ರಾಷ್ಟ್ರಪತಿಗಳ ಕಾರ್ಯಾಲಯ

ನಮ್ಮ ತಂತ್ರಜ್ಞಾನ, ಮಾನವ ಸಂಪನ್ಮೂಲ ಮತ್ತು ಇವೆರಡರ ಲಭ್ಯತೆಯು ಒಟ್ಟುಗೂಡಿದರೆ ಮಾತ್ರ ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಆಶಯ ಹೊಂದಬಹುದು: ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್


ಕರ್ನಾಟಕದ ಚಾಮರಾಜನಗರದಲ್ಲಿ ಚಾಮರಾಜನಗರ ವೈದ್ಯಕೀಯ ಸಂಸ್ಥೆಯ ನೂತನ ಬೋಧನಾ ಆಸ್ಪತ್ರೆ ಉದ್ಘಾಟಿಸಿದ ರಾಷ್ಟ್ರಪತಿ

Posted On: 07 OCT 2021 6:06PM by PIB Bengaluru

ನಮ್ಮ ತಂತ್ರಜ್ಞಾನ, ಮಾನವ ಸಂಪನ್ಮೂಲ ಮತ್ತು ಇವೆರಡರ ಲಭ್ಯತೆಯು ಒಟ್ಟುಗೂಡಿದರೆ ಮಾತ್ರ ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಆಶಯ ಹೊಂದಬಹುದು ಎಂದು ರಾಷ್ಟ್ರಪತಿ ಶ್ರೀ ರಾಮನಾಥ ಕೋವಿಂದ್ ಹೇಳಿದ್ದಾರೆ. ಅವರು ಇಂದು (ಅಕ್ಟೋಬರ್ 7, 2021) ಕರ್ನಾಟಕದ ಚಾಮರಾಜನಗರದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಐಎಂಎಸ್) ನೂತನ ಬೋಧನಾ ಆಸ್ಪತ್ರೆಯ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಿಐಎಂಎಸ್ ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಅರಣ್ಯವಾಗಿದೆ ಮತ್ತು ಇಲ್ಲಿ ವಾಸಿಸುವ ಬಹುತೇಕ ಜನರು ಪರಿಶಿಷ್ಟ ಜಾತಿ ಮತ್ತು ಪಂಗಡದವರು ಎಂಬ ಅಂಶದ ಬಗ್ಗೆ ಗಮನ ಸೆಳೆದ ರಾಷ್ಟ್ರಪತಿಯವರು, ಸಿಐಎಂಎಸ್ ಆಡಳಿತ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಗುರಿಯೊಂದಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಇದು ದೇಶದಲ್ಲಿ ವೈದ್ಯಕೀಯ ಸೇವೆಗಳ ವಿಸ್ತರಣೆಯ ನಿಜವಾದ ಗುರಿಯಾಗಿದೆ ಎಂದು ಸೂಚಿಸಿದರು. ಭಾರತ ಸರ್ಕಾರವು ಈಗಾಗಲೇ ಏಮ್ಸ್ ಸಂಖ್ಯೆಯನ್ನು 6 ರಿಂದ 22 ಕ್ಕೆ ಹೆಚ್ಚಿಸಿದೆ ಎಂದು ಅವರು ಹೇಳಿದರು. ಇಡೀ ದೇಶದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಪ್ರತಿ ಜಿಲ್ಲೆಯಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ. ಹೊಸ ಸ್ನಾತಕೋತ್ತರ ಕಾಲೇಜುಗಳು ಆರಂಭವಾಗುತ್ತಿರುವಾಗ, ಈಗಿರುವ ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳು ಶ್ರೇಷ್ಠತಾ ಕೇಂದ್ರಗಳಾಗಲು ಉತ್ತೇಜನ ನೀಡಲಾಗುತ್ತಿದೆ. ಆದರೆ ಈ ಮೂಲಸೌಕರ್ಯವು ಮಾನವ ಸಂಪನ್ಮೂಲವಿಲ್ಲದೆ ತನ್ನ ಉದ್ದೇಶವನ್ನು ಸಾಧಿಸಲು ಸಾಧ್ಯವಿಲ್ಲ. ನಮ್ಮಲ್ಲಿ ದೃಢವಾದ ವಿತರಣಾ ವ್ಯವಸ್ಥೆ ಇಲ್ಲದಿದ್ದರೆ ಎಲ್ಲಾ ತಂತ್ರಜ್ಞಾನಗಳು ನಿಷ್ಪ್ರಯೋಜಕವಾಗುತ್ತವೆ. ನಾವು ನಮ್ಮ ಆರೋಗ್ಯ ಸೇವೆಗಳನ್ನು ನಮ್ಮ ದೇಶದ ಮೂಲೆ ಮೂಲೆಗಳಿಗೂ ತಲುಪಿಸಬೇಕು. ನಮ್ಮ ತಂತ್ರಜ್ಞಾನ, ಮಾನವ ಸಂಪನ್ಮೂಲ ಮತ್ತು ಇವೆರಡರ ಲಭ್ಯತೆಯು ಒಟ್ಟುಗೂಡಿದರೆ ಮಾತ್ರ ನಾವು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಆಶಯ ಹೊಂದಬಹುದು ಎಂದು ರಾಷ್ಟ್ರಪತಿಯವರು ಹೇಳಿದರು.

2020-21 ರಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಸಿಐಎಂಎಸ್ ಮೂರನೇ ಸ್ಥಾನದಲ್ಲಿರುವ ಬಗ್ಗೆ ರಾಷ್ಟ್ರಪತಿಯವರು ಸಂತಸ ವ್ಯಕ್ತಪಡಿಸಿದರು. ಆರೋಗ್ಯ ಸೇವೆಯ ಲಭ್ಯತೆಯನ್ನು ಉತ್ತೇಜಿಸುವಲ್ಲಿ, ಈ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ನಿರ್ಣಾಯಕ ಪಾತ್ರವನ್ನು ವಹಿಸಬೇಕು ಎಂದು ಅವರು ಹೇಳಿದರು. ಇಲ್ಲಿ ತರಬೇತಿ ಪಡೆಯುತ್ತಿರುವ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾರೆ ಮತ್ತು ತಮ್ಮ ವೃತ್ತಿ ಮತ್ತು ಸಂಸ್ಥೆಗೆ ಕೀರ್ತಿ ತರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ವರ್ಷದ ಆರಂಭದಿಂದಲೂ ವಿಶ್ವದಾದ್ಯಂತ ಹರಡಿರುವ ಕೋವಿಡ್ -19 ಸಾಂಕ್ರಾಮಿಕ ರೋಗದ ಪರಿಣಾಮಗಳ ಕುರಿತು ಮಾತನಾಡಿದ ರಾಷ್ಟ್ರಪತಿಯವರು, ನಮ್ಮ ದೇಶವೂ ಇದಕ್ಕೆ ಹೊರತಾಗಿಲ್ಲ, ಮತ್ತು ಈ ವರ್ಷ ನಾವು ವಿನಾಶಕಾರಿ ಸೋಂಕಿನ ಅಲೆಯನ್ನು ಸಮರ್ಥವಾಗಿ ಎದುರಿಸಿದ್ದೇವೆ ಎಂದು ಹೇಳಿದರು. ಇದೊಂದು ಗಂಭೀರ ಬಿಕ್ಕಟ್ಟಾಗಿತ್ತು, ಆದರೆ ಅದೃಶ್ಯ ಶತ್ರುವಿನ ವಿರುದ್ಧದ ಹೋರಾಟದಲ್ಲಿ ಎಲ್ಲ ಭಾರತೀಯರನ್ನು ಒಂದುಗೂಡಿಸಿತು ಎಂದರು. ಸೋಂಕಿನ ಮರುಕಳಿಸುವಿಕೆಯು ಬಹುತೇಕ ಕಡಿಮೆಯಾಗಿದೆ. ನಮ್ಮ ವೈದ್ಯಕೀಯ ಸಮುದಾಯದ ಅಪಾರ ಸಮರ್ಪಣೆಯಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಕೆಲವರು ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ಪ್ರಾಣವನ್ನೂ ತ್ಯಾಗ ಮಾಡಿದ್ದಾರೆ. ನಮ್ಮ ರಾಷ್ಟ್ರವು ಅವರಿಗೆ ಎಂದೆಂದಿಗೂ ಋಣಿಯಾಗಿರುತ್ತದೆ ಎಂದು ಅವರು ಹೇಳಿದರು. ನಮ್ಮ ಕೊರೊನಾ ಯೋಧರು- ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಇತರರು - ತಮ್ಮ ಅವಿರತ ಶ್ರಮದಿಂದ ನಮ್ಮ ದೇಶವು ಹೆಮ್ಮೆಪಡುವಂತೆ ಮಾಡಿದ್ದಾರೆ. ಇತಿಹಾಸದಲ್ಲಿಯೇ ಅತಿದೊಡ್ಡ ಲಸಿಕಾ ಅಭಿಯಾನದ ಹಿಂದೆ ಇದೇ ಸಮರ್ಪಣಾ ಭಾವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಭಾರತವು ಕೊರೊನಾವೈರಸ್ ಲಸಿಕೆಗಳನ್ನು ದೇಶೀಯವಾಗಿ ತಯಾರಿಸಿದ್ದು ಮಾತ್ರವಲ್ಲದೆ ಲಸಿಕೆಗಳನ್ನು ನೀಡುವಲ್ಲಿಯೂ ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಒಂದೇ ದಿನದಲ್ಲಿ, ನಾವು ಸುಮಾರು 25 ಮಿಲಿಯನ್ ಜನರಿಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಒಟ್ಟು ಲಸಿಕಾ ವ್ಯಾಪ್ತಿಯು ಶೀಘ್ರದಲ್ಲೇ ಒಂದು ಬಿಲಿಯನ್ ಗಡಿ ದಾಟುತ್ತದೆ. ನಮ್ಮ ಆರೋಗ್ಯ ವೃತ್ತಿಪರರಲ್ಲಿ ಅಸಾಧಾರಣ ಬದ್ಧತೆ ಇಲ್ಲದೇ ಇದ್ದರೆ ನಾವು ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ರಾಷ್ಟ್ರಪತಿಯವರು ಹೇಳಿದರು.

ತಮ್ಮ ದೃಷ್ಟಿಯಲ್ಲಿ, ರಾಷ್ಟ್ರದ ಅಭಿವೃದ್ಧಿಯನ್ನು ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಎಂಬ ಅವಳಿ ತಳಹದಿಗಳು ರೂಪಿಸಿವೆ ಎಂದು ರಾಷ್ಟ್ರಪತಿಯವರು ಹೇಳಿದರು. ಸಿಐಎಂಎಸ್ ಈ ಎರಡನ್ನೂ ತನ್ನಲ್ಲಿ ಒಳಗೊಂಡಿದೆ. ಪದವಿ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ವೈದ್ಯಕೀಯ ಕಾಲೇಜಾಗಿದೆ. ಇದು ಚಾಮರಾಜನಗರ ಜಿಲ್ಲೆಯಲ್ಲಿ ತೃತೀಯ ಆರೋಗ್ಯ ಸೇವೆಗಳನ್ನು ಒದಗಿಸುವ ಏಕೈಕ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. 450 ಹಾಸಿಗೆಗಳ ಆಸ್ಪತ್ರೆಯ ಉದ್ಘಾಟನೆಯೊಂದಿಗೆ, ಪ್ರಾಯೋಗಿಕ ಅನುಭವ ಮತ್ತು ಇಲ್ಲಿ ಅರಳುವ ಪ್ರತಿಭೆಗಳಿಗೆ ತರಬೇತಿ ನೀಡಲು ಇದು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆ ಮತ್ತು ನಿರ್ಣಾಯಕ ಆರೈಕೆಗಾಗಿ ಸಾಕಷ್ಟು ಮೂಲಸೌಕರ್ಯಗಳು ಮತ್ತು ಹೃದಯ ರೋಗ, ನರವಿಜ್ಞಾನ ಮುಂತಾದ ಸೂಪರ್ ಸ್ಪೆಷಾಲಿಟಿ ವಿಭಾಗಗಳು ಈ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುತ್ತವೆ ಎಂದು ರಾಷ್ಟ್ರಪತಿಯವರು ವಿಶ್ವಾಸ ವ್ಯಕ್ತಪಡಿಸಿದರು.

***



(Release ID: 1761837) Visitor Counter : 188