ಚುನಾವಣಾ ಆಯೋಗ
ಇಸಿಐನಿಂದ "ಚುನಾವಣೆ ಮತ್ತು ಪ್ರಜಾಪ್ರಭುತ್ವ ಕುರಿತಂತೆ ಇಸಿಐ ವಾರ್ಷಿಕ ರಾಷ್ಟ್ರೀಯ ಪ್ರಬಂಧ ಸ್ಪರ್ಧೆ" ಉದ್ಘಾಟನಾ ಆವೃತ್ತಿಗೆ ಚಾಲನೆ
ರಾಷ್ಟ್ರೀಯ ಪ್ರಬಂಧ ಸ್ಪರ್ಧೆಯನ್ನು ಐಐಐಡಿಇಎಂ ಮತ್ತು ಜೆಜಿಎಲ್ಎಸ್ ಜಂಟಿಯಾಗಿ ಆಯೋಜಿಸಿವೆ
ಸ್ಪರ್ಧೆಯು ಅಕ್ಟೋಬರ್ 2 ರಿಂದ ನವೆಂಬರ್ 21 ರವರೆಗೆ ಪ್ರವೇಶಗಳಿಗಾಗಿ ಮುಕ್ತವಾಗಿರುತ್ತದೆ
Posted On:
01 OCT 2021 1:38PM by PIB Bengaluru
ಭಾರತೀಯ ಚುನಾವಣಾ ಆಯೋಗ(ಇಸಿಐ)ವು, ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತ ಭಾರತೀಯ ಅಂತಾರಾಷ್ಟ್ರೀಯ ಸಂಸ್ಥೆ (ಐಐಡಿಇಎಂ) ಮತ್ತು ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ (ಜೆಪಿಎಲ್.ಎಸ್), ಒ.ಪಿ. ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿ, ಸೋನಿಪತ್, ಹರಿಯಾಣ ಇವರೊಂದಿಗೆ ಜಂಟಿಯಾಗಿ "ಚುನಾವಣೆ ಮತ್ತು ಪ್ರಜಾಪ್ರಭುತ್ವ ಕುರಿತಂತೆ ಭಾರತೀಯ ಚುನಾವಣಾ ಆಯೋಗದ ವಾರ್ಷಿಕ ರಾಷ್ಟ್ರೀಯ ಪ್ರಬಂಧ ಸ್ಪರ್ಧೆ"ಯ ಉದ್ಘಾಟನಾ ಆವೃತ್ತಿಗೆ ಇಂದು ಚಾಲನೆ ನೀಡಿದೆ. ಸ್ಪರ್ಧೆಯು 2021ರ ಅಕ್ಟೋಬರ್ 2ರಂದು ಪ್ರಾರಂಭವಾಗುತ್ತದೆ ಮತ್ತು ಪ್ರವೇಶಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 2021 ನವೆಂಬರ್ 21 ಆಗಿರುತ್ತದೆ. ಸ್ಪರ್ಧೆಯ ಎರಡು ವಿಷಯಗಳು - ವಿಷಯ 1: 'ಚುನಾವಣೆಯ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕೆ ಕಾನೂನು ಚೌಕಟ್ಟು' ಮತ್ತು ವಿಷಯ 2: 'ಚುನಾವಣಾ ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಮತ್ತು ಸಂರಕ್ಷಿಸುವಲ್ಲಿ ಇಸಿಐ ಪಾತ್ರ'. ಈ ಪ್ರಬಂಧ ಸ್ಪರ್ಧೆಯ ಮುಖ್ಯ ಉದ್ದೇಶವೆಂದರೆ ಕಾನೂನು ವಿದ್ಯಾರ್ಥಿಗಳನ್ನು ಸಮಕಾಲೀನ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು ಮತ್ತು ಭಾರತದಲ್ಲಿ ಚುನಾವಣೆಗಳನ್ನು ನಿಯಂತ್ರಿಸುವ ಕಾನೂನಿನ ಹೊಸ ಆಯಾಮಗಳನ್ನು ಅನ್ವೇಷಿಸುವುದಾಗಿದೆ.
ಪ್ರಬಂಧ ಸ್ಪರ್ಧೆಯು ಆನ್ ಲೈನ್ ಸ್ವರೂಪದಲ್ಲಿರುತ್ತದೆ ಮತ್ತು ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ನಡೆಸಲಾಗುತ್ತದೆ. ಭಾರತೀಯ ವಕೀಲರ ಪರಿಷತ್ತಿನಿಂದ ಮಾನ್ಯತೆ ಪಡೆದ ಭಾರತೀಯ ಕಾನೂನು ವಿಶ್ವವಿದ್ಯಾಲಯ/ಸಂಸ್ಥೆ/ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಪ್ರಬಂಧ ಸ್ಪರ್ಧೆ ನಡೆಸಲಾಗುತ್ತಿದೆ. ಪ್ರಬಂಧ ಸ್ಪರ್ಧೆಯ ಪ್ರವೇಶಗಳನ್ನು ಚುನಾವಣಾ ಕಾನೂನುಗಳಲ್ಲಿ ಪರಿಣತಿ ಹೊಂದಿರುವ ಜೆಜಿಎಲ್ಎಸ್ ಬೋಧಕ ಸದಸ್ಯರು, ವಸ್ತುವಿಷಯದ ಸ್ವಂತಿಕೆ, ಸ್ವರೂಪ ಮತ್ತು ಪ್ರಸ್ತುತಪಡಿಸಿದ ರೀತಿ, ಸಂಶೋಧನೆಯ ಗುಣಮಟ್ಟ, ವಾದಸರಣಿ ಮತ್ತು ಪ್ರಾಧಿಕಾರಗಳ ಮತ್ತು ಉಲ್ಲೇಖಗಳ ಬಳಕೆ ಸೇರಿದಂತೆ ಐದು ಮಾನದಂಡಗಳ ಬಗ್ಗೆ ಐಐಐಡಿಇಎಂನೊಂದಿಗೆ ಸಮಾಲೋಚಿಸಿ ಮೌಲ್ಯಮಾಪನ ಮಾಡುತ್ತಾರೆ. ವಿವಿಧ ವಿಭಾಗಗಳಿಗೆ ಲಭ್ಯವಿರುವ ಬಹುಮಾನಗಳು ಆಕರ್ಷಕವಾಗಿದ್ದು, ಮೊದಲ ಬಹುಮಾನಕ್ಕೆ ಒಂದು ಲಕ್ಷ ರೂ. ನಿಗದಿಪಡಿಸಲಾಗಿದೆ.
ಪ್ರಬಂಧ ಸ್ಪರ್ಧೆಯ ಮಹತ್ವವನ್ನು ಒತ್ತಿ ಹೇಳಿರುವ ಮುಖ್ಯ ಚುನಾವಣಾ ಆಯುಕ್ತ ಶ್ರೀ ಸುಶೀಲ್ ಚಂದ್ರ ಅವರು, ಈ ಸ್ಪರ್ಧೆಯು ಭಾರತದಲ್ಲಿ ಚುನಾವಣೆಗಳನ್ನು ನಿಯಂತ್ರಿಸುವ ಕಾನೂನುಗಳು ಮತ್ತು ನೀತಿಯ ಬಗ್ಗೆ ಸಂಶೋಧನೆ ನಡೆಸಲು ಕಾನೂನು ಶಾಲೆಗಳ ಯುವ ಮತ್ತು ಪ್ರಕಾಶಮಾನ ಮನಸ್ಸುಗಳನ್ನು ಪ್ರೇರೇಪಿಸುವ ಪ್ರಯತ್ನವಾಗಿದೆ ಎಂದು ಸಂದೇಶದಲ್ಲಿ ಹಂಚಿಕೊಂಡಿದ್ದಾರೆ. ಪ್ರಬಂಧ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನದ ಆಳ, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಮನವೊಲಿಸುವ ಬರವಣಿಗೆಯ ಶೈಲಿಯನ್ನು ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು ತಮ್ಮ ಸಂದೇಶದಲ್ಲಿ ಪ್ರಬಂಧ ಸ್ಪರ್ಧೆಯು ಕಾನೂನು ವಿದ್ಯಾರ್ಥಿಗಳ ಪ್ರತಿಭೆಯನ್ನು ಸಂವೇದನಾತ್ಮಕಗೊಳಿಸಲು, ಅಭಿವೃದ್ಧಿಪಡಿಸಲು, ಬಳಸಿಕೊಳ್ಳಲು ಮತ್ತು ತೀಕ್ಷ್ಣಗೊಳಿಸಲು ಹಾಗೂ ಸಂವಿಧಾನ, ಕಾನೂನು ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ತಮ್ಮ ತಿಳಿವಳಿಕೆಯನ್ನು ವ್ಯಕ್ತಪಡಿಸಲು ವಾರ್ಷಿಕ ಸ್ಪರ್ಧಾತ್ಮಕ ಅವಕಾಶವನ್ನು ಒದಗಿಸುವ ಉಪಕ್ರಮವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಚುನಾವಣಾ ಕಾನೂನು ಕ್ಷೇತ್ರದಲ್ಲಿನ ಸವಾಲುಗಳನ್ನು ಎತ್ತಿ ತೋರಿಸಿರುವ ಅವರು, ಚುನಾವಣಾ ಕಾನೂನುಗಳು ಮತದಾರರ, ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಹಕ್ಕಿನ ಬಗ್ಗೆ ಮಾತ್ರವಲ್ಲದೆ, ಅವರ ಜವಾಬ್ದಾರಿಗಳನ್ನೂ ನಿಭಾಯಿಸುತ್ತವೆ ಎಂದು ಮಾಹಿತಿ ನೀಡಿದರು. ಸದರಿ ಸ್ಪರ್ಧೆಯಲ್ಲಿ ಯುವ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವಂತೆ ಅವರು ಪ್ರೋತ್ಸಾಹಿಸಿದರು.
ಚುನಾವಣಾ ಆಯುಕ್ತ ಶ್ರೀ ಅನುಪ್ ಚಂದ್ರ ಪಾಂಡೆ ಅವರು ತಮ್ಮ ಸಂದೇಶದಲ್ಲಿ ಪ್ರಬಂಧ ಸ್ಪರ್ಧೆಯ ಎರಡು ವಿಷಯಗಳ ಬಗ್ಗೆ ಪ್ರಾಮುಖ್ಯತೆ ನೀಡಿ, ಇವುಗಳಲ್ಲಿ ಭಾಗವಹಿಸುವವರು ಸಾಮಾನ್ಯವಾಗಿ ಪ್ರಜಾಪ್ರಭುತ್ವ ಪ್ರಕ್ರಿಯೆಯ ವಿವಿಧ ಸಾಂವಿಧಾನಿಕ ಮತ್ತು ಕಾನೂನು ಅಂಶಗಳನ್ನು ಮತ್ತು ವಿಶೇಷವಾಗಿ ಚುನಾವಣಾ ನಿಬಂಧನೆಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದರು. ಸ್ಪರ್ಧೆಯ ಯುವ ಸ್ಪರ್ಧಿಗಳು ವಿಷಯಗಳ ಬಗ್ಗೆ ಅದ್ಭುತ ಬರಹಗಳನ್ನು ಸಿದ್ಧಪಡಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ರಾಷ್ಟ್ರೀಯ ಪ್ರಬಂಧ ಸ್ಪರ್ಧೆಯ ಸಂಪೂರ್ಣ ವಿವರಗಳು ವೆಬ್ ಸೈಟ್ ಯು.ಆರ್.ಎಲ್.ನಲ್ಲಿ ಲಭ್ಯವಿದೆ: https://www.eciessay.org/ ಇದು 2 ಅಕ್ಟೋಬರ್, 2021 ರಿಂದ ಕಾರ್ಯನಿರ್ವಹಿಸಲಿದೆ.
****
(Release ID: 1760175)
Visitor Counter : 581