಸಿದೆ. ಬ್ರಾಂಡೆಡ್ ಔಷಧಗಳನ್ನು ಮಾರಾಟ ಮಾಡುವ ಫಾರ್ಮಸಿಗಳಿಗೆ ಹೋಲಿಸಿದರೆ ಕಡಿಮೆ ಲಾಭದಲ್ಲಿ ಕಡಿಮೆ ದರದ ಜನರಿಕ್ ಔಷಧಗಳನ್ನು ಮಾರಾಟ ಮಾಡಲು ಅಗತ್ಯ ಪರಿಹಾರದ ಸಹಾಯವನ್ನು ಸರ್ಕಾರದಿಂದ ನೀಡಲಾಗುತ್ತಿದೆ” ಎಂದರು.

ಅಲ್ಲದೆ ಅವರು ಯಾವುದೇ ಜನರಿಕ್ ಔಷಧ ಮಳಿಗೆಗಳನ್ನು ಮುಚ್ಚುವಂತಹ ಸ್ಥಿತಿ ಬರಬಾರದೆಂಬ ಉದ್ದೇಶದಿಂದ ನಾವು ಸಹಾಯ ಧನವನ್ನು ನೀಡುತ್ತಿದ್ದೇವೆ ಎಂದು ಹೇಳಿದರು. ‘ಪಿಎಂಬಿಜೆಪಿ ಬಡವರ ಪರ, ರೈತರ ಪರ ಮತ್ತು ವ್ಯಾಪಾರಿಗಳ ಪರ ಯೋಜನೆಯಾಗಿದೆ. ಬಡಜನರಿಗೆ ನೆರವು ನೀಡುವುದು ನಮ್ಮ ಆದ್ಯತೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಜನೌಷಧಿ ಕೇಂದ್ರಗಳು ವರವಾಗಿವೆ” ಎಂದು ಡಾ. ಮನ್ಸುಖ್ ಮಾಂಡವಿಯಾ ಶ್ಲಾಘಿಸಿದರು. ದೇಶದಲ್ಲಿ ಜನೌಷಧಿ ಕೇಂದ್ರಗಳು “ಮೋದಿ ಕಾ ದವಾಯಿ ಕಿ ದುಖಾನ್”(ಮೋದಿ ಅವರ ಮೆಡಿಕಲ್ ಶಾಪ್) ಎಂದು ಹೆಸರಾಗಿವೆ ಎಂದು ತಿಳಿಸಿದರು.

ಹೃದ್ರೋಗಿಯೊಬ್ಬರ ಪ್ರತಿ ತಿಂಗಳ ವೈದ್ಯಕೀಯ ವೆಚ್ಚ 4,500 ರೂ.ಗಳಿಂದ 800 ರೂ.ಗಳಿಗೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡರು. ಜನೌಷಧಿ ಕೇಂದ್ರಗಳು ಮನುಕುಲಕ್ಕೆ ಸಲ್ಲಿಸುವ ಸೇವೆಯಾಗಿದೆ ಎಂದು ಅವರು ಹೇಳಿದರು. “ದಾನ ನೀಡುವುದರಿಂದ ಮಾತ್ರ ಜನತೆಗೆ ಸೇವೆ ಸಲ್ಲಿಸಿದಂತಾಗುವುದಿಲ್ಲ, ಅವರುಗಳ ವೆಚ್ಚ ತಗ್ಗಿಸಲು ಸಹಾಯ ಮಾಡುವುದು ಕೂಡ ಒಂದು ಬಗೆಯ ಸೇವೆಯಾಗಿದೆ” ಎಂದು ಹೇಳಿದರು.

ಕೊನೆಯಲ್ಲಿ ಡಾ. ಮನ್ಸುಖ್ ಮಾಂಡವಿಯಾ ಅವರು ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರನ್ನು ಅಭಿನಂದಿಸುವುದಾಗಿ ಹೇಳಿದರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಾಗರಿಕರಿಗೆ ಜನೌಷಧಿ ಕಿಟ್ ಗಳನ್ನು ವಿತರಿಸಿದರು. 75ನೇ ಸ್ವಾತಂತ್ರ್ಯೋತ್ಸವದ  ಈ ಸಂದರ್ಭದಲ್ಲಿ ಆಜಾ಼ದಿ ಕಾ ಅಮೃತ ಮಹೋತ್ಸವದ ಭಾಗವಾಗಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹಮ್ಮಿಕೊಂಡಿರುವ ಉಪಕ್ರಮಗಳ ಕುರಿತು ವಿವರಿಸಿದ ಡಾ. ಮಾಂಡವಿಯಾ ಅವರು, “ಜನೌಷಧಿ ಮಿತ್ರ”ರು ದೇಶಾದ್ಯಂತ ಹಿರಿಯ ನಾಗರಿಕರ ಮನೆ ಬಾಗಿಲಿಗೆ ವೈದ್ಯಕೀಯ ಕಿಟ್ ಗಳನ್ನು ವಿತರಿಸಲಿದ್ದಾರೆ. ಹಲವು ಕೇಂದ್ರಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನೂ ಸಹ ಹೆಚ್ಚುವರಿಯಾಗಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮವನ್ನು ವೆಬ್ ಕಾಸ್ಟ್  ಮಾಡಲಾಯತು:

ಪಿಎಂಬಿಜೆಪಿ ಆಜಾದಿ ಕಾ ಅಮೃತ ಮಹೋತ್ಸವದ ಕಾರ್ಯಕ್ರಮದ ಲಿಂಕ್ ಇಲ್ಲಿದೆ.

https://www.youtube.com/watch?v=dFcD6K-X20s

***



(Release ID: 1762791) Visitor Counter : 330