ಕಲ್ಲಿದ್ದಲು ಸಚಿವಾಲಯ

ಉದ್ದೇಶಿತ ಧ್ಯೇಯದ ಅಡಿಯಲ್ಲಿ ಹಸಿರು ಹೊದಿಕೆ ಹೆಚ್ಚಳ ಮಾಡಿದ ಕಲ್ಲಿದ್ದಲು ಯೋಜನೆ 

Posted On: 13 SEP 2021 3:54PM by PIB Bengaluru

ಕಲ್ಲಿದ್ದಲು ಗಣಿಗಾರಿಕೆಯು ಭೂಮಿಯನ್ನು ಹಾಳುಗೆಡವುತ್ತದೆ ಎಂಬ ಸಾಮಾನ್ಯ ಕಲ್ಪನೆ ಇದೆಯಾದರೂ,  ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻಕೋಲ್ ಇಂಡಿಯಾ ಲಿಮಿಟೆಡ್ʼನ(ಸಿಐಎಲ್) ಹೊಸ ಯೋಜನೆಗಳು ಭೂಮಿಯನ್ನು ಅದರ ಮೂಲ ಸ್ವರೂಪಕ್ಕೆ ಪುನಸ್ಥಾಪಿಸುವುದರ ಜೊತೆಗೆ ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆ ನಡೆಯುವ ಪ್ರದೇಶದುದ್ದಕ್ಕೂ ಹಸಿರು ಹೊದಿಕೆಯನ್ನು ಹೆಚ್ಚಿಸಿವೆ. ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆರೆದ ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆ ಬಳಿಕ ಅಗೆದ ಜಾಗವನ್ನು ಮತ್ತೆ ಮಣ್ಣಿನಿಂದ ಮುಚ್ಚಲಾಗುತ್ತಿದೆ ಮತ್ತು ಅದರ ಮೇಲೆ ದಟ್ಟವಾದ ಅರಣ್ಯ ಬೆಳೆಸಲಾಗುತ್ತಿದೆ. 

ಅಂತಹ ಅನೇಕ ಹಸಿರು ಕ್ಷೇತ್ರ ಯೋಜನೆಗಳ ಪೈಕಿ ʻಸಿಐಎಲ್ʼನ ಅತಿದೊಡ್ಡ ಯೋಜನೆಗಳಲ್ಲಿ ಒಂದಾದ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ʻಜಯಂತ್ ಓಪನ್ ಕಾಸ್ಟ್ ಕಲ್ಲಿದ್ದಲು ಯೋಜನೆʼಯೂ ಸೇರಿದೆ. ಈ ಯೋಜನೆಯು ಭೂ ಪುನಶ್ಚೇತನ ಮತ್ತು ದಿನದಿಂದ ದಿನಕ್ಕೆ ಹಸಿರು ಹೊದಿಕೆಯನ್ನು ಹೆಚ್ಚಿಸುವ ಮೂಲಕ ಕಲ್ಲಿದ್ದಲು ಗಣಿಗಾರಿಕೆಯನ್ನು ಗಣಿಗಾರಿಕೆ ದೃಷ್ಟಿಯನ್ನು ಮೀರಿ ನೋಡುವ ಪರಿಪಾಠ ಮುಂದುವರಿಸಿದೆ. ಇದು ಮಾಲಿನ್ಯದ ಪರಿಣಾಮವನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯ ಮಾಡಿದೆ ಮತ್ತು ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಸಹಾಯ ಮಾಡಿದೆ. ಈ ಯೋಜನೆಯು ʻಸಿಐಎಲ್ʼನ ಅಂಗಸಂಸ್ಥೆಯಾದ  ʻನಾರ್ದರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ʼ(ಎನ್‌ಸಿಎಲ್) ಅಡಿಯಲ್ಲಿದೆ. 

 ಭೂ ಮೇಲ್ಮೈ ಮೇಲೆ ಸುರಿದ ತ್ಯಾಜ್ಯದ ಗುಡ್ಡದ ಮೇಲೆ ಹಸಿರು ಹೊದಿಕೆ

ನವದೆಹಲಿಯ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ (ಕಲ್ಲಿದ್ದಲು) ಅವರಿಂದ ಜಯಂತ್ ಯೋಜನೆಗೆ ಪರಿಸರ ಮತ್ತು ಅರಣ್ಯ ಅನುಮತಿಯ ಬಗ್ಗೆ ವಿವರವಾದ ಪರಿಶೀಲನೆಯ ಸಂದರ್ಭದಲ್ಲಿ, ʻಎನ್‌ಸಿಎಲ್ʼ ಯೋಜನೆಯ ಉಪಗ್ರಹ ದತ್ತಾಂಶವನ್ನು ಪ್ರಸ್ತುತಪಡಿಸಲಾಯಿತು. ಈ ವೇಳೆ ಗಣಿಗಾರಿಕೆಪೂರ್ವ ಅರಣ್ಯ ಪ್ರದೇಶಕ್ಕಿಂತಲೂ ಹೆಚ್ಚಿನ ಹಸಿರು ಹೊದಿಕೆ ಈಗ ಆ ಪ್ರದೇಶದಲ್ಲಿರುವುದು ಕಂಡು ಬಂದಿತು. ಇದು ದೊಡ್ಡ ವ್ಯಾಪ್ತಿಯ ಗುತ್ತಿಗೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಬೃಹತ್ ಕಲ್ಲಿದ್ದಲು ಯೋಜನೆಯೊಂದರ ಅತ್ಯುತ್ತಮ ಸಾಧನೆಯಾಗಿದೆ. 

ಜಯಂತ್ ಒಸಿ ಯೋಜನೆಯ ಉಪಗ್ರಹ ಚಿತ್ರಗಳು (2020) 

ಜಯಂತ್ ಕಲ್ಲಿದ್ದಲು ಯೋಜನೆಯು ಸುಮಾರು 3200 ಹೆಕ್ಟೇರ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಇದರ ವಾರ್ಷಿಕ ಕಲ್ಲಿದ್ದಲು ಉತ್ಪಾದನಾ ಸಾಮರ್ಥ್ಯ 25 ದಶಲಕ್ಷ ಟನ್‌ಗಳಷ್ಟಿದೆ. ಈ ಯೋಜನೆಯಲ್ಲಿ ಗಣಿಗಾರಿಕೆ ಕಾರ್ಯಾಚರಣೆಯು 1975-76 ರಲ್ಲೇ ಪ್ರಾರಂಭವಾಯಿತು. ʻಡ್ರ್ಯಾಗ್‌ಲೈನ್ʼ, ʻಶೊವೆಲ್ʼ, ʻಡಂಪರ್ಸ್‌ʼ ಮುಂತಾದ ದೊಡ್ಡ ಸಾಮರ್ಥ್ಯದ ಭಾರಿ ಯಂತ್ರೋಪಕರಣಗಳ  (ಎಚ್‌ಇಎಂಎಂ) ಬಳಕೆಯೊಂದಿಗೆ 1977-78 ರಿಂದ ಕಲ್ಲಿದ್ದಲು ಉತ್ಪಾದನೆ ಪ್ರಾರಂಭವಾಯಿತು. ಈ ಯೋಜನೆಯಿಂದ ಉತ್ಪಾದಿಸಲಾದ ಕಲ್ಲಿದ್ದಲನ್ನು ಉತ್ತರ ಪ್ರದೇಶದ ಶಕ್ತಿನಗರದಲ್ಲಿರುವ ʻಎನ್‌ಟಿಪಿಸಿʼಯ ʻಸಿಂಗ್ರೌಲಿ ಸೂಪರ್ ಥರ್ಮಲ್‌ ಸ್ಟೇಷನ್‌ʼ ಬಳಕೆಗಾಗಿ ಮೀಸಲಿರಿಸಲಾಗಿದೆ. ಈ ಸ್ಥಾವರವು 2000 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ವಿಶೇಷ ʻಮೆರಿ-ಗೋ-ರೌಂಡ್ (ಎಂಜಿಆರ್) ವ್ಯವಸ್ಥೆಯ ಮೂಲಕ ಕಲ್ಲಿದ್ದಲನ್ನು ವಿದ್ಯುತ್ ಸ್ಥಾವರಕ್ಕೆ ಸಾಗಿಸಲಾಗುತ್ತಿದೆ.

ʻಹಸಿರು ಹೊದಿಕೆ ಅಭಿಯಾನʼದ ಭಾಗವಾಗಿ, ಪೂರ್ವಸ್ಥಿತಿಗೆ ಪುನಶ್ಚೇತನಗೊಳಿಸಲಾದ ಭೂ ಪ್ರದೇಶ ಸೇರಿದಂತೆ ಯೋಜನಾ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಮಟ್ಟದ ನೆಡುತೋಪು ನಿರ್ಮಿಸಲಾಗುತ್ತಿದೆ. ಮಧ್ಯಪ್ರದೇಶ ʻರಾಜ್ಯ ವನ್ಯ ವಿಕಾಸ ನಿಗಮ ಲಿಮಿಟೆಡ್ʼ (ಎಂಜಿಆರ್‌ವಿವಿಎನ್ಎಲ್) ನೆರವನ್ನು ಇದಕ್ಕಾಗಿ ಪಡೆಯಲಾಗುತ್ತಿದೆ. ಇಲ್ಲಿ ನೆಡಲಾದ ಸಸಿಗಳಲ್ಲಿ ನೇರಳೆ, ಜಂಗಲ್ ಜಿಲೇಬಿ, ಸೀಸಮ್, ಸಿರಸ್, ಮಹುವಾ, ಸುಬಾಬುಲ್, ಬೆಲ್, ನೆಲ್ಲಿ, ಕಚ್ನಾರ್, ಕಾರಂಜ್, ಬೇವು, ಅಮಾಲ್ಟಾಸ್, ಬಿದಿರು, ಬೋಗನ್ ವಿಲ್ಲಾ, ಕ್ಯಾಸಿಯಾ, ಗುಲ್ಮೊಹರ್, ಖಮರ್, ಪೆಲ್ಟೊಫೋರಮ್ ಮುಂತಾದ ಪ್ರಭೇದಗಳು ಸೇರಿವೆ.       

                    

              ಎಂಜಿಆರ್ ಪ್ರದೇಶದಲ್ಲಿ ನೆಡುತೋಪು    ಗಣಿಗೆ ಹೋಗುವ ದಾರಿಯ ರಸ್ತೆಯ ಉದ್ದಕ್ಕೂ ನೆಡುತೋಪು 

ಈ ಯೋಜನೆ ಪ್ರದೇಶದಲ್ಲಿ ಗಣಿಗಾರಿಕೆಪೂರ್ವ ಅರಣ್ಯ ಪ್ರದೇಶವು ಸುಮಾರು 1180 ಹೆಕ್ಟೇರ್ ಗಳಷ್ಟಿತ್ತು, 2020ರ ಉಪಗ್ರಹ ದತ್ತಾಂಶವನ್ನು ಆಧರಿಸಿದ ʻಭೂ ಪುನಶ್ಚೇತನ ವರದಿʼಯ ಪ್ರಕಾರ ಈಗ ಹಸಿರು ಹೊದಿಕೆಯು 1419 ಹೆಕ್ಟೇರ್ ಮಟ್ಟಕ್ಕೆ ವಿಸ್ತರಿಸಿದೆ. ಇದು ಯೋಜನೆಯ ಒಟ್ಟು ಗುತ್ತಿಗೆ ಪ್ರದೇಶದ ಸುಮಾರು 45% ಆಗಿದೆ. ಗಣಿಯನ್ನು ಮುಚ್ಚಿದ ನಂತರ 2600 ಹೆಕ್ಟೇರ್ ಪ್ರದೇಶವನ್ನು ಹಸಿರು ಹೊದಿಕೆ ಅಡಿಯಲ್ಲಿ ಹೊಂದುವ ಗುರಿ ಇದೆ, ಇದು ಗಣಿಗಾರಿಕೆಪೂರ್ವ ಹಂತಕ್ಕೆ ಹೋಲಿಸಿದರೆ ದುಪ್ಪಟ್ಟೆನಿಸಿದೆ. 

  

ಎಲ್ಲಾ ಹೊಸ ಕಲ್ಲಿದ್ದಲು ಯೋಜನೆಗಳೂ ಇತರೆ ಎಲ್ಲಾ ಚಟುವಟಿಕೆಗಳ ಹೊರತಾಗಿ ಕಡ್ಡಾಯವಾಗಿ ಗಣಿ ಮುಚ್ಚುವ ಯೋಜನೆಯನ್ನು ಹೊಂದಿರಬೇಕು. ಗಣಿಗಾರಿಕೆ ಚಟುವಟಿಕೆ ಪೂರ್ಣಗೊಂಡ ನಂತರ ಭೂಮಿಯನ್ನು ಅದರ ಮೂಲ ಸ್ಥಿತಿಗೆ ಮರುಸ್ಥಾಪಿಸಲು ಇದು ಮಾರ್ಗದರ್ಶಿಯಾಗಿರುತ್ತದೆ. ಅಂತಹ ಪುನಃಸ್ಥಾಪನೆ ಪ್ರಕ್ರಿಯೆಯು ಯೋಜನೆಯ ಪ್ರಾರಂಭದಿಂದಲೇ ಶುರುವಾಗುತ್ತದೆ. ಇದರಲ್ಲಿ ಗಣಿಗಾರಿಕೆಯಿಂದ ಉಂಟಾದ ಕಂದರವನ್ನು ಮರಳಿ ತುಂಬುವುದು ಗಣಿಗಾರಿಕೆಯ ನಂತರ ಪ್ರಮುಖ ಚಟುವಟಿಕೆಯಾಗಿರುತ್ತದೆ.  ಜೊತೆಗೆ ಭೂಮಿಯ ಮೇಲ್ಮೈ ಮೇಲೆ ಏಕಕಾಲದಲ್ಲಿ ನೆಡುತೋಪು ಆರಂಭಿಸುವ ಮೂಲಕ ಜೈವಿಕ ಪುನಃಸ್ಥಾಪನೆಯ ಪ್ರಮುಖ ಚಟುವಟಿಕೆ ಕೈಗೊಳ್ಳಲಾಗುತ್ತದೆ.

***



(Release ID: 1754664) Visitor Counter : 265