ಪ್ರಧಾನ ಮಂತ್ರಿಯವರ ಕಛೇರಿ

ಲಕ್ನೋದಲ್ಲಿ ಎಕ್ಸ್ಪೋ ಮತ್ತು ಆಜಾ಼ದಿ@75 ಸಮ್ಮೇಳನದ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 05 OCT 2021 4:45PM by PIB Bengaluru

ಉತ್ತರ ಪ್ರದೇಶ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿ ಮತ್ತು ಲಕ್ನೋದ ಸಂಸದ ಮತ್ತು ನಮ್ಮ ಹಿರಿಯ ಸಹೋದ್ಯೋಗಿ ಶ್ರೀ ರಾಜನಾಥ್ ಸಿಂಗ್ ಜೀ, ಶ್ರೀ ಹರ್ದೀಪ್ ಸಿಂಗ್ ಪುರಿ ಜೀ, ಮಹೇಂದ್ರ ನಾಥ ಪಾಂಡೇ ಜೀ, ಜನಪ್ರಿಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜೀ, ಉಪ ಮುಖ್ಯಮಂತ್ರಿ ಶ್ರೀ ಕೇಶವ ಪ್ರಸಾದ್ ಮೌರ್ಯಾ ಜೀ, ಶ್ರೀ ದಿನೇಶ ಶರ್ಮಾ ಜೀ, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಯಾಗಿರುವ ಶ್ರೀ ಕೌಶಲ್ ಕಿಶೋರ್ ಜೀ, ರಾಜ್ಯ ಸರಕಾರದ ಸಚಿವರೇ, ಸಂಸದರೇ, ಶಾಸಕರೇ, ದೇಶದ ವಿವಿಧ ಭಾಗಗಳ ಎಲ್ಲಾ ಗೌರವಾನ್ವಿತ ಸಚಿವರೇ, ಇತರ ಎಲ್ಲಾ ಗಣ್ಯರೇ ಮತ್ತು ಉತ್ತರ ಪ್ರದೇಶದ ನನ್ನ ಪ್ರೀತಿಯ ಸಹೋದರಿಯರೇ ಮತ್ತು ಸಹೋದರರೇ,

ನಾನು ಲಕ್ನೋಗೆ ಬಂದಾಗ ಅವಧ್ ವಲಯದ ಚರಿತ್ರೆ, ಮಲಿಹಬಾಡಿ ದುಸ್ಸೇರಿಯ ಸಿಹಿಯಾದ ಆಡುಭಾಷಾ ವೈವಿಧ್ಯ, ಆಹಾರ ಅಭ್ಯಾಸಗಳು, ಕೌಶಲ್ಯಯುಕ್ತ ಕರಕುಶಲತೆ, ಕಲಾ ವಾಸ್ತುಶಿಲ್ಪ, ಪ್ರತಿಯೊಂದೂ ವಿಶೇಷ. ನವ ನಗರ ಭಾರತದ ಬಗ್ಗೆ ಅಂದರೆ ಭಾರತದ ನಗರಗಳ ಹೊಸ ಸಂರಚನೆ ಬಗ್ಗೆ ದೇಶಾದ್ಯಂತದಿಂದ ತಜ್ಞರು ಲಕ್ನೋಗೆ  ಬಂದು ಮೂರು ದಿನಗಳ ಕಾಲ ಚರ್ಚಿಸುವ ಚಿಂತನೆಯನ್ನು ನಾನು ಮೆಚ್ಚುತ್ತೇನೆ. ಇಲ್ಲಿಯ ವಸ್ತುಪ್ರದರ್ಶನ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದಲ್ಲಿ ದೇಶದ ಹೊಸ ದೃಢ ನಿರ್ಧಾರಗಳು ಮತ್ತು ಸಾಧನೆಗಳನ್ನು ಖಚಿತವಾಗಿ ಪ್ರದರ್ಶಿಸಿದೆ. ಕಳೆದ ವರ್ಷ ರಕ್ಷಣಾ ವಸ್ತುಪ್ರದರ್ಶನವನ್ನು ಆಯೋಜಿಸಿದಾಗ ಇಲ್ಲಿಗೆ ಭೇಟಿ ನೀಡಿದವರಲ್ಲಿ ಲಕ್ನೋದವರು ಮಾತ್ರವಲ್ಲ ಇಡೀ ಉತ್ತರ ಪ್ರದೇಶದವರು ಇದ್ದರು ಎಂಬುದನ್ನು ನಾನು ಗಮನಿಸಿದ್ದೇನೆ. ಈ ಸಾರಿ ಕೂಡಾ, ಭಾರತದ ಪರಾಕ್ರಮಗಳನ್ನು ಮತ್ತು ನಮ್ಮ ನಂಬಿಕೆಯನ್ನು ಜಾಗೃತಿಗೊಳಿಸುವ ಈ ಪ್ರದರ್ಶನವನ್ನು ನೋಡಬೇಕು ಎಂದು ನಾಗರಿಕರಲ್ಲಿ ನಾನು ಮನವಿ ಮಾಡುತ್ತೇನೆ.

ಇಂದು ಉತ್ತರ ಪ್ರದೇಶದ ನಗರಗಳ ಅಭಿವೃದ್ಧಿಗೆ ಸಂಬಂಧಿಸಿದ 75 ಯೋಜನೆಗಳನ್ನು ಒಂದೋ ಉದ್ಘಾಟಿಸಲಾಗಿದೆ ಇಲ್ಲವೇ ಅವುಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಇಂದು ಉತ್ತರ ಪ್ರದೇಶದ 75 ಜಿಲ್ಲೆಗಳ 75,000 ಫಲಾನುಭವಿಗಳಿಗೆ ಅವರ ಪಕ್ಕಾ ಮನೆಯ ಬೀಗದ ಕೈ ದೊರೆತಿದೆ. ಈ ಎಲ್ಲಾ ಸ್ನೇಹಿತರು ದಸರಾ, ದೀವಾಲಿ, ಛಾತ್, ಗುರು ಪರಬ್ , ಈದ್ ಮಿಲಾದ್ ಮತ್ತು ಇನ್ನಷ್ಟು ಹಲವು ಹಬ್ಬಗಳನ್ನು ಈ ವರ್ಷ ಅವರ ಹೊಸ ಮನೆಯಲ್ಲಿ ಆಚರಿಸಲಿದ್ದಾರೆ. ಇಲ್ಲಿಯ ಕೆಲವು ಜನರ ಜೊತೆ ಮಾತನಾಡಿದ ಬಳಿಕ ನನಗೆ ಬಹಳ ಸಮಾಧಾನವಾಗಿದೆ ಮತ್ತು ಅಲ್ಲಿ ಊಟದ ಆಹ್ವಾನವೂ ಲಭಿಸಿದೆ. ದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನೀಡಲಾದ ಮನೆಗಳ ಮಾಲಕತ್ವದಲ್ಲಿ 80 ಶೇಖಡಾಕ್ಕೂ ಅಧಿಕ ಮನೆಗಳು ಮಹಿಳೆಯರ ಅಥವಾ ಅವರ ಜಂಟಿ ಮಾಲಕತ್ವದಲ್ಲಿರುವುದು ನನಗೆ ಇನ್ನಷ್ಟು ಸಂತೋಷವನ್ನು ತಂದಿದೆ.

ಮಹಿಳೆಯರ ಮನೆಗಳಿಗೆ ಸಂಬಂಧಿಸಿ ಉತ್ತರ ಪ್ರದೇಶ ಸರಕಾರ ಉತ್ತಮ ನಿರ್ಧಾರ ಕೈಗೊಂಡಿದೆ ಎಂದು ನನಗೆ ತಿಳಿಸಲಾಗಿದೆ. 10 ಲಕ್ಷ ರೂ.ಗಳವರೆಗಿನ ಮನೆಗಳಿಗೆ ಮಹಿಳೆಯರಿಗೆ ನೋಂದಣಿಯ ಸಂದರ್ಭ ಸ್ಟ್ಯಾಂಪ್ ಶುಲ್ಕದಲ್ಲಿ 2%ರಿಯಾಯತಿ ನೀಡಲಾಗಿದೆ. ಇದು ಬಹಳ ಶ್ಲಾಘನಾರ್ಹ ನಿರ್ಧಾರ. ಮಹಿಳೆಯರ ಆಸ್ತಿ ಹಕ್ಕಿನ ಬಗ್ಗೆ ಮಾತನಾಡುವಾಗ ನಮ್ಮ ತಲೆಗೆ ಈ ಅಂಶ ಗೋಚರಿಸುವುದಿಲ್ಲ. ನಾನು ನಿಮ್ಮನ್ನು ಆ ಜಗತ್ತಿಗೆ ಕರೆದುಕೊಂಡು ಹೋಗುತ್ತೇನೆ, ಆಗ ನೀವು ಈ ನಿರ್ಧಾರದ ಮಹತ್ವವನ್ನು ಮನಗಾಣುತ್ತೀರಿ.

ಯಾವುದೇ ಕುಟುಂಬದ ಸುತ್ತ ನೋಡಿ. ನಾನಿದನ್ನು ಸರಿ ಅಥವಾ ತಪ್ಪು ಎಂದು ಹೇಳುವುದಿಲ್ಲ. ನಾನು ಬರೇ ಪರಿಸ್ಥಿತಿಯನ್ನು ಹೇಳುತ್ತಿದ್ದೇನೆ. ಮನೆಯೊಂದು ಇದ್ದರೆ, ಅದು ಗಂಡನ ಹೆಸರಲ್ಲಿ ಇರುತ್ತದೆ. ಅಲ್ಲಿ ಗದ್ದೆ, ಭೂಮಿ ಇದ್ದರೆ ಅದು ಗಂಡನ ಹೆಸರಿನಲ್ಲಿ ಇರುತ್ತದೆ. ಅಲ್ಲಿ ಕಾರು ಇದ್ದರೆ, ಅದೂ ಗಂಡನ ಹೆಸರಿನಲ್ಲಿ ಇರುತ್ತದೆ. ಸ್ಕೂಟರ್ ಇದ್ದರೆ ಅದೂ ಗಂಡನ ಹೆಸರಿನಲ್ಲಿರುತ್ತದೆ. ಅಂಗಡಿ ಇದ್ದರೆ ಅದೂ ಗಂಡನ ಹೆಸರಿನಲ್ಲಿ ಇರುತ್ತದೆ. ಮತ್ತು ಗಂಡ ತೀರಿಕೊಂಡರೆ ಅದೆಲ್ಲ ಆತನ ಪುತ್ರರಿಗೆ ವರ್ಗಾವಣೆಯಾಗುತ್ತದೆ. ಅಲ್ಲಿ ತಾಯಿಯ ಹೆಸರಿನಲ್ಲಿ ಏನೂ ಇರುವುದಿಲ್ಲ. ಆರೋಗ್ಯವಂತ ಸಮಾಜಕ್ಕಾಗಿ ಕೆಲವು ಸಮತೋಲನದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮತ್ತು ಸರಕಾರ ಕೊಡುವ ಮನೆಗಳ ಮಾಲಕತ್ವ ಮಹಿಳೆಯರಿಗೆ ದೊರೆಯಬೇಕು ಎಂದು ನಾವು ನಿರ್ಧರಿಸಿದೆವು. 

ಸ್ನೇಹಿತರೇ,

ಲಕ್ನೋಗೆ ಅಭಿನಂದಿಸುವುದಕ್ಕೆ ಇನ್ನೊಂದು ಪೂರಕ ಸಂದರ್ಭವೂ ಇದೆ. ಲಕ್ನೋ ತಾಯಿ ಭಾರತಿಗೆ, ರಾಷ್ಟ್ರಕ್ಕೆ ತನ್ನನ್ನು ಸಮರ್ಪಿಸಿಕೊಂಡಂತಹ ದೂರದೃಷ್ಟಿಯ ನಾಯಕನನ್ನು ಅಟಲ್ ಜೀ ಅವರ ರೂಪದಲ್ಲಿ  ನೀಡಿದೆ. ಅವರ ನೆನಪಿನಲ್ಲಿ ಇಂದು ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಪೀಠವನ್ನು ಸ್ಥಾಪಿಸಲಾಗುತ್ತಿದೆ. ಈ ಪೀಠವು ಅಟಲ್ ಜೀ ಅವರ ಚಿಂತನೆಯನ್ನು, ಅವರ ಕ್ರಮಗಳನ್ನು ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಕೊಡುಗೆಯನ್ನು ವಿಶ್ವದ ವೇದಿಕೆಗೆ ತರುತ್ತದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ. ಭಾರತದ 75 ವರ್ಷಗಳ ವಿದೇಶಾಂಗ ನೀತಿ ಬಹಳ ತಿರುವುಗಳನ್ನು ಹೊಂದಿದೆ. ಆದರೆ ಅಟಲ್ ಜೀ ಅದಕ್ಕೆ ಹೊಸ ದಿಕ್ಕನ್ನು ನೀಡಿದರು. ದೇಶಕ್ಕೆ ಮತ್ತು ಜನತೆಗೆ ಸಂಪರ್ಕಕ್ಕೆ ಸಂಬಂಧಿಸಿ ಅವರ ಪ್ರಯತ್ನಗಳು ಇಂದಿನ ಭಾರತದ ಬಲಿಷ್ಟವಾದಂತಹ ತಳಪಾಯ. ಅದರ ಬಗ್ಗೆ ಚಿಂತಿಸಿ, ಒಂದೆಡೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಇದೆ ಮತ್ತು ಇನ್ನೊಂದೆಡೆ ಸುವರ್ಣ ಚತುರ್ಭುಜ –ಉತ್ತರ-ಪೂರ್ವ, ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಕಾರಿಡಾರುಗಳು ಇವೆ. ಅಂದರೆ ಅವರ ಚಿಂತನೆ ಮತ್ತು ದೂರದೃಷ್ಟಿ ಹಾಗು ಅಭಿವೃದ್ಧಿಯ ಕಲ್ಪನೆ, ಪ್ರಯತ್ನಗಳು ಗ್ರಾಮೀಣ ಮತ್ತು ನಗರ ಎಂಬ ಎರಡೂ ಮಗ್ಗುಲುಗಳನ್ನು ಒಳಗೊಂಡಿದ್ದವು.

ಸ್ನೇಹಿತರೇ,

ದೇಶದ ಮಹಾನಗರಗಳನ್ನು ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಜೋಡಿಸುವ ಚಿಂತನೆಯನ್ನು ಕೆಲ ವರ್ಷಗಳ ಹಿಂದೆ ಅಟಲ್ ಜೀ ಅವರು ಮಂಡಿಸಿದಾಗ ಕೆಲವರು ಅದನ್ನು ನಂಬಲಿಲ್ಲ. ಮತ್ತು 6-7 ವರ್ಷಗಳ ಹಿಂದೆ ಬಡವರಿಗೆ ಕೋಟ್ಯಾಂತರ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡುವ , ಕೋಟ್ಯಾಂತರ ಶೌಚಾಲಯಗಳನ್ನು ಕಟ್ಟುವ, ತ್ವರಿತವಾಗಿ ಓಡಾಡುವ ರೈಲುಗಳ ಬಗ್ಗೆ, ನಗರಗಳಲ್ಲಿ ಕೊಳವೆ ಮೂಲಕ ಅನಿಲ, ಆಪ್ಟಿಕಲ್ ಫೈಬರ್ ಇತ್ಯಾದಿಗಳ ಬಗ್ಗೆ ನಾನು ಮಾತನಾಡಿದಾಗಲೂ ಜನರಲ್ಲಿ ಸಂಶಯಗಳಿದ್ದವು. ಆದರೆ ಜಗತ್ತು ಈ ಆಂದೋಲನಗಳಲ್ಲಿ ಭಾರತದ ಯಶಸ್ಸನ್ನು ನೋಡುತ್ತಿದೆ. ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಿಸಲಾದ ಪಕ್ಕಾ ಮನೆಗಳ ಸಂಖ್ಯೆ ಜಗತ್ತಿನ ಅನೇಕ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ.

ಮನೆಗಳ ಪೂರ್ಣಗೊಳಿಸುವಿಕೆವರೆಗೆ ಅನುಮತಿ ಪಡೆಯಲು ವರ್ಷಗಳು ತಗಲುತ್ತಿದ್ದ ಕಾಲವೊಂದಿತ್ತು. ಮನೆಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿತ್ತು (ಸರಕಾರದ ಯೋಜನೆಗಳಡಿಯಲ್ಲಿ) . ಸಣ್ಣ ಮನೆಗಳು, ಕಳಪೆ ನಿರ್ಮಾಣ ಸಾಮಗ್ರಿ, ಮಂಜೂರಾತಿಯಲ್ಲಿ ಅವ್ಯವಹಾರಗಳು ನನ್ನ ಬಡ ಸಹೋದರರ ಮತ್ತು ಸಹೋದರಿಯರ ಅದೃಷ್ಟ ಎನ್ನುವಂತಿತ್ತು. 2014 ರಲ್ಲಿ ದೇಶವು ನಮಗೆ ಸೇವೆ ಮಾಡುವ ಅವಕಾಶವನ್ನು ನೀಡಿತು ಮತ್ತು ನಾನು ವಿಶೇಷವಾಗಿ ಉತ್ತರ ಪ್ರದೇಶಕ್ಕೆ ನನ್ನನ್ನು ಸಂಸತ್ತಿಗೆ ಕಳುಹಿಸಿದುದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ಮತ್ತು ನೀವು ನನಗೆ ಜವಾಬ್ದಾರಿಯನ್ನು ಕೊಟ್ಟಾಗ ನಾವು ನಮ್ಮ ಜವಾಬ್ದಾರಿಯನ್ನು ನಿಭಾಯಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದೆವು.

ಸ್ನೇಹಿತರೇ,

2014 ಕ್ಕೆ ಮೊದಲು ಸರಕಾರ ದೇಶದಲ್ಲಿ ಬರೇ 13 ಲಕ್ಷ ಮನೆಗಳನ್ನು ನಗರ ವಸತಿ ಯೋಜನೆ ಅಡಿಯಲ್ಲಿ ಮಂಜೂರು ಮಾಡಿತ್ತು. ಸಂಖ್ಯೆಯನ್ನು ನೆನಪಿಡುವಿರಲ್ಲವೇ? ಹಿಂದಿನ ಸರಕಾರ 13 ಲಕ್ಷ ಮನೆಗಳನ್ನು ಮಂಜೂರು ಮಾಡಿತ್ತು ಮತ್ತು ಬರೇ 8 ಲಕ್ಷ ಮನೆಗಳು ಮಾತ್ರವೇ ನಿರ್ಮಾಣಗೊಂಡಿದ್ದವು. 2014ರ ಬಳಿಕ ನಮ್ಮ ಸರಕಾರ ಪ್ರಧಾನ  ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಗರಗಳಲ್ಲಿ 1.13 ಕೋಟಿಗೂ ಅಧಿಕ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. 13 ಲಕ್ಷ ಮತ್ತು 1.13 ಕೋಟಿಯ ನಡುವಣ ವ್ಯತ್ಯಾಸವನ್ನು ನೋಡಿರಿ!. ಇವುಗಳಲ್ಲಿ 50 ಲಕ್ಷಕ್ಕೂ ಅಧಿಕ ಮನೆಗಳು ನಿರ್ಮಾಣಗೊಂಡು ಬಡವರಿಗೆ ಹಸ್ತಾಂತರಿಸಲ್ಪಟ್ಟಿವೆ.

ಸ್ನೇಹಿತರೇ,

ಇಟ್ಟಿಗೆ ಮತ್ತು ಕಲ್ಲುಗಳಿಂದ ಕಟ್ಟಡವನ್ನು ನಿರ್ಮಾಣ ಮಾಡಬಹುದು, ಆದರೆ ಅದನ್ನು ಮನೆಯೆಂದು ಕರೆಯಬೇಕೆಂದಿಲ್ಲ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಕನಸೂ ಅದರ ಜೊತೆಗಿದ್ದರೆ ಆಗ ಆ ಕಟ್ಟಡ ಮನೆಯಾಗುತ್ತದೆ. ಅಲ್ಲಿ ಪರಸ್ಪರ ಅವಲಂಬನೆ ಇರುತ್ತದೆ ಮತ್ತು ಕುಟುಂಬದ ಸದಸ್ಯರು ಒಂದು ಗುರಿಯ ಈಡೇರಿಕೆಗಾಗಿ ಪೂರ್ಣ ಹೃದಯದಿಂದ ಕಾರ್ಯತತ್ಪರರಾಗಿರುತ್ತಾರೆ.

ಸ್ನೇಹಿತರೇ,

ನಾವು ಫಲಾನುಭವಿಗಳಿಗೆ ಮನೆ ವಿನ್ಯಾಸದಿಂದ ಹಿಡಿದು ನಿರ್ಮಾಣದವರೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಅವರು ಅವರ ಮನೆಯನ್ನು ಅವರು ಇಚ್ಛಿಸಿದಂತೆ ನಿರ್ಮಾಣ ಮಾಡಬಹುದು. ಮನೆಯ ಕಿಟಕಿ ಇಲ್ಲಿರಬೇಕೋ ಅಥವಾ ಅಲ್ಲಿರಬೇಕೋ ಎಂಬುದನ್ನು ದಿಲ್ಲಿಯಲ್ಲಿ ಹವಾ ನಿಯಂತ್ರಿತ ಕೋಣೆಗಳಲ್ಲಿ ಕುಳಿತವರು ನಿರ್ಧರಿಸಲಾಗದು. 2014 ಕ್ಕೆ ಮೊದಲು ಸರಕಾರಿ ಯೋಜನೆಗಳ ಅಡಿಯಲ್ಲಿ ನಿರ್ಮಾಣ ಮಾಡುವ ಮನೆಗಳ ಗಾತ್ರದ ಬಗ್ಗೆ ಸ್ಪಷ್ಟ ನೀತಿ ಎಂಬುದು ಇರಲಿಲ್ಲ. ಕೆಲವು ಮನೆಗಳನ್ನು 15 ಚದರ ಮೀಟರ್ ಭೂಮಿಯಲ್ಲಿ ಕಟ್ಟಲಾಗುತ್ತಿತ್ತು, ಕೆಲವನ್ನು 17 ಚದರ ಮೀಟರ್ ಭೂಮಿಯಲ್ಲಿ ನಿರ್ಮಾಣ ಮಾಡಲಾಗುತ್ತಿತ್ತು. ಅಂತಹ ಸಣ್ಣ ಮನೆಗಳಲ್ಲಿ ವಾಸಿಸುವುದು ಬಹಳ ಕಷ್ಟವಾಗುತ್ತಿತ್ತು.

2014 ರ ಬಳಿಕ ಮನೆಗಳ ಗಾತ್ರಕ್ಕೆ ಸಂಬಂಧಿಸಿ ನಮ್ಮ ಸರಕಾರ ಸಮಗ್ರ ನೀತಿಯನ್ನು ರೂಪಿಸಿತು. ನಿರ್ಮಾಣ ಮಾಡುವ ಯಾವುದೇ ಮನೆ 22 ಚದರ ಮೀಟರಿಗಿಂತ ಸಣ್ಣದಿರಬಾರದು ಎಂದು ನಾವು ನಿರ್ಧರಿಸಿದೆವು. ಮನೆಗಳ ಗಾತ್ರವನ್ನು ಹೆಚ್ಚಿಸಿದ್ದಲ್ಲದೆ, ನಾವು ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾರಂಭಿಸಿದೆವು. ಮನೆ ಕಟ್ಟುತ್ತಿರುವ ಬಡವರ ಬ್ಯಾಂಕ್ ಖಾತೆಗಳಿಗೆ ಕಳುಹಿಸುತ್ತಿರುವ ಮೊತ್ತದ ಬಗ್ಗೆ ಬಹಳ ಕಡಿಮೆ ಪ್ರಮಾಣದಲ್ಲಿ ಚರ್ಚೆಯಾಗಿದೆ. ನಿಮಗೆ ಆಶ್ಚರ್ಯವಾಗಬಹುದು,  ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನಾ-ನಗರ ಯೋಜನೆ ಅಡಿಯಲ್ಲಿ ಬಡವರ ಬ್ಯಾಂಕ್ ಖಾತೆಗಳಿಗೆ ಸುಮಾರು  ಒಂದು ಲಕ್ಷ ಕೋ.ರೂ.ಗಳನ್ನು ವರ್ಗಾಯಿಸಿದೆ.

ಸ್ನೇಹಿತರೇ,

ನಾವು ಮೋದಿಯನ್ನು ಪ್ರಧಾನ ಮಂತ್ರಿ ಮಾಡಿದೆವು, ಆದರೆ ಮೋದಿ ಏನು ಮಾಡಿದರು? ಎಂದು ಕೇಳುತ್ತಲೇ ಇರುವ ಕೆಲವು ಮಹನೀಯರು ನಮ್ಮ ದೇಶದಲ್ಲಿದ್ದಾರೆ. ಇಂದು ಇದೇ ಮೊದಲ ಬಾರಿಗೆ, ನಾನು ನಿಮಗೆ ಕೆಲವು ಸಂಗತಿಗಳನ್ನು ಹೇಳಲಿಚ್ಛಿಸುತ್ತೇನೆ. ಕೆಲವು ಪ್ರಮುಖ ವಿರೋಧಿಗಳು ತಮ್ಮ ಶಕ್ತಿಯನ್ನು ಹಗಲು ರಾತ್ರಿ ನನ್ನನ್ನು ವಿರೋಧಿಸಲು ಖರ್ಚು ಮಾಡುತ್ತಿರುವಾಗ ಅವರು ಇನ್ನಷ್ಟು  ತೀವ್ರ ವಿರೋಧ ಮಾಡುತ್ತಾರೆ ಎಂಬುದು ಗೊತ್ತಿದ್ದರೂ ನಾನದನ್ನು ನಿಮಗೆ ಹೇಳಬೇಕು ಎಂದು ಭಾವಿಸುತ್ತೇನೆ.

ಇಂತಹ ಮೂರು ಕೋಟಿ ಕುಟುಂಬಗಳು, ನನ್ನ ಕುಟುಂಬಗಳ ಸದಸ್ಯರು ಮತ್ತು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದವರು, ಪಕ್ಕಾ ಮನೆಗಳನ್ನು, ಛಾವಣಿಯನ್ನು ಹೊಂದಿಲ್ಲದವರು ಈ ಏಕ ಯೋಜನೆಯಿಂದ ಲಕ್ಷಾಧಿಪತಿಗಳಾಗುವ ಅವಕಾಶವನ್ನು ಪಡೆದಿದ್ದಾರೆ. ಅಂದಾಜು  25-30  ಕೋಟಿ ಕುಟುಂಬಗಳ ಪೈಕಿ ಮೂರು ಕೋಟಿ ಬಡ ಕುಟುಂಬಗಳು ಇಂತಹ ಬಹಳ ಕಡಿಮೆ ಅವಧಿಯಲ್ಲಿ ಲಕ್ಷಾಧಿಪತಿಗಳಾಗಿವೆ. ಇದು ಬಹಳ ಮುಖ್ಯವಾದ ಸಂಗತಿಯನ್ನು ಒಳಗೊಂಡಿದೆ. ನೀವೀಗ ಕೇಳಬಹುದು ಮೋದಿ ಹೇಗೆ ಇಂತಹ ಅಬ್ಬರದ ಹೇಳಿಕೆಗಳನ್ನು ಮಾಡಬಲ್ಲರು ಎಂಬುದಾಗಿ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಾಣ ಮಾಡಲಾದ ಮೂರು ಕೋಟಿ ಮನೆಗಳ ಬೆಲೆಯನ್ನು ನೀವು ಊಹಿಸಿಕೊಳ್ಳಿ. ಈ ಜನರು ಈಗ ಲಕ್ಷಾಧಿಪತಿಗಳು. ನಾವು ಮೂರು ಕೋಟಿ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡುವ ಮೂಲಕ ಬಡ ಕುಟುಂಬಗಳ ಬಹಳ ದೊಡ್ಡ ಕನಸನ್ನು ಈಡೇರಿಸಿದ್ದೇವೆ.

ಸ್ನೇಹಿತರೇ,

ಉತ್ತರ ಪ್ರದೇಶದಲ್ಲಿ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಮನೆಗಳ ನಿರ್ಮಾಣದಲ್ಲಿ ಯಾವುದೇ ಪ್ರಗತಿ ಸಾಧ್ಯವಾಗದ ದಿನಗಳು ನನಗೆ ನೆನಪಾಗುತ್ತವೆ. ನಾನಿಂದು ಲಕ್ನೋದಲ್ಲಿರುವುದರಿಂದ, ನಾನದನ್ನು ವಿವರವಾಗಿ ಹೇಳಬೇಕು ಎಂದು ನನ್ನ ಭಾವನೆ. ಕೇಳಲು ನೀವು ತಯಾರಾಗಿರುವಿರೋ?. ನಮ್ಮ ನಗರ ಯೋಜನೆ ಹೇಗೆ ರಾಜಕೀಯದ ಬಲಿಪಶು ಆಯಿತು ಎಂಬುದನ್ನು ಉತ್ತರ ಪ್ರದೇಶದ ಜನತೆ ತಿಳಿದುಕೊಳ್ಳುವುದು ಅವಶ್ಯ.

ಸ್ನೇಹಿತರೇ,

ಕೇಂದ್ರ ಸರಕಾರವು ಬಡವರಿಗೆ ಮನೆಗಳನ್ನು ಕಟ್ಟಲು ಹಣವನ್ನು ಕೊಡುತ್ತಿತ್ತು. ಉತ್ತರ ಪ್ರದೇಶದಲ್ಲಿಯ ಹಿಂದಿನ ಸರಕಾರ, 2017 ರಲ್ಲಿ ಯೋಗೀಜಿ ಅಧಿಕಾರಕ್ಕೆ ಬರುವುದಕ್ಕೆ ಮೊದಲು ಇದ್ದ ಸರಕಾರ ಬಡವರಿಗೆ ಮನೆಗಳನ್ನು ನಿರ್ಮಿಸುವುದಕ್ಕೆ ಆಸಕ್ತವಾಗಿರಲಿಲ್ಲ. ಇಲ್ಲಿ ಹಿಂದೆ ಅಧಿಕಾರದಲ್ಲಿದ್ದ ಸರಕಾರದಲ್ಲಿ ನಾವು ಬಡವರಿಗಾಗಿ ಮನೆಗಳನ್ನು ಕಟ್ಟಿಕೊಡಿ ಎಂದು ಬೇಡಬೇಕಾಗಿತ್ತು. 2017 ಮೊದಲು 18,000 ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ಉತ್ತರ ಪ್ರದೇಶಕ್ಕಾಗಿ ಮಂಜೂರು ಮಾಡಲಾಗಿತ್ತು. ಆದರೆ ಇಲ್ಲಿದ್ದ ಸರಕಾರ ಪಿ. ಎಂ. ಆವಾಸ್ ಯೋಜನೆ ಅಡಿಯಲ್ಲಿ 18 ಮನೆಗಳನ್ನು ಕೂಡ ನಿರ್ಮಾಣ ಮಾಡಲಿಲ್ಲ.

ನೀವು ಕಲ್ಪಿಸಿಕೊಳ್ಳಬಹುದೇ, 18,000 ಮನೆಗಳು ಅನುಮೋದಿಸಲ್ಪಟ್ಟಿವೆ, ಆದರೆ ಬಡವರಿಗೆ 18 ಮನೆಗಳನ್ನು ಕೂಡಾ ಕಟ್ಟಲಾಗಿಲ್ಲ?. ನನ್ನ ಸಹೋದರರೇ ಮತ್ತು ಸಹೋದರಿಯರೇ,  ನಿಮಗೆ ಇದು ಆಶ್ಚರ್ಯ ತರಬಹುದು. ಅಲ್ಲಿ ಹಣವಿತ್ತು, ಮನೆಗಳನ್ನು ಅಲ್ಲಿ ಅನುಮೋದಿಸಲಾಗಿತ್ತು, ಆದರೆ ಉತ್ತರ ಪ್ರದೇಶವನ್ನು ಆಳುತ್ತಿದ್ದವರು ಅದಕ್ಕೆ ನಿರಂತರವಾಗಿ ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತಿದ್ದರು. ಬಡವರು ಸಹಿತ ಉತ್ತರ ಪ್ರದೇಶದ ಜನತೆ ಅವರ ಕೃತ್ಯಗಳನ್ನು ಮರೆಯಲಾರರು.

ಸ್ನೇಹಿತರೇ

ಯೋಗೀ ಜೀ ಸರಕಾರ ರಚನೆಯಾದ ಬಳಿಕ ಉತ್ತರ ಪ್ರದೇಶದ ನಗರಗಳ ಬಡವರಿಗೆ ಒಂಭತ್ತು ಲಕ್ಷ ಮನೆಗಳನ್ನು ನೀಡಲಾಗಿರುವುದು ನನಗೆ ತೃಪ್ತಿಯ ಸಂಗತಿಯಾಗಿದೆ. ಈಗ ಉತ್ತರ ಪ್ರದೇಶದಲ್ಲಿ ನಗರಗಳಲ್ಲಿ ವಾಸಿಸುವ ನಮ್ಮ ಬಡ ಸಹೋದರರು ಮತ್ತು ಸಹೋದರಿಯರಿಗಾಗಿ 14 ಲಕ್ಷ ಮನೆಗಳು ನಿರ್ಮಾಣವಾಗುತ್ತಿದ್ದು, ಅವುಗಳು ವಿವಿಧ ಹಂತಗಳಲ್ಲಿವೆ. ವಿದ್ಯುತ್, ನೀರು, ಅನಿಲ, ಶೌಚಾಲಯ ಇತ್ಯಾದಿ ಸೌಲಭ್ಯಗಳನ್ನು ಈ ಮನೆಗಳಲ್ಲಿ ಒದಗಿಸಿಕೊಡಲಾಗುತ್ತಿದೆ. ಗೃಹ ಪ್ರವೇಶ ಸಮಾರಂಭವನ್ನೂ ಸಂತೋಷ ಮತ್ತು ಸಂಭ್ರಮದೊಂದಿಗೆ ನಡೆಸಲಾಗುತ್ತದೆ.

ನಾನು ಈಗ ಉತ್ತರ ಪ್ರದೇಶಕ್ಕೆ ಬಂದಿದ್ದೇನೆ, ನಾನು ನಿಮಗೆ ಸ್ವಲ್ಪ ಮನೆ ಕೆಲಸ ಕೊಡಲು ಆಶಿಸುತ್ತೇನೆ. ಕೊಡಲೇ?. ಆದರೆ ನೀವದನ್ನು ಮಾಡಬೇಕು? ಮಾಡುತ್ತೀರೋ?. ನಾನಿದನ್ನು ಸುದ್ದಿಪತ್ರಿಕೆಗಳಲ್ಲಿ ಓದಿದ್ದು ಮತ್ತು ನಾನು ಯೋಗೀ ಜೀ ಅವರಿಗೂ ಕೇಳುವಂತಹ ಪ್ರಶ್ನೆ. ದೀಪಾವಳಿಯಂದು ಅಯೋಧ್ಯೆಯಲ್ಲಿ 7.5 ಲಕ್ಷ ದೀಪಗಳನ್ನು ಹಚ್ಚುವ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ವರದಿಯಾಗಿದೆ. ಈ ದೀಪ ಬೆಳಗುವ ಸ್ಪರ್ಧೆಯಲ್ಲಿ ಉತ್ತರ ಪ್ರದೇಶ ಮುಂದೆ ಬರಬೇಕು ಎಂದು ನಾನು ಮನವಿ ಮಾಡುತ್ತೇನೆ. ಯಾರು ಹೆಚ್ಚು ದೀಪಗಳನ್ನು ಬೆಳಗುತ್ತಾರೆ ? . ಅದು ಅಯೋಧ್ಯೆಯೋ ಅಥವಾ ಇಂದು ವಿತರಿಸಲಾದ ಈ ಒಂಭತ್ತು ಲಕ್ಷ ಮನೆಗಳಿಂದ 18 ಲಕ್ಷ ದೀಪಗಳೋ?. ಇದನ್ನು ಮಾಡಲು ಸಾಧ್ಯವೇ? ಕಳೆದ ಏಳು ವರ್ಷಗಳಲ್ಲಿ ಮನೆಗಳನ್ನು ಪಡೆದ ಈ ಒಂಭತ್ತು ಲಕ್ಷ ಕುಟುಂಬಗಳು ಅವರ ಮನೆಯ ಹೊರಗೆ ಎರಡು ದೀಪಗಳನ್ನು ಬೆಳಗಬೇಕು. 7.5 ಲಕ್ಷ ದೀಪಗಳು ಅಯೋಧ್ಯೆಯಲ್ಲಿ ಹಚ್ಚಲ್ಪಟ್ಟರೆ ಮತ್ತು ನನ್ನ ಬಡ ಕುಟುಂಬಗಳ ಮನೆಗಳಲ್ಲಿ 18 ಲಕ್ಷ ದೀಪಗಳು ಬೆಳಗಿದರೆ, ರಾಮ ದೇವರು ಪ್ರಸನ್ನರಾಗುತ್ತಾರೆ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದ ಕೆಲವು ದಶಕಗಳಲ್ಲಿ ಹಲವು ಬೃಹತ್ ಕಟ್ಟಡಗಳು ನಮ್ಮ ನಗರಗಳಲ್ಲಿ ತಲೆ ಎತ್ತಿವೆ. ಆದರೆ ಈ ಕಟ್ಟಡಗಳನ್ನು ಕಟ್ಟಿದ ಆ ಕಾರ್ಮಿಕರು ಕೊಳೆಗೇರಿಯಲ್ಲಿದ್ದಾರೆ. ಕೊಳೆಗೇರಿಗಳ ಸ್ಥಿತಿ ಗತಿ ಹೇಗಿದೆ ಎಂದರೆ ಅಲ್ಲಿ ನೀರು ಮತ್ತು ಶೌಚಾಲಯಗಳಂತಹ ಮೂಲ ಸೌಕರ್ಯಗಳೇ ಲಭ್ಯವಿಲ್ಲ. ಪಕ್ಕಾ ಮನೆಗಳ ನಿರ್ಮಾಣ ಕೊಳೆಗೇರಿಯಲ್ಲಿ ವಾಸಿಸುತ್ತಿರುವ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಬಹಳ ದೊಡ್ಡ ಸಹಾಯ. ಕೆಲಸಕ್ಕಾಗಿ ಗ್ರಾಮಗಳಿಂದ ನಗರಗಳಿಗೆ ಬರುತ್ತಿರುವ ಕಾರ್ಮಿಕರಿಗೆ ಕೈಗೆಟಕುವ ಬಾಡಿಗೆ ದರದಲ್ಲಿ ವಾಸ್ತವ್ಯದ ಅವಕಾಶಗಳನ್ನು ಒದಗಿಸಲು ಸರಕಾರ ಯೋಜನೆಯೊಂದನ್ನು ಆರಂಭಿಸಿದೆ.

ಸ್ನೇಹಿತರೇ,

ನಗರದ ಮಧ್ಯಮ ವರ್ಗದ ಜನರ ಸಮಸ್ಯೆಗಳು ಮತ್ತು ಸವಾಲುಗಳನ್ನು ನಿಭಾಯಿಸಲು ನಮ್ಮ ಸರಕಾರ  ಬಹಳ ಗಂಭೀರ ಪ್ರಯತ್ನಗಳನ್ನು ಮಾಡಿದೆ. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಂದರೆ ರೇರಾ ಈ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆ. ಈ ಕಾಯ್ದೆಯು ಇಡೀ ವಸತಿ ವಲಯದ ಅಪನಂಬಿಕೆ ಮತ್ತು ವಂಚನೆಯನ್ನು ಕೊನೆಗೊಳಿಸಲು ಸಹಾಯ ಮಾಡಿದೆ. ಈ ಕಾನೂನಿನ ಜಾರಿಯಿಂದ ಮನೆ ಖರೀದಿಸುವವರಿಗೆ ಸಕಾಲಿಕ ನ್ಯಾಯ ದೊರೆಯುತ್ತದೆ. ನಗರಗಳಲ್ಲಿ ಪೂರ್ಣಗೊಳ್ಳದ ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲು ಸಾವಿರಾರು ಕೋ.ರೂ.ಗಳ ವಿಶೇಷ ನಿಧಿಯನ್ನು ಕಾಯ್ದಿರಿಸಿದ್ದೇವೆ.

ಮಧ್ಯಮ ವರ್ಗದವರು ತಮ್ಮ ಮನೆಯ ಕನಸನ್ನು ನನಸು ಮಾಡಲು ಅನುಕೂಲವಾಗುವಂತೆ ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಲಕ್ಷಾಂತರ ರೂಪಾಯಿಗಳನ್ನು ಒದಗಿಸಲಾಗುತ್ತಿದೆ. ಅವರಿಗೆ ಕಡಿಮೆ ಬಡ್ಡಿದರ ನಿಗದಿ ಮಾಡಿ ಸಹಾಯ ಮಾಡಲಾಗುತ್ತಿದೆ. ಇತ್ತೀಚೆಗೆ ಮಾದರಿ ಬಾಡಿಗೆ ಕಾಯ್ದೆಯನ್ನು ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ ಮತ್ತು ಉತ್ತರ ಪ್ರದೇಶ ಸರಕಾರ ಅದನ್ನು ತಕ್ಷಣವೇ ಜಾರಿಗೆ ತಂದಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಈ ಕಾನೂನಿನೊಂದಿಗೆ ಭೂಮಾಲಿಕ ಮತ್ತು ಬಾಡಿಗೆದಾರರ ನಡುವಣ ಬಹಳ ಹಳೆಯ ಸಮಸ್ಯೆಗಳನ್ನು ನಿವಾರಿಸಬಹುದಾಗಿದೆ. ಇದು ಮನೆಯನ್ನು ಬಾಡಿಗೆಗೆ ಪಡೆಯುವುದನ್ನು ಸುಲಭ ಮಾಡುತ್ತದೆ ಮತ್ತು ಬಾಡಿಗೆ ಆಸ್ತಿಗಳಿಗೆ ಉತ್ತೇಜನವನ್ನು ನೀಡುತ್ತದೆ, ಹೆಚ್ಚು ಹೂಡಿಕೆಗೆ ಅವಕಾಶ ನೀಡುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ನಗರ ಮಧ್ಯಮ ವರ್ಗದವರ ಜೀವನ ಕೊರೊನಾ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಸಂಬಂಧಿಸಿದ ಹೊಸ ಕಾಯ್ದೆಗಳಿಂದ ಬಹಳ ಸುಲಭವಾಗಿದೆ. ಕೊರೊನಾ ಕಾಲದಲ್ಲಿ ದೂರದಲ್ಲಿ ಕುಳಿತು ಕೆಲಸ ಮಾಡುವ ಅನುಕೂಲ ಮಧ್ಯಮ ವರ್ಗದ ಸಹೋದ್ಯೋಗಿಗಳಿಗೆ ಒಂದು  ದೊಡ್ಡ ಪರಿಹಾರವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ನಿಮಗೆ ನೆನಪಿರಬಹುದು, 2014 ಕ್ಕೆ ಮೊದಲು ನಮ್ಮ ನಗರಗಳ ಸ್ವಚ್ಛತೆಯ ಬಗ್ಗೆ ನಾವು ಆಗಾಗ ಋಣಾತ್ಮಕವಾದಂತಹ ಮಾತುಗಳನ್ನು ಕೇಳುತ್ತಿದ್ದೆವು. ಕಸ, ಕೊಳಕು ನಗರ ಜೀವನದ  ಅಂಗೀಕಾರಾರ್ಹವಾದಂತಹ ಸ್ವರೂಪವಾಗಿತ್ತು. ಸ್ವಚ್ಛತೆಯತ್ತ ಉದಾಸೀನತೆ ನಗರಗಳ ಸೌಂದರ್ಯಕ್ಕೆ ಧಕ್ಕೆ ತರುವುದು ಮಾತ್ರವಲ್ಲದೆ ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರುತ್ತದೆ. ಜೊತೆಗೆ ಜನರ ಆರೋಗ್ಯವನ್ನೂ ಅಪಾಯದಂಚಿಗೆ ತಳ್ಳುತ್ತದೆ. ದೇಶದಲ್ಲೀಗ ಸ್ವಚ್ಛ ಭಾರತ್ ಆಂದೋಲನ ಮತ್ತು ಅಮೃತ್ ಅಭಿಯಾನ ಅಡಿಯಲ್ಲಿ ಬೃಹತ್ ಆಂದೋಲನವನ್ನು ಈ ಪರಿಸ್ಥಿತಿಯನ್ನು ಬದಲಾಯಿಸುವುದಕ್ಕಾಗಿ ನಡೆಸಲಾಗುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ ನಗರಗಳಲ್ಲಿ 60 ಲಕ್ಷ ಖಾಸಗಿ ಶೌಚಾಲಯಗಳು ಆರು ಲಕ್ಷ ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಏಳು ವರ್ಷಗಳ ಹಿಂದಿನವರೆಗೂ ತ್ಯಾಜ್ಯದಲ್ಲಿ  ಶೇಕಡಾ 18ರಷ್ಟು  ಮಾತ್ರ ವಿಲೇವಾರಿಯಾಗುತ್ತಿತ್ತು. ಇದು ಇಂದು ಶೇಕಡ 70 ಕ್ಕೇರಿದೆ. ಇಲ್ಲಿ ಉತ್ತರ ಪ್ರದೇಶದಲ್ಲಿ ಕೂಡಾ ಕಳೆದ ಕೆಲವು ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡಲಾಗಿದೆ. ಇಂತಹ ಹಲವಾರು ಸಂಗತಿಗಳನ್ನು ಇಂದು ವಸ್ತುಪ್ರದರ್ಶನದಲ್ಲಿ ನೋಡುವುದು ಬಹಳ ಆರಾಮದಾಯಕ. ಈಗ ಸ್ವಚ್ಛ ಭಾರತ್ ಅಭಿಯಾನ 2.0 ರಡಿಯಲ್ಲಿ  ನಗರಗಳಲ್ಲಿರುವ ಕಸದ ರಾಶಿಗಳನ್ನು ತೆಗೆಯಲು ಆಂದೋಲನ ಆರಂಭಿಸಲಾಗಿದೆ

ಸ್ನೇಹಿತರೇ,

ನಗರಗಳ  ಸೌಂದರ್ಯ ಹೆಚ್ಚಿಸುವಲ್ಲಿ ಎಲ್.ಇ.ಡಿ. ಲೈಟ್ ಗಳು ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸಿವೆ. ಸರಕಾರವು ದೇಶದಲ್ಲಿಯ 90 ಲಕ್ಷಕ್ಕೂ  ಅಧಿಕ ಹಳೆಯ ಬೀದಿ ದೀಪಗಳನ್ನು ಆಂದೋಲನದಡಿಯಲ್ಲಿ ಎಲ್.ಇ.ಡಿ. ಗಳೊಂದಿಗೆ ಬದಲಾಯಿಸಿದೆ. ಎಲ್.ಇ.ಡಿ. ಬೀದಿ ದೀಪಗಳ ಅಳವಡಿಕೆಯಿಂದಾಗಿ ನಗರಾಡಳಿತ ಸಂಸ್ಥೆಗಳಿಗೆ ಪ್ರತೀ ವರ್ಷ 1000 ಕೋ.ರೂ. ಉಳಿತಾಯವಾಗುತ್ತಿದೆ. ಈಗ ಈ ನಗರ ಸ್ಥಳೀಯ ಆಡಳಿತ ಸಂಸ್ಥೆಗಳು ಈ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಎಲ್.ಇ.ಡಿ.ಗಳು ನಗರಗಳಲ್ಲಿ ವಾಸಿಸುವ ಜನರ ವಿದ್ಯುತ್ ಬಿಲ್ ಪ್ರಮಾಣವನ್ನು ಗಮನೀಯ ಪ್ರಮಾಣದಲ್ಲಿ ಕಡಿಮೆ ಮಾಡಬಲ್ಲವು. ಎಲ್.ಇ.ಡಿ. ಬಲ್ಬ್ ಈ ಮೊದಲು 300 ರೂ.ಗಳಿಗೂ ಅಧಿಕ ಬೆಲೆ ಬಾಳುತ್ತಿತ್ತು. ಸರಕಾರ ಅದನ್ನು ಉಜಾಲಾ ಯೋಜನೆ ಅಡಿಯಲ್ಲಿ 50-60 ರೂಪಾಯಿಗಳಿಗೆ ನೀಡುತ್ತಿತ್ತು. ಈ ಯೋಜನೆ ಅಡಿಯಲ್ಲಿ 37 ಕೋಟಿ ಎಲ್.ಇ.ಡಿ. ಬಲ್ಬ್ ಗಳನ್ನು ವಿತರಿಸಲಾಗಿದೆ. ಇದರ ಪರಿಣಾಮವಾಗಿ ವಿದ್ಯುತ್ ಬಿಲ್ ನಲ್ಲಿ ಬಡವರು ಮತ್ತು ಮಧ್ಯಮವರ್ಗದವರಿಗೆ ಸುಮಾರು 24,000 ಕೋ.ರೂ.ಗಳಷ್ಟು ಉಳಿತಾಯವಾಗಿದೆ.

ಸ್ನೇಹಿತರೇ,

21 ನೇ ಶತಮಾನದ ಭಾರತದಲ್ಲಿ ನಗರಗಳ ಪುನಶ್ಚೇತನಕ್ಕೆ ಬಹಳ ಮುಖ್ಯವಾದ  ಹಾದಿಯೆಂದರೆ ತಂತ್ರಜ್ಞಾನದ ಗರಿಷ್ಠ ಬಳಕೆ. ನಗರಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಮತ್ತು ನಗರ ಯೋಜಕರು ತಮ್ಮ ಧೋರಣೆಗಳಲ್ಲಿ ತಂತ್ರಜ್ಞಾನಕ್ಕೆ ಬಹಳ ಗರಿಷ್ಠ ಆದ್ಯತೆಯನ್ನು ನೀಡಬೇಕು.

ಸ್ನೇಹಿತರೇ,

ಗುಜರಾತಿನ ಸಣ್ಣ  ಪ್ರದೇಶದಲ್ಲಿ ನಾವು ವಾಸಿಸುತ್ತಿದ್ದಾಗ ಮತ್ತು ಅಲ್ಲಿ ಲಕ್ನೋದ ಪ್ರಸ್ತಾಪ ಬಂದಾಗ ಜನರು ಹೇಳುತ್ತಿದ್ದರು, ಲಕ್ನೋಗೆ ಹೋದಾಗೆಲ್ಲ ತಾವು “ಪೆಹಲೇ ಆಪ್” ಎಂಬುದನ್ನು ಕೇಳುತ್ತಿದ್ದೆವು ಎಂಬುದಾಗಿ. ನಾನಿದನ್ನು ಸಂಗ್ರಹವಾಗಿ ಸಾರ ರೂಪದಲ್ಲಿ ಹೇಳುತ್ತಿದ್ದೇನೆ. ನಾವು ತಂತ್ರಜ್ಞಾನಕ್ಕೂ ’ಪೆಹ್ಲೆ ಆಪ್’ ಎಂದು ಹೇಳಬೇಕು.  ಕಳೆದ 6-7 ವರ್ಷಗಳಲ್ಲಿ ಭಾರತದ ನಗರ ವಲಯದಲ್ಲಿ ಭಾರೀ ಬದಲಾವಣೆ ಸಾಧ್ಯವಾಗಿರುವುದು ತಂತ್ರಜ್ಞಾನದಿಂದಾಗಿ ಮಾತ್ರ. ಸಮಗ್ರ ಕಮಾಂಡಿನ ಮತ್ತು ನಿಯಂತ್ರಣ ಕೇಂದ್ರಗಳ ತಳಪಾಯವೇ ತಂತ್ರಜ್ಞಾನ. ಇದು ಇಂದು ದೇಶದ 70 ಕ್ಕೂ ಅಧಿಕ ನಗರಗಳಲ್ಲಿದೆ. ದೇಶದ ನಗರಗಳಲ್ಲಿರುವ ವಿಸ್ತಾರವಾದ ಸಿ.ಸಿ.ಟಿ.ವಿ. ಕ್ಯಾಮರಾಗಳ ಜಾಲವನ್ನು ಈ ತಂತ್ರಜ್ಞಾನ ನಿಭಾಯಿಸುತ್ತಿದೆ. ದೇಶದ 75 ನಗರಗಳಲ್ಲಿ ಸ್ಥಾಪಿಸಲಾಗಿರುವ 30,000 ಆಧುನಿಕ ಸಿ.ಸಿ.ಟಿ.ವಿ. ಕ್ಯಾಮರಾಗಳಿಂದಾಗಿ  ದುಷ್ಕರ್ಮಿಗಳು (ದುಷ್ಕೃತ್ಯ ಎಸಗುವುದಕ್ಕೆ)  ನೂರು ಸಲ ಯೋಚಿಸಬೇಕು. ಈ ಸಿ.ಸಿ.ಟಿ.ವಿ.ಗಳು ಕ್ರಿಮಿನಲ್ ಗಳನ್ನು ಶಿಕ್ಷಿಸುವಲ್ಲಿ ಬಹಳ ಸಹಾಯವನ್ನು ಮಾಡುತ್ತಿವೆ.

ಸ್ನೇಹಿತರೇ,

ತಂತ್ರಜ್ಞಾನದ ಸಹಾಯದಿಂದಾಗಿ ಭಾರತದ ನಗರಗಳಲ್ಲಿ ಪ್ರತೀ ದಿನ ಸಾವಿರಾರು ಟನ್ನುಗಳ ಕಸ ವಿಲೇವಾರಿಯಾಗುತ್ತಿದೆ ಮತ್ತು ಸಂಸ್ಕರಿಸಲ್ಪಡುತ್ತಿದೆ ಮತ್ತು ಅದನ್ನು ಬಳಿಕ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ವಸ್ತು ಪ್ರದರ್ಶನದಲ್ಲಿ ತ್ಯಾಜ್ಯದ ಯೋಜನೆಗಳ ಮೂಲಕ  ಹಲವಾರು ಸಂಪತ್ತು ಸೃಷ್ಟಿಸಿದ್ದನ್ನು ನಾನು ನೋಡಿದ್ದೇನೆ. ಈ ಪ್ರಯೋಗಗಳು ಬಹಳ ಪ್ರೇರಣಾದಾಯಕವಾದಂತಹವು.

ಸ್ನೇಹಿತರೇ,

ಇಂದು, ಆಧುನಿಕ ತಂತ್ರಜ್ಞಾನ ಕೊಳಚೆ ಶುದ್ದೀಕರಣ ಸ್ಥಾವರಗಳ ಸಾಮರ್ಥ್ಯವನ್ನು ಹೆಚ್ಚಿಸಿದೆ. ರಾಷ್ಟ್ರೀಯ ಸಾಮಾನ್ಯ ಸಂಚಾರ ಕಾರ್ಡ್ ತಂತ್ರಜ್ಞಾನದ ಕೊಡುಗೆ. ಈ ಕಾರ್ಯಕ್ರಮದಲ್ಲಿ 75 ವಿದ್ಯುತ್ ಚಾಲಿತ ಬಸ್ಸುಗಳಿಗೆ ಚಾಲನೆ ನೀಡಲಾಗಿದೆ. ಇದು ಕೂಡಾ ಆಧುನಿಕ ತಂತ್ರಜ್ಞಾನದ ಪ್ರತಿಫಲನ.

ಸ್ನೇಹಿತರೇ,

ಹಗುರ ಮನೆ ಯೋಜನೆ ಅಡಿಯಲ್ಲಿ ಲಕ್ನೋದಲ್ಲಿ ನಿರ್ಮಾಣವಾಗುತ್ತಿರುವ ಮನೆಯನ್ನು ನಾನು ಈಗಷ್ಟೇ ನೋಡಿದೆ. ಈ ಮನೆಗಳಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನಕ್ಕೆ ಗಾರೆ ಮತ್ತು ಪೈಂಟ್ ಅಗತ್ಯವಿಲ್ಲ. ಮೊದಲೇ ನಿರ್ಮಾಣ ಮಾಡಲಾದ ಗೋಡೆಗಳನ್ನು ಈ ಮನೆಗಳಿಗೆ ಬಳಸಲಾಗುತ್ತದೆ. ಇದರಿಂದ ಮನೆಗಳ ನಿರ್ಮಾಣ ವೇಗ ಪಡೆಯುತ್ತದೆ. ದೇಶಾದ್ಯಂತದಿಂದ ಲಕ್ನೋಗೆ ಬರುವ ಎಲ್ಲ ಜನರೂ ಈ ಯೋಜನೆಯಿಂದ ಬಹಳ ಕಲಿಯುತ್ತಾರೆ ಮತ್ತು ಅವರ ನಗರಗಳಲ್ಲಿ ಇದನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.

ಸ್ನೇಹಿತರೇ,

ಪಿ.ಎಂ. ಸ್ವ ನಿಧಿ ಯೋಜನಾ ತಂತ್ರಜ್ಞಾನವು ಬಡವರ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದಕ್ಕೆ ಒಂದು ಉದಾಹರಣೆ. ಲಕ್ನೋದಂತಹ ಹಲವು ನಗರಗಳಲ್ಲಿ ವಿವಿಧ ಮಾದರಿಯ ಮಾರುಕಟ್ಟೆಗಳ ಸಂಪ್ರದಾಯವಿದೆ. ನಮ್ಮ ಬೀದಿ ಬದಿ ವ್ಯಾಪಾರಿಗಳು ವಾರದ ಸಂತೆಯ ಸೌಂದರ್ಯವನ್ನು ಹೆಚ್ಚಿಸುತ್ತಾರೆ. ಈ ಸಹೋದರರು ಮತ್ತು ಸಹೋದರಿಯರಿಗೆ ತಂತ್ರಜ್ಞಾನ ಒಂದು ವರವಾಗಿದೆ. ಪಿ.ಎಂ. ಸ್ವ ನಿಧಿ ಯೋಜನೆ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಬ್ಯಾಂಕುಗಳ ಜೊತೆ ಜೋಡಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ 25  ಲಕ್ಷ ಸ್ನೇಹಿತರಿಗೆ 2500 ಕೋ.ರೂ.ಗಳಿಗೂ ಹೆಚ್ಚು ಹಣಕಾಸು ನೆರವನ್ನು ನೀಡಲಾಗಿದೆ. ಉತ್ತರ ಪ್ರದೇಶದ 7 ಲಕ್ಷಕ್ಕೂ ಅಧಿಕ ಸ್ನೇಹಿತರು ಸ್ವ ನಿಧಿ ಯೋಜನಾದಿಂದ ಪ್ರಯೋಜನ ಪಡೆದಿದ್ದಾರೆ. ಅವರ ಬ್ಯಾಂಕಿಂಗ್ ಚರಿತ್ರೆಯೊಂದಿಗೆ ಅವರು ಹೆಚ್ಚು ಹೆಚ್ಚು ಡಿಜಿಟಲ್ ವರ್ಗಾವಣೆಯನ್ನು ಮಾಡುತ್ತಿದ್ದಾರೆ.

ಸ್ವ ನಿಧಿ ಯೋಜನಾದಿಂದ ಬಹಳ ಪ್ರಯೋಜನ ಪಡೆದ ಮುಂಚೂಣಿ ನಗರಗಳಲ್ಲಿ ಉತ್ತರ ಪ್ರದೇಶದ ಎರಡು ನಗರಗಳು ಇವೆ ಎಂಬುದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ. ಲಕ್ನೋ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಮತ್ತು ಕಾನ್ಪುರ ಎರಡನೇ ಸ್ಥಾನದಲ್ಲಿದೆ. ಕೊರೊನಾದ ಈ ಕಾಲದಲ್ಲಿ ಇದು ಬಹಳ ದೊಡ್ಡ ಸಹಾಯ. ಇದಕ್ಕಾಗಿ ನಾನು ಯೋಗೀ ಜೀ ಸರಕಾರವನ್ನು ಶ್ಲಾಘಿಸುತ್ತೇನೆ.

ಸ್ನೇಹಿತರೇ,

ಇಂದು ನಾನು ನಮ್ಮ ಬೀದಿ ಬದಿ ವ್ಯಾಪಾರಿಗಳಿಂದ ಮಾಡಲಾಗುತ್ತಿರುವ ಡಿಜಿಟಲ್ ವರ್ಗಾವಣೆ ಬಗ್ಗೆ ಮಾತನಾಡುತ್ತಿರುವಾಗ, ಯೋಜನೆಯನ್ನು ಈ ಮೊದಲು ಅಪಹಾಸ್ಯ ಮಾಡಿದ್ದು ನನಗೆ ನೆನಪಾಗುತ್ತದೆ. ಈ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಹೇಗೆ ಡಿಜಿಟಲ್ ವರ್ಗಾವಣೆಗಳನ್ನು ನಡೆಸುತ್ತಾರೆ ಎಂದು ಪ್ರಶ್ನಿಸಲಾಗುತ್ತಿತ್ತು. ಆದರೆ ಸ್ವಾನಿಧಿ ಯೋಜನೆಯ ಜೊತೆ ಇರುವ ಬೀದಿ ವ್ಯಾಪಾರಿಗಳು ಇದುವರೆಗೆ ಏಳು ಕೋಟಿಗೂ ಅಧಿಕ ಡಿಜಿಟಲ್ ವರ್ಗಾವಣೆಗಳನ್ನು ಮಾಡಿದ್ದಾರೆ. ಈಗ ಅವರು ಸಗಟು ವ್ಯಾಪಾರಸ್ಥರಿಂದ ಏನನ್ನಾದರೂ ಖರೀದಿಸುವಾಗ ಅವರು ಡಿಜಿಟಲ್ ವರ್ಗಾವಣೆಯನ್ನು ಮಾಡುತ್ತಾರೆ. ಇಂದು ಇಂತಹ ಸ್ನೇಹಿತರಿಂದಾಗಿ ಭಾರತವು ಡಿಜಿಟಲ್ ವರ್ಗಾವಣೆಯಲ್ಲಿ ಹೊಸ ದಾಖಲೆಗಳನ್ನು ಮಾಡುತ್ತಿದೆ. ಕಳೆದ ಮೂರು ತಿಂಗಳುಗಳಲ್ಲಿ ಅಂದರೆ ಜುಲೈ, ಆಗಸ್ಟ್, ಸೆಪ್ಟೆಂಬರ್ ಗಳಲ್ಲಿ ಪ್ರತೀ ತಿಂಗಳೂ 6 ಲಕ್ಷ ಕೋ.ರೂ.ಗಳಿಗೂ ಅಧಿಕ ಡಿಜಿಟಲ್ ವಹಿವಾಟು ಆಗಿದೆ. ಬ್ಯಾಂಕುಗಳಿಗೆ ಜನರ ಭೇಟಿ ಕಡಿಮೆಯಾಗುತ್ತಿದೆ. ಇದು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ಭಾರತದ ಶಕ್ತಿ ಮತ್ತು ಬದಲಾವಣೆಯನ್ನು ತೋರಿಸುತ್ತದೆ.

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ ಭಾರತದ ಮಾಲಿನ್ಯದ ಸವಾಲುಗಳನ್ನು ಮತ್ತು ಸಂಚಾರದ ಸಮಸ್ಯೆಗಳನ್ನು ಸಮಗ್ರ ಧೋರಣೆ ಅಡಿಯಲ್ಲಿ ಪರಿಹರಿಸಲಾಗುತ್ತಿದೆ. ಮೆಟ್ರೋ ರೈಲು ಇದಕ್ಕೆ ಒಂದು ದೊಡ್ಡ ಉದಾಹರಣೆ. ಇಂದು ಭಾರತವು ಮೆಟ್ರೋ ಸೇವೆಗಳನ್ನು ದೇಶಾದ್ಯಂತ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದೆ. 2014 ರಲ್ಲಿ ಮೆಟ್ರೋ 250 ಕಿಲೋ ಮೀಟರಿಗಿಂತ ಕಡಿಮೆ ರೈಲು ಮಾರ್ಗದಲ್ಲಿ ಓಡುತ್ತಿತ್ತು. ಇಂದು ಇದು 700 ಕಿಲೋ ಮೀಟರ್ ಓಡುತ್ತಿದೆ. ಇಂದು ಅಧಿಕಾರಿಗಳು ನನಗೆ ತಿಳಿಸಿದ್ದಾರೆ-1050 ಕಿಲೋ ಮೀಟರ್ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದಾಗಿ. ಉತ್ತರ ಪ್ರದೇಶದ ಆರು ನಗರಗಳಲ್ಲಿ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. 100 ನಗರಗಳಲ್ಲಿ ವಿದ್ಯುತ್ ಚಾಲಿತ ಬಸ್ಸುಗಳನ್ನು ಓಡಿಸುವುದಿರಲಿ, ಅಥವಾ ಉಡಾನ್ ಯೋಜನೆ ಇರಲಿ, ಅವುಗಳು ನಗರ ಅಭಿವೃದ್ಧಿಗೆ ವೇಗವನ್ನು ಒದಗಿಸುತ್ತಿವೆ. 21 ನೇ ಶತಮಾನದ ಭಾರತ ಈಗ ಬಹು ಮಾದರಿ ಸಂಪರ್ಕದ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಮತ್ತು ಸಿದ್ಧತೆಗಳು ಬಹಳ ವೇಗದಿಂದ ನಡೆಯುತ್ತಿವೆ.

ಮತ್ತು ಸ್ನೇಹಿತರೇ,

ಈ ಎಲ್ಲಾ ನಗರ ಮೂಲಸೌಕರ್ಯ ಯೋಜನೆಗಳ ಬಹಳ ದೊಡ್ಡ ಪರಿಣಾಮ ಎಂದರೆ ನಗರಗಳಲ್ಲಿ ಉದ್ಯೋಗಗಳ ಸೃಷ್ಟಿ, ಅದು ಮೆಟ್ರೋ ಕಾಮಗಾರಿಯಾಗಿರಲಿ, ಮನೆಗಳ ನಿರ್ಮಾಣ ಇರಲಿ, ಅಥವಾ ವಿದ್ಯುತ್ ಮತ್ತು ನೀರಿಗೆ ಸಂಬಂಧಪಟ್ಟ ಕೆಲಸಗಳಿರಲಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ತಜ್ಞರು ಅವುಗಳನ್ನು ಶಕ್ತಿ ವರ್ಧಕಗಳು ಎಂದು ಪರಿಗಣಿಸುತ್ತಾರೆ. ಆದುದರಿಂದ, ನಾವು ಈ ಯೋಜನೆಗಳ ವೇಗವನ್ನು ಕಾಯ್ದುಕೊಳ್ಳಬೇಕು.

ಸಹೋದರರೇ ಮತ್ತು ಸಹೋದರಿಯರೇ,

ಇಡೀ ಭಾರತದ ಜೀವನ ಮತ್ತು ಭಾರತದ ಸಂಸ್ಕೃತಿ ಉತ್ತರ ಪ್ರದೇಶದಲ್ಲಿದೆ. ಇದು ಭಗವಾನ್ ಶ್ರೀ ರಾಮ, ಶ್ರೀ ಕೃಷ್ಣ ಮತ್ತು ಭಗವಾನ್ ಬುದ್ಧರ ನಾಡು. ಉತ್ತರ ಪ್ರದೇಶದ  ಶ್ರೀಮಂತ ಪರಂಪರೆಯನ್ನು ಪೋಷಿಸುವಂತೆ ನಗರಗಳನ್ನು ಆಧುನೀಕರಿಸ ಬೇಕಾಗಿರುವುದು ನಮ್ಮ ಜವಾಬ್ದಾರಿ. ಉತ್ತರ ಪ್ರದೇಶದ ಜನತೆ ಈಗಿನ ಉತ್ತರ ಪ್ರದೇಶ ಮತ್ತು 2017 ಕ್ಕಿಂತ ಮೊದಲಿನ ಉತ್ತರ ಪ್ರದೇಶದ ನಡುವಣ ವೈದೃಶ್ಯಗಳ ಬಗ್ಗೆ ತಿಳಿದಿದ್ದಾರೆ. ಈ ಮೊದಲು ಉತ್ತರ ಪ್ರದೇಶದಲ್ಲಿ ವಿದ್ಯುತ್ ಕೊರತೆ ಇತ್ತು. ರಾಜಕಾರಣಿಗಳು ಇಚ್ಛಿಸುವ ಪ್ರದೇಶಗಳಲ್ಲಿ ಮಾತ್ರ ವಿದ್ಯುತ್ ಲಭಿಸುತ್ತಿತ್ತು. ವಿದ್ಯುತ್ ಒಂದು ಸೌಲಭ್ಯ ಆಗಿರಲಿಲ್ಲ. ಬದಲು ಅದು ರಾಜಕೀಯದ ಸಲಕರಣೆಯಾಗಿತ್ತು. ಅಲ್ಲಿ ಶಿಫಾರಸು ಇದ್ದರೆ ಮಾತ್ರ ರಸ್ತೆ ನಿರ್ಮಾಣ ಆಗುತ್ತಿತ್ತು. ಮತ್ತು ನೀರಿನ ಪರಿಸ್ಥಿತಿ ನಿಮಗೆಲ್ಲರಿಗೂ ಗೊತ್ತಿದೆ.

ಈಗ ಪ್ರತಿಯೊಬ್ಬರಿಗೂ ಎಲ್ಲಿ ಬೇಕಾದರೂ ಸಮಾನವಾಗಿ ವಿದ್ಯುತ್ ದೊರೆಯುತ್ತಿದೆ. ಬಡವರ ಮನೆಗಳೂ ವಿದ್ಯುದ್ದೀಕರಣಗೊಂಡಿವೆ. ಗ್ರಾಮೀಣ ರಸ್ತೆಗಳಿಗೆ ಯಾರ ಶಿಫಾರಸು ಕೂಡಾ ಬೇಕಾಗಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ ನಗರಾಭಿವೃದ್ಧಿಗೆ ಬೇಕಾದಂತಹ ಇಚ್ಛಾ ಶಕ್ತಿ ಇಂದು ಉತ್ತರ ಪ್ರದೇಶದಲ್ಲಿದೆ.

ಇಂದು ಶಿಲಾನ್ಯಾಸ ಮಾಡಲಾದ ಯೋಜನೆಗಳು ಯೋಗೀಜಿ ಅವರ ನಾಯಕತ್ವದಲ್ಲಿ ತ್ವರಿತವಾಗಿ ಪೂರ್ಣಗೊಳ್ಳುತ್ತವೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.

ಅಭಿವೃದ್ಧಿ ಯೋಜನೆಗಳಿಗಾಗಿ ಮತ್ತೊಮ್ಮೆ ನಿಮಗೆಲ್ಲ ಬಹಳ ಬಹಳ ಶುಭಾಶಯಗಳು.

ಬಹಳ ಧನ್ಯವಾದಗಳು!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1762490) Visitor Counter : 183