ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ ಯೋಜನೆಗೆ ಪ್ರಧಾನಮಂತ್ರಿಗಳಿಂದ  ಚಾಲನೆ


ʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ʼ ಯೋಜನೆಯು ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯಲ್ಲಿ ಮಾಹಿತಿಯ ಪರಸ್ಪರ ವಿನಿಮಯಕ್ಕೆ ಅನುವು ಮಾಡಿಕೊಡುವ ತಡೆರಹಿತ ಆನ್‌ಲೈನ್ ವೇದಿಕೆಯನ್ನು ಸೃಷ್ಟಿಸಲಿದೆ

ʻಜೆಎಎಂ ಟ್ರಿನಿಟಿʼಗಿಂತಲೂ (ಜನ್‌ಧನ್‌ ಖಾತೆ-ಆಧಾರ್‌ ಸಂಖ್ಯೆ-ಮೊಬೈಲ್‌ ಸಂಖ್ಯೆ ಆಧರಿತ ನೇರ ನಗದು ವರ್ಗಾವಣೆ ವ್ಯವಸ್ಥೆ) ಮಿಗಿಲಾದ ಅತಿದೊಡ್ಡ ಸಂಪರ್ಕಿತ ಮೂಲಸೌಕರ್ಯವು ಇಡೀ ವಿಶ್ವದಲ್ಲೇ ಎಲ್ಲಿಯೂ ಇಲ್ಲವೆಂದ ಪ್ರಧಾನಿ

"ಡಿಜಿಟಲ್ ಮೂಲಸೌಕರ್ಯವು 'ಪಡಿತರದಿಂದ ಹಿಡಿದು ಆಡಳಿತದವರೆಗೂʼ ಎಲ್ಲವನ್ನೂ ವೇಗವಾಗಿ ಮತ್ತು ಪಾರದರ್ಶಕರೀತಿಯಲ್ಲಿ ಜನಸಾಮಾನ್ಯರ ಬಳಿಗೆ ತಲುಪಿಸುತ್ತಿದೆ”

"ಟೆಲಿಮೆಡಿಸಿನ್‌ನ ವ್ಯವಸ್ಥೆಯೂ ಅಭೂತಪೂರ್ವ ರೀತಿಯಲ್ಲಿ ವಿಸ್ತರಣೆಯಾಗಿದೆ"

"ಆಯುಷ್ಮಾನ್ ಭಾರತ್ ಯೋಜನೆಯು (ʻಪಿಎಂಜೆಎವೈʼ) ಬಡವರ ಜೀವನದಲ್ಲಿ ಪ್ರಮುಖ ಸಮಸ್ಯೆಯನ್ನು ಪರಿಹರಿಸಿದೆ. ಇಲ್ಲಿಯವರೆಗೆ 2 ಕೋಟಿಗೂ ಹೆಚ್ಚು ದೇಶವಾಸಿಗಳು ಈ ಯೋಜನೆಯಡಿ ಉಚಿತ ಚಿಕಿತ್ಸೆಯ ಸೌಲಭ್ಯ ಪಡೆದುಕೊಂಡಿದ್ದಾರೆ, ಅವರಲ್ಲಿ ಅರ್ಧದಷ್ಟು ಮಹಿಳೆಯರಾಗಿದ್ದಾರೆ"

"ಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್, ಈಗ ದೇಶಾದ್ಯಂತದ ಆಸ್ಪತ್ರೆಗಳ ನಡುವೆ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಪರಸ್ಪರ ಸಂಪರ್ಕಿಸುತ್ತದೆ"

"ಸರಕಾರ ಜಾರಿಗೊಳಿಸಿರುವ ಆರೋಗ್ಯ ಸೇವೆ ಪರಿಹಾರಗಳು ದೇಶದ ವರ್ತಮಾನ ಮತ್ತು ಭವಿಷ್ಯದಲ್ಲಿ ದೊಡ್ಡ ಹೂಡ

Posted On: 27 SEP 2021 12:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು `ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್’ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಕಳೆದ ಏಳು ವರ್ಷಗಳಿಂದ ಸಾಗಿ ಬಂದಿರುವ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವ ಅಭಿಯಾನವು ಇಂದು ಹೊಸ ಹಂತವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು. "ಇಂದು ನಾವು ಭಾರತದ ಆರೋಗ್ಯ ಸೌಲಭ್ಯಗಳಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಹೊಂದಿರುವ ಯೋಜನೆಯನ್ನು ಅನ್ನು ಪ್ರಾರಂಭಿಸುತ್ತಿದ್ದೇವೆ", ಎಂದರು.

130 ಕೋಟಿ ಆಧಾರ್ ಸಂಖ್ಯೆಗಳು, 118 ಕೋಟಿ ಮೊಬೈಲ್ ಚಂದಾದಾರರು, ಸುಮಾರು 80 ಕೋಟಿ ಇಂಟರ್ನೆಟ್ ಬಳಕೆದಾರರು, ಸುಮಾರು 43 ಕೋಟಿ ʻಜನ್ ಧನ್ʼ ಬ್ಯಾಂಕ್ ಖಾತೆಗಳೊಂದಿಗೆ ಭಾರತವು ಜಗತ್ತಿನಲ್ಲಿ ಎಲ್ಲಿಯೂ ಇಲ್ಲದ ಅತಿದೊಡ್ಡ ಸಂಪರ್ಕಿತ ಮೂಲಸೌಕರ್ಯವನ್ನು ಹೊಂದಿದೆ ಎಂಬ ಅಂಶವನ್ನು ಪ್ರಧಾನಿ ಒತ್ತಿ ಹೇಳಿದರು. ಈ ಡಿಜಿಟಲ್ ಮೂಲಸೌಕರ್ಯವು ಪಡಿತರದಿಂದ ಆಡಳಿತದವರೆಗೂ ಸಾಮಾನ್ಯ ಭಾರತೀಯನಿಗೆ ಎಲ್ಲವನ್ನೂ ವೇಗವಾಗಿ ಮತ್ತು ಪಾರದರ್ಶಕ ರೀತಿಯಲ್ಲಿ ಒದಗಿಸುತ್ತಿದೆ. "ಇಂದು ಆಡಳಿತ ಸುಧಾರಣೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವ ರೀತಿಯು ಅಭೂತಪೂರ್ವವಾಗಿದೆ", ಎಂದು ಪ್ರಧಾನಿ ಹೇಳಿದರು.

ʻಆರೋಗ್ಯ ಸೇತು ಆ್ಯಪ್ʼ ಕೊರೊನಾ ಸೋಂಕು ಹರಡುವಿಕೆ ತಡೆಯಲು ಸಾಕಷ್ಟು ಸಹಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಉಚಿತ ಲಸಿಕೆ ಅಭಿಯಾನದಅಡಿಯಲ್ಲಿ ಭಾರತವು ಇಂದು ಸುಮಾರು 90 ಕೋಟಿ ಡೋಸ್‌ ಲಸಿಕೆ ನೀಡಿಕೆಯ ದಾಖಲೆ ನಿರ್ಮಿಸಲು ʻಕೋ-ವಿನ್ʼ ವಹಿಸಿದ ಪಾತ್ರವನ್ನು ಅವರು ಶ್ಲಾಘಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯ ವಿಷಯದ ಬಗ್ಗೆ ಮಾತು ಮುಂದುವರಿಸಿದ ಪ್ರಧಾನಿ, ಕೊರೊನಾ ಅವಧಿಯಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆಯೂ ಅಭೂತಪೂರ್ವವಾಗಿ ವಿಸ್ತರಣೆ ಕಂಡಿದೆ. ʻಇ-ಸಂಜೀವನಿʼ ಮೂಲಕ ಇಲ್ಲಿಯವರೆಗೆ ಸುಮಾರು 125 ಕೋಟಿ, ʻಟೆಲಿ ಮೆಡಿಸಿನ್‌ʼ ಸಂದರ್ಶನಗಳನ್ನು (ದೂರ ಸಮಾಲೋಚನೆ) ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಸೌಲಭ್ಯವು ಪ್ರತಿದಿನ ದೇಶದ ದೂರ ಭಾಗಗಳಲ್ಲಿ ವಾಸಿಸುವ ಸಾವಿರಾರು ದೇಶವಾಸಿಗಳಿಗೆ ಮನೆಯಲ್ಲೇ ಕುಳಿತು ನಗರಗಳ ದೊಡ್ಡ ಆಸ್ಪತ್ರೆಗಳ ವೈದ್ಯರನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.

ʻಆಯುಷ್ಮಾನ್ ಭಾರತ್ ಯೋಜನೆ (ಪಿಎಂಜೆಎವೈ) ಬಡವರ ಜೀವನದಲ್ಲಿ ದೊಡ್ಡ ತಲೆನೋವನ್ನು ಪರಿಹರಿಸಿದೆ ಎಂದು ಪ್ರಧಾನಿ ಹೇಳಿದರು. ಇಲ್ಲಿಯವರೆಗೆ 2 ಕೋಟಿಗೂ ಹೆಚ್ಚು ದೇಶವಾಸಿಗಳು ಈ ಯೋಜನೆಯಡಿ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ, ಅವರಲ್ಲಿ ಅರ್ಧದಷ್ಟು ಮಹಿಳೆಯರು. ಕುಟುಂಬಗಳನ್ನು ಬಡತನದ ವಿಷವರ್ತುಲಕ್ಕೆ ತಳ್ಳುವ ಪ್ರಮುಖ ಕಾರಣಗಳಲ್ಲಿ ಅನಾರೋಗ್ಯವೂ ಒಂದಾಗಿದೆ.  ಕುಟುಂಬಗಳ ಮಹಿಳೆಯರು ಸದಾ ತಮ್ಮ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದರಿಂದ ಹೆಚ್ಚು ಬಳಲುತ್ತಿದ್ದಾರೆ ಎಂದು ಪ್ರಧಾನಿ ಒತ್ತಿ ಹೇಳಿದರು. ಆಯುಷ್ಮಾನ್ ಯೋಜನೆಯ ಕೆಲವು ಫಲಾನುಭವಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಲು ನಾನು ನಿರ್ಧರಿಸಿದೆ ಮತ್ತು ಅವರೊಂದಿಗೆ ಸಂವಾದದ ವೇಳೆ ಯೋಜನೆಯ ಪ್ರಯೋಜನಗಳು ತಮ್ಮ ಅನುಭವಕ್ಕೂ ಬಂದವು ಎಂದು ಶ್ರೀ ಮೋದಿ ಹೇಳಿದರು. "ಈ ಆರೋಗ್ಯ ಸೇವೆ ಪರಿಹಾರಗಳು ದೇಶದ ವರ್ತಮಾನ ಮತ್ತು ಭವಿಷ್ಯದಲ್ಲಿ ದೊಡ್ಡ ಹೂಡಿಕೆಯಾಗಿವೆ" ಎಂದು ಅವರು ಹೇಳಿದರು.

ʻಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್ʼ ಯೋಜನೆಯು ಈಗ ದೇಶಾದ್ಯಂತ ಆಸ್ಪತ್ರೆಗಳ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಪರಸ್ಪರ ಸಂಪರ್ಕಿಸಲಿದೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯು ಆಸ್ಪತ್ರೆಗಳ ಪ್ರಕ್ರಿಯೆಗಳನ್ನು ಸರಳಗೊಳಿಸುವುದಲ್ಲದೆ, ಜೀವನದ ಸುಗಮತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.  ಇದರ ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕರೂ ಈಗ ʻಡಿಜಿಟಲ್ ಆರೋಗ್ಯ ಗುರುತಿನ ಚೀಟಿʼಯನ್ನು ಪಡೆಯುತ್ತಾರೆ ಮತ್ತು ಅವರ ಆರೋಗ್ಯ ದಾಖಲೆಯನ್ನು ಡಿಜಿಟಲ್ ಆಗಿ ಸಂರಕ್ಷಿಸಲಾಗುತ್ತದೆ ಎಂದರು.

ಭಾರತವು ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಮಾದರಿಯ ಆರೋಗ್ಯಸೇವೆ ವ್ಯವಸ್ಥೆಗಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ರೋಗ ತಡೆಗೆ ಹಾಗೂ ಒಂದು ವೇಳೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಸುಲಭ, ಕೈಗೆಟುಕುವ ದರದ ಮತ್ತು ಎಲ್ಲರಿಗೂ ಲಭ್ಯವಾಗುವಂತಹ ಚಿಕಿತ್ಸೆಗೆ ಈ ವ್ಯವಸ್ಥೆ ಒತ್ತು ನೀಡುತ್ತದೆ ಎಂದರು. ಆರೋಗ್ಯ ಶಿಕ್ಷಣದಲ್ಲಿ ಅಭೂತಪೂರ್ವ ಸುಧಾರಣೆಗಳ ಬಗ್ಗೆಯೂ ಚರ್ಚಿಸಿದ ಅವರು, 7-8 ವರ್ಷಗಳ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ವೈದ್ಯರು ಮತ್ತು ಅರೆ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು. ದೇಶದಲ್ಲಿ ʻಏಮ್ಸ್ʼ ಮತ್ತು ಇತರ ಆಧುನಿಕ ಆರೋಗ್ಯ ಸಂಸ್ಥೆಗಳ ಸಮಗ್ರ ಜಾಲವನ್ನು ಸ್ಥಾಪಿಸಲಾಗುತ್ತಿದೆ. ಪ್ರತಿ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದರು. ಹಳ್ಳಿಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವ ಬಗ್ಗೆಯೂ ಮಾತನಾಡಿದ ಅವರು, ಹಳ್ಳಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಲಗಳು ಮತ್ತು ಕ್ಷೇಮ ಕೇಂದ್ರಗಳನ್ನು ಬಲಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇಂತಹ 80 ಸಾವಿರಕ್ಕೂ ಹೆಚ್ಚು ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಎಂದು ಪ್ರಧಾನಿ ತಿಳಿಸಿದರು.

ವಿಶ್ವ ಪ್ರವಾಸೋದ್ಯಮ ದಿನದಂದು ಇಂದಿನ ಕಾರ್ಯಕ್ರಮವನ್ನು ಆಯೋಜಿರುವ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಆರೋಗ್ಯವು ಪ್ರವಾಸೋದ್ಯಮದೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ. ಏಕೆಂದರೆ ನಮ್ಮ ಆರೋಗ್ಯ ಮೂಲಸೌಕರ್ಯವನ್ನು ಸಂಯೋಜಿಸಿದಾಗ, ಬಲಪಡಿಸಿದಾಗ, ಅದು ಪ್ರವಾಸೋದ್ಯಮ ವಲಯದ ಸುಧಾರಣೆಗೂ ಕಾರಣವಾಗುತ್ತದೆ ಎಂದು ಹೇಳಿದರು.

***


(Release ID: 1758541) Visitor Counter : 384