ಗೃಹ ವ್ಯವಹಾರಗಳ ಸಚಿವಾಲಯ

ದೆಹಲಿಯಲ್ಲಿ ಜರುಗಿದ ರಾಷ್ಟ್ರೀಯ ಪ್ರಕೃತಿ ವಿಕೋಪ (ವಿಪತ್ತು) ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ)ದ 17ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಆಪದಾ ಮಿತ್ರ (ಆಪದ್ಬಾಂಧವ) ಯೋಜನೆಯ ತರಬೇತಿ ಕೈಪಿಡಿ, ಆಪದಾ ಮಿತ್ರ ಮತ್ತು ಸಾಮಾನ್ಯ ಎಚ್ಚರಿಕೆ ನೀಡುವ ಶಿಷ್ಟಾಚಾರ ಯೋಜನೆಗಳ ದಾಖಲೆಗಳನ್ನು ಬಿಡುಗಡೆ ಮಾಡಿದ ಶ್ರೀ ಅಮಿತ್ ಶಾ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಘನ ನಾಯಕತ್ವದಲ್ಲಿ, ಎಂತಹ ಗಂಭೀರ ವಿಪತ್ತು ಎದುರಾದರೂ, ಒಂದು ಜೀವವನ್ನೂ ಕಳೆದುಕೊಳ್ಳದಂತಹ ಬಲಿಷ್ಠ ವಿಕೋಪ ನಿರ್ವಹಣಾ ವ್ಯವಸ್ಥೆಯನ್ನು ಸೃಜಿಸುವತ್ತಾ ಸಾಗುತ್ತಿದ್ದೇವೆ. ನಾವು ಇದನ್ನು ಸಾಧಿಸಲು ಸದೃಢರಾಗಿದ್ದೇವೆ: ಅಮಿತ್ ಶಾ

ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ, ದೇಶದಲ್ಲಿ ಪ್ರಕೃತಿ ವಿಕೋಪಗಳು ಏಕೆ ಸಂಭವಿಸುತ್ತಿವೆ ಎಂಬುದನ್ನು ಅರಿಯಲು ಗಮನ ನೀಡಿದ ಏಕೈಕ ನಾಯಕ

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಪ್ರತೀಕೂಲಗಳನ್ನು ಸಮರ್ಥವಾಗಿ ನಿಭಾಯಿಸಲು ಶ್ರೀ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊದಲಿಗೆ ಗುಜರಾತ್ ನಲ್ಲಿ ಹವಾಮಾನ ಬದಲಾವಣೆಯ ಪ್ರತ್ಯೇಕ ಇಲಾಖೆ ಸ್ಥಾಪಿಸಿದ್ದರು: ಅಮಿತ್ ಶಾ

2016 ರಲ್ಲಿ ಶ್ರೀ ನರೇಂದ್ರ ಮೋದಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ ಆರಂಭಿಸಿ, ಮೊದಲ ರಾಷ್ಟ್ರೀಯ ಯೋಜನೆಗಾಗಿ ನೀಲನಕ್ಷೆ ರೂಪಿಸಿದ್ದಾರೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಕೃತಿ ವಿಕೋಪಗಳ ಗಂಡಾಂತರ ನಿಯಂತ್ರಣದ 10 ಅಂಶಗಳ ಕಾರ್ಯಕ್ರಮವನ್ನು ವಿಶ್ವದ ಮುಂದೆ ತೆರೆದಿಟ್ಟರು; ಈ 10 ಅಂಶಗಳ ಕಾರ್ಯಕ್ರಮವನ್ನು ಕಾರ್ಯಗತಗೊಳಿಸುವುದು ದೇಶದ ಗುರುತರ ಜವಾಬ್ದಾರಿ: ಅಮಿತ್ ಶಾ

Posted On: 28 SEP 2021 7:05PM by PIB Bengaluru

ವಿಪತ್ತು ನಿರ್ವಹಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಎನ್ ಜಿಒಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶ್ರೀ ನರೇಂದ್ರ ಮೋದಿ ನಾಯಕತ್ವದ ಭಾರತ ಸರ್ಕಾರವು ಸುಭಾಶ್ ಚಂದ್ರ ಭೋಸ್ ಆಪದಾ ಪ್ರಬಂಧನ್ ಪುರಸ್ಕಾರ ಸ್ಥಾಪಿಸಿದೆ

ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ಅನುಷ್ಠಾನ ಸಂಸ್ಥೆಗಳಾಗಿರುವ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ದೇಶದಲ್ಲಿ ವಿಕೋಪ ನಿರ್ವಹಣೆಯ ಪರಿವರ್ತನೆಗೆ ಕಾರ್ಯ ನಿರ್ವಹಿಸಿವೆ: ಅಮಿತ್ ಶಾ

ದೇಶದಲ್ಲಿ ಪ್ರಕೃತಿ ವಿಕೋಪ ಕಾಣಿಸಿಕೊಂಡಾಗ ತಕ್ಷಣವೇ ಸ್ಪಂದಿಸುವ ಕೆಲಸವನ್ನು ಜನರು, ಸಮಾಜ ಮತ್ತು ಗ್ರಾಮಗಳ ತರಬೇತಾದ ಅಪದಾ ಮಿತ್ರ ಸಿಬ್ಬಂದಿ ಮಾತ್ರ ಮಾಡಬಲ್ಲರು. ಇದು ಸಹಜವಾಗಿ ಉತ್ತಮ ಪರಿಕಲ್ಪನೆಯಾಗಿದೆ

ದೇಶದ 25 ರಾಜ್ಯಗಳ ಪ್ರವಾಹ ಬಾಧಿತ 30 ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದಲ್ಲಿ ಅಪದಾ ಮಿತ್ರ ಯೋಜನೆ ಜಾರಿಗೆ ತರಲಾಗಿದೆ. ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 5,500 ಸಂಖ್ಯೆಯ ಆಪದಾ ಮಿತ್ರರು ಮತ್ತು ಆಪದಾ ಸಖಿಗಳಿಗೆ ತರಬೇತಿ ನೀಡಲಾಗಿದೆ

ಪ್ರಕೃತಿ ವಿಕೋಪದಿಂದ ಬಾಧಿತವಾಗಿರುವ ದೇಶದ 350 ಜಿಲ್ಲೆಗಳಲ್ಲಿ ನಾವು ಅಪದಾ ಮಿತ್ರ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದ್ದೇವೆ

ಸ್ವಯಂಸೇವಕರು ಮತ್ತು ಅವರ ಕುಟುಂಬಗಳಿಗೆ ಧೈರ್ಯ ತುಂಬುವ ಸಲುವಾಗಿ, ಭಾರತ ಸರ್ಕಾರವು ಅವರಿಗೆ ವಿಮಾ ರಕ್ಷಣೆ ಒದಗಿಸುವ  ಮಹತ್ವದ ನಿರ್ಧಾರ ತೆಗೆದುಕೊಂಡಿದೆ

ಒಡಿಶಾದಲ್ಲಿ 1999 ಭಾರಿ ಚಂಡಮಾರುತ ಮತ್ತು ಗುಜರಾತ್ ಭುಜ್ ನಲ್ಲಿ 2001ರಲ್ಲಿ ಸಂಭವಿಸಿದ ಭೂಕಂಪನ ದೇಶವನ್ನೇ ನಡುಗಿಸಿತು. ಇವೆರಡು ಗಂಡಾಂತರಗಳಿಂದ ಹೊಳೆದ ಹೊಸ ಪರಿಕಲ್ಪನೆಯ ಪರಿಣಾಮವಾಗಿ, ಸ್ವತಂತ್ರ ವಿಕೋಪ ನಿರ್ವಹಣಾ ವ್ಯವಸ್ಥೆಯನ್ನು ಹೊಂದುವ, ಹೊಸ ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆ ಹೊರಮೂಡಿತು

ಆಗ ಪ್ರಧಾನ ಮಂತ್ರಿಯಾಗಿದ್ದ ಅಟಲ್ ಬಿಹಾರಿ  ವಾಜಪೇಯಿ ಅವರು ಕಾರ್ಯಪಡೆಯೊಂದನ್ನು ರಚಿಸಿದ್ದರು; ಪ್ರಾಸಂಗಿಕವಾಗಿ, ಆಗ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು

ಪ್ರಕೃತಿ ವಿಕೋಪ ಕಾಣಿಸಿಕೊಂಡಾಗ ಸರ್ಕಾರದ ಮೊದಲಿನ ಗಮನ ಪರಿಹಾರದತ್ತ ಕೇಂದ್ರೀಕೃತವಾಗಿತ್ತು, ಇದೀಗ ಅದರ ಗಮನ ಪೂರ್ವ ವಿಪತ್ತುಗಳ ಮುನ್ಸೂಚನೆ, ಪೂರ್ವಸಿದ್ಧತೆ, ಪೂರ್ವಭಾವಿ ತಡೆಗಟ್ಟುವಿಕೆ ಮತ್ತು ಜೀವಹಾನಿ ಕಡಿಮೆ ಮಾಡುವ ಕಡೆಗೆ ನೆಟ್ಟಿದೆ

ಯಾವುದೇ ದೃಷ್ಟಿಯಿಂದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಂಸ್ಥೆಗಳ ಕಾರ್ಯ ನಿರ್ವಹಣೆ ಪರಾಮರ್ಶಿಸಿದರೆ, ಅವು ಜನರಲ್ಲಿ ಆತ್ಮವಿಶ್ವಾಸ ತುಂಬುವ ಅತಿಮುಖ್ಯ ಮತ್ತು ಮಹತ್ವದ ಕೊಡುಗೆ ನೀಡಿವೆ

ದೇಶದ ಯಾವುದೇ ಭಾಗದಲ್ಲಿ ಇಂದು ಪ್ರಕೃತಿ ವಿಕೋಪ ಕಾಣಿಸಿಕೊಂಡರೆ, ತಕ್ಷಣವೇ ಅಲ್ಲಿಗೆ ಎನ್‌ಡಿಆರ್‌ಎಫ್ ತಂಡಗಳು ಧಾವಿಸುತ್ತವೆ, ನಾವು ಬದುಕುಳಿಯುತ್ತೇವೆ ಎಂಬ ಭಾವವನ್ನು ಸಂತ್ರಸ್ತರಲ್ಲಿ ಮೂಡಿಸುತ್ತವೆ

ತ್ಯಾಗ, ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ತರಬೇತಿ ಇಲ್ಲದಿದ್ದರೆ ಜನರಲ್ಲಿ ಇಂತಹ ನಂಬಿಕೆಯನ್ನು ಮೂಡಿಸುವುದು ಅಸಾಧ್ಯ

ಇದಕ್ಕೂ ಮುನ್ನ, ವಿಕೋಪ ಸಂಭವಿಸಿದ ನಂತರ ಕೇಂದ್ರದ ಅಂತರ್ ಸಚಿವಾಲಯ ತಂಡಗಳು ರಾಜ್ಯಗಳಲ್ಲಿ ಉಂಟಾಗಿರುವ ವಿಕೋಪ ಸ್ಥಳಗಳಿಗೆ ಭೇಟಿ ನೀಡುತ್ತಿದ್ದವು ಮತ್ತು ಹಾನಿ ಅಂದಾಜು ಮಾಡುತ್ತಿದ್ದವು. ಆನಂತರ ರಾಜ್ಯಗಳಿಗೆ ಅನುದಾನ ಕಳಿಸುತ್ತಿದ್ದವು. ಇದರಿಂದ ಅಪಾರ ಸಮಯ ವ್ಯರ್ಥವಾಗುತ್ತಿತ್ತು

ಆದರೀಗ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಗೃಹ ಸಚಿವಾಲಯವು, ಅಂತಹ ವರದಿಗಳು ಅಗತ್ಯವಿಲ್ಲ ಎಂದು ನಿರ್ಧರಿಸಿ, ಮುಂಗಡವಾಗಿ ಕೇಂದ್ರದ ಅಂತರ್ ಸಚಿವಾಲಯ ತಂಡವನ್ನು ಕಳಿಸುತ್ತಿದ್ದೇವೆ. ತಂಡವು ತಕ್ಷಣವೇ ಬಾಧಿತ ರಾಜ್ಯಕ್ಕೆ ಪ್ರಾಥಮಿಕ ಅಂದಾಜಿನ ಪ್ರಕಾರ, ತುರ್ತು ಪರಿಹಾರ ಒದಗಿಸುತ್ತದೆ. ವಿಕೋಪ ಸಂಭವಿಸಿದಾಗಲೇ ತಂಡವು ಸಹಾಯಕ್ಕೆ ಬರುತ್ತದೆ

ನರೇಂದ್ರ ಮೋದಿ ಸರ್ಕಾರವು ವಿಕೋಪ ನಿರ್ವಹಣೆಗಾಗಿ ಎನ್‌ಡಿಆರ್‌ಎಫ್ ಗೆ ಸುಮಾರು 53,000 ಕೋಟಿ ರೂಪಾಯಿ ಹಾಗೂ ಎಸ್‌ಡಿಆರ್‌ಎಫ್ ಗೆ ಸುಮಾರು 60,000 ಕೋಟಿ ರೂ. ಆರ್ಥಿಕ ನೆರವು ಒದಗಿಸಿದೆ

ದೇಶದಲ್ಲಿ ಕೋವಿಡ್-19 2ನೇ ಅಲೆ ಕಾಣಿಸಿಕೊಂಡಾಗ ಚಂಡಮಾರುತ ಅಪ್ಪಳಿಸುವ ಕಾಲಘಟ್ಟ ಎದುರಾಯಿತು, ಸಮಯದಲ್ಲಿ ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರವು 2ನೇ ಅಲೆ ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಆಮ್ಲಜನಕ ಹೊತ್ತ ರೈಲುಗಳ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಎನ್ ಡಿಎಂಎ ನಿಗಾ ವಹಿಸಿತು. ಚಂಡಮಾರುತ, ಪ್ರವಾಹ ಸಂತ್ರಸ್ತ ಭಾಗಗಳಲ್ಲಿ ಕೋವಿಡ್-19 ಸೋಂಕಿತರಿಗೆ ಜೀವಹಾನಿ ಆಗದಂತೆ ಆಮ್ಲಜನಕ ಮತ್ತು ವಿದ್ಯುತ್ ಪೂರೈಕೆ ಸರಾಗವಾಗಿ ನಡೆಯಿತು

ಈಶಾನ್ಯ ರಾಜ್ಯಗಳಲ್ಲಿ ನಾರ್ಥ್ ಈಸ್ಟ್ ಸ್ಪೇಸ್ ಅಪ್ಲಿಕೇಷನ್ ಮೂಲಕ ಬಾಹ್ಯಾಕಾಶ ವಿಜ್ಞಾನ ಬಳಸಿಕೊಳ್ಳಲು ಸೊಸೈಟಿ ರಚನೆ ಮಾಡುವ ಮೂಲಕ ಮಹತ್ವದ ಆರಂಭಕ್ಕೆ ನಾಂದಿ ಹಾಡಲಾಯಿತು

ಈಶಾನ್ಯ ರಾಜ್ಯಗಳಲ್ಲಿ ಉಪಗ್ರಹಗಳ ನೆರವಿನಿಂದ ನೀರಿನ ಸ್ವಾಭಾವಿಕ ಹರಿವಿನ ಮಾರ್ಗಗಳನ್ನು ನಿಖರವಾಗಿ ಪತ್ತೆ ಮಾಡಲಾಯಿತು. ಅಲ್ಲದೆ, ರಸ್ತೆ ಮತ್ತು ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದ್ದು, ರಸ್ತೆಗಳ ಕೆಳಗೆ ನೀರು ಹರಿದು ಹೋಗುವ ಸಮಗ್ರ ವ್ಯವಸ್ಥೆ ರೂಪಿಸಲು ಮುಂಗಡವಾಗಿ ಯೋಜನೆ ರೂಪಿಸಬಹುದಾಗಿದೆ

 

ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ದೆಹಲಿಯಲ್ಲಿಂದು ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) 17ನೇ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. “ಹಿಮಾಲಯ ಭಾಗದಲ್ಲಿ ಪ್ರಕೃತಿ ವಿಕೋಪಗಳಿಂದ ಎದುರಾಗುವ  ಪರಿಣಾಮಗಳನ್ನು ನಿಲ್ಲಿಸುವುದುಎಂಬುದೇ ವರ್ಷದ ಸಂಸ್ಥಾಪನಾ ದಿನದ ಘೋಷವಾಕ್ಯವಾಗಿದೆ.

ವರ್ಚುಯಲ್ ಕಾರ್ಯಕ್ರಮದಲ್ಲಿ ಶ್ರೀ ಅಮಿತ್ ಶಾ ಅವರು ಅಪದಾ ಮಿತ್ರ (ಆಪದ್ಬಾಂಧವ) ಯೋಜನೆಯ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ಅಪದಾ ಮಿತ್ರ ಮತ್ತು ಸಾಮಾನ್ಯ ಎಚ್ಚರಿಕೆ ನೀಡುವ ಶಿಷ್ಟಾಚಾರ ಯೋಜನೆಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು. ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ನಿತ್ಯಾನಂದ್ ರಾಯ್, ಶ್ರೀ ಅಜಯ್ ಕುಮಾರ್ ಮಿಶ್ರಾ ಮತ್ತು ಶ್ರೀ ನಿಶಿತ್ ಪ್ರಮಾಣಿಕ್, ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಎನ್ ಡಿಎಂಎ ಅಧಿಕಾರಿಗಳು ಮತ್ತು ಸದಸ್ಯರು, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ(ಎನ್‌ಡಿಆರ್‌ಎಫ್) ಮಹಾನಿರ್ದೇಶಕರು ಮತ್ತು ಕೇಂದ್ರ ಗೃಹ ಸಚಿವಾಲಯದ ಉನ್ನತಾಧಿಕಾರಿಗಳು ಹಾಗೂ ವಿಪತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿ ಉಪಸ್ಥಿತರಿದ್ದರು.

ವರ್ಚುಯಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಶ್ರೀ ಅಮಿತ್ ಶಾ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಅದರ ಅಡಿ ಅನುಷ್ಠಾನ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್) ಕಳೆದ 17 ವರ್ಷಗಳಿಂದ ದೇಶದ ವಿಪತ್ತು ನಿರ್ವಹಣೆಯ ಇತಿಹಾಸವನ್ನು ಬದಲಿಸಿವೆ. ದೇಶದ ಸೂಕ್ಷ್ಮತೆಯನ್ನು ವಿಪತ್ತು ನಿರ್ವಹಣೆಯೊಂದಿಗೆ ಜೋಡಿಸುವ ಅತಿದೊಡ್ಡ ಕೆಲಸವನ್ನು ಇವು ಮಾಡಿದ್ದು, ಇದು ಒಂದು ದೊಡ್ಡ ಸಾಧನೆಯಾಗಿದೆ. 130 ಕೋಟಿ ಜನರಿರುವ ಬೃಹತ್ ರಾಷ್ಟ್ರದಲ್ಲಿ ಪ್ರತಿ ರಾಜ್ಯವೂ ವಿಭಿನ್ನ ಹವಾಮಾನ, ಹಲವಾರು ನದಿ ಕೊಳ್ಳಗಳು, ಪರ್ವತ ಪ್ರದೇಶಗಳು, ಸುದೀರ್ಘ ಕರಾವಳಿ ಭಾಗಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು, ಸಾರ್ವಜನಿಕರು ಮತ್ತು ಸಮಾಜದ ಸೂಕ್ಷ್ಮತೆಯನ್ನು ಕಾಣಲು ಅಸಮರ್ಥರಾದರೆ, ವಿಪತ್ತುಗಳನ್ನು ನಿಯಂತ್ರಿಸಲು ವೈಜ್ಞಾನಿಕ ವ್ಯವಸ್ಥೆಗಳನ್ನು ಪರಿಚಯಿಸಲು ಅಸಮರ್ಥರಾದರೆ, ಇಂತಹ ವಿಪತ್ತುಗಳನ್ನು ತಗ್ಗಿಸಲು ನಾವು ಮನಸ್ಥಿತಿಯನ್ನು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನಾವು ಕೊನೆಗೆ ಅಪಾರ ಜೀವಹಾನಿ ಮತ್ತು ಮೂಲಸೌಕರ್ಯಗಳ ನಷ್ಟ ಅನುಭವಿಸಲು ಸಿದ್ಧರಾಗಲೇಬೇಕಾಗುತ್ತದೆ. ಆದರೆ ವಾಸ್ತವವಾಗಿ ನಾವು ಕಳೆದ 17 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾಗಿದ್ದೇವೆ ಎಂದರು.

ಎನ್ ಡಿಎಂಎ ಅನವಾರಣಗೊಳಿಸಿರುವ ಆಪದಾ ಮಿತ್ರ (ಆಪದ್ಬಾಂಧವ) ಮತ್ತು ಸಾಮಾನ್ಯ ಎಚ್ಚರಿಕೆ ನೀಡುವ ಶಿಷ್ಟಾಚಾರ ಯೋಜನೆಯ 2 ಉಪಕ್ರಮಗಳನ್ನು ಪ್ರಸ್ತಾಪಿಸಿದ ಸಚಿವರು, ಅಪ್ದಾ ಮಿತ್ರ ಯೋಜನೆ ಅತಿ ಮುಖ್ಯವಾಗಿವೆ. ಪ್ರಕೃತಿ ವಿಕೋಪ ಸೇರಿದಂತೆ ನಾನಾ ವಿಪತ್ತುಗಳನ್ನು ನಿಯಂತ್ರಿಸಲು ವಿಶ್ವದೆಲ್ಲೆಡೆ ನಡೆದಿರುವ ಸಂಶೋಧನೆ ಮತ್ತು ಉತ್ತಮ ಅಭ್ಯಾಸಗಳ ಅಳವಡಿಕೆಗಳ ಬಗ್ಗೆ ಎನ್ ಡಿಎಂಎ ಅಧ್ಯಯನ ನಡೆಸಬೇಕು. ದೇಶದ ಸನ್ನಿವೇಶ ಮತ್ತು ಸವಾಲುಗಳಿಗೆ ತಕ್ಕಂತೆ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡು, ಜನರ ಬಳಿಗೆ ಕೊಂಡೊಯ್ಯಬೇಕು ಎಂದರು. ಸರ್ಕಾರದ ಹಲವಾರು ಪ್ರಯತ್ನಗಳು ಮತ್ತು ಉತ್ತಮ ಸೌಲಭ್ಯಗಳ ಹೊರತಾಗಿಯೂ, ವಿಪತ್ತು ಕಾಣಿಸಿಕೊಂಡಾದ ತತ್ ಕ್ಷಣದ ಅಥವಾ ತುರ್ತು ಕ್ರಮಗಳನ್ನು ಕೈಗೊಳ್ಳಲು ಎನ್ ಡಿಎಂಎ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಗೆ ಕಷ್ಟವಾಗುತ್ತಿದೆ. ವಿಪತ್ತು ಕಾಣಿಸಿಕೊಂಡಾಗ ಎಷ್ಟೇ ವ್ಯವಸ್ಥೆಗಳನ್ನು ಮಾಡಿದ್ದರೂ, ಇಷ್ಟು ದೊಡ್ಡ ದೇಶದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ. ವಿಪತ್ತು ಸಂಭವಿಸಿದಾಗ ಕೆಲವೇ ಕ್ಷಣಗಳಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಂಪೂರ್ಣ ತರಬೇತಾದ ವಿಪತ್ತು ನಿರ್ವಹಣಾ ಸಿಬ್ಬಂದಿ ಅಥವಾ ಸ್ನೇಹಿತರು, ಸಮಾಜ, ಗ್ರಾಮಗಳು ನಿರ್ವಹಣಾ ಕೆಲಸವನ್ನು ಮಾಡಲು ಸಾಧ್ಯ. ಇದು ನಿಜಕ್ಕೂ ಉತ್ತಮ ಪರಿಕಲ್ಪನೆಯಾಗಿದೆ ಎಂದು ಸಚಿವರು ತಿಳಿಸಿದರು.

ಆಪದಾ ಮಿತ್ರ ಯೋಜನೆ ಮೂಲಕ ಸಾರ್ವಜನಿಕರನ್ನು ಸಜ್ಜುಗೊಳಿಸುವ, ವಿಪತ್ತು ವಿರುದ್ಧ ಹೋರಾಡುವ, ಇತರಿಗಾಗಿ ಕೆಲಸ ಮಾಡುವ, ತಮ್ಮ ಜೀವವನ್ನು ಪಣಕ್ಕಿಟ್ಟು ಸಾರ್ವಜನಿಕರನ್ನು ಉಳಿಸುವ  ಹುರುಪು ಮತ್ತು ಉತ್ಸಾಹ ಹೊಂದಿರುವ ಜನರ ಕೌಶಲ್ಯ ಮೇಲ್ದರ್ಜೆಗೆ ಏರಿಸುವ ಕೆಲಸ ಮಾಡಬೇಕು. ಅವರಿಗೆ ಎಲ್ಲಾ ಶಿಷ್ಟಾಚಾರಗಳ ಬಗ್ಗೆ ಅರಿವು ಮೂಡಿಸಲು ಮತ್ತು ವಿಪತ್ತಿನ ಸಂದರ್ಭದಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸಹ ವ್ಯವಸ್ಥೆ ಮಾಡಬಹುದು.

ದೇಶದ 25 ರಾಜ್ಯಗಳ ಪ್ರವಾಹ ಪೀಡಿತ 30 ಜಿಲ್ಲೆಗಳಲ್ಲಿ ಆಪದಾ ಮಿತ್ರ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಲು 5,500 ಆಪದಾ ಮಿತ್ರರು ಮತ್ತು ಆಪದಾ ಸಖಿಗಳಿಗೆ ತರಬೇತಿ ನೀಡಲಾಗಿದೆ. ಈಜಲು ಬರುವವರನ್ನು ಕಾರ್ಯಗಳಿಗೆ ಆಯ್ಕೆ ಮಾಡಲಾಗಿದೆ. ಎಲ್ಲೇ ಪ್ರವಾಹ ಕಾಣಿಸಿಕೊಂಡರೂ, ಅವರು ಮಹತ್ವದ ಕಾರ್ಯ ಮಾಡುತ್ತಾರೆ. ಹಾಗಾಗಿ, ಆಪದಾ ಮಿತ್ರರನ್ನು(ಆಪದ್ಬಾಂಧವರು) ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರವಾಗಿ ಅಭಿನಂದಿಸುತ್ತೇನೆ

130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೇವಲ 5,500 ಆಪದಾ ಮಿತ್ರರು ಮತ್ತಪ ಆಪದಾ ಸಖಿಗಳಿಗೆ ತರಬೇತಿ ನೀಡಲಾಗಿದೆ. ಬೃಹತ್ ರಾಷ್ಟ್ರಕ್ಕೆ ಹೋಲಿಸಿದರೆ ಅವರ ಸಂಖ್ಯೆ ಅತ್ಯಂತ ಕಡಿಮೆಯೇ ಇದೆ. ಪ್ರಯೋಗವನ್ನು ಸಹ ಅತಿ ಸಣ್ಣ ಪ್ರಮಾಣದಲ್ಲಿ ಮಾಡಲಾಗಿದೆ. ಸಣ್ಣ ಪ್ರಮಾಣದಿಂದ ಇಡೀ ರಾಷ್ಟ್ರದ ವಿಪತ್ತು ನಿರ್ವಹಣೆ ಅಸಾಧ್ಯ. ಆದ್ದರಿಂದ ನಾವು ದೇಶದ 350 ವಿಪತ್ತು ಬಾಧಿತ ಜಿಲ್ಲೆಗಳಲ್ಲಿ ಆಪದಾ ಮಿತ್ರ ಯೋಜನೆಯನ್ನು ವಿಸ್ತರಿಸಲು ಮುಂದಾಗಿದ್ದೇವೆ. ಕಳೆದ 17 ವರ್ಷಗಳಲ್ಲಿ ನಾವು ಹಲವಾರು ಪ್ರಯತ್ನಗಳು ಮತ್ತು ಹೋರಾಟಗಳನ್ನು ಮಾಡಿದ್ದೇವೆ. ವಿಪತ್ತು ಬಾಧಿತ 350 ಜಿಲ್ಲೆಗಳಲ್ಲಿ ಆಪದಾ ಮಿತ್ರ ಯೋಜನೆ ಮೂಲಕ ಆಪದಾ ಮಿತ್ರರನ್ನು ವಿಪತ್ತು ಬಾಧಿತ ಸ್ಥಳಗಳಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದೇವೆ. ವಿಪತ್ತು ಕಾಣಿಸಿಕೊಂಡ ತಕ್ಷಣವೇ ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುವಂತೆ ಅವರನ್ನು ಸಜ್ಜುಗೊಳಿಸಲಿದ್ದೇವೆ. ವಿಪತ್ತು ನಿರ್ವಹಣೆ ಮಾಡುವ ಸ್ವಯಂಸೇವಕರು ಮತ್ತು ಅವರ ಕುಟುಂಬಗಳಿಗೆ ಧೈರ್ಯ ತುಂಬುವ ಸಲುವಾಗಿ, ಭಾರತ ಸರ್ಕಾರವು ಅವರಿಗೆ ವಿಮಾ ರಕ್ಷಣೆ ಒದಗಿಸುವ ಅತಿ ಮುಖ್ಯವಾದ ನಿರ್ಧಾರ ಕೈಗೊಂಡಿದೆ. ವಿಮಾ ಯೋಜನೆಗೆ ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎನ್ ಡಿಎಂಎ ಜತೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ ಎಂದು ಅಮಿತ್ ಶಾ ತಿಳಿಸಿದರು.

ಸಾಮಾನ್ಯ ಎಚ್ಚರಿಕೆ ನೀಡುವ ಶಿಷ್ಟಾಚಾರ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ)ವು ಹಲವಾರು ಉತ್ತಮ ಉಪಕ್ರಮಗಳನ್ನು ಕೈಗೊಂಡಿದೆ. ಉಪಕ್ರಮಗಳ ಅಡಿ, ನಾವು ಸಿಡಿಲು ಬಡಿಯುವ ಸ್ಥಳದ ಬಗ್ಗೆ 6 ನಿಮಿಷ ಮುಂಚಿತವಾಗಿ ಕಟ್ಟೆಚ್ಚರದ ಮುನ್ಸೂಚನೆ ನೀಡಬಹುದು. ಬೃಹತ್ ಪ್ರದೇಶಗಳಾದರೆ ಕೆಲವು ತಾಸುಗಳ ಮುಂಚೆಯೇ ಎಚ್ಚರಿಕೆ ನೀಡಬಹುದು. ಶೀತಗಾಳಿ ಮತ್ತು ವಿಪರೀತ ತಾಪಮಾನಕ್ಕೆ ನಾವು ಕ್ರಿಯಾಯೋಜನೆ ರೂಪಿಸಿದ್ದೇವೆ. ಅದರೆ, ಇವಾವು ಕಾರ್ಯಗತವಾಗಿಲ್ಲ. ಹವಾಮಾನ ಮುನ್ಸೂಚನೆ ಕೇಂದ್ರಗಳು ನೀಡುವ  ಮುನ್ಸೂಚನೆಗಳನ್ನು ತಪ್ಪದೇ ಪಾಲಿಸಿದರೆ, ಕಾರ್ಯಗತಗೊಳಿಸಿದರೆ  ಹಲವಾರು ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದು ಅಮಿತ್ ಶಾ ತಿಳಿಸಿದರು.

ಭಾರತದಲ್ಲಿ ವಿಪತ್ತು ನಿರ್ವಹಣೆಯ ಪಯಣ ತುಸು ತಡವಾಗಿ ಆರಂಭವಾಯಿತು. 1995ರಲ್ಲಿ, ರಾಷ್ಟ್ರೀಯ ವಿಕೋಪ ನಿರ್ವಹಣಾ ಕೇಂದ್ರ ಸ್ಥಾಪನೆಯಾಯಿತು. ಕೃಷಿ ಇಲಾಖೆ ಅಡಿ ಇದು ಕಾರ್ಯಾರಂಭ ಮಾಡಿತು. ಇದು ಉತ್ತಮ ಆರಂಭವೇ. ಅದಾದ 2 ವರ್ಷಗಳ ನಂತರ ದೇಶದಲ್ಲಿ 2 ಬಹುದೊಡ್ಡ ವಿಪತ್ತುಗಳು ಘಟಿಸಿದವು. 1999ರಲ್ಲಿ ಒಡಿಶಾದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿ, 10 ಸಾವಿರ ಜನರನ್ನು ಬಲಿ ತೆಗೆದುಕೊಂಡಿತು. ಅದಾದ ತರುವಾಯ 2001ರಲ್ಲಿ ಗುಜರಾತ್ ಭುಜ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನಕ್ಕೆ 14 ಸಾವಿರ ಜನರು ಜೀವ ಕಳೆದುಕೊಂಡರು. ಇವೆರಡು ದುರ್ಘಟನೆಗಳು ದೇಶದ ವ್ಯವಸ್ಥೆಯನ್ನೇ ಅಲುಗಾಡಿಸಿದವು. ಆಗ ಸರ್ಕಾರ ಎಚ್ಚೆತ್ತುಕೊಂಡಿತು. ನಾವೇಕೆ ನಮ್ಮದೇ ಆದ ಸ್ವಂತ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಹೊಂದಬಾರದು ಎಂಬ ಹೊಸ ಪರಿಕಲ್ಪನೆ ಹುಟ್ಟಿಕೊಂಡಿತು. ಕೆಲವು ಸಂಸ್ಥೆಗಳ ಜತೆ ಕೈಜೋಡಿಸಿ, ತಕ್ಷಣವೇ ಸ್ಪಂದಿಸುವ ವಿಪತ್ತು ನಿರ್ವಹಣಾ ವ್ಯವಸ್ಥೆ ರೂಪಿಸಲು ಕಾರ್ಯೋನ್ಮುಖವಾಯಿತು. ಆಗ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನ ಮಂತ್ರಿ ಆಗಿದ್ದರು. ಅವರು ಕಾರ್ಯಪಡೆಯೊಂದನ್ನು ರಚಿಸಿದರು. ಅದೇ ಕಾಲಘಟ್ಟದಲ್ಲಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅವರು ಗುಜರಾತ್‌ನಲ್ಲಿ ಇದರ ಬಗ್ಗೆ ಸಾಕಷ್ಟು ಆಲೋಚನೆ ಮಾಡಿದ್ದರು. ಅದಕ್ಕೆ ಒಂದು ಪರಿಪೂರ್ಣ ಆಕಾರ ಅಥವಾ ರೂಪುರೇಷೆ ನೀಡುವ ಚರ್ಚೆ ಆರಂಭವಾಯಿತು. 2005ರಲ್ಲಿ ಪ್ರಧಾನಮಂತ್ರಿ ನೇತೃತ್ವದಲ್ಲಿ ಎನ್ ಡಿಎಂಎ ಸ್ಥಾಪಿಸಲಾಯಿತು.

ವಾಸ್ತವವಾಗಿ, ಭೋಪಾಲ್ ಅನಿಲ ದುರಂತದ ನಂತರವೇ ಎನ್ ಡಿಎಂಎ ಸ್ಥಾಪಿಸಬೇಕಿತ್ತು. ವಾಸ್ತವವಾಗಿ, ಭೋಪಾಲ್ ಅನಿಲ ದುರಂತ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತುಒಂದೇ ನಗರದಲ್ಲಿ 8 ಸಾವಿರ ಜನರು ದುರಂತಕ್ಕೆ ಬಲಿಯಾಗಿದ್ದು ಬಹುದೊಡ್ಡ ಅನಾಹುತವಾಗಿತ್ತು. ಆದರೆ ಅಟಲ್ ಜೀ ಅವರ ನಾಯಕತ್ವದಲ್ಲಿ ವಿಪತ್ತು ನಿರ್ವಹಣೆ ವ್ಯವಸ್ಥೆಯ ಪಯಣ ಆರಂಭವಾಯಿತು. ನಾವೀಗ 17 ವರ್ಷಗಳ ಹಿಂದಿನ ಪಯಣವನ್ನು ತಿರುಗಿ ನೋಡಿದಾಗ, ನಾವು ಸುದೀರ್ಘ ಹಾದಿ ಸವೆಸಿದ್ದೇವೆ. ಆದರೆ ಸಾಗುವ ಹಾದಿ ಬಹುದೂರವಿದೆ. ನಾವಿನ್ನೂ ಸಂತೃಪ್ತ ಹಾದಿ ತುಳಿದಿಲ್ಲ. ದೇಶದಲ್ಲಿ ಯಾವುದೇ ಸ್ವರೂಪದ ವಿಪತ್ತು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುವ ಸಮಗ್ರ ವಿಪತ್ತು ನಿರ್ವಹಣಾ ವ್ಯವಸ್ಥೆ ರೂಪಿಸಿಕೊಳ್ಳುವ ಗುರಿಯತ್ತ ನಾವು ಮುನ್ನಡೆಯಬೇಕಿದೆ. ವಿಪತ್ತಿನಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಸಾಯಬಾರದು, ಅಂತಹ ವ್ಯವಸ್ಥೆಯನ್ನು ನಾವು ರೂಪಿಸಿಕೊಳ್ಳಬೇಕಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಹ ನಮಗೆ ಇದೇ ಗುರಿಯನ್ನು ತೋರಿಸಿದ್ದಾರೆ. ನಾವು ರೂಪಿಸಿಕೊಂಡಿರುವ ಕಾರ್ಯವಿಧಾನ ಬದಲಾವಣೆಯು ಉತ್ತಮ ಫಲಿತಾಂಶ ನೀಡಿದೆ. 1999ರಲ್ಲಿ ಚಂಡಮಾರುತವೊಂದೇ 10 ಸಾವಿರ ಮುಗ್ಧ ಜನರನ್ನು ಬಲಿ ತೆಗೆದುಕೊಂಡಿತು. ಆದರೆ ವರ್ಷ ಮೂರು ಚಂಡಮಾರುತಗಳು ಬಂದೆರಗಿದವು. ಆದರೆ ಸಾವಿನ ಪ್ರಮಾಣ 50 ಅನ್ನು ದಾಟಲಿಲ್ಲ. ನಾವೀಗ ಮುಂಗಡವಾಗಿ ಎಚ್ಚರಿಕೆಯ ಮುನ್ಸೂಚನೆಗಳನ್ನು ನೀಡುವಷ್ಟರ ಮಟ್ಟಿಗೆ ಬೆಳೆದಿದ್ದೇವೆ. ಅದರಿಂದ ಜನರನ್ನು ಉಳಿಸುವ ಕೆಲಸ ಮಾಡುತ್ತಿದ್ದೇವೆ. ತಾತ್ಕಾಲಿಕ ಮನೆಗಳಲ್ಲಿ ನೆಲೆಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ರಾಜ್ಯಗಳು ಸಹ ಉತ್ತಮ ವ್ಯವಸ್ಥೆಗಳನ್ನು ರೂಪಿಸಿಕೊಂಡಿವೆ. ಕೇಂದ್ರ ಮತ್ತು ರಾಜ್ಯಗಳು ಜತೆಗೂಡಿ ಕೆಲಸ ಮಾಡುತ್ತಾ ಅಪಾರ ಸಾವುಗಳ ಪ್ರಮಾಣವನ್ನು ತಗ್ಗಿಸುತ್ತಿವೆ ಎಂದು ಸಚಿವರು ತಿಳಿಸಿದರು.

ವಿಪತ್ತು ನಿರ್ವಹಣೆಯ ಸಂಪೂರ್ಣ ಮುನ್ನೋಟವೇ ಬದಲಾಗಿದೆ. ಮುನ್ನ ಸರ್ಕಾರಗಳ ವಿಪತ್ತು ನಿರ್ವಹಣೆಯ ದೃಷ್ಟಿಕೋನ ಪರಿಹಾರ ನೀಡಿಕೆಗೆ ಮಾತ್ರ ಕೇಂದ್ರೀಕೃತವಾಗಿತ್ತು. ವಿಪತ್ತು ಸಂಭವಿಸಿದ ನಂತರ ಸಂತ್ರಸ್ತರಿಗೆ ಪರಿಹಾರ ಒದಗಿಸುವುದೇ ಪ್ರಧಾನ ಕೆಲಸವಾಗಿತ್ತು. ಅವರಿಗೆ ಆಹಾರ, ಔಷಧ, ಸೂರು ಕಲ್ಪಿಸುವುದು, ಪರಿಹಾರ ಇತ್ಯರ್ಥಕ್ಕೆ ಗಮನ ಕೇಂದ್ರೀಕೃತವಾಗಿತ್ತು. ಆದರೀಗ, ವಿಪತ್ತು ಸಂಭವಿಸುವ ಮುನ್ನವೇ ಮುಂಗಡವಾಗಿ ಎಚ್ಚರಿಕೆಯ ಮುನ್ಸೂಚನೆ ನೀಡಲು, ಪೂರ್ವಭಾವಿಯಾಗಿ ವಿಪತ್ತು ತಡೆಗಟ್ಟಲು, ಪೂರ್ವಸಿದ್ಧತೆ ಮಾಡಿಕೊಳ್ಳಲು ಮತ್ತು ಕನಿಷ್ಠ ಜೀವಹಾನಿ ತಡೆಯಲು ಗಮನ ಕೇಂದ್ರೀಕರಿಸಲಾಗಿದೆ ಎಂದರು.

ಯಾವುದೇ ದೃಷ್ಟಿಕೋನ ಇಟ್ಟುಕೊಂಡು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಸಂಸ್ಥೆಗಳ ಕಾರ್ಯವೈಖರಿಯ ಪರಾಮರ್ಶೆ ನಡೆಸಿದರೂ, ವು ದೇಶದ ಜನತೆಯ ಮನಸ್ಸಿನಲ್ಲಿ ಆತ್ಮವಿಶ್ವಾಸ ತುಂಬುವ ಅತಿಮುಖ್ಯವಾದ ಕೆಲಸವನ್ನು ಮಾಡಿವೆ. ದೇಶದ ಯಾವುದೇ ಭಾಗದಲ್ಲಿಂದು ವಿಪತ್ತು ಸಂಭವಿಸಿತು ಎಂದರೆ, ತಕ್ಷಣವೇ ಎನ್‌ಡಿಆರ್‌ಎಫ್ ಸಿಬ್ಬಂದಿ ಅಲ್ಲಿಗೆ ಧಾವಿಸುತ್ತಾರೆ. ನಾವು ಗಂಡಾಂತರದಿಂದ ಬಚಾವಾದೆವು ಎಂಬ ಭಾವ ಸಂತ್ರಸ್ತರಲ್ಲಿ ಕ್ಷಣವೇ ಮೂಡುತ್ತದೆ. ತ್ಯಾಗ, ಕಠಿಣ ಪರಿಶ್ರಮ, ಶಿಸ್ತು ಮತ್ತು ನಿರಂತರ ತರಬೇತಿ ಇಲ್ಲದೆ ರೀತಿಯ ವಿಶ್ವಾಸಾರ್ಹತೆ ಗಳಿಸಲು ಸಾಧ್ಯವೇ ಇಲ್ಲ. ಇತರರನ್ನು ರಕ್ಷಿಸಲು ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡುವ ಸಂಸ್ಕೃತಿಯನ್ನು ಸೃಷ್ಟಿಸುವ ಉತ್ತಮ ಕೆಲಸವನ್ನು ಎನ್‌ಡಿಆರ್‌ಎಫ್ ಮಾಡಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆ(ನ್‌ಡಿಎಂಪಿ)ಯನ್ನು ಅನಾವರಣಗೊಳಿಸಿದರು. ಮೊದಲ ರಾಷ್ಟ್ರೀಯ ಯೋಜನೆಗೆ ನೀಲನಕ್ಷೆಯನ್ನು ಸಹ ಸಿದ್ಧಪಡಿಸಿದರು. ಸೆಂಡಾಯ್ ವಿಪತ್ತು ಗಂಡಾಂತರ ಮಾರ್ಗಸೂಚಿ ಅಡಿ ಇದನ್ನು ತರುವಾಯ ವಿನ್ಯಾಸಗೊಳಿಸಲಾಯಿತು. ಎಲ್ಲ ರೀತಿಯ ಗಂಡಾಂತರ, ಜೀವಹಾನಿ ಮತ್ತು ಆಸ್ತಿ ಹಾನಿಗಳನ್ನು ಕನಿಷ್ಠಗೊಳಿಸುವ ಪ್ರಸ್ತಾವನೆಯನ್ನು ಇದಕ್ಕೆ ಸೇರಿಸಲಾಯಿತು. ಕೇಂದ್ರ ಸರ್ಕಾರ ಇದೀಗ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳನ್ನು ಸಂಯೋಜಿಸುವ ಯೋಜನೆ ರೂಪಿಸಿದೆ. ದೇಶದ ಕುಗ್ರಾಮವೇ ಆಗಿರಬಹುದು, ಮೆಟ್ರೊ ನಗರವೇ ಆಗಿರಬಹುದು, ಬೆಟ್ಟಗುಡ್ಡ ಪ್ರದೇಶವೇ ಆಗಿರಬಹುದು, ಕರಾವಳಿ ಭಾಗವೇ ಆಗಿರಬಹುದು, ಎಲ್ಲೇ ವಿಪತ್ತು ಸಂಭವಿಸಿದರೂ, ಕ್ಷಿಪ್ರ ಸ್ಪಂದನೆಗೆ ಯೋಜನೆ ಸಿದ್ಧವಾಗಿದೆ.

ದೇಶಾದ್ಯಂತ ಹಲವಾರು ಬೃಹತ್ ಕೈಗಾರಿಕೆಗಳಿವೆ, ಸಾರ್ವಜನಿಕ ವಲಯದ ಘಟಕಗಳಿವೆ ಮತ್ತು ಬೃಹತ್ ಕಂಪನಿಗಳಿಗೆ ಸೇರಿದ ಸಂಪನ್ಮೂಲಗಳು ನೈಸರ್ಗಿಕ ವಿಪತ್ತುಗಳ ವಿರುದ್ಧ ಹೋರಾಡುತ್ತಿವೆ. ಆದರೆ ಅವಾವು ಮುನ್ನ ಸರ್ಕಾರದ ಜತೆ ಸಂಪರ್ಕ ಹೊಂದಿರಲಿಲ್ಲ. ಆದರೀಗ ಪ್ರತಿ ಜಿಲ್ಲಾಧಿಕಾರಿ ಬಳಿ ಲಭ್ಯವಿರುವ ಸಂಪನ್ಮೂಲಗಳ ಪಟ್ಟಿಯೇ ಇದೆ. ಅದು ಸರ್ಕಾರದ್ದೇ ಆಗಿರಬಹುದು, ಖಾಸಗಿ ಕಂಪನಿಯದ್ದೇ ಆಗಿರಬಹುದು ಅಥವಾ ಸಾರ್ವಜನಿಕ ವಲಯದ ಘಟಕದ ಸಂಪನ್ಮೂಲವೇ ಆಗಿರಬಹುದು ಅಥವಾ ಖಾಸಗಿ ಕಂಪನಿಯ ಸಂಪನ್ಮೂಲವೇ ಆಗಿರಬಹುದು. ತನ್ನ ಜಿಲ್ಲೆಯಲ್ಲಿ ಎದುರಾಗುವ ವಿಪತ್ತುಗಳ ವಿರುದ್ಧ ಹೋರಾಡಲು ಜಿಲ್ಲಾಧಿಕಾರಿ ಬಳಿ ಇದೀಗ ಸಮಗ್ರ ಮಾಹಿತಿ ಕಣಜವೇ ಲಭ್ಯವಿದೆ. ಹವಾಮಾನ ಮುನ್ಸೂಚನೆ ಬಂದೊಡನೆಯೇ, ತಕ್ಷಣ ಸಂಪನ್ಮೂಲಗಳ ಬಳಕೆ ಮಾಡುವ, ಕ್ರೋಡೀಕರಿಸುವ ಮತ್ತು ಜೀವ ಹಾನಿಗಳನ್ನು ಕನಿಷ್ಠಗೊಳಿಸುವ ವ್ಯವಸ್ಥೆ ರೂಪಿತವಾಗಿದೆ ಎಂದು ಸಚಿವರು ತಿಳಿಸಿದರು.

17 ವಿಧಧ ವಿಪತ್ತುಗಳಿಗೆ ಸ್ಪಂದಿಸುವ ಕ್ರಿಯಾಯೋಜನೆಯನ್ನು ಎನ್ ಡಿಎಂಎ ಇದೀಗ ಜನರ ಮುಂದಿಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಪತ್ತು ಗಂಡಾಂತರ ನಿಯಂತ್ರಣದ 10 ಅಂಶಗಳ ಕಾರ್ಯಕ್ರಮಗಳನ್ನು ವಿಶ್ವದ ಮುಂದಿಟ್ಟಿದ್ದಾರೆ. 10 ಅಂಶದ ಕಾರ್ಯಕ್ರಮಗಳನ್ನು ಸಂಪೂರ್ಣ ಕಾರ್ಯಗತಗೊಳಿಸುವುದು ಭಾರತದ ಸಂಪೂರ್ಣ ಜವಾಬ್ದಾರಿಯಾಗಿದೆ. ವಿಪತ್ತು ನಿರ್ವಹಣೆಯಲ್ಲಿ ನಾವು ಇಚ್ಛಿತ ಗುರಿ ಸಾಧಿಸಿದ್ದೇವೆ. ಆದರೆ ಶೂನ್ಯ ಜೀವ ಹಾನಿಯ ಗುರಿಯೆಡೆಗೆ ಸಾಗಬೇಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಸರ್ಕಾರವು ವಿಪತ್ತು ನಿರ್ವಹಣೆಯಲ್ಲಿ ತೊಡಗಿಸಿಕೊಳ್ಳುವ ಎನ್ ಜಿಒಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿ ಉದ್ಯೋಗಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಅವರ ಸೇವೆಗೆ ಸಾರ್ವಜನಿಕ ಮನ್ನಣೆ ಒದಗಿಸುವ ದೃಷ್ಟಿಯಿಂದ ಸುಭಾಶ್ ಚಂದ್ರ ಭೋಸ್ ಆಪದಾ ಪ್ರಬಂಧನ್ ಪುರಸ್ಕಾರ ಸ್ಥಾಪಿಸಿದೆ. ಕಳೆದ 2 ವರ್ಷಗಳಲ್ಲಿ ನಾವು ಹಲವು ಸಾಧನೆಗಳನ್ನು ಮಾಡಿದ್ದೇವೆ. ದೇಶದ ಹಲವೆಡೆ ಬಿರುಗಾಳಿ, ಪ್ರವಾಹ , ಭೂಕುಸಿತ ಕಾಣಿಸಿಕೊಂಡಿತು. ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಭೂಕುಸಿತ ಉಂಟಾಯಿತು. ಎಲ್ಲಾ ಬೆದರಿಕೆಗಳ ವಿರುದ್ಧ ನಾವು ಯಶಸ್ವೀ ಹೋರಾಟ ನಡೆಸಿದೆವು. ಎಲ್ಲಾ ಹೋರಾಟಗಳಲ್ಲಿ ಎನ್‌ಡಿಆರ್‌ಎಫ್ ಶ್ರಮ ಶ್ಲಾಘನೀಯ ಮತ್ತು ಅಭಿನಂದನೆಗೆ ಅರ್ಹ ಎಂದು ಅಮಿತ್ ಶಾ ತಿಳಿಸಿದರು.

ಭಾರತ ಸರ್ಕಾರ ನೈಸರ್ಗಿಕ ವಿಪತ್ತುಗಳ ವಿರುದ್ಧ ಹೋರಾಡುವ ವೇಳೆ ಪರಿಹಾರ ಕಾರ್ಯಾಚರಣೆಗಳನ್ನು ನಿರ್ಲಕ್ಷಿಸಿಲ್ಲ. ಹಿಂದೆ ವಿಪತ್ತು ಸಂವಿಸಿದ ನಂತರ ಕೇಂದ್ರದ ಅಂತರ್ ಸಚಿವಾಲಯ ತಂಡ ಬಾಧಿತ ಸ್ಥಳಕ್ಕೆ ಭೇಟಿ ನೀಡಿ, ಹಾನಿ ಅಂದಾಜು ಮಾಡಿ, ವರದಿ ನೀಡುತ್ತಿತ್ತು. ಆನಂತರ ರಾಜ್ಯಗಳಿಗೆ ಪರಿಹಾರ ಹಣ ಬಿಡುಗಡೆ ಆಗುತ್ತಿತ್ತು. ಇದರಿಂದ ಸಾಕಷ್ಟು ಸಮಯ ಹಾಳಾಗುತ್ತಿತ್ತು. ಆದರೆ ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವಾಲಯವು ಅಂತಹ ವರದಿಗಳು ಅಗತ್ಯವಿಲ್ಲ ಎಂದು ನಿರ್ಧರಿಸಿ, ಮುಂಗಡವಾಗಿ ಬಾಧಿತ ರಾಜ್ಯಗಳಿಗೆ ಕೇಂದ್ರದ ಅಂತರ್ ಸಚಿವಾಲಯ ತಂಡಗಳನ್ನು ಕಳಿಸುತ್ತಿದೆ. ಅವು ಬಾಧಿತ ಪ್ರದೇಶಗಳ ಪ್ರಾಥಮಿಕ ಅಂದಾಜು ನಡೆಸಿ, ತಕ್ಷಣವೇ ರಾಜ್ಯಗಳಿಗೆ ಪರಿಹಾರ ಒದಗಿಸುತ್ತವೆ. ಇದರಿಂದ ಮತ್ತಷ್ಟು ಹಾನಿಯನ್ನು ತಡೆಯಲು ಸಾಧ್ಯವಾಗುತ್ತಿದೆ.

ವಿಪತ್ತು ನಿರ್ವಹಣೆಗಾಗಿ ನರೇಂದ್ರ ಮೋದಿ ಸರ್ಕಾರ ಎನ್‌ಡಿಆರ್‌ಎಫ್ ಗೆ ಸುಮಾರು  53,000 ಕೋಟಿ ರೂ. ಹಾಗೂ ಎಸ್‌ಡಿಆರ್‌ಎಫ್ ಗೆ 60,000 ಕೋಟಿ ರೂ. ನೆರವು ನೀಡಿದೆ ಎಂದು ಸಚಿವರು ತಿಳಿಸಿದರು.

ವಿಪರೀತ ತಾಪಮಾನ ಅಥವಾ ಉರಿಬಿಸಿಲು ತಡೆಗೆ ಕೇಂದ್ರ ಸರ್ಕಾರ ಕ್ರಿಯಾಯೋಜನೆ ಸಿದ್ಧಪಡಿಸಿದೆ. ಕೇವಲ ಕ್ರಿಯಾಯೋಜನೆಯಿಂದ ಏನೂ ಸಂಭವಿಸದು. ಅದು ನೆಲ ಮಟ್ಟಕ್ಕೆ ತಂದಾಗ ಮಾತ್ರ ಯಾವುದೇ ಸಫಲತೆ ಸಾಧ್ಯ. ಆಪದಾ ಮಿತ್ರ ಮತ್ತು ರಾಜ್ಯಗಳ ಸ್ಥಳೀಯ ಸಂಸ್ಥೆಗಳನ್ನು ತಳಮಟ್ಟದಲ್ಲಿ ಬಳಸಿಕೊಳ್ಳುವಂತಾಗಬೇಕು. ಕ್ರಿಯಾಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಆಗ ಮಾತ್ರ ಯೋಜನೆ ಯಶಸ್ಸು ಕಾಣಲು ಸಾಧ್ಯ ಎಂದು ಸಚಿವರು ತಿಳಿಸಿದರು.

ದೇಶದಲ್ಲಿ ಕೋವಿಡ್-19 2ನೇ ಅಲೆ ಕಾಣಿಸಿಕೊಂಡಾಗ, ಮನುಕುಲದ ಮೇಲೆ ಎರಗಿದ ಸಾಂಕ್ರಾಮಿಕ ಸೋಂಕಿನ ವಿರುದ್ಧದ ಹೋರಾಟದಲ್ಲಿ ಎನ್ ಡಿಎಂಎ, ಉತ್ತಮ ಕಾರ್ಯ ನಿರ್ವಹಿಸಿತು. ಕೋವಿಡ್-19 ವಿರುದ್ಧದ ಹೋರಾಟ ಕುರಿತು ತಾರತಮ್ಯ ಮಾಡದ ಯಾವುದೇ ಸಂಸ್ಥೆ ಮೌಲ್ಯಮಾಪನ ನಡೆಸಿದರೆ, ಇಡೀ ವಿಶ್ವದಲ್ಲೇ ಭಾರತ ಉತ್ತಮ ರೀತಿಯಲ್ಲಿ ಹೋರಾಟ ಮಾಡಿತು ಎಂದು ಅದು ಹೇಳುತ್ತದೆ. 130 ಕೋಟಿ ಜನರಿರುವ, ಸೀಮಿತ ಸಂಪನ್ಮೂಲ ಹೊಂದಿರುವ ನಮ್ಮ ದೇಶದಲ್ಲಿ ಕೋವಿಡ್ ಮರಣ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕನಿಷ್ಠದ್ದಾಗಿದೆ. ಪ್ರತಿ 10 ಲಕ್ಷ ಜನರಿಗೆ ಇಲ್ಲಿರುವ ಕೋವಿಡ್  ಪ್ರಕರಣಗಳ ಸಂಖ್ಯೆಯೂ ತೀರಾ ಕಡಿಮೆ. 2ನೇ ಅಲೆ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ಧೃತಿಗೆಟ್ಟವು. ಸಂದರ್ಭದಲ್ಲಿ ಆಮ್ಲಜನಕದ ಬಿಕ್ಕಟ್ಟು ಎದುರಾಯಿತು. ಅದೇ ವೇಳೆ ಚಂಡಮಾರುತಗಳು ಬಂದೆರಗಿದವು. ಆಮ್ಲಜನಕ ಹೊತ್ತ ರೈಲುಗಳು ದೇಶದೆಲ್ಲೆಡೆ ಸಂಚರಿಸಿದವು. ಈಶಾನ್ಯ ರಾಜ್ಯಗಳ ಆಮ್ಲಜನಕ ಉತ್ಪಾದನಾ ಘಟಕಗಳು ಚಂಡಮಾರುತದ ಹೊಡೆತಕ್ಕೆ ಸಿಲುಕಿದವು. ಆಮ್ಲಜನಕ ಬೆಂಬಲದಲ್ಲಿ ಉಸಿರಾಡುತ್ತಿದ್ದ ರೋಗಿಗಳನ್ನು ಉಳಿಸಲು ನಾವೆಲ್ಲಾ ಪ್ರಯತ್ನಿಸಿದೆವು. ಇವೆಲ್ಲಾ ವಿಚಾರಗಳು ಸಾರ್ವಜನಿಕರಿಗೆ ತಲುಪಲಿಲ್ಲ. ಆದರೆ ನಮಗೆ ಮುಂಗಡವಾಗಿ ಮಾಹಿತಿ ಬರುತ್ತಿತ್ತು. ಗೃಹ ಸಚಿವಾಲಯ ಮತ್ತು ಎನ್ ಡಿಎಂಎ ಜತೆಗೂಡಿ ಎಲ್ಲಾ ಯೋಜನೆ ರೂಪಿಸಿದೆವು. ಆಮ್ಲಜನಕ ಹೊತ್ತ ರೈಲುಗಳು ಎಲ್ಲೂ ಅಪಘಾತಗಳಿಗೆ ಸಿಲುಕಲಿಲ್ಲ. ವಿದ್ಯುತ್ ಕೊರತೆಯಿಂದ ಯಾವುದೇ ಒಬ್ಬ ರೋಗಿ ಸಾಯಲಿಲ್ಲ. ಸಕಾಲದಲ್ಲಿ ಆಮ್ಲಜನಕ ಘಟಕಗಳನ್ನು ಮುಚ್ಚಿಸಿ, ಭಾರಿ ಅಪಘಾತ, ಅನಾಹುತಗಳನ್ನು ತಪ್ಪಿಸಿದೆವು. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಗಳ ವ್ಯವಸ್ಥೆ ಸಮರ್ಪಕವಾಗಿರದಿದ್ದರೆ, ಎಲ್ಲಾ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನೂರಾರು ಸಾವುಗಳನ್ನು ಕಾಣುವ ಸಾಧ್ಯತೆ ಇತ್ತು. ಚಂಡಮಾರುತ ಅಪ್ಪಳಿಸಿದರೆ ಏನು ಗತಿ ಎಂಬ ಆತಂಕ ಕಾಡುತ್ತಿದ್ದಾಗ ಎಲ್ಲಾ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಿದ್ದೆವು. ಹೆಮ್ಮೆ ಮತ್ತು ಸಂತೃಪ್ತಿಯ ವಿಚಾರವೆಂದರೆ, ಚಂಡಮಾರುತಗಳು ಅಪ್ಪಳಿಸಿದಾಗ ಕೋವಿಡ್-19 ಚಿಕಿತ್ಸೆ ಪಡೆಯುತ್ತಿದ್ದ ಯಾವುದೇ ರೋಗಿಗೆ ವಿದ್ಯುತ್ ಅಥವಾ ಆಮ್ಲಜನಕ ಕೊರತೆಯಿಂದ ಪ್ರಾಣ ಹಾನಿ ಉಂಟಾಗಲಿಲ್ಲ. ತಂತ್ರಜ್ಞಾನಗಳ ಬಳಕೆ, ಮುಂಗಡ ಮಾಹಿತಿ ಲಭ್ಯತೆ ವ್ಯವಸ್ಥೆ ಮತ್ತು ಯೋಜನೆಯಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಅಮಿತ್ ಶಾ ತಿಳಿಸಿದರು.

ನಮ್ಮ ದೇಶ ಹೊಸ ಆರಂಭಕ್ಕೆ ನಾಂದಿ ಹಾಡಿದೆ. ಮಾಧ್ಯಮಿತ ಮತ್ತು ಪ್ರೌಢಶಾಲೆ ಹಂತದಲ್ಲಿ ವಿಪತ್ತು ನಿರ್ವಹಣಾ ತರಬೇತಿ ಶಿಕ್ಷಣವನ್ನು ಪರಿಚಯಿಸಿದೆ. ಇದು ಹೊಸ ಪೀಳಿಗೆಗೆ ಸಹಕಾರಿಯಾಗಲಿದೆ, ಆದರೆ ಇದು ಸಾಕಾಗದು. ಮಕ್ಕಳಿಗೆ ವಿಪತ್ತು ತರಬೇತಿ ಮತ್ತು ನಿರ್ವಹಣೆಯ ಸಂಸ್ಕೃತಿ ರೂಢಿಸಿದರೆ, ಮುಂದೆ ಅವರಿಗೆ ತರಬೇತಿ ಬೇಕಾಗುವುದಿಲ್ಲ. ಎಲ್ಲೇ ವಿಪತ್ತು ಸಂಭವಿಸಿದರೂ ಅದರ ನಿರ್ವಹಣೆಗೆ ವರು ಮುಂದಾಗುತ್ತಾರೆ, ಸಂತ್ರಸ್ತರ  ನೆರವಿಗೆ ಧಾವಿಸುತ್ತಾರೆ ಎಂದು ಸಚಿವರು ತಿಳಿಸಿದರು.

ಈಶಾನ್ಯ ರಾಜ್ಯಗಳಲ್ಲಿ ನಾವು ಬಹುದೊಡ್ಡ ಹೊಸ ಪ್ರಯೋಗ ಆರಂಭಿಸಿದ್ದೇವೆ. ನಾರ್ಥ್ ಈಸ್ಟ್ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ಮೂಲಕ ಬಾಹ್ಯಾಕಾಶ ವಿಜ್ಞಾನ ಬಳಸಿಕೊಳ್ಳಲು ಸೊಸೈಟಿ ಸ್ಥಾಪಿಸಿದ್ದೇವೆ. ಉಪಗ್ರಹ ತಂತ್ರಜ್ಞಾನ ಬಳಸಿಕೊಂಡು ನಾವುಹೇಗೆ ಅಭಿವೃದ್ಧಿ ಹೊಂದಬಹುದು. ಕಳೆದ ವರ್ಷ ನಾವು ವಿಪತ್ತು ನಿರ್ವಹಣೆಗೆ ಉಪಗ್ರಹ ತಂತ್ರಜ್ಞಾನ ಬಳಕೆಯನ್ನು ಆರಂಭಿಸಿದ್ದೇವೆ. ಈಶಾನ್ಯ ರಾಜ್ಯಗಳಲ್ಲಿ ಪ್ರತಿ ವರ್ಷ ಬ್ರಹ್ಮಪುತ್ರ ನದಿ ತುಂಬಿ ಪ್ರವಾಹ ಕಾಣಿಸಿಕೊಳ್ಳುವುದು ಖಂಡಿತ. ಪ್ರವಾಹ ಉಕ್ಕುವ ಮುನ್ನ ನದಿ ನೀರನ್ನು ಸಾವಿರಾರು ಕೆರೆಗಳಿಗೆ ಸರಾಗವಾಗಿ ಹರಿಸಲು ಸಾಧ್ಯವಿದೆ. ಹೀಗೆ ಹರಿಸುವುದರಿಂದ ಪ್ರವಾಹ ಪರಿಸ್ಥಿತಿಯನ್ನು 40% ತಡೆಯಬಹುದು. ನಾರ್ಥ್ ಈಸ್ಟ್ ಸ್ಪೇಸ್ ಅಪ್ಲಿಕೇಷನ್ ಸೆಂಟರ್ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಅದು ಯಶಸ್ವಿಯೂ ಆಗಿದೆ. ಇದುವರೆಗೆ 19 ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ದೊಡ್ಡ ಕೆರೆಗಳನ್ನು ನಿರ್ಮಿಸಲಾಗುವುದು. ನೀರು ಹರಿಸಲು ಇಂಧನ ಬಳಕೆ ಮಾಡದೆ, ಪ್ರದೇಶ ನಕ್ಷೆ ತಂತ್ರಜ್ಞಾನದ ಮೂಲಕ ನೀರು ಹರಿದು ಹೋಗಲಿದೆ. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ನಂತರ ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿಯ ಹೊಸ ಗಾಳಿ ಬೀಸಿದೆ. ಹಲವಾರು ರಸ್ತೆ, ರೈಲು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಉಪಗ್ರಹಗಳ ಮೂಲಕ ರಸ್ತೆ ಕೆಳಗೆ ಸ್ವಾಭಾವಿಕವಾಗಿ ನೀರು ಹರಿಯುವ ಮಾರ್ಗಗಳನ್ನು ನಿಖರವಾಗಿ ಪತ್ತೆ ಮಾಡಲಾಗುತ್ತಿದೆ. ಅಲ್ಲದೆ, ರಸ್ತೆ ಮತ್ತು ರೈಲು ಮಾರ್ಗಗಳಲ್ಲಿ ಪ್ರವಾಹ ಉಂಟಾಗುವ ಜಾಗಗಳನ್ನು ಉಪಗ್ರಹ ಬಳಸಿ, ಪತ್ತೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.   

ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, 27 ರಾಜ್ಯಗಳು ತೀವ್ರ ನೈಸರ್ಗಿಕ ವಿಪತ್ತುಗಳಿಗೆ ತುತ್ತಾಗುತ್ತಿವೆ. ದೇಶದ 58% ಭೂಪ್ರದೇಶ ಸಾಧಾರಣದಿಂದ ಅತಿ ತೀವ್ರತೆಯ ಭೂಕಂಪನಕ್ಕೆ ತುತ್ತಾಗುತ್ತಿದೆ.  12% ಭೂಪ್ರದೇಶ ಸವಕಲಿನಿಂದ ಪ್ರವಾಹ ಕಾಣಿಸಿಕೊಳ್ಳುತ್ತಿದೆ. ಸುಮಾರು 7,516 ಕಿಮೀ ಕರಾವಳಿ ಪ್ರದೇಶದಲ್ಲಿ ಚಂಡಮಾರುತ ವೈಪರೀತ್ಯ ಸಂಭವಿಸುತ್ತಿದೆ. 68% ಭೂಪ್ರದೇಶದಲ್ಲಿ ಬರಕ್ಕೆ ತುತ್ತಾಗುತ್ತಿದೆ. 15% ಪರ್ವತ ಪ್ರದೇಶ ಭೂಕುಸಿತಕ್ಕೆ ಒಳಗಾಗುತ್ತಿದೆ. ವಾಸ್ತವ ಪರಿಸ್ಥಿತಿ ಹೀಗಿರುವಾಗ ದೇಶದ ವಿಪತ್ತು ನಿರ್ವಹಣೆಗೆ ಬೃಹತ್ ಜವಾಬ್ದಾರಿಗಳಿವೆ.

ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳಾದ ನಂತರ ವಿಪತ್ತು ನಿರ್ವಹಣೆಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರು ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಆದ್ಯತೆಯ ಗಮನ ನೀಡಿದ ಏಕೈಕ ನಾಯಕರಾಗಿದ್ದಾರೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ನಿಯಂತ್ರಣಕ್ಕಾಗಿ ಗಮನ ನೀಡಿದ ಅವರು, ಗುಜರಾತ್ ಸರ್ಕಾರದಲ್ಲಿ ಹವಾಮಾನ ಬದಲಾವಣೆಯ ಪ್ರತ್ಯೇಕ ಇಲಾಖೆ ಆರಂಭಿಸಿದರು. ಇಡೀ ದೇಶದಲ್ಲೇ ಮೊದಲಿಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿದ ಕೀರ್ತಿ ನರೇಂದ್ರ ಮೋದಿ ಅವರದ್ದಾಗಿದೆ. ಹವಾಮಾನ ಬದಲಾವಣೆಯ ಪ್ಯಾರಿಸ್ ಒಪ್ಪಂದ ಏರ್ಪಡುವಾಗ ಮೋದಿ ನಾಯಕತ್ವದಲ್ಲಿ ಭಾರತ ನಿರ್ವಹಿಸಿದ ಪಾತ್ರವನ್ನು ಇಡೀ ವಿಶ್ವವೇ ಪ್ರಶಂಸಿಸಿದೆ. ಪ್ಲಾಸ್ಟಿಕ್ ಒಂದು ಬಾರಿಯ ಬಳಕೆಗೆ ದೇಶಾದ್ಯಂತ ಮೂಡಿಸಿದ ಜಾಗೃತಿಯ ಜತೆಗೆ, ವಿದ್ಯುತ್ ಉತ್ಪಾದನೆಯನ್ನು ಸೌರಶಕ್ತಿ ಮತ್ತು ಪವನಶಕ್ತಿಗೆ ಪರಿವರ್ತಿಸುವ ಮೂಲಕ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ವಿರುದ್ಧ ನಡೆಸಿದ ಹೋರಾಟ ಉತ್ತಮ ರೀತಿಯಾಗಿತ್ತು ಎಂದು ಸಚಿವರು ಶ್ಲಾಘಿಸಿದರು.

ಹವಾಮಾನ ಬದಲಾವಣೆಯ ಸಂಭಾವ್ಯ ಪರಿಣಾಮಗಳು ಮತ್ತು ಸಂಘಟಿತ ಪ್ರಯತ್ನಗಳ ಮೂಲಕ ವಿಪತ್ತುಗಳ ತೀವ್ರತೆ ನಿಯಂತ್ರಣ ನಮ್ಮ ಮುಂದಿರುವ 2 ಪ್ರಮುಖ ಸವಾಲುಗಳಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಘನ ನಾಯಕತ್ವದಲ್ಲಿ ದೇಶವು ಸ್ವಾತಂತ್ರ್ಯ ಗಳಿಸಿದ 75ನೇ ವರ್ಷಾಚರಣೆಯ ಸಂಭ್ರಮದಲ್ಲಿದೆ. ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ನಾವು ಮತ್ತಷ್ಟು ಕಾರ್ಯಗಳನ್ನು ಮಾಡುತ್ತೇವೆ ಎಂಬ ಆಶಾವಾದ ತಮಗಿದೆ. 10 ವರ್ಷಗಳ ಸಾಧನೆಯನ್ನು ಒಂದೇ ವರ್ಷದಲ್ಲಿ ಮಾಡಿ ಮುಗಿಸುತ್ತೇವೆ ಎಂಬ ಪೂರ್ಣ ನಂಬಿಕೆ ಮತ್ತು ಆತ್ಮವಿಶ್ವಾಸ ತಮ್ಮದಾಗಿದೆ. ಎನ್ ಡಿಎಂಎ ಮತ್ತು ಎನ್‌ಡಿಆರ್‌ಎಫ್ ಸಂಸ್ಥೆಗಳನ್ನು ಅಭಿನಂದಿಸುತ್ತಾ, ಅವು ತಮ್ಮ ಅತ್ಯುತ್ತಮ ಸೇವೆಗಳಿಂದ ದೇಶದ ಜನತೆಯ ಮನ ಗೆದ್ದಿವೆ. ನಾವು ಸಾಕಷ್ಟು ದೂರ ಸಾಗಿದ್ದೇವೆ. ಆದರೆ ಪಯಣ ಇನ್ನೂ ಪೂರ್ಣವಾಗಿಲ್ಲ. ಗುರಿ ಸಾಧನೆಯೆಡೆಗೆ ನಾವೆಲ್ಲಾ ವೇಗದ ಗತಿಯಲ್ಲಿ ಮುನ್ನಡೆಯಬೇಕಿದೆ. ಎಲ್ಲರಿಗೂ ನಾನು ಶುಭಕಾಮನೆ ಹೇಳಲು ಬಯಸುತ್ತೇನೆ.

ಧನ್ಯವಾದಗಳು....

***



(Release ID: 1759249) Visitor Counter : 686